Home Blog Page 3023

ಕೆಎಸ್ ಆರ್ ಟಿಸಿ ಹೆಸರು ಬಳಕೆಗೆ ಇಲ್ಲ ಆಕ್ಷೇಪ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೆಎಸ್ಆರ್ ಟಿಸಿ ಎನ್ನುವ ಟ್ರೇಡ್ ಮಾರ್ಕ್ ಅನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬಳಸುವಂತಿಲ್ಲ ಎಂದು ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿ ಬುಧವಾರ ತನ್ನ ಅಂತಿಮ ತೀರ್ಪ ಪ್ರಕಟಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇದು ಸತ್ಯಕ್ಕೆ ದೂರವಾದ ವರದಿ. ಏಕೆಂದರೆ ಇಲ್ಲಿಯವರೆಗೂ ನಮ್ಮ ಸಾರಿಗೆ ಸಂಸ್ಥೆ, ಕೇಂದ್ರ ಟ್ರೇಡ್ ಮಾರ್ಕ್ ರಿಜಿಸ್ಟರಿ ಯಾವುದೇ ಸೂಚನೆ ಅಥವಾ ಆದೇಶ ಬಂದಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರು ಶಿವಯೋಗಿ ಸಿ.ಕಳಸದ ಸ್ಪಷ್ಟೀಕರಣ ನೀಡಿದ್ದಾರೆ.

ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ಕೆಎಸ್ಆರ್ ಟಿಸಿ ಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣ ಪತ್ರದ ವಿರುದ್ಧ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯ ಮುಂದೆ ಸಲ್ಲಿಸಿದ ಮೇಲ್ಮನವಿಗಳಲ್ಲಿ ಯಾವುದೇ ಅಂತಿಮ ಆದೇಶಗಳನ್ನು ಸಹ ಹೊರಡಿಸಲಾಗಿಲ್ಲ.
ಈ ಮಂಡಳಿಯನ್ನು 4.04.2021 ರ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಲಾಗಿದೆ. ಇಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಕೆಎಸ್‌ಆರ್‌ಟಿಸಿಯ ಟ್ರೇಡ್ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ ಹಾಗೂ ಕೆಎಸ್‌ಆರ್‌ ಟಿಸಿಯು ತನಗೆ ನೀಡಲಾಗಿರುವ ಟ್ರೇಡ್‌ ಮಾರ್ಕ್‌ ಗಳನ್ನು ಬಳಸಲಾಗುವುದಿಲ್ಲ ಎಂಬ ಸುದ್ದಿ-ವರದಿಗಳು ಸತ್ಯಕ್ಕೆ ದೂರವಾಗಿವೆ ಮತ್ತು ಇದನ್ನು ಕಾನೂನಾತ್ಮಕವಾಗಿ ಒಪ್ಪಲಾಗದು ಎಂದಿದ್ದಾರೆ.

ಕೇರಳ ಎಸ್‌ ಆರ್‌ ಟಿಸಿಯು, ಕೆಎಸ್‌ ಆರ್‌ ಟಿಸಿ ಸಂಸ್ಥೆ ಗೆ ನೊಟೀಸ್ ನೀಡಿದರೆ, ಸಂಸ್ಥೆಯಿಂದ ಸೂಕ್ತವಾದ ಉತ್ತರ ನೀಡಲಾಗುತ್ತದೆ. ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಾವು ಪ್ರಸ್ತುತ ನಮ್ಮ ವಕೀಲರನ್ನು ಸಂಪರ್ಕಿಸುತ್ತಿದ್ದೇವೆ. ಹೀಗಾಗಿ ಮಾಧ್ಯಮಗಳು ಕಾನೂನಾತ್ಮಕವಲ್ಲದ ಇಂತಹ ವರದಿಗಳನ್ನು ಪ್ರಕಟಿಸದಂತೆ ವಿನಂತಿಸಿದ್ದಾರೆ.

ನಟಿ ಜುಹಿ ಚಾವ್ಲಾಗೆ ಭಾರಿ ದಂಡ ವಿಧಿಸಿದ ಕೋರ್ಟ್!

ವಿಜಯಸಾಕ್ಷಿ ಸುದ್ದಿ, ನವದೆಹಲಿ

5 ಜಿ ವೈರ್‌ ಲೆಸ್ ನೆಟ್‌ ವರ್ಕ್‌ ಗಳನ್ನು ಸ್ಥಾಪಿಸುವುದರ ವಿರುದ್ಧ ಮೊಕದ್ದಮೆ ಸಲ್ಲಿಸಿದ್ದ ನಟಿ ಜುಹಿ ಚಾವ್ಲಾ ಅವರಿಗೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ.

ಈ ದೂರು ಆಲಿಸಿದ ಕೋರ್ಟ್, ದೂರುದಾರರು ಕಾನೂನಿನ ಪ್ರಕ್ರಿಯೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಅಲ್ಲದೇ, ರೂ. 20 ಲಕ್ಷ ದಂಡ ವಿಧಿಸಿದೆ ಎಂದು ಎಎನ್‌ ಐ ವರದಿ ಮಾಡಿದೆ.

ಈ ‘ಮೊಕದ್ದಮೆ ಪ್ರಚಾರಕ್ಕಾಗಿ ಎಂದು ತೋರುತ್ತದೆ’ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಜುಹಿ ಚಾವ್ಲಾ, ಸಾಮಾಜಿಕ ಮಾಧ್ಯಮದಲ್ಲಿ ವಿಚಾರಣೆಯ ಲಿಂಕ್ ಪ್ರಸಾರ ಮಾಡಿದ್ದರಿಂದಾಗಿ, ಅದರ ಲಿಂಕ್ ನ್ನು ಅವರ ಅಭಿಮಾನಿಗಳು ಹಾಡು ಹಾಡುವ ಮೂಲಕ ಮೂರು ಬಾರಿ ಅಡ್ಡಿಪಡಿಸಿದ್ದರು.

ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್‌ ನ ವಿಚಾರಣೆಗೆ ಅಡ್ಡಿಪಡಿಸಿದ ವ್ಯಕ್ತಿ ಗುರುತಿಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.

ಮಕ್ಕಳನ್ನು ಈಗಲೇ ಕಾಡುತ್ತಿದೆ ಸೋಂಕು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿಯ ಎರಡನೇ ಅಲೆಯು ರಾಜ್ಯದಲ್ಲಿ ಕಡಿಮೆಯಾಗುತ್ತಿದೆ. ಆದರೆ, ಈ ಸಮಯದಲ್ಲಿಯೇ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದು ಮಕ್ಕಳ ರೋಗ ತಜ್ಞರು ತಿಳಿಸಿದ್ದಾರೆ.

ಮೂರನೇ ಅಲೆಯು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಹಾಗಾದರೆ ಇದೀಗ ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿರುವುದು ಮೂರನೇ ಅಲೆಯಾ? ಎನ್ನುವ ಪ್ರಶ್ನೆ ಸಹಜವಾಗಿಯೇ ಎಲ್ಲರನ್ನು ಕಾಡುತ್ತಿದೆ. ಬೆಂಗಳೂರಿನಲ್ಲಿ ಕಳೆದ ಏಳು ದಿನಗಳಲ್ಲಿ 9 ವರ್ಷದೊಳಗಿನ 171 ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ಮಾರ್ಚ್ 12 ರಿಂದ ಮೇ 14 ರ ವರೆಗೆ ಮಕ್ಕಳಲ್ಲಿ ಕೊರೋನಾ ಸೋಂಕಿನ ದರ ಶೇ. 2.9 ದಷ್ಟಿತ್ತು. ಆದರೆ, ಮೇ. 15 ರಿಂದ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಶೇ. 4ರಷ್ಟು ಕೊರೊನಾ ಸೋಂಕು 9 ವರ್ಷದೊಳಗಿನ ಮಕ್ಕಳಲ್ಲಿ ಪತ್ತೆಯಾಗಿದೆ ಎಂದು ಅಧಿಕೃತ ಮಾಹಿತಿ ವರದಿ ತಿಳಿಸಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಶೇ. 3 ರಷ್ಟು ಸೋಂಕು ತಗುಲಿದೆ.

11 ರಿಂದ 19 ವರ್ಷ ವಯಸ್ಸಿನ ಮಕ್ಕಳಲ್ಲಿಯೂ ಪ್ರಕರಣಗಳು ಪ್ರತಿದಿನ ಶೇ. 8ರಷ್ಟು ದಾಖಲಾಗುತ್ತಿವೆ. ಬೆಂಗಳೂರಿಗೆ ಬರುವ ಹೆಚ್ಚಿನ ಪ್ರಕರಣಗಳು ಇತರ ಜಿಲ್ಲೆಗಳಿಂದ ಅದರಲ್ಲಿಯೂ ಹಳ್ಳಿಗಳಿಂದ ಬರುವ ಪ್ರಕರಣಗಳು ಹೆಚ್ಚಿವೆ. ಹೀಗಾಗಿ ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದೆ ಮತ್ತು ಮಕ್ಕಳಲ್ಲಿ ಹೆಚ್ಚುತ್ತಿರುವ ಮಲ್ಟಿ ಇಂಪ್ಲಾಮೇಟರಿ ಸಿನ್ಡ್ರೋಮ್ ನಿಂದ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಎಂಟ್ರಿ ಕೊಟ್ಟ ಮುಂಗಾರು – ಹಲವೆಡೆ ಭಾರಿ ಮಳೆ

ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ

ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಿದೆ. ಜೂ. 4ರಂದು ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಪ್ರವೇಶ ಮಾಡಿರುವ ಮುಂಗಾರು, ಇಂದು ಉತ್ತರ ಒಳನಾಡಿಗೆ ಎಂಟ್ರಿ ಕೊಡಲಿದೆ. ಹೀಗಾಗಿ ನಿನ್ನೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ.

ತಡರಾತ್ರಿ ಸುರಿದ ಭಾರಿ ಮಳೆಗೆ ಹಳ್ಳ- ಕೊಳ್ಳಗಳು ಉಕ್ಕಿ ಹರಿದಿವೆ. ಚಿಕ್ಕಬಳ್ಳಾಪುರ ತಾಲೂಕು ಹಾಗೂ ಗುಡಿಬಂಡೆ ಪ್ರದೇಶದಲ್ಲಿ ಉತ್ತಮವಾಗಿ ಸುರಿದ ಮಳೆಯಿಂದಾಗಿ ಜನ – ಜೀವನ ಅಸ್ತವ್ಯಸ್ಥಗೊಂಡಿದೆ. ರಾಮಪಟ್ನ ಹಾಗೂ ಕರಿಗಾನತಮ್ಮನ ಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಂಬದ್ರೋಣ ಮಳೆ ರೈತರ ಭೂಮಿಗೆ ತಂಪು ಚಲ್ಲಿದೆ. ಹೀಗಾಗಿ ರೈತರ ಮುಖದಲ್ಲಿ ಹರ್ಷ ಮನೆ ಮಾಡಿದೆ.

ಧಾರಾಕಾರವಾಗಿ ಸುರಿದ ಮಳೆಯ ನೀರಿಗೆ ಹಲವು ರಸ್ತೆಗಳು ಹಾಗೂ ಜಮೀನುಗಳು ಜಲಾವೃತಗೊಂಡಿವೆ. ಈ ಪ್ರದೇಶದಲ್ಲಿ ನಿನ್ನೆ ರಾತ್ರಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ. ಅಲ್ಲದೇ, ಈ ಅಬ್ಬರದ ಮಳೆಗೆ ತೋಟಗಾರಿಕೆ ಬೆಳೆಗಳು ನಾಶವಾಗಿವೆ.

ವಾಹನ ಇಲ್ಲದೆ ಪರದಾಡುತ್ತಿದ್ದ ಮಹಿಳೆಯರು; ಮಾನವೀಯತೆ ಮೆರೆದ ಮಾಧ್ಯಮ ಸ್ನೇಹಿತರು!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವಾಹನ ವ್ಯವಸ್ಥೆ ಇಲ್ಲದೆ ಕತ್ತಲು ಹಾಗೂ ಮಳೆಯಲ್ಲಿ ನಡೆದು ಬರುತ್ತಿರುವದ‌್ನು ಕಂಡ ಮಾಧ್ಯಮ ಸ್ನೇಹಿತರಿಬ್ಬರು ಮಹಿಳೆಯರನ್ನು ಕಾರಿನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಬಂದು ತಮ್ಮ ಮನೆಗಳಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಖಾಸಗಿ ವಾಹಿನಿ ವರದಿಗಾರರಾದ ರಾಜು ದಖನಿ ಹಾಗೂ ಮಲ್ಲೇಶ ಸೂರಣಗಿ ಎಂಬುವವರೇ ಮಹಿಳೆಯರಿಗೆ ಸಹಾಯ ಮಾಡಿದ ಮಾಧ್ಯಮ ಸ್ನೇಹಿತರು.

ಕೆಲಸದ ನಿಮಿತ್ತ ಗದಗ ಜಿಲ್ಲೆಗೆ ಹೋಗಿ ಬರುವಾಗ ಮಹಿಳೆಯರು ಕತ್ತಲಲ್ಲಿ ಮಳೆಯಲ್ಲಿ ತೋಯ್ದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ ಸ್ನೇಹಿತರು ವಿಚಾರಿಸಿದಾಗ ಹುಬ್ಬಳ್ಳಿಯಿಂದ ಆಟೋ‌ ಮಾಡಿಕೊಂಡು ಹೆರಿಗೆಯಾದ ತಮ್ಮ ಸಂಬಂಧಿಯೊಬ್ಬರನ್ನು ಮಾತನಾಡಿಸಲು ಕೋಳಿವಾಡ ಗ್ರಾಮಕ್ಕೆ ಬಂದಿದ್ವಿರೀ ಆದ್ರ ಹೊಳ್ಳಿ ಹೋಗುವಾಗ ರಸ್ತೆದಾಗ ಆಟೋ ಕೆಟ್ಟು ನಿಂತು. ನಮಗ ದಿಕ್ಕ ದೋಜಲಿಲ್ಲರೀ. ನಡೆಕೊಂಡ ಮನೆ ಮುಟ್ಟಬೇಕು ಅಂತ ಹೊರಟೀವಿ ನೋಡ್ರೀ ಅಂದ್ರು.

ಆವಾಗ ಮಾಧ್ಯಮ ಸ್ನೇಹಿತರು ನೀವು ಎಲ್ಲಿಗೆ ಹೊರಟೀರಿ ಅಂದಾಗ ಹುಬ್ಬಳ್ಳಿಯ ಸಾಯಿನಗರಕ್ಕೆ ಹೋಗಬೇಕು ಅಂದ್ರು. ಆಯಿತು ನಾವು ಕರಕೊಂಡು ಹೊಕ್ಕೀವಿ ಅಂತ ತಮ್ಮ ಕಾರಿನಲ್ಲಿಯೇ ಅವರನ್ನು ಮನೆಯವರೆಗೂ ಮುಟ್ಟಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಇಬ್ಬರು ಮಾಧ್ಯಮ ಸ್ನೇಹಿತರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಶುಭ ಶುಕ್ರವಾರ; ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ, ಮೂವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಜನರಿಗೆ ಇವತ್ತು ಶುಭ ಸುದ್ದಿ. ಹೌದು ಎರಡನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಪ್ರಮಾಣದ ಸೋಂಕಿತರು ಪತ್ತೆಯಾಗಿದ್ದಾರೆ.

ಇಂದು 194 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತದ ಮಾಹಿತಿ ಪ್ರಕಾರ ಮೂವರು ಮೃತಪಟ್ಟಿದ್ದಾರೆ.

ಇಂದಿನ 194 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 24509 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -102, ಮುಂಡರಗಿ-15, ನರಗುಂದ-08, ರೋಣ-19, ಶಿರಹಟ್ಟಿ-45, ಹೊರಜಿಲ್ಲೆಯ-05 ಸೇರಿದಂತೆ 194 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 265 ಕ್ಕೇರಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರು ನಿವಾಸಿ 80 ವರ್ಷದ ವ್ಯಕ್ತಿ ಮೇ-29 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -03 ರಂದು ಮೃತಪಟ್ಟಿದ್ದಾರೆ.

ಲಕ್ಷ್ಮೇಶ್ವರ ಶಹರದ ನಿವಾಸಿ 40 ವರ್ಷದ ವ್ಯಕ್ತಿ ಮೆ-19 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 31 ರಂದು ಮೃತಪಟ್ಟಿದ್ದಾರೆ.

ಗದಗ ಶಹರ ನಿವಾಸಿ 65 ವರ್ಷದ ವ್ಯಕ್ತಿ ಮೇ-19 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಜೂನ್ 01 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 326 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 22161 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2083 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 192 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸೋಂಕಿತರು ಕೋವಿಡ್ ಕೇರ್ ಸೆಂಟರ್‌ ಗೆ ಬಾರದಿದ್ದಲ್ಲಿ ಕೇಸ್; ಡಿಸಿ ಖಡಕ್ ಸೂಚನೆ

ವಿಜಯಸಾಕ್ಷಿ ಸುದ್ದಿ ಗದಗ

ಸೋಂಕು ನಿಯಂತ್ರಣ ಕಾರ್ಯದಲ್ಲಿ ಸೋಂಕಿತ ವ್ಯಕ್ತಿಯನ್ನು ಹತ್ತಿರದ ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಮೂಲಕ ಸೋಂಕಿತ ವ್ಯಕ್ತಿಯ ಕುಟುಂಬದವರಿಗೆ ಸೋಂಕು ತಗಲದಂತೆ ನಿಗಾ ವಹಿಸಬೇಕು. ಸೋಂಕಿತ ವ್ಯಕ್ತಿ ಕೋವಿಡ್ ಕೇಂದ್ರಕ್ಕೆ ಚಿಕಿತ್ಸೆ ಆಗಮಿಸಲು ನಿರಾಕರಿಸಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಶಿಸ್ತು ಕ್ರಮ ಜರುಗಿಸಬೇಕು. ಜೊತೆಗೆ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿರುವ ಬಗ್ಗೆ ತಹಶೀಲ್ದಾರರು ನಿಯಮಿತವಾಗಿ ಭೇಟಿ ನೀಡುವ ಮೂಲಕ ಮೇಲುಸ್ತುವಾರಿ ನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವರು, ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಕೋವಿಡ್ ಸೋಂಕು ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾದ್ಯಂತ ವಿಧಿಸಲಾದ ಕಠಿಣ ಮಾರ್ಗಸೂಚಿಗಳ ಅನುಷ್ಟಾನದಲ್ಲಿ ಅಧಿಕಾರಿಗಳ ನಿಷ್ಕಾಳಜಿ ಸಹಿಸಲಾಗದು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಸೋಂಕು ನಿಯಂತ್ರಣ ಕಾರ್ಯದಲ್ಲಿ ನಿಯೋಜಿತ ಅಧಿಕಾರಿಗಳು ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಸೋಂಕು ನಿಯಂತ್ರಣ ಹಾಗೂ ಸೋಂಕಿನ ಸರಪಳಿ ತುಂಡರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ಸರ್ಕಾರ ಲಸಿಕೆ ನೀಡಲು ನಿಗದಿಪಡಿಸಿದ ಆದ್ಯತಾ ಗುಂಪುಗಳಿಗೆ ತೀವ್ರ ಗತಿಯಲ್ಲಿ ಲಸಿಕಾಕರಣವನ್ನು ನೀಡಬೇಕು. ಆದ್ಯತಾ ವಲಯಗಳ ಅರ್ಹರೆಲ್ಲರಿಗೂ ಲಸಿಕೆ ದೊರೆಯುವಂತೆ ತಹಶೀಲ್ದಾರರು ಮೇಲುಸ್ತುವಾರಿ ಕಾರ್ಯ ನಿರ್ವಹಿಸಬೇಕು. ಜೊತೆಗೆ ಸೋಂಕು ನಿಯಂತ್ರಣ ಕಾರ್ಯದಲ್ಲಿ ನಿಯೋಜಿತ ವಿವಿಧ ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಿ ಸೋಂಕು ತಡೆಗೆ ಮುಂದಾಗುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ ಮಾತನಾಡಿ, ಮಳೆಗಾಲ ಆರಂಭವಾಗಿದ್ದು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ನಗರ ಪಟ್ಟಣಗಳ ಚರಂಡಿಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛಗೊಳಿಸಲು ಯೋಜನೆ ಸಿದ್ಧಗೊಳಿಸಿ ಕ್ರಮ ವಹಿಸಬೇಕು. ಜೊತೆಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ಆಸ್ತಿ ಹಾಗೂ ಜೀವ ಹಾನಿ ತಪ್ಪಿಸಲು ಕ್ರಮ ಅಗತ್ಯ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ , ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅನಿಲಕುಮಾರ್ ಮುದ್ದಾ, ಅವಳಿ ನಗರಸಭೆಯ ಪೌರಾಯುಕ್ತ ರಮೇಶ ಜಾಧವ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

ಅಂಪೋಟೆರಿಸನ್ ಬಿ ಇಂಜೆಕ್ಷನ್ ಮಾರಾಟ ಯತ್ನ; ಮೂವರ ಬಂಧನ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೊರೊನಾದಿಂದ ನಿತ್ಯ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಪಾಪಿಗಳ ಜೀವ ರಕ್ಷಕ ಔಷಧಿಯನ್ನು ಕಳ್ಳತನ‌ ಮಾಡಿ‌ ಮಾರಾಟ ಮಾಡುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನೀಡುವ ಅಂಪೋಟೆರಿಸನ್ ಬಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಕಿಮ್ಸ್ ಆಸ್ಪತ್ರೆಯ ವ್ಯಾಪ್ತಿಯ ಔಷಧಿ ಅಂಗಡಿಯಲ್ಲಿ ಅಕ್ರಮವಾಗಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ನಾಸೀರ್ ಹುಸೇನ್, ರಾಘವೇಂದ್ರ ಉಣಕಲ್, ನಾಗರಾಜ್ ನಡವಲಕೇರಿ ಎಂಬುವರೇ ಬಂಧಿತರು.

ಬಂಧಿತರಿಂದ 4 ವಯಲ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ. ನಾಸೀರ್ ಹುಸೇನ್ ಎಂಬುವವನಿಂದ ಇಂಜೆಕ್ಷನ್ 7 ಸಾವಿರಕ್ಕೆ ತಂದು ಹೆಚ್ಚಿಗೆ ಹಣಕ್ಕೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ‌ ‌ಪ್ರಕರಣ ದಾಖಲಾಗಿದೆ.

ಸೋಂಕಿನಿಂದ ಮೃತರಾದ ಕುಟುಂಬದವರಿಗೆ ಸರ್ಕಾರಿ ಸೌಲಭ್ಯ; ಡಿಸಿ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್ ಸೋಂಕಿನಿಂದ ಮೃತರಾದ ಕುಟುಂಬದ ಸದಸ್ಯರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ದೊರಕಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ನಿರ್ವಹಿಸಬೇಕು. ಸರ್ಕಾರದ ಒಂದಿಲ್ಲೊಂದು ಯೋಜನೆಯಲ್ಲಿ ಸೋಂಕಿನಿಂದ ಮೃತ ಕುಟುಂಬದ ಸದಸ್ಯರಿಗೆ ಪ್ರಯೋಜನವಾಗಬೇಕು. ಮೃತ ವ್ಯಕ್ತಿಯ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ ಸೌಲಭ್ಯ ದೊರೆಯುವಂತೆ ನಿಗಾ ವಹಿಸಲು ಜಿಲ್ಲಾಧಿಕಾರಿಗಳು ತಹಸೀಲ್ದಾರರಿಗೆ ನಿರ್ದೇಶನ ನೀಡಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಜರುಗಿದ ಕೋವಿಡ್ ಸೋಂಕು ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಅನೇಕ ಕುಟುಂಬಗಳು ಆರ್ಥಿಕವಾಗಿ ಬಲಹೀನವಾಗಿದೆ. ಜಿಲ್ಲೆಯ ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರಿಗೆ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಹಣಕಾಸು ಸಂಸ್ಥೆಯ ಮುಖ್ಯಸ್ಥರಿಗೆ ಈಗಾಗಲೇ ಸೂಚನೆ ನೀಡಿರುವಂತೆ ಇನ್ನೆರಡು ತಿಂಗಳು ಆರ್ಥಿಕವಾಗಿ ಅಸಹಾಯಕವಾಗಿರುವ ಕುಟುಂಬಗಳಿಂದ ಸಾಲದ ಕಂತು ವಸೂಲಿ ಮಾಡದಿರುವಂತೆ ತಿಳಿಸಲಾಗಿದೆ.

ತಹಶೀಲ್ದಾರರು ಸ್ಥಳೀಯವಾಗಿ ಹಣಕಾಸು ಸಂಸ್ಥೆಯವರೊಂದಿಗೆ ಚರ್ಚಿಸಿ ಸಾಲದ ಕಂತು ಮರುಪಾವತಿಗೆ ಕಾಲಾವಕಾಶ ನೀಡುವಂತೆ ತಿಳಿಸಲು ನಿರ್ದೇಶಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ , ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅನಿಲಕುಮಾರ್ ಮುದ್ದಾ , ನಗರಸಭೆಯ ಪೌರಾಯುಕ್ತ ರಮೇಶ ಜಾಧವ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

ಪ್ರೆಸ್ ಕ್ಲಬ್ ನ ಅಧ್ಯಕ್ಷರಾಗಿ ಪಿ ವೀರಣ್ಣ, ಕಾರ್ಯದರ್ಶಿಯಾಗಿ ಶಿವಕುಮಾರ ಪತ್ರಿಮಠ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ

ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಘಟಕದ ಸಾಮಾನ್ಯ ಸಭೆಯಲ್ಲಿ 2021- 22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅದ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಪಿ. ವೀರಣ್ಣ,

ಉಪಾಧ್ಯಕ್ಷರಾಗಿ ಕನ್ನಡನಾಡು ಪತ್ರಿಕೆ ವರದಿಗಾರ ಎಸ್. ಅಶ್ವತ್ಥನಾರಾಯಣ್,

ಪ್ರಧಾನ ಕಾರ್ಯದರ್ಶಿಯಾಗಿ ವಿಜಯವಾಣಿ ಪತ್ರಿಕೆಯ ವರದಿಗಾರ ಶಿವಕುಮಾರ ಪತ್ರಿಮಠದ,

ಖಜಾಂಚಿಯಾಗಿ ನವೋದಯ ಪತ್ರಿಕೆ ವರದಿಗಾರ ಎಸ್.ಎಂ. ಬಸವರಾಜ್,

ಸಹ ಕಾರ್ಯದರ್ಶಿಯಾಗಿ ಮೂಡಣ ಪತ್ರಿಕೆ ವರದಿಗಾರ ಎಸ್.ಎಂ. ಜಾನ್ ಆಯ್ಕೆ ಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಅಯ್ಯನಗೌಡ, ವಿಶ್ವನಾಥ ಹಳ್ಳಿಗುಡಿ, ಎಂ. ನಿಂಗಪ್ಪ, ಎಂ.ಪಿ.ಎಂ. ಶಿವಪ್ರಕಾಶ್, ಎಸ್.ನಿಂಗರಾಜ, ಚಂದ್ರು ಕೊಂಚಿಗೇರಿ, ಎಂ.ಅಶೋಕ, ಎಚ್.ಎಂ. ಗುರುಬಸವರಾಜಯ್ಯ, ಎಲ್.ಅಕ್ಬರ್, ಸೋಮಶೇಖರ, ಎಚ್.ಚಂದ್ರಪ್ಪ, ಕೆ. ಎಚ್.ಕೆ. ಮಹೇಶ, ಎಚ್‌.ವೀರನಗೌಡ ಸರ್ವಾನುಮತದಿಂದ ಆಯ್ಕೆಯಾದರು.

error: Content is protected !!