Home Blog Page 3066

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಸಿನಿಮಾದಲ್ಲಿರೋರು ರೋಲ್ ಮಾಡೆಲ್ ಆಗಿರಬೇಕು. ನಾನು ಅಧಿಕಾರಿಯಾಗಿ, ಸಿನಿಮಾದವನಾಗಿ ಕೆಲಸ ಮಾಡಿ ಈಗ ರಾಜಕೀಯದಲ್ಲಿದ್ದೇನೆ. ಮುತ್ತಾತನ ಕಾಲದಿಂದಲೂ ನಮ್ಮದು ಕೃಷಿ ಕುಟುಂಬ. ರೈತರಿಗಾಗಿ ಜೈಲುವಾಸವನ್ನೂ ಅನುಭವಿಸಿದ್ದೇನೆ. ಈ ಎಲ್ಲ ಅನುಭವಗಳ ಮೇಲೆ ಕೃಷಿ ಖಾತೆ ನಿಭಾಯಿಸುತ್ತಿದ್ದೇನೆ. ಚಂದ್ರಶೇಖರ ಕೋಡಿಹಳ್ಳಿ ಅವರ ಬಗ್ಗೆ ಅಪಾರ ಗೌರವ ಇತ್ತು. ಅವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾದವರನ್ನು ಕರೆದುಕೊಂಡು ಬಂದು ಕೃಷಿ ಮಂತ್ರಿ ಮಾಡಿದರೆ ಮಾಧ್ಯಮಗಳಿಗೆ ಫೋಸ್ ಕೊಡ್ತಾರೆ ಎಂಬ ಹೇಳಿಕೆ ಹಾಗೂ ಕೃಷಿ ಪದವಿ ಸೀಟ್ ಮಾರಾಟದ ಹೇಳಿಕೆಯನ್ನು ಕೋಡಿಹಳ್ಳಿ ಚಂದ್ರಶೇಖರ ಪರಾಮರ್ಶೆ ಮಾಡಿಕೊಳ್ಳಲಿ. ಇಷ್ಟೊಂದು ಕೀಳುಮಟ್ಟದಲ್ಲಿ ಅವರು ಮಾತನಾಡಿರುವುದು ಸರಿಯಲ್ಲ ಎಂದರು.

ಡ್ರಗ್ಸ್ ಚಟುವಟಿಕೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಶತಸಿದ್ಧ. ಗಾಂಜಾ ಬೆಳೆಯುವುದು, ಅಷ್ಟೇ ಏಕೆ ತಂಬಾಕು ಬೆಳೆಯುವುದೂ ಸಹ ನನ್ನ ಪ್ರಕಾರ ತಪ್ಪು. ಚಿತ್ರರಂಗದಲ್ಲಿ ಇರುವವರು ಗಾಜಿನ ಮನೆಯಲ್ಲಿ ಇರುತ್ತೇವೆ. ನಟರು ರೋಲ್ ಮಾಡಲ್ ಆಗಿರಬೇಕು.
ಎಲ್ಲರೂ ಪವಿತ್ರರು ಎಂದು ಹೇಳಲು ಆಗೋದಿಲ್ಲ. ರಾಜಕಾರಣಿಗಳು ಇರಬಹುದು, ಚಿತ್ರನಟರು ಇರಬಹುದು ತಪ್ಪು ಮಾಡಿದ್ದರೆ ಕ್ರಮ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.

ಭೂ ಸುಧಾರಣೆ ಕಾಯ್ದೆಯಿಂದ ಸಾಕಷ್ಟು ಒಳ್ಳೆಯ ಉಪಯೋಗವೂ ಆಗಿದೆ. ಊ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯಬೇಕು. ವರ್ಷದಲ್ಲಿ ಸುಮಾರು ನೂರು ದಿನ ಅಧಿವೇಶನ ನಡೆದು ಚರ್ಚೆಯಾಗಬೇಕು ಎಂಬ ಆಸೆ ನಮಗೂ ಇದೆ. ಆದರೆ ಕೋವಿಡ್-19 ಕಾರಣದಿಂದ ಕರೆಯಲಾಗಿಲ್ಲ. ಎಲ್ಲವನ್ನು ವಿರೋಧಿಸುವುದೇ ವಿರೋಧ ಪಕ್ಷದ ಕೆಲಸ. ಅವರ ಕೆಲಸವನ್ನು ಅವರು ಮಾಡ್ತಿದಾರೆ ಎಂದು ಅಭಿಪ್ರಾಯಪಟ್ಟರು.

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮಂಡ್ಯ: ದೇವಸ್ಥಾನವೊಂದರ ಕಾಣಿಕೆ ಹುಂಡಿ ಮತ್ತು ದೇವಸ್ಥಾನದ ಇತರ ಅಮೂಲ್ಯ ವಸ್ತುಗಳನ್ನು ಕದಿಯಲು ಬಂದ ಗುಂಪೊಂದು ದೇವಸ್ಥಾನದಲ್ಲಿ ಮಲಗಿದ್ದ ಮೂವರು ಕಾವಲುಗಾರರನ್ನು ಕೊಂದಿದೆ ಎನ್ನಲಾದ ಪ್ರಕರಣ ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯದ ಗುತ್ತಲಿನ ಅರ್ಕೇಶ್ವರ ದೇವಾಲಯದಲ್ಲಿ ಮಲಗಿದ್ದ ಮೂವರು ಕಾವಲುಗಾರರ ತಲೆ ಮೇಲೆ ಕಲ್ಲು ಎತ್ತಿ ಹಾಕಿ  ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರಕಾಶ(34), ಆನಂದ(33) ಹಾಗೂ ಗಣಪತಿ (35) ಕೊಲೆಯಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಈ ಮೂವರು ದೇವಾಲಯದ ಕಾವಲುಗಾರಾಗಿ ಕೆಲಸ ಮಾಡುತ್ತಿದ್ದರು. ಈ ತ್ರಿವಳಿ ಕೊಲೆ ಸೇರಿದಂತೆ ಕಳೆದ ಒಂದು ವಾರದಲ್ಲಿ ಮಂಡ್ಯದಲ್ಲಿ ಒಟ್ಟು ಐದು ಜನರ ಕೊಲೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ದೇವಸ್ಥಾನದ ಹುಂಡಿಯನ್ನು ಅನತಿ ದೂರದಲ್ಲಿ ಬಿಸಾಡಲಾಗಿದೆ. ಹೀಗಾಗಿ ಹುಂಡಿ ಕಳ್ಳತನಕ್ಕೆ ಮೂವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದೇವಾಲಯದಲ್ಲಿ ಕಳ್ಳತನ ನಡೆಸುವ ತಂಡದಿಂದ ವ್ಯವಸ್ಥಿತವಾಗಿ ದುಷ್ಕೃತ್ಯ ನಡೆದಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಮಂಡ್ಯ ಡಿವೈಎಸ್ಪಿ ನವೀನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!