Home Blog Page 3057

ಜಿಪಂ, ತಾಪಂ ಕ್ಷೇತ್ರಗಳ ಮರು ವಿಂಗಡಣೆ; ಗದಗ ಜಿಲ್ಲೆಯ ಕ್ಷೇತ್ರವಾರು ವಿವರ ಇಲ್ಲಿದೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಎಲ್ಲ ತಾಲೂಕು, ಜಿಲ್ಲಾ ಪಂಚಾಯತಿಗಳ ಕ್ಷೇತ್ರ ಪುನರ್ ವಿಂಗಡಣೆ ನಂತರ ಹೊಸದಾಗಿ ರಚನೆಯಾದ ಕ್ಷೇತ್ರಗಳ ಸಂಖ್ಯೆ ಹಾಗೂ ಹೆಸರುಗಳನ್ನು ಘೋಷಿಸಿ ರಾಜ್ಯ ಚುನಾವಣಾ ಆಯೋಗ ಮಾ.24ರಂದು ಅಧಿಸೂಚನೆ ಹೊರಡಿಸಿದ್ದು, ಮಾ.30ರಂದು ಅವುಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಪ್ರದೇಶವನ್ನು ನಿಗದಿಪಡಿಸಿ ಅಧಿಕೃತವಾಗಿ ಆದೇಶಿಸಿದೆ.

ಮುಂಬರುವ ಜಿಪಂ, ತಾಪಂ ಚುನಾವಣೆ ವೇಳೆ 19 ಕ್ಷೇತ್ರಗಳ ಬದಲು ಒಟ್ಟು 24 ಜಿಲ್ಲಾ ಪಂಚಾಯತ ಕ್ಷೇತ್ರಗಳು ಆಗಲಿವೆ. ಅದರಲ್ಲಿ ಗದಗ-6, ಮುಂಡರಗಿ-4, ರೋಣ-4, ಗಜೇಂದ್ರಗಡ -2, ನರಗುಂದ-2, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕು ತಲಾ ಮೂರು ಕ್ಷೇತ್ರಗಳನ್ನು ಹೊಂದಿವೆ.

ಜಿಲ್ಲೆಯಲ್ಲಿರುವ ತಾಲೂಕು ಪಂಚಾಯತಿ ಕ್ಷೇತ್ರಗಳಿಗೆ ಕತ್ತರಿ ಬಿದ್ದಿದ್ದು, ಜಿಲ್ಲೆಯಲ್ಲಿ ಒಟ್ಟು 79 ತಾಪಂ ಕ್ಷೇತ್ರಗಳಾಗಿವೆ. ಅದರಲ್ಲಿ ಗದಗ-15, ಮುಂಡರಗಿ-9, ರೋಣ, ಗಜೇಂದ್ರಗಡ, ನರಗುಂದ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಲಾ 11 ತಾಪಂ ಕ್ಷೇತ್ರಗಳನ್ನು ಹೊಂದಿವೆ.

ಜಿಪಂ ಕ್ಷೇತ್ರಗಳು

ಗದಗನ ಹೊಂಬಳ, ಹುಲಕೋಟಿ, ಕುರ್ತಕೋಟಿ, ಲಕ್ಕುಂಡಿ, ಸೊರಟೂರ, ಮುಂಡರಗಿಯ ಡಂಬಳ, ಹಿರೇವಡ್ಡಟ್ಟಿ, ಹಮ್ಮಿಗಿ, ರೋಣದ ಹೊಳೆಆಲೂರ, ಬೆಳವಣಿಕಿ, ಅಬ್ಬಿಗೇರಿ, ಗಜೇಂದ್ರಗಡ ತಾಲೂಕಿನ ಸೂಡಿ, ನಿಡಗುಂದಿ, ನರಗುಂದದ ಕೊಣ್ಣೂರ, ಚಿಕ್ಕನರಗುಂದ, ಶಿರಹಟ್ಟಿಯ ಮಾಗಡಿ, ಬೆಳ್ಳಟ್ಟಿ, ಇಟಗಿ(ಹೆಬ್ಬಾಳ), ಲಕ್ಷ್ಮೇಶ್ವರದ ಶಿಗ್ಲಿ ಸೂರಣಗಿ, ಕ್ಷೇತ್ರಗಳ ಮರು ವಿಂಗಡಣೆಯಿಂದಾಗಿ ಕೋಟುಮಚಗಿ, ಹಿರೇಹಾಳ, ಕಲಕೇರಿ, ಯಳವತ್ತಿ ಹಾಗೂ ಬಾಲೆಹೊಸೂರು ನೂತನ ಜಿಪಂ ಕ್ಷೇತ್ರಗಳಾಗಿ ಸೇರ್ಪಡೆಗೊಂಡಿವೆ.

ತಾಪಂ ಕ್ಷೇತ್ರಗಳು

ಗದಗನ ಬಳಗಾನೂರ, ಹೊಂಬಳ, ಚಿಕ್ಕಹಂದಿಗೋಳ, ಹುಯಿಲಗೋಳ, ಕೋಟುಮಚಗಿ, ಹರ್ಲಾಪೂರ, ಅಡವಿಸೋಮಾಪುರ, ಲಕ್ಕುಂಡಿ, ಅಸುಂಡಿ(ಬಿಂಕದಕಟ್ಟಿ), ಹುಲಕೋಟಿ, ಕುರ್ತಕೋಟಿ, ನಾಗಾವಿ, ಹರ್ತಿ, ಚಿಂಚಲಿ, ಸೊರಟೂರ, ಮುಂಡರಗಿಯ ಜಂತ್ಲಿ(ಕದಾಂಪೂರ), ಡೋಣಿ, ಡಂಬಳ, ಪೇಠಾಲೂರ, ಹಿರೇವಡ್ಡಟ್ಟಿ, ಬಾಗೇವಾಡಿ, ಕಲಕೇರಿ, ಕೊರ್ಲಹಳ್ಳಿ, ಹಮ್ಮಿಗಿ, ರೋಣದ ಮೆಣಸಗಿ, ಯಾವಗಲ್ಲ, ಬೆಳವಣಿಕಿ, ಹೊಳೆಆಲೂರ, ಹುಲ್ಲೂರ, ಹಿರೇಹಾಳ, ಕೊತಬಾಳ, ಇಟಗಿ, ಸವಡಿ, ಜಕ್ಕಲಿ, ಅಬ್ಬಿಗೇರಿ, ಗಜೇಂದ್ರಗಡದ ಶಾಂತಗೇರಿ, ಮುಶೀಗೇರಿ, ಲಕ್ಕಲಕಟ್ಟಿ, ಗುಳಗುಳಿ, ಸೂಡಿ, ಕುಂಟೋಜಿ, ರಾಜೂರ, ಗೋಗೇರಿ, ರಾಂಪೂರ, ನಿಡಗುಂದಿ, ಹಾಲಕೇರಿ, ನರಗುಂದದ ಕೊಣ್ಣೂರ-೧ ಮತ್ತು ೨, ಹಿರೇಕೊಪ್ಪ, ಚಿಕ್ಕನರಗುಂದ, ಕಣಕೀಕೊಪ್ಪ, ಶಿರೋಳ, ರಡ್ಡೇರ ನಾಗನೂರ, ಹದಲಿ, ಸುರಕೋಡ, ಬನಹಟ್ಟಿ, ಹುಣಶೀಕಟ್ಟಿ,

ಶಿರಹಟ್ಟಿಯ ಮಾಗಡಿ, ಛಬ್ಬಿ, ಕಡಕೋಳ, ರಣತೂರ, ಬನ್ನಿಕೊಪ್ಪ, ಬೆಳ್ಳಟ್ಟಿ, ಕೊಂಚಿಗೇರಿ, ಸೇವಾನಗರ, ಕೊಗನೂರ, ಹೆಬ್ಬಾಳ, ಇಟಗಿ, ಲಕ್ಷ್ಮೇಶ್ವರದ ಯಳವತ್ತಿ, ಮಾಡಳ್ಳಿ, ಗೊಜನೂರ, ಅಡರಕಟ್ಟಿ, ಪು.ಬಡ್ನಿ, ದೊಡ್ಡೂರ, ಶಿಗ್ಲಿ, ರಾಮಗೇರಿ, ಸೂರಣಗಿ, ಬಾಲೆಹೊಸೂರ ಹಾಗೂ ಆದರಹಳ್ಳಿ ಸೇರಿ ಜಿಲ್ಲೆಯ ,7 ತಾಲೂಕುಗಳಲ್ಲಿ ಒಟ್ಟು 79 ತಾಪಂ ಕ್ಷೇತ್ರಗಳು ರಚನೆಯಾಗಿವೆ.

ಕೊಪ್ಪಳದ ನೂತನ  ಡಿವೈಎಸ್‌ಪಿ ಗೀತಾ ಬೆನಹಾಳ ಅಧಿಕಾರ ಸ್ವೀಕಾರ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೊಪ್ಪಳ ಡಿವೈಎಸ್‌ಪಿಯಾಗಿ ಗೀತಾ ಬೆನಹಾಳ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ಇದ್ದ ವೆಂಕಟಪ್ಪ ನಾಯಕ್ ಬಾಗಲಕೋಟೆಗೆ ವರ್ಗಾವಣೆಯಾಗಿದ್ದಾರೆ. 

ಸಿಐಡಿಯಲ್ಲಿದ್ದ ಗೀತಾ ಬೆನಹಾಳರನ್ನು ಕೊಪ್ಪಳ ಉಪವಿಭಾಗಕ್ಕೆ  ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಿ  ಆದೇಶ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರದಂದು ಗೀತಾ ಅವರು ಡಿವೈಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದರು.

2021ರ ಕಾಲು ವರ್ಷ ಕಳೆದರೂ ಕಾಲು ಕೀಳದ ಕೊರೋನಾ

ಟಾಯ್ ಕ್ಲಸ್ಟರ್ಗೆ ಭೂಮಿಪೂಜೆ, ಅಂಜನಾದ್ರಿ ಅಭಿವೃದ್ಧಿಗೆ ಅನುದಾನ

ಚಿರತೆ ಕಾಟಕ್ಕೆ ಬೇಸತ್ತ ಗಂಗಾವತಿ ಭಾಗದ ಜನ, ಕನಕಗಿರಿ ಕ್ಷೇತ್ರದಲ್ಲಿ ನಿಲ್ಲದ ರಾಜಕೀಯ ಫೈಟ್

ಬಸವರಾಜ ಕರುಗಲ್
ವಿಜಯಸಾಕ್ಷಿ ವಿಶೇಷ, ಕೊಪ್ಪಳ: ಕೋವಿಡ್-19 ಭೀತಿಯಲ್ಲೇ 2020ಕ್ಕೆ ಮುಗಿದು ಹೋಯ್ತು. 2021ರ ಆರಂಭವಾಗುತ್ತಿದ್ದಂತೆ ಬಾಘಿಲು ಮುಚ್ಚಿದ್ದ ಶಾಲೆಗಳು ತೆರೆದವು. ಹಾಗಾಗಿ ಕೊರೋನಾತಂಕ ಮುಗಿಯಿತು ಎನ್ನುವಷ್ಟರಲ್ಲೇ ಹೊಸ ವರ್ಷದ ಕಾಲು ಭಾಗದ ಅಂತ್ಯದ ಹೊತ್ತಿಗೆ ಮತ್ತೇ ಕೊರೋನಾರ್ಭಟ ಶುರುವಾಗಿದೆ. ಈ ಕಾಲು ವರ್ಷದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಸಂಗತಿಗಳ ಸುತ್ತ ಒಂದು ಸುತ್ತು ಇಲ್ಲಿದೆ.

2021ರ ಜನವರಿ 1 ಆರಂಭವಾಗುತ್ತಿದ್ದಂತೆ ಹೊಸ ವರ್ಷದ ಸಂಭ್ರಮದ ಜೊತೆಗೆ ಶಾಲೆಗಳು ಪುನಾರಂಭಗೊಂಡವು. ಸುಮಾರು ತಿಂಗಳುಗಳ ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂವಿನ ಹಾಸಿಗೆ ಹಾಸಿ, ಪುಷ್ಟಮಳೆ ಸುರಿದು ಶಿಕ್ಷಕರು ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು. ಜೊತೆಗೆ 2020ರ ಡಿಸೆಂಬರ್ನಲ್ಲಿ ನಡೆದಿದ್ದ ಗ್ರಾಪಂ ಚುನಾವಣೆಯ ಸಂಪೂರ್ಣ ಫಲಿತಾಂಶವೂ ಹೊರಬಿತ್ತು.


ಗಂಗಾವತಿ ತಾಲೂಕಿನ ಆನೆಗೊಂದಿ, ಅಂಜನಾದ್ರಿ, ದುರ್ಗಾದೇವಿ ಗುಡಿ ಸುತ್ತಮುತ್ತ ಚಿರತೆ ಕಾಟ ನಿಂತಿರಲಿಲ್ಲ. ಕಳೆದ ವರ್ಷಾಂತ್ಯಕ್ಕೆ ಪೂಜಾರಿಯನ್ನೇ ಕೊಂದಿದ್ದ ಚಿರತೆ, ಆಡು ಮೇಯಿಸಲು ತೆರಳಿದ್ದ ಯುವಕನನ್ನೂ ಸಹ ಕೊಂದಿತ್ತು. ಅರಣ್ಯ ಸಚಿವರ ಭೇಟಿಗೆ ಪಟ್ಟು ಹೆಚ್ಚಾಗಿದ್ದರಿಂದ ಸಚಿವ ಆನಂದ್ ಸಿಂಗ್ ಮೃತ ಯುವಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಪರಿಹಾರ ವಿತರಿಸಿದ್ದರು. ಚಿರತೆ ಸೆರೆಗೆ ಗಜಪಡೆಯ ಪ್ರಯೋಗ ಮಾಡಲಾಯಿತಾದರೂ ಫಲ ನೀಡಲಿಲ್ಲ.

ಗ್ರಾಪಂ ಚುನಾವಣೆಯಲ್ಲಿ ಗೆದ್ದವರನ್ನು ಸನ್ಮಾನಿಸಲು ಕಾಂಗ್ರೆಸ್-ಬಿಜೆಪಿ ಪೈಪೋಟಿ ನಡೆಸಿ ಗೆದ್ದವರನ್ನು ಸನ್ಮಾನಿಸಿ ಬಲ ಪ್ರದರ್ಶನ ಮಾಡಿದವು. ಈ ವೇಳೆ ಸಚಿವರ ದಂಡೇ ಕೊಪ್ಪಳದಲ್ಲಿತ್ತು. ಕಾಂಗ್ರೆಸ್ ಸಹ ಬಿಜೆಪಿ ವಿರುದ್ಧ ಜಿದ್ದಿಗೆ ಬಿದ್ದಂತೆ ಸನ್ಮಾನ ಸಮಾರಂಭ ನಡೆಸಿತು. ಕುಕನೂರಿನ ಸಂಶೋಧಕ ಗುಲಬರ್ಗಾ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಸಬರದ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಡಾ.ಗದ್ದಗಿಮಠ ತಜ್ಞ ಪ್ರಶಸ್ತಿ ಲಭಿಸಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯ.


ಧಾರವಾಡದ ಮೈಲಾರಲಿಂಗ ಸ್ವಾಮಿ ಅಂಜನಾದ್ರಿ ಬೆಟ್ಟಗಳ ಮೇಲೆ ಉರುಳು ಸೇವೆ ಮಾಡಿದ್ದು ವಿಶೇಷವಾಗಿತ್ತು. ಜೊತೆಗೆ ಅಂಜನಾದ್ರಿ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸುಮಾರು 50 ಕೋಟಿ ರೂಪಾಯಿ ಅನುದಾನ ಮಂಜೂರುಗೊಳಿಸಿದ್ದು, ಏಪ್ರಿಲ್ 16ಕ್ಕೆ ಭೂಮಿ ಪೂಜೆ ನೆರವೇರುತ್ತಿರುವುದು ಜಿಲ್ಲೆಯ ಮಟ್ಟಿಗೆ ಸಂತಸದ ಸಂಗತಿ.

ಹಾಗೆಯೇ ಕುಕನೂರು ತಾಲೂಕಿನ ಭಾನಾಪುರ ಬಳಿ ಟಾಯ್ ಕ್ಲಸ್ಟರ್ಗೆ ಜನವರಿ 9ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದ್ದು 2022ರ ಜನೇವರಿ ವೇಳೆಗೆ ಟಾಯ್ ಕ್ಲಸ್ಟರ್ ಕಾರ್ಯಾರಂಭಗೊಳ್ಳುವ ಭರವಸೆ ನೀಡಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಜಯಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ನಡೆಸುತ್ತಿದ್ದ ಪಾದಯಾತ್ರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕಿನ್ನಾಳ, ಕೊಪ್ಪಳ, ಗಿಣಗೇರಾ, ಹುಲಗಿ ಮಾರ್ಗವಾಗಿ ಸಂಚರಿಸಿ ಹೊಸಪೇಟೆ ತಲುಪಿತು.


ಜನವರಿ ಎರಡನೇ ವಾರದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಯ ಮೂವರು ಬಿಜೆಪಿ ಶಾಸಕರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಮತ್ತೇ ಹುಸಿಯಾಯಿತು. ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೆಸರು ಬಲವಾಗಿ ಕೇಳಿ ಬಂದಿತ್ತಾದರೂ ನಿರಾಸೆಯಾಯಿತು. ಶಾಸಕ ಆಚಾರ್ ಸಹ ಬೇಸರಗೊಂಡದ್ದು ಜನಸೇವಕ್ ಸಮಾವೇಶದಲ್ಲಿ ಕಂಡು ಬಂತು.

ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಜನವರಿ 30ರಂದು ಸರಳವಾಗಿ ನಡೆಯಿತು. ಈ ಸಲ ಬೆಳಗ್ಗೆ ರಥೋತ್ಸವ ನಡೆದದ್ದು ವಿಶೇಷವಾಗಿತ್ತು. ಈ ಸಲದ ಜಾತ್ರಾ ಮಹೋತ್ಸವದ ಶ್ರೀಗಳ ಸಂಕಲ್ಪದ ಅಂಗವಾಗಿ ಗಿಣಗೇರಾ ಕೆರೆ ಹೂಳೆತ್ತುವ ಕಾರ್ಯಕ್ಕೆ ಫೆ.21ರಂದು ಚಾಲನೆ ನೀಡಲಾಯಿತು. ಹಾಗೆಯೇ ಕುಕನೂರು ತಾಲೂಕಿನ ಕಟ್ಟಕಡೆಯ ಗ್ರಾಮ ಅಡವಿಹಳ್ಳಿಯನ್ನು ಗವಿಶ್ರೀಗಳು ದತ್ತು ಪಡೆದು ಅಭಿವೃದ್ಧಿಗೆ ಫೆ.27ರಂದು ಚಾಲನೆ ನೀಡಿದರು. 24*7 ಡಿಜಿಟಲ್ ಗ್ರಂಥಾಲಯವನ್ನು ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು.

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಹಿಟ್ನಾಳ್ ಟೋಲ್ಗೇಟ್ ಬಳಿ ಪ್ರತಿಭಟನೆ ಹಾಗೆಯೇ ಕನಕಗಿರಿ ಕ್ಷೇತ್ರದಲ್ಲಿ ಬೆಲೆ ಏರಿಕೆ ಖಂಡಿಸಿ ನಡೆಸಿದ ಕಾಂಗ್ರೆಸ್ನ ಟ್ರ್ಯಾಕ್ಟರ್ ರ್ಯಾಲಿ, ಪ್ರತಿಯಾಗಿ ಬಿಜೆಪಿ ರ್ಯಾಲಿ, ವಿಜಯೇಂದ್ರ ಆಗಮನ.. ಹೀಗೆ ಕನಕಗಿರಿ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ಇನ್ನೂ ಮುಂದುವರಿದಿದೆ.
ಆರ್ಥಿಕ ಸಂಕಷ್ಟದಿಂದ ಕಿಡ್ನಿ ಮಾರಾಟಕ್ಕಿಟ್ಟ ಗಂಗಾವತಿಯ ನಿರ್ವಾಹಕನ ಪ್ರಕರಣ ದೊಡ್ಡ ಸಂಚಲನ ಮೂಡಿಸಿತ್ತು. ಹಿಟ್ನಾಳ ಟೋಲ್ಗೇಟ್ನಲ್ಲಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಹ ಗೊಂದಲದ ಗೂಡಾಗಿತ್ತು. ಅಧಿಕಾರಿ ಮತ್ತವರ ಸ್ನೇಹಿತರೂ ಸಹ ಮೊದಲು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಪ್ರತಿಯಾಗಿ ಗ್ರಾಮಸ್ಥರು ಮನಬಂದಂತೆ ಅಧಿಕಾರಿಯನ್ನು ಥಳಿಸಿದ್ದರು. ಈ ಕುರಿತು ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

ಈ ನಡುವೆ ಫೆ.1ರ ಕೇಂದ್ರ ಬಜೆಟ್, ಮಾರ್ಚ್ 5ರ ರಾಜ್ಯಬಜೆಟ್ಗೆ ಜಿಲ್ಲೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾರ್ಟ್ ಸರ್ಕ್ಯೂಟ್ನಿಂದಾಗಿ ಯುವಕನೊಬ್ಬ ಮಲಗಿದ ಸ್ಥಳದಲ್ಲೇ ಸಜೀವ ದಹನವಾಗಿದ್ದು, ಕುಷ್ಟಗಿ ತಾಲೂಕಿನ ಹಿರೇನಂದಿಹಾಳದ ಹಳ್ಳದಲ್ಲಿಮರಳು ಅಕ್ರಮದಿಂದಾಗಿ ಮಣ್ಣಿನ ಗುಡ್ಡ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಆತಂಕ ತಂದೊಡ್ಡಿತ್ತು.

ಫೆ.14ರಂದು ಗಂಗಾವತಿ ರೈಲು ನಿಲ್ದಾಣದಿಂದ ಗೂಡ್ಸ್ ಸೇವೆ ಆರಂಭಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು. ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮಹೇಶ್ ಜೋಶಿ, ರಾಜಶೇಖರ ಮುಲಾಲಿ, ಶೇಖರಗೌಡ ಮಾಲೀಪಾಟೀಲ ಪ್ರಚಾರ ನಡೆಸಿದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಫೆಬ್ರವರಿಯಲ್ಲಿ ಕುಷ್ಟಗಿ ತಾಲೂಕಿನ ಹಿರೇ ವಡ್ರಕಲ್ ಹಾಗೂ ಮಾರ್ಚ್ನಲ್ಲಿ ಕುಷ್ಟಗಿ ತಾಲೂಕಿನ ಬೀಳಗಿಯಲ್ಲಿ ಗ್ರಾಮವಾಸ್ತವ್ಯ ಹೂಡಿದ್ದರು. ಕೋವಿಶೀಲ್ಡ್ ಲಸಿಕೆ ಲಭ್ಯವಾಗಿದ್ದು ವರ್ಷದ ಕಾಲು ಭಾಗದೊಳಗೆ ಎಂಬುದು ವಿಶೇಷ. ಆದರೆ ಮಾರ್ಚ್ ಅಂತ್ಯದ ವೇಳೆಗೆ ಜಿಲ್ಲೆಯಲ್ಲೂ ಸಹ ಕೊರೋನಾರ್ಭಟ ಶುರುವಾಗಿದ್ದು ಜನರನ್ನು ಮತ್ತೇ ಆತಂಕದ ಕೂಪಕ್ಕೆ ತಳ್ಳಿದೆ.

ಸೆನ್ಸಾರ್ ನಲ್ಲಿ ಗೆದ್ದ ನಿನ್ನ ಸನಿಹಕೆ;
ಥಿಯೇಟರ್ ಗೆ ಲಗ್ಗೆ ಇಡಲು ತಯಾರು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ನಟ ಸೂರಜ್ ಗೌಡ ಪ್ರಪ್ರಥಮ ಬಾರಿಗೆ ನಿರ್ದೇಶಿಸಿ, ನಟಿಸಿರೋ ಯೂಥ್ ಫುಲ್ ಲವ್ ಸ್ಟೋರಿ ನಿನ್ನ ಸನಿಹಕೆ. ದೊಡ್ಮನೆಯ ಕುಡಿ ಧನ್ಯರಾಮ್ ಕುಮಾರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋ ಸಿನಿಮಾ. ರಘು ದೀಕ್ಷಿತ್ ಸಂಗೀತ ಸಂಯೋಜನೆ ಇರೋ ಈ ಚಿತ್ರದ ಹಾಡುಗಳು ಈಗಾಗ್ಲೇ ಕನ್ನಡ ಸಿನಿಪ್ರಿಯರ ಮನ ಸೆಳೀತಿವೆ. ಹಾಡಿನಿಂದ ಹಾಡಿಗೆ ವಿಶಿಷ್ಠವಾಗಿ ವಿನೂತನವಾಗಿ ಕೇಳುತ್ತಿರುವ, ನೋಡೋದಕ್ಕೂ ಅಷ್ಟೇ ಬ್ಯೂಟಿಫುಲ್ ಆಗಿ ಕಾಣ್ತಿವೆ.

ಪೋಸ್ಟರ್ ನಿಂದ ಸಿನಿಮಾ ಮೇಕಿಂಗ್ ಕ್ವಾಲಿಟಿಯಿಂದ ಕನ್ನಡ ಚಿತ್ರರಂಗದಲ್ಲಿ ವಿಶೇಷ ನಿರೀಕ್ಷೆಯನ್ನ ಭರವಸೆಯನ್ನ ಹುಟ್ಟಿಸಿರೋ ಈ ಚಿತ್ರವನ್ನ ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿ ವೀಕ್ಷಿಸಿ, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಮೂಲಗಳ ಪ್ರಕಾರ ಈ ಸಿನಿಮಾ ಬಗ್ಗೆ ವಿಶೇಷವಾದ ಪ್ರಶಂಸೆಯನ್ನ ಸೆನ್ಸಾರ್ ಮಂಡಳಿಯ ಸದಸ್ಯರು ಚಿತ್ರತಂಡಕ್ಕೆ ನೀಡಿದ್ದು, ಸ್ಯಾಂಡಲ್ ವುಡ್ ಅಂಗಳದಲ್ಲಿ ಈ ಸಿನಿಮಾ ಬಗ್ಗೆ ಟಾಕ್ ದೊಡ್ಡದಾಗಿದೆ.

ಇನ್ನು ಇತೀಚೆಗಷ್ಟೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಮಜಾಟಾಕೀಸ್ ಕಾರ್ಯಕ್ರಮಕ್ಕೆ ಹೋಗಿದ್ದ ನಿನ್ನ ಸನಿಹಕೆ ಟೀಮ್ ಗೆ ದೊಡ್ಡ ಸರ್ಪೈಸ್ ಕಾದಿತ್ತು. ಸೃಜನ್ ಲೋಕೇಶ್ ನೇತೃತ್ವದ ಈ ಕಾರ್ಯಕ್ರಮದಲ್ಲಿ ಧನ್ಯಾ ರಾಮ್ ಕುಮಾರ್ ಅವರಿಗೊಂದು ಸರ್ಪೈಸ್ ಗಿಫ್ಟ್ ಸಿಕ್ಕಿದೆ. ತಮ್ಮ ಅಕ್ಕನ ಮಗಳ ಬಾಲ್ಯದ ದಿನಗಳನ್ನು ಅವ್ರ ಪ್ರತಿಭೆಯ ಬಗ್ಗೆ ವಿಶೇಷವಾದ ಮಾತುಗಳನ್ನು ಆಡೋದ್ರ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧನ್ಯಾರವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಪವರ್ ಸ್ಟಾರ್ ಜೊತೆಗೆ ಡಾ. ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋ ಸಹೋದರಿಯ ಮಗಳ ಈ ಪ್ರಯತ್ನಕ್ಕೆ ಸಂತಸ ವ್ಯಕ್ತಪಡಿಸೋದ್ರ ಜೊತೆಗೆ ಒಂದಷ್ಟು ಸಲಹೆಗಳನ್ನು ಕೊಟ್ಟು, ಧನ್ಯಾರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ವಿಶೇಷ ಅಂದ್ರೆ ಧನ್ಯಾರ ತಂದೆ ರಾಮ್ ಕುಮಾರ್ ಇದೇ ಮೊದಲ ಬಾರಿಗೆ ಮಗಳ ಬಗ್ಗೆ, ಮಗಳ ಚೊಚ್ಚಲ ಚಿತ್ರದ ಬಗ್ಗೆ ಭಾವುಕತೆಯಿಂದ, ಹೆಮ್ಮೆಯಿಂದ ಮಾತನಾಡಿದ್ದಾರೆ. ನಿನ್ನ ಸನಿಹಕೆ ಚಿತ್ರದ ಹಾಡುಗಳನ್ನು ನೋಡಿ, ಈ ಸಿನಿಮಾ ತುಂಬಾ ದೊಡ್ಡ ಯಶಸ್ಸು ಕಾಣುವ ಲಕ್ಷಣಗಳು ಕಾಣಿಸ್ತಿವೆಯೆಂದು ಹೇಳುತ್ತಾ.. ಮುದ್ದಿನ ಮಗಳ ಚಿತ್ರರಂಗ ಪ್ರವೇಶವನ್ನು ಸಂತಸದಿಂದ ಸ್ವಾಗತಿಸಿದ್ದಾರೆ.

ಏಪ್ರಿಲ್ 16ಕ್ಕೆ ತೆರೆಗೆ ಬರ್ತಿದೆ ನಿನ್ನ ಸನಿಹಕೆ.

ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿರೋ ಈ ಯೂಥ್ ಫುಲ್ ಎಂಟ್ರಟೈನರ್ ನಿನ್ನ ಸನಿಹಕೆ ಇದೇ ಏಪ್ರಿಲ್ 16ಕ್ಕೆ ವಿಶ್ವದಾದ್ಯಂತ ಕನ್ನಡದಲ್ಲಿ ಮಾತ್ರವೇ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಸದ್ಯದಲ್ಲೇ ಟ್ರೈಲರ್ ಲಾಂಚ್ ಮಾಡೋ ಯೋಜನೆಯಲ್ಲಿರೋ ಚಿತ್ರತಂಡ ಈ ಮೂಲಕ ಪ್ರಚಾರದ ಕೆಲಸಗಳನ್ನು ಶುರುಮಾಡಿದೆ.

ವೈದ್ಯೆಗೆ ವರದಕ್ಷಿಣೆ ತರುವಂತೆ ಕಿರುಕುಳ; ಐವರ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

‘ವರ’ದಕ್ಷಿಣೆ ಎಂಬ ಪದ ಕಿವಿಗೆ ಕೇಳಿಸಿದರೆ ಸಾಕು ಒಂದು ಕ್ಷಣ ಹೆಣ್ಣು ಹೆತ್ತವರ ಹೃದಯ ಬಡಿತ ಜೋರಾಗಿ ಹೊಡೆದುಕೊಳ್ಳುತ್ತದೆ. ಹೀಗಾಗಿ ಸರ್ಕಾರ ವರದಕ್ಷಿಣೆ ಕಿರುಕುಳ ನೀಡದಂತೆ ಅನೇಕ ಕಾನೂನು ಜಾರಿ ಮಾಡಿದರೂ, ಜನರಲ್ಲಿ ಜಾಗೃತಿ ಮೂಡಿಸಿದರೂ ಇಂತಹ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಲಿವೆ. ಅಂತಹದ್ದೇ ಒಂದು ಘಟನೆ ಗದಗ ನಗರದಲ್ಲಿ ಬೆಳಕಿಗೆ ಬಂದಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಅವರು ನಗರದ ಕಳಸಾಪುರ ರಸ್ತೆಯ ಸೇವಾಲಾಲ್ ನಗರದ ನಿವಾಸಿ ಕಿರಣ ಸೋಮಪ್ಪ ರಾಥೋಡ ಅವರನ್ನು ಏಳು ವರ್ಷಗಳ ಹಿಂದೆಯೇ ವಿವಾಹವಾಗಿದ್ದಾರೆ. ವೈದ್ಯೆ ತವರು ಮನೆಯಿಂದ ಹೊಸದಾಗಿ ಗಂಡನ ಮನೆಗೆ ಬಂದಾಗ ಮೂರ್ನಾಲ್ಕು ತಿಂಗಳು ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಬಳಿಕ ಮದುವೆ ಸಮಯದಲ್ಲಿ ವರದಕ್ಷಿಣೆ ಕೊಟ್ಟಿಲ್ಲ. ಹೀಗಾಗಿ ತವರು ಮನೆಯಿಂದ ೨೦ ಲಕ್ಷ ರೂ. ವರದಕ್ಷಿಣೆ ಹಣ ತರುವಂತೆ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ.

ಅಲ್ಲದೇ, ಗೋವಾದಲ್ಲಿದ್ದ ಮಾವ ಸೋಮಪ್ಪ ರಾಥೋಡ, ಅತ್ತೆ ಮತ್ತು ನಾದಿನಿ ಗೀತಾ ಅವರು ಫೋನ್ ಮಾಡಿ ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಪೀಡಿಸಿ ವಿಜಯಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿದ್ದಾರೆ. ಇನ್ನು ಗಂಡ ಕೂಡ ಹಲ್ಲೆ ನಡೆಸಿದ್ದಾರೆ ಅಂತೆ.

ಇದರಿಂದ ಬೇಸತ್ತ ವೈದ್ಯೆ ಅತ್ತೆ,‌ ಮಾವ ಸಹಿತ ಗಂಡನ ಮನೆಯವರೆಲ್ಲರೂ ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಗದಗನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಗದಗನ ಕಳಸಾಪುರ ರಸ್ತೆಯ ಸೇವಾಲಾಲ್ ನಗರದ ನಿವಾಸಿಗಳಾದ ಗಂಡ ಕಿರಣ ಸೋಮಪ್ಪ ರಾಥೋಡ, ರೇಣುಕಾ ರಾಥೋಡ, ಸೋಮಪ್ಪ ರಾಥೋಡ, ಅನಿತಾ ರಾಥೋಡ ಹಾಗೂ ಗೀತಾ ರಾಥೋಡ ಎಂಬ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮುಕ್ಕುಂಪಿ ಬಳಿ ಭೀಕರ ರಸ್ತೆ ಅಪಘಾತ: ಮೂವರ ದುರ್ಮರಣ

0

ವಿಜಯಸಾಕ್ಷಿ ಸುದ್ದಿ ಗಂಗಾವತಿ
ಮಾರುಕಟ್ಟೆಯಿಂದ ಗ್ರಾಮಕ್ಕೆ ತೆರಳುತ್ತಿದ್ದ ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಕ್ಕುಂಪಿ ಕ್ರಾಸ್ ಬಳಿ ನಡೆದಿದೆ.

ಫಕೀರಪ್ಪ ನಾಗಪ್ಪ ಹೊಳೆಯಾಚೆ, ಭೀಮಣ್ಣ ಚಿನ್ನಪ್ಪ ಹ್ಯಾಟಿ ಹಾಗೂ ರಾಮಣ್ಣ ಶಂಕ್ರಪ್ಪ ಡೊಳ್ಳಿ ಎಂಬುವವರು ಸಾವನ್ನಪ್ಪಿದ್ದು, ಇವರೆಲ್ಲ ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದವರಾಗಿದ್ದಾರೆ.
ಘಟನೆಯಲ್ಲಿ ಮಂಜುನಾಥ ಮುದಿಯಪ್ಪ ಜಬ್ಬಲಗುಡ್ಡ ಎಂಬ ಯುವಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುನಾಥ್ ಅವರ ಹೊಲದಲ್ಲಿ ಬೆಳೆದಿದ್ದ ಶೇಂಗಾ ಕಟಾವು ಮಾಡಿಕೊಂಡು ಆಟೋದಲ್ಲಿ ಗಂಗಾವತಿ ಮಾರುಕಟ್ಟೆಗೆ ತೆರಳಿದ್ದರು. ಅಲ್ಲಿ ಧಾನ್ಯವನ್ನು ಅನ್ಲೋಡ್ ಮಾಡಿ ಊರಿನ ಕಡೆಗೆ ಸಾಗುತ್ತಿದ್ದರು. ಈ ವೇಳೆ, ಕೊಪ್ಪಳದಿಂದ ವೇಗವಾಗಿ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಹೋಳಿ ಹಬ್ಬ; ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ

0

ವಿಜಯಸಾಕ್ಷಿ ಸುದ್ದಿ, ಗದಗ

ಹೋಳಿ ಹಬ್ಬದ ನಿಮಿತ್ತ ಗದಗ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕೆಳಕಂಡ ನಗರ ಹಾಗೂ ಪಟ್ಟಣಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಂ.ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

ಮಾ.27ರ ಸಾಯಂಕಾಲ 6 ಗಂಟೆಯಿಂದ ಮಾ.29ರ ಮಧ್ಯರಾತ್ರಿವರೆಗೆ ಶಿರಹಟ್ಟಿ, ರೋಣ, ಗಜೇಂದ್ರಗಡ, ನರೇಗಲ್, ಮುಂಡರಗಿ, ಲಕ್ಷ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಿ ಆದೇಶಿಸಲಾಗಿದೆ.

ಮಾ.28ರ ಬೆಳಗ್ಗೆ 6 ರಿಂದ ಮಾ.29ರ ಮಧ್ಯರಾತ್ರಿವರೆಗೆ ಗದಗ ಗ್ರಾಮೀಣ, ಮುಳಗುಂದ ಭಾಗದಲ್ಲಿ ಮದ್ಯಮಾರಾಟ ನಿಷೇಧಿಸಿ ಆದೇಶಿಸಲಾಗಿದೆ.

ಮಾ.28ರ ಮಧ್ಯರಾತ್ರಿಯಿಂದ ಮಾ.30ರ ಮಧ್ಯರಾತ್ರಿವರೆಗೆ ನರಗುಂದ ಠಾಣಾ ವ್ಯಾಪ್ತಿಯಲ್ಲಿ ಮದ್ಯ ನಿಷೇಧಿಸಿ ಆದೇಶಿಸಲಾಗಿದೆ.
ಮಾ.31 ರ ಮಧ್ಯರಾತ್ರಿಯಿಂದ ಏ.2ರ ಬೆಳಗ್ಗೆ 6 ಗಂಟೆವರೆಗೆ ಗದಗ ಶಹರ ಠಾಣಾ ವ್ಯಾಪ್ತಿ ಹಾಗೂ ಮಾ.31ರ ಸಾಯಂಕಾಲ 6 ಗಂಟೆಯಿಂದ ಏ.2ರ ಬೆಳಗ್ಗೆ 6 ಗಂಟೆವರೆಗೆ ಬೆಟಗೇರಿ, ಬೆಟಗೇರಿ ಬಡವಾವಣೆ ಹಾಗೂ ಲಕ್ಷ್ಮೇಶ್ವರ ಶಹರ ಹಾಗೂ ಶಿಗ್ಲಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಮೇಲ್ಕಂಡ ದಿನಾಂಕಗಳನ್ನು ಶುಷ್ಕ ದಿನ ಘೋಷಿಸಿದ್ದು, ನಿಗಧಿತ ಸ್ಥಳಗಳಲ್ಲಿ ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ.

ಗದಗನಲ್ಲಿ ಕೊರೊನಾ 2 ನೇ ಅಲೆ: ನಾಲ್ವರು ವಿದ್ಯಾರ್ಥಿಗಳು, ಓರ್ವ ಅಡುಗೆ ಸಿಬ್ಬಂದಿಗೆ ಸೋಂಕು ದೃಢ

0

ವಿಜಯಸಾಕ್ಷಿ ಸುದ್ದಿ ಗದಗ
ಜಿಲ್ಲೆಯ ರೋಣ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಹಾಗೂ ಓರ್ವ ಅಡುಗೆ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ವಸತಿ ಶಾಲೆಯ ಬಹುತೇಕ ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಜ್ವರದಿಂದ ಅಸ್ವಸ್ಥವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಎಲ್ಲ ಮಕ್ಕಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಸುಮಾರು 175 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸ್ತವ್ಯ ಇದ್ದಾರೆ. ಇನ್ನು ಶಾಲೆಯಲ್ಲಿರುವ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಪಾಲಕರಲ್ಲಿ ಆತಂಕ ಮನೆ ಮಾಡಿದೆ.
ಅಲ್ಲದೇ, ಕೊರೊನಾ ಎರಡನೇ ಅಲೆ ಗದಗ ಜಿಲ್ಲೆಗೂ ವ್ಯಾಪಿಸುತ್ತಿರುವ ಶಂಕೆ ವ್ಯಕ್ತವಾಗುತ್ತಿದ್ದು, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತದಿಂದ ಕಂಟೈನ್ಮೆಂಟ್ ಝೋನ್ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧಿಸಿದ ಕೊಪ್ಪಳ ಪೊಲೀಸರು

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಭಾಗ್ಯನಗರದ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಲ್ಲಿ ಲಕ್ಷಾಂತರ ರೂಪಾಯಿ ಲಪಟಾಯಿಸಿ , ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಪ್ಪಳ ಪೋಲಿಸರು ಬಂದಿಸಿದ್ದಾರೆ.
2003ರಲ್ಲಿ ಭಾಗ್ಯನಗರದ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ ಸಬ್ ಸೆಂಟರ್ನಲ್ಲಿ ಜ್ಯೂನಿಯರ್ ಅಸಿಸ್ಟಂಟ ಕೆಲಸ ಮಾಡುತ್ತಿದ್ದ ಹಾಸನ ಮೂಲದ ಜಿ.ಮಂಜುನಾಥ 2002 ರಿಂದ ಜುಲೈ 2003 ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಒಟ್ಟು 16 , ಬೇಲ್ಸ್ಗಳು ಅಂದಾಜು 2,12,100 ಬೆಲೆಯ ವಸ್ತುಗಳನ್ನು ನಂಬಿಕೆ ದ್ರೋಹ ಮಾಡಿ ವಂಚನೆ ಮಾಡಿದ್ದರ ಕುರಿತು ಕೆ.ಎಕ್ಸ್ , ಥಾಮಸ್ , ಯೋಜನಾ ಆಡಳಿತಾಧಿಕಾರಿ 30-07-2005 ರಂದು ದೂರು ನೀಡಿದ್ದರು.
ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ 2005ರಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಮಾಡಿ 2010ರಲ್ಲಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆದರೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. 2011ರಲ್ಲಿ ಪ್ರಕರಣವನ್ನು ಎಲ್ ಪಿಸಿಎಂದು ಘೋಷಣೆ ಮಾಡಲಾಗಿತ್ತು.
ಇತ್ತೀಚಿಗೆ ನಗರದ ಸಿಪಿಐ ಮಾರುತಿ ಗುಳ್ಳಾರಿಯವರ ನೇತೃತ್ವದ ನಾಗಪ್ಪ ಪಿ.ಎಸ್.ಐ ( ಕಾ & ಸು ) ., ಸೂರ್ಯಕಾಂತಪ್ಪ ಸಿಹೆಚಸಿ . ರಾಜಶೇಖರ ಹೆಚಸಿ ತಂಡ ಆರೋಪಿಯ ಜಾಡನ್ನು ಹಿಡಿದು ಬೆಂಗಳೂರಿಗೆ ತೆರಳಿತ್ತು. ಕೊನೆಗೂ ಜಯನಗರದಲ್ಲಿ ಇದ್ದ ಆರೋಪಿತನನ್ನು ಬಂದಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಗಕ್ಕೆ ಎಸ್ಪಿ ಟಿ.ಶ್ರಿ ಧರ ಅಭಿನಂದನೆ ಸಲ್ಲಿಸಿದ್ದಾರೆ.

ಒಂದು ಲಕ್ಷ ವ್ಯೂವ್ ಪಡೆದ ತ್ರಿಕೋನ ಟೀಸರ್; ತೆಲಗು, ತಮಿಳು ಭಾಷೆಯಲ್ಲೂ ಚಿತ್ರ ಬಿಡುಗಡೆ

ವಿಜಯಸಾಕ್ಷಿ ಸುದ್ದಿ ಬೆಂಗಳೂರು
ವಿಭಿನ್ನ ಕಥೆ, ಥ್ರಿಲ್ಲಿಂಗ್ ಎಲಿಮೆಂಟ್ಸ್, ಸಾಹಸ ಇದೆಲ್ಲದರ ಮಿಶ್ರಣವಿರುವ ಒಂದು ಇಟ್ರೆಂಸ್ಟಿಂಗ್ ಸಿನಿಮಾ ಸಿನಿಮಾ ಅಂಗಳದಲ್ಲಿ ಸೆನ್ಷೇಶನ್ ಕ್ರಿಯೇಟ್ ಮಾಡಲು ರೆಡಿಯಾಗಿದೆ.
ಅಂದ್ಹಾಗೆ ಈ ತ್ರಿಕೋನ ಸಿನಿಮಾಗೆ ಚಂದ್ರಕಾಂತ್ ಆಕ್ಷನ್ ಕಟ್ ಹೇಳಿದ್ದಾರೆ. ರಾಜಶೇಖರ್ ಕಥೆ ಬರೆದು ಬಂಡವಾಳ ಹಾಕಿರುವ ತ್ರಿಕೋನ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಸಖತ್ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.

ಸದ್ಯ ಯುಟ್ಯೂಬ್ ನಲ್ಲಿ ತ್ರಿಕೋನ ಟೀಸರ್ ಒಂದು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಪೊಲೀಸ್ ಪರ್ಕಿ ಪ್ರೋಡಕ್ಷನ್ ಬ್ಯಾನರ್ ನಡಿ ಸಿನಿಮಾ ಮೂಡಿಬರುತ್ತಿದ್ದು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ.
ಸಿನಿಮಾದ ಹೆಸರೇ ಹೇಳುವಂತೆ ಇಂದು ಮೂರು ಕಥೆಗಳನ್ನ ಒಳಗೊಂಡ ಸಿನಿಮಾವಾಗಿದ್ದು, ಅಹಂ, ಶಕ್ತಿ ಮತ್ತು ತಾಳ್ಮೆ ಇವುಗಳ ಮೇಲೆ ಕಥೆ ನಿಂತಿದೆ. ಈ ಸಿನಿಮಾವನ್ನ ನಾಲ್ಕು ಹಂತದಲ್ಲಿ 50 ದಿನಗಳ ಕಾಲ ಬೆಂಗಳೂರು, ಸುಬ್ರಮಣ್ಯ, ಕಡಬ, ಪುತ್ತೂರು, ಮಂಗಳೂರು, ಸಕಲೇಶಪುರದಲ್ಲಿ ಶೂಟಿಂಗ್ ಮಾಡಲಾಗಿದೆ. ಈ ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ನೀಡಿದ್ದು, ಶ್ರೀನಿವಾಸ್ ಛಾಯಾಗ್ರಹಣವಿದ್ದು, ಜೀವನ್ ಪ್ರಕಾಶ್.ಎನ್ ಸಂಕಲನವಿದೆ.

ಚಿತ್ರದಲ್ಲಿ ರಾಜ್ ವೀರ್, ಅಚ್ಯುತರಾವ್, ಸುಧಾರಾಣಿ, ಸುರೇಶ್ ಹೆಬ್ಳಿಕರ್, ಲಕ್ಷ್ಮೀಘಿ, ಸಾಧುಕೋಕಿಲ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಡಿ ಬಿಲ್ಡಿಂಗ್ ನಲ್ಲಿ ಎರಡು ಬಾರಿ ಮಿ.ಕರ್ನಾಟಕ, ಒಮ್ಮೆ ಮಿ.ಇಂಡಿಯಾ ಪ್ರಶಸ್ತಿ ಪಡೆದಿರುವ ಬಳ್ಳಾರಿಯ ಮಾರುತೇಶ್ ನೆಗೆಟಿವ್ ಶೇಡ್ ನಲ್ಲಿ ಮಿಂಚಿದ್ದಾರೆ.

error: Content is protected !!