Home Blog Page 3020

ಎಸ್.ಟಿ. ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲು ನೀಡಲು ಮೀನಾಮೇಶ ಎಣಿಸುತ್ತಿರುವ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಶೀಘ್ರ ಮೀಸಲು ಘೋಷಣೆಗೆ ಒತ್ತಾಯಿಸಿ ರಾಜ್ಯದಾದ್ಯಂತ ನಡೆಯುತ್ತಿರುವ ಧರಣಿ ಸರಕಾರದ ಭರವಸೆ ಮೇರೆಗೆ ಮೂರನೇ ದಿನಕ್ಕೆ ಮೊಟಕುಗೊಳಿಸಲಾಗಿದೆ.
ನಗರದ ಜಿಲ್ಲಾಡಳಿತ ಭವನದ ಎದುರು ಹಾಗೂ ವಿವಿಧ ತಾಲೂಕ ಕೇಂದ್ರಗಳಲ್ಲಿ ಕೊಪ್ಪಳ ಜಿಲ್ಲಾ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹತ್ತು ದಿನಗಳ ಪ್ರತಿಭಟನಾ ಧರಣಿಯ ಮೂರನೆ ದಿನ ಜಿಲ್ಲಾ ಮುಖಂಡರ ಜೊತೆ ತಿಗರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.
ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 7.5 ಮೀಸಲು ಕೊಡುವುದು ಸಂವಿಧಾನ ಬದ್ಧವಾಗಿದೆ. ಆದರೆ ಮಾತು ತಪ್ಪಿದ ಯಡಿಯೂರಪ್ಪ ಸರಕಾರಕ್ಕೆ ಆಸಕ್ತಿ ಇಲ್ಲದ ಕಾರಣ ಹೋರಾಟ ತೀವ್ರವಾಗಿತ್ತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಕುಳಿತಿದ್ದ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಯವರ ಜೊತೆಗೆ ಸರಕಾರದ ವಿವಿಧ ಸಚಿವರು ಸಿಎಂ ಅವರ ಪರವಾಗಿ ಮಾತನಾಡಿದ ಕಾರಣ, ಧರಣಿ ಕೈಬಿಡಲಾಗಿದೆ. ಸರಕಾರ 40 ದಿನಗಳ ಕೊನೆಯ ಅವಕಾಶವನ್ನು ತೆಗೆದುಕೊಂಡಿದ್ದು ಅದನ್ನು ತಪ್ಪಿದಲ್ಲಿ ಮುಂದಿನ ಉಗ್ರ ಹೋರಾಟದ ರೂಪ ಕೊಡಲಾಗುವುದು ಎಂದು ಮಠದ ಹೇಳಿಕೆಯನ್ನು ಆಧರಿಸಿ ಹೋರಾಟ ಕೈಬಿಡಲಾಗಿದೆ.
ಹೋರಾಟದಲ್ಲಿ ರಾಜ್ಯ ಕಾರ್ಯದರ್ಶಿ ಸುರೇಶ ಡೊಣ್ಣಿ, ಕೊಪ್ಪಳ ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ, ತಾಲೂಕ ಅಧ್ಯಕ್ಷ ಶರಣಪ್ಪ ನಾಯಕ್, ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ್, ಮಾರ್ಕಂಡಪ್ಪ ಕಲ್ಲನವರ, ಗೋವಿಂದಪ್ಪ ಬಂಡಿ, ಪಟ್ಟಣ ಪಂಚಾಯತಿ ಸದಸ್ಯ ರುಕ್ಮಣ್ಣ ಶಾವಿ, ಹನುಮಂತಪ್ಪ ಗುದಗಿ, ಮುದಿಯಪ್ಪ ಅಡವಳ್ಳಿ ತಿಗರಿ, ವೀರಪ್ಪ ವಾಸ್ತೆನೂರ ಕವಲೂರ, ಬಸವರಾಜ ಶಹಪೂರ, ವಿರುಪಾಕ್ಷಗೌಡ್ರು ಗಂಗನಾಳ, ಬೀಮನಗೌಡ ಪೋ.ಪಾ., ವಿ. ಬಿ. ಬದೂರ, ವೆಂಕಟೇಶ ಹಲವಾಗಲಿ, ಪ್ರಶಾಂತ ಕರಡಿ, ಉಮೇಶಗೌಡ ಪಾಟೀಲ್, ಭರಮಜ್ಜ ಬ್ಯಾನಿ ಹನುಕುಂಟಿ, ಮಲ್ಲಿಕಾರ್ಜುನ ಕಲ್ಲನವರ, ಹನುಮಂತಪ್ಪ, ಯಲ್ಲಪ್ಪ ಕರಡಿ ಇತರರು ಇದ್ದರು.

ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಂಗಾವತಿ
ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್‌ಶಾಲೆಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಅಧ್ಯಕ್ಷ ಸೂರಿಬಾಬು ನೆಕ್ಕಂಟಿಯವರು ಕಿತ್ತೂರು ರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಕನ್ನಡ ಭಾಷಾ ಶಿಕ್ಷಕರಾದ ಮಂಜುನಾಥ, ಕಿತ್ತೂರು ರಾಣಿ ಚೆನ್ನಮ್ಮನವರ ಬಾಲ್ಯದ ಜೀವನ, ಬ್ರಿಟೀಷರ ವಿರುದ್ಧ ಹೋರಾಡಿದ ಸಂದರ್ಭ, ಹಾಗೂ ತಮ್ಮ ಆಡಳಿತದ ಅವಧಿಯಲ್ಲಿ ಅವರು ಎದುರಿಸಿದ ಸವಾಲುಗಳನ್ನು ಕುರಿತು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಮಾತನಾಡಿ, ಕಿತ್ತೂರು ಚೆನ್ನಮ್ಮನವರು ಒಬ್ಬ ಮಹಿಳೆಯಾದರೂ ನಾಡಿನ ರಕ್ಷಣೆಗಾಗಿ ಹಾಗೂ ಕಿತ್ತೂರಿನ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಇಡೀ ಜಗತ್ತಿಗೆ ಸ್ತ್ರೀಶಕ್ತಿ ತೋರಿದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ. ಅವರ ಧೈರ್ಯ, ಸಾಹಸ ಹಾಗೂ ಸಾಧನೆ ಮತ್ತು ನಾಡು ನುಡಿಯ ರಕ್ಷಣೆಗಾಗಿ ಅವರು ಅನುಸರಿಸಿದ ಆದರ್ಶ ಗುಣಗಳನ್ನು ನಾವೆಲ್ಲರೂ ಅನುಸರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಕೃಷ್ಣವೇಣಿ, ಶಾಲೆಯ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ ಹಾಗೂ ಪಾಲಕರು ಭಾಗವಹಿಸಿದ್ದರು.

ಪಕ್ಷದ ಸೂಚನೆಯಂತೆ ಗುರಿಕಾರ ಗೆಲುವಿಗೆ ಶ್ರಮ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗಜೇಂದ್ರಗಡ
ಪಶ್ಚಿಮ ಪದವೀಧರರ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ಹೀಗಾಗಿ ಗುರಿಕಾರ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದು ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಎಂ.ವೈ.ಮುಧೋಳ ಹೇಳಿದರು.
ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ 6 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಸಾವಿರಾರು ಉದ್ಯೋಗ ಸೃಷ್ಠಿಸುತ್ತಿದ್ದ ಸಣ್ಣ ಕೈಗಾರಿಕೆಗಳು ಬಾಗಿಲು ಹಾಕಿ ರೈತರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ದೇಶ ಕಟ್ಟುವ ಯುವಸಮೂಹ ಅದರಲ್ಲೂ ಪದವೀಧರರಿಗೆ ಉದ್ಯೋಗ ಸೃಷ್ಠಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ. ಪರಿಣಾಮ ನಿರುದ್ಯೋಗ ಪ್ರಮಾಣ ಹೆಚ್ಚಾಗಿ ಪದವೀಧರರು ಉದ್ಯೋಗವಿಲ್ಲದೆ ಪರದಾಡುತ್ತಿದ್ದರೆ, ಇತ್ತ ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ಹಾಗೂ ಜಿಡಿಪಿ ಕುಸಿತದಿಂದಾಗಿ ಉದ್ಯೋಗ ಕಳೆದುಕೊಂಡು ಜನತೆ ಪರದಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಜೆಡಿಎಸ್ ಪಕ್ಷದ ವರಿಷ್ಠರು ಹಾಗೂ ಅಭ್ಯರ್ಥಿ ಶಿವಶಂಕರ ಕಲ್ಲೂರ ತಟಸ್ಥವಾಗಿ ಉಳಿಯುವ ಮೂಲಕ ಬೆಂಬಲ ನೀಡಿದ್ದಾರೆ. ಅಲ್ಲದೆ ಈ ಹಿಂದಿನ ಚುನಾವಣೆಯಲ್ಲಿ ನಮ್ಮ ಜಿಲ್ಲೆಯವರು ಎಂದು ಎಸ್.ವಿ. ಸಂಕನೂರು ಅವರಿಗೆ ಜಿಲ್ಲೆಯ ಪದವೀಧರರು ಬೆಂಬಲಿಸಿ ಗೆಲ್ಲಿಸಿದ್ದರು. ಆದರೆ ಸಂಕನೂರ ಅವರು ಪದವೀಧರರ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವಲ್ಲಿ ಸದನದ ಒಳಗೆ ಹಾಗೂ ಹೊರಗೆ ವಿಫಲವಾಗಿದ್ದಾರೆ.
ಪರಿಣಾಮ ಈ ಬಾರಿ ಪಶ್ಚಿಮ ಪದವೀಧರರ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಈಗಾಗಲೇ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಜನರ ನಂಬಿಕೆ ಹಾಗೂ ವಿಶ್ವಾಸಕ್ಕೆ ಘಾಸಿ ಮಾಡುತ್ತಿರುವ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲು ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಗೆಲ್ಲಿಸಲು ತಾಲೂಕಿನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಶ್ರಮಿಸಬೇಕೆಂದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತನಿಖೆ ಹೆಸರಲ್ಲಿ ಅಮಾಯಕರನ್ನು ಥಳಿಸಿದ ಪಿಎಸ್ಐ

0

ಕಾರಟಗಿ ಮರ್ಡರ್ ಕೇಸ್‌ನಲ್ಲಿ ಅಮಾನವೀಯ ವರ್ತನೆ; ಪಿಎಸ್ಐ ವಿರುದ್ದ ಮಾನವ ಹಕ್ಕು ಆಯೋಗಕ್ಕೆ ದೂರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕಾರಟಗಿ ಪಿಎಸ್ಐ ಅವಿನಾಶ ಕಾಂಬ್ಲೆ ಕಾರಟಗಿ ಮರ್ಡರ್ ಕೇಸ್ ಆರೋಪಿಗಳ ಪತ್ತೆ ಮಾಡುವ ಭರದಲ್ಲಿ ಅಮಾಯಕರನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐಯಿಂದ ಥಳಿಸಿಕೊಂಡಿರೋ ಧಾರವಾಡ ಜಿಲ್ಲೆ ಮದಾರಮಡ್ಡಿ ಮೂಲದ ಇಬ್ಬರು ಗ್ಲಾಸ್ ಸ್ಟೀಮ್ ಜೋಡಿಸುವ ಕಾರ್ಮಿಕರು ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.

ಅ.17 ರಂದು ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ, ಮಹಿಳೆ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿಗಳ ಪತ್ತೆಗೆ ಹೊರಟ ಕಾರಟಗಿ ಪಿಎಸ್ಐ ಅವರೇ ದಾರಿ ತಪ್ಪಿದ್ದಾರೆ. ಗಂಗಾವತಿ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದ್ದ ಇಬ್ಬರು ಕಾರ್ಮಿಕರನ್ನು ಕೊಲೆ ಆರೋಪಿಗಳು ಎಂದು ಶಂಕಿಸಿದ್ದಾರೆ. ಮಧ್ಯರಾತ್ರಿ 1.30ರ ಸುಮಾರಿಗೆ ಕಾರಟಗಿ ಪೊಲೀಸ್ ಠಾಣೆಗೆ ಕರೆ ತಂದು ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಹಿಗ್ಗಾ- ಮುಗ್ಗ ಥಳಿಸಿದ್ದಾರೆ ಎಂದು ದೂರಲಾಗಿದೆ.

ಅಷ್ಟೊತ್ತಿಗೆ ಕನಕಗಿರಿ ಪಿಎಸ್ಐ ಪ್ರಶಾಂತ ನೇತೃತ್ವದ ಮತ್ತೊಂದು ತಂಡ, ನಿಜವಾದ ಆರೋಪಿಗಳ‌ನ್ನು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪತ್ತೆ ಮಾಡಿದೆ. ವಾಸ್ತವ ತಿಳಿದು, ಅಮಾಯಕರ ಕ್ಷಮೆ ಕೇಳಬೇಕಿದ್ದ ಪಿಎಸ್ಐ ಅವಿನಾಶ ಕಾಂಬ್ಲೆ ಓವರ್ ಸ್ಮಾರ್ಟ್ ಪೊಲೀಸಿಂಗ್ ಮಾಡಿದ್ದಾರೆ. ಅಮಾಯಕರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 96(ಸಿ) ಅಡಿ ಪ್ರಕರಣ ದಾಖಲಿಸಿಕೊಂಡು, ನೋಟಿಸ್ ನೀಡಿದ್ದಾರೆ. ಅಕ್ಟೋಬರ್ 23ರಂದು ಗಂಗಾವತಿ ಕೋರ್ಟ್‌ಗೆ ಹಾಜರಾಗಿ ದಂಡ ಪಾವತಿಸುವಂತೆ ಸೂಚಿಸಿದ್ದಾರಂತೆ.

ಸಿಡಿಆರ್ ಯಡವಟ್ಟು?: ಅ.17ರ ಸಂಜೆ 7.30ರ ಸುಮಾರಿಗೆ ಕಾರಟಗಿ ಪಟ್ಟಣ ಕ್ರೌರ್ಯದ ಘಟನೆಯೊಂದಕ್ಕೆ ಸಾಕ್ಷಿ ಆಗಿತ್ತು. ಕಾರಟಗಿಯ ಬಸವೇಶ್ವರ ನಗರದಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ಮೂಲದ ನವ ದಂಪತಿ ಮೇಲೆ ಅಪರಿಚಿತರು ರಾಡ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು. ಘಟನೆಯಲ್ಲಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತಿ ಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು, ಎರಡು ತಂಡ ರಚಿಸಿ ತನಿಖೆಗೆ ಸೂಚಿಸಿದ್ದಾರೆ.

ಕನಕಗಿರಿ ಪೊಲೀಸ್ ಪಿಎಸ್ಐ ಪ್ರಶಾಂತ ಅವರ ತಂಡ ಮುಧೋಳ ಕಡೆ ಮುಖ ಮಾಡಿದೆ. ಕಾರಟಗಿ ಪಿಎಸ್ಐ ಅವಿನಾಶ ಅವರ ತಂಡ, ಗಂಗಾವತಿ ಕಡೆ ಮುಖ ಮಾಡಿದೆ. ತನಿಖೆಗೆ ತಾಂತ್ರಿಕ ಸಹಾಯ ಪಡೆದುಕೊಂಡ ಕಾರಟಗಿ ಪಿಎಸ್ಐ ಯಡವಟ್ಟು ಮಾಡಿಕೊಂಡಿದ್ದಾರೆ. ಬೇರೆ ಜಿಲ್ಲೆಯಿಂದ ಕಾರಟಗಿ ಸುತ್ತಮುತ್ತ ಓಡಾಡಿರುವ ಮತ್ತು ಕೆಲ ದಿನ ಕಾರಟಗಿ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿರುವ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಮಾಡುವ ನೆಪದಲ್ಲಿ ಧಾರವಾಡ ಮೂಲದ ಅಮಾಯಕ ಕಾರ್ಮಿಕರ ಮೇಲೆ ಕೈ ಮಾಡಿದ್ದಾರೆ.

ಧಾರವಾಡ ಜಿಲ್ಲೆ ಮದಾರಮಡ್ಡಿ ಗ್ರಾಮದ ಸುಹೇಬ ಕರಡಿಗುಡ್ಡ ಮತ್ತು ಮೋಹಮ್ಮದ ಜಮೀಲ ಎಂಬ ಇಬ್ಬರು ಕಾರ್ಮಿಕರು ದಿನಾಂಕ: 14-10-2020 ರಂದು ಕಾರಟಗಿ ಪಟ್ಟಣಕ್ಕೆ ಆಗಮಿಸಿ, ಲಕ್ಷ್ಮೀ ವೆಂಕಟೇಶ್ವರ ಟೂರಿಸ್ಟ್ ಹೋಮ್‌ನಲ್ಲಿ ತಂಗಿದ್ದಾರೆ. ಕೊಲೆ ನಡೆದ ಅ.17ರ ಸಂಜೆ 6ಕ್ಕೆ ಲಾಡ್ಜ್ ಖಾಲಿ ಮಾಡಿ, ಕಾರಟಗಿ ಸಮೀಪದ ಸಮೀಪದ ಸಾಲುಂಚಿಮರ ಗ್ರಾಮಕ್ಕೆ ಆಗಮಿಸಿ ಹೊಸ ಮನೆಯ ಬಾತ್ ರೂಮ್‌ನಲ್ಲಿ ಗ್ಲಾಸ್ ಸ್ಟೀಮ್ ಅಳವಡಿಸಿ ಗಂಗಾವತಿಗೆ ಹೋಗಿದ್ದಾರೆ.

ಗಂಗಾವತಿಯಲ್ಲಿಯೂ ಒಬ್ಬರ ಮನೆಯಲ್ಲಿ ಕೆಲಸ ಇದ್ದರಿಂದ ಗಂಗಾವತಿಯ ಲಾಡ್ಜ್‌ವೊಂದರಲ್ಲಿ ತಂಗಿದ್ದಾರೆ. ವಾಸ್ತವದಲ್ಲಿ ದಂಪತಿ ಕೊಲೆ ಮಾಡಿದ ಆರೋಪಿಗಳ ‘ಮೋಡ್ ಆಫ್ ಆಪರೇಷನ್ ‘ ಪೊಲೀಸರು ಗೆಸ್ ಮಾಡಿದಂತೆಯೇ ಈ ಇಬ್ಬರು ಕಾರ್ಮಿಕರ ಪ್ರವಾಸ ಚಟುವಟಿಕೆ ಇದೆ. ಮಧ್ಯರಾತ್ರಿ 1ಕ್ಕೆ ಗಂಗಾವತಿ ಲಾಡ್ಜ್‌ಗೆ ನುಗ್ಗಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ರಾತ್ರಿ ಪೂರ್ತಿ ಟ್ರೀಟ್‌ಮೆಂಟ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐ ಮಾಡಿದ ಯಡವಟ್ಟಿನ ಬಗ್ಗೆ ನೊಂದವರು ಕೊಪ್ಪಳ ಎಸ್ಪಿ ಅವರಿಗೂ ದೂರು ನೀಡಿದ್ದಾರೆ.

ಉಚಿತ ಲಸಿಕೆ‌ ಕೊಡಲು ಸರಕಾರಕ್ಕೆ ತಾಕತ್ ಇಲ್ವಾ? ಎಚ್.ಕೆ. ಪಾಟೀಲ

0

ಕೇಂದ್ರ, ರಾಜ್ಯ ಸರಕಾರ ವಿವೇಚನೆಯಿಂದ ಕೆಲಸ ಮಾಡಲಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಗೆದ್ದರೆ ಕೋವಿಡ್-19ಗೆ ಉಚಿತ ಲಸಿಕೆ ನೀಡುವುದಾಗಿ ಹೇಳಿರುವ ಬಿಜೆಪಿ‌ ಮುಖಂಡರಿಗೆ ಇಡೀ ದೇಶದ ಜನರಿಗೆ ಉಚಿತ ಲಸಿಕೆ ಕೊಡಲು ತಾಕತ್ ಇಲ್ವಾ? ಎಂದು ಶಾಸಕ ಎಚ್.ಕೆ.ಪಾಟೀಲ ಪ್ರಶ್ನಿಸಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರಿಗೂ ಕೋವಿಡ್-19ಗೆ ಉಚಿತ ಲಸಿಕೆ ಕೊಡಬೇಕಾದದ್ದು ಆಡಳಿತದಲ್ಲಿರುವ ಸರಕಾರದ ಪ್ರಮುಖ ಜವಾಬ್ದಾರಿ ಎಂದರು.

ಮತ್ತೇ ಮುಖ್ಯಮಂತ್ರಿಯಾದರೆ ಉಚಿತ ಅಕ್ಕಿ ನೀಡುತ್ತೇನೆ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ‌ ನೀಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಂದ್ರೆ ನಾನು ಅಂತಾ ತಿಳಿದುಕೊಂಡಿರಬಹುದು ಎಂದು ಉತ್ತರಿಸಿದರು.

ನವೆಂಬರ್‌ನಲ್ಲಿ ಶಾಲೆ, ಕಾಲೇಜು ಆರಂಭಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಈ ನಿರ್ಧಾರವನ್ನು ಮರು ಪರಿಶೀಲನೆ ಮಾಡುವುದಕ್ಕಿಂತ ವಿರೋಧ ಪಕ್ಷಗಳನ್ನು, ಆರೋಗ್ಯ ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡು ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.

ತರಾತುರಿಯಲ್ಲೇ ಶಾಲೆ- ಕಾಲೇಜು ಆರಂಭ ಮಾಡುವುದು ಸಮಂಜಸವಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವೇಚನೆಯಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಚುನಾವಣೆ‌ ನಂತರ‌ ಕಾಂಗ್ರೆಸ್‌ನಲ್ಲಿ‌ ಸಿಎಂ ಯಾರು ಅಂತಾ ನಿರ್ಣಯ ಆಗುತ್ತೆ. ಈಗಲೇ ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ವಿಚಾರಕ್ಕೆ ಸೂಕ್ತ ಕಾಲ ಇದಲ್ಲ. ಇಂಥ ವಿಷಯ ಹರಟೆಯ ಮಾತಾಗಬಾರದು. ಅದೆಲ್ಲ ಬಿಜೆಪಿಯವರ ಆಂತರಿಕ‌ ಕಚ್ಚಾಟ. ಅದರ ಬಗ್ಗೆ ಹೆಚ್ಚೇನೂ ಹೇಳಲಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಕೆ.ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್, ಮುತ್ತುರಾಜ‌ ಕುಷ್ಟಗಿ, ರವಿ ಕುರಗೋಡ ಮತ್ತಿತರರು ಇದ್ದರು.

ಚನ್ನಮ್ಮ ವಿಜಯೋತ್ಸವ ಆಚರಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ
ವೀರರಾಣಿ ಕಿತ್ತೂರು ಚೆನ್ನಮ್ಮ 197ನೇ ವಿಜಯೋತ್ಸವ ಹಾಗೂ 242ನೇ ಜಯಂತ್ಯುತ್ಸವ ಆಚರಣೆ ಮಾಡದ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶುಕ್ರವಾರ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ವೀರಶೈವ ಪಂಚಮಸಾಲಿ ಸಮಾಜ ಹಾಗೂ ಕರವೇ ವತಿಯಿಂದ ಮನವಿ ಸಲ್ಲಿಸಲಾಯಿತು.
ತಾಲೂಕು ವೀರಶೈವ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಬಾಡಿ, ಮುಖಂಡ ರವಿ ಹಳ್ಳಿ, ಕರವೇ ಅಧ್ಯಕ್ಷ ಬಸವರಾಜ ವಡವಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಮದ ಬೆಳ್ಳಿಚುಕ್ಕಿ, ಬ್ರಿಟಿಷರ ವಿರುದ್ಧ ದಂಗೆ ಎದ್ದ ದೇಶದ ಮೊದಲ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನ ಜಯಂತ್ಯುತ್ಸವ ಹಾಗೂ ವಿಜಯೋತ್ಸವವನ್ನು ಸರಳವಾಗಿ ಆಚರಿಸಲು ಸರಕಾರದ ಸೂಚನೆ ಇದ್ದರೂ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ.
ಕ್ಷೇತ್ರ ಸಮನ್ವಯ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ, ಪಿಆರ್‌ಇಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳು ಚನ್ನಮ್ಮ ಜಯಂತಿ ಆಚರಿಸಿಲ್ಲ. ಈ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮೂಲಕ ಆಗ್ರಹಿಸಿದ್ದಾರೆ.
ಶರಣಪ್ಪ ಹೊಸೂರ, ಮಂಜುನಾಥ ಬಳಿಗಾರ, ಶಿವಶಂಕರ ಕಲ್ಲಪ್ಪನವರ, ನಿಂಗರಾಜ ತುಳಿ, ಈಶ್ವರ ಕಲ್ಯಾಣಿ, ಮಲ್ಲೇಶ ವರವಿ, ಫಕ್ಕೀರಪ್ಪ ತುಳಿ, ಜಗದೀಶ ಬಳಿಗಾರ, ರಮೇಶ ಕಬಾಡರ, ಬಸವರಾಜ ಮೇಟಿ, ಬಸವರಾಜ ಬಳಿಗಾರ, ದೇವಪ್ಪ ಬಳಿಗಾರ, ಉಮೇಶ ಬಕ್ಕಸದ, ಬಸವರಾಜ ತುಳಿ, ಬಸವರಾಜ ಕಲ್ಯಾಣಿ ಉಪಸ್ಥಿತರಿದ್ದರು.
 

ಕಳೆದ ವರ್ಷ ಬಿದ್ದ ಮನೆಗೆ ಇನ್ನೂ ಇಲ್ಲ ಪರಿಹಾರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಒಂದು ಕಡೆ ಕಣ್ಣೀರು ಹಾಕುತ್ತಾ, ತನ್ನ ನೋವನ್ನು ತೋಡಿಕೊಳ್ಳುತ್ತಿರುವ ವ್ಯಕ್ತಿ. ಆತನ ಕಣ್ಣ ಮುಂದೆ ಮನೆಯೊಳಗೆ ನೀರು ತುಂಬಿ, ಕಸ ಬೆಳೆದಿರುವ ದೃಶ್ಯ.
ರಾಜ್ಯದಲ್ಲಿ ವರುಣನ ಆರ್ಭಟ ಮೇರೆ ಮೀರಿದ ಹಿನ್ನೆಲೆಯಲ್ಲಿ ಅಸಂಖ್ಯ ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಆಸ್ತಿ-ಪಾಸ್ತಿಗೆ ಅಪಾರ ಹಾನಿ ಅನುಭವಿಸಿದ್ದಾರೆ. ಗದಗ ಜಿಲ್ಲೆಯಲ್ಲೂ ಮಳೆರಾಯ ಅಬ್ಬರಿಸಿದ್ದಾನೆ. ಹಲವರು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ತಮ್ಮ ಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕೆಂದು ಮೊರೆಯಿಡುತ್ತಿದ್ದಾರೆ.
ವರ್ಷವಾದರೂ ಪರಿಹಾರವಿಲ್ಲ: ಈ ಕುಟುಂಬದ ಸ್ಥಿತಿ ಇನ್ನೂ ಹತಾಶವಾಗಿದೆ. 2019 ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಆವರಿಸಿದಾಗ ಮನೆ- ಮಠ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಧನ ಘೋಷಣೆ ಮಾಡಿತ್ತು. ತಮ್ಮ ಕ್ಷೇತ್ರದಲ್ಲಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಯ ಕುರಿತು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೂ ಸೂಚಿಸಿತ್ತು. ಆದರೆ, ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾ.ಪಂ. ಅಧಿಕಾರಿಗಳಿಗೆ ಈ ಆದೇಶ ತಲುಪಿಲ್ಲವೋ, ಅಥವಾ ಅದರ ಅರಿವಿಲ್ಲವೋ ಅಥವಾ ನಿರ್ಲಕ್ಷ್ಯವೋ ತಿಳಿಯದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

2019 ರಲ್ಲಿ ಪ್ರಕೃತಿ ವಿಕೋಪಕ್ಕೆ ಜುಬೇದಾ ಶಿರಬಡಗಿ ಎಂಬುವರ ಮನೆ ನೆಲಸಮವಾಗಿ ಕುಟುಂಬ ಬೀದಿಗೆ ಬಂದಿದೆ. ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಈ ಕುಟುಂಬ ಗ್ರಾ.ಪಂ.ಗೆ ಹಲವು ಬಾರಿ ಮನವಿಯನ್ನೂ ಸಲ್ಲಿಸಿತ್ತು. ಒಂದು ವರ್ಷ ಕಳೆದರೂ ಇವರಿಗೆ ಬಿಡಿಗಾಸು ಪರಿಹಾರ ದೊರೆಯಲಿಲ್ಲ. ಈ ನಿರ್ಲಕ್ಷ್ಯ ಹೀಗೆಯೇ ಮುಂದುವರಿದರೆ ಗ್ರಾ.ಪಂ. ಮುಂದೆ ಪ್ರತಿಭಟಿಸುವುದೊಂದೇ ತಮಗುಳಿದಿರುವ ಮಾರ್ಗ ಎಂದು ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ.
ಮಳೆ ಇಲ್ಲದ ಸಂದರ್ಭದಲ್ಲಿ ಈ ಕುಟುಂಬ ಮನೆಯ ಅವಶೇಷಗಳಲ್ಲೇ ಕಾಲ ಕಳೆಯುತ್ತಿದೆ. ಮಳೆ ಬಂದಾಗ ಅಕ್ಕ-ಪಕ್ಕದ ಕಟ್ಟಡಗಳಲ್ಲಿ ಆಶ್ರಯ ಪಡೆಯುತ್ತಿದೆ. ಈ ಬಾರಿ ಮಳೆಗೆ ಈ ಕಟ್ಟಡ ಬಹುತೇಕ ನೆಲಸಮವಾಗಿದೆ.
ನಮ್ದು ಬಡ ಕುಟುಂಬ. ಒಂದು ಹೊತ್ತಿನ ಊಟ ಮಾಡಬೇಕೆಂದ್ರೂ ಇನ್ನೊಬ್ಬರ ಬಳಿ ದುಡಿಬೇಕು. ಅಂದಾಗ ಮಾತ್ರ ನಾವು ಹೊಟ್ಟೆ ತುಂಬ ಊಟ ಮಾಡ್ತೇವಿ. ಇಂತಹ ಸನ್ನಿವೇಶದಲ್ಲಿ ಇರುವ ನಾವು, ಅಧಿಕಾರಿಗಳು ಕೇಳಿದ ಮಾತ್ರಕ್ಕೆ ಸಾವಿರಾರು ರೂಪಾಯಿ ಲಂಚದ ಹಣ ಕೊಡಲು ಸಾಧ್ಯ? ಎಂದು ಈ ಕುಟುಂಬ ಕಣ್ಣೀರು ಮಿಡಿಯುತ್ತಿದೆ.

ವಸತಿ ರಹಿತರ ಪಟ್ಟಿಗೆ ಸೇರ್ಪಡೆ
ಮಳೆಯಿಂದ ಬಿದ್ದಿರುವ ಮನೆಗಳ ಸಂಖ್ಯೆ 200 ಕ್ಕೂ ಹೆಚ್ಚಿದೆ. ಅದರಲ್ಲಿ ಜುಬೇದಾ ರಾಜೇಸಾಬ್ ಶಿರಬಡಗಿ ಅವರದ್ದೂ ಇದ್ದು, ವಸತಿರಹಿತರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆ ಮಾಡಲಾಗಿದೆ. ಈ ಕುರಿತ ಸ್ಥಳ ಪರಿಶೀಲನೆ ವರದಿಯನ್ನೂ ಲಕ್ಷ್ಮೇಶ್ವರ ತಹಸೀಲ್ದಾರ್ ಕಚೇರಿಗೆ ಕಳುಹಿಸಿಕೊಡಲಾಗಿದೆ. ಪರಿಹಾರ ಹಾಗೂ ಇತರೇ ಸಮಸ್ಯೆಗಳಿಗೆ ಫಲಾನುಭವಿ ತಹಸೀಲ್ದಾರ್ ಕಚೇರಿಯನ್ನೇ ಸಂಪರ್ಕಿಸಬೇಕು.
– ಬೀರೇಶ್, ಪಿಡಿಒ, ಶಿಗ್ಲಿ

ಕಳೆದ ವರ್ಷವೇ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕುಟುಂಬಕ್ಕೆ ಇನ್ನೂ ಪರಿಹಾರ ಕೊಡಿಸದ ಗ್ರಾ.ಪಂ. ಆಡಳಿತ, ಈ ಬಾರಿಯ ಮಳೆ ಸಂತ್ರಸ್ತರಿಗೆ ಪರಿಹಾರ ಕೊಡಬಲ್ಲುದೇ ಎನ್ನುವುದು ಗ್ರಾಮಸ್ಥರ ಪ್ರಶ್ನೆ. ಈ ಕುಟುಂಬಕ್ಕೆ ತ್ವರಿತವಾಗಿ ಪರಿಹಾರ ಕೊಡಿಸಿ, ಹೊಸದಾಗಿ ಸೂರು ಕಟ್ಟಿಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕುಬೇರಪ್ಪ ಪರ ಶಹರ ಬ್ಲಾಕ್ ಕಾಂಗ್ರೆಸ್ ಪ್ರಚಾರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗದಗ-ಬೆಟಗೇರಿ ನಗರದಲ್ಲಿರುವ ಸರಕಾರಿ ಕಚೇರಿಗಳು, ಬ್ಯಾಂಕ್‌ಗಳಲ್ಲಿ ಗದಗ- ಬೆಟಗೇರಿ ಶಹರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗುರಣ್ಣ ಬಳಗಾನೂರ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ. ಕುಬೇರಪ್ಪ ಪರವಾಗಿ ಮತಯಾಚನೆ ಮಾಡಲಾಯಿತು.
ಶಿಕ್ಷಕರ ಹಾಗೂ ಉಪನ್ಯಾಸಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ, ಸ್ನಾತಕೋತ್ತರ ನಿರುದ್ಯೋಗಿ ಪದವಿಧರರು ಉದ್ಯೋಗ ಪಡೆಯಲು ಸರ್ಕಾರ ವಿಧಿಸಿದ್ದ ವಯೋಮಿತಿ ಹೆಚ್ಚಳ ಮಾಡಿಸಿರುವ ಮತ್ತು 40 ವರ್ಷಗಳಿಂದ ಸಾವಿರಾರು ಶಿಕ್ಷಕರ ಹಾಗೂ ಉಪನ್ಯಾಸಕರ ವೈಯಕ್ತಿಕ ಸಮಸ್ಯೆಗಳನ್ನು ಇಲಾಖಾ ಹಂತದಲ್ಲಿ ಬಗೆಹರಿಸಿರುವುದು ಕುಬೇರಪ್ಪ ಅವರ ಸಾಧನೆ ಎಂದು ಮತದಾರರಿಗೆ ವಿವರಿಸಲಾಯಿತು.
ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭು ಬುರಬುರೆ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಗದಗ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಫಾರೂಕ ಹುಬ್ಬಳ್ಳಿ, ಗದಗ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಡಿಜಿಟಲ್ ಸಂಯೋಜಕ ಮಹಮ್ಮದ ಬೆಟಗೇರಿ ಉಪಸ್ಥಿತರಿದ್ದರು.

ಬೀದಿ ವ್ಯಾಪಾರಸ್ಥರ ಒಕ್ಕಲೆಬ್ಬಿಸದಂತೆ ಮನವಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಷ್ಮೇಶ್ವರ
ಲಕ್ಷ್ಮೇಶ್ವರದ ಬೀದಿ ವ್ಯಾಪಾರಸ್ಥರನ್ನು ತಹಸೀಲ್ದಾರರರು ಹಾಗೂ ಪುರಸಭೆ ಅಧಿಕಾರಿಗಳು ಏಕಾಶಕಿ ಒಕ್ಕಲೆಬ್ಬಿಸಿದ್ದನ್ನು ಖಂಡಿಸಿ, ಶುಕ್ರವಾರ ಪಟ್ಟಣದಲ್ಲಿ ಬೀದಿ ವ್ಯಾಪಾರವನ್ನು ಸಂಪೂರ್ಣ ಬಂದ್ ಮಾಡಲಾಯಿತು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಗದಗ ಜಿಲ್ಲಾ ಬೀದಿ ಬೀದಿ ವ್ಯಪಾರಸ್ಥ ಸಂಘದ ಸದಸ್ಯರು, ಕೋವಿಡ್ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. 2014 ರಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ವ್ಯಾಪಾರಿಗಳಿಗೆ ಗುರುತಿನ ಪತ್ರ ನೀಡಿ, ಸರಕಾರಿ ಮಟ್ಟದಲ್ಲಿ ಸಮಿತಿ ರಚಿಸುವಂತೆ ಆದೇಶವಿದ್ದರೂ ಆರು ವರ್ಷಗಳಿಂದ ಪಾಲನೆಯಾಗಿಲ್ಲ. ಹೀಗಾಗಿ, ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಮುಕ್ತ ವ್ಯವಸ್ಥೆ ಕಲ್ಪಿಸುವಂತೆ ವಿನಂತಿ ಮಾಡಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮುಕ್ತುಂಸಾಬ ಸಾಲಬಂದ, ಕಾರ್ಯದರ್ಶಿ ಬಾಷಾಸಾಬ ಮಲ್ಲಸಮುದ್ರ, ಮಾರುತಿ ಸೋಲಂಕಿ, ರಶೀದ ನದಾಫ, ರೇಣುಕಾ ಹತ್ತಿವಾಲೆ, ಫಯಾಜ್ ನಾರಾಯಣಕೇರಿ, ಯೂಸುಫ್ ಶಿರಹಟ್ಟಿ, ಮಹಮ್ಮದ ಅಲಿ ಅತ್ತರ, ರಾಜು ರೋಣದ, ಶೌಕತ್ ಕಾತರಕಿ, ಶಿವು, ದಾದಾಫೀರ ಮುಂಡರಗಿ, ನವೀನ ಎನ್. ಭಂಡಾರಿ, ಸಂಘದ ಪದಾಧಿಕಾರಿಗಳು ಉಪಸ್ಥತರಿದ್ದರು.

ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ: ಪಾಟೀಲ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಬಿಜೆಪಿ ನೇತೃತ್ವದ ಸರ್ಕಾರಗಳು ಭರವಸೆ ಮಾತ್ರ ನೀಡುತ್ತಿವೆ. ಅವುಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದನ್ನು ಜನತೆ ಮನಗಂಡಿದ್ದಾರೆ. ಹೀಗಾಗಿ ಪದವೀಧರರ ಹಾಗೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕಾಂಗ್ರೆಸ್ ಗದಗ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಪಟ್ಟಣದ ಮತ್ತಿಕಟ್ಟಿ, ಎಸ್.ಎಂ. ಭೂಮರಡ್ಡಿ, ಸರ್ಕಾರಿ ಪಾಲಿಟೆಕ್ನಿಕ್, ಮಹಾವೀರ ಕಾಲೇಜಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ. ಕುಬೇರಪ್ಪ ಪರವಾಗಿ ಪದವೀಧರರಲ್ಲಿ ಮತಯಾಚಿಸಿ ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಜನತೆಗೆ ಬಿಜೆಪಿ ನಾಯಕರು ನೀಡುವ ಭರವಸೆಗಳು ಕಾರ್ಯಗತವಾಗುವುದಿಲ್ಲ ಎನ್ನುವುದಕ್ಕೆ 6 ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರದ ಆಡಳಿತ ವೈಖರಿಯೇ ಸಾಕ್ಷಿ. ಕಳೆದ ಬಾರಿ ಎಸ್.ವಿ. ಸಂಕನೂರು ಅವರಿಗೆ ನೀಡಿದ ಅವಕಾಶ ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಪದವೀಧರರು ಅರಿತುಕೊಂಡಿದ್ದಾರೆ. ಈ ಬಾರಿ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಣಲ್ಲು ಗೆಲ್ಲಿಸುವ ಮೂಲಕ ಜನತೆ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ವೀರಣ್ಣ ಶೆಟ್ಟರ ಹಾಗೂ ಎಚ್.ಎಸ್. ಸೋಂಪುರ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರಗಳು ರೈತರು, ಕಾರ್ಮಿಕರು ಸೇರಿ ಜನರ ಆಶಯಗಳಿಗೆ ವಿರುದ್ಧವಾಗಿರುವ, ಕಲಾಪಗಳಲ್ಲಿ ಬಿದ್ದು ಹೋಗಿದ್ದ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುತ್ತಿದ್ದಾರೆ. ಪದವೀಧರರ ಸಮಸ್ಯೆಗಳಿಗೆ ಕಿಂಚಿತ್ತು ಬೆಲೆ ನೀಡದ ಮೋದಿ ಹಾಗೂ ಬಿಎಸ್‌ವೈ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಲು ಹಾಗೂ ಪದವೀಧರರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಜ್ಞಾವಂತ ಯುವ ಸಮೂಹ ಕಾಂಗ್ರೆಸ್ ಬೆಂಬಲಿಸಿ ಡಾ. ಕುಬೇರಪ್ಪ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದರು.
ನರೇಗಲ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಸ್. ಶೀಲವಂತರ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ಮುರ್ತುಜಾ ಡಾಲಾಯತ, ಶರಣಪ್ಪ ಚಳಗೇರಿ, ಬಸವರಾಜ ಬಂಕದ, ಅಪ್ಪು ಮತ್ತಿಕಟ್ಟಿ ಇಮಾಮಸಾಬ ಬಾಗವಾನ, ವೀರಣ್ಣ ಸೊನ್ನದ, ಸಿದ್ದು ಗೊಂಗಡಶೆಟ್ಟಿಮಠ, ಅರ್ಜುನ ರಾಠೋಡ, ವೀರೇಶ ಸಂಗಮದ ಇದ್ದರು.

error: Content is protected !!