Home Blog Page 293

ಗೃಹಲಕ್ಷ್ಮೀ ಯೋಜನೆಯ ₹5000 ಕೋಟಿ ಎಲ್ಲಿ ಹೋಯಿತು?: ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ

0

ಹಾಸನ: ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕಿದ್ದ ಎರಡು ತಿಂಗಳ ಗೃಹಲಕ್ಷ್ಮೀ ಹಣ ಎಲ್ಲಿಗೆ ಹೋಯಿತು? ಅದರ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಹಾಸನದಲ್ಲಿ ಭಾನುವಾರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು; ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಕೊಡಬೇಕಿದ್ದ ಗೃಹಲಕ್ಷ್ಮಿ‌ ಹಣ ಎಲ್ಲಿ ಹೋಗಿದೆ? ಆ ಹಣ ಖಜಾನೆಯಲ್ಲಿ ಇದೆಯಾ? ಇಲ್ಲವಾ? ಎನ್ನುವ ಅಂಶವನ್ನು ಸ್ವತಃ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಬೇಕು. ಅವರು ಮತ್ತು ಅವರ ಅವರ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಜವಾಬ್ದಾರರು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಗೃಹಲಕ್ಷ್ಮೀ ಯೋಜನೆಯ 5 ಸಾವಿರ ಕೋಟಿ ಹಣದ ಬಗ್ಗೆ ಮಾಹಿತಿ ಸರಿಯಾಗಿ ನೀಡಿಲ್ಲ. ಇದು ಸಣ್ಣ ವಿಚಾರವಲ್ಲ. ಇದು ಹೇಗಾಯಿತು ಎಂದು ಸಂಬಂಧಿತ ಸಚಿವರಿಂದ ಮಾಹಿತಿ ಪಡೆದಿದ್ದೀರಾ? ಆ ಸಚಿವರ ರಾಜೀನಾಮೆ ಕೇಳಿದ್ದೀರಾ? ಹೋಗಲಿ, ಯಾರಾದರೂ ಅಧಿಕಾರಿಯನ್ನು ಇದಕ್ಕೆ ಹೊಣೆ ಮಾಡಿ ಅಮಾನತು ಮಾಡಿದ್ದೀರಾ? ಇಷ್ಟು ದೊಡ್ಡ ಮೊತ್ತದ ಹಣದ ಬಗ್ಗೆ ಎಷ್ಟು ಹಗುರವಾಗಿ ನಡೆದುಕೊಂಡಿದ್ದೀರಿ! ನೀವು ಪ್ರಖ್ಯಾತ ‌ಹಣಕಾಸು ಸಚಿವರು! ನಿಮ್ಮಂತ ಹಣಕಾಸು ಸಚಿವರು ಅಮೆರಿಕದಲ್ಲೂ ಇಲ್ಲ‌. ಡೊನಾಲ್ಡ್ ಟ್ರಂಪ್ ಅವರಿಗೂ ಇಂಥ ಹಣಕಾಸು ಮಂತ್ರಿ ಸಿಗಲ್ಲವೇನೋ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.

ಕೇಂದ್ರ ಸಹಕಾರ ನೀಡುತ್ತಿಲ್ಲ ಎನ್ನುವುದು ಸುಳ್ಳು:

ಕೇಂದ್ರ ಸಹಕಾರ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳುವ ಬದಲು, ಕೇಂದ್ರದ ಮನವೊಲಿಸಲು ನೀವೇನು ಮಾಡಿದ್ದೀರಿ ಎಂಬುದನ್ನು ಹೇಳಿ ಎಂದು ಹೆಚ್.ಡಿ‌ ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು. ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವವರು ಸುಖಾಸುಮ್ಮನೆ ತಮ್ಮ ಹುಳುಕು ಮುಚ್ಚಿಟ್ಟುಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ತಾವು ಮಾಡುತ್ತಿರುವ ತಪ್ಪುಗಳನ್ನು ಮುಚ್ಚಿಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡರು.

ಎತ್ತಿನಹೊಳೆ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅಡ್ಡಿ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮಂತ್ರಿಗಳು ಆರೋಪ ಮಾಡುತ್ತಿದ್ದಾರೆ. ಆದರೆ, ಪರಿಸರಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿ, ಕಾನೂನು ಮೀರಿ ಅನೇಕ ಅನಧಿಕೃತ ಕಾಮಗಾರಿಗಳನ್ನು ನಡೆಸಿದ್ದಾರೆ. ಕೇಂದ್ರ ಪರಿಸರ ಸಚಿವಾಲಯ ಅದನ್ನು ಪ್ರಶ್ನೆ ಮಾಡಿದೆ. ಅದು ತಪ್ಪಾ? ನಾವು ಅಂತಹ ಕಾಮಗಾರಿಗಳನ್ನು ಮಾಡಿಲ್ಲ ಎಂದು ಸಂಬಂಧಿಸಿದ ಸಚಿವರು, ಅಧಿಕಾರಿಗಳು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಿ. ಬೇಡ ಎಂದವರು ಯಾರು? ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಕೇಂದ್ರದಿಂದ ಅನುದಾನ ಬರುತ್ತಿದೆ. ಅದರ ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ಪಾರದರ್ಶಕವಾಗಿಲ್ಲ. ಕೇಂದ್ರದಿಂದ ಬರುತ್ತಿರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ ಹಾಗೂ ಅದಕ್ಕೆ ಪೂರಕವಾಗಿ ಮ್ಯಾಚಿಂಗ್ ಗ್ರಾಂಟ್ ಗಳನ್ನು ಕೊಡುತ್ತಿಲ್ಲ. ಹೋಗಲಿ, ಆ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ನೀಡಿದ್ದಾರ? ಅದೂ ಇಲ್ಲ. ತಪ್ಪು ತಮ್ಮ ಕಡೆ ಇಟ್ಟುಕೊಂಡು ನರೇಂದ್ರ ಮೋದಿ ಅವರ ಸರ್ಕಾರವನ್ನು ಟೀಕೆ ಮಾಡಿದರೆ ಏನು ಬರುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಘೋರ ವೈಫಲ್ಯ ಅನುಭವಿಸಿದೆ. ರೈತರಿಗೆ ನೆರವಾಗುವಲ್ಲಿ ಕೂಡ ವಿಫಲವಾಗಿದೆ. ಬೆಂಗಳೂರು ನಗರದಲ್ಲಿ ಮೂಲಭೂತ ಸೌಲಭ್ಯಗಳ ಬಗ್ಗೆ ಹೇಜುವಂತೆಯೇ ಇಲ್ಲ. ದೇವರಿಗೆ ಪ್ರೀತಿ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.

ಇವರ ಹಣೆಬರಕ್ಕೆ ಕೆಲಸ ಮಾಡುವ ಯೋಗ್ಯತೆ ಇಲ್ಲ. ಆದರೆ ಮಾತಿನಲ್ಲಿ ಎಲ್ಲವನ್ನು ತೋರಿಸುತ್ತಿದ್ದಾರೆ. ಹಾಸನ ಜಿಲ್ಲೆಗೆ ಲಗ್ಗೆ ಹಾಕಲು ಕಾಂಗ್ರೆಸ್ ಬಹಳ ವೇಗವಾಗಿದೆ. ಸ್ಟೇಜ್ ಗಳಲ್ಲಿ ಹಲವು ರೀತಿಯ ಬಾಣ ಬಿರುಸುಗಳನ್ನ ನೋಡುತ್ತಿದ್ದೇವೆ. ಯಾರು ಮಾಡದೇ ಇರುವ ಕಾರ್ಯ ಮಾಡಿದ್ದೇವೆ ಎಂಬ ಹೇಳಿಕೆ ನೀಡಿದ್ದಾರೆ. ಫಲಾನುಭವಿಗಳಿಗೆ ಎಲ್ಲವನ್ನೂ ನೀಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ನಾನು ಇಡ್ಲಿ, ವಡೆ ನಾಟಿ ಕೋಳಿ ತಿಂದಿದ್ದರ ಬಗ್ಗೆ ಮಾತಾಡೊಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಕೇಂದ್ರ ಸಚಿವರು ಕಾಂಗ್ರೆಸ್ ಸರಕಾರದ ವಿರುದ್ಧ ಚಾಟಿ ಬೀಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂದಬುದು ನನಗೆ ಬೇಕಾಗಿಲ್ಲ. ರಾಜ್ಯದ ಜನ ಅವರಿಗೆ 140ಸೀಟು ನೀಡಿದ್ದಾರೆ. ಇಂತಹ ಬಹುಮತದ ಸರಕಾರ ಇಟ್ಟುಕೊಂಡು ಜನರ ಕೆಲಸ ಮಾಡುವುದು ಬಿಟ್ಟು ಕೇಂದ್ರ ಸರಕಾರದ ಮೇಲೆ ಬಿದ್ದಿದ್ದಾರೆ. ಜನರ ಗಮನ ಬೇರೆಡೆಗೆ ಹೊರಳಿಸಲು ಈ ಸ್ಟಂಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಟೀಕಾ ಪ್ರಹಾರ ನಡೆಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು: ಬೊಮ್ಮಾಯಿ

0

ಹಾವೇರಿ: ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು. ಸರ್ಕಾರದ ನೂತನ ಪರೀಕ್ಷಾ ನೀತಿಯಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ. ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ನವೋದಯ ವಿದ್ಯಾ ಸಂಸ್ಥೆಯ ಶ್ರೀ ಬಸವರಾಜ ಬಳ್ಳಾರಿ ಪೂರ್ವ ಪ್ರಾಥಮಿಕ ಶಾಲೆ, ಶ್ರೀಮತಿ ಸಿದ್ದಮ್ಮ ಮೈಲಾರ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ವೀರಯ್ಯ ಬ ಕಳಸೂರಮಠ ಪ್ರೌಢ ಶಾಲೆ, ಶ್ರೀಮತಿ ಸುಶೀಲಮ್ಮ ಹಾವೇರಿಮಠ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಶಾಲಾ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರಾದ ಬಳ್ಳಾರಿಯವರ ಪ್ರೀತಿ ವಿಶ್ವಾಸ ಹಳೆ ಸಂಬಂಧ ನಮ್ಮನ್ನು ಇಲ್ಲಿ ಕರೆದು ತಂದಿದೆ. ಅವರು ಸರಳ ಸಜ್ಜನಿಕೆ ಯಜಮಾನರು ನನಗೆ ಬಹಳಬದೊಡ್ಡ ಆಶಿರ್ವಾದ ಮಾಡಿದ್ದಾರೆ. ನಾನು ಮೊದಲು ಇಲ್ಲಿ ಬಂದಾಗ ಸಾಕಷ್ಟು ವಿರೋಧ ವ್ಯಕ್ತವಾಯಿತು. ಅವರು ಇಡಿ ಬ್ಯಾಡಗಿ ತಾಲೂಕು ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯತಿ ತಿರುಗಿ ಚುನಾವಣೆ ಮಾಡಿದರು. ಅವರ ಋಣ ಮರೆಯಲಿ ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂಸ್ಥೆ ಕಟ್ಟಲು ಹಲವಾರು ಜನರು ಸಹಾಯ ಮಾಡಿದ್ದಾರೆ. ಮೈಲಾರ ಮಹದೇವಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಅವರಿಗೆ ಎಷ್ಟು ಮಹತ್ವ ಸಿಗಬೇಕಿತ್ತು ಅಷ್ಟು ಮಹತ್ವ ಸಿಗಲಿಲ್ಲ. ಬ್ರಿಟೀಷರಿಗೆ ಅವರು ಸಿಂಹ ಸ್ವಪ್ನವಾಗಿದ್ದರು. ಬ್ರಿಟಿಷರು ಅವರನ್ನು ಮೊಸದಿಂದ ಕೊಂದರು. ಸ್ವಾತಂತ್ರ್ಯ ನಂತರ ಮಹದೇವ ಬಣಕಾರ ವೈಚಾರಿಕ ಕ್ರಾಂತಿ ಮಾಡಿದ್ದಾರೆ.

ಅವರ ಹೆಸರಿನಲ್ಲಿ ಪ್ರಾಥಮಿಕ ಶಾಲೆ, ಡಾ. ಕಳಸೂರ ಮಠ ಅವರ ಹೆಸರಿನಲ್ಲಿ ಹೈಸ್ಕೂಲ್ ಹಾವೇರಿ ಮಠ ಆಂಗ್ಲ ಮಾಧ್ಯಮ ಶಾಲೆಗೆ ಸಹಾಯ ಮಾಡಿದ್ದಾರೆ. ಇಲ್ಲಿ ಒಂದು ಸಾವಿರ ಮಕ್ಕಳು ಕಲಿಯುತ್ತಿದ್ದಾರೆ ಎಂದರೆ ದೊಡ್ಡ ಸಾಧನೆ. ಗ್ರಾಮೀಣ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವುದು ಸವಾಲು ಶಾಲೆಗೆ ಎಷ್ಟು ಸಹಾಯ ಮಾಡಿದರೂ ಕಡಿಮೆಯೇ ಶಾಲೆ ಸ್ಥಾಪನೆ ಮಾಡಿದರೆ ಮುಂದಿನ ಪೀಳಿಗೆಗೆ ಡಿಫಾಜಿಟ್ ಇಟ್ಟ ಹಾಗೆ. ಅದು ಬಹಳ ದೊಡ್ಡ ಕೆಲಸ. ಅತ್ಯಂತ ಶ್ರದ್ದೆಯಿಂದ ಈ ಕೆಲಸ ಮಾಡುತ್ತ ಬಂದಿದ್ದಾರೆ ಎಂದರು.

ತುಂಗಾ ನದಿಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು!

0

ಶಿವಮೊಗ್ಗ: ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಪಿಯುಸಿ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಶಿವಮೊಗ್ಗ ನಗರದ ನಿವಾಸಿ ಪ್ರೇಮ್ ಕುಮಾರ್ (17) ಎಂದು ಗುರುತಿಸಲಾಗಿದೆ. ಆತ ಸ್ನೇಹಿತರೊಂದಿಗೆ ಪಿಳ್ಳಂಗಿರಿಯ ದೇವಸ್ಥಾನಕ್ಕೆ ಭೇಟಿ ನೀಡಿದ್ದನು. ವಾಪಸ್ಸಾಗುವ ವೇಳೆ ಸ್ನೇಹಿತರ ಜೊತೆ ನದಿಯಲ್ಲಿ ಈಜಲು ಇಳಿದಾಗ ಈ ದುರ್ಘಟನೆ ಸಂಭವಿಸಿದೆ.

ಪ್ರೇಮ್ ಕುಮಾರ್ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ವಿಜಯಪುರದಲ್ಲಿ ಮತ್ತೆ ಚಿರತೆ ದಾಳಿ: ಹಸು ಸಾವು, ಗ್ರಾಮಸ್ಥರ ಆಕ್ರೋಶ

0

ವಿಜಯಪುರ: ಜಿಲ್ಲೆಯಲ್ಲಿ ಪದೇ ಪದೇ ಚಿರತೆ ದಾಳಿ ನಡೆಯುತ್ತಿದ್ದು, ಸಾಕು ಪ್ರಾಣಿಗಳು ಬಲಿಯಾಗುತ್ತಿರುವ ಘಟನೆಗಳು ಜನರಲ್ಲಿ ಆತಂಕ ಮೂಡಿಸಿವೆ. ಇದೀಗ ಮತ್ತೊಮ್ಮೆ ಚಿರತೆ ದಾಳಿ ಮಾಡಿದ ಪರಿಣಾಮ ಹಸು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ನಡೆದಿದೆ.

ಚಿರತೆ ದಾಳಿಯಿಂದ ಹಸು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ಹಲವು ದಿನಗಳಿಂದ ತದ್ದೇವಾಡಿ ಹಾಗೂ ಮಣಂಕಲಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರತೆಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ತದ್ದೇವಾಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ತಕ್ಷಣ ಕಾರ್ಯಾಚರಣೆ ನಡೆಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಪಾರಿವಾಳ ನೋಡಲು ಹೋಗಿ ಆಯತಪ್ಪಿ ಬಿದ್ದ ಬಾಲಕ: ಗಂಭೀರ ಗಾಯ – ಆಸ್ಪತ್ರೆಗೆ ದಾಖಲು

0

ಕೊಪ್ಪಳ: ಪಾರಿವಾಳವನ್ನು ನೋಡಲು ಹೋಗಿ ಆಯತಪ್ಪಿ ಮೊದಲನೇ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ಬಾಲಕನೊಬ್ಬ ಗಾಯಗೊಂಡಿರುವ ಘಟನೆ ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ನಡೆದಿದೆ.

ಗಾಯಗೊಂಡ ಬಾಲಕನನ್ನು ಹಮಾಲರ ಕಾಲೋನಿಯ ನಿವಾಸಿ ಅಬ್ಬಾಸ ಅಲಿ ಮಗ ಮಹ್ಮದ್ ಹ್ಯಾರಿಸ್ (6) ಎಂದು ಗುರುತಿಸಲಾಗಿದೆ.

ಬಾಲಕ ಮೊದಲನೇ ಮಹಡಿಯಲ್ಲಿ ಆಟವಾಡುತ್ತಿದ್ದ ವೇಳೆ ಪಾರಿವಾಳವನ್ನು ಕಂಡು ಅದನ್ನು ಹಿಡಿಯಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಮಹಡಿಯ ಗ್ರಿಲ್ ಬಳಿ ನಿಂತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಪರಿಣಾಮ ತಲೆಗೆ ಪೆಟ್ಟಾಗಿದ್ದು, ತಕ್ಷಣವೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಲಕ ಕೆಳಗೆ ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಲೆಗೆ ಪಟ್ಟಾಗಿದೆ. ಯಾವುದೇ ಪ್ರಾಣಾಪಾಯ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಘಟನೆ ಕೊಪ್ಪಳ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಾಮರಾಜನಗರದಲ್ಲಿ 5 ಹುಲಿಗಳು ಪ್ರತ್ಯಕ್ಷ: ನಿಷೇಧಾಜ್ಞೆ ಜಾರಿ, ಹೊರಬರದಂತೆ ಸೂಚನೆ

0

ಚಾಮರಾಜನಗರ: ಕಾಡಿನಲ್ಲಿರಬೇಕಿದ್ದ ಹುಲಿಗಳು ನಾಡಿಗೆ ನುಗ್ಗಿದ್ದು, ಚಾಮರಾಜನಗರ ತಾಲೂಕಿನ ನಂಜೆದೇವಪುರ ಗ್ರಾಮದ ಬಳಿ ಒಂದೇ ಸಮಯದಲ್ಲಿ ಐದು ಹುಲಿಗಳು ಕಾಣಿಸಿಕೊಂಡಿವೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಹುಲಿಗಳ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ನಂಜೆದೇವಪುರ ಸೇರಿ ವೀರನಪುರ ಮತ್ತು ಉಡಿಗಾಲ ಗ್ರಾಮಗಳಲ್ಲಿ ಇಂದು ಮತ್ತು ನಾಳೆ ಸಂಜೆ 6 ಗಂಟೆಯವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಕುರಿತು ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಆದೇಶ ಹೊರಡಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಹುಲಿಗಳು ಇರುವ ಸ್ಥಳದ ಲೊಕೇಷನ್ ಅನ್ನು ಟ್ರ್ಯಾಕ್ ಮಾಡಿದ್ದು, ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಕೇವಲ ಇಬ್ಬರು ಪಶುವೈದ್ಯರು ಮಾತ್ರ ಲಭ್ಯವಿರುವುದರಿಂದ ಕಾರ್ಯಾಚರಣೆ ಕಷ್ಟಸಾಧ್ಯವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಹುಲಿಗಳ ಸೆರೆ ಕಾರ್ಯಾಚರಣೆಯ ಹಿನ್ನೆಲೆ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕರು ಗುಂಪು ಸೇರಬಾರದು ಹಾಗೂ ಮನೆಯಿಂದ ಹೊರಬರದೇ ಸಹಕರಿಸಬೇಕು ಎಂದು ತಹಶೀಲ್ದಾರ್ ಗಿರಿಜಾ ಮನವಿ ಮಾಡಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!

0

ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಲ ತಿಂಗಳುಗಳ ಹಿಂದೆ ಮಠದಿಂದ ದೂರವಾಗಿದ್ದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಇತ್ತೀಚೆಗೆ ಮತ್ತೆ ಗ್ರಾಮಕ್ಕೆ ವಾಪಸ್ಸಾಗಿದ್ದರು. ಕುಡಿದು ರಂಪಾಟ ನಡೆಸಿದ್ದ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವಾಮೀಜಿಯನ್ನು ಮಠದಿಂದ ಹೊರಗೆ ಹಾಕಿದ್ದರು ಎನ್ನಲಾಗಿದೆ.

ಮಠಕ್ಕೆ ಹೊಸ ಪೀಠಾಧಿಪತಿಯನ್ನು ನೇಮಕ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿರುವ ಮಧ್ಯೆ ಸ್ವಾಮೀಜಿ ವಾಪಸ್ಸಾಗಿದ್ದು, ಇನ್ನು ಈ ವೇಳೆ ಮಠದ ಆವರಣದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿರೋಧಿಗಳನ್ನು ಭಯಪಡಿಸುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಇನ್ನೂ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುವ ಸಾಧ್ಯತೆ ಇದೆ.

ತಾಂತ್ರಿಕ ದೋಷ: ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

0

ನವದೆಹಲಿ: ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ, ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವನ್ನು ಮರುದಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ತುರ್ತು ಭೂಸ್ಪರ್ಶ ಮಾಡಲಾಗಿದೆ.

ವಿಮಾನದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯನ್ನು ಗಮನಿಸಿದ ಪೈಲಟ್‌ಗಳು, ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಪ್ರಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ವಿಮಾನಯಾನವನ್ನು ಮುಂದುವರಿಸದೆ ಹಿಂತಿರುಗುವ ನಿರ್ಧಾರ ಕೈಗೊಂಡರು. ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ.

ಡಿ.22ರಂದು ದೆಹಲಿಯಿಂದ ಮುಂಬೈಗೆ ಹಾರಾಟ ನಡೆಸಬೇಕಿದ್ದ AI887 ವಿಮಾನದಲ್ಲಿ ಈ ಘಟನೆ ಸಂಭವಿಸಿದ್ದು, ಪ್ರಯಾಣಿಕರ ಮತ್ತು ಸಿಬ್ಬಂದಿಯ ಸುರಕ್ಷತೆಯೇ ಮೊದಲ ಆದ್ಯತೆ ಎಂಬ ಕಾರಣಕ್ಕೆ ವಿಮಾನವನ್ನು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಹಿಂತಿರುಗಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ: ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ

0

ದಕ್ಷಿಣ ಕನ್ನಡ: ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕುಲದೀಪ್ ಎಂ.ಡಿ. ಕಳೆದ ಆರು ತಿಂಗಳಿಂದ ಸಂಬಳ ದೊರೆಯದ ಕಾರಣ ರಾಜೀನಾಮೆ ನೀಡಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಕುಲದೀಪ್, ಸಂಬಳ ಬಾರದೇ ವೈಯಕ್ತಿಕ ಜೀವನಕ್ಕೆ ಸಮಸ್ಯೆ ಆಗುತ್ತಿದೆ. ಆರ್ಥಿಕ ಸಮಸ್ಯೆ ಉಂಟಾಗುತ್ತಿದೆ ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಳಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯದ ಹಲವು ಪ್ರಾಥಮಿಕ ಗುತ್ತಿಗೆ ವೈದ್ಯಾಧಿಕಾರಿಗಳಿಗೆ ಸರ್ಕಾರ ಸಂಬಳ ಬಾಕಿ ಉಳಿಸಿಕೊಂಡಿದೆ. ಇನ್ನೂ ನೌಕರರ ಸಂಬಳದ ವಿಳಂಬದ ಬಗ್ಗೆ ವಿಪಕ್ಷಗಳು ಸರ್ಕಾರವನ್ನು ಎಚ್ಚರಿಸುತ್ತಿವೆ.

ಸಿಎಂ ಮೈಸೂರು ಭೇಟಿ ವೇಳೆಯೇ ತಾಲೂಕು ಕಚೇರಿಗೆ RDX ಬಾಂಬ್ ಬೆದರಿಕೆ!

0

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಿರುವ ಸಂದರ್ಭದಲ್ಲೇ ಸರಗೂರು ತಾಲ್ಲೂಕು ಕಚೇರಿಯಲ್ಲಿ ಆರ್‌ಡಿಎಕ್ಸ್ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಇ-ಮೇಲ್ ಮೂಲಕ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ 1 ಗಂಟೆಗೆ ಸ್ಫೋಟ ಸಂಭವಿಸುವ ಸಾಧ್ಯತೆ ಇದೆ ಎಂದು ಮೇಲ್‌ನಲ್ಲಿ ಉಲ್ಲೇಖಿಸಲಾಗಿದ್ದು,

ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಾಂಬ್ ಬೆದರಿಕೆ ಮೇಲ್‌ನಲ್ಲಿ ನಟ ಅಜಿತ್ ಕುಮಾರ್ ಹೆಸರನ್ನೂ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ತಾಲ್ಲೂಕು ಕಚೇರಿ ಸುತ್ತಮುತ್ತಲ ಪ್ರದೇಶವನ್ನು ಖಾಲಿ ಮಾಡಿಸಿ ಭದ್ರತೆ ಹೆಚ್ಚಿಸಲಾಗಿದೆ. ಘಟನೆಯ ಹಿನ್ನೆಲೆ ಮೇಲ್ ಕಳುಹಿಸಿದವರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

error: Content is protected !!