Home Blog Page 304

ನಿತೀಶ್ ಕುಮಾರ್ ವರ್ತನೆ ಖಂಡನೀಯ

0

ವಿಜಯಸಾಕ್ಷಿ ಸುದ್ದಿ, ಗದಗ: ಬಿಹಾರ ಸರ್ಕಾರ ಆಯೋಜಿಸಿದ್ದ ಆಯುಷ್ ಕಾರ್ಯಕ್ರಮದ ವೇದಿಕೆಯಲ್ಲಿ ಹಿಜಾಬ್ ಧರಿಸಿದ ಮಹಿಳಾ ವೈದ್ಯರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಸಭ್ಯವಾಗಿ ವರ್ತಿಸಿರುವುದನ್ನು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ ಹೇಳಿದರು.

ಮಹಾಸಭಾದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇದು ಭಾರತೀಯ ಸಂಸ್ಕೃತಿಯ ಲಕ್ಷಣವಲ್ಲ. ಹೀಗೆ ಒಬ್ಬ ಮಹಿಳೆಯ ಒಪ್ಪಿಗೆ ಇಲ್ಲದೆ ಆಕೆಯನ್ನು ಸ್ಪರ್ಶಿಸುವುದು ಮಹಿಳೆಯರಿಗೆ ಮಾಡುವ ಅವಮಾನವಾಗಿದೆ. ನಿತೀಶ್ ಕುಮಾರರು ಸಮಾಜವಾದಿ ತತ್ವದ ಹಿನ್ನೆಲೆಯಿಂದ ಬಂದವರು. ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ರಾಮಕೃಷ್ಣ ಹೆಗಡೆ, ಯು.ಪಿ. ಸಿಂಗ್, ಚಂದ್ರಶೇಖರ್‌ರಂತಹ ಘಟಾನುಘಟಿಗಳ ನಾಯಕತ್ವದಲ್ಲಿ ಬೆಳೆದು ಬಂದವರು. ಇಂತಹ ವರ್ತನೆ ಅವರ ಘನತೆಗೆ ಶೋಭೆ ತರುವಂತದ್ದಲ್ಲ. ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳಲು ಅವರ ಸಂಪುಟದ ಸಚಿವ ಸಂಜಯ್ ನಿಸಾದ್ ಬಳಸಿದ ಅಸಾಂವಿಧಾನಿಕ ಪದಗಳನ್ನು ಯಾವುದೇ ನಾಗರಿಕ ಸಮಾಜವು ಒಪ್ಪದು. ಅವರು ಸಚಿವ ಸ್ಥಾನಕ್ಕೆ ಯೋಗ್ಯರಲ್ಲ. ಮಹಿಳೆಯರಿಗೆ ಗೌರವ ನೀಡದ ಇವರು ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ನೀರಾವರಿಗೆ ಅಕ್ರಮ ನೀರು ಬಳಕೆ; ತನಿಖೆ ನಡೆಸಲು ತಂಡ ರಚನೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ, ಸುವರ್ಣಸೌಧ: ಮಹಾರಾಷ್ಟ್ರ ರಾಜ್ಯವು ನೀರಾವರಿ ಯೋಜನೆಗಳಿಗೆ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯದ ಅಧಿಕಾರಿಗಳ ಪ್ರತ್ಯೇಕ ತಂಡ ರಚನೆ ಮಾಡಿ, ವರದಿ ಪಡೆಯಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಅವರು ವಿಧಾನ ಪರಿಷತ್‌ನಲ್ಲಿ ಶಾಸಕ ಡಾ. ತಳವಾರ್ ಸಾಬಣ್ಣ ಅವರ ನಿಯಮ 33ರ ಸೂಚನೆಗೆ ಉತ್ತರಿಸಿ ಮಾತನಾಡಿದರು.

ಕೃಷ್ಣ ಜಲವಿವಾದ ನ್ಯಾಯಾಧಿಕರಣ-1 (ಬಚಾವತ್ ನ್ಯಾಯಾಧಿಕರಣ) 1976ರಲ್ಲಿ ಅಂತಿಮ ತೀರ್ಪಿನ ಪ್ರಕಾರ ಮಹಾರಾಷ್ಟ್ರ ರಾಜ್ಯವು ಭೀಮಾ ನದಿಯಿಂದ 95 ಟಿಎಂಸಿಗಿಂತ ಹೆಚ್ಚಾಗಿ ನೀರನ್ನು ಬಳಸಬಾರದೆಂದು ಹಾಗೂ 3)(iii) ಪ್ರಕಾರ ಕರ್ನಾಟಕ ರಾಜ್ಯವು ಭೀಮಾ ಮುಖ್ಯ ನದಿಯಿಂದ 15 ಟಿಎಂಸಿಗಿಂತ ಹೆಚ್ಚು ಬಳಸಬಾರದೆಂದು ನಿರ್ಬಂಧವಿದೆ. ಸದರಿ ಅಂತಿಮ ತೀರ್ಪಿನಲ್ಲಿ ಕಣಿವೆ ಮಾಡಿರುವ ಒಟ್ಟಾರೆ ಹಂಚಿಕೆಯಲ್ಲಿ ಯಾವುದೇ ರಾಜ್ಯವು ಇನ್ನೊಂದು ರಾಜ್ಯಕ್ಕೆ ಬಿಡುಗಡೆ ಮಾಡುವ ಕುರಿತು ಆದೇಶವಿಲ್ಲ ಎಂದರು.

ಕರ್ನಾಟಕ ರಾಜ್ಯವು ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2ರ ಮುಂದೆ ಭೀಮಾ ನದಿ ಉಪ ಕೊಳ್ಳದಲ್ಲಿನ ಬಳಕೆಗಾಗಿ 12 ಟಿ.ಎಂ.ಸಿ ಹೆಚ್ಚುವರಿ ನೀರಿನ ಬೇಡಿಕೆಯನ್ನು ಮಂಡಿಸಿತ್ತು. ಆದರೆ ನ್ಯಾಯಾಧಿಕರಣವು ರಾಜ್ಯದ ಬೇಡಿಕೆಯನ್ನು ಪರಿಗಣಿಸಿಲ್ಲ. ಸದರಿ ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2ರ ಆದೇಶವು ಗೆಜೆಟ್ ಪ್ರಕಟಣೆ ಆಗಬೇಕಾಗಿದೆ ಎಂದು ತಿಳಿಸಿದರು.

ಕಳೆದ ವರ್ಷದ ಬೇಸಿಗೆಯಲ್ಲಿ ಭೀಮಾ ನದಿ ನೀರು ಸಂಪೂರ್ಣ ಬತ್ತಿಹೋಗಿದ್ದರಿಂದ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಯ ಜನರ ಕುಡಿಯುವ ನೀರು, ರೈತರ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗಿತ್ತು. ಪ್ರತಿ ವರ್ಷ ಭೀಮಾ ತೀರದ ಜನರು ಒಟ್ಟಾಗಿ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡಿ ಕುಡಿಯಲು ಬೇಕಾಗುವ ನೀರನ್ನು ಬಿಡಿಸಿಕೊಳ್ಳುತ್ತಿದ್ದಾರೆ. ಕನಿಷ್ಠ ಕುಡಿಯುವ ನೀರಿಗೂ ಸಂಕಷ್ಟಕ್ಕೆ ಸಿಲುಕುತ್ತಿರುವ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಯ ಜನರಿಗೆ 15 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಕೆಯಾಗಲು ಹಾಗೂ ಮಹಾರಾಷ್ಟ್ರದ ಅಕ್ರಮ ನೀರಾವರಿ ಯೋಜನೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಕುರಿತು ಡಾ. ತಳವಾರ್ ಸಾಬಣ್ಣ ಅವರು ಕೋರಿದ್ದರು.

ಗದುಗಿನ ಅಲಿ ಪಬ್ಲಿಕ್ ಶಾಲೆಯಲ್ಲಿ ನೂತನ ತರಗತಿ ಕೊಠಡಿ ಉದ್ಘಾಟನೆ

0

ಗದಗ: ಗದುಗಿನ ಅಲಿ ಪಬ್ಲಿಕ್ ಶಾಲೆಯ ಹೊಸ ತರಗತಿ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಅಧ್ಯಕ್ಷ ಖ್ವಾಜಾ ಅಮೇರ್, ಕಾರ್ಯದರ್ಶಿ ದಂಡಿನ್, ಟ್ರಸ್ಟಿಗಳಾದ ಮುಫ್ತಿ ಇನಾಯತುಲ್ಲಾ, ಮೌಲಾನಾ ಜಕಾರಿಯಾ, ಅತ್ತರ್, ಆಡಳಿತಾಧಿಕಾರಿ ಸಾದಿಕ್ ಕಾಜಿ, ಜಾಫರ್ ಕಾಜಿ, ಪ್ರಾಂಶುಪಾಲ ಗುಳೇದಗುಡ್ಡ ಸೇರಿದಂತೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಪ್ಯಾರಾಲಿ ನೂರಾನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಅಸಮತೋಲನ ನಿವಾರಣೆಗೆ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು: ಸಿ.ಎಂ ಸಿದ್ದರಾಮಯ್ಯ

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣಸೌಧ: ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ ಮಹದಾಯಿ ಯೋಜನೆ ರೂಪಿಸಿದ್ದು, 2018ರಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಮಾನಿಸಿದಂತೆ 13.42 ಟಿ.ಎಂ.ಸಿ ನೀರು ಹಂಚಿಕೆ ಮಾಡಲಾಗಿದೆ. ಆದರೆ ಈವರೆಗೂ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಕ್ಲಿಯರೆನ್ಸ್ ನೀಡದೆ ಅಸಹಕಾರ ತೋರುತ್ತಿದೆ. ನಾವು ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿಕೊಂಡು ಕಾಯುತ್ತಿದ್ದೇವೆ. ಹೀಗಾಗಿ ವಿಪಕ್ಷಗಳು ಕೂಡ ಕೇಂದ್ರ ಸರ್ಕಾರದ ಮನವೊಲಿಸಿ, ಯೋಜನೆಗೆ ಕ್ಲಿಯರೆನ್ಸ್ ಕೊಡುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ಸರ್ಕಾರದ ಪರವಾಗಿ ವಿಧಾನಸಭೆಯಲ್ಲಿ ಶುಕ್ರವಾರ ಅವರು ಉತ್ತರ ನೀಡಿದರು.

ಕೃಷ್ಣ ಮೇಲ್ದಂಡೆ 3ನೇ ಹಂತದ ಯೋಜನೆಯಲ್ಲಿ ನಮಗೆ 173 ಟಿ.ಎಂ.ಸಿ. ನೀರು ಹಂಚಿಕೆಯಾಗಿದ್ದು, ಆಲಮಟ್ಟಿ ಜಲಾಶಯವನ್ನು 519 ಮೀನಿಂದ 524 ಮೀಗೆ ಹೆಚ್ಚಿಸಲು ಈಗಾಗಲೇ ಅನುಮತಿ ದೊರೆತಿದೆ. ಇದುವರೆಗೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ. ಯೋಜನೆಗೆ 75 ಸಾವಿರ ಹೆ. ಭೂಮಿಯನ್ನು ಒಂದೇ ಹಂತದಲ್ಲಿ ಸ್ವಾಧೀನಪಡಿಸಿಕೊಂಡು, ತರಿ ಭೂಮಿಗೆ ಪ್ರತಿ ಹೆಕ್ಟೇರ್‌ಗೆ 40 ಲಕ್ಷ ರೂ., ಹಾಗೂ ಖುಷ್ಕಿ ಭೂಮಿಗೆ 30 ಲಕ್ಷ ರೂ. ಕೊಡಲು ನಾವು ಸಿದ್ಧರಿದ್ದು, ಈಗಾಗಲೇ ರೈತರೂ ಒಪ್ಪಿಕೊಂಡಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಒದಗಿಸಲು ನಾವು ಸಿದ್ಧರಿದ್ದೇವೆ, ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ ನಮ್ಮದು ಎಂದರು.

ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪರಿಹಾರ ಕಂಡುಕೊಳ್ಳಲು 2001ರಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಆರ್ಥಿಕ ತಜ್ಞ ಪ್ರೊ. ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಅವರಿಂದ 2002ರಲ್ಲಿ ವರದಿ ಪಡೆಯಲಾಗಿತ್ತು. ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ 39 ತಾಲೂಕು, ಅತಿ ಹಿಂದುಳಿದ 40 ತಾಲೂಕು ಹಾಗೂ 35 ಹಿಂದುಳಿದ ತಾಲೂಕು ಸೇರಿದಂತೆ ಒಟ್ಟು 114 ತಾಲೂಕುಗಳನ್ನು ಹಿಂದುಳಿದ ತಾಲೂಕುಗಳೆಂದು ತಿಳಿಸಿದ್ದರು. ಈ ಪೈಕಿ 27 ತಾಲೂಕುಗಳು ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿವೆ. ಈ ತಾಲ್ಲೂಕುಗಳನ್ನು ಅಭಿವೃದ್ಧಿಪಡಿಸಲು 8 ವರ್ಷಗಳಲ್ಲಿ 31 ಸಾವಿರ ಕೋಟಿ ರೂ. ಒದಗಿಸಿ, ಅಸಮತೋಲನ ನಿವಾರಿಸಬೇಕು ಎಂದಿದ್ದರು.

ಆದರೆ 31 ಸಾವಿರ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಹಣ ಹಿಂದುಳಿದ ತಾಲೂಕುಗಳಲ್ಲಿ ಖರ್ಚಾಗಿದೆ. ನಂಜುಂಡಪ್ಪ ಅವರ ವರದಿಯಂತೆ ಹಿಂದುಳಿದ ತಾಲೂಕುಗಳಿಗೆ ಹಣ ನೀಡಿ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು, ಇದರ ಬಳಿಕ ಈ ತಾಲೂಕುಗಳಲ್ಲಿ ಅಭಿವೃದ್ಧಿಯಾಗಿವೆಯೇ ಇಲ್ಲವೆ ಎಂಬುದರ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯವಿದೆ ಎಂದು ತೀರ್ಮಾನಿಸಿ ಉತ್ತರ ಕರ್ನಾಟಕದವರೇ ಆದ ಹಿರಿಯ ಆರ್ಥಿಕ ತಜ್ಞ ಪ್ರೊ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೇವೆ. ಜನವರಿ ತಿಂಗಳ ಅಂತ್ಯದೊಳಗೆ ಈ ಸಮಿತಿಯು ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ನಡುವೆ ಇರುವ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನಮ್ಮ ಸರ್ಕಾರ ಬದ್ಧವಿದ್ದು, ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಎಳ್ಳ ಅಮವಾಸ್ಯೆ; ಭೂತಾಯಿಗೆ ಚರಗ ಚೆಲ್ಲಿ ಸಾಮೂಹಿಕ ಭೋಜನದ ಸವಿಯುಂಡ ಅನ್ನದಾತ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ತಾಲೂಕಿನ ಭಾಗದ ರೈತರು ಹೊಲಗಳಲ್ಲಿ ಹಚ್ಚ ಹಸಿರಿನ ಬೆಳೆಗಳ ಮಧ್ಯೆ ಭೂಮಿ ತಾಯಿಯ ಪೂಜೆ ಮಾಡಿ, ಉಡಿ ತುಂಬಿ ಪ್ರಾರ್ಥಿಸಿ, ಚರಗ ಸಮರ್ಪಿಸುವ ಹಾಗೂ ಸಾಮೂಹಿಕ ಭೋಜನ ಸವಿಯುವ ಪರಂಪರೆಯ ಪ್ರತೀಕದ ಎಳ್ಳ ಅಮವಾಸ್ಯೆ ಹಬ್ಬ ರೈತರಿಗೆ ಸಂಭ್ರಮದ ದಿನ.

ಹಿಂಗಾರು ಹಂಗಾಮಿನ ಬಿಳಿಜೋಳ ಮುಂತಾದ ಬೆಳೆಗಳು ಹುಲುಸಾಗಿ ಬೆಳೆಯಲಿ ಮತ್ತು ಎಳ್ಳಿನಷ್ಟಾದರೂ ಭಕ್ತಿ ಭೂರಮೆಯ ಮೇಲಿರಲಿ ಎಂದು ಪ್ರಾರ್ಥಿಸುವ ಹಬ್ಬವೇ ಎಳ್ಳ ಅಮವಾಸ್ಯೆ. ಚಳಿಯ ಏರಿಳಿತದ ಅವಧಿಯಲ್ಲಿ ಆಚರಿಸುವ ಈ ಹಬ್ಬಕ್ಕೆ ಎಳ್ಳ ಅಮವಾಸ್ಯೆ ಹೆಸರು ಬಂದಿರಬಹುದು ಎಂಬುದು ಹಿರಿಯರ ಅಭಿಪ್ರಾಯ. ಹಬ್ಬದ ಸಂದರ್ಭದಲ್ಲಿ ಬಿಳಿಜೋಳ ಮತ್ತು ಗೋಧಿ ತೆನೆಗಳು ಹೊರಬರುವ ತವಕದಲ್ಲಿರುವುದು ಸಮೃದ್ಧ ಬೆಳೆಯ ಸಂಕೇತ. ರೈತರು ಸೀಮಂತ ಮಾದರಿಯಲ್ಲಿ ಹೊಲದ ಕೊಂಪಿಯಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಪಾಂಡವರಿಗೆ ಮತ್ತು ಲಕ್ಷ್ಮೀದೇವಿಗೆ ನೈವೇದ್ಯ ಅರ್ಪಿಸಿ ಬೆಳೆಗೆ ಯಾವುದೇ ರೋಗ ಬಾಧೆಯಾಗದಿರಲಿ ಹಾಗೂ ಉತ್ತಮ ಫಸಲು ಬರಲೆಂದು ಪ್ರಾರ್ಥಿಸಿದರು.

ಹಬ್ಬದಂದು ಚರಗ ಚೆಲ್ಲುವ ಸಂಪ್ರದಾಯ ಪ್ರಾಚೀನ ಕಾಲದಿಂದ ಬಂದಿದೆ. ಇದರ ಬಳಿಕ ಎಲ್ಲರ ಸಾಮೂಹಿಕ ಭೋಜನ. ಈ ಭಾಗದ ಎಲ್ಲರ ಮನೆಯಲ್ಲಿ ಎಳ್ಳ ಅಮವಾಸ್ಯೆ ದಿನದಂದು ಮಾಡುವ ವಿಶೇಷ ಖಾದ್ಯಗಳಿಗೆ ಸಾಟಿಯಿಲ್ಲ. ಬೆಳಗ್ಗೆ ತಮ್ಮ ಮನೆಗಳಲ್ಲಿ ವಿವಿಧ ಖಾದ್ಯಗಳ ಅಡುಗೆ ತಯಾರಿಸಿ, ಹೊಲಕ್ಕೆ ತೆರಳಿ ಹಸಿರು ಸೀರೆಯನ್ನುಟ್ಟ ಭೂತಾಯಿಗೆ ಉಡಿ ತುಂಬಿ, ಪೂಜಿಸಿ, ಎಲ್ಲರೂ ಒಂದೆಡೆ ಕುಳಿತು ಮೃಷ್ಟಾನ್ನ ಭೋಜನ ಸವಿದರು.

ಹೊಲಕ್ಕೆ ತೆರಳಿದ ಮಹಿಳೆಯರು ಅಡುಗೆ ಬಿಚ್ಚಿಟ್ಟು ಹೊಲದಲ್ಲಿರುವ ಐದು ಜೋಳದ ದಂಟು, ಚಿಕ್ಕ ಐದು (ಪಂಚ ಪಾಂಡವರು) ಕಲ್ಲುಗಳನ್ನು ಹುಡುಕಿ ತಂದು ಪೂಜಿಸಿ, ಭೂತಾಯಿಗೆ ಪ್ರಾರ್ಥಿಸಿ, ಉಡಿ ತುಂಬಿ, ನೈವೇದ್ಯ ಅರ್ಪಿಸಿದ ಬಳಿಕ ಹೊಲದ ತುಂಬೆಲ್ಲ ನೈವೇದ್ಯ ರೂಪದಲ್ಲಿರುವ ಮೃಷ್ಟಾನ್ನ ಎಡೆ ಚರಗ ಚೆಲ್ಲಿದರು. ಹೊಲಕ್ಕೆ ಹೋದ ಮನೆ ಮಂದಿ, ಬೀಗರು ಹಾಗೂ ಅಕ್ಕ-ಪಕ್ಕದ ಮನೆಯವರು, ಜಮೀನಿನ ಸಮೀಪ ಹಾದುಹೋಗುವ ಅಪರಿಚಿತರನ್ನೂ ಕರೆದು, ಒಟ್ಟಿಗೆ ಕುಳಿತು ಭೋಜನ ಸವಿದು ಸಂಭ್ರಮಿಸಿದರು.

ಉಚಿತ ಬಿತ್ತನೆ ಬೀಜಕ್ಕೆ 1 ಸಾವಿರ ರೂ ಪಡೆದು ಭ್ರಷ್ಟಾಚಾರವೆಸಗಿದರೇ ಅಧಿಕಾರಿಗಳು?

0

ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಉಚಿತವಾಗಿ ವಿತರಿಸಬೇಕಿದ್ದ ಶೇಂಗಾ ಬಿತ್ತನೆ ಬೀಜವನ್ನು ಡಂಬಳ ಹೋಬಳಿಯ ರೈತರಿಗೆ ಸೂಕ್ತ ಮಾಹಿತಿ, ಪ್ರಕಟಣೆಯನ್ನು ನೀಡದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿಜವಾದ ರೈತರಿಗೆ ವಿತರಿಸದೆ, ಗ್ರಾಮದ ಕೆಲ ಶ್ರೀಮಂತ ರೈತರಿಗೆ, ತಮಗೆ ಬೇಕಾದವರಿಗೆ ಮಾತ್ರ ಎಪಿಎಂಸಿಯಲ್ಲಿ ನೀಡಲಾಗಿದೆ ಮತ್ತು ಯಾವುದೇ ಆದೇಶ ಇಲ್ಲದಿದ್ದರೂ ರೈತರಿಗೆ ಬಿಲ್ ಕೂಡಾ ನೀಡದೆ ಸಾವಿರ ರೂಗಳನ್ನು ಪಡೆದುಕೊಂಡು ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದಾರೆ. ಇದರ ಬಗ್ಗೆ ಸೂಕ್ತ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ರೈತರು ಕೃಷಿ ಅಧಿಕಾರಿ ಎಸ್.ಬಿ. ರಾಮೇನಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಯಾವುದೇ ಆದೇಶ ಇಲ್ಲದೆ ಇದ್ದರು ಕೂಡಾ ಲಿಂಕ್ ಎಂದು ಹೇಳಿ 1 ಸಾವಿರ ರೂ ಪಡೆದು ಚಿಂಕ್, ಬೋರ್ಯಾಕ್ಸ್, ಟಾನಿಕ್, ಟ್ರೇಕೊಡರ್ಮಾ, ವಿಮಾಮಿಟ್, ಬಿಂಜಾಯಿಟ್ ವಿತರಿಸಿ, ಬಿಲ್ ಕೂಡ ನೀಡದೆ ರೈತರಿಂದ ಹೆಚ್ಚು ಹಣವನ್ನು ಪಡೆದುಕೊಂಡಿದ್ದು, ಹಾಡ ಹಗಲೇ ರೈತರನ್ನು ಲೂಟಿ ಮಾಡಿದ್ದಾರೆ. ಕಡಿಮೆ ಹಿಡುವಳಿ ಇರುವ ರೈತರಿಗೆ 60 ಕೆಜಿ ಕೊಡಬೇಕು. ಆದರೆ, ಇದು ವಿತರಣೆಯಾಗಿಲ್ಲ. ಇದರ ಕುರಿತು ಸೂಕ್ತ ತನಿಖೆಯನ್ನು ಮಾಡಬೇಕು. ಹಿರಿಯ ಅಧಿಕಾರಿಗಳು ತನಿಖೆಗೆ ಮುಂದಾಗಿ ರೈತರಿಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ರೈತರಾದ ಪ್ರಕಾಶ ಮೇಗೂರ, ಪುಂಡಲೀಕ ಪಾರಪ್ಪನವರ, ಆದಿತ್ಯ ಗದಗಿನ, ಮಲ್ಲಪ್ಪ ಹರಿಜನ, ವಿ.ಆರ್. ಗದಗಿನ, ಬಿ.ಎಸ್. ಮೇಗೇರಿ, ಬಿ.ವಾಯ್. ಯಲಭೋವಿ, ಎಸ್.ಎಮ್. ವಲ್ಲೇನ್ನವರ, ಸೋಯಲ್ ತಾಂಬೋಟಿ, ಬುಡ್ನೆಸಾಬ ಜಲಾಲನವರ, ಶ್ರೀಧರ ಪಲ್ಲೇದ, ಎ.ಎಮ್. ತಾಂಬೋಟಿ, ಭರಮಪ್ಪ ಮಂಗೋಜಿ, ಶ್ರೀಕಾಂತ ಶಿರಿಗೇರಿ ಮುಂತಾದ ರೈತರು ಮನವಿ ಸಲ್ಲಿಸಿದರು.

ತಾಲೂಕಾಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ಉಚಿತ ಶೇಂಗಾ ಬಿತ್ತನೆ ಬೀಜವನ್ನು ರೈತರಿಗೆ ನೀಡಲಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಪಡೆಯಲಾಗಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಡಂಬಳ ರೈತ ಸಂಪರ್ಕ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ ರೈತರಿಗೆ ವಿವರಿಸಿದರು.

ಡಂಬಳ ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಉಚಿತ ಶೇಂಗಾ ಬಿತ್ತನೆ ಬೀಜವನ್ನು ನೀಡಿದ್ದು, 1 ಸಾವಿರ ರೂ ಬೀಜೋಪಚಾರದ ಔಷಧಕ್ಕಾಗಿ ಪಡೆಯಲಾಗಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ.

ಪ್ರಾಣೇಶ ಮುಂಡರಗಿ.
ತಾಲೂಕಾ ಕೃಷಿ ಅಧಿಕಾರಿ.

“ಡಂಬಳ ಹೋಬಳಿಯ ಯಾವುದೇ ರೈತರಿಗೆ ಈ ಬಗ್ಗೆ ಸೂಕ್ತ ಮಾಹಿತಿ ತಿಳಿಸಿಲ್ಲ. ನಿಜವಾದ ಫಲಾನುಭವಿಗಳಿಗೆ ಬೀಜ ವಿತರಣೆಯಾಗಿಲ್ಲ. ಸರಕಾರದಿಂದ ಆದೇಶ ಇರದಿದ್ದರೂ ಕೂಡಾ ಬಿಲ್ ನೀಡದೇ ಹಣ ಪಡೆಯಲಾಗಿದೆ ಮತ್ತು ಕಡಿಮೆ ಹಿಡುವಳಿಯ ಕಡು ಬಡವ ರೈತರಿಗೆ ಮಾನ್ಯತೆ ನೀಡದೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರಾತೋರಾತ್ರಿ ಉಚಿತ ಬೀಜ ನೀಡಿದ್ದು ಬಹುತೇಕ ಶ್ರೀಮಂತರ ಕೈಸೇರಿದೆ. ಇದರ ಕುರಿತು ಸೂಕ್ತ ತನಿಖೆ ನಡೆಸಬೇಕು”

ಆದಿತ್ಯ ಗದಗಿನ.
ಡಂಬಳ ಗ್ರಾಮದ ಯುವ ರೈತ.

ತಾಲೂಕಿನಾದ್ಯಾಂತ ಎಳ್ಳ ಅಮವಾಸ್ಯೆ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ತಾಲೂಕಿನಾದ್ಯಾಂತ ಅನ್ನದಾತರ ಹಬ್ಬ ಎಳ್ಳ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಬಾರಿ ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಬೆಳೆಗಳು ಕೈಕೊಟ್ಟರೂ ಸಹ ಎಳ್ಳ ಅಮವಾಸ್ಯೆ ಹಬ್ಬದ ಮೇಲೆ ಪರಿಣಾಮ ಬೀರಿಲ್ಲ. ಜಮೀನುಗಳಲ್ಲಿ ಬೆಳೆಯಲಾದ ಬೆಳೆಗಳಿಗೆ ನಮಿಸಿದ ರೈತರು ವಿಶೇಷ ಪೂಜೆಯನ್ನು ಸಲ್ಲಿಸಿ ಚರಗ ಚೆಲ್ಲಿದರು. ಜಮೀನುಗಳಲ್ಲಿರುವ ಬನ್ನಿ ಮರಕ್ಕೂ ಸಹ ಪೂಜೆಯನ್ನು ಸಲ್ಲಿಸಿ ಬೆಳೆಗಳು ಹುಲುಸಾಗಿ ಬರಲಿ ಎಂದು ಪ್ರಾರ್ಥಿಸಿದರು.

ಹಬ್ಬದ ನಿಮಿತ್ತ ರೈತರು ಎತ್ತಿನ ಬಂಡಿಗಳಿಗೆ ಅಲಂಕಾರ ಮಾಡಿ ಜಮೀನುಗಳಿಗೆ ತೆರಳುತ್ತಿರುವ ದೃಶ್ಯ ಗ್ರಾಮೀಣ ಭಾಗಗಳಲ್ಲಿ ಕಂಡುಬಂದಿತು. ಜಾತಿ-ಧರ್ಮಗಳ ಭೇದವಿಲ್ಲದೆ ಎಲ್ಲರೂ ಸೇರಿಕೊಂಡು ಎಳ್ಳ ಅಮವಾಸ್ಯೆ ಹಬ್ಬವನ್ನು ಆಚರಿಸಿದರು.

ಬಾಲ ಪ್ರತಿಭೆಗಳಿಗೆ ಶರಣ ಸಿರಿ ಸಂಭ್ರಮ

ಸಮಾನತೆಯ ಬೆಳಕಿನಲ್ಲಿ ಸದೃಢ, ಸುಂದರ, ವ್ಯಕ್ತಿ, ವ್ಯಕ್ತಿತ್ವ, ಸಮಾಜ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡಿದ ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಬಸವಾದಿ ಶಿವಶರಣರ ಎಲ್ಲ ವಿಚಾರಧಾರೆಗಳು ಮನುಕುಲದ ಉನ್ನತಿಗೆ ಬೆಳಕಾಗಿವೆ. ಸುಜ್ಞಾನದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಶರಣರ ವಿಚಾರಗಳೆಲ್ಲವೂ ಸರ್ವಕಾಲಕ್ಕೂ ಅತ್ಯವಶ್ಯಕವಾಗಿ ಬೇಕಾಗಿರುವ ಮೌಲ್ಯಗಳಾಗಿವೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಾಡಿನಾದ್ಯಂತ ಶರಣರ ವಿಚಾರಧಾರೆಗಳನ್ನು ಬಿತ್ತರಿಸುವ ಕಾರ್ಯ ಮಾಡುತ್ತಿದೆ. ಶರಣ ಸಾಹಿತ್ಯ ಪರಿಷತ್ತಿನ ಅಶೋತ್ತರಗಳಂತೆ, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಗದಗ ಜಿಲ್ಲಾ ಪ್ರಥಮ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡಿದ್ದು ಹಲವಾರು ವೈಶಿಷ್ಟ್ಯತೆಗಳ ಸಮಾಗಮವಾಗಿದೆ.

ಪರಿಷತ್ತಿನ ಗೌರವಾಧ್ಯಕ್ಷರಾಗಿರುವ ಪರಮಪೂಜ್ಯ ಸುತ್ತೂರಿನ ಶ್ರೀಗಳು ಹಾಗೂ ಗದುಗಿನ ತೋಂಟದಾರ್ಯ ಮಠದ ಪರಮಪೂಜ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ. ಸಿ. ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಕದಳಿ ಮಹಿಳಾ ವೇದಿಕೆಯ ರಾಜ್ಯ ಸಂಚಾಲಕರಾದ ಸುಶೀಲಾ ಸೋಮಶೇಖರ್ ಅವರ ಸಹಕಾರದೊಂದಿಗೆ ಗದಗ ಜಿಲ್ಲೆಯಲ್ಲಿ ಇಂತಹ ವಿನೂತನವಾದ ಕಾರ್ಯಕ್ರಮ ನೆರವೇರುತ್ತಿದೆ.

ಮೌನ ತಪಸ್ವಿಗಳ ಸುಕ್ಷೇತ್ರ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠ ಬಳಗಾನೂರಿನಲ್ಲಿ ಪೂಜ್ಯ ಶ್ರೀ ಶಿವಶಾಂತವೀರ ಶರಣರ ಆಶೀರ್ವಾದ ಮಾರ್ಗದರ್ಶನ, ಸಲಹೆ-ಸೂಚನೆಗಳಂತೆ ಈ ಕಾರ್ಯಕ್ರಮ ಅವರ ಸೃಜನಾತ್ಮಕ ಚಿಂತನೆಯ ಪ್ರತಿಫಲವಾಗಿ ಆಯೋಜನೆಯಾಗಿದೆ. ಶ್ರೀ ದೊರೆಸ್ವಾಮಿ ಮಠ ಬೈರನಹಟ್ಟಿಯ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಬೂದೀಶ್ವರ ಸಂಸ್ಥಾನಮಠದ ಶ್ರೀ ಮ.ನಿ.ಪ್ರ. ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಮಕ್ಕಳಿಗಾಗಿ ನಡೆಯುವ ಈ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪ್ರಣತಿ ರಾಜೇಂದ್ರ ಗಡಾದ ಅವರು ಅಪರೂಪದ ಪ್ರತಿಭಾವಂತರು. ಸಾಹಿತಿಗಳಾದ ಡಾ. ರಾಜೇಂದ್ರ ಗಡಾದವರ ಸುಪುತ್ರಿ ಪ್ರಣತಿ ಗಡಾದ ಅವರ ತಂದೆ-ತಾಯಿಗಳಂತೆ ಸಾಹಿತ್ಯ ಆಸಕ್ತಿಯನ್ನು ಹೊಂದಿದವರು. ಕಥೆ, ಕವನ, ಚುಟುಕು ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬರವಣಿಗೆಯ ಹವ್ಯಾಸವನ್ನು ಹೊಂದಿರುವ ಕ್ರಿಯಾಶೀಲ ಬರಹಗಾರ್ತಿ.

ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಬಾಲ ಪ್ರತಿಭೆಗಳನ್ನು ಗುರುತಿಸಿ ಈ ಸಮ್ಮೇಳನದಲ್ಲಿ `ಬಾಲ ಶರಣ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಜಿಲ್ಲೆಯ 7 ತಾಲೂಕುಗಳು ಹಾಗೂ ಒಂದು ಗ್ರಾಮೀಣ ಘಟಕವನ್ನು ಒಳಗೊಂಡು ಎಂಟು ಮಕ್ಕಳನ್ನು ಆಯ್ಕೆ ಮಾಡಿ ಅವರ ವಿಶೇಷ ಸಾಮರ್ಥ್ಯಕ್ಕೆ ಎಲ್ಲ ಶರಣ ಬಂಧುಗಳ, ಪರಮಪೂಜ್ಯರ ಸಮ್ಮುಖದಲ್ಲಿ ಸತ್ಕರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ.

ಗದಗ ಶಹರ ಘಟಕದಿಂದ ಡಾ. ವೈದೃತಿ ನಾ. ಕೊರಿಶೆಟ್ಟರ್ ಆಯ್ಕೆಯಾಗಿದ್ದು, ಅಸಾಧಾರಣ ನೆನಪಿನ ಶಕ್ತಿಯನ್ನು ಹೊಂದಿದ ಈ ಪುಟಾಣಿ ತನ್ನ 7ನೇ ವರ್ಷದಲ್ಲಿ 5 ಸಾವಿರ ಪ್ರಶ್ನೆಗಳಿಗೆ ಉತ್ತರಿಸಿದ್ದು, ಚೆನ್ನೆನ ದಿ ಯುನಿವರ್ಸಲ್ ವಿಶ್ವವಿದ್ಯಾಲಯದವರು ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್, ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದಾರೆ.

ಶಿರಹಟ್ಟಿ ತಾಲ್ಲೂಕಿನಿಂದ ಆಯ್ಕೆಯಾದ ಪುನೀತ್ ರೆಡ್ಡಿ ಎನ್.ಎ 9ನೇ ತರಗತಿಯಲ್ಲಿ ಓದುತ್ತಿರುವ, ಬಹುಮುಖ ಪ್ರತಿಭೆಯನ್ನು ಹೊಂದಿದ್ದಾನೆ. ದೊಡ್ಡಬಳ್ಳಾಪುರದಲ್ಲಿ 2025ರ ಅಕ್ಟೋಬರ್ 1ರಿಂದ 9ರವರೆಗೆ ನಡೆದ ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಭಾರತ ಹಾಗೂ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ವಿಜ್ಞಾನಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು, ಸ್ವತಃ ತಾನೇ ಟೆಲಿಸ್ಕೋಪ್ ತಯಾರಿಸಿ ದಾಖಲೆ ಬರೆದಿದ್ದಾನೆ.

ಗದಗ ಗ್ರಾಮೀಣ ಘಟಕದಿಂದ ಆಯ್ಕೆಯಾದ ಸಿದ್ದಾರ್ಥ್ ಬಡ್ನಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ, ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಥೈಲ್ಯಾಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ನರಗುಂದ ತಾಲೂಕಿನಿಂದ ಆಯ್ಕೆಯಾದ ಅಪೂರ್ವ ವಡ್ಡರ್ ವಿಶೇಷ ಪ್ರತಿಭೆಯಾಗಿದ್ದು, ರಾಜ್ಯಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಸತತವಾಗಿ ಮೂರು ಬಾರಿ ಪ್ರಥಮ ಸ್ಥಾನ ಪಡೆದು 500ರವರೆಗೆ ಮಗ್ಗಿಗಳನ್ನು ತಪ್ಪಿಲ್ಲದೆ ಹೇಳುವುದು, ಕೇವಲ ಎಂಟು ನಿಮಿಷದಲ್ಲಿ 193 ಲೆಕ್ಕಗಳನ್ನು ಬಿಡಿಸಿ ಪ್ರಥಮ ಸ್ಥಾನ ಪಡೆದು ಸಾಧನೆಗೈದಿದ್ದಾಳೆ.

ಮುಂಡರಗಿ ತಾಲ್ಲೂಕಿನಿಂದ ಆಯ್ಕೆಯಾದ ರಕ್ಷಿತಾ ಚುರ್ಚಿಹಾಳ್ ಜಪಾನಿನ ಟೋಕಿಯೋದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹಾಟ್ ಕುಕಿಂಗ್ ವ್ಯಸಲ್ ಕಿಟ್ ಎಂಬ ಪ್ರಾಜೆಕ್ಟ್ನ್ನು ಮಂಡಿಸಿ ಬಹುಮಾನ ಪಡೆದಿದ್ದಾರೆ.

ಗಜೇಂದ್ರಗಡ ತಾಲ್ಲೂಕಿನಿಂದ ಆಯ್ಕೆಯಾದ ಪೂರ್ವಿ ಜೋಶಿ ಬೆಳಗಾವಿ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಕ್ತಿಗೀತೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದು ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಜೊತೆಗೆ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಹಾಗೂ ಅಣುಕು ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ.

ರೋಣ ತಾಲ್ಲೂಕಿನಿಂದ ಆಯ್ಕೆಯಾದ ಥಲಕೇಶ್ ಪಾಟೀಲ್ ಅತಿ ಚಿಕ್ಕ ವಯಸ್ಸಿನಿಂದಲೇ ಓದು-ಬರಹ, ಲೆಕ್ಕ ವಿಷಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿ, ಪ್ರಾಚ್ಯ ಪ್ರಜ್ಞೆ ರಸಪ್ರಶ್ನೆ, ವಿಜ್ಞಾನ ರಸಪ್ರಶ್ನೆ, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ ಹಂತದಲ್ಲಿ ಬಹುಮಾನ ಪಡೆದು ರಾಜ್ಯ ಮಟ್ಟದವರೆಗೂ ಭಾಗವಹಿಸಿದ್ದು ವಿಶೇಷವಾಗಿದೆ.

ಲಕ್ಷ್ಮೇಶ್ವರ ತಾಲ್ಲೂಕಿನಿಂದ ಆಯ್ಕೆಯಾದ ಕೃಷ್ಣಪ್ರಿಯಾ ಬದಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿ, ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕಲಾಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಚಿತ್ರಕಲೆ, ಯೋಗಾಸನ, ಕ್ರಾಫ್ಟ್, ವಚನ ಕಂಠಪಾಠ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಗೈದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ಎಂಟು ಮಕ್ಕಳ ವಿಶೇಷ ಸಾಧನೆಯ ಸಮಾಗಮವಾದ ಈ ಸಮ್ಮೇಳನದಲ್ಲಿ `ಜಿಲ್ಲಾ ಬಾಲ ಶರಣ ಸಿರಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತಿದೆ.

ಸಮ್ಮೇಳನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಎ. ಬಳಿಗೇರವರು ಶ್ರಮಿಸಿದ್ದಾರೆ. ಇವರ ಜೊತೆಗೂಡಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಎಲ್ಲ ತಾಲೂಕಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷರು, ಎಲ್ಲ ತಾಲ್ಲೂಕುಗಳ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು ಸಹಕರಿಸಿದ್ದಾರೆ. ಇಂತಹ ವಿನೂತನವಾದ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯ ಪರಮಪೂಜ್ಯರು, ಎಲ್ಲ ಶರಣ ಬಂಧುಗಳು ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಎಲ್ಲ ಶರಣ ಬಂಧುಗಳಿಗೆ ಧನ್ಯವಾದಗಳು.

ಸುಧಾ ಹುಚ್ಚಣ್ಣವರ
ಜಿಲ್ಲಾಧ್ಯಕ್ಷರು, ಕದಳಿ ಮಹಿಳಾ ವೇದಿಕೆ

ಜಾತ್ರಾ ಮಹೋತ್ಸವದ ಷಟಸ್ಥಲ ಧ್ವಜಾರೋಹಣ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಷಟಸ್ಥಲ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಅದರಿಂದ ಮಾತ್ರ ಭವ ಬಂಧನದಲ್ಲಿ ಮುಕ್ತಿಹೊಂದಲು ಸಾಧ್ಯ ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚನ್ನಬಸವ ಸ್ವಾಮೀಜಿ ಹೇಳಿದರು.

ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ 175ನೇ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಮಾನವ ಜನ್ಮವೇ ದೊಡ್ಡ ಸಂಪತ್ತು. ಷಟಸ್ಥಲದ 6 ನಿಯಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಪಾವನವಾಗುತ್ತದೆ. ಶಿವನ ಆರು ಸ್ಥಲಗಳನ್ನು ಪ್ರತಿನಿಧಿಸುವ ಧ್ವಜವನ್ನು ಎತ್ತರಕ್ಕೆ ಹಾರಿಸುವ ಕಾರ್ಯಕ್ರಮವೇ ಷಟಸ್ಥಲ ಧ್ವಜಾರೋಹಣವಾಗಿದೆ. ಇದು ಧಾರ್ಮಿಕ ಉತ್ಸವಗಳಲ್ಲಿ, ಪೀಠಗಳ ಮಹೋತ್ಸವಗಳಲ್ಲಿ, ಅಥವಾ ವೀರಶೈವ ಸಮಾಜದ ಕಾರ್ಯಕ್ರಮಗಳಲ್ಲಿ ನಡೆಯುತ್ತದೆ. ಇದು ಭಕ್ತಿ, ಶರಣ ಸಂಸ್ಕೃತಿ ಮತ್ತು ಶಿವನ ತತ್ವಗಳ ಪಾವಿತ್ರತೆಯನ್ನು ಸಾರುತ್ತದೆ. ಹಾಲಕೆರೆಯ ಶ್ರೀಪೀಠದ ಎಲ್ಲ ಗುರುಗಳು ಷಟಸ್ಥಲ ಮಾರ್ಗವನ್ನು ಅನುಸರಿಸಿ ಎಲ್ಲ ಭಕ್ತರನ್ನು ಸಮಾನವಾಗಿ ಕಂಡು ಅವರ ಉದ್ಧಾರಕ್ಕೆ ಕಾರಣವಾದರು, ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದರು. ಅದೇ ಮಾರ್ಗದಲ್ಲಿ ನಾವು ನಡೆದುಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಇಂದಿನ ಪೀಠಾಧಿಪತಿಗಳಾದ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳು ಶ್ರೀಮಠದಲ್ಲಿ ಆಧ್ಯಾತ್ಮದ ಚಿಂತನೆ ಸದಾ ಕಾಲ ಉಳಿಯುವಂತೆ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.

ಮರಿಕೊಟ್ಟೂರ ದೇಶಿಕರು, ಗ್ರಾ.ಪಂ ಅಧ್ಯಕ್ಷ ಗಿರಿಯಪ್ಪಗೌಡ ಮುಲ್ಕಿಪಾಟೀಲ, ಉಪಾಧ್ಯಕ್ಷ ಬಾಳಪ್ಪ ತಲೇಖಾನ, ವೀರಣ್ಣ ಹಳ್ಳಿ, ಬಸವರಾಜ ಮೇಟಿ ಸೇರಿದಂತೆ ಇತರರಿದ್ದರು.

ಶಾಲಾ ವಾಹನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ- ದೊಡ್ಡೂರ ರಸ್ತೆಯ ನಡುವೆ ಬುಧವಾರ ಖಾಸಗಿ ಶಾಲೆಯ ನಾಲ್ಕು ವರ್ಷದ ಪುಟ್ಟ ಕಂದನ ಸಾವು ಪಾಲಕರಲ್ಲಿ ಭಯ ಮೂಡಿಸಿದೆ. ಇದರಿಂದ ಖಾಸಗಿ ಶಾಲಾ ವಾಹನಗಳಲ್ಲಿ ಸಂಚರಿಸುವ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಶಾಲಾ ವಾಹನಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಾಲಕರು ಹಾಗೂ ಶಿಕ್ಷಣ ಪ್ರೇಮಿಗಳು ಶುಕ್ರವಾರ ಬೆಳಿಗ್ಗೆ ಸೂರಣಗಿ ಗ್ರಾಮದಲ್ಲಿ ಬಸ್ ತಡೆದು ವಿನಂತಿ ಅರ್ಜಿ ಸಲ್ಲಿಸಿದರು.

ಬುಧವಾರ ಶಾಲಾ ಬಸ್‌ನಿಂದ ಬಿದ್ದ ಮಗು ಸಾವನಪ್ಪಿರುವದು ಕುಟುಂಬಕ್ಕೆ ಜೀವನಪರ್ಯಂತ ಮರೆಯಲಾರದ ಆಘಾತವಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ವಿಶೇಷ ಕಾಳಜಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಎಲ್ಲ ಶಾಲಾ ಸಂಸ್ಥೆಗಳು ನಡೆಸುವ ವಾಹನಗಳ ವಿಮೆ ಚಾಲ್ತಿಯಲ್ಲಿರುವದು, ವಾಹನದ ಪರವಾನಿಗೆ (ಪರ್ಮಿಟ್) ಹೊಂದಿರಬೇಕು, ಚಾಲಕ ಮತ್ತು ನಿರ್ವಾಹಕ ಶಾಲಾ ಗುರುತಿನ ಚೀಟಿ (ಐಡಿ ಕಾರ್ಡ್) ಹೊಂದಿರಬೇಕು, ವಾಹನದ ಒಳಗಡೆ ಸಿಸಿ ಕ್ಯಾಮೆರಾ ಅಳವಡಿಸಿರುವದು, ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಬಸ್‌ನಲ್ಲಿ ತುಂಬುವುದನ್ನು ತಡೆಗಟ್ಟಬೇಕು. ಸದರಿ ಕ್ರಮಗಳನ್ನು ಮುಂದಿನ ಸೋಮವಾರದ ಒಳಗಾಗಿ ಅಳವಡಿಸಿಕೊಳ್ಳದಿದ್ದರೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಹನುಮಂತ ಪೂಜಾರ, ಚಂದ್ರಶೇಖರ ಶೀರನಹಳ್ಳಿ, ಬಸವರಾಜ ದುರ್ಗದ, ಗಂಗಾಧರಯ್ಯ ಹಿರೇಮಠ, ಪ್ರವೀಣ ಸೂರಣಗಿ, ಬಸವರಾಜ ಬೆನಕನಹಳ್ಳಿ, ನವೀನ ಗೊಲ್ಲರ, ಸೋಮು ಬೆಟಗೇರಿ, ಪುಟ್ಟಯ್ಯ ಮಠಪತಿ, ಈರಣ್ಣ ಶೀರನಹಳ್ಳಿ, ಷಣ್ಮುಖ ಸೂರಣಗಿ, ಮಹೇಶ ಮೂಲಿಮನಿ, ಹನುಮಂತ ಪೂಜಾರ, ಮಲ್ಲೇಶಪ್ಪ ಕಳ್ಳಿಹಾಳ, ಬಸವರಾಜ ಮಡಿವಾಳರ, ಶಂಭಣ್ಣ ಸಂಕ್ಲೀಪುರ, ಮಲ್ಲಿಕಾರ್ಜುನ ಇಟಗಿ, ನಾಗಪ್ಪ ಜಾಡರ, ಉದಯ ಕಳ್ಳಿಹಾಳ, ಅಂಬರೀಶ ಬೆನಕನಹಳ್ಳಿ, ಪವನ ಅರಳಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

error: Content is protected !!