Home Blog Page 300

ರಾಮ-ಲಕ್ಷ್ಮಣ ಅಸಲಿ ನಾಣ್ಯ ಎಂದು ನಂಬಿಸಿ ಮೋಸ: ಇಬ್ಬರು ಆರೋಪಿಗಳು ಅರೆಸ್ಟ್!

0

ಮಂಡ್ಯ: ಮಾಂತ್ರಿಕ ಶಕ್ತಿಯಿರುವ ಅದೃಷ್ಟದ ‘ರಾಮ–ಲಕ್ಷಣ’ ನಾಣ್ಯ ಎಂದು ನಂಬಿಸಿ ಸಾರ್ವಜನಿಕರಿಗೆ ವಂಚಿಸಲು ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ. ಹಳೆಯ ತಾಮ್ರದ ನಾಣ್ಯವನ್ನು ಮಾಂತ್ರಿಕ ನಾಣ್ಯವೆಂದು ಹೇಳಿ ಹಣ ಪಡೆದು ಪರಾರಿಯಾಗಲು ಯತ್ನಿಸಿದ್ದ ಇಬ್ಬರು ಯುವಕರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದ ಯಶ್ವಂತ್ ರಾವ್ ಹಾಗೂ ಸುಧೀರ್ ಎಂಬುವವರನ್ನು ಬಂಧಿಸಲಾಗಿದೆ. ಈ ಯುವಕರು ಮತ್ತೊಬ್ಬ ಸಹಚರನೊಂದಿಗೆ ಸೇರಿ ಅಮಾಯಕ ಜನರಿಗೆ ಮಾಂತ್ರಿಕ ಶಕ್ತಿಯುಳ್ಳ ನಾಣ್ಯ ಎಂದು ನಂಬಿಸಿ ವಂಚನೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ.

ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ್ದ ಆರೋಪಿಗಳು, ಒಂದು ಲಕ್ಷ ರೂಪಾಯಿಗೆ ನಾಣ್ಯ ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ನಾಣ್ಯ ಪಡೆಯಲು ಬೆಂಗಳೂರಿನ ವ್ಯಕ್ತಿ ನಾಗಮಂಗಲ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಆಗಮಿಸಿದ್ದರು.

ಈ ವೇಳೆ ಆರೋಪಿಗಳು ಮಾಂತ್ರಿಕ ನಾಣ್ಯವೆಂದು ಹಳೆಯ ತಾಮ್ರದ ನಾಣ್ಯವೊಂದನ್ನು ನೀಡಿ, ಒಂದು ಲಕ್ಷ ರೂಪಾಯಿ ಹಣ ಪಡೆದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ವಂಚನೆಗೆ ಒಳಗಾದುದನ್ನು ಅರಿತ ವ್ಯಕ್ತಿ ‘ಕಳ್ಳ ಕಳ್ಳ’ ಎಂದು ಕೂಗಿದ್ದಾರೆ. ವ್ಯಕ್ತಿಯ ಚೀರಾಟ ಕೇಳುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಚುರುಕಾಗಿ ಓಡುತ್ತಿದ್ದ ಆರೋಪಿಗಳನ್ನು ಬೆನ್ನಟ್ಟಿ ಹಿಡಿದಿದ್ದಾರೆ.

ವಂಚನೆ ವಿಚಾರ ತಿಳಿದ ಸ್ಥಳೀಯರು ಆಕ್ರೋಶಗೊಂಡು ಇಬ್ಬರು ಆರೋಪಿಗಳಿಗೆ ಧರ್ಮದೇಟು ನೀಡಿದ್ದಾರೆ. ಆದರೆ ಗುಂಪಿನಲ್ಲಿದ್ದ ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಾಗಮಂಗಲ ಟೌನ್ ಪೊಲೀಸರು, ಸಾರ್ವಜನಿಕರ ವಶದಲ್ಲಿದ್ದ ಯಶ್ವಂತ್ ರಾವ್ ಹಾಗೂ ಸುಧೀರ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

2 ತಿಂಗಳಲ್ಲಿ 1000 ಕೋಟಿ ವಹಿವಾಟು! ಸೈಬರ್ ಅಪರಾಧ ಲೋಕದ ಅತಿದೊಡ್ಡ ವಂಚನೆ ಬಯಲಿಗೆಳೆದ ದಾವಣಗೆರೆ ಪೊಲೀಸ್!

0

ದಾವಣಗೆರೆ: ದಾವಣಗೆರೆ ಪೊಲೀಸರು ಪತ್ತೆಹಚ್ಚಿದ್ದ ಸೈಬರ್ ವಂಚನೆ ಪ್ರಕರಣ ಇದೀಗ ರಾಜ್ಯದಲ್ಲೇ ಅತಿದೊಡ್ಡ ಸೈಬರ್ ಅಪರಾಧ ಪ್ರಕರಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆರಂಭದಲ್ಲಿ ಸುಮಾರು 150 ಕೋಟಿ ರೂಪಾಯಿ ಹಣ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದ್ದ ಈ ಪ್ರಕರಣದಲ್ಲಿ, ತನಿಖೆ ಮುಂದುವರಿದಂತೆ 1,000 ಕೋಟಿ ರೂಪಾಯಿಗೂ ಅಧಿಕ ಹಣ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಅವರು ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ.

ಎರಡು ತಿಂಗಳ ಹಿಂದೆ ದಾವಣಗೆರೆ ಸೈಬರ್ ಪೊಲೀಸ್ ಠಾಣೆಗೆ ಪ್ರಮೋದ್ ಎಂಬ ವ್ಯಕ್ತಿ ದೂರು ದಾಖಲಿಸಿದ್ದರು. ಕನ್‌ಸ್ಟ್ರಕ್ಷನ್ ಉದ್ಯಮ ನಡೆಸುತ್ತಿದ್ದ ಪ್ರಮೋದ್, ತನ್ನ ಬ್ಯಾಂಕ್ ಖಾತೆಯಿಂದ 52 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ತಿಳಿಸಿದ್ದರು. ಈ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಪ್ರಮೋದ್ ಖಾತೆಯಿಂದಲೇ ಸುಮಾರು 150 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿರುವುದನ್ನು ಪತ್ತೆಹಚ್ಚಿದ್ದರು.

ತನಿಖೆ ಮುಂದುವರಿದಂತೆ ಆರಂಭದಲ್ಲಿ ಸಂತ್ರಸ್ತನಾಗಿದ್ದ ಪ್ರಮೋದ್‌ನೇ ಪ್ರಕರಣದ ಪ್ರಮುಖ ಆರೋಪಿಯಾಗಿರುವುದು ಗೊತ್ತಾಗಿದೆ. ವಿಚಾರಣೆಯಲ್ಲಿ ಆತನ ಖಾತೆಗೆ ಜಮೆಯಾದ ಹಣ ಅನಾಮಧೇಯ ಮೂಲಗಳಿಂದ ಬಂದಿರುವುದು ಹಾಗೂ ಯಾವುದೇ ಉದ್ಯಮ ಇಲ್ಲದಿದ್ದರೂ ಕರೆಂಟ್ ಅಕೌಂಟ್ ತೆರೆಯಲಾಗಿದ್ದುದೂ ಬಹಿರಂಗವಾಗಿದೆ.

ಪೊಲೀಸರ ತನಿಖೆಯಲ್ಲಿ ಕರೆಂಟ್ ಅಕೌಂಟ್‌ಗಳನ್ನು ತೆರದು ಅವುಗಳನ್ನು ಇತರರಿಗೆ ಮಾರಾಟ ಮಾಡುವ ದೊಡ್ಡ ಜಾಲವೊಂದು ಬಯಲಾಗಿದೆ. ದುಬೈ ಸೇರಿದಂತೆ ವಿದೇಶಗಳಿಂದ ಕೋಟಿ ಕೋಟಿ ರೂಪಾಯಿ ಹಣ ಈ ಖಾತೆಗಳಿಗೆ ಜಮೆಯಾಗುತ್ತಿದ್ದು, ಆನ್‌ಲೈನ್ ಗೇಮಿಂಗ್, ಗ್ಯಾಂಬ್ಲಿಂಗ್, ನಕಲಿ ಟ್ರೇಡಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗಳಿಂದ ಹಣ ಹರಿದುಬರುತ್ತಿದ್ದ ಮಾಹಿತಿ ಲಭ್ಯವಾಗಿದೆ.

ಪ್ರಮೋದ್ ತನ್ನ ಕರೆಂಟ್ ಅಕೌಂಟ್ ಅನ್ನು ಇತರರಿಗೆ ಬಳಕೆಗೆ ನೀಡಿ ಕಮಿಷನ್ ಪಡೆಯುತ್ತಿದ್ದನೆಂದು ತಿಳಿದುಬಂದಿದೆ. ಆದರೆ ಜಮೆಯಾದ ಹಣಕ್ಕೆ ಕಮಿಷನ್ ನೀಡದ ಕಾರಣ ತನ್ನ ಖಾತೆಯಲ್ಲಿದ್ದ ಹಣವನ್ನು ವಂಚಕರು ಕದ್ದಿದ್ದಾರೆ ಎಂದು ಆತ ದೂರು ನೀಡಿದ್ದಾನೆ ಎಂಬುದೂ ತನಿಖೆಯಲ್ಲಿ ಸ್ಪಷ್ಟವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ಬೇಲೂರು ಮೂಲದ ಅರ್ಫಾತ್ ಪಾಷಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅರ್ಫಾತ್ ಖಾತೆಯಲ್ಲಿ ಇದ್ದ 18 ಕೋಟಿ ರೂಪಾಯಿ ಹಣವನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಲ್ಲದೆ, ಕಳೆದ ಎರಡು ತಿಂಗಳಲ್ಲಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ 132 ಕೋಟಿ ರೂಪಾಯಿ ಹಣವನ್ನು ಅರ್ಫಾತ್ ವಿತ್‌ಡ್ರಾ ಮಾಡಿಕೊಂಡಿದ್ದ ಅಚ್ಚರಿಯ ಮಾಹಿತಿಯೂ ತನಿಖೆಯಲ್ಲಿ ಬಹಿರಂಗವಾಗಿದೆ. ಅರ್ಫಾತ್ ನೀಡಿದ ಮಾಹಿತಿಯ ಆಧಾರದಲ್ಲಿ ಗುಜರಾತ್‌ನ ಅಹಮದಾಬಾದ್ ಮೂಲದ ಸಂಜಯ್ ಕುಂದ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ಗಾಂಧಿ ಪ್ರತಿಮೆ ಮುಂದೆ ನಿಂತು ಹೋರಾಟ ಮಾಡುವ ಹಕ್ಕನ್ನು ಬಿಜೆಪಿ ಕಳೆದುಕೊಂಡಿದೆ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ದೇಶದ ಐಕ್ಯತೆ ಹಾಗೂ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧಿಜಿ ಅವರ ಹೆಸರನ್ನು ನಾಥೂರಾಮ್ ಗೋಡ್ಸೆ ಪಕ್ಷದವರು ತೆಗೆಯಲು ಮುಂದಾಗಿದ್ದಾರೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಕಾಂಗ್ರೆಸಿಗರು ಬಿಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂದೇಶ ರವಾನಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ ಸತ್ಯಮೇವ ಜಯತೆ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಈ ದೇಶದ ಸ್ವಾತಂತ್ರ್ಯದ ನಾಯಕತ್ವ ವಹಿಸಿದ ಮಹಾತ್ಮಾ ಗಾಂಧೀಜಿ ಅವರು ನೂರು ವರ್ಷಗಳ ಹಿಂದೆ ಕನ್ನಡ ನೆಲ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದರು.

ಈ ದೇಶಕ್ಕೆ ಸ್ವಾತಂತ್ರ್ಯದ ಬುನಾದಿ ಹಾಕಿದರು. ಕಳೆದ ವರ್ಷ ನಾವು ಗಾಂಧಿ ಭಾರತ ಕಾರ್ಯಕ್ರಮ ಮಾಡಿದೆವು. ಮಹತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ನಮ್ಮ ಸರ್ಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿತು. ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಭೂಮಿ ಮಟ್ಟ ಮಾಡಲು, ಕೊಟ್ಟಿಗೆ ನಿರ್ಮಾಣ,

ಆಶ್ರಯಮನೆ ನಿರ್ಮಾಣ ಮಾಡಲು ಸರ್ಕಾರ ಕೂಲಿ ನೀಡುತ್ತದೆ. ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮನಮೋಹನ್ ಸಿಂಗ್ ಅವರು ಈ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಮಹಾತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ತಂದ ಈ ಯೋಜನೆಯಲ್ಲಿ ಈ ಸರ್ಕಾರ ಗಾಂಧೀಜಿ ಅವರ ಹೆಸರು ತೆಗೆಯುತ್ತಿದೆ. ಬಿಜೆಪಿಗೆ ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧಿ ಚಿತ್ರವನ್ನು ತೆಗೆಯಿರಿ ಎಂದು ಹೇಳಿದೆ. ಮಹಾತ್ಮಾ ಗಾಂಧಿ ಅವರ ಹೆಸರು ಅಜರಾಮರ” ಎಂದು ತಿಳಿಸಿದರು.

ಬಿಜೆಪಿಗರು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಬೇಡಿ

“ಬಿಜೆಪಿಗರು ಗಾಂಧಿ ಪ್ರತಿಮೆ ಮುಂದೆ ನಿಂತು ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಹಾಗೂ ಶಾಸಕರು ಇನ್ನು ಮುಂದೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಬಾರದು ಎಂದು ಸವಾಲು ಹಾಕುತ್ತೇನೆ. ಬಡವರಿಗೆ ಉದ್ಯೋಗ ನೀಡುವ ಯೋಜನೆಯ ಹೆಸರಿನಿಂದ ನೀವು ಗಾಂಧೀಜಿ ಅವರ ಹೆಸರು ತೆಗೆಯುತ್ತಿದ್ದೀರಿ ಎಂದರೆ ನೀವು ದೇಶದ್ರೋಹಿಗಳು. ಬೇರೆ ದೇಶದ ನಾಯಕರು ನಮ್ಮ ದೇಶಕ್ಕೆ ಬಂದರೆ ಮೊದಲು ಅವರು ಗಾಂಧಿ ಸಮಾಧಿಗೆ ಹೋಗಿ ಪೂಜೆ ಮಾಡುತ್ತಾರೆ. ಗಾಂಧಿ ಭಾವಚಿತ್ರಕ್ಕೆ ನಮಿಸುತ್ತಾರೆ. ಆದರೆ ಗಾಂಧಿ ಅವರ ಹೆಸರು ತೆಗೆಯುವ ಮೂಲಕ ಮತ್ತೊಮ್ಮೆ ಗಾಂಧಿ ಅವರನ್ನು ಕೊಲ್ಲುತ್ತಿದ್ದೀರಿ.

ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ

“ನ್ಯಾಷನಲ್ ಹೆರಾಲ್ಡ್ ದೇಶದ ಆಸ್ತಿ. ದ್ವೇಷ ಬಿಜೆಪಿ ಆಸ್ತಿ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ. ಇಂದು ಸತ್ಯಮೇವ ಜಯತೆ ಎಂದು ಹೋರಾಟ ಮಾಡುತ್ತಿದ್ದೇವೆ. ಬಿಜೆಪಿಗೆ ಘನತೆ ಇಲ್ಲದೆ ಬದುಕುತ್ತಿದ್ದಾರೆ. ಪಿತೂರಿಯಿಂದ ಸೋಲಿಸಲು, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ದೇಶದ ಭವಿಷ್ಯ ರೂಪಿಸಲು ಸಂವಿಧಾನದ ರೂಪದಲ್ಲಿ ಕಾರ್ಯಕ್ರಮಗಳನ್ನು ಕೊಟ್ಟುಕೊಂಡು ಬಂದಿದೆ” ಎಂದು ತಿಳಿಸಿದರು.

“ಈ ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೆ ಭೂಮಿ, ಮನಮೋಹನ್ ಸಿಂಗ್ ಅವರು ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮೋಟಮ್ಮ ಅವರ ನೇತೃತ್ವದಲ್ಲಿ ಸ್ತ್ರೀಶಕ್ತಿ ಸಂಘ ಪ್ರಾರಂಭಿಸಿದರು. ನಮ್ಮ ಈ ಯೋಜನೆಗಳನ್ನು ಬೇರೆ ಸರ್ಕಾರಗಳು ತೆಗೆದುಹಾಕಲು ಸಾಧ್ಯವಾಯಿತಾ ಇಲ್ಲ. ನಮ್ಮ ಐದು ಗ್ಯಾರಂಟಿಗಳನ್ನೂ ಕೂಡ ತೆಗೆದುಹಾಕಲು ಸಾಧ್ಯವಿಲ್ಲ. ಇದು ಕಾಂಗ್ರೆಸ್ ಸರ್ಕಾರಗಳ ಕಾರ್ಯಕ್ರಮ. ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುವುದನ್ನು ಟೀಕಿಸಿದ್ದರು. ಅದಕ್ಕೆ ನಾವು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದೆವು” ಎಂದರು.

“ನ್ಯಾಷನಲ್ ಹೆರಾಲ್ಡ್ ಈ ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಹುಟ್ಟಿಕೊಂಡ ಪತ್ರಿಕೆ. 1937ರಲ್ಲಿ ನೆಹರು ಅವರು ಈ ಪತ್ರಿಕೆ ಆರಂಭಿಸಿದರು. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಇದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಆಸ್ತಿಯಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದು, ಕೆಲವು ಸಂಸ್ಥೆಗಳ ಅದ್ಯಕ್ಷನಾಗಿದ್ದು, ಆ ಸಂಸ್ಥೆಗಳ ಆಸ್ತಿಗಳೆಲ್ಲವೂ ನನ್ನ ವೈಯಕ್ತಿಕ ಆಸ್ತಿಯಾಗಲು ಸಾಧ್ಯವೇ? ನಾನು ಈ ಹುದ್ದೆಯಲ್ಲಿ ಇರುವವರೆಗೂ ಈ ಸಂಸ್ಥೆಗಳು ನನ್ನ ಜವಾಬ್ದಾರಿ,

ನನ್ನ ನಂತರ ಎಐಸಿಸಿ ಅವರು ಈ ಸ್ಥಾನಕ್ಕೆ ಯಾರನ್ನು ಕೂರಿಸುತ್ತಾರೋ, ಅವರಿಗೆ ಈ ಸಂಸ್ಥೆಯ ಆಸ್ತಿಗಳ ಜವಾಬ್ದಾರಿ ಹೋಗುತ್ತದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋಹ್ರಾ, ಆಸ್ಕರ್ ಫರ್ನಾಂಡೀಸ್ ಅವರ ಹೆಸರಿನಲ್ಲಿ ಸ್ವಲ್ಪ ಷೇರುಗಳನ್ನು ನೀಡಲಾಗಿತ್ತು. ಅದಕ್ಕೆ ಇವರ ಮೇಲೆ ಪಿಎಂಎಲ್ಎ ಪ್ರಕರಣ ದಾಖಲಿಸಿ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ” ಎಂದು ಹೇಳಿದರು.

“ನನ್ನ ಮೇಲೂ ಸುಳ್ಳು ಪ್ರಕರಣ ದಾಖಲಿಸಿ, ಪೋಲೀಸ್ ಠಾಣೆ, ಕೋರ್ಟ್ ಜೈಲು ಸುತ್ತುವಂತೆ ಮಾಡಿದರು. ಆಗ ನೀವೆಲ್ಲರೂ ನನಗಾಗಿ ಪ್ರಾರ್ಥನೆ ಮಾಡಿದಿರಿ. ನಂತರ ನನ್ನ ಮೇಲಿನ ಪ್ರಕರಣ ವಜಾಗೊಂಡಿತು. ಅದೇ ರೀತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಇಡಿ ದಾಖಲಿಸಿದ್ದ ಆರೋಪ ಪಟ್ಟಿಯನ್ನು ಕೋರ್ಟ್ ವಜಾಗೊಳಿಸಿದೆ. ಆದರೆ ಅವರು ಇಲ್ಲಿಗೆ ನಿಲ್ಲಿಸುವುದಿಲ್ಲ. ಮೊನ್ನೆ ಹೊಸದಾಗಿ ಎಫ್ಐಆರ್ ದಾಖಲಿಸಿ ನೋಟೀಸ್ ನೀಡಿದ್ದಾರೆ. ಅವರ ವಿಚಾರಣೆಗೆ ಹಾಜರಾಗಲು ನಾನು ದೆಹಲಿಗೆ ತೆರಳುತ್ತಿದ್ದೇನೆ. ಅವರಿಗೆ ಎಫ್ಐಆರ್ ಪ್ರತಿ ನೀಡುವಂತೆ ಕೇಳಿದ್ದೇನೆ” ಎಂದರು.

“ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನಾನು ಹಾಗೂ ನನ್ನ ಸಹೋದರ ಡಿ.ಕೆ. ಸುರೇಶ್ ದೇಣಿಗೆ ನೀಡಿದ್ದೇವೆ. ಶಾಮನೂರು ಶಿವಶಂಕರಪ್ಪ ಅವರು ಕೊಡಿಸಿದ್ದಾರೆ. ನಮ್ಮೆಲ್ಲರಿಗೂ ನೋಟೀಸ್ ನೀಡಿದ್ದಾರೆ. ನಾವು ಇದನ್ನು ಎದುರಿಸುತ್ತೇವೆ. ನಾವೆಲ್ಲರೂ ಕಾಂಗ್ರೆಸಿಗರು. ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನಮ್ಮ ಶಾಸಕರು ಪ್ರತಿ ತಿಂಗಲು ತಮ್ಮ ವೇತನದಲ್ಲಿ 25 ಸಾವಿರ ನೀಡುತ್ತಿದ್ದಾರೆ.

ಹೀಗೆ ಪಕ್ಷಕ್ಕೆ ದೇಣಿಗೆ ಕೊಟ್ಟವರ ಮೇಲೆ ಪ್ರಕರಣ ದಾಖಲಿಸಲು ಸಾಧ್ಯವೇ? ಅದೇ ರೀತಿ ನ್ಯಾಷನಲ್ ಹೆರಾಲ್ಡ್ ಆಸ್ತಿ ಉಳಿಸಿಕೊಳ್ಳಲು ಸುಮಾರು 100 ಕೋಟಿಯಷ್ಟು ಹಣವನ್ನು ಕಾಂಗ್ರೆಸಿಗರು ನೀಡಿದರು. ಈ ಹಣ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಖಾತೆಗೆ ಹಣ ಹೋಗಿಲ್ಲ. ಆದರೂ ಮನಿ ಲಾಂಡರಿಂಗ್ ಕೇಸ್ ದಾಖಲಿಸಿದ್ದಾರೆ” ಎಂದು ಕಿಡಿಕಾರಿದರು.

Health Tips: ನಿಮ್ಮ ನಾಲಿಗೆಯೇ ಹೇಳುತ್ತೆ ನಿಮ್ಮ ಆರೋಗ್ಯದ ಗುಟ್ಟು; ನೀವು ಮಿಸ್ ಮಾಡ್ದೆ ಈ ಸ್ಟೋರಿ ನೋಡಿ!

0

ವೈದ್ಯರು ಸಾಮಾನ್ಯ ಚೆಕಪ್‌ನಲ್ಲೂ ನಿಮ್ಮ ನಾಲಿಗೆ ನೋಡುವುದೇಕೆ ಎಂದು ಯೋಚಿಸಿದ್ದೀರಾ? ಆ ಮಾಡಿ ಎನ್ನುತ್ತಾ ನಾಲಿಗೆ ಹಾಗೂ ಕಿರುನಾಲಿಗೆ ನೋಡಿ ಅರ್ಧ ನಿಮಿಷದಲ್ಲಿ ಆರೋಗ್ಯ ಅಳೆಯುತ್ತಾರೆ ವೈದ್ಯರು. ಏಕೆಂದರೆ ನಾಲಿಗೆ ನಮ್ಮ ಆರೋಗ್ಯದ ಬಗ್ಗೆ ಸಾಕಷ್ಟನ್ನು ಹೇಳುತ್ತದೆ.

ಸಾಮಾನ್ಯವಾಗಿ ಅನಾರೋಗ್ಯಕ್ಕೆ ಒಳಗಾದಾಗ ನಾವು ವೈದ್ಯರ ಬಳಿ ಹೋಗುತ್ತೇವೆ. ಆಗ ಅವರು ನಮ್ಮ ಕಣ್ಣು ಮತ್ತು ನಾಲಿಗೆಯನ್ನು ಮೊದಲು ಪರೀಕ್ಷೆ ಮಾಡುತ್ತಾರೆ. ಏಕೆಂದರೆ ನಮ್ಮ ಅರೋಗ್ಯ ಹೇಗಿದೆ ಎಂದು ಹೇಳುವುದಕ್ಕೆ ನಾಲಿಗೆ ಮತ್ತು ಕಣ್ಣು ಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ನಾಲಿಗೆ ಆರೋಗ್ಯದ ಗುಣಲಕ್ಷಣಗಳ ಬಗ್ಗೆ ತಿಳಿಸುವ ನಿರ್ಣಾಯಕವಾಗಿ ಕೆಲಸ ಮಾಡುತ್ತದೆ. ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ನಾಲಿಗೆಯಿಂದ ನಿರ್ಣಯಿಸುವುದು ವೈದ್ಯರಿಗೆ ತುಂಬಾ ಸುಲಭ. ಹಾಗಿದ್ದರೆ ವೈದ್ಯರು ಹೇಗೆ ಅದನ್ನು ತಿಳಿಯುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು ಅದಕ್ಕೆ ಉತ್ತರ ಇಲ್ಲಿದೆ.

1. ಬಿಳಿ ಬಣ್ಣದ ಕಣಗಳು:-

ನಾಲಿಗೆಯ ಮೇಲಿನ ಬಿಳಿ ಲೇಪನ ಅಥವಾ ಬಿಳಿ ಕಣಗಳು ಓರಲ್ ಕ್ಯಾಂಡಿಡಿಯಾಸಿಸ್ ಕ್ಯಾಂಡಿಡಾ ಅಲ್ಬಿಕಾನ್ಸ್ ಎಂಬ ಶಿಲೀಂಧ್ರ. ಇದರ ಬೆಳೆವಣಿಗೆಯು ಬಾಯಿಗೆ ಸಂಬಂಧಿಸಿದ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಶಿಲೀಂಧ್ರವು ಯಾವಾಗಲೂ ಬಾಯಿಯಲ್ಲಿರುತ್ತದೆ ಮತ್ತು ಸಂಪೂರ್ಣವಾಗಿ ನಿರುಪದ್ರವವಾಗಿದೆ. ಅಲ್ಲದೆ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ ಎಂಬ ಮುನ್ಸೂಚನೆಯನ್ನು ಕೂಡ ಇದು ನೀಡುತ್ತದೆ.

2. . ಕೆಂಪಾದ ನಾಲಿಗೆ:-

ಕೆಂಪು ನಾಲಿಗೆ ಎಂದರೆ ಅಪೌಷ್ಟಿಕತೆ ಎಂದರ್ಥ. ಇದಕ್ಕಾಗಿ ಹೆಚ್ಚು ಪೋಷಕಾಂಶವುಳ್ಳ ಆಹಾರ ಸೇವಿಸುವುದು ಸೂಕ್ತ. ವಿಟಮಿನ್ ಬಿ -12 ದೋಷ ಫೋಲಿಕ್ ಆಮ್ಲ ಅಥವಾ ವಿಟಮಿನ್ ಬಿ -12 ಕೊರತೆಯು ನಿಮ್ಮ ನಾಲಿಗೆಯನ್ನು ಕೆಂಪಾಗಿ ಕಾಣುವಂತೆ ಮಾಡುತ್ತದೆ. ಇದಕ್ಕಾಗಿ ಸರಿಯಾದ ಪೌಷ್ಠಿಕಾಂಶವನ್ನು ತೆಗೆದುಕೊಳ್ಳುವುದರ ಜತೆಗೆ ವಿಟಮಿನ್ ಅಧಿಕವಾಗಿರುವ ಆಹಾರವನ್ನು ತೆಗೆದುಕೊಳ್ಳಬೇಕು.

3. ನಾಲಿಗೆಯಲ್ಲಿನ ಚುಕ್ಕೆಗಳು
ನಾಲಿಗೆ ಸ್ನಾಯುವಿನ:-

ಎಪಿಥೀಲಿಯಂ ಮೇಲಿನ ಚುಕ್ಕೆಗಳು ಕೆಲವು ಬಾರಿ ಜೀವನದುದ್ದಕ್ಕೂ ಬೆಳೆಯುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಲ್ಲಿ ಕಪ್ಪು ನಾಲಿಗೆ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಕೀಮೋಥೆರಪಿಯಲ್ಲಿರುವವರು, ಮಧುಮೇಹಿಗಳು ಕಪ್ಪು ನಾಲಿಗೆಯನ್ನು ಹೊಂದಿರುತ್ತಾರೆ. ಈ ರೀತಿಯ ಸಮಸ್ಯೆ ಇರುವವರು ವೈದ್ಯರನ್ನು ಕಾಣುವುದು ಉತ್ತಮ. ಅದರಲ್ಲೂ ನಾಲಿಗೆಯ ಮೇಲೆ ಹೆಚ್ಚು ಗುಳ್ಳೆ ಹೊಂದಿರುವವರು ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದು ಸೂಕ್ತ.

4. ಹಳದಿ ಬಣ್ಣ:

ನಾಲಿಗೆ ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಕಾಮಾಲೆ ಅಥವಾ ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಬಾಯಿ ಸ್ವಚ್ಛವಾಗಿಲ್ಲದಿರುವುದು ಕೂಡ ಇದಕ್ಕೆ ಕಾರಣವಾಗಬಹುದು.

5. ನೇರಳೆ ಬಣ್ಣ:

ನಾಲಿಗೆ ನೇರಳೆ ಬಣ್ಣದಲ್ಲಿ ಕಾಣಿಸಿಕೊಂಡರೆ, ಅದು ಹೃದಯ ಸಂಬಂಧಿತ ಸಮಸ್ಯೆ ಅಥವಾ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುತ್ತಿಲ್ಲ ಎಂಬುದನ್ನು ಹೇಳುತ್ತದೆ.

6.ಗಾಢ ಅಥವಾ ಕಪ್ಪು ಬಣ್ಣ:

ತೀವ್ರವಾದ ಬ್ಯಾಕ್ಟೀರಿಯಾದ ಸೋಂಕಿನ ಸಂದರ್ಭಗಳಲ್ಲಿ ಅಥವಾ ಧೂಮಪಾನ ಅಥವಾ ಮಾದಕ ದ್ರವ್ಯ ಸೇವನೆಯ ಅಭ್ಯಾಸ ಹೊಂದಿರುವವರಲ್ಲಿ ನಾಲಿಗೆ ಗಾಢ ಬಣ್ಣಕ್ಕೆ ತಿರುಗುತ್ತದೆ.

ಬುದ್ಧಿಮಾಂದ್ಯ ಬಾಲಕನ ಮೇಲೆ ರಾಕ್ಷಸಿ ಕೃತ್ಯ: ಬೆಲ್ಟ್ ಮತ್ತು ಪೈಪ್’ನಿಂದ ಹೊಡೆದು, ಕಣ್ಣಿಗೆ ಖಾರ ಹಾಕಿದ ಪಾಪಿಗಳು!

0

ಬಾಗಲಕೋಟೆ: ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬಾಗಲಕೋಟೆ ನವನಗರದ 54ನೇ ಸೆಕ್ಟರ್‌ನಲ್ಲಿರುವ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ ನಡೆದಿದೆ.

ದೀಪಕ್ ರಾಠೋಡ್​​(16) ಹಲ್ಲೆಗೊಳಗಾದ ಬುದ್ಧಿಮಾಂದ್ಯ ಬಾಲಕನಾಗಿದ್ದು, ಮಹಾರಾಷ್ಟ್ರ ಮೂಲದ ಶಿಕ್ಷಕ ಅಕ್ಷಯ್ ಇಂಗಳಕರ್ ಬೆಲ್ಟ್ ಮತ್ತು ಪ್ಲಾಸ್ಟಿಕ್ ಪೈಪ್‌ನಿಂದ ಬಾಲಕನ ಮೇಲೆ ಹಲ್ಲೆ ನಡೆಸಿದ್ದರೆ, ಅವರ ಪತ್ನಿ ಮಾಲಿನಿ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿರುವುದು ತಿಳಿದುಬಂದಿದೆ.

ಜೊತೆಗೆ ಸಹ ಶಿಕ್ಷಕ ವಿಶಾಲ್ ಪಾಟೀಲ್ ಕೂಡ ಹಲ್ಲೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಹಲ್ಲೆಯ ಕುರಿತು ಪ್ರಶ್ನಿಸಲು ಬಂದ ಬಾಲಕನ ಪೋಷಕರಿಗೆ ಶಿಕ್ಷಕ ದಂಪತಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ವಿಷಯ ತಿಳಿದ ತಕ್ಷಣ ನವನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಸಂಬಂಧ ಶಾಲೆಯ ಮುಂದೆ ಮಕ್ಕಳ ಪೋಷಕರು ಜಮಾಯಿಸಿದ್ದು, ಶಿಕ್ಷಕ ದಂಪತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸದ್ಯ ಪೊಲೀಸರು ಶಿಕ್ಷಕ ಅಕ್ಷಯ್ ಇಂಗಳಕರ್ ಮತ್ತು ಅವರ ಪತ್ನಿ ಮಾಲಿನಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

 

ವಿಮಾನ ಹಾರಾಟಕ್ಕೂ ಮುನ್ನ ಸತ್ತ ಕೋಳಿ ಎಸೆಯೋದ್ಯಾಕೆ? ಈ ವಿಚಾರ ನಿಮಗೆ ಗೊತ್ತಿದ್ಯಾ!?

0

ವಿಮಾನ ಪ್ರಯಾಣವು ಬಸ್ ಅಥವಾ ರೈಲು ಪ್ರಯಾಣದಷ್ಟು ಸುಲಭವಾಗಿಲ್ಲ. ಪ್ರಯಾಣ ಆರಂಭಿಸುವ ಮುನ್ನ ಪ್ರಯಾಣಿಕರು ಹಾಗೂ ವಿಮಾನಕ್ಕೆ ಸಂಬಂಧಿಸಿದಂತೆ ಹಲವು ಹಂತದ ಪರಿಶೀಲನೆಗಳು ನಡೆಯುತ್ತವೆ.

ಪ್ರಯಾಣಿಕರ ವಿಷಯದಲ್ಲಿ ಗುರುತಿನ ಪರಿಶೀಲನೆ, ಬೋರ್ಡಿಂಗ್ ಪಾಸ್‌, ಪಾಸ್‌ಪೋರ್ಟ್ ತಪಾಸಣೆ ಕಡ್ಡಾಯವಾಗಿದ್ದು, ವಿಮಾನಕ್ಕೆ ಸಂಬಂಧಿಸಿದಂತೆ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್‌ಗೂ ಮುನ್ನ ತಾಂತ್ರಿಕ ದೋಷಗಳ ಪರಿಶೀಲನೆ ನಡೆಯುತ್ತದೆ.

ಇದಕ್ಕಿಂತಲೂ ಮಹತ್ವವಾದ ವಿಷಯವೆಂದರೆ, ವಿಮಾನ ಹಾರಾಟಕ್ಕೆ ಯೋಗ್ಯವೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವ ವಿಶೇಷ ಪ್ರಯೋಗಾಲಯ ಪರೀಕ್ಷೆಗಳು. ಅವುಗಳಲ್ಲಿ ಪ್ರಮುಖವಾದುದು ‘ಚಿಕನ್ ಗನ್’ ಪರೀಕ್ಷೆ.

ವಿಮಾನ ಟೇಕ್‌ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಹಕ್ಕಿಗಳು ಡಿಕ್ಕಿ ಹೊಡೆದು ಎಂಜಿನ್‌ಗೆ ಹಾನಿಯಾಗುವ ಘಟನೆಗಳನ್ನು ‘ಬರ್ಡ್ ಸ್ಟ್ರೈಕ್’ ಎಂದು ಕರೆಯಲಾಗುತ್ತದೆ. ಹಕ್ಕಿಯೊಂದು ಎಂಜಿನ್ ಒಳಗೆ ಪ್ರವೇಶಿಸಿದರೆ ಅಥವಾ ಬ್ಲೇಡ್‌ಗಳಿಗೆ ಸಿಕ್ಕಿಕೊಂಡರೆ, ಎಂಜಿನ್ ನಿಲ್ಲುವ ಅಥವಾ ಬೆಂಕಿ ಹೊತ್ತಿಕೊಳ್ಳುವಂತಹ ಅಪಾಯಗಳು ಉಂಟಾಗಬಹುದು. ಇಂತಹ ಘಟನೆಗಳು ವಿಶ್ವದಾದ್ಯಂತ ನಡೆದಿವೆ. ಭಾರತದಲ್ಲೇ 2020 ರಿಂದ 2025ರ ಮೊದಲಾರ್ಧದವರೆಗೆ ಪ್ರಮುಖ ಹತ್ತು ವಿಮಾನ ನಿಲ್ದಾಣಗಳಲ್ಲಿ ಸುಮಾರು 2,800 ಬರ್ಡ್ ಸ್ಟ್ರೈಕ್ ಪ್ರಕರಣಗಳು ದಾಖಲಾಗಿವೆ.

ಈ ಅಪಾಯಗಳನ್ನು ತಪ್ಪಿಸಲು ವಿಮಾನಗಳ ಎಂಜಿನ್‌, ಕಾಕ್‌ಪಿಟ್ ವಿಂಡ್‌ಶೀಲ್ಡ್ ಮತ್ತು ಇತರ ಪ್ರಮುಖ ಭಾಗಗಳು ಪಕ್ಷಿ ಡಿಕ್ಕಿಯನ್ನು ತಡೆಯುವಷ್ಟು ಬಲವಾಗಿವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ಪ್ರಯೋಗಾಲಯದಲ್ಲಿ ಸತ್ತ ಕೋಳಿಗಳನ್ನು ಅತೀವ ವೇಗದಲ್ಲಿ ವಿಮಾನದ ಭಾಗಗಳ ಮೇಲೆ ಎಸೆಯುವ ವಿಧಾನವನ್ನು ಬಳಸಲಾಗುತ್ತದೆ. ಈ ಪರೀಕ್ಷೆಯನ್ನೇ ‘ಚಿಕನ್ ಗನ್’ ಪರೀಕ್ಷೆ ಎಂದು ಕರೆಯಲಾಗುತ್ತದೆ.

ಈ ವಿಧಾನ 1950ರ ದಶಕದಲ್ಲಿ ಬ್ರಿಟಿಷ್ ಏರೋಸ್ಪೇಸ್ ಸಂಸ್ಥೆ ಡಿ ಹ್ಯಾವಿಲ್ಯಾಂಡ್‌ನಿಂದ ಆರಂಭವಾಯಿತು. ಜೆಟ್ ಎಂಜಿನ್ ಬಳಕೆ ಹೆಚ್ಚಾದಂತೆ, ಪಕ್ಷಿ ಡಿಕ್ಕಿಗಳಿಂದ ಉಂಟಾಗುವ ಅಪಾಯವೂ ಹೆಚ್ಚಾಗಿತ್ತು. ಇದಕ್ಕೆ ವಿಶ್ವಾಸಾರ್ಹ ಪರಿಹಾರವಾಗಿ ಈ ಪರೀಕ್ಷೆಯನ್ನು ರೂಪಿಸಲಾಯಿತು. ಇಂದು ಇದು ವಾಯುಯಾನ ಸುರಕ್ಷತೆಯ ಪ್ರಮುಖ ಮಾನದಂಡವಾಗಿದೆ.

ಪರೀಕ್ಷೆಯ ವೇಳೆ ಸುಮಾರು 500 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಸತ್ತ ಕೋಳಿಗಳನ್ನು ಎಂಜಿನ್‌, ವಿಂಡ್‌ಶೀಲ್ಡ್ ಅಥವಾ ರೆಕ್ಕೆಗಳ ಮೇಲೆ ಎಸೆಯಲಾಗುತ್ತದೆ. ನಿಯಂತ್ರಿತ ವಾತಾವರಣದಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ಹೈ-ಸ್ಪೀಡ್ ಕ್ಯಾಮೆರಾಗಳ ಮೂಲಕ ಪರಿಣಾಮಗಳನ್ನು ದಾಖಲಿಸಲಾಗುತ್ತದೆ. ನಂತರ ಎಂಜಿನಿಯರ್‌ಗಳು ವಿಮಾನದ ಭಾಗಗಳಿಗೆ ಉಂಟಾದ ಹಾನಿಯನ್ನು ವಿಶ್ಲೇಷಿಸುತ್ತಾರೆ.

ಈ ಪರೀಕ್ಷೆಯಲ್ಲಿ ಯಾವುದೇ ಗಂಭೀರ ದೋಷಗಳು ಕಂಡುಬಾರದಿದ್ದರೆ, ಆ ವಿಮಾನ ಅಥವಾ ಎಂಜಿನ್ ಮಾದರಿಯನ್ನು ಹಾರಾಟಕ್ಕೆ ಯೋಗ್ಯ ಎಂದು ಘೋಷಿಸಲಾಗುತ್ತದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು ಇಂತಹ ಕಠಿಣ ಪರೀಕ್ಷೆಗಳು ವಿಮಾನಯಾನ ಕ್ಷೇತ್ರದಲ್ಲಿ ಅನಿವಾರ್ಯವಾಗಿವೆ.

ಕಾನೂನು ಸಚಿವ ಎಚ್.ಕೆ. ಪಾಟೀಲ್‌ರಿಗೆ ಫೇಸ್‌ಬುಕ್‌ʼನಲ್ಲಿ ಜೀವ ಬೆದರಿಕೆ: ಆರೋಪಿ ಬಂಧನ

0

ಗದಗ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆಯ ಕರೆಗಳು ಹಾಗೂ ಇ-ಮೇಲ್‌ಗಳು ಹೆಚ್ಚುತ್ತಿರುವ ನಡುವೆಯೇ, ಕರ್ನಾಟಕದ ಕಾನೂನು ಸಚಿವ ಎಚ್.ಕೆ. ಪಾಟೀಲ್ ರಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಮಂಗಳೂರು, ಗದಗ ಸೇರಿದಂತೆ ರಾಜ್ಯದ ಹಲವೆಡೆ ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದಿದ್ದವು. ಈ ಬೆಳವಣಿಗೆಯ ನಡುವೆಯೇ, ಫೇಸ್‌ಬುಕ್‌ನಲ್ಲಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಜೀವ ಬೆದರಿಕೆ ಹಾಕಿರುವುದು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.

ವೀರಣ್ಣ ಬೀಳಗಿ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದು, ಸಚಿವರನ್ನು ಅವಹೇಳನಕಾರಿ ಪದಗಳಿಂದ ನಿಂದಿಸುವ ಜೊತೆಗೆ, ಸಾರ್ವಜನಿಕವಾಗಿ ನಿಲ್ಲಿಸಿ AK-47 ಮೂಲಕ ಗುಂಡಿನ ಮಳೆಗರೆಯಬೇಕು ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಹಾನಿ ಮಾಡುವುದಾಗಿ ಬೆದರಿಕೆ ನೀಡಿರುವುದೂ ಪೋಸ್ಟ್‌ನಲ್ಲಿ ಉಲ್ಲೇಖವಾಗಿತ್ತು.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ಕಾಂಗ್ರೆಸ್ ಮುಖಂಡ ಬಿ.ಬಿ. ಅಸೂಟಿ ಅವರು ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ದೂರಿನ ಆಧಾರದ ಮೇಲೆ ಪೊಲೀಸರು ತ್ವರಿತ ತನಿಖೆ ನಡೆಸಿ, ಡಿಸೆಂಬರ್ 14ರಂದು ರೋಣ ತಾಲೂಕಿನ ಸೂಡಿ ಗ್ರಾಮದ ನಿವಾಸಿ ವೀರಣ್ಣ ಬೀಳಗಿಯನ್ನು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹಾಗೂ ಬೆದರಿಕೆ ಉಂಟುಮಾಡುವ ಪೋಸ್ಟ್‌ಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇಂತಹ ಕೃತ್ಯಗಳು ಸಾರ್ವಜನಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುತ್ತವೆ ಎಂದು ತಿಳಿಸಿರುವ ಪೊಲೀಸರು, ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

T20 World Cupಗೆ ಭಾರತ ತಂಡ ಪ್ರಕಟ: ಗಿಲ್‌ʼಗಿಲ್ಲ ಸ್ಥಾನ – ಅಕ್ಷರ್‌ ಪಟೇಲ್‌ʼಗೆ ಉಪನಾಯಕನ ಪಟ್ಟ

0

ಬಹುನಿರೀಕ್ಷಿತ ಟಿ20 ವಿಶ್ವಕಪ್ 2026 ಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಉಪನಾಯಕನಾಗಿ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಟೂರ್ನಿಯಿಂದ ಶುಭಮನ್‌ ಗಿಲ್‌ ಅವರನ್ನು ಕೈ ಬಿಡಲಾಗಿದೆ.

ಭಾರತ ತಂಡ ಫೆಬ್ರವರಿ 7 ರಿಂದ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸುತ್ತಿದ್ದು, ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧದ ಮುಖಾಮುಖಿ ಎದುರಿಸಲಿದೆ. ಫೆಬ್ರವರಿ 15 ರಂದು ಪಾಕಿಸ್ತಾನ್ ವಿರುದ್ಧದ ಪಂದ್ಯ ಕೊಲೊಂಬೊದ ಆರ್‌. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.

ಟಿ20 ವಿಶ್ವಕಪ್ 2026 ಭಾರತ ತಂಡದ ಮೊದಲ ನಾಲ್ಕು ಪಂದ್ಯಗಳು:

  • ಫೆಬ್ರವರಿ 7: ಭಾರತ vs ಯುಎಸ್‌ಎ (ಮುಂಬೈ)

  • ಫೆಬ್ರವರಿ 12: ಭಾರತ vs ನಮೀಬಿಯಾ (ದೆಹಲಿ)

  • ಫೆಬ್ರವರಿ 15: ಭಾರತ vs ಪಾಕಿಸ್ತಾನ್ (ಕೊಲಂಬೊ)

  • ಫೆಬ್ರವರಿ 18: ಭಾರತ vs ನೆದರ್‌ಲೆಂಡ್ಸ್ (ಅಹಮದಾಬಾದ್)

ಈ ನಾಲ್ಕು ಪಂದ್ಯಗಳ ನಂತರ, ಟೀಮ್ ಇಂಡಿಯಾ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಲಿದೆ. ಸೂಪರ್-8ನಲ್ಲಿ 4 ಗ್ರೂಪ್‌ಗಳ ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಇರುವ ತಂಡಗಳು ಮುಂದಿನ ಹಂತಕ್ಕೆ ಹೋಗಲಿದ್ದಾರೆ. ಸೂಪರ್-8 ಹಂತದ ಮೇಲೆ, ಟಾಪ್-4 ತಂಡಗಳು ಸೆಮಿಫೈನಲ್ಗೆ ಪ್ರವೇಶ ಪಡೆಯುತ್ತವೆ.ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಕ್ರಿಕೆಟ್‌ ನಡೆಯಲಿದೆ. ಫೆ.7 ರಿಂದ ಆರಂಭವಾಗಿ ಮಾರ್ಷ್‌ 8ವರೆಗೆ 20 ಕ್ರಿಕೆಟ್‌ ಹಬ್ಬ ನಡೆಯಲಿದೆ.

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಹಠಾತ್ ಹೃದಯಾಘಾತಕ್ಕೆ ಶಿಕ್ಷಕಿ ಸೇರಿದಂತೆ ಇಬ್ಬರು ಬಲಿ! ಹಾಸನದಲ್ಲಿ ಹೆಚ್ಚಿದ ಆತಂಕ

0

ಹಾಸನ: ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತದಿಂದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಅರಕಲಗೂಡು ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ (58) ಸಾವನ್ನಪ್ಪಿದ ಘಟನೆ ನಡೆದಿದೆ.

ಅವರು ಈ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು ಮತ್ತು ನಿವೃತ್ತಿಯಾಗಲು ಇನ್ನೆರಡು ವರ್ಷ ಮಾತ್ರ ಬಾಕಿ ಇತ್ತು. ಇಂದು ಮುಂಜಾನೆ ತಮ್ಮ ಮನೆಯಲ್ಲೇ ಮಲಗುತ್ತಿದ್ದಾಗ ಹಠಾತ್ ಹೃದಯಾಘಾತದಿಂದ ಮೃತರಾಗಿದ್ದಾರೆ.

ಇದೇ ಸಮಯದಲ್ಲಿ ಹೊಳೆನರಸೀಪುರದ ಹಳ್ಳಿಮೈಸೂರು ಹೋಬಳಿ ಗುಲಗಂಜಿಹಳ್ಳಿ ಗ್ರಾಮದಲ್ಲಿ ಪರಮೇಶ್ (35) ಎಂಬ ಯುವಕ ಹಠಾತ್ ಹೃದಯಾಘಾತದಿಂದ ನಿಧನರಾದರು.

ಅವರು ಪಟ್ಟಣದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದವರು. ಮಧ್ಯರಾತ್ರಿ 2 ಗಂಟೆ ವೇಳೆಗೆ ಮಲಗಿದ್ದಾಗ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತ ಪ್ರಕರಣಗಳು ಮರುಕಳುತ್ತಿರುವುದು, ಸ್ಥಳೀಯ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ.

ಸಿಎಂ, ನನ್ನನ್ನು ಸೂಕ್ತ ಸಮಯದಲ್ಲಿ ಕರೆಯುವುದಾಗಿ ಹೈಕಮಾಂಡ್ ತಿಳಿಸಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: ನಮ್ಮ ಹೈಕಮಾಂಡ್ ನಾಯಕರು ಸಿಎಂ ಮತ್ತು ನನಗೆ ಇಬ್ಬರಿಗೂ ಏನೋ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದೂ ಇಬ್ಬರಿಗೂ ಹೇಳಿದ್ದಾರೆ. ಆಗ ಇಬ್ಬರೂ ದಿಲ್ಲಿಗೆ ಹೋಗುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ದೆಹಲಿ ನಾಯಕರು ನಿಮಗೆ ಆಹ್ವಾನ ನೀಡಿದ್ದಾರಾ ಎಂದು ಕೇಳಿದಾಗ ಈ ರೀತಿ ಉತ್ತರಿಸಿದರು.

“ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಹಾಕಿದ್ದ ಚಾರ್ಜ್ ಶೀಟ್ ಕೋರ್ಟ್ ನಲ್ಲಿ ತಿರಸ್ಕೃತಗೊಂಡಿದ್ದು, ಈಗ ಒಂದು ಎಫ್ಐಆರ್ ಬಾಕಿ ಉಳಿದುಕೊಂಡಿದೆ. ನಮ್ಮ ಮೇಲೆ ಯಾವ ರೀತಿ ದಬ್ಬಾಳಿಕೆ ನಡೆಯುತ್ತಿದೆ ಎಂದು ತಿಳಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದರು.

ವಿಧಾನ ಮಂಡಲ ಅಧಿವೇಶನದ ಬಳಿಕ ನೀವು ಮತ್ತು ಸಿಎಂ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಎಂದು ಚರ್ಚೆ ಇದೆಯಲ್ಲ ಎಂದು ಕೇಳಿದಾಗ, “ಆ ರೀತಿ ಇದ್ದರೆ ನಿಮಗೂ ತಿಳಿಸುತ್ತೇವೆ. ನಿಮಗೆ ತಿಳಿಸದೇ ಏನೂ ಮಾಡುವುದಿಲ್ಲ. ನಾನು ಕದ್ದುಮುಚ್ಚಿ ಹೋಗುವುದಿಲ್ಲ” ಎಂದರು.

ಮಂಗಳವಾರ ದೆಹಲಿಗೆ ಪ್ರಯಾಣ

ದೆಹಲಿ ಪೊಲೀಸರ ವಿಚಾರಣೆಗೆ ಹಾಜರಾಗುವ ಬಗ್ಗೆ ಕೇಳಿದಾಗ, “ನಾನು ಮಂಗಳವಾರ ದೆಹಲಿಗೆ ಹೋಗುತ್ತಿದ್ದು, ಆಗ ದೆಹಲಿ ಪೊಲೀಸರನ್ನು ಭೇಟಿ ಮಾಡುವೆ. ಅಂದು ಕೇಂದ್ರ ಜಲಶಕ್ತಿ ಸಚಿವರು ನದಿ ಜೋಡಣೆ ವಿಚಾರವಾಗಿ ಸಭೆ ಕರೆದಿದ್ದಾರೆ. ಅಂದು ನಮ್ಮ ರಾಜ್ಯದ ಪ್ರಮುಖ ಯೋಜನೆಗಳಾದ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಚರ್ಚೆ ಮಾಡುವೆ.

ಇದೇ ವೇಳೆ ಕೇಂದ್ರ ಅರಣ್ಯ ಸಚಿವರು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿರುವೆ. ರಾಜ್ಯದ ಹಿತಾಸಕ್ತಿ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಲು ತೀರ್ಮಾನಿಸಿರುವೆ. ರಾಜ್ಯದ ಸಂಸದರ ಜೊತೆಗೆ ಭೇಟಿಯಾಗುವ ಆಲೋಚನೆ ಇತ್ತು. ಇವೆಲ್ಲ ಆದ ನಂತರ ಅವರು ಬಂದರೆ ಪ್ರಧಾನಮಂತ್ರಿಗಳನ್ನೂ ಭೇಟಿ ಮಾಡುವೆ” ಎಂದು ತಿಳಿಸಿದರು.

ನಾಗಸಾಧುಗಳು ಆಶೀರ್ವಾದ ಮಾಡಿರುವ ಬಗ್ಗೆ ಕೇಳಿದಾಗ, “ಅವರು ಮನೆಗೆ ಹುಡುಕಿಕೊಂಡು ಬಂದು ಆಶೀರ್ವಾದ ಮಾಡಿದ್ದಾರೆ. ಮನೆಗೆ ಬಂದವರನ್ನು ಬೇಡ ಎನ್ನಲು ಆಗುವುದಿಲ್ಲ. ರಾಜಕೀಯದಲ್ಲಿರುವ ಕಾರಣ ನಮಗೆ ಸಾಧು ಸಂತರು, ಸ್ವಾಮೀಜಿಗಳು, ಹಿರಿಯರು ಸೇರಿದಂತೆ ಎಲ್ಲಾ ರೀತಿಯ ಜನರೂ ನಮಗೆ ಬೇಕು. ನಮ್ಮ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ನಡೆಸುತ್ತಿದೆ. ವಕ್ಫ್, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಸಹಾಯ ಮಾಡಲಾಗುತ್ತಿದೆ” ಎಂದು ತಿಳಿಸಿದರು.

error: Content is protected !!