Home Blog Page 3048

ತೌಖ್ತೆ ಚಂಡಮಾರುತ – 9 ಜನ ಮೀನುಗಾರರು ನಾಪತ್ತೆ

ವಿಜಯಸಾಕ್ಷಿ ಸುದ್ದಿ, ನಾಗಪಟ್ಟಿಣಂ

ಕರಾವಳಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಚೌಖ್ತೆ ಚಂಡಮಾರುತದ ಹಾವಳಿ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ನಾಗಪಟ್ಟಿಣಂ ಜಿಲ್ಲೆಯ 7 ಜನ ಸೇರಿದಂತೆ 9 ಜನ ಮೀನುಗಾರರು ನಾಪತ್ತೆಯಾಗಿದ್ದಾರೆ.

ಅರಬ್ಬೀ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಮರಳಿ ಬರುವ ಸಮಯಕ್ಕೆ ಚಂಡಮಾರುತದ ಗಾಳಿಯ ರಭಸಕ್ಕೆ ಸಿಲುಕಿ ದೋಣಿ ಮಗುಚಿಬಿದ್ದು ಸಮುದ್ರ ಪಾಲಾಗಿದ್ದಾರೆ ಎನ್ನಲಾಗಿದೆ.
ತೌಖ್ತೆ ಚಂಡಮಾರುತದಿಂದಾಗಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಕೂಡಲೇ ಮೀನುಗಾರರು ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ದೋಣಿ ಮಗುಚಿಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ನಾಪತ್ತೆಯಾದವರ ರಕ್ಷಣೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಸಮಂತಪೆಟ್ಟೈಯ ಮೀನುಗಾರರ ಪ್ರತಿನಿಧಿ ಇ ವಿಜಯನ್ ತಿಳಿಸಿದ್ದಾರೆ. ದೋಣಿ ಕೊಚ್ಚಿನ್ ಮೀನುಗಾರಿಕೆ ಬಂದರಿನಿಂದ ಕಳೆದ ಏ. 29ರಂದು ಹೊರಟಿತ್ತು. ತಂಡದಲ್ಲಿ, ಐ ಮಣಿಕಂದನ್ (25), ಅವರ ಸಹೋದರ ಮಣಿವೆಲ್ (23), ಮತ್ತು ಅವರ ತಂದೆ ಎಡುಂಬನ್ ಇದ್ದು (55) ಎಲ್ಲರೂ ಸಮಂತಂಪೆಟ್ಟೈ ಮೂಲದವರಾಗಿದ್ದಾರೆ. ಅಲ್ಲದೇ, ನಾಗೋರ್‌ನ ಬಿ ದಿನೇಶ್ (33), ಮೂವಲೂರಿನ ಸಿ ಎಲಾಂಚೆಜಿಯಾನ್ (26), ಅಕ್ಕರೈಪೆಟ್ಟೆಯ ಕೆ ಪ್ರವೀಣ್ (35), ವನಗಿರಿ ಮೂಲದ ಮೂರ್ತಿ (30) ಇದ್ದರು. ಕಡಲೂರು ಜಿಲ್ಲೆಯ ಕಿಲ್ಲೈನ ಸಿ ಮುರುಗನ್ (40) ಸೇರಿದಂತೆ ಇನ್ನಿಬ್ಬರು ಮೀನುಗಾರರು ಇದ್ದರು ಎಂದು ತಿಳಿದು ಬಂದಿದೆ.

ಸೋಂಕು ಇದ್ದ ಅಣ್ಣ ಮನೆಗೆ; ಕೊಲೆ ಮಾಡಿದ ತಮ್ಮ ಜೈಲಿಗೆ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಮನೆಗೆ ಬಂದಿದ್ದ ಸೋಂಕಿತ ಅಣ್ಣನನ್ನೇ ಸಹೋದರ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ನಡೆದಿದೆ. ಮಹಾವೀರ (45) ಕೊಲೆಯಾದ ವ್ಯಕ್ತಿ. ಮೃತನ ಸಹೋದರನೇ ಆಗಿರುವ ಪಾರ್ಶ್ವನಾಥ್ ಕೊಲೆ ಮಾಡಿರುವ ವ್ಯಕ್ತಿ.

ಕೊಲೆಯಾಗಿರುವ ಮಹಾವೀರ ಸೋಂಕಿನಿಂದ ಗುಣಮುಖನಾಗದಿದ್ದರೂ ಮನೆಗೆ ಆಸ್ಪತ್ರೆಯಿಂದ ಮನೆಗೆ ಬಂದಿದ್ದ. ಹೀಗೆ ಸೋಂಕಿನಿಂದ ಗುಣಮುಖನಾಗದಿದ್ದರೂ ಬಂದಿರುವುದಕ್ಕೆ ತಮ್ಮ ಪ್ರಶ್ನಿಸಿದ್ದಾನೆ.

ಈ ಸಂದರ್ಭದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಕೋಪಗೊಂಡ ತಮ್ಮ, ಅಣ್ಣನ ಕೊಲೆ ಮಾಡಿದ್ದಾನೆ. ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಕಾರಣವಾಗಿರುವ ತಮ್ಮನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಒಂದೇ ಆಸ್ಪತ್ರೆಯ ಇಷ್ಟೊಂದು ಜನ ಸಿಬ್ಬಂದಿಯಲ್ಲಿ ಸೋಂಕು? ಹಾಗಾದರೆ ಚಿಕಿತ್ಸೆ ನೀಡುವವರು ಯಾರು?

ವಿಜಯಸಾಕ್ಷಿ ಸುದ್ದಿ, ಧಾರವಾಡ

ಸದ್ಯ ಕೊರೊನಾ ಹಾವಳಿ ವಿಪರೀತ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ವೈದ್ಯರು, ಸಿಬ್ಬಂದಿಯಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ಅದರ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳ ಕಂಡು ಬರುತ್ತಿದ್ದು, ಹೀಗೆ ಮುಂದುವರೆದರೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಹೇಗೆ ಎಂದು ಎಲ್ಲರೂ ಚಿಂತೆಗೆ ಈಡಾಗಿದ್ದಾರೆ.

ನಗರದಲ್ಲಿನ ಜಿಲ್ಲಾ ಆಸ್ಪತ್ರೆಯ 6 ಜನ ವೈದ್ಯರು ಸೇರಿದಂತೆ ಬರೋಬ್ಬರಿ 34 ಜನ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 6 ಜನ ವೈದ್ಯರು, 15 ಜನ ಸ್ಟಾಫ್ ನರ್ಸ್, 3 ಜನ ಡಾಟಾ ಎಂಟ್ರಿ ಆಪರೇಟರ್, 4 ಜನ ಲ್ಯಾಬ್ ತಂತ್ರಜ್ಞರು, ತಲಾ ಇಬ್ಬರು ಫಿಸಿಯೋಥೆರಪಿಸ್ಟ್, ಕೌನ್ಸಿಲರ್ ಹಾಗೂ ಡಿ ಗ್ರೂಪ್ ನೌಕರರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈ ಪೈಕಿ ಹಲವರು ಹೊಂ ಐಸೋಲೇಷನ್ ನಲ್ಲಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್ ಗಳ ಕೊರತೆ ತಾಂಡವಾಡುತ್ತಿದೆ. ಇದ್ದ ನರ್ಸ್‌ಗಳನ್ನ ಬಳಸಿಕೊಂಡು ಜಿಲ್ಲಾ ಆಸ್ಪತ್ರೆ ಕೆಲಸ ಮುಂದುವರೆಸಿದೆ. ಇದು ಹೀಗೆ ಮುಂದುವರೆದರೆ, ವೈದ್ಯರು ಹಾಗೂ ನರ್ಸ್ ಗಳ ಕೊರತೆ ಇನ್ನೂ ಹೆಚ್ಚಾಗಿ ರೋಗಿಗಳಿಗೆ ತೊಂದರೆಯಾಗಬಹುದು. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಮತ್ತೆ ಮುಂದುವರೆದ ಲಾಕ್ ಡೌನ್

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಲಾಕ್ ಡೌನ್ ನಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಸೋಂಕು ಹತೋಟಿಗೆ ಬರುತ್ತಿದ್ದು, ಇನ್ನೂ ಒಂದು ವಾರಗಳ ಕಾಲ ಲಾಕ್ ಡೌನ್ ಮುಂದುವರೆಸಲಾಗಿದೆ. ಹೀಗಾಗಿ ಮೇ. 24ರ ವರೆಗೆ ಜಾರಿಯಲ್ಲಿರಲಿದೆ.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಲಾಕ್ ಡೌನ್ ನಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉತ್ತಮ ಬೆಳವಣಿಗೆಗಳು ಕಂಡು ಬಂದಿದೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿಯೂ ಇಳಿಕೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ಇಷ್ಟು ದಿನಗಳಲ್ಲಿ ನಾವು ಗಳಿಸಿದ ಲಾಭ ಕಳೆದುಕೊಳ್ಳಲು ಮನಸ್ಸು ಬರುತ್ತಿಲ್ಲ. ಇದನ್ನು ನಾವು ಬಯಸುವುದೂ ಇಲ್ಲ. ಹೀಗಾಗಿ ಮತ್ತೊಂದು ವಾರ ಲಾಕ್ ಡೌನ್ ವಿಸ್ತರಿಸಲಾಗುತ್ತದೆ. ಮುಂಬರುವ ಸೋಮವಾರದ ಬೆಳಿಗ್ಗೆ 5ರ ವರೆಗೂ ಲಾಕ್ ಡೌನ್ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹತೋಟಿಗೆ ಬರುತ್ತಿದ್ದು, ಶುಕ್ರವಾರ 8,506 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬರೋಬ್ಬರಿ ಒಂದು ತಿಂಗಳ ನಂತರ ದೆಹಲಿಯಲ್ಲಿ 10 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ದಾಖಲಾಗಿವೆ. ಇದು ಲಾಕ್ ಡೌನ್ ನಿಂದ ಸಿಕ್ಕ ಲಾಭ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸ್ ಸಂಸದ ರಾಜೀವ್ ಸತವ್ ಸೋಂಕಿಗೆ ಬಲಿ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ರಾಜ್ಯಸಭೆಯ ಕಾಂಗ್ರೆಸ್ ಸಂಸದ ರಾಜೀವ್ ಸತವ್ ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಸಿಂಗ್ ಸುರ್ಜೆವಾಲಾ, ‘ನಿಶಾಬ್! ಇಂದು, ಯುವ ಕಾಂಗ್ರೆಸ್‌ ನಲ್ಲಿ ನನ್ನೊಂದಿಗೆ ಸಾರ್ವಜನಿಕ ಜೀವನದ ಮೊದಲ ಹೆಜ್ಜೆ ಇಟ್ಟ ಒಬ್ಬ ಸಹೋದ್ಯೋಗಿ ಕಳೆದುಕೊಂಡಿದ್ದೇನೆ. ಆದರೆ ಇಂದು, ರಾಜೀವ್ ಸತವ್ ಅವರ ಸರಳತೆ, ನಿಸ್ಸಂದಿಗ್ಧವಾದ ನಗೆ, ನಾಯಕತ್ವ ಮತ್ತು ಪಕ್ಷದ ನಿಷ್ಠೆ ಮತ್ತು ಸ್ನೇಹ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ನನ್ನ ಗೆಳೆಯನಿಗೆ ಶುಭ ವಿದಾಯ ! ನೀವು ಎಲ್ಲಿಯೇ ಇರಿ, ಹೊಳೆಯುತ್ತಿರಿ ಎಂದು ಭಾರವಾದ ಹೃದಯದಿಂದ ಬರೆದುಕೊಂಡಿದ್ದಾರೆ.

ಸಂಸದ ರಾಜೀವ್ ಸತವ್ ಅವರು ಇತ್ತೀಚೆಗೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ, ಅದರಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಆದರೆ, ಏ. 22ರಂದು ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡು ಬಂದಿದೆ. ಕೂಡಲೇ ಅವರನ್ನು ಪುಣೆಯ ಜಹಾಂಗೀರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಅವರು ವೆಂಟಿಲೇಟರ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕಿಚ್ಚ ಸರ್ ನನ್ನ ಆಯಸ್ಸನ್ನೆಲ್ಲ ಭಗವಂತ ನಿಮಗೆ ನೀಡಲಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ನಟ ಕಿಚ್ಚ ಸುದೀಪ್ ಅವರು ಇತ್ತೀಚೆಗಷ್ಟೇ ಕೊರೊನಾ ಗೆದ್ದು ಬಂದಿದ್ದಾರೆ. ಎಷ್ಟೋ ಅಭಿಮಾನಿಗಳ ಪೂಜಾ ಫಲದಿಂದಾಗಿ ನಾನು ಬದುಕಿ ಬಂದೆ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದರು. ಸದ್ಯ ಅವರ ಸಾಮಾಜಿಕ ಕಾಳಜಿಗೆ ಮಹಿಳೆಯೊಬ್ಬರು ಹರಿಸಿ, ಆಶೀರ್ವದಿಸಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಕಿಚ್ಚ ಅವರು ಅಭಿಮಾನಿಯೊಬ್ಬರಿಗೆ ಸಹಾಯ ಮಾಡಿದ್ದಾರೆ. ಈ ಕುರಿತು ಸುದೀಪ್ ಅವರ ಅಭಿಮಾನಿ ಸೌಮ್ಯ, ಸಹಾಯ ಮಾಡಿರುವ ಕುರಿತು ವೀಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸುದೀಪ್‍ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಸಾಯುವವರೆಗೂ ನಿಮ್ಮ ಹೆಸರು ಹೇಳಿಕೊಂಡು ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇನೆ. ನನ್ನ ತಾಳಿ ಭಾಗ್ಯವನ್ನು ಉಳಿಸಿದ್ದೀರಾ ನೀವು. ಆ ಭಗವಂತ ನನ್ನ ಆಯಸ್ಸನ್ನೆಲ್ಲ ನಿಮಗೆ ನೀಡಲಿ ಎಂದು ಸೌಮ್ಯ ಸುದೀಪ್ ಅವರನ್ನು ಹರಿಸಿದ್ದಾರೆ.
ಸೌಮ್ಯ ಅವರ ಪತಿ ಇತ್ತೀಚೆಗೆ ರಕ್ತದಲ್ಲಿ ಸೋಂಕು ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ಅದರಿಂದ ಅವರು ಚೇತರಿಸಿಕೊಂಡಿದ್ದರು. ಆನಂತರ ಮನೆಗೆ ಬಂದ ಮೇಲೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅಲ್ಲದೇ, ಸೌಮ್ಯ, ಪತಿಗೆ, ತಾಯಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಆ ಸಮಯದಲ್ಲಿ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು.

ರೆಮಿಡಿಸಿವರ್ ಇಂಜೆಕ್ಷನ್ ತಂದರೆ ಮಾತ್ರ ದಾಖಲು ಮಾಡಿಕೊಳ್ಳುತ್ತೇವೆ ಎಂದು ಖಾಸಗಿ ಆಸ್ಪತ್ರೆ ಹೇಳಿದೆ. ಎಲ್ಲಿ ಹುಡುಕಿದರೂ ಸೌಮ್ಯ ಅವರಿಗೆ ರೆಮಿಡಿಸಿವಿರ್ ಇಂಜೆಕ್ಷನ್ ಸಿಗಿಲ್ಲ.
20 ಸಾವಿರ ರೂ. ನೀಡಿ ಸೌಮ್ಯಾ ಇಂಜೆಕ್ಷನ್ ಕೊಂಡುಕೊಂಡಿದ್ದಾರೆ. ಆದರೆ, ಆ ವೇಳೆಗಾಗಲೇ ಅವರಿಗೆ ಸುಮಾರು ರೂ. 1.50 ಲಕ್ಷ ಖರ್ಚಾಗಿತ್ತು. ಇಂತಹ ಸಂದರ್ಭದಲ್ಲಿ ರೂ. 50 ಸಾವಿರ ಮುಂಗಡ ಹಣ ನೀಡಬೇಕು ಎಂದು ಆಸ್ಪತ್ರೆ ತಿಲಿಸಿದೆ. ಚಿಕಿತ್ಸೆ ಮುಗಿದ ನಂತರ ರೂ. 1.30 ಲಕ್ಷ ಬಿಲ್ ಆಗಿದೆ. ಆಗ ಸೌಮ್ಯ ಅವರು ಯಾರನ್ನೂ ಬೇಡಿದರೂ ಹಣ ಸಿಗಲಿಲ್ಲ. ಆಗ ನಟ ಸುದೀಪ್ ಅವರು ಈ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಹೀಗಾಗಿ ಸೌಮ್ಯ ಅವರು ಸುದೀಪ್ ಅವರಿಗೆ ಹಾರೈಸಿದ್ದಾರೆ.

ತೌಖ್ತೆ ಚಂಡಮಾರುತ ಹಾವಳಿಯಿಂದ ಕರಾವಳಿಯಲ್ಲಿ ಜನ, ಜೀವನ ಅಸ್ತವ್ಯಸ್ಥ – ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ತೌಖ್ತೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಪ್ರದೇಶ ವಿಲವಿಲ ಎನ್ನುತ್ತಿದೆ. ಕಳೆದ 24 ಗಂಟೆಗಳಿಂದ ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಮಲೆನಾಡಿನ ಮೂರು ಜಿಲ್ಲೆಗಳಲ್ಲಿ ಮಳೆರಾಯನ ಅಟ್ಟಹಾಸ ಎಲ್ಲೆ ಮೀರುತ್ತಿದೆ.

ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಇಲ್ಲಿಯವರೆಗೆ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಈ ಚಂಡಮಾರುತ 73 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯು ತೌಖ್ತೆ ಚಂಡಮಾರುತ ಬೀಸುವ ಹಿನ್ನೆಲೆಯಲ್ಲಿ ಮಂಗಳೂರು, ಕಾರವಾರ, ಮಲ್ಪೆ, ಭಟ್ಕಳ, ಹೊನ್ನಾವರ ಹಾಗೂ ಕೇರಳದ ತಿರುವನಂತಪುರಗಳಿಗೆ ಮುನ್ನೆಚ್ಚರಿಕೆ ಘೋಷಿಸಿದೆ.

ಮಲ್ಪೆ ಬೀಚ್ ಬಳಿ ಚಂಡಮಾರುತದ ರಭಸಕ್ಕೆ ತೀರದಲ್ಲಿರುವ ಮೀನುಗಾರಿಕೆ ದೋಣಿಗಳು ಹಾನಿಯಾಗಿವೆ.
ಮಂಗಳೂರಿನ ಎಲ್ಲ ತಾಲೂಕುಗಳಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು ಹಾನಿಯಾಗಿವೆ. ಅಲ್ಲದೇ, ತೆಂಗು ಸೇರಿದಂತೆ ತೋಟ – ಗದ್ದೆಗಳಲ್ಲಿ ನೀರು ನುಗ್ಗುತ್ತಿದೆ. ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳಿವೆ. ಜನರು ಕೈಯಲ್ಲಿ ಜೀವ ಹಿಡಿದು ಬುದುಕು ಸಾಗಿಸುತ್ತಿದ್ದಾರೆ. ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.

ಇಂಡಿಯಾ, ಶ್ರೀಲಂಕಾ ಸರಣಿಯ ಮೇಲೆ ಮತ್ತೆ ದಾಳಿ ಮಾಡಿದ ಕೊರೊನಾ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇತ್ತೀಚೆಗಷ್ಟೇ ಬಿಸಿಸಿಐ, ಶ್ರೀಲಂಕಾಕ್ಕೆ ತೆರಳುವ ಭಾರತೀಯ ಕ್ರಿಕೆಟ್ ತಂಡ ಘೋಷಿಸಿತ್ತು. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ನಾಯಕರ ಅಲಭ್ಯ ಈ ತಂಡದಲ್ಲಿತ್ತು. ಆದರೆ, ಈ ಹೊಸ ತಂಡ ತೆರಳುವ ಕುತೂಹಲಕ್ಕೆ ವಿಘ್ನ ಎದುರಾಗಿದೆ.
ಸದ್ಯ ಭಾರತದಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರೊಂದಿಗೆ ಶ್ರೀಲಂಕಾದಲ್ಲಿಯೂ ಕೊರೊನಾ ಹಾವಳಿ ಮಿತಿ ಮೀರುತ್ತಿದೆ. ಕೆಲವು ದಿನಗಳಿಂದ ಶ್ರೀಲಂಕಾದಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಾಗಿ ಆತಿಥೇಯ ಭಾರತದೊಂದಿಗೆ ಕ್ರಿಕೆಟ್ ಸರಣಿ ನಡೆಯುವುದು ಅನಿವಾರ್ಯ ಎನ್ನಲಾಗುತ್ತಿದೆ.

ಜುಲೈ ತಿಂಗಳಲ್ಲಿ ಭಾರತೀಯ ಕ್ರಿಕೆಟ್ ತಂಡವು ಏಕದಿನ ಮತ್ತು ಟಿ 20 ಸರಣಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎನ್ನಲಾಗಿತ್ತು. ಇತ್ತೀಚೆಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಈ ಕುರಿತು ಹೇಳಿದ್ದರು. ಅಷ್ಟೇ ಅಲ್ಲ, ಈ ಸರಣಿಗೆ ಇಂಗ್ಲೆಂಡ್ ಗೆ ತೆರಳುವ ಯಾವುದೇ ಸದಸ್ಯ ಹೋಗುವುದಿಲ್ಲ ಎಂದು ಸೌರವ್ ಹೇಳಿ ಅಚ್ಚರಿ ಮೂಡಿಸಿದ್ದರು. ಈ ಸರಣಿಯನ್ನು ಹಿಂದಿನ ವರ್ಷವೇ ಫ್ಯೂಚರ್ ಟೂರ್ ಕಾರ್ಯಕ್ರಮದಡಿ ಆಡಬೇಕಿತ್ತು. ಆದರೆ, ಮಹಾಮಾರಿಯಿಂದಾಗಿ ಆಡಲು ಆಗಿರಲಿಲ್ಲ.

ಸದ್ಯ ಮತ್ತೊಮ್ಮೆ ಈ ಸರಣಿಗೆ ಮಹಾಮಾರಿಯ ಕಾಟ ಶುರುವಾಗಿದೆ. ಎರಡನೇ ಬಾರಿಯೂ ಈ ಸರಣಿಯ ಮೇಲೆ ಕೊರೊನಾ ದಾಳಿ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್‌ ನ ನಿರ್ವಹಣಾ ಸಮಿತಿ ಮುಖ್ಯಸ್ಥ ಅರ್ಜುನ್ ಡಿಸಿಲ್ವಾ ತಿಳಿಸಿದ್ದಾರೆ. ಆದರೂ ಈಗಾಗಲೇ ನಾವು ಇಂಗ್ಲೆಂಡ್ ತಂಡದೊಂದಿಗಿನ ಸರಣಿಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಸರಣಿಯನ್ನು ಕೂಡ ಹಾಗೆಯೇ ನಡೆಸುತ್ತೇವೆ ಎಂದು ಡಿಸಿಲ್ವಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾದೊಂದಿಗೆ ಶುರುವಾಗಿದೆ ಬ್ಲ್ಯಾಕ್ ಫಂಗಸ್ ಕಾಟ….ಹಲವರ ಬಲಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿಯೊಂದಿಗೆ ಬ್ಲ್ಯಾಕ್ ಪಂಗಸ್ ಸೋಂಕಿನ ಕಾಟ ಕೂಡ ಶುರುವಾಗಿದೆ. ಸದ್ಯ ರಾಜ್ಯದಲ್ಲಿ 100ಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿವಿಧ ಪ್ರದೇಶಗಳು ಸೇರಿದಂತೆ ಒಟ್ಟು 9 ಜನ ಈಗಾಗಲೇ ಇದಕ್ಕೆ ಬಲಿಯಾಗಿದ್ದಾರೆ.

ಬ್ಲ್ಯಾಕ್ ಫಂಗಸ್ ಗೆ ಬೆಂಗಳೂರಿನಲ್ಲಿ ಇಬ್ಬರು, ಬಾಗಲಕೋಟೆ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರು ಕೂಡ ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಕೊರೊನಾದಿಂದ ಗುಣಮುಖರಾಗಿರುವ ಮಧುಮೇಹ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ವಿಪರೀತ ಸ್ಟೀರಾಯ್ಡ್‌ ಬಳಕೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕುಸಿದು ಅತಿ ಸೂಕ್ಷ್ಮ ಶಿಲೀಂಧ್ರಗಳ ದಾಳಿಗೆ ಕಂಗೆಡುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಪ್ರಾರಂಭದಲ್ಲಿ ಮೂಗು, ಶ್ವಾಸಕೋಶ, ಕಣ್ಣು ಮತ್ತು ಬಳಿಕ ಮೆದುಳಿಗೆ ಫಂಗಸ್‌ ದಾಳಿ ನಡೆಸುತ್ತದೆ. ಈ ರೋಗದ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ತೆರಳಬೇಕು ಎಂದು ವೈದ್ಯರು ಕಿವಿ ಮಾತು ಹೇಳುತ್ತಿದ್ದಾರೆ.

ಬ್ಲ್ಯಾಕ್ ಪಂಗಸ್ ಗೆ ಕೊಡುವ ಆಂಫೊಟೆರಿಸಿನ್‌ – ಬಿ ಇಂಜೆಕ್ಷನ್‌ ಮಾರುಕಟ್ಟೆಯಲ್ಲಿ ದುಬಾರಿಯಾಗಿದ್ದು, ವಿರಳವಾಗಿದೆ ಕೂಡ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಇತ್ತ ಗಮನ ಹರಿಸಬೇಕು ಎಂದು ವೈದ್ಯರು ಮನವಿ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 1500 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, 50ಕ್ಕಿಂತ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ತರಕಾರಿಯ ನೆಪ, ಮಾರುಕಟ್ಟೆಯ ತುಂಬೆಲ್ಲ ಜನ..ಕಂಡು ಕಾಣದಂತಿರುವ ನಗರಸಭೆ!

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಜನಕ್ಕೆ ಮಾತ್ರ ಇನ್ನೂ ಬುದ್ಧಿ ಬಂದಿಲ್ಲ.

ಬೆಟಗೇರಿಯಲ್ಲಿ ಬೆಳಿಗ್ಗೆಯಿಂದಲೇ ಮಾರುಕಟ್ಟೆಗೆ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ತರಕಾರಿ ಖರೀದಿ ಹೆಸರಿನಲ್ಲಿ ಮನೆಯಿಂದ ಜನ ಹೊರಗೆ ಬರುತ್ತಿದ್ದಾರೆ. ಇನ್ನೊಂದೆಡೆ ವ್ಯಾಪಾರಸ್ಥರು ಕೂಡ ಗ್ರಾಹಕರಂತೆ ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ್ ಧರಿಸಿದೆ ಕೊರೊನಾ ಹರಡುವ ಎಲ್ಲ ಕಾರ್ಯಗಳು ಸದ್ಯ ಇಲ್ಲಿಯ ಮಾರುಕಟ್ಟೆಯಲ್ಲಿ ನಡೆಯುತ್ತಿವೆ.

ಮಾಂಸ, ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡುಲು ಜನ ಮುಗಿ ಬೀಳುತ್ತಿದ್ದಾರೆ. ತಳ್ಳುವ ಗಾಡಿಯ ಮೂಲಕ ತರಕಾರಿ, ಹಣ್ಣು ಮಾರಲು ಸರ್ಕಾರ ಅವಕಾಶ ನೀಡಿದ್ದರೂ ಮಾರುಕಟ್ಟೆಯಲ್ಲಿಯೇ ವ್ಯವಹಾರ ಮಾಡಲಾಗುತ್ತಿದೆ. ಇದರಿಂದಾಗಿ ಗುಂಪು ಗೂಡಿ ಜನ ಖರೀದಿಸುತ್ತಿದ್ದಾರೆ. ಇದನ್ನು ಕಂಡ ಗದಗ – ಬೆಟಗೇರಿ ನಗರಸಭೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಕೊರೊನಾ ಮನೆ ಮನೆಯ ಒಳಗೂ ಹೋಗುವುದರಲ್ಲಿ ಸಂಶಯವೇ ಇಲ್ಲ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.

error: Content is protected !!