Home Blog Page 302

ಮತ್ತೆ ಸಂಕಷ್ಟದಲ್ಲಿ ಚೈತ್ರಾ ಕುಂದಾಪುರ: ತಂದೆ ನೀಡಿದ ದೂರಿಗೆ ಸ್ಪಂದಿಸಿದ ಕೋರ್ಟ್

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಚೈತ್ರಾ ಕುಂದಾಪುರ ಅವರಿಗೆ ಈಗ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ತಂದೆ ಬಾಲಕೃಷ್ಣ ನಾಯ್ಕ್ ಸಲ್ಲಿಸಿದ್ದ ದೂರಿನ ಮೇರೆಗೆ ಹಿರಿಯ ನಾಗರಿಕರ ನ್ಯಾಯಾಲಯ ಚೈತ್ರಾ ವಿರುದ್ಧ ಆದೇಶ ನೀಡಿದ್ದು, ಕುಂದಾಪುರ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಬಾಲಕೃಷ್ಣ ನಾಯ್ಕ್ ಅವರು, ಮಗಳು ಚೈತ್ರಾ ಮತ್ತು ಪತ್ನಿಯಿಂದ ತಮಗೆ ಕಿರುಕುಳವಾಗುತ್ತಿದೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಬಾಲಕೃಷ್ಣ ನಾಯ್ಕ್ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದು ಆದೇಶಿಸಿದ್ದು, ಅವರು ತಮ್ಮ ಮನೆಯಲ್ಲಿ ಭಯವಿಲ್ಲದೆ ವಾಸಿಸುವಂತಾಗಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದೆ. ಜೊತೆಗೆ, ಈ ವಿಚಾರದಲ್ಲಿ ಚೈತ್ರಾ ಕುಂದಾಪುರ ಅವರಿಂದ ಕಾನೂನುಬದ್ಧ ಮುಚ್ಚಳಿಕೆ ಪಡೆಯುವಂತೆ ಸೂಚಿಸಲಾಗಿದೆ.

ಚೈತ್ರಾ ಕುಂದಾಪುರ ಮತ್ತು ಅವರ ತಂದೆಯ ನಡುವಿನ ಸಂಘರ್ಷ ಈ ಮೊದಲು ಸಾರ್ವಜನಿಕವಾಗಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಚೈತ್ರಾ ಮದುವೆ ಸಂದರ್ಭದಲ್ಲಿ ತಂದೆ ವಿರೋಧ ವ್ಯಕ್ತಪಡಿಸಿದ್ದರೆ, ಅದಕ್ಕೆ ಪ್ರತಿಯಾಗಿ ಚೈತ್ರಾ ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷವಾಗಿ ಕಿಡಿಕಾರಿದ್ದರು. ಈ ಘಟನೆಗಳೇ ಕುಟುಂಬದಲ್ಲಿ ಬಿರುಕು ಮೂಡಲು ಕಾರಣವಾಗಿವೆ ಎನ್ನಲಾಗಿದೆ.

ಈ ಹಿಂದೆ ಬಿಗ್ ಬಾಸ್ ಕನ್ನಡ 11ನೇ ಸೀಸನ್‌ನಲ್ಲಿ ಸ್ಪರ್ಧಿಸಿದ್ದ ಚೈತ್ರಾ, ಈಗ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಆದರೆ, ನ್ಯಾಯಾಲಯದ ಈ ಆದೇಶದಿಂದಾಗಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾದ ಪರಿಸ್ಥಿತಿ ಉಂಟಾಗುತ್ತದೆಯೇ ಎಂಬುದು ಈಗ ಪ್ರೇಕ್ಷಕರ ಕುತೂಹಲವಾಗಿದೆ.

‘ದ್ವೇಷ ಭಾಷಣ ಮಸೂದೆ’ ಸಾರ್ವಜನಿಕರ ಬಾಯಿ ಮುಚ್ಚಿಸುವ ಆದೇಶ: ಕಾಂಗ್ರೆಸ್ ವಿರುದ್ಧ ಜೋಶಿ ವಾಗ್ದಾಳಿ

0

ನವದೆಹಲಿ:- ದ್ವೇಷ ಭಾಷಣ ಮಸೂದೆ’ ಸಾರ್ವಜನಿಕರ ಬಾಯಿ ಮುಚ್ಚಿಸುವ ಆದೇಶವಾಗಿದೆ ಎಂದು ಸಚಿವ ಪ್ರಹ್ಲಾದ್‌ ಜೋಶಿ ಕಿಡಿಕಾರಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದ ‘ದ್ವೇಷ ಭಾಷಣ ಮಸೂದೆ’ ಸಾರ್ವಜನಿಕರ ಬಾಯಿ ಮುಚ್ಚಿಸುವ ಆದೇಶವಾಗಿದೆ. ರಾಜ್ಯ ಸರ್ಕಾರ ಈ ಮಸೂದೆ ಮೂಲಕ ಸಂವಿಧಾನದ 19ನೇ ವಿಧಿಯ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದೆ. ಈ ಸರ್ಕಾರದ ಇಂತಹ ನೀತಿಗಳಿಂದಾಗಿ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲದಂತಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಬ್ರಿಟಿಷರ ಕಾಲದ ವಸಾಹತು ಶಾಹಿಗಳ ಅಸ್ಪಷ್ಟ ವ್ಯಾಖ್ಯಾನಗಳು, ವ್ಯಾಪಕ ಅಧಿಕಾರದ ದಾಹ ಮತ್ತು ಕಠಿಣ ಕ್ರಿಮಿನಲ್ ಶಿಕ್ಷೆ ಮೂಲಕ ಜನಪರ ಹೋರಾಟವನ್ನು ಹತ್ತಿಕ್ಕಲು ನೋಡಿದೆ. ಈ ಸರ್ಕಾರ ದಬ್ಬಾಳಿಕೆಗಾಗಿ ಇಂತಹ ಕಾನೂನುಗಳನ್ನು ಬಳಸಿಕೊಳ್ಳಲು ನೋಡುತ್ತಿದೆ. ಸಂವಿಧಾನದ ನಿಬಂಧನೆಗಳನ್ನು ಕಿಂಚಿತ್ತೂ ಗೌರವಿಸದೇ ಆಡಳಿತ ನಡೆಸುತ್ತಿದೆ ಎಂದು ಸಚಿವ ಜೋಶಿ ಆಕ್ರೋಶ ಹೊರ ಹಾಕಿದ್ದಾರೆ.

‘ನಿನಗೆ ಮಾನ-ಮಾರ್ಯಾದೆ ಏನೂ ಇಲ್ಲ’: ಕಾವ್ಯಾ ಬೈತಿದ್ರೂ ಕ್ಯಾರೆ ಎನ್ನದ ಗಿಲ್ಲಿ

ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ ಮತ್ತು ಗಿಲ್ಲಿ ನಡುವಿನ ಸಂಬಂಧ ಮತ್ತೆ ಬಿಗಡಾಯಿಸಿದೆ. ಡಿಸೆಂಬರ್ 19ರ ಎಪಿಸೋಡ್‌ನಲ್ಲಿ ನಡೆದ ಘಟನೆಗಳು, ಇವರಿಬ್ಬರ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಿದೆ ಎಂಬುದನ್ನು ತೋರಿಸಿವೆ. ಕಾವ್ಯಾ ನೀಡಿದ ಗಂಭೀರ ಎಚ್ಚರಿಕೆಯನ್ನು ಗಿಲ್ಲಿ ಲಘುವಾಗಿ ತೆಗೆದುಕೊಂಡಿರುವುದು ಮನೆಮಂದಿಯಲ್ಲೂ, ಪ್ರೇಕ್ಷಕರಲ್ಲೂ ಚರ್ಚೆಗೆ ಕಾರಣವಾಗಿದೆ.

ಆರಂಭದಲ್ಲಿ ಜಂಟಿಯಾಗಿ ಆಡಿದ್ದ ಕಾವ್ಯಾ–ಗಿಲ್ಲಿ ಜೋಡಿ, ಪರಸ್ಪರ ಬೆಂಬಲದ ಮೂಲಕ ಗಮನ ಸೆಳೆದಿತ್ತು. ಆದರೆ, ದಿನ ಕಳೆದಂತೆ ಗಿಲ್ಲಿ ಅವರ ವರ್ತನೆ ಕಾವ್ಯಾಗೆ ಅಸಮಾಧಾನ ಮೂಡಿಸಿದೆ. ಹಲವು ಬಾರಿ ತಿದ್ದಿಕೊಳ್ಳುವಂತೆ ಹೇಳಿದರೂ, ಗಿಲ್ಲಿ ತಮ್ಮ ನಿಲುವಿನಲ್ಲಿ ಬದಲಾವಣೆ ತೋರಿಸಿಲ್ಲ ಎಂಬ ಆರೋಪ ಕಾವ್ಯಾರದು.

ಡಿಸೆಂಬರ್ 19ರ ಎಪಿಸೋಡ್‌ನಲ್ಲಿ, ಏರು ಧ್ವನಿಯಲ್ಲಿ ಮಾತನಾಡಿದ ವಿಚಾರದ ಬಗ್ಗೆ ಗಿಲ್ಲಿ ಚಾಕೋಲೇಟ್ ಮೂಲಕ ಇತರ ಸ್ಪರ್ಧಿಗಳಿಗೆ ಸಂದೇಶ ನೀಡಬೇಕಿತ್ತು ಎಂದು ಹೇಳಿದ್ದು, ಇದಕ್ಕೆ ಕಾವ್ಯಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಗಿಲ್ಲಿ ಕೈ ನೀಡಲು ಯತ್ನಿಸಿದ ಸಂದರ್ಭದಲ್ಲಿಯೂ ಕಾವ್ಯಾ ಅದನ್ನು ನಿರಾಕರಿಸಿದ್ದು, ಇಬ್ಬರ ನಡುವಿನ ತಣಿವು ಸ್ಪಷ್ಟವಾಗಿ ಕಾಣಿಸಿಕೊಂಡಿತು.

ಇದೇ ವೇಳೆ, ಗಿಲ್ಲಿ ಮೊಟ್ಟೆ ತೆಗೆದುಕೊಳ್ಳಲು ಮುಂದಾದಾಗ ಕಾವ್ಯಾ ಕೋಪಗೊಂಡು ಮಾನ-ಮರ್ಯಾದೆ ಮತ್ತು ಸ್ವಾಭಿಮಾನ ಕುರಿತು ಕಠಿಣ ಮಾತುಗಳನ್ನು ಆಡಿದ್ದಾರೆ. ಇದಕ್ಕೆ ಗಿಲ್ಲಿ ಶಾಂತವಾಗಿಯೇ ಪ್ರತಿಕ್ರಿಯಿಸಿದ್ದು, “ನನಗೆ ಮಾನ-ಮರ್ಯಾದೆ ಇದೆ” ಎಂದು ಹೇಳಿದ್ದಾರೆ. ಈ ಘಟನೆಯ ಬಳಿಕ ಕಾವ್ಯಾ–ಗಿಲ್ಲಿ ನಡುವಿನ ಸಮೀಕರಣ ಯಾವ ದಿಕ್ಕಿಗೆ ಹೋಗಲಿದೆ ಎಂಬ ಕುತೂಹಲ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

ಪಾತ್ರೆ ತೊಳೆಯುವಾಗ ಈ ತಪ್ಪುಗಳನ್ನು ಮಾಡಲೇಬೇಡಿ! ಯಾಕೆ ಗೊತ್ತಾ..?

0

ಮನೆಯ ಸದಸ್ಯರ ಒಟ್ಟಾರೆ ಆರೋಗ್ಯವು ಬಹುಮಟ್ಟಿಗೆ ಅಡುಗೆ ಮನೆಯ ಮೇಲೆ ಅವಲಂಬಿತವಾಗಿರುತ್ತದೆ. ಅಡುಗೆಗೆ ಬಳಸುವ ಆಹಾರ ಪದಾರ್ಥಗಳು, ಪಾತ್ರೆಗಳು, ನೀರು ಹಾಗೂ ಅಡುಗೆ ಮನೆಯ ಸ್ವಚ್ಛತೆ, ಇವುಗಳು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಆದ್ದರಿಂದ ಅಡುಗೆಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಅಗತ್ಯ. ವಿಶೇಷವಾಗಿ, ಪಾತ್ರೆಗಳನ್ನು ಸರಿಯಾದ ರೀತಿಯಲ್ಲಿ ತೊಳೆಯುವುದು ಬಹಳ ಮುಖ್ಯ.

ಸಾಮಾನ್ಯವಾಗಿ ಎಲ್ಲರೂ ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆಯುತ್ತಾರೆ. ಆದರೆ ಪಾತ್ರೆ ತೊಳೆಯುವ ವೇಳೆ ನಾವು ಅರಿವಿಲ್ಲದೆ ಮಾಡುವ ಕೆಲವು ತಪ್ಪುಗಳು ಆರೋಗ್ಯಕ್ಕೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಆ ತಪ್ಪುಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಹೆಚ್ಚು ಡಿಟರ್ಜೆಂಟ್ ಬಳಸುವುದು

ಪಾತ್ರೆಗಳು ಚೆನ್ನಾಗಿ ಸ್ವಚ್ಛವಾಗಲು ಹೆಚ್ಚು ಡಿಟರ್ಜೆಂಟ್ ಬಳಸಬೇಕು ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದು ತಪ್ಪು. ಹೆಚ್ಚು ಡಿಟರ್ಜೆಂಟ್ ಅಥವಾ ಲಿಕ್ವಿಡ್ ಬಳಸುವುದರಿಂದ ಪಾತ್ರೆಗಳ ಮೇಲೆ ರಾಸಾಯನಿಕ ಪದರ ಉಳಿಯುವ ಸಾಧ್ಯತೆ ಇದೆ. ಇದು ಆಹಾರಕ್ಕೆ ಸೇರಿಕೊಂಡರೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ ಅಗತ್ಯವಿರುವಷ್ಟು ಪ್ರಮಾಣದ ಡಿಟರ್ಜೆಂಟ್ ಮಾತ್ರ ಬಳಸುವುದು ಉತ್ತಮ.

ಬಿಸಿನೀರಿನ ಅತಿಯಾದ ಬಳಕೆ

ಪಾತ್ರೆಗಳನ್ನು ಬೇಗನೆ ಸ್ವಚ್ಛಗೊಳಿಸಲು ಅನೇಕರು ಬಿಸಿನೀರನ್ನು ಬಳಸುತ್ತಾರೆ. ಆದರೆ ಪ್ಲಾಸ್ಟಿಕ್ ಹಾಗೂ ನಾನ್-ಸ್ಟಿಕ್ ಪಾತ್ರೆಗಳನ್ನು ಬಿಸಿನೀರಿನಿಂದ ತೊಳೆಯುವುದು ಅಪಾಯಕಾರಿಯಾಗಿದೆ. ಬಿಸಿನೀರು ಪ್ಲಾಸ್ಟಿಕ್‌ನಿಂದ ಹಾನಿಕಾರಕ ಅಂಶಗಳನ್ನು ಹೊರಹಾಕಬಹುದು. ಜೊತೆಗೆ ನಾನ್-ಸ್ಟಿಕ್ ಪಾತ್ರೆಗಳ ಲೇಪನಕ್ಕೂ ಹಾನಿಯಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಸ್ಪಾಂಜ್ ಮತ್ತು ಸ್ಕ್ರಬ್ಬರ್‌ಗಳನ್ನು ಸ್ವಚ್ಛಗೊಳಿಸದಿರುವುದು

ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್ ಮತ್ತು ಸ್ಕ್ರಬ್ಬರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ಅವುಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇಂತಹ ಸ್ಪಾಂಜ್‌ಗಳಿಂದ ಪಾತ್ರೆ ತೊಳೆಯುವುದರಿಂದ ಪಾತ್ರೆಗಳು ಇನ್ನಷ್ಟು ಕಲುಷಿತಗೊಳ್ಳುತ್ತವೆ. ಆದ್ದರಿಂದ ಸ್ಪಾಂಜ್ ಅನ್ನು ವಾರಕ್ಕೊಮ್ಮೆ ಬದಲಾಯಿಸುವುದು ಮತ್ತು ಸ್ಕ್ರಬ್ಬರ್ ಅನ್ನು ಬಿಸಿ ನೀರಿನಲ್ಲಿ ನೆನೆಸಿ ಸ್ವಚ್ಛಗೊಳಿಸುವುದು ಅಗತ್ಯ.

ನಾನ್-ಸ್ಟಿಕ್ ಪಾತ್ರೆಗಳಿಗೆ ಸ್ಟೀಲ್ ಸ್ಕ್ರಬ್ಬರ್ ಬಳಕೆ

ನಾನ್-ಸ್ಟಿಕ್ ಪಾತ್ರೆಗಳನ್ನು ತೊಳೆಯಲು ಸ್ಟೀಲ್ ಸ್ಕ್ರಬ್ಬರ್ ಬಳಸುವುದು ಮತ್ತೊಂದು ದೊಡ್ಡ ತಪ್ಪು. ಇದರಿಂದ ಪಾತ್ರೆಯ ಮೇಲಿನ ಲೇಪನ ಹಾನಿಯಾಗುತ್ತದೆ ಮತ್ತು ಹಾನಿಕಾರಕ ರಾಸಾಯನಿಕಗಳು ಹೊರಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ನಾನ್-ಸ್ಟಿಕ್ ಪಾತ್ರೆಗಳನ್ನು ಸದಾ ಮೃದುವಾದ ಸ್ಪಾಂಜ್‌ನಿಂದಲೇ ತೊಳೆಯಬೇಕು.

ಪಾತ್ರೆಗಳನ್ನು ಸಿಂಕ್‌ನಲ್ಲಿ ಹೆಚ್ಚು ಹೊತ್ತು ಇಡುವುದು

ಕೊಳಕು ಪಾತ್ರೆಗಳನ್ನು ಸಿಂಕ್‌ನಲ್ಲಿ ಹೆಚ್ಚು ಸಮಯ ಇಡುವುದರಿಂದ ಅವುಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ ಹಾಗೂ ದುರ್ವಾಸನೆ ಬರುತ್ತದೆ. ಊಟ ಮಾಡಿದ ತಕ್ಷಣ ಪಾತ್ರೆಗಳನ್ನು ತೊಳೆಯುವುದರಿಂದ ಅಡುಗೆಮನೆ ಸ್ವಚ್ಛವಾಗಿರುತ್ತದೆ ಮತ್ತು ಆರೋಗ್ಯವೂ ಸುರಕ್ಷಿತವಾಗಿರುತ್ತದೆ.

ಸಿಂಪಲ್‌ ಆಗಿ ಮದುವೆಯಾದ ರಶ್ಮಿಕಾ ವಿಜಯ್: ಫೋಟೋ ನೋಡಿ ಶಾಕ್‌ ಆದ ಫ್ಯಾನ್ಸ್

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮದುವೆ ಫೋಟೋಗಳು, ಈ ಜೋಡಿ ಈಗಾಗಲೇ ವಿವಾಹವಾಗಿದ್ದಾರೆ ಎಂಬ ಗಾಸಿಪ್‌ಗಳಿಗೆ ಕಾರಣವಾಗಿದೆ. ಆದರೆ, ಈ ಚಿತ್ರಗಳ ಹಿಂದೆ ಇರುವ ನಿಜಾಂಶ ಬೇರೆ ಎಂಬುದು ಇದೀಗ ಬೆಳಕಿಗೆ ಬಂದಿದೆ.

ರಶ್ಮಿಕಾ ಮಂದಣ್ಣ ಅವರ ಮೊದಲ ನಿಶ್ಚಿತಾರ್ಥ 2017ರಲ್ಲಿ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಡೆದಿದ್ದು, 2018ರಲ್ಲಿ ಅದು ಮುರಿದುಬಿದ್ದಿತ್ತು. ನಂತರ 2018ರಲ್ಲಿ ಬಿಡುಗಡೆಯಾದ ಗೀತ ಗೋವಿಂದಂ ಚಿತ್ರದ ಸೆಟ್‌ನಲ್ಲಿ ರಶ್ಮಿಕಾ ಮತ್ತು ವಿಜಯ್ ಮೊದಲ ಬಾರಿಗೆ ಭೇಟಿಯಾದರು. ಅಲ್ಲಿಂದ ಆರಂಭವಾದ ಸ್ನೇಹ, ನಿಧಾನವಾಗಿ ಪ್ರೀತಿಗೆ ತಿರುಗಿತು ಎನ್ನಲಾಗುತ್ತದೆ. 2019ರಲ್ಲಿ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿಯೂ ಇಬ್ಬರೂ ಒಟ್ಟಿಗೆ ನಟಿಸಿದ್ದರು.

2023ರಲ್ಲಿ ಮಾಲ್ಡೀವ್ಸ್‌ನಲ್ಲಿ ಇಬ್ಬರೂ ಒಟ್ಟಿಗೆ ರಜೆ ಕಳೆಯುತ್ತಿರುವುದು ಬೆಳಕಿಗೆ ಬಂದ ಬಳಿಕ, ಅವರ ಸಂಬಂಧದ ವದಂತಿಗಳು ಜೋರಾಗಿದ್ದವು. 2024ರಲ್ಲಿ ರಶ್ಮಿಕಾ ತಾವು ಸಿಂಗಲ್ ಅಲ್ಲ ಎಂದು ಒಪ್ಪಿಕೊಂಡರೂ, ತಮ್ಮ ಸಂಗಾತಿಯ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಇತ್ತೀಚೆಗೆ ರಶ್ಮಿಕಾ ತಮ್ಮ ಆಪ್ತ ಗೆಳತಿಯರೊಂದಿಗೆ ಶ್ರೀಲಂಕಾದಲ್ಲಿ ಬ್ಯಾಚುಲರ್ ಪಾರ್ಟಿ ಆಚರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಹಾಗೂ ಮದುವೆ ನಡೆಯಲಿದೆ ಎಂಬ ಊಹಾಪೋಹಗಳು ಮತ್ತೆ ಶುರುವಾಗಿದೆ.

ಆದರೆ, ವೈರಲ್ ಆಗಿರುವ ಮದುವೆ ಫೋಟೋಗಳು AI ಮೂಲಕ ಸೃಷ್ಟಿಸಲಾದ ನಕಲಿ ಚಿತ್ರಗಳಾಗಿದ್ದು, ರಶ್ಮಿಕಾ–ವಿಜಯ್ ಮದುವೆ ಕುರಿತು ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಈ ಘಟನೆ, ಸೆಲೆಬ್ರಿಟಿಗಳ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಡುವ ನಕಲಿ ಸುದ್ದಿಗಳ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡುವಂತಾಗಿದೆ.

ಬೆಂಗಳೂರಿಗರೇ ಎಚ್ಚರ| ಗಾಳಿಯ ಗುಣಮಟ್ಟ ತೀವ್ರ ಕುಸಿತ; ಕಳಪೆ ಏರ್ ಕ್ವಾಲಿಟಿಯಿಂದ ಶುರುವಾಗುತ್ತೆ ಅಸ್ತಮಾ, ಅಲರ್ಜಿ!

0

ಬೆಂಗಳೂರು: ದಿನೇ ದಿನೇ ಹದಗೆಡುತ್ತಿರುವ ಬೆಂಗಳೂರಿನ ಗಾಳಿಯ ಗುಣಮಟ್ಟ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿದೆ.

ಕಳೆದ ಕೆಲವು ದಿನಗಳಿಂದ 170ರಿಂದ 200ರ ನಡುವೆ ಏರಿಳಿತ ಕಾಣುತ್ತಿದ್ದ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಇಂದೂ 196ಕ್ಕೆ ತಲುಪಿದೆ. ನಗರದ ವಾತಾವರಣ ದೆಹಲಿಯ ಸ್ಥಿತಿಯನ್ನು ನೆನಪಿಸುವಂತಿದ್ದು, ಇದೇ ರೀತಿ ಮುಂದುವರಿದರೆ ಜನರ ಆರೋಗ್ಯಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯಾದ್ಯಂತ ಬೀಸುತ್ತಿರುವ ಶೀತ ಅಲೆಯ ಪರಿಣಾಮದಿಂದಾಗಿ ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಅನೇಕರು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಜೊತೆಗೆ ವಾಯು ಮಾಲಿನ್ಯ ಕೂಡ ಸೇರಿಕೊಂಡಿರುವುದರಿಂದ ಅಸ್ತಮಾ, ಅಲರ್ಜಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಿದೆ. ಇಂದಿನ ಅಂಕಿಅಂಶಗಳ ಪ್ರಕಾರ ಬೆಂಗಳೂರಿನಲ್ಲಿ PM2.5 ಪ್ರಮಾಣ 121ಕ್ಕೆ ಏರಿಕೆಯಾದರೆ, PM10 ಪ್ರಮಾಣ 167ರ ಮಟ್ಟದಲ್ಲಿದೆ. 150ಕ್ಕಿಂತ ಹೆಚ್ಚಿನ AQI ಜನರಲ್ಲಿ ಅಸ್ತಮಾ ಸಮಸ್ಯೆ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಅಗತ್ಯವಿದ್ದರೆ ಮಾಸ್ಕ್ ಧರಿಸುವುದು, ಏರ್ ಪ್ಯೂರಿಫೈಯರ್ ಬಳಕೆ ಹಾಗೂ ಅನಾವಶ್ಯಕವಾಗಿ ಹೊರಗೆ ತೆರಳದಂತೆ ತಜ್ಞರು ಸಲಹೆ ನೀಡಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹೋಲಿಕೆಯಲ್ಲಿ ಈ ವರ್ಷವೇ ಬೆಂಗಳೂರಿನ ಗಾಳಿಯ ಗುಣಮಟ್ಟ ಹೆಚ್ಚು ಹದಗೆಟ್ಟಿದ್ದು, 2025ರಲ್ಲಿ ಸುಮಾರು 90ಕ್ಕೂ ಹೆಚ್ಚು ದಿನಗಳು ಏರ್ ಕ್ವಾಲಿಟಿ ‘ಅನಾರೋಗ್ಯಕರ’ ಮಟ್ಟದಲ್ಲೇ ದಾಖಲಾಗಿರುವುದಾಗಿ AQI ವರದಿ ತಿಳಿಸಿದೆ. ಶೀತ ಅಲೆ ಹಾಗೂ ಕಳಪೆ ಗಾಳಿಯ ಸಂಯೋಜನೆ ನಗರ ನಿವಾಸಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿದೆ.

ಶಾರುಖ್–ದೀಪಿಕಾ ರೊಮ್ಯಾಂಟಿಕ್ ಹಾಡು ಲೀಕ್? ‘ಕಿಂಗ್’ ವಿಡಿಯೋ ವೈರಲ್!

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕಿಂಗ್ 2026ರಲ್ಲಿ ಬಿಡುಗಡೆಯಾಗಲಿದೆ. ಎರಡು ವರ್ಷಗಳ ಬಳಿಕ ಶಾರುಖ್ ಅವರನ್ನು ಮತ್ತೆ ಬೆಳ್ಳಿತೆರೆಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಹಿನ್ನೆಲೆಯಲ್ಲಿ, ಈ ಆಕ್ಷನ್ ಥ್ರಿಲ್ಲರ್ ಚಿತ್ರದ ಬಗ್ಗೆ ಭಾರಿ ಕ್ರೇಜ್ ನಿರ್ಮಾಣವಾಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ರೊಮ್ಯಾಂಟಿಕ್ ಹಾಡಿನಂತೆ ಕಾಣುವ ಒಂದು ವಿಡಿಯೋ ವೈರಲ್ ಆಗಿದ್ದು, ಇದು ‘ಕಿಂಗ್’ ಚಿತ್ರದ ಲೀಕ್ ಆದ ಹಾಡು ಎನ್ನುವ ಊಹಾಪೋಹಗಳು ಹರಡಿದ್ದವು. ವಿಡಿಯೋದಲ್ಲಿ ಶಾರುಖ್ ಖಾನ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡರೆ, ದೀಪಿಕಾ ಪಡುಕೋಣೆ ಹಸಿರು ಸೀರೆ ಹಾಗೂ ಕೆಂಪು ಡ್ರೆಸ್‌ನಲ್ಲಿ ಗಮನ ಸೆಳೆದಿದ್ದರು. ವಿಡಿಯೋ ಕೊನೆಯಲ್ಲಿ ಇಬ್ಬರ ಮಧ್ಯೆ ಕಿಸ್ ದೃಶ್ಯವೂ ಇದ್ದುದರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು.

ಆದರೆ ಈ ವಿಡಿಯೋ ಅಧಿಕೃತವಾಗಿ ಲೀಕ್ ಆದ ಹಾಡಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ. ವರದಿಗಳ ಪ್ರಕಾರ, ಇದು AI ತಂತ್ರಜ್ಞಾನ ಬಳಸಿ ತಯಾರಿಸಲಾದ ಫ್ಯಾನ್-ಮೇಡ್ ಎಡಿಟ್ ಆಗಿದ್ದು, ಅದರ ರೊಮ್ಯಾಂಟಿಕ್ ದೃಶ್ಯಗಳ ಕಾರಣದಿಂದ ವೈರಲ್ ಆಗಿದೆ. ಈ ವಿಷಯ ಹೊರಬಿದ್ದ ಬಳಿಕ ನೆಟ್ಟಿಗರು ವಿಡಿಯೋವನ್ನು AI ಎಡಿಟ್ ಎಂದು ಗುರುತಿಸಿ ಪ್ರತಿಕ್ರಿಯಿಸುತ್ತಿದ್ದಾರೆ.

‘ವಾರಣಾಸಿ’ ಸೆಟ್ ನೋಡಲು ಭಾರತಕ್ಕೆ ಬರಲು ಜೇಮ್ಸ್ ಕ್ಯಾಮರೂನ್ ಆಸೆ: ರಾಜಮೌಳಿ ಅಧಿಕೃತ ಆಹ್ವಾನ

ಚಿತ್ರರಂಗದ ಇಬ್ಬರು ದಿಗ್ಗಜರಾದ ಜೇಮ್ಸ್ ಕ್ಯಾಮರೂನ್ ಮತ್ತು ಎಸ್.ಎಸ್. ರಾಜಮೌಳಿ ಇತ್ತೀಚೆಗೆ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕ್ಯಾಮರೂನ್, ರಾಜಮೌಳಿ ಅವರ ನಿರ್ದೇಶನದ ‘ವಾರಣಾಸಿ’ ಚಿತ್ರದ ಸೆಟ್‌ಗೆ ಭೇಟಿ ನೀಡುವ ಇಚ್ಛೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.

ತಮ್ಮ ಮುಂದಿನ ಸಿನಿಮಾ ಅವತಾರ್: ಫೈರ್ ಅಂಡ್ ಆಶ್ ಬಿಡುಗಡೆಗೂ ಮುನ್ನ ಮಾತನಾಡಿದ ಕ್ಯಾಮರೂನ್, “ಚಿತ್ರ ನಿರ್ಮಾಪಕರು ಪರಸ್ಪರ ಸಂವಾದ ನಡೆಸಬೇಕು. ಇದರಿಂದ ಕೆಲಸ ಮಾಡುವ ವಿಧಾನ ಮತ್ತು ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ನಾನು ನಿಮ್ಮ ಸೆಟ್‌ಗೆ ಬಂದು ನೀವು ಕೆಲಸ ಮಾಡುವುದನ್ನು ನೋಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಜಮೌಳಿ, “ಇದು ನಮಗೆ ಅಪಾರ ಸಂತೋಷದ ವಿಷಯ. ನೀವು ಯಾವಾಗ ಬೇಕಾದರೂ ಭಾರತಕ್ಕೆ ಬಂದು ಸೆಟ್‌ಗೆ ಭೇಟಿ ನೀಡಬಹುದು. ನಿಮ್ಮ ಆಗಮನದಿಂದ ಇಡೀ ಭಾರತೀಯ ಚಿತ್ರರಂಗ ಸಂತೋಷಪಡಲಿದೆ” ಎಂದು ಆಹ್ವಾನ ನೀಡಿದ್ದಾರೆ.

ರಾಜಮೌಳಿ ಮಾಹಿತಿ ನೀಡುವಂತೆ, ‘ವಾರಣಾಸಿ’ ಚಿತ್ರದ ಶೂಟಿಂಗ್ ಸುಮಾರು ಒಂದು ವರ್ಷದಿಂದ ನಡೆಯುತ್ತಿದ್ದು, ಇನ್ನೂ 7–8 ತಿಂಗಳು ಚಿತ್ರೀಕರಣ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಕ್ಯಾಮರೂನ್, “ಯಾವುದೇ ವಿಶೇಷ ಅಥವಾ ಭರ್ಜರಿ ದೃಶ್ಯ ಚಿತ್ರೀಕರಿಸುವಾಗ ನನಗೆ ತಿಳಿಸಿ” ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಬೆಳವಣಿಗೆ ‘ವಾರಣಾಸಿ’ ಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಕುತೂಹಲವನ್ನು ಸ್ಪಷ್ಟಪಡಿಸುತ್ತದೆ.

ಶಿವಮೊಗ್ಗ| ಜೈಲು ಸಿಬ್ಬಂದಿಯಿಂದಲೇ ದಿಢೀರ್‌ ದಾಳಿ; ಮೊಬೈಲ್, ಸಿಮ್, ಇಯರ್ ಫೋನ್ ಪತ್ತೆ!

0

ಶಿವಮೊಗ್ಗ: ಇಲ್ಲಿನ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಜೈಲು ಸಿಬ್ಬಂದಿಯೇ ನಡೆಸಿದ ಅನಿರೀಕ್ಷಿತ ಕಾರ್ಯಾಚರಣೆಯಲ್ಲಿ ಅನೇಕ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ಜೈಲಿನೊಳಗೆ ಗಾಂಜಾ ಸೇರಿದಂತೆ ಅಕ್ರಮ ವಸ್ತುಗಳು ಹರಿದಾಡುತ್ತಿರುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಕಾರಾಗೃಹ ಅಧಿಕಾರಿಗಳು ಇತ್ತೀಚೆಗೆ ರಾತ್ರಿ ಸುಮಾರು 8 ಗಂಟೆಗೆ ತಪಾಸಣೆ ನಡೆಸಿದರು. ಈ ವೇಳೆ ಜೈಲಿನೊಳಗಿನಿಂದ 3 ಮೊಬೈಲ್ ಫೋನ್‌ಗಳು, 4 ಸಿಮ್ ಕಾರ್ಡ್‌ಗಳು, 3 ಡೇಟಾ ಕೇಬಲ್‌ಗಳು, 2 ಇಯರ್‌ಫೋನ್‌ಗಳು ಹಾಗೂ 1 ಚಾರ್ಜರ್ ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೈಲಿನೊಳಗಿನ ಅಕ್ರಮಗಳನ್ನು ಬಯಲಿಗೆಳೆದ ಜೈಲು ಅಧಿಕಾರಿಗಳ ಕಾರ್ಯವನ್ನು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಅಲೋಕ್ ಕುಮಾರ್ ಶ್ಲಾಘಿಸಿದ್ದು, ಕರ್ತವ್ಯ ನಿಷ್ಠೆ ತೋರಿದ ತಂಡಕ್ಕೆ ಪ್ರೋತ್ಸಾಹವಾಗಿ 10,000 ರೂ. ನಗದು ಬಹುಮಾನ ಘೋಷಿಸಿದ್ದಾರೆ.

ಶಿವಮೊಗ್ಗದ ಮುಖ್ಯ ಜೈಲು ಅಧೀಕ್ಷಕ ರಂಗನಾಥ್ ಅವರ ನೇತೃತ್ವದಲ್ಲಿ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿ ಕಾವೇರಿ ವಿಭಾಗದಲ್ಲಿ ಈ ಅನಿರೀಕ್ಷಿತ ತಪಾಸಣೆಯಲ್ಲಿ ಭಾಗವಹಿಸಿದ್ದರು.

ಬೊಲೆರೋ-ಬಲ್ಕರ್ ನಡುವೆ ಭೀಕರ ಅಪಘಾತ: ಇಬ್ಬರು ಸಾವು

0

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೇತೇನಹಳ್ಳಿ ಬಳಿ ಬೊಲೆರೋ ಹಾಗೂ ಬಲ್ಕರ್ ವಾಹನಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ.

25 ವರ್ಷದ ಅಶೋಕ್, ನಾಗರಾಜಪ್ಪ ಮೃತರು. ಬೊಲೆರೋ ಹಾಗೂ ಬಲ್ಕರ್ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಗೌರಿಬಿದನೂರು ಹಿಂದೂಪುರ ಕಡೆಯಿಂದ ಬೆಂಗಳೂರಿಗೆ ಬರುತಿದ್ದ ಬಲ್ಕರ್ ಲಾರಿ ಬೆಂಗಳೂರಿನಿಂದ ಗೌರಿಬಿದನೂರು ಕಡೆಗೆ ಬರುತಿದ್ದ ಬುಲೆರೊ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಉಸಿರು ಚಲ್ಲಿದ್ದಾರೆ.

ಮಂಚೆನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!