ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸಾಲ ಕೊಡುವ ನೆಪದಲ್ಲಿ ಟೂರಿಸ್ಟ್ ಗೈಡ್ ಮತ್ತು ಟ್ರಾವೆಲ್ ಏಜೆಂಟ್ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ದೆಹಲಿಯ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ನಡೆದಿದೆ. ಭಾನುವಾರ ಪ್ರಮುಖ ಆರೋಪಿಯನ್ನು ಬಂಧಿಸಿರುವ ದೆಹಲಿ ಪೊಲೀಸರು, ಒಟ್ಟು 6 ಆರೋಪಿಗಳು ಭಾಗಿಯಾಗಿದ್ದು, ಇದರಲ್ಲಿ ಒಬ್ಬ ಮಹಿಳೆಯೂ ಇದ್ದಾಳೆ ಎಂದಿದ್ದಾರೆ.
ಬಂಧಿತನನ್ನು ದೆಹಲಿಯ ಶೇಖ್ ಸರೈ ಪ್ರದೇಶದ ನಿವಾಸಿ ಮನೋಜ್ ಶರ್ಮಾ ಎಂದು ಗುರುತಿಸಲಾಗಿದೆ. ದೆಹಲಿಯ ಇಂಡಿಯನ್ ಗೇಟ್ ಬಳಿ ಇರುವ ಫೈವ್ ಸ್ಟಾರ್ ಹೋಟೆಲ್ ಒಂದರ ರೂಮಿನಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಶನಿವಾರ ಸಂತ್ರಸ್ತೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಭವಿಸಿದ್ದು ಹೇಗೆ?
ಮನೋಜ್ ಶರ್ಮಾ ಮತ್ತು ಇನ್ನೋರ್ವ ಆರೋಪಿ ಆ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದರು. ಸಂತ್ರಸ್ತೆ ಟೂರಿಸ್ಟ್ ಗೈಡ್‌ಗೆ ಹಣದ ಅಗತ್ಯವಿತ್ತು. ಈ ಇಬ್ಬರು ಆರೋಪಿಗಳು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ಮೊದಲೇ ಹೇಳಿದ್ದರು. ಸಾಲದ ವ್ಯವಸ್ಥೆಯಾಗಿದೆ ಎಂದು ಯುವತಿಯನ್ನು ರೂಮಿಗೆ ಕಡೆಸಿಕೊಂಡು ಅತ್ಯಾಚಾರ ಮಾಡಲಾಗಿದೆ. ಯುವತಿ ಆರು ಆರೋಪಿಗಳಿದ್ದರು ಎಂದು ಹೇಳಿದ್ದು, ಇದರಲ್ಲಿ ಮಹಿಳೆಯೂ ಒಬ್ಬರು ಭಾಗಿಯಾಗಿದ್ದಾರೆ. ಪೊಲೀಸರು ಉಳಿದ ಆರೋಪಿಗಳ ತಲಾಶ್‌ನಲ್ಲಿದ್ದಾರೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಗೌರಿ ಹತ್ಯೆ ಕೇಸಿನಲ್ಲಿ ಆರೋಪಿಯಾಗಿರುವ ಗಣೇಶ್ ಮಿಸ್ಕಿನ್ ಸಂಬಂಧಿಗಳಿಬ್ಬರ ನಡುವಿನ 190 ಸೆಕೆಂಡ್‌ಗಳ ಫೋನ್ ಸಂಭಾಷಣೆಯು, ಗೌರಿ ಹತ್ಯೆ ಆರೋಪಿಗಳಲ್ಲಿ ಕೆಲವರು ಕಲಬುರ್ಗಿ ಹತ್ಯೆಯಲ್ಲೂ ಭಾಗಿ ಎಂಬ ಲಿಂಕ್ ಕೂಡಿಸಲು ನೆರವಾಗಿತು! ಕೋರ್ಟ್ ಗೆ ಸಲ್ಲಿಸಿರುವ ದಾಖಲೆ ಆಧಾರದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಇದನ್ನು ವರದಿ ಮಾಡಿದೆ.
ಗೌರಿ ಹತ್ಯೆ ಆರೋಪದಲ್ಲಿ 2018ರ ಜುಲೈನಲ್ಲಿ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ ಬಂಧನದ ನಂತರ ಈ ಫೋನ್ ಸಂಭಾಷಣೆ ನಡೆದಿದೆ.
ಜುಲೈ 22, 2018ರಂದು ಗಣೇಶ್ ಸಂಬಂಧಿ ರವಿ ಮಿಸ್ಕಿನ್ ಮತ್ತು ಆತನ ‘ಅಂಕಲ್’ ನಡುವೆ ನಡೆಯುವ ಫೋನ್ ಸಂಭಾಷನೆಯಲ್ಲಿ, ರವಿ ಮಿಸ್ಕಿನ, ’ಅಂಕಲ್, ಗಣೇಶ್ ಈಗ ಎರಡು ಕೊಲೆ ಕೇಸಿನಲ್ಲಿ ಭಾಗಿಯಾದಂತಾಗಿದೆ’ ಎಂಬರ್ಥದ ಮಾತು ಹೇಳುತ್ತಾನೆ.
ಆಗಲೇ ಎರಡೂ ಹತ್ಯೆಗೆ ಬಳಸಿದ ಪಿಸ್ತೂಲ್ ಒಂದೇ ಎಂದು ಸಾಧಿಸಿದ್ದ ಎಸ್‌ಐಟಿ ಈ ಫೋನ್ ಸಂಭಾಷಣೆ ಎಳೆ ಹಿಡಿದು ಇನ್ನಷ್ಟು ತನಿಖೆ ಮಾಡಿತ್ತು ಮತ್ತು ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ಮಾಡಿತ್ತು. ಈಗ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ ಪ್ರಕಾರ, ಕಲಬುರ್ಗಿ ಅವರನ್ನು ಶೂಟ್ ಮಾಡಿದ್ದು ಗಣೇಶ್ ಮಿಸ್ಕಿನ್, ಆಗ ಬೈಕ್ ಚಲಾಯಿಸಿದ್ದು ಬೆಳಗಾವಿಯ ಪ್ರವೀಣ್ ಪ್ರಕಾಶ ಚಾಟೂರ್.
ಗೌರಿ ಹತ್ಯೆ ಸಂದರ್ಭದಲ್ಲಿ ಗಣೇಶ್ ಮಿಸ್ಕಿನ್ ಬೈಕ್ ಓಡಿಸಿದರೆ, ಸಿಂದಗಿಯ ಪರಶುರಾಮ್ ಶೂಟ್ ಮಾಡಿದ್ದ.
ಸದ್ಯ ಕೊವಿಡ್ ಕಾರಣದಿಂದ ಇವೆರಡೂ ಹತ್ಯೆಗಳ ವಿಚಾರಣೆ ಆರಂಭವಾಗಿಲ್ಲ. ಈ ನಡುವೆ ಪ್ರಮುಖ ಆರೋಪಿ ಅಮೋಲ್ ಕಾಳೆ ಕೋರ್ಟಿಗೆ ಅರ್ಜಿ ಸಲ್ಲಿಸಿ, ‘ಜೈಲಿನಲ್ಲಿ ಈಗ ಕೈದಿಗಳ ಸಂಖ್ಯೆ ಹೆಚ್ಚಿದೆ. ಕೊವಿಡ್ ಸಾಂಕ್ರಾಮಿಕ ಹರಡುವ ಆತಂಕವಿದೆ. ಹೀಗಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು’ ಎಂದು ಕೇಳಿದ್ದಾನೆ. ಕೋರ್ಟ್ ಜೈಲಲ್ಲಿರುವ ಕೈದಿಗಳ ಸಂಖ್ಯೆ, ಸೆಲ್‌ಗಳ ವಿವರ ಸಲ್ಲಿಸಲು ಪೊಲೀಸರಿಗೆ ಸೂಚಿಸಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಬೈ: ಮುಂಬೈ ಸಮೀಪದ ಬಿವಂಡಿ ಪ್ರದೇಶದಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ 8 ಜನ ಸಾವನ್ನಪ್ಪಿದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಸುಮಾರು 20 ಜನ ಕಟ್ಟಡದ ಅವಶೇಷಗಳ ನಡುವೆ ಸಿಕ್ಕಿ ಹಾಕಿಕೊಂಡಿರಬಹುದು ಎನ್ನಲಾಗಿದೆ. ಇಲ್ಲಿವರೆಗೆ 25 ಜನರು ರಕ್ಷಣೆ ಮಾಡಲಾಗಿದೆ ಎನ್ನಲಾಗಿದ್ದು, ಎನ್‌ಡಿಆರ್‌ಎಫ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ.
ಬೆಳಿಗ್ಗೆ 3.40ಕ್ಕೆ ಪಟೇಲ್ ಕಂಪೌಂಡ್ ಏರಿಯಾದಲ್ಲಿನ ಈ ಕಟ್ಟಡ ಕುಸಿತವಾಗಿದ್ದು, ಸ್ಥಳಿಯರು 20 ಜನರನ್ನು ಕೂಡಲೇ ರಕ್ಷಿಸಿದ್ದರು. ನಂತರ ಕಾರ್ಯಾಚರಣೆಗೆ ಇಳಿದ ಎನ್‌ಡಿಆರ್‌ಎಫ್ ಒಂದು ಮಗುವಿನ ಸಹಿತ ಐವರನ್ನು ರಕ್ಷಿಸಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,870 ರೂ. ಇದೆ. ಮುಂಬೈನಲ್ಲಿ ಕನಿಷ್ಠ 51,490 ರೂ. ಇದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಊರಿನ ಬ್ಯಾಂಕ್ ಹತ್ತಿರದ ಜಾಗೆಯಲ್ಲಿ ಸಂಜಿ ಮುಂದ ಅಂದರ್-ಬಾಹರ್ ಆಡುತ್ತ ಕುಳಿತಿದ್ದ ಎಂಟು ಜನರನ್ನು ಅರೆಸ್ಟ್ ಮಾಡಲಾಗಿದೆ. ತಾಲೂಕಿನ ಸೊರಟೂರಿನ ಗ್ರಾಮೀಣ ಬ್ಯಾಂಕ್ ಹತ್ತಿರ ಇಸ್ಪೀಟು ಆಡುತ್ತಿದ್ದ 8 ಜನರನ್ನು ಬಂಧಿಸಿರುವ ಮುಳಗುಂದ ಠಾಣೆಯ ಪೊಲೀಸರು, ಬಂಧಿತರಿಂದ 16,800 ರೂ. ವಶಪಡಿಸಿಕೊಂಡಿದ್ದಾರೆ.
ಕೆಪಿ ಆ್ಯಕ್ಟ್ 87ರ ಕಲಂ ಅಡಿ ಪ್ರಕರಣ ದಾಖಲಿಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಪಿಎಸ್‌ಐ ಪ್ರಕಾಶ್ ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬಂಧಿತರೆಲ್ಲಾ ಸೊರಟೂರಿನ ನಿವಾಸಿಗಳು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ವಿರೋಧ ಪಕ್ಷಗಳ ಪ್ರತಿಭಟನೆ, ಗದ್ದಲ, ಗೊಂದಲಗಳ ನಡುವೆ ರಾಜ್ಯಸಭೆಯಲ್ಲಿ ಮೂರು ಮಹತ್ವದ ಕೃಷಿ ಮಸೂದೆಗಳ ಪೈಕಿ ಎರಡನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಅಂಗೀಕಾರಕ್ಕೆ ಅಗತ್ಯವಾದ ಬಹುಮತ ಸರ್ಕಾರದ ಬಳಿಯಿಲ್ಲ. ಧ್ವನಿಮತದ ಬದಲು ಮತದಾನ ನಡೆಯಬೇಕು ಎಂದು ವಿಪಕ್ಷಗಳು ಆಗ್ರಹಿಸಿದವು.
ಕಲಾಪ ಆರಂಭವಾದಾಗ ವಿಪಕ್ಷಗಳು ಮಸೂದೆಗಳನ್ನು ‘ಸೆಲೆಕ್ಟ್ ಸಮಿತಿ’ಗೆ ಕಳಿಸಬೇಕು ಎಂದು ಪಟ್ಟು ಹಿಡಿದವು. ಆದರೆ ಇದನ್ನು ತಳ್ಳಿ ಹಾಕಿದ ಉಪ ಸಭಾಪತಿ ಧ್ವನಿಮತಕ್ಕೆ ಹಾಕಿದರು. ವಿಪಕ್ಷಗಳ ಸದಸ್ಯರು ಸದನದ ಬಾವಿಯಲ್ಲಿ ಜಮೆಯಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವರು ನಿಯಮ ಪುಸ್ತಕವನ್ನು ಹರಿದು ಹಾಕಿದರು.
‘ಎಲ್ಲ ನಿಯಮಗಳನ್ನು ಮೀರಿ ಅಂಗೀಕಾರ ಪಡೆಯಲಾಗಿದೆ’ ಎಂದು ಗುಲಾಂ ನಬಿ ಅಜಾದ್ ಟೀಕಿಸಿದರು. ಟಿಎಂಸಿ ಸಂಸದ ಡೆರೆಕ್ ಒ ಬ್ರೇನ್ ಟ್ವೀಟ್ ಮಾಡಿ, ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಅಂಗೀಕಾರಕ್ಕೆ ಅಗತ್ಯ ಸಂಖ್ಯೆ ಇಲ್ಲದ ಕಾರಣಕ್ಕೆ ಧ್ವನಿಮತದ ಮೊರೆ ಹೋಗಿ ಅಂಗೀಕಾರ ಪಡೆಯಲಾಗಿದೆ. ‘ಆರ್‌ಎಸ್ ಟಿವಿ’ಯ ಸಂಪರ್ಕವನ್ನು ಕಡಿದು ಹಾಕಿ, ಇಲ್ಲಿ ನಡೆದ ಅಪ್ರಜಾಸತ್ತಾತ್ಮಕ ಸಂಗತಿಗಳು ಹೊರಜಗತ್ತಿಗೆ ಗೊತ್ತಾಗದಂತೆ ಮಾಡಲು ಸರ್ಕಾರ ಯತ್ನಿಸಿದೆ ಎಂದು ಟೀಕಿಸಿದ್ದಾರೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ; ಮೋಸ ಹೋದವರು ಮಡಿಕೇರಿ ಜಿಲ್ಲೆಯವರು. ಮೋಸ ಮಾಡಿದವರು ಬಳ್ಳಾರಿ ಜಿಲ್ಲೆಯವರು. ಆದರೆ ಈ ಪಾಪಕೃತ್ಯ ನಡೆದಿದ್ದು ಗದಗ ಜಿಲ್ಲೆಯಲ್ಲಿ. ಈಗ ಗದಗ ಜಿಲ್ಲೆಯ ಪೊಲೀಸರೇ ‘ಬೆಂಕಿ’ ಕಾರ್ಯಾಚರಣೆ ನಡೆಸಿ ಈ ಪಾಪಕೃತ್ಯದ ಪರಮಪಾಪಿಗಳನ್ನು ಬಂಧಿಸಿದ್ದಾರೆ.
ಸಸ್ತಾದಲ್ಲಿ ಏನೂ ಸಿಕ್ಕರೂ ತಗೊಳ್ಳುವ ಚಪಲ ಕೆಲವರಿಗೆ. ಅದು ಕಳ್ಳ ಮಾಲಿದ್ದರೂ ಇಂತಹ ಆಸೆಬುರುಕರು ಹಿಂದೆಮುಂದೆ ನೋಡಲ್ಲ. ಈ ಪ್ರಕರಣದಲ್ಲೂ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಎಂಬ ಆಸೆಗೆ ಬಿದ್ದು 15 ಲಕ್ಷ ಹಣವನ್ನು ಖದೀಮರ ಕೈಗೆ ಕೊಟ್ಟ ಪುಣ್ಯಾತ್ಮ ಮಡಿಕೇರಿಯವರು.
‘ನಮಗೆ ದೊಡ್ಡ ಪ್ರಮಾಣದಲ್ಲಿ ಚಿನ್ನ ಸಿಕ್ಕಿದೆ. 15 ಕೆಜಿ ಚಿನ್ನವಿದೆ. ಅದನ್ನ ಮಾರ್ಕೆಟ್‌ನಲ್ಲಿ ಮಾರೋಕೂ ಆಗಲ್ಲ. ಕಡಿಮೆ ರೇಟಿಗೆ ಕೊಡ್ತಿವಿ. 15 ಲಕ್ಷಕ್ಕೆ 2 ಕೆಜಿ ಕೊಡ್ತಿವಿ, ತಗೊಳ್ತಿರಾ?’- ಹೀಗೆ ಖದೀಮರ ತಂಡ ಫೋನು ಮಾಡುತ್ತಿತ್ತು. ರಿಸ್ಕ ಬೇಡ ಎಂದವರು ಸುಮ್ಮನಾದರು. ಆದರೆ ಮಗಳ ಮದುವೆಗೆ ಚಿನ್ನದ ಅಗತ್ಯವಿದ್ದವರೊಬ್ಬರು ಯಾಮಾರಿ ಬಿಟ್ಟರು.
ಮಡಿಕೇರಿಯ ಬಾಲಕೃಷ್ಣ ರೈ ಈ ವಂಚಕರ ಮಾತು ನಂಬಿದರು. ಮೊದಲಿಗೆ ವಂಚಕರು ಒಂದು ಸ್ವಲ್ಪ ಅಸಲಿ ಚಿನ್ನವನ್ನು ಸ್ಯಾಂಪಲ್ ಕೊಟ್ಟರು. ಅದನ್ನು ಪರೀಕ್ಷೆ ಮಾಡಿಸಿದ ಬಾಲಕೃಷ್ಣ ರೈ, 15 ಲಕ್ಷಕ್ಕೆ 2 ಕೆಜಿ ಚಿನ್ನ ‘ಖರೀದಿಸಲು’ ರೆಡಿಯಾಗಿಯೇ ಬಿಟ್ಟರು. ಫೋನಿನಲ್ಲಿ ‘ಚಿನ್ನದಾತ’ ಗ್ಯಾಂಗ್ ಅನ್ನು ಸಂಪರ್ಕಿಸಿದರು.
ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ಶಿವಪುರದ ಚಿನ್ನದ ವಂಚಕರು, ಬಾಲಕೃಷ್ಣರಿಗೆ ಗದಗ ಜಿಲ್ಲೆಯ ಬೆಣ್ಣೆ ಹಳ್ಳದ ಬಳಿಯ ಪ್ರದೇಶವೊಂದಕ್ಕೆ ಹಣದೊಂದಿಗೆ ಬರಲು ಹೇಳಿದರು. 2 ಕೆಜಿ ಚಿನ್ನ ಹೊತ್ತೊಯ್ಯುವ ಉಮೇದಿನಲ್ಲಿ ಬಾಲಕೃಷ್ಣ 15 ಲಕ್ಷ ತಂದು ಕಾದರು. ಅವರಲ್ಲಿಗೆ ಬಂದ ವಂಚಕರು 15 ಲಕ್ಷ ರೂ. ಪಡೆದರು. ಬೆಣ್ಣೆಹಳ್ಳದ ಸಮೀಪ ನಿಂತು ಬೆಣ್ಣೆಯಂತಹ ನಾಲ್ಕು ಮಾತಾಡಿ, ಚಿನ್ನ ಇಲ್ಲೇ ಸಮೀಪದಲ್ಲೇ ಇದೆ. ನೀವಿಲ್ಲಿಯೇ ಇರಿ. ನಾವು ತರುತ್ತೇವೆ ಎಂದು ಗಾಯಬ್ ಆದರು.
ಇದು ಕಳೆದ ತಿಂಗಳು ನಡೆದ ಘಟನೆ. 15 ಲಕ್ಷ ಕಳಕೊಂಡ ಬಾಲಕೃಷ್ಣರಿಗೆ ಬೆಣ್ಣೆಹಳ್ಳಕ್ಕೆ ಹಾರುವುದೊಂದೇ ದಾರಿ ಉಳಿದಿತ್ತೇನೊ? ನೀರು ಕಡಿಮೆ ಇದ್ದ ಕಾರಣಕ್ಕೋ ಅಥವಾ ಪೊಲೀಸರ ಮೇಲಿನ ನಂಬಿಕೆಯ ಕಾರಣಕ್ಕೊ ಅವರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಎನ್ನುವುದೇ ಸಮಾಧಾನದ ಸಂಗತಿ. ಸೀದಾ ಬಂದು ಮುಂಡರಗಿ ಪೊಲೀಸರಿಗೆ ದೂರು ನೀಡಿದರು. ಸಿಪಿಐ ಸುಧೀರ್ ಬೆಂಕಿ ಮುಂಡರಗಿ ಪಟ್ಟಣದಲ್ಲಿರುವ ಎಲ್ಲ ಸಿಸಿಟಿವಿಗಳ ಫೂಟೇಜ್ ತರಿಸಿ ಪರಿಶೀಲಿಸಿದರು. ಬಸ್‌ಸ್ಟ್ಯಾಂಡ್ ಬಳಿ ಅನುಮಾನಸ್ಪಾದವಾಗಿ ಸುತ್ತಾಡಿದ್ದ ತಂಡದ ಬಗ್ಗೆ ಅನುಮಾನ ಮೂಡಿತು. ತಮ್ಮ ಮಾಹಿತಿ ಮೂಲಗಳನ್ನು ಆಧರಿಸಿ ಅವರು ವಂಚಕರ ಬಗ್ಗೆ ಸುಳಿವು ಪಡೆಯುತ್ತ ಹೋದರು. ಕೊನೆಗೂ ‘ಚಿನ್ನದಾತ’ ವಂಚಕರನ್ನು ಹಿಡಿದು ತಂದು ಜೈಲಿಗೆ ಹಾಕುವಲ್ಲಿ ಬೆಂಕಿಯವರ ತಂಡ ಯಶಸ್ವಿಯಾಗಿದೆ.
ಇನ್ಸ್ಪೆಕ್ಟರ್ ಸುಧೀರ್ ಬೆಂಕಿ
ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ದುರ್ಗಪ್ಪ, ಹನುಮಂತಪ್ಪ, ಆಂಜನೇಯ ಎಂಬ ಮೂವರು ಖದೀಮರನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಖದೀಮರ ಬಂಧನಕ್ಕೆ ಶೋಧ ನಡೆಸಿದ್ದಾರೆ.
ರೊಕ್ಕ ಏನಾತು?
ಕಳ್ಳ ಖದೀಮರು 15 ಲಕ್ಷ ರೂ.ಗಳನ್ನು ಅರಣ್ಯ ಪ್ರದೇಶದಲ್ಲಿ ಹೂತಿಟ್ಟಿದ್ದಾಗಿ ಹೇಳಿದರು. ಸಿಪಿಐ ಬೆಂಕಿ ಮತ್ತು ತಂಡ ಆರೋಪಗಳ ಜೊತೆ ಅಲ್ಲಿಗೇ ಹೋಗಿ ನೋಡಿದಾಗ ಮಣ್ಣಲ್ಲಿ ಸಿಕ್ಕಿದ್ದು 10 ಲಕ್ಷ ರೂ. ಮಾತ್ರ. ಹಣ ಕಳೆದುಕೊಂಡ ಬಾಲಕೃಷ್ಣರಿಗೆ ಈಗ 10 ಲಕ್ಷ ರೂ ನೀಡಿ ಕಳಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳು ಸಿಕ್ಕ ನಂತರ ಇನ್ನು 5 ಲಕ್ಷ ರೂ ಸಿಗಬಹುದು. ಎಲ್ಲಿಯ ಮಡಿಕೇರಿ, ಎಲ್ಲಿಯ ಬೆಣ್ಣೆ ಹಳ್ಳ? ಚಿನ್ನದ ಮೋಹ ಹೊಕ್ಕರೆ ಏನೆಲ್ಲ ದುರಂತ ಆಗುತ್ತವೆ ನೋಡಿ.
ಮುಂಡರಗಿ ಸಿಪಿಐ ಸುಧೀರ್ ಬೆಂಕಿ ನೇತೃತ್ವದಲ್ಲಿ ಪೊಲೀಸರು ಮಹತ್ವದ ಪ್ರಕರಣವನ್ನು ಭೇದಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಚಿನ್ನದ ಹೆಸರಲ್ಲಿ ವಂಚಿಸುವ ಇನ್ನೂ ಕೆಲವು ತಂಡಗಳಿವೆ ಎಂಬ ಅನುಮಾನವಿದೆ. ಆ ತಂಡಗಳನ್ನು ಪತ್ತೆ ಹಚ್ಚಿ ಬಂಧಿಸಲಿದ್ದೇವೆ. ಸಾರ್ವಜನಿಕರು ಈ ಬಗ್ಗೆ ಜಾಗರೂಕರಾಗಿರಬೇಕು. ಸಂಶಯ ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. -ಎನ್ ಯತೀಶ್, ಎಸ್‌ಪಿ, ಗದಗ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು:ಕೊವಿಡ್ ತೀವ್ರತೆಯಿಂದ ಜನರು ಆತಂಕದಲ್ಲಿದ್ದರೆ, ರಾಜ್ಯದ ದೊರೆ ಎನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಸಂಪುಟ ವಿಸ್ತರಣೆಯ ಚಿಂತೆಯಲ್ಲಿ ಬ್ಯುಸಿಯಾಗಿದ್ದಾರೆ. ರೋಮ್ ಹೊತ್ತಿ ಉರಿಯುವಾಗ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದ ಎನ್ನುವಂತೆ ಆಗಿದೆ ರಾಜ್ಯದ ಸ್ಥಿತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಪ್ರತಿದಿನವೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದ್ದು, ಕೊವಿಡ್‌ಗೆ 7,800 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೂ ಸರ್ಕಾರ ನಿರ್ಲಕ್ಷ್ಯ ತಾಳಿ, ಮುಗ್ಧ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಖಂಡ್ರೆ ಟೀಕಿಸಿದ್ದಾರೆ.
ಸಿನಿಮಾ ಮಂದಿರ, ಈಜುಕೊಳ ಹಾಗೂ ಶಾಲಾ ಕಾಲೇಜು ಹೊರತು ಪಡಿಸಿ ಉಳಿದೆಲ್ಲವನ್ನೂ ತೆರೆಯಲಾಗಿದೆ. ಅದು ಸರಿ, ಆದರೆ ಹೀಗೆ ಅನ್‌ಲಾಕ್ ಮಾಡಿ ಕೈ ತೊಳೆದುಕೊಂಡು ಕೂಡುವುದಲ್ಲ, ಬದಲಿಗೆ ಸೋಂಕು ಹರಡದಂತೆ, ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುವಂತೆ ಮಾಡಬೇಕು. ಆದರೆ ರಾಜ್ಯ ಸರ್ಕಾರಕ್ಕೆ ಆ ಕಾಳಜಿಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಶನಿವಾರ ಒಂದೇ ದಿನ ದಾಖಲೆಯ 179 ರೋಗಿಗಳು ಕೊವಿಡ್‌ಗೆ ಬಲಿಯಾಗಿದ್ದಾರೆ. ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಬರೀ ಸಾವಿನ ಸುದ್ದಿಗಳೇ ಬರುತ್ತಿವೆ. ಈ ಹಂತದಲ್ಲಿ ಶಾಲೆ ಕಾಲೇಜು ತೆರೆಯುವ ಬಗ್ಗೆಯೂ ಸರ್ಕಾರ ಚಿಂತಿಸುತ್ತಿದೆ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. ಮಕ್ಕಳ ಭವಿಷ್ಯದ ಜೊತೆ ಸರ್ಕಾರ ಹುಡುಗಾಟವಾಡುತ್ತಿದೆ ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕೊವಿಡ್ ನಿಯಂತ್ರಿಸಲು ನೇಮಕಗೊಂಡಿದ್ದ ಅಷ್ಟ ದಿಕ್ಪಾಲಕರು ಏನು ಮಾಡುತ್ತಿದ್ದಾರೆ, ಆರೋಗ್ಯ ಇಲಾಖೆ ಏನು ಮಾಡುತ್ತಿದೆ. ಜನರ ಸಂಕಷ್ಟ ಇವರಿಗೆ ಕಾಣುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಸರ್ಕಾರ ಸಂಪೂರ್ಣ ಕೈಚೆಲ್ಲಿ ಕುಳಿತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸುವ ಮೂಲಕ ಮತ್ತು ಶುಚಿತ್ವ ಕಾಪಾಡಿಕೊಂಡು ತಮ್ಮ ಆರೋಗ್ಯ ತಾವೇ ಕಾಪಾಡಿಕೊಳ್ಳಬೇಕು ಖಂಡ್ರೆ ಮನವಿ ಮಾಡಿದ್ದಾರೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಇಂದು ದೆಹಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಎಲೆವೆನ್ ಪಂಜಾಬ್ ನಡುವೆ ಪಂದ್ಯ ನಡೆಯಲಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಮೂರು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.
ರಾಹುಲ್ ಪಂಜಾಬ್ ತಂಡದ ನಾಯಕ, ಇನ್ನಿಂಗ್ಸ್ ಆರಂಭಿಕ ಆಟಗಾರ ಮತ್ತು ವಿಕೆಟ್ ಕೀಪರ್ ಆಗಿ ಆಡಲಿದ್ದು, ಇದನ್ನು ಅವರು ಸವಾಲಾಗಿ ಸ್ವೀಕರಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಬೇರೆ ಯಾರೂ ಈ ತರಹದ ಮೂರು ಪ್ರಮುಖ ಪಾತ್ರಗಳನ್ನು ಪಡೆದಿಲ್ಲ.
ತಂಡದ ಕೋಚ್ ಕರ್ನಾಟಕದವರೇ ಆದ ಅನಿಲ್ ಕುಂಬ್ಳೆಗೆ ರಾಹುಲ್ ಸಾಮರ್ಥ್ಯದ ಬಗ್ಗೆ ಸಾಕಷ್ಟು ವಿಶ್ವಾಸವಿದೆ. ‘ನಾನು ಹತ್ತಾರು ವರ್ಷಗಳಿಂದ ಕೆ.ಎಲ್(ರಾಹುಲ್) ಬಲ್ಲೆ. ವಹಿಸಿದ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಲು ಆತ ಯತ್ನಿಸುತ್ತಾರೆ. ಸದಾ ಪಾಸಿಟಿವ್ ಅಟಿಟ್ಯೂಡ್ ಇರುವ ವ್ಯಕ್ತಿ’ ಎಂದು ಕುಂಬ್ಳೆ ತಮ್ಮ ತಂಡದ ನಾಯಕನ ಬಗ್ಗೆ ಹೇಳಿದ್ದಾರೆ.
ಕಾಮೆಂಟ್‌ರೆಟರ್ ಇರ್ಫಾನ್ ಪಠಾಣ್ ಕೂಡ, ರಾಹುಲ್ ಮೂರೂ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎಂದಿದ್ದಾರೆ. ‘ಟ್ಟೆಂಟಿ-20 ಬ್ಯಾಟಿಂಗ್ ವಿಷಯಕ್ಕೆ ಬಂದರೆ, ಕೊಹ್ಲಿಗಿಂತ ರಾಹುಲ್ ಅತ್ಯುತ್ತಮ ಬ್ಯಾಟ್ಸ್ಮನ್. ಸಂದರ್ಭಗಳಿಗೆ ತಕ್ಕಂತೆ ಆಟವನ್ನು ರಾಹುಲ್ ರೂಪಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ಇರ್ಫಾನ್ ಪಠಾಣ್.
ಅಂದಂತೆ, ಪಂಜಾಬ್ ತಂಡದಲ್ಲಿ ಇನ್ನೂ ಮೂವರು ಕನ್ನಡಿಗರು ಇದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕರುಣ್ ನಾಯರ್, ಆಲ್‌ರೌಂಡರ್‌ಗಳಾದ ಕೆ. ಗೌತಮ್ ಮತ್ತು ಜೆ. ಸುಚಿತ್ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ. ಈ ಮೂವರಲ್ಲಿ ಇಂದು ಯಾರ‍್ಯಾರಿಗೆ ಆಡುವ ಅವಕಾಶ ಸಿಗುತ್ತದೆಯೋ ನೋಡಬೇಕು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,870 ರೂ. ಇದೆ. ಮುಂಬೈನಲ್ಲಿ ಕನಿಷ್ಠ 51,490 ರೂ. ಇದೆ.