Home Blog Page 3023

ಚುನಾವಣೆ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯಾಗಲಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಯುವ ಸಮೂಹವನ್ನು ನಿರುದ್ಯೋಗಕ್ಕೆ ದೂಡಿರುವ ಬಿಜೆಪಿ ಸರ್ಕಾರಗಳಿಗೆ ಪದವೀಧರರ ಚುನಾವಣೆಯ ಫಲಿತಾಂಶವು ಎಚ್ಚರಿಕೆಯಾಗಲಿ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಬಂಕದ ಹೇಳಿದರು.
ಪಶ್ಚಿಮ ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ದುರ್ಗಾವೃತ್ತ, ಸರಾಫ್ ಬಜಾರ್, ಈದ್ಗಾ ಮೈದಾನ ಸೇರಿ ವಿವಿಧ ಬಡಾವಣೆಗಳ ಪದವೀಧರರ ಬಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ. ಕುಬೇರಪ್ಪ ಪರವಾಗಿ ಮತಯಾಚಸಿ ಮಾತನಾಡಿದರು.
ರೈತರ, ಕಾರ್ಮಿಕರ ಹಾಗೂ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಣೆ ಜತೆಗೆ ದೇಶದ ಯುವ ಸಮೂಹಕ್ಕೆ ಉದ್ಯೋಗ ನೀಡಬೇಕಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಯುವ ಸಮೂಹಕ್ಕೆ ನಿರುದ್ಯೋಗ ಭಾಗ್ಯ ನೀಡುತ್ತಿದೆ. ಪ್ರಶ್ನಿಸುವ ಜನತೆಗೆ ಯುವಕರು ಪಕೋಡ ಮಾರಿ ಎಂಬ ಉತ್ತರ ನೀಡುವ ಮೂಲಕ ಪದವೀಧರರ ನೌಕರಿ ಕನಸಿಗೆ ಕೊಳ್ಳಿ ಇಟ್ಟಿದೆ. ಬಹುಮತವಿದೆ ಎಂದು ಜನವಿರೋಧಿ ಹಾಗೂ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳಿಗೆ ಸುಗ್ರಿವಾಜ್ಞೆಗಳಿಂದ ತಿದ್ದುಪಡಿ ತರುತ್ತಿರುವ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಲು ಸಿಕ್ಕಿರುವ ಅವಕಾಶವನ್ನು ಪ್ರಜ್ಞಾವಂತ ಪದವೀಧರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಐವೈಸಿ ತಾಲೂಕು ಪ್ರಧಾನ ಕಾರ್ಯದರ್ಶಿ ಅನಿಲ್ ಕರ್ಣೆ ಹಾಗೂ ಉಮೇಶ ರಾಠೋಡ ಮಾತನಾಡಿ, ನಮ್ಮ ಜಿಲ್ಲೆಯವರು ಎಂದು ನೀಡಿದ್ದ ಅವಕಾಶವನ್ನು ಬಳಿಕೆ ಮಾಡಿಕೊಳ್ಳುವಲ್ಲಿ ಹಾಗೂ ಪದವೀಧರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಕನೂರ ಅವರು ವಿಫಲವಾಗಿದ್ದಾರೆ. ಸಂಘಟನೆ ಹಾಗೂ ಹೋರಾಟ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಅವರಿಗೆ ಅ. 28 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಲು ಪದವೀಧರರು ಉತ್ಸುಕವಾಗಿದ್ದಾರೆ ಎಂದರು.

ಯತ್ನಾಳ ಅವರದ್ದು ಫೂಲೀಶ್ ಹೇಳಿಕೆ: ಈಶ್ವರಪ್ಪ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬಸನಗೌಡ ಯತ್ನಾಳ ಅವರದ್ದು ಫೂಲೀಶ್ ಹೇಳಿಕೆ. ಅದು ಅಶಿಸ್ತಿನ ಹೇಳಿಕೆ. ಯತ್ನಾಳ ಹೇಳಿಕೆಯನ್ನು ಖಂಡಸ್ತಿನಿ ಎಂದು ಆರ್‌ಡಿಪಿಆರ್ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.

ಕೊಪ್ಪಳದ ಶಿವಶಾಂತ ಮಂಗಲಭವನದಲ್ಲಿ ಬುಧವಾರ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಪ್ರಚಾರದ ಹಿನ್ನೆಲೆಯಲ್ಲಿ ಮಂಡಲ ಪ್ರಭಾರಿಗಳು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದಲ್ಲಿ ಇದ್ದುಕೊಂಡು ಶಿಸ್ತಿಗೆ ಭಂಗ ತರುವ ಕೆಲಸ ಸರಿಯಲ್ಲ. ಯತ್ನಾಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಈಗಾಗಲೇ ರಾಜ್ಯಾಧ್ಯಕ್ಷರು ಆದೇಶಿಸಿದ್ದಾರೆ. ನಾವು ಅಂದರೆ ಬಿಜೆಪಿಯವರು ಶಿಸ್ತಿನ ಸಿಪಾಯಿಗಳಾಗಿರಬೇಕು ಎಂದರು.

ಎರಡು ಅಸೆಂಬ್ಲಿ, ನಾಲ್ಕು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಮುಂದಿನ ದಿಕ್ಸೂಚಿ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ಹೇಳಿಕೆಯನ್ನು ಸವಾಲಾಗಿ ಬಿಜೆಪಿ ಸ್ವೀಕರಿಸುತ್ತದೆ. ಫಲಿತಾಂಶ ಕಾದು ನೋಡಿ ದಿಕ್ಸೂಚಿ ಯಾವ ಕಡೆ ಇದೆ ಅಂತ ಗೊತ್ತಾಗುತ್ತೆ ಎಂದು ಹೇಳಿದರು.

ನಮಗೆ ನೂರಕ್ಕೆ ನೂರು ವಿಶ್ವಾಸ ಇದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆದ್ದೇ ಗೆಲ್ಲುತ್ತಾರೆ. ಎರಡನೇ ಬಾರಿ ಮತದಾರರನ್ನ ಭೇಟಿ ಮಾಡಿದ್ದೇನೆ. ಕಾಂಗ್ರೆಸ್‌ನ ಯಾರಾದರೂ ಒಮ್ಮೆಯಾದರೂ, ಒಬ್ಬರನ್ನಾದರೂ ಭೇಟಿ ಮಾಡಿದಾರಾ? ಎಂದು ಪ್ರಶ್ನಿಸಿದರು.

ಹತಾಶಾಭಾವದಲ್ಲಿ ವಿಪಕ್ಷಗಳಿವೆ: ಸಿ.ಟಿ. ರವಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯದಲ್ಲಿ ವಿಪಕ್ಷಗಳು ಹತಾಶಾಭಾವದಿಂದ ಮಾತನಾಡುತ್ತಿವೆ. ಬಿಜೆಪಿ ಅಂಬೇಡ್ಕರ್ ವಿರೋಧಿ, ರೈತ ವಿರೋಧಿ ಎಂದು ದಲ್ಲಾಳಿಗಳ ಪರ ಇರುವ ಕಾಂಗ್ರೆಸ್ ಆರೋಪಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

ಕೊಪ್ಪಳದ ಶಿವಶಾಂತ ಮಂಗಲಭವನದಲ್ಲಿ ಬುಧವಾರ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಪ್ರಚಾರದ ಹಿನ್ನೆಲೆಯಲ್ಲಿ ಮಂಡಲ ಪ್ರಧಾನಿಗಳು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದು ಟ್ರೆಂಡ್ ಸೆಟ್ ಮಾಡುವ ಚುನಾವಣೆ ಅಲ್ಲ, ಮೈಂಡ್‌ಸೆಟ್ ಮಾಡುವ ಚುನಾವಣೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಕಾಂಗ್ರೆಸ್‌ಗೆ ಇತ್ತಿಚೆಗೆ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದು, ಆದರೆ ಭಾರತ, ಕರ್ನಾಟಕದಲ್ಲಿ ಅಲ್ಲ,ಪಾಕಿಸ್ತಾನದಲ್ಲಿ ಗೆಲ್ಲಬಹುದು ಎಂದು ಲೇವಡಿ ಮಾಡಿದರು.

ಮೋದಿಯವರು ಮಾಡಿದ ಪರಿವರ್ತನೆ ಯುಗಕ್ಕೆ ಈ ಚುನಾವಣೆ ನಾಂದಿ ಹಾಕುತ್ತದೆ. ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಳೆಗೆ ಮನೆ ಕುಸಿತ : ಎತ್ತು, ಹೋರಿ ಕರುಗಳನ್ನು ರಕ್ಷಿಸಿದ ಗ್ರಾಮಸ್ಥರು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಯಲಬುರ್ಗಾ : ನಿರಂತರ ಮಳೆಯಿಂದ ತಾಲೂಕಿನ ಕರಮುಡಿ ಗ್ರಾಮದ ವೀರಪ್ಪ ಮಂಡಲಗೇರಿ ಎಂಬುವವರ ಮನೆಯ ದನದ ಕೊಟ್ಟಿಗೆಯ ಛಾವಣಿ ಸಂಪೂರ್ಣ ಕುಸಿದಿದ್ದರಿಂದ ಕೊಟ್ಟಿಗೆಯಲ್ಲಿದ್ದ ಒಂದು ಎತ್ತು, ಎರಡು ಹೋರಿ ಕರುಗಳು ಮಣ್ಣಿನಡಿ ಸಿಲುಕಿದ್ದವು.

ಬೆಲೆಬಾಳುವ ಜಾನುವಾರುಗಳು ಮಣ್ಣಿನಡಿ ಸಿಲುಕಿದ್ದವು. ಗ್ರಾಮದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮಣ್ಣಿನಡಿ ಸಿಲುಕಿದ್ದ ಜಾನುವಾರುಗಳನ್ನು ಹೊರತೆಗೆದು ಅವುಗಳ ಪ್ರಾಣ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಜಾನುವಾರು ಮಾಲೀಕನ ಜತೆಗೆ ಗ್ರಾಮದ ಗ್ರಾಮಸ್ಥರು ಕೂಡಿ ಜಾನುವಾರುಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪಶು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಯಿತು.

ಪರಿಹಾರಕ್ಕೆ ಆಗ್ರಹ : ಮನೆ ಕುಸಿತದಿಂದ ಅಪಾರ ವಸ್ತುಗಳು ಹಾನಿಯಾಗಿದ್ದು ಕುಟುಂಬಕ್ಕೆ ತಾಲೂಕಾಡಳಿತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಯತ್ನಾಳ ನೀಡಿದ್ದು ಅಶಿಸ್ತಿನ ಹೇಳಿಕೆ: ಪಾಟೀಲ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಶಾಸಕ ಬಸನಗೌಡ ಯತ್ನಾಳ ನೀಡಿದ್ದು ಅಶಿಸ್ತಿನ ಹೇಳಿಕೆ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಕೊಪ್ಪಳ ಜಿಲ್ಲೆಯ ಕೊಳೂರಿನಲ್ಲಿ ಬುಧವಾರ ಕುಸಿದ ಬ್ರಿಡ್ಜ್ ಕಮ್ ಬ್ಯಾರೇಜ್ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇನ್ನೂ ಮೂರು ವರ್ಷ ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿ. ಪಕ್ಷದಲ್ಲಿ ಇದ್ದುಕೊಂಡು ವರಿಷ್ಠರ ವಿರುದ್ಧ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಯತ್ನಾಳ ಹೇಳಿಕೆ ವಿರುದ್ಧ ಕಿಡಿ ಕಾರಿದರು.

ಕೃಷಿ ಇಲಾಖೆ ಹಲವು ವರ್ಷಗಳಿಂದ ತುಕ್ಕು ಹಿಡಿದಿತ್ತು. ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಕೆಲವರಿಗೆ ನೋವಾಗುವುದು ಸಹಜ.

ಅನಾಮಧೇಯ ಪತ್ರಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ. ಇಂಥ ವಿಷಯಗಳಿಗೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ, ಪ್ರಕಟ ಮಾಡಿದರೆ ಅಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕೊಳೂರು ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿ ಕಳಪೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರೇ ಕುಸಿದ ಬ್ರಿಡ್ಜ್ ಕಮ್ ಬ್ಯಾರೇಜ್ ದುರಸ್ತಿ ಕೆಲಸ ಮಾಡ್ತಾರೆ ಎಂದು ಅವರು ಹೇಳಿದರು.

ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮತ್ತಿತರರು ಇದ್ದರು.

ಯೋಗ, ಯೋಗ್ಯತೆ ಇದ್ದವರು ಸಮಗ್ರ ಕರ್ನಾಟಕಕ್ಕೆ ಸಿಎಂ ಆಗಲಿ; ಯತ್ನಾಳಗೆ ಸಿ.ಟಿ.ರವಿ ಟಾಂಗ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಸಮಗ್ರ ಕರ್ನಾಟಕದ ಆಶಯಕ್ಕೆ ಮಣ್ಣು ಹಾಕುವ ಕೆಲಸ ಯಾರೂ ಮಾಡಬಾರದು. ಯೋಗ, ಯೋಗ್ಯತೆ ಇರುವ ಯಾರಾದರೂ ಸಮಗ್ರ ಕರ್ನಾಟಕದ ಸಿಎಂ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.


ಕೊಪ್ಪಳ ಗವಿಮಠದ‌ ಗವಿಸಿದ್ದೇಶ್ವರ ಸ್ವಾಮೀಜಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದವರು ಕರ್ನಾಟಕದ ‌ಸಿಎಂ ಆಗಬೇಕು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಹೇಳಿಕೆಗೆ ಪ್ರತಿಕ್ರಿಯೆ‌ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದ ಕೆಲ ವರ್ಷ ಕರ್ನಾಟಕ ನಾಲ್ಕು ಭಾಗವಾಗಿ ಹಂಚಿ ಹೋಗಿತ್ತು.

ನಾಡಿನ ಭಾಷೆ, ಸಂಸ್ಕೃತಿ ಆಧರಿಸಿ, ಇಡೀ ಕರ್ನಾಟಕ ಏಕೀಕರಣವಾಗಿದೆ.‌ ಈ ಹಿನ್ನೆಲೆಯಲ್ಲಿ ಸಮಗ್ರ ಕರ್ನಾಟಕದ ಆಶಯಕ್ಕೆ ಯಾರೂ ಮಣ್ಣು ಹಾಕಬಾರದು ಎಂದು ಪುರುಚ್ಚರಿಸಿದರು.

ಹಾಗಾದ್ರೆ ಯತ್ನಾಳರು ಮಣ್ಣು ಹಾಕಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಹಾಗೆ ಹೇಳಲಾರೆ ಬಸನಗೌಡ ಪಾಟೀಲ್ ಯತ್ನಾಳ ಅವರಷ್ಟು ನಾನು ದೊಡ್ಡವ ಮತ್ತು‌ ಪ್ರೌಡಿಮೆ ಇರುವನಲ್ಲ.‌ ಪಕ್ಷದ ಹಿರಿಯರು ಇದೆಲ್ಲವನ್ನೂ ಸರಿ ಮಾಡುತ್ತಾರೆ ಎಂದರು.

ಕೆಲ ಮಂತ್ರಿಗಳೂ ಕೋವಿಡ್19ನಿಂದ ಬಳಲಿದ್ದರಿಂದ ನೆರೆ ಪರಿಹಾರದಲ್ಲಿ ಒಂದಷ್ಟು ವಿಳಂಭವಾಗ್ತಿದೆ. ಆದರೆ,‌‌‌ ಕಾಂಗ್ರೆಸ್ ‌ನವರು ನೆರೆ ಪರಿಹಾರದ ವಿಷಯದಲ್ಲಿ ಗ್ರಾಮೋ ಫೋನ್ ಕ್ಯಾಸೆಟ್ ರೀತಿಯಲ್ಲಿ ಹಳೆಯ ಕ್ಯಾಸೆಟ್ ‌ಹಾಕ್ತಿದ್ದಾರೆ ಎಂದು ವ್ಯಂಗ್ಯವಾಡಿದರು.‌

ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ, ಡಿಸಿ ಎಸ್.ವಿಕಾಸ ಕಿಶೋರ,‌ ಎಸ್ಪಿ‌ ಟಿ.ಶ್ರೀಧರ ಇದ್ದರು.

ಜಿಲ್ಲೆಯ ವಿವಿಧೆಡೆ ಭಾರಿ ಮಳೆ; ಕೆರೆಯಂತಾದ ರಸ್ತೆಗಳು, ಧರಗುರುಳಿದ ಮಣ್ಣಿನ ಮನೆಗಳು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲಾದ್ಯಂತ ನಿನ್ನೆ ತಡರಾತ್ರಿಯಿಂದ ಸುರಿದ ಭಾರಿ ಮಳೆ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ.

ಮುಂಡರಗಿ ಭಾಗದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲೆಲ್ಲಾ ನೀರು ತುಂಬಿ ಹರಿದು ಕೆರೆಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ರಸ್ತೆ ದಾಟಲು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಭಾರಿ ಮಳೆಗೆ ಹಳೆಯ ಮಣ್ಣಿನ ಗೋಡೆ ಕುಸಿದಿರುವುದು

ಇನ್ನು ಮಳೆಯಿಂದಾಗಿ ಅನೇಕ‌ ಮಣ್ಣಿನ ಮನೆಗಳು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದ್ರಹಳ್ಳಿಯಲ್ಲಿ ತಗ್ಗು ಪ್ರದೇಶದ ಸುಮಾರು 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ರಾತ್ರಿಯಿಡೀ ನೀರು ಹೊರಹಾಕಲು ಗ್ರಾಮಸ್ಥರು ಪರದಾಡಿದರು.

ಮನೆಗೆ ನುಗ್ಗಿದ ನೀರನ್ನು ಹೊರಹಾಕುತ್ತಿರುವುದು

ಇನ್ನು ಮನೆಯಲ್ಲಿನ ವಸ್ತುಗಳು ಸೇರಿದಂತೆ ದವಸ ಧಾನ್ಯಗಳು ನೀರು ಪಾಲಾಗಿವೆ.

ರೋಣ ತಾಲೂಕಿನ ಮೆಣಸಗಿಯಲ್ಲಿ ಮಳೆಯಿಂದಾಗಿ ಕೆಎಸ್ಆರ್ಟಿಸಿ ಬಸ್ ಮಣ್ಣಿನಲ್ಲಿ ಸಿಲುಕಿಕೊಂಡಿತು. ಇದರಿಂದ ಪ್ರಯಾಣಿಕರು ಪರದಾಡಿದ ಘಟನೆಯೂ ನಡೆಯಿತು.

ಮಳೆಯಿಂದ ಹಾಳಾದ ರಸ್ತೆಯನ್ನು ತಾತ್ಕಾಲಿಕವಾಗಿಯಾದರೂ ರಿಪೇರಿ ಮಾಡದ ಜಿಲ್ಲಾಡಳಿತದ ವಿರುದ್ಧ ಜನ್ರು ಹಿಡಿಶಾಪ ಹಾಕಿದರು. ಒಟ್ಟಾರೆ ತಡರಾತ್ರಿಯಿಂದ ಆರಂಭವಾದ ವರುಣನ ಅಟ್ಟಹಾಸಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆಯ ಮಧ್ಯೆಯೂ ಪೊಲೀಸ್ ಹುತಾತ್ಮ ದಿನಾಚರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ಬುಧವಾರ ಪೊಲೀಸ್ ಹುತಾತ್ಮ ದಿನ ಆಚರಿಸಲಾಯಿತು.
ಸುರಿವ ಮಳೆಯ ನಡುವೆಯೂ ಹುತಾತ್ಮ ದಿನ ಆಚರಿಸುವ ಮೂಲಕ ಹುತಾತ್ಮರಾದ ಪೊಲೀಸರಿಗೆ ನಮನ ಸಲ್ಲಿಸಲಾಯಿತು. ನಗರದ ಗಣ್ಯರು, ಪತ್ರಕರ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು, ವರ್ತಕರು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್ ಸುರಳ್ಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಸ್ಪಿ ಟಿ.ಶ್ರೀಧರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹುತಾತ್ಮ ದಿನಾಚರಣೆ ಅಂಗವಾಗಿ ಮಳೆಯ ಮಧ್ಯೆಯೂ ಪೊಲೀಸ್ ಕವಾಯತ್ತು ನಡೆಯಿತು.

ರಾಯಣ್ಣ ಮೂರ್ತಿ ಸ್ಥಾಪನೆ ಹೋರಾಟಕ್ಕೆ ವಿರಾಮ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮುಗಿದ ಬಳಿಕ ಬಳಗಾನೂರಿನಲ್ಲಿ ಸಚಿವ ಕೆ.ಎಸ್. ಈಶ್ವರಪ್ಪನವರು ಹಾಗೂ ಎಲ್ಲ ಸಮಾಜದ ಹಿರಿಯರೊಂದಿಗೆ ಸೌಹಾರ್ದ ಸಭೆ ಕರೆದು ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರತಿಮೆ ಮತ್ತು ಕಾರ್ಯಕ್ರಮದ ಎಲ್ಲ ಖರ್ಚನ್ನು ತಾವೇ ವಹಿಸಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ಭರವಸೆ ನೀಡಿದ ಮೇರೆಗೆ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಮಗೆ ರಾಯಣ್ಣ ಬೇರೆಯಲ್ಲ, ರಾಣಿ ಚನ್ನಮ್ಮ ಬೇರೆಯಲ್ಲ. ತಾಯಿ-ಮಗನ ಅವಿನಾಭಾವ ಸಂಬಂಧ ಎಂತಹದು ಎಂದು ಇತಿಹಾಸವೇ ಹೇಳುತ್ತದೆ. ಹಾಲುಮತ ಮಹಾಸಭಾದಿಂದ 2015ರಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರು ಹಾಗೂ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಇಡುವಂತೆ ಒತ್ತಾಯಿಸುತ್ತಿದ್ದೇವೆಯ ಬಳಗಾನೂರಿನಲ್ಲಿ ಸೂಕ್ತ ಸ್ಥಳದಲ್ಲಿ ರಾಣಿ ಚನ್ನಮ್ಮನ ಮೂರ್ತಿ ಸ್ಥಾಪನೆಗೆ ನಮ್ಮೆಲ್ಲರ ಬೆಂಬಲವಿದೆ ಎಂದು ಹೇಳಿದರು.
ಸೌಹಾರ್ದ ಕಾಪಾಡಲು ಕಾಗಿನೆಲೆ ಶ್ರೀ ಸಂದೇಶ: ರಾಯಣ್ಣ ಮೂರ್ತಿ ಸ್ಥಾಪನೆ ಮಾಡಲು 2017ರಲ್ಲಿ ಬಳಗಾನೂರ ಗ್ರಾ.ಪಂ. ಠರಾವು ಪಾಸ್ ಮಾಡಿದೆ. 2019ರಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಪ್ರತಿಮೆ ಸ್ಥಾಪಿಸಲು ಪರವಾನಿಗೆ ನೀಡಿದ್ದಾರೆ. 2019 ರ ಆಗಸ್ಟ್ 28ರಂದು ದುಷ್ಕರ್ಮಿಗಳು ದಾಳಿ ನಡೆಸಿ, ವೃತ್ತವನ್ನು ತೆರವುಗೊಳಿಸಿದ್ದರು. ಅದೇ ಜಾಗದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸುವಂತೆ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು. ಆದರೆ, ಅವರು ವಿಳಂಬ ಧೋರಣೆ ಅನುಸರಿಸಿದ್ದರಿಂದ ಅ. 17 ರಂದು ಯುವಕರು ಉದ್ವೇಗದಲ್ಲಿ ರಾಯಣ್ಣ ಮೂರ್ತಿಯನ್ನು ಸ್ಥಾಪನೆ ಮಾಡಿದ್ದಾರೆ. ಈ ಬಗ್ಗೆ ಕಾಗಿನೆಲೆ ಶ್ರೀಗಳೂ ಸಂದೇಶ ನೀಡಿ, ಎಲ್ಲರೂ ತಮ್ಮ ನೋವುಗಳನ್ನು ಮರೆತು ಸೌಹಾರ್ದಯುತವಾಗಿ ಬದುಕು ಕಟ್ಟಿಕೊಳ್ಳಲು ಕ್ಷಮಾಗುಣ ಅಗತ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲರೂ ಎಚ್ಚರಿವಹಿಸಬೇಕು ಎಂದು ಸಂದೇಶ ನೀಡಿದ್ದಾರೆ ಎಂದು ರುದ್ರಣ್ಣ ಗುಳಿಗುಳಿ ಹೇಳಿದರು.
ಯುವ ಮುಖಂಡ ರವಿ ದಂಡಿನ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಸಹಕಾರ ಪಡೆದು, ಸರಕಾರದಿಂದ ಅಧಿಕೃತವಾಗಿ ರಾಯಣ್ಣ ಮೂರ್ತಿಯನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಬಳಗಾನೂರ ಗ್ರಾ.ಪಂ. ಮಾಜಿ ಅಧ್ಯಕ್ಷ ಶೇಖಣ್ಣ ಅಗಸಿಮನಿ ಮಾತನಾಡಿ, ಸೋಮವಾರ ಗ್ರಾಮದಲ್ಲಿ ರಾಯಣ್ಣ ಮೂರ್ತಿ ಪ್ರತಿ?ಪನೆ ಕುರಿತು ಶಾಂತಿ ಸಭೆ ಜರುಗಿದ್ದು, ಎಲ್ಲರೂ ಸಮ್ಮಿತಿ ಸೂಚಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಾಲುಮತ ಮಹಾಸಭಾದ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಲ್ಹಾದ ಹೊಸಳ್ಳಿ, ನಿರ್ದೇಶಕಿ ಚೆನ್ನಮ್ಮ ಹುಳಕಣ್ಣವರ, ತಾ.ಪಂ. ಮಾಜಿ ಸದಸ್ಯ ಶೇಖಣ್ಣ ಅಗಸಿಮನಿ, ರಾಘವೇಂದ್ರ ವಗ್ಗನವರ, ಸೋಮನಗೌಡ್ರ ಪಾಟೀಲ, ನಾಗಪ್ಪ ಅಣ್ಣಿಗೇರಿ, ಸುರೇಶ ಗುಲಗಂಜಿ, ಮಹೇಶ ಕೆರಕಲಮಟ್ಟಿ, ಮುತ್ತು ಜಡಿ, ಕುಮಾರ ಮಾರನಬಸರಿ ಉಪಸ್ಥಿತರಿದ್ದರು.

ಹಳೆಯ ಪಿಂಚಣಿ ಯೋಜನೆಯೇ ಇರಲಿ: ಮನವಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ಮಂಗಳವಾರ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ರೋಣ ತಾಲೂಕು ಸಂಘದಿಂದ ಸ್ಥಳೀಯ ಶಾಸಕರ ಜನಸಂಪರ್ಕ ಕಾರ್ಯಾಲಯಲ್ಲಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಮನವಿ ನೀಡಲಾಯಿತು.
ಸಂಘದ ತಾಲೂಕಾಧ್ಯಕ್ಷ ಶರಣು ಪೂಜಾರ ಮಾತನಾಡಿ, ಪಿಂಚಣಿ ನೌಕರರ ಜೀವನದ ಸಂಧ್ಯಾಕಾಲದ ಹಕ್ಕು. ಆದರೆ ಸರ್ಕಾರ ಇತ್ತೀಚೆಗೆ ಹಿಂದಿನ ಪಿಂಚಣಿ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ, ಹೊಸ ಪಿಂಚಣಿ ಯೋಜನೆ ಜಾರಿ ಮಾಡಿದೆ. ಹೀಗಾಗಿ ನಿವೃತ್ತಿ ಅನಂತರ ನೌಕರರ ಸಂಕಷ್ಟದ ದಿನಗಳನ್ನು ಎದುರಿಸುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ತಕ್ಷಣವೇ ಹಳೆ ಪಿಂಚಣಿ ಯೋಜನೆ ಜಾರಿಗೆ ಮಾಡಲು ಮುಂದಾಗಬೇಕು. ಸೇವಾ ಅವಧಿಯಲ್ಲಿ ಕೂಡಿಟ್ಟ ಹಣದಿಂದ ಭವಿಷ್ಯದಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಶಾಸಕರು ನೌಕರರ ಹಳೆಯ ಪಿಂಚಣಿ ಯೋಜನೆಯ ಮರು ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಗೆ ಪತ್ರ: ನೌಕರರ ಮನವಿ ಸ್ವೀಕರಿಸಿದ ಶಾಸಕ ಕಳಕಪ್ಪ ಬಂಡಿ, ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಮನವಿಗೆ ಸ್ಪಂದಿಸುವಂತೆ ತಕ್ಷಣವೇ ಸರ್ಕಾರಕ್ಕೆ ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಗಜೇಂದ್ರಗಡ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ್ ರಾಜೂರ, ಡಿ.ಆರ್. ಮ್ಯಾಗೇರಿ, ಜಯಪ್ರಕಾಶ್ ಭಜಂತ್ರಿ, ಆರ್.ಬಿ. ಮಾಂಡ್ರೆ, ಶಬ್ಬೀರ್ ನಿಶಾನ್ದಾರ, ಸಿದ್ದು ಪಾಡಾ, ಹೀನಾ ಕೌಜಲಗಿ, ಫಮೀದ ಬಡೇಖಾನ್, ಅನ್ನಪೂರ್ಣಾ ಇಟಗಿ, ರಾಮಜಿ ರಡ್ಡೇರ, ಸಂಗಮೇಶ ಕಡಗದ, ಪ್ರಭು ಹಾದಿಮನಿ, ಬಸವರಾಜ ದೇಸಾಯಿಗೌಡ್ರು, ಲೋಹಿತ್ ಮಸೂದೆ ಇದ್ದರು.
 

error: Content is protected !!