ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕೇಂದ್ರ ಸರ್ಕಾರ ಇತ್ತೀಚೆಗೆ ತಿದ್ದುಪಡಿ ಮಾಡಿರುವ ಭೂಸುಧಾರಣೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ ವಿರೋಧಿಸಿ ಜಿಲ್ಲಾದ್ಯಂತ ರೈತರು ಪ್ರತಿಭಟನೆ ನಡೆಸಿದರು.
ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕೇವಲ ಗದಗ ನಗರವಲ್ಲದೇ, ಜಿಲ್ಲೆಯ ಮುಂಡರಗಿ, ಗಜೇಂದ್ರಗಡ, ಲಕ್ಷ್ಮೇಶ್ವರ ಪಟ್ಟಣದಲ್ಲೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಅಂಗವಾಗಿ ನಗರದಲ್ಲಿ ಹಾದು ಹೋಗಿರುವ ಹುಬ್ಬಳ್ಳಿ- ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ, ಅರಭಾವಿ – ಚಳ್ಳಕೇರಿ ರಾಜ್ಯ ಹೆದ್ದಾರಿ ತಡೆದು, ಮಾನವ ಸರಪಳಿ ನಿರ್ಮಾಣ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ರೋಣ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗದಗ ಹಾಗೂ ಶಿಶು ಅಭಿವೃದ್ಧಿ ಇಲಾಖೆ (ಸಿಡಿಪಿಒ) ರೋಣ ಇವುಗಳ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ ಅಂಗವಾಗಿ ಪೋಷಣ್ ರಥಯಾತ್ರೆಗೆ ಹಿರಿಯ ದಿವಾಣಿ ನ್ಯಾಯಾಧೀಶರ ಆವರಣದಲ್ಲಿ ತಾಲೂಕು ಹಿರಿಯ ದಿವಾಣಿ ನ್ಯಾಯಾಧೀಶೆ ನಾಗಮಣಿ ವಿ. ಬುಧವಾರ ಚಾಲನೆ ನೀಡಿದರು.
ಪೋಷಣ್ ರಥವು ರೋಣದ ಹಿರಿಯ ದಿವಾಣಿ ನ್ಯಾಯಾಲಯದ ಆವರಣದಿಂದ ಚಾಲನೆಗೊಂಡು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ನೀಡಲಾಯಿತು. ಜಾಥಾದಲ್ಲಿ ಪೌಷ್ಠಿಕ ಆಹಾರ ಶಿಬಿರ, ಮಾತೃ ವಂದನಾ ಯೋಜನೆ, ಭೇಟಿ ಪಡಾವೊ, ಬಾಲ್ಯವಿವಾಹ ವಿರುದ್ಧ ಜಾಗೃತಿ, ಭ್ರೂಣಹತ್ಯೆ ನಿಷೇಧ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಒಂದು ತಿಂಗಳು ಕಾಲ ಪಟ್ಟಣ ಸೇರಿದಂತೆ ಹಳ್ಳಿ-ಹಳ್ಳಿಗಳಲ್ಲಿ ಪೋಷಣ್ ರಥ ತೆರಳಿ ಜನ ಜಾಗೃತಿ ಮೂಡಿಸಲಿದೆ. ಗರ್ಭಿಣಿ ಮತ್ತು ಬಾಣಂತಿ ಸೇರಿದಂತೆ ಮಗುವಿನ ಉತ್ತಮ ಬೆಳವಣಿಗೆಗೆ ಹಸಿರು ತರಕಾರಿ ಮತ್ತು ಪೌಷ್ಟಿಕಾಂಶವುಳ್ಳ ನುಗ್ಗೆ, ಕರಿಬೇವು ಹಾಗೂ ಹಣ್ಣಿನ ಮರಗಳನ್ನು ತಮ್ಮ ಮನೆಯ ಆವರಣದಲ್ಲಿ ಬೆಳೆಸುವುದು. ಇದರಿಂದ ನಿತ್ಯ ತಾಜಾ ಸೊಪ್ಪು ಮತ್ತು ತರಕಾರಿ ಸಿಗಲಿದೆ. ತಾಜಾ ಹಣ್ಣು, ತರಕಾರಿ ಮತ್ತು ಸೊಪ್ಪು ಸೇವನೆಯಿಂದ ಹೆಚ್ಚು ವಿಟಮಿನ್ ಅಂಶ ದೊರೆಯಲಿದೆ. ಇದರಿಂದ ಅಪೌಷ್ಟಿಕತೆ ಹೋಗಲಾಡಿಸಲು ಸಹಕಾರಿಯಾಗಲಿದೆ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸುವುದು ಈ ಪೋಷಣ್ ರಥದ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶ ಮುಹಮ್ಮದ್ ಯೂನುಸ್ ಅಥಣಿ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಸಚಿನ್ ಎಚ್.ಆರ್., ಸಿಡಿಪಿಒ ಅಧಿಕಾರಿ ಬಿ.ಎಂ. ಮಾಳೆಕೊಪ್ಪ, ಇಲಾಖೆಯ ಮೇಲ್ವಿಚಾರಕಿಯರು, ಪೋಷಣ್ ಅಭಿಯಾನದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಮಾವಿನ ತೋರಣ, ಬಾಳೆ ಗಿಡ, ಬಲೂನಿನಿಂದ ಅಲಂಕೃತಗೊಂಡಿದ್ದ ಪೋಷಣ್ ರಥ ವಾಹನವು ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ತಲೆಮೇಲೆ ಕಳಶ ಹೊತ್ತ ಮಹಿಳೆಯರು ಪೋಷಣ್ ರಥದ ಮೆರವಣಿಗೆಗೆ ಮೆರುಗು ನೀಡಿದರು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 25ರಂದು ಅಖಿಲ ಭಾರತ ಬಂದ್‌ಗೆ ಕರೆ ನೀಡಲಾಗಿದೆ.
ಕರ್ನಾಟಕದಲ್ಲಿಯೂ ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ರೈತ ಸಂಘಟನೆಗಳು ನೀಡಿರುವ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಬೆಂಬಲ ವ್ಯಕ್ತಪಡಿಸಿದೆ.
ಈಗಾಗಲೇ ಕಳೆದ 2 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜನತಾ ಅಧಿವೇಶನದ ಹೆಸರಿನಲ್ಲಿ ಐಕ್ಯಹೋರಾಟ ನಡೆಸಲಾಗುತ್ತಿದೆ. ರೈತರ ವಿರುದ್ಧ ವಿರುವ, ಕಾರ್ಪೊರೇಟ್ ಕಂಪನಿಗಳಿಗೆ ಪ್ರಯೋಜನ ನೀಡುವ ಈ ಸುಗ್ರಿವಾಜ್ಞೆಗಳನ್ನು ಹಿಂಪಡೆಯಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸುತ್ತಿವೆ.
ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಲ್ಲಿ ಇಡೀ ಕೃಷಿಕ್ಷೇತ್ರಕ್ಕೆ ದೊಡ್ಡ ಬಿಕ್ಕಟ್ಟು ಎದುರಾಗಲಿದೆ. ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಲಕ್ಷಾಂತರ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಅವರ ಭೂಮಿ ಕಸಿದು, ಕಾರ್ಪೊರೇಟರ್‌ಗಳಿಗೆ ನೀಡಿ ರೈತರನ್ನು ಕೂಲಿಯಾಳುಗಳನ್ನಾಗಿಸಲು ಸರ್ಕಾರ ಮುಂದಾಗಿದೆ.
ಸರ್ಕಾರದ ನೀತಿಗಳನ್ನು ಖಂಡಿಸಿ ರೈತ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ನೀಡುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಬಂದ್‌ನಲ್ಲಿ ಪಾಲ್ಗೊಂಡು ಪ್ರತಿಭಟನೆ ವ್ಯಕ್ತಪಡಿಸಲಿದ್ದಾರೆ ಎಂದಿದ್ದಾರೆ.
ದೇವರಾಜ್ ಅರಸು ಅವರು ಜಾರಿಗೆ ತಂದ ಉಳುವವನೇ ಭೂಮಿಯ ಒಡೆಯ ಎಂಬ ಮಹೋನ್ನತ ಆದರ್ಶ ನೀತಿಯನ್ನು ಈಗಿನ ಸರ್ಕಾರ ತಿರುಚಿ ದುಡ್ಡಿದ್ದವನೇ ಭೂಮಿಯ ಒಡೆಯ ಎಂಬ ನೀತಿಯನ್ನು ತಂದು ಜನರನ್ನು ಭಿಕ್ಷುಕರನ್ನಾಗಿಸುವ ಕ್ರೌರ್ಯಕ್ಕೆ ಸರ್ಕಾರ ಇಳಿದಿದೆ ಎಂದು ಟಿ.ಎ.ನಾರಾಯಣ ಆರೋಪಿಸಿದ್ದಾರೆ.
ಉತ್ತರದಲ್ಲಿ ಕಾಳ್ಗಿಚ್ಚು
ಪಂಜಾಬ್, ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ರೈತರು ಬೀದಿಗೆ ಇಳಿದು ಸರ್ಕಾರಗಳ ಜೊತೆ ಸಂಘರ್ಷಕ್ಕೆ ಬಿದ್ದಿದ್ದಾರೆ. ಕೃಷಿ ಮಸೂದೆಗಳನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಪಂಜಾಬ್‌ನಲ್ಲಿಯೂ ಮೊದಲ ಬಾರಿಗೆ ಡೊಡ್ಡ-ಸಣ್ಣ ಸೇರಿದಂತೆ 31 ರೈತ ಸಂಘಟನೆಗಳು ಒಟ್ಟುಗೂಡಿವೆ.
ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಸೆಪ್ಟಂಬರ್ 25ರಂದು ಬೃಹತ್ ರಾಜ್ಯವ್ಯಾಪಿ ಬಂದ್ ನಡೆಸಲಿವೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಚಿಕ್ಕಬಳ್ಳಾಪುರ: ಅಂಗಡಿ ಮುಂದೆ ಉಗುಳಿದ್ದಕ್ಕೆ ಯುವಕನ ಕೊಲೆ ನಡೆದಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಊಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮುನಿಕೃಷ್ಣ(23) ಕೊಲೆಯಾದ ದುರ್ದೈವಿಯಾಗಿದ್ದು, ಇಂದು ಬೆಳಿಗ್ಗೆ ಅದೇ ಗ್ರಾಮದ ಚೇತನ್ ಎಂಬಾತನ ಅಂಗಡಿಗೆ ಬಂದಿದ್ದ ಮುನಿಕೃಷ್ಣ ಅಂಗಡಿಯ ಮುಂದೆ ಉಗುಳಿದ್ದಾನೆ.
ಇದರಿಂದ ಕುಪಿತಗೊಂಡ ಚೇತನ್, ಮುನಿಕೃಷ್ಣನೊಂದಿಗೆ ಜಗಳವಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ, ಮುನಿಕೃಷ್ಣನನ್ನು ಚೇತನ್ ಚಾಕುವಿನಿಂದ ಇರಿದು ಕೊಲೆ ಮಾಡುವ ಮೂಲಕ ಅಂತ್ಯಗೊಂಡಿದೆ.
ಚೇತನ್
ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಶ್ರೀನಿವಾಸಪ್ಪ, ಪಿಎಸ್ಐ ನರೇಶ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಚೇತನ್ ನನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಕೊಲೆಯಾದ ಮುನಿಕೃಷ್ಣ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕೊಪ್ಪಳ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೃಷಿಕರ ಪ್ರತಿಭಟನೆಯಲ್ಲಿ ರೈತಮಹಿಳೆ ಮಂಜುಳಾ ಪೂಜಾರಿಯವರು ಮಾಧ್ಯಮದವರೊಂದಿಗೆ ಮಾತನಾಡುವ ಭರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಬಗ್ಗೆ ಅವಹೇಳನಕಾರಿ ಪದ ಬಳಸಿರುವುದು ಸರಿಯಲ್ಲ.
ಕೂಡಲೇ ಮಂಜುಳಾ ಅವರು ಸಚಿವ ಬಿ.ಸಿ. ಪಾಟೀಲ ಅವರ ಕ್ಷಮೆ ಕೇಳಬೇಕು ಎಂದು ಬಿ.ಸಿ.ಪಾಟೀಲ ಅಭಿಮಾನಿ ಬಳಗದ ಮುಖಂಡ ಬಸನಗೌಡ ಕಕ್ಕರಗೋಳ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಚಿವ ಬಿ.ಸಿ.ಪಾಟೀಲ ಅವರು ರಾಜ್ಯದ ರೈತರ ಅಭಿವೃದ್ಧಿ ಕುರಿತು ಅಗಾಧ ಕನಸು ಕಂಡಿದ್ದಾರೆ. ಕೃಷಿಪರ ಇರುವ ಸಚಿವರ ಉತ್ಸಾಹಕ್ಕೆ ತಣ್ಣೀರೆರಚುವಂಥ, ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥ ಪದ ಬಳಸಿರುವುದು ವಿವೇಚನಾರಹಿತರು ಮಾಡುವ ಕೆಲಸ.
ಕೂಡಲೇ ಮಂಜುಳಾ ಪೂಜಾರಿಯವರು ಸಚಿವ ಬಿ.ಸಿ. ಪಾಟೀಲ ಬಳಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿ.ಸಿ.ಪಾಟೀಲ ಅಭಿಮಾನಿ ಬಳಗ ಪ್ರತಿಭಟನೆಗೆ ಮುಂದಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯ ಸೇತುವೆ ಏಕಾಏಕಿ ಒಂದು ಅಡಿಯಷ್ಟು ಕುಸಿದಿದೆ.
ಬಳ್ಳಾರಿ ಜಿಲ್ಲೆಯ ಹಡಗಲಿ ಮತ್ತು ಗದಗ ಮಾರ್ಗದಲ್ಲಿರುವ ಬ್ರಿಡ್ಜ್ ನ ಮದ್ಯೆ ಏಕಾಏಕಿ ಕಂದಕ ಸೃಷ್ಠಿಯಾಗಿ ಭಾರೀ ಬಿರುಕು ಬಿಟ್ಟ ಪರಿಣಾಮ ಲಾರಿ ಮತ್ತು ಕಾರುಗಳು ಜಖಂಗೊಂಡಿವೆ.
ಬುಧವಾರ ಬೆಳ್ಳಂಬೆಳಗ್ಗೆ ಈ ಸೇತುವೆಯ ಮೇಲ್ಭಾಗದಲ್ಲಿ ಕುಸಿತ ಕಂಡುಬಂದಿದೆ. 2002 ರಲ್ಲಿ ನಿರ್ಮಾಣಗೊಂಡಿದ್ದ ಈ ಬ್ರಿಡ್ಜ್ ಸಾಕಷ್ಟು ಶಿಥಿಲಾವಸ್ಥೆಯಲ್ಲಿದ್ದರೂ ಸಹ ಲೋಕೋಪಯೋಗಿ ಇಲಾಖೆ ಇತ್ತ ಗಮನಹರಿಸಿರಲಿಲ್ಲ.
ಬ್ರಿಡ್ಜ್ ನವೀಕರಣದ ಬಗ್ಗೆ ಅನೇಕ ಸಲ ದೂರು ಸಲ್ಲಿಸಿದ್ದರು ಸಹ ಕ್ಯಾರೇ ಎಂದಿರಲಿಲ್ಲ. ಬೆಳಗಿನ ಜಾವ ಕುಸಿತ ಕಂಡಿದ್ದು, ಈ ವೇಳೆ ವಾಹನ ಸಂಚಾರ ಕಡಿಮೆಯಿದ್ದ ಪರಿಣಾಮ ಹೆಚ್ಚಿನ ಅಪಾಯ ಸಂಭವಿಸಿಲ್ಲ.
ಘಟನೆಯ ನಂತರ ಲೋಕೋಪಯೋಗಿ ಇಲಾಖೆಯ ಇಂಜನಿಯರುಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಮಂಗಳವಾರ ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ, ಕೊವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗುತ್ತಿರುವ ಜ್ವಲಂತ ಸಮಸ್ಯೆಯನ್ನು ಗದಗ ಶಾಸಕ ಎಚ್.ಕೆ. ಪಾಟೀಲರು ಪ್ರಸ್ತಾಪಿಸಿದ್ದರು. ಪಕ್ಕದ ರಾಜ್ಯಗಳಿಗೆ ಆಕ್ಸಿಜನ್ ಕಳಿಸುವ ಸರ್ಕಾರ, ಇಲ್ಲೇ ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವ ಕೊವಿಡ್ ರೋಗಿಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಿಡಿ ಕಾರಿದ್ದರು.
ಕೊವಿಡ್ ತೀವ್ರವಾಗಿರುವ ಐದಾರು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆಯಿದೆ. ಉತ್ಪಾದನೆ, ಪೂರೈಕೆ ಮತ್ತು ವಿತರಣೆಯಲ್ಲಿ ಸಾಕಷ್ಟು ದೋಷಗಳಿವೆ. ಮಂಗಳವಾರ ಕೇಂದ್ರ ಆರೋಗ್ಯ ಇಲಾಖೆ ಆಕ್ಸಿಜನ್ ಕೊರತೆಯಿಲ್ಲ, ಬದಲಿಗೆ ಅದನ್ನು ಬಳಸುವ ನಿರ್ವಹಣೆಯಲ್ಲಿ ಆಸ್ಪತ್ರೆಗಳು ತಪ್ಪು ಮಾಡುತ್ತಿವೆ, ಇದರಿಂದ ಆಕ್ಸಿಜನ್ ಕೊರತೆಯಾಗುತ್ತಿದೆ ಎಂದು ಹೇಳಿದೆ.
ಕಳೆದ 45 ದಿನದಲ್ಲಿ ಆಕ್ಸಿಜನ್ ಅಗತ್ಯವಿರುವ ಕೊವಿಡ್ ರೋಗಿಗಳ ಸಂಖ್ಯೆ ಶೇ. 1ರಷ್ಟು ಏರಿಕೆಯಾಗಿದೆ. 45 ದಿನದ ಹಿಂದೆ ಆಕ್ಸಿಜನ್ ಅಗತ್ಯವಿರುವ ಸಕ್ರಿಯ ರೋಗಿಗಳ ಸಂಖ್ಯೆ ಶೇ. 5.6 ಇತ್ತು. ಈಗ ಅದು ಶೇ. 6.5ಗೆ ಏರಿದೆ.
ಒಂದು ಪರ್ಸೆಂಟ್ ಏರಿಕೆ ಸಣ್ಣದು ಎನಿಸಿದರೂ, ದೈನಂದಿನ ಕೇಸುಗಳ ಸಂಖ್ಯೆ ನೋಡಿದರೆ ಇದು ಗಣನೀಯ ಏರಿಕೆಯೇ. ಇಷ್ಟಾದರೂ ಈಗ ಉತ್ಪಾನೆಯಾಗುತ್ತಿರುವ ಆಕ್ಸಿಜನ್‌ನಲ್ಲೇ ನಿರ್ವಹಣೆ ಮಾಡಲು ಸಾಧ್ಯ ಎಂಬುದು ಕೇಂದ್ರದ ವಾದ.
ಕೇಂದ್ರ ಸರ್ಕಾರದ ಪ್ರಕಾರ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆಗಳು ಆಕ್ಸಿಜನ್ ಬಳಸುತ್ತಿವೆ. ಸೌಮ್ಯ ಲಕ್ಷಣಗಳಿರುವ ಕೊವಿಡ್ ರೋಗಿಗಳಲ್ಲಿ ಎಷ್ಟು ಜನರಿಗೆ ಆಕ್ಸಿಜನ್ ಅಗತ್ಯ ಎಂಬುದರ ಅಂದಾಜನ್ನು ಮೊದಲೇ ಮಾಡಿಕೊಳ್ಳುತ್ತಿಲ್ಲ. ರೋಗಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲೂ ಆಕ್ಸಿಜನ್ ಪೂರೈಸಿದ ವರದಿಗಳಿವೆ.
ಕೆಲವು ದೊಡ್ಡ ಆಸ್ಪತ್ರೆಗಳು ನೇರವಾಗಿ ಉತ್ಪಾದಕರಿಂದ ಆಕ್ಸಿಜನ್ ಸಿಲಿಂಡರ್ ಪಡೆದರೆ, ಉಳಿದ ಆಸ್ಪತ್ರೆಗಳು ಬಾಟ್ಲರ್‌ಗಳ ಮೂಲಕ ಪಡೆಯುತ್ತವೆ. ಈ ಬಾಟ್ಲರ್‌ಗಳು ಉತ್ಪಾದಕರಿಂದ ಪಡೆದು, ಅದನ್ನು ಸಿಲಿಂಡರ್‌ಗೆ ತುಂಬಿ ಪೂರೈಸುತ್ತಾರೆ. ಇಲ್ಲಿಯೂ ವಿಳಂಬವಾಗುತ್ತಿದೆ.
ಇವೆಲ್ಲ ಕಾರಣಗಳು ಸರಿ. ಆದರೆ ಈಗ ಆಗಬೇಕಾದ ತುರ್ತು ಕೆಲಸ ಆಕ್ಸಿಜನ್ ಕೊರತೆಯ ಕಾರಣಕ್ಕೇ ಸಾವು ಸಂಭವಿಸದಂತೆ ತಡೆಯುವುದೇ ಆಗಿದೆ. ಸಾಕಷ್ಟು ಉತ್ಪಾದನೆಯಿದ್ದೂ, ಅದರ ಸಮರ್ಪಕ ಉಪಯೋಗ ಮಾಡದಿದ್ದರೆ ಈ ಆಡಳಿತ ವ್ಯವಸ್ಥೆ ಇದ್ದೂ ಏನು ಉಪಯೋಗ?
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಚೆನ್ನೈ/ಬೆಂಗಳೂರು/ನವದೆಹಲಿ: ಬೆಂಗಳೂರಿನ ಪರಪ್ಪ ಅಗ್ರಹಾರ ಜೈಲಿನಲ್ಲಿರುವ ದಿ. ಜಯಲಲಿತಾರ ಆಪ್ತ ಗೆಳತಿ ಶಶಿಕಲಾರನ್ನು ಸನ್ನಡತೆಯ ಆಧಾರದ ಮೇಲೆ ನಾಲ್ಕು ತಿಂಗಳು ಮೊದಲೇ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ವಾರೊಪ್ಪತ್ತಿನಲ್ಲಿ ಅವರು ಹೊರಗೆ ಬರುತ್ತಿದ್ದಾರೆ.
ಎಐಡಿಎಂಕೆಯಿಂದ ಒಡೆದು ಹೋಗಿರುವ ಎಎಂಎಂಕೆ ಬಣ (ಶಶಿಕಲಾ ಬೆಂಬಲಿಗರ ಬಣ)ವನ್ನು ಮರಳಿ ಎಐಡಿಎಂಕೆಯಲ್ಲಿ ವಿಲೀನಗೊಳಿಸುವ ಮೀಡಿಯೇಟರ್ ಕೆಲಸಕ್ಕೆ ರಾಷ್ಟ್ರೀಯ ಬಿಜೆಪಿ ಅದಾಗಲೇ ಇಳಿದಾಗಿದೆ. ಎಎಂಎಂಕೆ ನಡೆಸುತ್ತಿರುವ ಟಿಟಿಕೆ ದಿನಕರನ್ ಎರಡು ದಿನದ ಹಿಂದಷ್ಟೇ ದೆಹಲಿಗೆ ಹೋಗಿ ಬಂದಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದಾಗಿ, ಮುಂದಿನ ರಾಜಕೀಯದ ಬಗ್ಗೆ ಚರ್ಚಿಸಿದ್ದಾಗಿ ಅವರೇ ಹೇಳಿದ್ದಾರೆ.
ಮೇ 2021ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಸತತ ಎರಡನೇ ಬಾರಿ ಅಧಿಕಾರ ನಡೆಸುತ್ತಿರುವ ಎಐಡಿಎಂಕೆ ವಿರುದ್ಧ ಜನಾಭಿಪ್ರಾಯ ರೂಪುಗೊಂಡಿದೆ. ಅದೂ ಅಲ್ಲದೇ ಜಯಲಲಿತಾ ಇಲ್ಲದೇ ಅದು ಮೊದಲ ಸಲ ಚುನಾವಣೆ ಎದುರಿಸಲಿದೆ.
ದಕ್ಷಿಣದಲ್ಲಿ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಹೇಳಿಕೊಳ್ಳುವ ಅಸ್ತಿತ್ವವೇ ಇಲ್ಲದ ಬಿಜೆಪಿ ಈಗ ಒಡೆದು ಹೋದ ಎಐಎಡಿಎಂಕೆಯ ಬಣವನ್ನು ಮರಳಿ ಮೂಲ ಪಕ್ಷಕ್ಕೆ ಸೇರಿಸುವ ಮಧ್ಯಸ್ಥಿಕೆ ಕೆಲಸ ಶುರು ಮಾಡಿದೆ. ಎಐಡಿಎಂಕೆ ಮತ್ತು ಬಿಜೆಪಿ ಪರಸ್ಪರ ಹೊಂದಾಣಿಕೆ ಹೊಂದಿವೆ.
ಅಂದಂತೆ ಜಯಲಲಿತಾ ಸಾವಿನ ನಂತರ ಎಐಡಿಎಂಕೆ ಹೋಳಾಗಲು ಬಿಜೆಪಿಯೇ ಕಾರಣ ಎಂಬುದನ್ನು ಜನ ಮರೆತಿರಲಾರರು. ಕಾದು ನೋಡಬೇಕು.
65 ಕೋಟಿ ರೂ. ಭ್ರಷ್ಟಾಚಾರ ಹಗರಣದಲ್ಲಿ 4 ವರ್ಷ ಜೈಲುಶಿಕ್ಷೆ ಅನುಭವಿಸಿದ ಶಶಿಕಲಾ ಶಿಕ್ಷೆಯ ಅವಧಿ ಜನವರಿಗೆ ಮುಗಿಯುತ್ತದಾದರೂ, ಸನ್ನಡತೆಯ ಆಧಾರದ ಮೇಲೆ ಈ ವಾರ ಅಥವಾ ಮುಂದಿನ ವಾರ ಅವರ ಬಿಡುಗಡೆ ಆಗಲಿದೆ ಎಂದು ಅವರ ವಕೀಲರು ಹೇಳಿದ್ದಾರೆ.
ಸದ್ಯಕ್ಕೆ ಅಂತಹ ವಾತಾವರಣವಂತೂ ಇಲ್ಲ. ಈ ನಡುವೆ ವಿರೋಧ ಪಕ್ಷ ಡಿಎಂಕೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಹಿಂದಿ ಹೇರಿಕೆಯ ವಿರುದ್ಧದ ಅಲೆ ಜೋರಾಗಿಯೇ ಇದ್ದು, ಇದು ಡಿಎಂಕೆಗೆ ವರದಾನವೂ, ಬಿಜೆಪಿ ಸಖ್ಯ ಮಾಡಿದರೆ ಎಐಡಿಎಂಕೆಗೆ ಶಾಪವೂ ಆಗಬಹುದು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಕೊವಿಡ್ ಲಾಕ್‌ಡೌನ್ ಕಾರಣಕ್ಕೆ ಮಾರ್ಚ್-ಜೂನ್ ಅವಧಿಯಲ್ಲಿ 1 ಕೋಟಿ 6 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ಪ್ರದೇಶದಿಂದ ತಮ್ಮೂರಿಗೆ ನಡೆದುಕೊಂಡೇ ಹೋಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಸ್ತೆ ಮತ್ತು ಹೆದ್ದಾರಿ ರಾಜ್ಯ ಸಚಿವ ವಿ.ಕೆ.ಸಿಂಗ್ ಮಂಗಳವಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ. ಮಾರ್ಚ್-ಜೂನ್ ಅವಧಿಯಲ್ಲಿ ಹೆದ್ದಾರಿ ಸೇರಿ ಒಟ್ಟು 81,385 ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿ 29,415 ಜನರು ಮೃತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ, ವಲಸೆ ಕಾರ್ಮಿಕರ ಕುರಿತಂತೆ ಪ್ರತ್ಯೇಕ ವರದಿಯನ್ನು ತಮ್ಮ ಸಚಿವಾಲಯ ಸಿದ್ಧಪಡಿಸಿಲ್ಲ ಎಂದು ತಿಳಿಸಿದ್ದಾರೆ.