Home Blog Page 3002

ಮತ್ತೊಬ್ಬ ಸಿದ್ದರಾಮಯ್ಯ ಹುಟ್ಟಿ ಬಂದ…!

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಸಿದ್ದರಾಮಯ್ಯ ಎಂಬ ಹೆಸರು‌ ಕೇಳುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಮುಖಂಡ ಸಿದ್ದರಾಮಯ್ಯ ಕಣ್ಮುಂದೆ ಬರುತ್ತಾರೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರದ ಮಂಜುನಾಥ ಮುರಡಿ ಎಂಬ ವ್ಯಕ್ತಿ ತನ್ನ ಮಗುವಿಗೆ ಸಿದ್ದರಾಮಯ್ಯ ಎಂದೇ ನಾಮಕರಣ ಮಾಡಿ, ಸಂಚಲನ ಮೂಡಿಸಿದ್ದಾನೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಲ್ಲಿ ಇದೀಗ ಮುಂದಿನ “ಸಿಎಂ” ವಿಚಾರವೇ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಯೊಬ್ಬರು ತಮ್ಮ ಮಗನಿಗೆ ‘ಸಿದ್ದರಾಮಯ್ಯ’ ಎಂದು ಹೆಸರಿಟ್ಟು ಸಂಭ್ರಮಿಸಿದ್ದಾರೆ.

ಮಂಜುನಾಥ್‌ ಮುರಡಿ ಎಂಬಾತ ಸಿದ್ದರಾಮಯ್ಯ ಮೇಲಿನ ಅಪಾರ ಅಭಿಮಾನದಿಂದ ತಮ್ಮ ಮಗನಿಗೆ ಅವರ ಹೆಸರನ್ನೇ ಇಟ್ಟಿರುವುದಾಗಿ ತಿಳಿಸಿದ್ದಾರೆ.

ಮಂಜುನಾಥ್ ಅವರು ಮಗ ಜನಿಸಿದ 21 ದಿನಗಳ ಬಳಿಕ ಶಾಸ್ತ್ರೋಕ್ತವಾಗಿ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದು, ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಸರಳವಾಗಿ ನಾಮಕರಣ ಸಮಾರಂಭ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಜಾರಿಗೆ ತಂದ ಯೋಜನೆಗಳಿಂದ ಪ್ರೇರೇಪಿತನಾಗಿ ಮಗನಿಗೆ ಸಿದ್ದರಾಮಯ್ಯ ಅವರ ಹೆಸರಿಟ್ಟೆ. ಇಡೀ ರಾಜ್ಯಕ್ಕೆ ಅನ್ನ ಹಾಕಿದ್ದು ಸಿದ್ದರಾಮಯ್ಯ. ಆ ಕಾರಣಕ್ಕೆ ನಾನು ನನ್ನ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದೇನೆ.

ಮಂಜುನಾಥ್ ಮುರಡಿ, ಸಿದ್ದರಾಮಯ್ಯ ಅಭಿಮಾನಿ, ದ್ಯಾಂಪುರ.

ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಶತಸಿದ್ಧ: ಎಸ್.ಆರ್.ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕಾಂಗ್ರೆಸ್‌ನಲ್ಲಿ ಮೂಲ, ವಲಸಿಗ ಎಂಬ ಬೇಧ ಇಲ್ಲ. ಅದೇನಿದ್ದರೂ ಬಿಜೆಪಿಗೆ ಸೀಮಿತ. ಬಿಜೆಪಿಯಲ್ಲಿ ಈಗಾಗಲೇ ಸಿಎಂ ಗದ್ದುಗೆಗೆ ಗುದ್ದಾಟ ಆರಂಭ ಆಗಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರ‌ ಜೊತೆ ಮಾತನಾಡಿ, ಹಾದಿ ಬೀದಿಯಲ್ಲಿ ಸಿಎಂ ಯಾರಾಗ್ತಾರೆ ಎಂದು ಹೇಳುವುದು ಮತ್ತು‌ ಚರ್ಚಿಸುವುದು ಸರಿಯಲ್ಲ. ನಮ್ಮಲ್ಲೂ ಸಿಎಂ ಆಕಾಂಕ್ಷಿಗಳು ಸಾಕಷ್ಟು ಜನ ಇದ್ದಾರೆ. ಅದಕ್ಕೂ ಮೊದಲು ಚುನಾವಣೆ ನಡೆಯಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು, ಆನಂತರ ಶಾಸಕಾಂಗ ಸಭೆಯಲ್ಲಿ ಪಕ್ಷದ ಶಾಸಕರು ಸೇರಿ ಸಿಎಂ ಯಾರು ಎಂಬುದನ್ನು ನಿರ್ಧರಿಸುತ್ತಾರೆ. ಎಲ್ಲಕ್ಕಿಂತ ಮೊದಲು ರಾಜ್ಯದಲ್ಲಿರಯವ ಬಿಜೆಪಿ ಸರಕಾರವನ್ನು‌ ಕಿತ್ತೆಸೆಯಬೇಕು ಎಂದರು.
ಕಾಂಗ್ರೆಸ್‌ನಲ್ಲಿ ನಾಯಕರಿಗೇನು ಕೊರತೆ‌ ಇಲ್ಲ. ಸಮಯ, ಸಂದರ್ಭ ಬಂದಾಗ ಪಕ್ಷದಲ್ಲಿ ಎಲ್ಲರಿಗೂ ಅಧಿಕಾರ ಸಿಗುತ್ತೆ. ಕಾಂಗ್ರೆಸ್ ಸಾಮಾಜಿಕ ನ್ಯಾಯ ತತ್ವದಡಿ ಬೆಳೆದು ಬಂದಿರುವ ಪಕ್ಷ. ಬಿಜೆಪಿಯಂತೆ ಜಾತಿ-ಧರ್ಮಕ್ಕೆ ಸೀಮಿತವಾದ ಪಕ್ಷವಲ್ಲ. ಸದ್ಯ ರಾಜ್ಯದಲ್ಲಿ ಕೋವಿಡ್-19ನ ಮೂರನೇ ಅಲೆಯ ಆತಂಕ ಎದುರಾಗಿದೆ. ವೈರಸ್‌ನ ಎರಡು ಅಲೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ವೈರಸ್ ನಿಯಂತ್ರಣದ ನಿಟ್ಟಿನಲ್ಲಿ ಸದ್ಯ ವಿಶೇಷ ಅಧಿವೇಶನ ಕರೆದರೂ ತಪ್ಪಿಲ್ಲ. ಆದರೆ ಬಿಜೆಪಿಗೆ ಪಂಚೇಂದ್ರೀಯಗಳೇ ಇಲ್ಲ. ವಿರೋಧ ಪಕ್ಷದವರು ಏನು ಹೇಳಿದರೂ ಕೇಳಿಸಲ್ಲ, ಕಾಣಿಸಲ್ಲ ಎಂದು ಹರಿಹಾಯ್ದರು.

ಸಿಎಂ ಯಾರದ್ರೇನು? ಶಾಸಕರು ಬೇಜವಾಬ್ದಾರಿ ಹೇಳಿಕೆ ಕೊಡೋದನ್ನ ನಿಲ್ಲಿಸಲಿ: ಎಚ್.ಆರ್ ಶ್ರೀನಾಥ್

0

ವಿಜಯಸಾಕ್ಷಿ ಸುದ್ದಿ, ಗಂಗಾವತಿ
ಯಾರೇ ಮುಂದಿನ ಸಿಎಂ ಆಗಲಿ, ಬಿಡಲಿ, ಮೊದಲು ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಈ ವಿಷಯದಲ್ಲಿ ಬೇಜವಾಬ್ದಾರಿ ಹೇಳಿಕೆ ಕೊಡೋದನ್ನ ನಿಲ್ಲಿಸಲಿ ಎಂದು ಮಾಜಿ ಎಂಎಲ್‌ಸಿ ಎಚ್.ಆರ್ ಶ್ರೀನಾಥ್ ಹೇಳಿದರು.
ಜಿಲ್ಲೆಯ ಗಂಗಾವತಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಸಿಎಂ ಆಗಬೇಕು, ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿಕೆ ನೀಡ್ತಾ ಇದ್ರೆ, ಇತ್ತ ಬಿಜೆಪಿಯವರು ಸಿಎಂ ಬದಲಾವಣೆಗಾಗಿ ಕಿತ್ತಾಟ ನಡೆಸ್ತಾ ಇದ್ದಾರೆ. ಮೊದಲು ಶಾಸಕರು ಜನಸೇವೆಯ ಕಾಳಜಿ ತೋರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸದ್ಯಕ್ಕೆ ಜೆಡಿಎಸ್ ನನ್ನ ಪಕ್ಷ; ಮುಂದಿನ ಬೆಳವಣಿಗೆಗಳ ಬಗ್ಗೆ ಗೊತ್ತಿಲ್ಲ
ಇದೇ ವೇಳೆ ನೀವು ಕಾಂಗ್ರೆಸ್‌ಗೆ ಹೋಗ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಚ್.ಆರ್ ಶ್ರೀನಾಥ್, ನಾನು ಹಾಗೂ ನಮ್ಮ ತಂದೆಯವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ಇಂದಿರಾಗಾಂಧಿಯವರ ಗರಡಿ ಮನೆಯಲ್ಲಿ ಬೆಳೆದಿದ್ದೇವೆ. ಆದರೆ ಇದೀಗ ನಾನು ಜೆಡಿಎಸ್ ಪಕ್ಷದಲ್ಲಿ ಇದ್ದು, ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೆ ಗೊತ್ತಿಲ್ಲ. ಆದರೆ ಸದ್ಯ ಜೆಡಿಎಸ್ ಪಕ್ಷದ ಸಂಘಟನೆ ಮಾಡುತ್ತೀದ್ದೇವೆ ಎಂದು ಕಾಂಗ್ರೆಸ್‌ಗೆ ಹೋಗುವ ಸುಳಿವು ನೀಡಿದರು.
ಅನ್ಸಾರಿ ಎದುರಾಗಬಹುದು ಇಲ್ಲವೇ ಇಬ್ಬರೂ ಒಂದಾಗಬಹುದು
ಅನ್ಸಾರಿಯವರು ಜೆಡಿಎಸ್‌ಗೆ ಬಂದ್ರೆ ಸ್ವಾಗತ ಮಾಡ್ತಿರಾ ಎಂದಾಗ ಪ್ರತಿಕ್ರಿಯಿಸಿದ ಎಚ್.ಆರ್ ಶ್ರೀನಾಥ್, ಜೆಡಿಎಸ್ ಸ್ವಾಗತ ಮಾಡೋದು ಬಿಡೋದು ದೇವೆಗೌಡ್ರು ನಿರ್ಧಾರ ಮಾಡ್ತಾರೆ. ಆದ್ರೆ ಮುಂದಿನ ಚುನಾವಣೆಯಲ್ಲಿ ನನಗೆ ಅನ್ಸಾರಿ ಎದುರಾಗಬಹುದು ಅಥವಾ ನಾವಿಬ್ಬರು ಒಂದಾಗಬಹುದು. ಆದ್ರೆ ಸದ್ಯ ಅನ್ಸಾರಿ ಹಾಗೂ ನನ್ನ ನಡುವೆ ಹೊಂದಾಣಿಕೆ ಸರಿ ಇಲ್ಲ.‌ ಈ ಹಿಂದೆ ಕಾಂಗ್ರೆಸ್‌ಗೆ ಅನ್ಸಾರಿ ಬಂದಾಗ ನನಗೆ ಮಾತು ಕೊಟ್ಟು ಇಕ್ಬಾಲ್ ಅನ್ಸಾರಿ ತಪ್ಪಿದ್ರು. ಇದರಿಂದ ಅವರನ್ನು ನಂಬೋದು ಅಸಾಧ್ಯ ಎಂದರು.

ಬಂಧನದ ಭೀತಿಯಲ್ಲಿ ಸಿಡಿ ಲೇಡಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ಸಿಡಿಯಲ್ಲಿನ ಯುವತಿಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು.  ಎಸ್ ಐಟಿ ತಂಡ ಯುವತಿಯನ್ನು ಬಂಧಿಸಲು ಮುಂದಾಗಿದ್ದರಿಂದ, ಬಂದಿಸದಂತೆ ನಿರ್ದೇಶಿಸಬೇಕು ಎಂದು ಸಂತ್ರಸ್ತ ಯುವತಿ ಹೈಕೋರ್ಟ್ ಗೆ ಮನವಿ ಮಾಡಿದ್ದಳು. ಇದೀಗ ಯುವತಿಯ ಮನವಿಯನ್ನು ಹೈಕೋರ್ಟ್ ನಿರಾಕರಿಸಿದೆ. ಹೀಗಾಗಿ ಯುವತಿಗೆ ಬಂಧನದ ಬೀತಿ ಎದುರಾಗಿದೆ.

ರಮೇಶ್‌ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಯುವತಿ ವಿರುದ್ಧ ದೂರು ದಾಖಲಿಸಲಾಗಿತ್ತು. ಆ ದೂರು ರದ್ದುಪಡಿಸುವಂತೆ ಕೋರಿ ಯುವತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ಯುವತಿ ಪರ ವಕೀಲ ಸಂಕೇತ್‌ ಏಣಗಿ ವಾದ ಮಂಡಿಸಿ, ಅತ್ಯಾಚಾರ ಆರೋಪ ಸಂಬಂಧ ಯುವತಿ ದಾಖಲಿಸಿದ ದೂರಿನ ಸಂಬಂಧ ಆರೋಪಿ ರಮೇಶ್‌ ಜಾರಕಿಹೊಳಿ ಅವರನ್ನು ತನಿಖಾಧಿಕಾರಿಗಳು ಬಂಧಿಸಿಲ್ಲ. ಆದರೆ, ರಮೇಶ್‌ ಜಾರಕಿಹೊಳಿ ದಾಖಲಿಸಿರುವ ದೂರಿನ ಸಂಬಂಧ ಯುವತಿ ಬಂಧಿಸುವ ಸಾಧ್ಯತೆಯಿದೆ. ಹೀಗಾಗಿ ಆಕೆಗೆ ಬಂಧನದ ಭೀತಿಯಿದ್ದು, ಅರ್ಜಿದಾರ ಯುವತಿಯನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಮೇಶ್‌ ಜಾರಕಿಹೊಳಿ ದಾಖಲಿಸಿರುವ ದೂರನ್ನು ರದ್ದುಪಡಿಸಲು ಕೋರಿ ಸಿಆರ್‌ಪಿಸಿ 482 ಅಡಿ ಸಲ್ಲಿಸಿದ ಅರ್ಜಿ ಇದಾಗಿದೆ. ಹಾಗಾಗಿ, ಅರ್ಜಿದಾರಳನ್ನು ಬಂಧಿಸದಂತೆ ಈ ಅರ್ಜಿಯಲ್ಲಿ ಸೂಚಿಸಲಾಗುವುದಿಲ್ಲ. ಅಗತ್ಯವಿದ್ದರೆ ನಿರೀಕ್ಷಣಾ ಜಾಮೀನು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು ಎಂದು ಹೇಳುವ ಮೂಲಕ ಯುವತಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಯಿತು.

ಹು-ಧಾ ಪಾಲಿಕೆ ಚುನಾವಣೆ ಹೊಸ ಅಲೆ ಸೃಷ್ಟಿಸಲು ಸಿದ್ಧ:ಆಮ್ ಆದ್ಮಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಾಜ್ಯ ರಾಜಕಾರಣದಲ್ಲಿ ಆಮ್ ಆದ್ಮಿ ಪಕ್ಷವು ಹೊಸ ಸಂಚಲನ ಸೃಷ್ಟಿಸುವ ಉದ್ದೇಶದಿಂದ ಈ ಭಾರಿ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೇವಾ ಮನೋಭಾವವುಳ್ಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಕೆಲಸವನ್ನು ಅರವಿಂದ ಕೇಜ್ರಿವಾಲ್ ನಿರ್ದೇಶನದ ಮೇರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡರಾದ ಪೃಥ್ವಿರಾಜ್‌ ರೆಡ್ಡಿ ತಿಳಿಸಿದರು‌.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯ ಅಂದರೇ ಸರ್ಕಾರದ ಕಣ್ಣಿಗೆ ಬೀಳುವುದು ಬೆಂಗಳೂರು ಮಾತ್ರ ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಹಿತದೃಷ್ಟಿಯಿಂದ ಈ ಬಾರಿ ಪಾಲಿಕೆ ಚುನಾವಣೆಯ ಮೂಲಕ ರೂಪರೇಷಗಳನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಅಭ್ಯರ್ಥಿಗಳನ್ನು ಕೂಡ ಅಂತಿಮಗೊಳಿಸಲಾಗುತ್ತಿದೆ ಎಂದರು.

ಹುಬ್ಬಳ್ಳಿ- ಧಾರವಾಡ ಮಹಾನಗರಗಳನ್ನು ವಿಶ್ವದರ್ಜೆಯ ಮಾದರಿಯ ನಗರಗಳನ್ನಾಗಿ ಮಾಡುವ ಪರಿಕಲ್ಪನೆಯೊಂದಿಗೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇತರೆ ಪಕ್ಷಗಳ ಹಾಗೇ ನಾವು ಬ್ಯಾಂಕ್ ಬ್ಯಾಲೆನ್ಸ ನೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲಾ, ಪಕ್ಷದಿಂದ ಉತ್ತಮವಾದ, ಸಮರ್ಥ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸುತ್ತೆವೆ ಎಂದು ಅವರು ಹೇಳಿದರು

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಬರ್ಬರ ಹತ್ಯೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಿಬಿಎಂಪಿ ಮಾಜಿ ಕಾಪೊರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಛಲವಾದಿ ಪಾಳ್ಯದ ಫವರ್ ಗಾರ್ಡನ್ ನಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ರೇಖಾರನ್ನು ಮನೆಯಿಂದ ಹೊರ ಕರೆದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಖಾ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ, ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ. ಸದ್ಯ ಕೊಲೆಯಾಗಿರುವ ರೇಖಾ 2 ಬಾರಿ ಬಿಜೆಪಿಯಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು.

2018ರ ಫೆಬ್ರವರಿ 8ರಂದು ರೇಖಾ ಪತಿ ಕದಿರೇಶ್ ಅವರನ್ನು ಮಲ್ಲೇಶ್ವರಂನ ದೇವಸ್ಥಾನದ ಬಳಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಶೋಬನ್ ಗ್ಯಾಂಗ್, ಕದಿರೇಶ್ ಅವರನ್ನು ಕೊಚ್ಚಿ ಕೊಲೆ ಮಾಡಿತ್ತು. ಸದ್ಯ ರೇಖಾ ಅವರ ಮೇಲೆಯೂ ಅದೇ ಗ್ಯಾಂಗ್ ಹಲ್ಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಬೆಲೆ ಏರಿಕೆ ನಿರ್ಧಾರ ಖಂಡಿಸಿ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಜೂ.24-ಇಂಧನ ಬೆಲೆ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಗಾಯದ ಮೇಲೆ ಬರೆ ಎಳೆಯುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಜೈ ಭೀಮ ಯುವ ಶಕ್ತಿ ಸೇನಾ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಕೋವಿಡ್ ಸಂಕಷ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸದೇ, ಇಂಧನ ದರ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯ ಅಮಾನವೀಯವಾಗಿದೆ. ಈ ನಡೆಯನ್ನು ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಕೋವಿಡ್ ಲಾಕ್ ಡೌನ್ ಕಾರಣಕ್ಕೆ ತಮ್ಮ ಉದ್ಯೋಗ, ಆದಾಯ ಕಳೆದುಕೊಂಡಿರುವ ಜನರಿಗೆ ಜೀವನೋಪಾಯವೇ ಕಷ್ಟವಾದ ಸಮಯದಲ್ಲಿ ಬೆಲೆ ಏರಿಕೆ ಮಾಡಿರುವುದು ಖಂಡನೀಯ ಎಂದು ಪ್ರತಿಭಟನಾನಿರತ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ನಷ್ಟ ಸರಿದೂಗಿಸಲು ಸೋರಿಕೆ, ಭ್ರಷ್ಟಾಚಾರ, ದುಂದುವೆಚ್ಚಗಳನ್ನು ತಡೆಗಟ್ಟುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಕೋವಿಡ್ ಪರಿಹಾರದ ಹೆಸರಿನಲ್ಲಿ ಒಂದು ಕೈಯಲ್ಲಿ ಪುಡಿಗಾಸನ್ನು ನೀಡಿ ಇನ್ನೊಂದು ಕೈಯಲ್ಲಿ ಈ ರೀತಿ ವಿದ್ಯುತ್, ಪೆಟ್ರೋಲ್ ಗಳ ಮೂಲಕ ಸುಲಿಗೆ ಮಾಡುವುದು ಜನಪರ ಸರ್ಕಾರದ ಲಕ್ಷಣವೇ..? ವಿದ್ಯುತ್ ದರ ಏರಿಕೆಯ ಈ ಜನವಿರೋಧಿ ತೀರ್ಮಾನವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕೆಂದು ಒತ್ತಾಯಿಸಿದರು.

ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ಗೆದ್ದ ತಂಡಕ್ಕೆ ಎಷ್ಟು ಬಹುಮಾನದ ಮೊತ್ತ ಸಿಗಲಿದೆ?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ಲ್ಲಿ ನ್ಯೂಜಿಲೆಂಡ್ ಗೆದ್ದು ಬೀಗಿದೆ. ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು ಆದರೆ, ಮಳೆ ಎಲ್ಲವನ್ನೂ ಹಾಳು ಮಾಡಿದೆ. ನಿರಂತರ ಮಳೆಯಿಂದಾಗಿ ಬಹಳಷ್ಟು ಆಟ ಹಾಳಾಯಿತು. ಈ ಕಾರಣಕ್ಕಾಗಿ, ಈ ಪಂದ್ಯಕ್ಕೆ ಮೀಸಲು ದಿನವನ್ನು ಐಸಿಸಿ ಇಟ್ಟುಕೊಂಡಿತ್ತು. ಇದರಲ್ಲಿ ಭಾರತ ಸೋತಿದೆ.

ಈ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಹುಮಾನದ ಮೊತ್ತವನ್ನು ಘೋಷಿಸಿತ್ತು. ಫೈನಲ್‌ ನಲ್ಲಿ ಗೆಲ್ಲುವ ತಂಡವು 1.6 ಮಿಲಿಯನ್ ಯುಎಸ್ ಡಾಲರ್‌ ಅಂದರೆ ರೂ. 11.71 ಕೋಟಿ ಬಹುಮಾನ ಪಡೆಯಲಿದೆ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲಾರ್ಡಿಸ್ ಹೇಳಿದ್ದಾರೆ. ರನ್ನರ್ ಅಪ್ ತಂಡಕ್ಕೆ ಎಂಟು ಲಕ್ಷ ಡಾಲರ್ ಅಂದರೆ ರೂ. 5.85 ಕೋಟಿ ನೀಡಲಾಗುತ್ತದೆ.

ಡ್ರಾ ಆದಲ್ಲಿ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುವುದು ಮತ್ತು ವಿಜೇತ ತಂಡಕ್ಕೆ ಬಹುಮಾನದ ಮೊತ್ತವನ್ನು ಸಮಾನವಾಗಿ ವಿಂಗಡಿಸಲಾಗುವುದು ಎಂದು ಐಸಿಸಿ ಹೇಳಿತ್ತು. ವಿಜೇತ ತಂಡಕ್ಕೆ ಟ್ರೋಫಿಯಾಗಿ ಮೇಸ್ ಆಫ್ ದಿ ಟೆಸ್ಟ್ ಚಾಂಪಿಯನ್‌ಶಿಪ್ ನೀಡಲಾಗುವುದು. ಈ ಮೇಸ್ ಅನ್ನು ಪ್ರತಿ ವರ್ಷ ಟೆಸ್ಟ್ ಶ್ರೇಯಾಂಕದಲ್ಲಿ ಪ್ರಥಮ ಶ್ರೇಯಾಂಕಿತ ತಂಡಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.

ಈ ಚಾಂಪಿಯನ್‌ಶಿಪ್‌ ನಲ್ಲಿ ಭಾಗವಹಿಸುವ ಉಳಿದ ತಂಡಗಳಿಗೂ ಐಸಿಸಿ ಬಹುಮಾನ ನೀಡಲು ಮುಂದಾಗಿದೆ. ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕೆ ಸುಮಾರು ರೂ. 3.29 ಕೋಟಿ, ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ ಗೆ ರೂ. 2.56 ಕೋಟಿ ನೀಡಲಾಗುವುದು.
5ನೇ ಶ್ರೇಯಾಂಕದ ತಂಡಕ್ಕೆ ರೂ. 1.46 ಕೋಟಿ, ಉಳಿದ ನಾಲ್ಕ ತಂಡಗಳಿಗೆ ರೂ. 73 ಲಕ್ಷ ನೀಡಲಾಗುವುದು ಎಂದು ಐಸಿಸಿ ಹೇಳಿತ್ತು.

ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಸಿಎಂ ಫೈಟ್!

ವಿಜಯಸಾಕ್ಷಿ ಸುದ್ದಿ ಬೆಂಗಳೂರು

ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ವಿಷಯಗಳು ಸ್ಫೋಟಗಳೊಳ್ಳುತ್ತಿವೆ. ಚುನಾವಣೆ ಗೆಲ್ಲುವ ಮೊದಲೇ ಕೈ ಪಾಳಯದಲ್ಲಿ ಮುಂದಿನ ಸಿಎಂ ಯಾರು ಎಂಬ ಕಾದಾಟ ಶುರುವಾಗಿದೆ.
ಬಿಜೆಪಿ ಪಾಳಯದಲ್ಲಿ ನಾಯಕತ್ವದ ಫೈಟ್ ಶುರುವಾದ ಬೆನ್ನಲ್ಲಿಯೇ ಕಾಂಗ್ರೆಸ್ ನಲ್ಲಿ ಕೂಡ ಶುರುವಾಗಿದೆ. ಕಾಂಗ್ರೆಸ್ ನಲ್ಲಿಯೂ ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಯಾರ ಪ್ರಶ್ನೆ ಮೂಡಿದೆ.

ಬಿಜೆಪಿಯಲ್ಲಿ ಇದೇ ರೀತಿ ಫೈಟ್ ಶುರುವಾಗಿತ್ತು. ಆದರೆ, ಹೈಕಮಾಂಡ್ ಮಧ್ಯ ಪ್ರವೇಶಿಸಿ ತಣ್ಣಗೆ ಮಾಡಿದೆ. ಇದರ ಮಧ್ಯೆ ಕಾಂಗ್ರೆಸ್ ನಲ್ಲಿ ಕೂಡ ನಾಯಕತ್ವದ ಗುದ್ದಾಟ ನಡೆದಿದೆ. ಹೈಕಮಾಂಡ್ ಎಂಟ್ರಿ ಬಳಿಕವೂ ತಣ್ಣಗಾಗಬೇಕಿದ್ದ ಬಣ ಬಡಿದಾಟ ಮತ್ತಷ್ಟು ಜೋರಾಗಿದೆ. ಸಿದ್ದರಾಮಯ್ಯ ಬಣದ ಶಾಸಕರು ಸಿದ್ದು ಸಿಎಂ ಜಪವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಸಿದ್ದರಾಮಯ್ಯ ಪರ ದಿನಕ್ಕೊಬ್ಬರು ಸದ್ದು ಮಾಡುತ್ತಿದ್ದಾರೆ. ಶಾಸಕ ಜಮೀರ್, ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದರು. ಇಂದು ಹರಿಹರ ಶಾಸಕ ರಾಮಪ್ಪ ಮತ್ತು ಅಖಂಡ ಶ್ರೀನಿವಾಸಮೂರ್ತಿ ಸಿದ್ದರಾಮಯ್ಯನವರೇ ಸಿಎಂ ಆಗಬೇಕು ಎಂದು ಹೇಳಿದ್ದಾರೆ. ಅದರಲ್ಲಿಯೂ ಹರಿಹರ ಶಾಸಕ ರಾಮಪ್ಪ ಮಾತನಾಡಿ, ಡಿಕೆಶಿಗೆ ಇನ್ನೂ ವಯಸ್ಸಿದೆ, ಮುಂದೆ ಸಿಎಂ ಆಗೋ ಅವಕಾಶ ಇದೆ. 2023ಕ್ಕೆ ಸಿದ್ದರಾಮಯ್ಯನೇ ಸಿಎಂ ಆಗ್ಬೇಕು ಎಂದಿದ್ದಾರೆ.

ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೇಸರ ಹೊರಹಾಕಿದ್ದಾರೆ. ಸಿಎಂ ಆಗಲು ನನಗೇನು ಅರ್ಜೆಂಟ್ ಇಲ್ಲ. ಇದನ್ನು ನಾಯಕರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸಂಸದ ಡಿಕೆ ಸುರೇಶ್ ಅಂತೂ ಈಗ ಮಾತಾಡ್ತಿರೋರೆಲ್ಲಾ ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದವರು ಎಂದು ಸಿದ್ದು ಬಣಕ್ಕೆ ಟಾಂಗ್ ಕೊಟ್ಟಿದ್ದಾರೆ.

ನಿಂತಿಲ್ಲ ಅಕ್ಕಿ ಅಕ್ರಮ ದಂಧೆ; 1.81ಲಕ್ಷ ರೂ.ಮೌಲ್ಯದ ಅಕ್ಕಿ ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಅಕ್ಕಿ ಅಕ್ರಮ ದಂಧೆ ಜಿಲ್ಲೆಯಲ್ಲಿ ಇನ್ನೂ ನಿಂತಿಲ್ಲ ಎಂಬುದಕ್ಕೆ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್‌ನಲ್ಲಿ ಬುಧವಾರ ನಡೆದ ಘಟನೆ ಸಾಕ್ಷಿಯಾಗಿದೆ.

ಖಚಿತ ಮಾಹಿತಿ ಮೇರೆಗೆ ಗಂಗಾವತಿ ತಹಶೀಲ್ದಾರ ನಾಗರಾಜ, ಆಹಾರ ನಿರೀಕ್ಷಕ ಎಚ್.ಐ.ಬಗಲಿ ಸೇರಿದಂತೆ ಇತರ ಅಧಿಕಾರಿಗಳು ದಾಳಿ ನಡೆಸಿ ಸುಮಾರು 1.81 ಲಕ್ಷ ರೂಪಾಯಿ ಮೌಲ್ಯದ 82.70 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮಕ್ಕೆ ಸಂಬಂಧಿಸಿದಂತೆ ಐಚರ್ ವಾಹನವನ್ನು ಸುಪರ್ದಿಗೆ ತೆಗೆದುಕೊಂಡಿರುವ ಅಧಿಕಾರಿಗಳು ವಾಹನವು ವಿಶ್ವನಾಥ ಗಂಗಾವತಿ ಎಂಬುವವರಿಗೆ ಸೇರಿದ್ದು ಎಂದು ಪತ್ತೆ ಮಾಡಿದ್ದಾರೆ. ವಾಹನದ ಚಾಲಕ ಮೆಹಬೂಬ್ ಪಾಷಾ ಮತ್ತು ರಫೀ ಖಾನ್ ಪರಾರಿಯಾಗಿದ್ದು, ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವತಃ ಎಸ್ಪಿ, ಡಿಸಿ ಕೆಲ ದಿನಗಳ ಹಿಂದೆ ಅಕ್ಕಿ ಅಕ್ರಮವನ್ನು‌ ಬಯಲಿಗೆಳೆದಿದ್ದರು. ಆದರೂ ಅಕ್ರಮಕ್ಕೆ ಕಡಿವಾಣ ಬೀಳದಿರುವುದು ಅಕ್ರಮದ ಕಬಂಧಬಾಹುಗಳು ಎಲ್ಲಿಯವರೆಗೆ ಬೆಳೆದಿರಬಹುದು ಎಂಬುದು ಊಹೆಗೆ ನಿಲುಕದ ಸಂಗತಿಯಾಗಿದೆ.

error: Content is protected !!