Home Blog Page 3073

ಅಧಿಕಾರಿಗಳು ಬಡ್ಡಿ ವ್ಯವಹಾರ ಮಾಡ್ತಾರೆ ಹೊರತು ಜನರ ತೊಂದರೆಗೆ ಸ್ಪಂದಿಸಲ್ಲ: ಬಿ.ಸಿ.ಪಾಟೀಲ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

-ಜಿಲ್ಲಾ ಕೇಂದ್ರದ ಅಧಿಕಾರಿಗಳಿಗೆ ಬಯೋಮೆಟ್ರಿಕ್ ಮಾಡಬೇಕು

ಅಂಬೇಡ್ಕರ್ ನಿಗಮದ ಅಧಿಕಾರಿಯನ್ನ ಅಮಾನತುಗೊಳಿಸಿ

ಜಿಲ್ಲಾಮಟ್ಟದ ಅಧಿಕಾರಿಗಳು ವಾರದಲ್ಲಿ ಎರಡು ದಿನಗಳು ಮಾತ್ರ ಕಚೇರಿಯಲ್ಲಿ ಇರುತ್ತಾರೆ. ಇನ್ನುಳಿದ ದಿನ ಊರಿಗೆ ಹೋಗಿ ಬಡ್ಡಿ ವ್ಯವಹಾರ ಮಾಡ್ತಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಗರಂ ಆದರು.

ಕೊಪ್ಪಳದ ಕಿಮ್ಸ್‌ನಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ‌ ಪರಿಶೀಲನೆ ಮಾಡಿದ ಅವರು, ಜಿಲ್ಲಾಮಟ್ಟದ ಅಧಿಕಾರಿಗಳ ಬೇಜವಾಬ್ದಾರಿತನದ ಉತ್ತರದಿಂದ ಕೆಂಡಾಮಂಡಲರಾಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಇರುವುದೇ ಇಲ್ಲ. ಇನ್ನು ಮುಂದೆ ಅವರಿಗೂ ಬಯೋಮೆಟ್ರಿಕ್ ವ್ಯವಸ್ಥೆ ಮಾಡಬೇಕು. ಅಂದಾಗ ಮಾತ್ರ ಜಿಲ್ಲಾಮಟ್ಟದ ಅಧಿಕಾರಿಗಳು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಾದರೂ ಕಚೇರಿಯಲ್ಲಿ ಇರುತ್ತಾರೆ ಎಂದು ಸಚಿವರು ಸಲಹೆ ನೀಡಿದರು.

ಅಂಬೇಡ್ಕರ್ ನಿಗಮದ ಅಧಿಕಾರಿ ಕಳೆದ ಕೆಡಿಪಿ ಸಭೆಯಲ್ಲಿ ಕಾಮಗಾರಿಯೊಂದರ ಕುರಿತು ಇಂದಿನ ಸಭೆಯಲ್ಲೂ ಮಾಹಿತಿ ನೀಡುವಲ್ಲಿ ತಡಬಡಾಯಿಸಿದ್ದರಿಂದ ಸಚಿವರು ಜಿಪಂ ಸಿಇಓ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಪಂ ಸಿಇಓ ಅವರು ಅಂಬೇಡ್ಕರ್ ನಿಗಮದ ಅಧಿಕಾರಿಗೆ ಡೆಡ್‌ಲೈನ್ ನೀಡಿದರೂ ಉದಾಸೀನ ಮಾಡಿರುವುದಾಗಿ ದೂರಿದರು. ಹಾಗಾಗಿ ಅಂಬೇಡ್ಕರ್ ನಿಗಮದ ಅಧಿಕಾರಿಯನ್ನು ಅಮಾನತುಗೊಳಿಸುವ, ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಯೋಚಿಸಿ ಎಂದು ಸಚಿವ ಬಿ.ಸಿ.ಪಾಟೀಲರು ತಿಳಿಸಿದರು.

ಭೂ ಸೇನಾ ನಿಗಮದಡಿ ಯಲಬುರ್ಗಾ ಭಾಗದಲ್ಲಿ ಸುಮಾರು 63 ಕೋಟಿ ರೂಪಾಯಿ ಅವ್ಯವಹಾರದ ದೂರುಗಳಿವೆ. ಜೊತೆಗೆ ಭೂಸೇನೆಯ ಅಧಿಕಾರಿಗಳೇ ಅವ್ಯವಹಾರದ ತನಿಖೆ‌ ನಡೆಸಿದಾಗ ಸುಮಾರು 7-8 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ವರದಿ ನೀಡಿದ್ದಾರೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ದೂರಿದರು.

ಇದಕ್ಕೆ ಉತ್ತರಿಸಿದ ಭೂಸೇನಾ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಚಿಂಚೋಳಿಕರ್, ಅದು ಈ ಹಿಂದೆ ಇದ್ದ ಅಧಿಕಾರಿಗಳಿಂದ ಆಗಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.

ಭೂ ಸೇನಾ ನಿಗಮದವರು ಅನುದಾನ ಬಂದಾಗ ಮಾತ್ರ ಕಾಮಗಾರಿ ನಡೆಸುತ್ತಾರೆ. ಅನುದಾನ ಮುಗಿದ ಬಳಿಕ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತಾರೆ. ಮತ್ತೇ ಅನುದಾನ ಬಂದ ಮೇಲೆ ಕಾಮಗಾರಿ ಶುರು ಮಾಡೊ ಪರಿಪಾಠ ರೂಢಿಸಿಕೊಂಡಿದ್ದಾರೆ. ಮೊದಲು ಇದನ್ನು ಕೈಬಿಡಿ. ಕಾಮಗಾರಿ ಪೂರ್ಣಗೊಳಿಸಿ ಆನಂತರ ಸರಕಾರದ ಅನುದಾನವನ್ನು ಕ್ಲೇಮ್ ಮಾಡಿ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.

ಸಭೆಯಲ್ಲಿ ಶಾಸಕರಾದ ಬಸವರಾಜ ದಢೇಸೂಗೂರು, ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಾಪುರ, ಸಂಸದ ಕರಡಿ ಸಂಗಣ್ಣ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಪಂ ಉಪಾಧ್ಯಕ್ಷ ಬೀನಾ ಬೇಗಂ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಓ ರಘುನಂದನ್ ಮೂರ್ತಿ, ಎಸ್‌ಪಿ ಟಿ.ಶ್ರೀಧರ್, ಎಸಿ ನಾರಾಯಣರಡ್ಡಿ‌ ಕನಕರಡ್ಡಿ, ಎಡಿಸಿ ಎಂ.ಪಿ. ಮಾರುತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಎಂಎಲ್ಎ ಪುತ್ರ ಎಂದು ಹೇಳಿಕೊಂಡು ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಖದೀಮನ ಸೆರೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಎಂಎಲ್ಎ ಮಗ ಎಂದು ನಂಬಿಸಿ ಯುವತಿಯನ್ನು ಮರಳು ಮಾಡಿ, ಅವಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಯುವಕನನ್ನು ಬಂಧಿಸಲಾಗಿದೆ. ಯುವತಿಯೊಂದಿಗಿನ ಖಾಸಗಿ ಕ್ಷಣಗಳ ವಿಡಿಯೋ ಪಾಲಕರ ಮೊಬೈಲ್ಗೆ ಹಾಕಿ, ಹಣ ಕೀಳಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಿಂಧನೂರು ಮೂಲದ ಯುವತಿ ತಾವರಗೇರಾ ಅಜ್ಜಿ ಮನೆಯಲ್ಲಿದ್ದಳು. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಬಾಗೋಡಿಯ ಯುವಕನೊಂದಿಗೆ ಟಿಕ್ಟಾಕ್ ಮೂಲಕ ಪರಿಚಯವಾಗಿದ್ದಳು. ಈತ ಶಾಸಕ ಅಭಯ ಪಾಟೀಲ ಅವರ ಮಗ, ಚಂದು ಪಾಟೀಲ್ ಎಂದು ಹೇಳಿಕೊಂಡು ಮದುವೆಯಾಗುವಂತೆ ಪೀಡಿಸಿದ್ದಾನೆ.

ಯುವಕನ ಮಾತಿಗೆ ಮರುಳಾಗಿ ಕಳೆದ ಮಾರ್ಚ್ ನಲ್ಲಿ ಗೋವಾದಲ್ಲಿ ಬೀಚ್ ಸುತ್ತಾಡಿದ್ದು, ಆಕೆಯನ್ನು ಲೈಂಗಿಕವಾಗಿ ಸಹ ಬಳಸಿಕೊಂಡಿದ್ದಾನೆ. ಈ ಎಲ್ಲವನ್ನು ಫೋಟೋ, ವಿಡಿಯೋ ಮಾಡಿಕೊಂಡಿದ್ದ ಯುವಕ, ಯುವತಿಯ ಪಾಲಕರಿಗೆ ಕಳುಹಿಸಿ 9 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ.
ಈ ಹಿನ್ನೆಲೆಯಲ್ಲಿ ಯುವತಿ ಪಾಲಕರ ತಾವರಗೇರಾ ಪೊಲೀಸ್ ಠಾಣೆಗೆ ನೀಡಿದ ದೂರಿನ‌ ಮೇರೆಗೆ ಆರೋಪಿ ಮಹ್ಮದ್ ಚಾಂದ್ ಪಾಷಾ ಅಲಿಯಾಸ್ ಚಂದು ಪಾಟೀಲ ನನ್ನು ವಶಕ್ಕೆ ತೆಗೆದುಕೊಂಡು ಕುಷ್ಟಗಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ

ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಹುಬ್ಬಳ್ಳಿಯಿಂದ ಗಂಗಾವತಿ ರೈಲು ದಿನ ನಿತ್ಯ ಓಡಾಡುವುದು ಸಾರ್ವಜನಿಕರಿಗೆ ಅನುಕೂಲವಾಗಿರುವುದು ನಿಜ.
ಆದರೆ ಕಾರಟಗಿ ರಾಯಚೂರುವರೆಗೂ ತಲುಪುವುದು ಯಾವಾಗ? . ಗಂಗಾವತಿ, ಕಂಪ್ಲಿ, ಸಿಂಧನೂರು, ರಾಯಚೂರು ಭಾಗದ ಜನರಿಗೆ ಪ್ರಯಾಣದ ದರದ ಜೊತೆಗೆ ಸಮಯವೂ ಉಳಿತಾಯವಾಗುತ್ತದೆ.
ಆದರೆ ದಿನ ನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುತ್ತಿದ್ದರೂ ಮೂಲಭೂತ ಸೌಕರ್ಯವಿಲ್ಲದೆ ಪರದಾಡುವಂತ ಪರಿಸ್ಥಿತಿ ಈ ಭಾಗದ ಪ್ರಯಾಣಿಕರಿಗೆ ಆಗಿದೆ ಎಂದು ಎಐಡಿವೈಓ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗಡ್ಡಿ ದೂರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗಿಣಿಗೇರಿಯಿಂದ ಮಾರ್ಗ ಬದಲಾಣೆ ಆದ ಮೇಲೆ ಬೂದುಗುಂಪ, ಜಬ್ಬಲಗುಡ್ಡ, ಬೆಣಕಲ್, ಈ ಮೂರು ಸ್ಟೇಷನ್ ಗಳು ಊರಿಂದ ದೂರವಿದ್ದು ಯಾವುದೇ ಮೂಲಭೂತ ಸೌಕರ್ಯಗಳೇ ಇಲ್ಲ, ಮುಖ್ಯವಾಗಿ ರಾತ್ರಿ ಟೈಮ್ ಪ್ಲಾಟ್ ಫಾರ್ಮ್ನಲ್ಲಿ ಒಂದು ಲೈಟ್ ಸಹ ಇಲ್ಲ ಸುತ್ತ ಕತ್ತಲು ಗುಡ್ಡ ಹತ್ತಿರದಲ್ಲಿದೆ ಕಾಡುಪ್ರಾಣಿಗಳ ಅಪಾಯ, ಮಹಿಳೆಯರು, ಮಕ್ಕಳು, ವೃದ್ದರಿಗೆ ಅಪಾಯ ಕಟ್ಟಿಟ್ಟ ಬುತ್ತಿ, ಅನಾಹುತಗಳು ಆಗುವ ಆತಂಕ ಸ್ಥಳೀಯರಿಗೆ ಕಾಡುತ್ತಿದೆ ಎಂದು ಅವರು ದುಗುಡ ತೋಡಿಕೊಂಡಿದ್ದಾರೆ.
ಮುಖ್ಯವಾಗಿ ಲೈಟ್ ಜೊತೆ ಕುಡಿಯುವ ನೀರು ಇಲ್ಲ‌. ಗಂಗಾವತಿ ಬಿಟ್ಟು ಮೂರು ಸ್ಟೇಷನಲ್ಲಿ ಟಿಕೆಟ್ ಕೊಡುವವರು ಇಲ್ಲ, ಇಂತ ಜಟಿಲ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಕೇವಲ ಟ್ರೈನ್ ಬಿಟ್ಟು ಮೂಲಭೂತ ಸೌಕರ್ಯ ಒದಗಿಸಿಲ್ಲದಿರುವುದು ದುರಂತವೆ ಸರಿ. ಜನಪ್ರತಿನಿದಿನಗಳು, ಸಂಬಂಧಪಟ್ಟ ಅಧಿಕಾರಿಗಳು ಕೊಡಲೇ ಗಮನಹರಿಸಬೇಕು. ರಾತ್ರಿ ಟ್ರೈನ್ ಹೋಗುವ ಸಂದರ್ಭದಲ್ಲಿ ಆರಕ್ಷಕ ಸಿಬ್ಬಂದಿಗಳನ್ನು ಮೂರು ಸ್ಟೇಟಿನಲ್ಲಿ ನಿಯೋಜಿಸಿಬೇಕು.
ಸಾರ್ವಜನಿಕರಿಗೆ ತೊಂದರೆ ಆಗುವ ಮುಂಚೆಯೇ ತುರ್ತಾಗಿ ಕ್ರಮ ಕೈಗೊಂಡು ಪ್ರಯಾಣಿಕರು ನಿರ್ಭಿಡತೆಯಿಂದ ಓಡಾಡಲು ವ್ಯವಸ್ಥೆ ಕಲ್ಪಿಸಬೇಕು, ಕಳೆದ ಒಂದು ವಾರದಿಂದ ಸಾರಿಗೆ ನೌಕರರು ಮುಷ್ಕರ ದಿಂದ ಜನಸಾಮಾನ್ಯರು ರೈಲ್ವೆಗೆ ಹೆಚ್ಚು ಅವಲಂಬಿತವಾಗಿದ್ದರೆ. ಹಾಗಾಗಿ ಕೂಡಲೇ ರೈಲ್ವೆ ಯಲ್ಲಿ ಓಡಾಡುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಮುಂದುವರಿದ ಕೊರೋನಾ ಆರ್ಭಟ; ಶುಕ್ರವಾರವೂ 34 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 16 ಶುಕ್ರವಾರವೂ ಜಿಲ್ಲೆಯಲ್ಲಿ 34 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗದಗ ನಗರದಲ್ಲಿಯೇ ಅತಿ ಹೆಚ್ಚು ಅಂದರೆ 27 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಗರ ಪ್ರದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದು ಕಂಡು ಬರುತ್ತದೆ. ಮುಂಡರಗಿಯ 00, ನರಗುಂದದ 00, ರೋಣ ತಾಲೂಕಿನಲ್ಲಿ-03, ಹಾಗೂ ಶಿರಹಟ್ಟಿ ತಾಲೂಕಿನ-04 ಜನರಿಗೆ ಸೋಂಕು ತಗುಲಿದೆ.

ಶುಕ್ರವಾರ 34 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11504 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 20 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11188 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 175 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 280 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 316348 ಮಾದರಿಗಳಲ್ಲಿ 304564 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊರೋನಾ ಸೋಂಕು ಹೆಚ್ಚಳ; ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಸ್ಥಗಿತ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್-19 ಸಾಂಕ್ರಾಮಿಕ ರೋಗವು ರಾಜ್ಯದಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಒಂದೆಡೆ ಗುಂಪು ಗುಂಪಾಗಿ ಸೇರುವುದನ್ನು ತಡಗಟ್ಟಲು ಹಾಗೂ ಸಾರ್ವಜನಿಕರಿಗೆ ಈ ಸಾಂಕ್ರಾಮಿಕ ರೋಗವು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ 2021 ರ ಎಪ್ರಿಲ್ ಮಾಹೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಹಳ್ಳಿಗಳಿಗೆ ಭೇಟಿ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸ್ಥಗಿತಗೊಳಿಸುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ.

ಸರಕಾರದ ಸುತ್ತೋಲೆಯನ್ವಯ ಗದಗ ಜಿಲ್ಲೆಯಲ್ಲಿ ಏಪ್ರಿಲ್ 17 ರಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ; ವಾಯುವ್ಯ ಸಾರಿಗೆ ಕಚೇರಿ ವಸ್ತುಗಳು ಜಪ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಅಪಘಾತದಿಂದ ಮೃತಪಟ್ಟಿದ್ದ ಬಾಲಕನ ಸಂಬಂಧಿಗಳಿಗೆ ಪರಿಹಾರ ಹಣ ನೀಡುವಲ್ಲಿ ವಿಳಂಬ ಮಾಡಿದ ಕಾರಣ ವಾಯುವ್ಯ ಸಾರಿಗೆ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಮುಳಗುಂದ ನಾಕಾ ಬಳಿ ಇರುವ ವಾಯುವ್ಯ ಸಾರಿಗೆ ಕಚೇರಿಯಲ್ಲಿನ ಕಂಪ್ಯೂಟರ್, ಮಾನಿಟರ್, ಸಿಪಿಯು ಸೇರಿದಂತೆ ಹಲವಾರು ವಸ್ತುಗಳನ್ನು, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ಪಾಟೀಲ್ ಅವರ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.

2009 ರಲ್ಲಿ ಗದಗನ ದಂಡಿನದುರ್ಗಮ್ಮ ದೇವಸ್ಥಾನದ ಬಳಿ ಅಪಘಾತ ನಡೆದು, ಈ ಘಟನೆಯಲ್ಲಿ ಬೆಟಗೇರಿ ನಿವಾಸಿ ಸಂಕಪ್ಪ ಶಿವಾನಂದ ಆಲೂರ (15) ಸ್ಥಳದಲ್ಲಿಯೇ ಮೃತಪಟ್ಟಿದ್ದ. ಹುಬ್ಬಳ್ಳಿ-ಬಾಗಲಕೋಟೆ ಬಸ್ ಹರಿದು ಸ್ಥಳದಲ್ಲಿ ಸಂಕಪ್ಪನ ಸಾವು ಸಂಭವಿಸಿತ್ತು. ಪರಿಹಾರಕ್ಕೆ ಆಗ್ರಹಿಸಿ 2009 ರಲ್ಲಿ ಮೃತ ಬಾಲಕನ ಸಂಬಂಧಿಗಳು ನ್ಯಾಯಾಲಯದ ಮೊರೆಹೋಗಿದ್ದರು.

ಪ್ರಕರಣದ ಕುರಿತು ಆದೇಶ ನೀಡಿದ್ದ ನ್ಯಾಯಾಲಯ ಗದಗ ಘಟಕದಿಂದ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸಾರಿಗೆ ಇಲಾಖೆಯವರು 2014 ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಒಟ್ಟು 8 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಅದರಲ್ಲಿ 5 ಲಕ್ಷ ಪರಿಹಾರ ನೀಡಲಾಗಿತ್ತು. ಉಳಿದ 3 ಲಕ್ಷ 16 ಸಾವಿರ ಪರಿಹಾರ ನೀಡದ ಕಾರಣ ಈಗ ಇಲಾಖೆಯ ವಸ್ತುಗಳ ಜಪ್ತಿಗೆ ಅದೇಶ ನೀಡಿಲಾಗಿದ್ದು, ಅರ್ಜಿದಾರರ ಪರ ವಕೀಲರಾದ ಅಶೋಕ ಹೊಸೂರ ನೇತೃತ್ವದಲ್ಲಿ ಜಪ್ತಿ ಕಾರ್ಯ ನಡೆಯಿತು.

ಸಚಿವರ ಹೆಗಲೇರಿದ ವಾನರ!!

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಅಂಜನಾದ್ರಿ ಬೆಟ್ಟ ಹನುಮ ಜನಿಸಿದ ತಾಣ ಎಂದೇ ಫೇಮಸ್. ಇದಕ್ಕೆ ಪುಷ್ಠಿ ನೀಡುವಂತೆ ಅಂಜನಾದ್ರಿ ಬೆಟ್ಟ ಹಾಗೂ ಸುತ್ತ ಮುತ್ತ ಸದಾ ವಾನರ ಸೇನೆ ಇದ್ದೇ ಇರುತ್ತೆ. ಮನುಷ್ಯರೊಂದಿಗೆ ಅವು ಸಹಜವಾಗಿ ಬೆರೆಯುತ್ತವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಅರವಿಂದ ಲಿಂಬಾವಳಿ ಶುಕ್ರವಾರ ಅಂಜನಾದ್ರಿ ಹಾಗೂ ಪಂಪಾ ಸರೋವರಕ್ಕೆ ಭೇಟಿ ನೀಡಿದ್ದರು. ಅರಣ್ಯ ಖಾತೆಯನ್ನೂ ಹೊಂದಿರುವ ಅರವಿಂದ ಲಿಂಬಾವಳಿಯವರು ಅಂಜನಾದ್ರಿಯಲ್ಲಿ ವಾನರ ಸೇನೆ ಕಂಡು, ಅವುಗಳೊಂದಿಗೆ ಪ್ರೀತಿಯಿಂದ ಕೆಲ ಕಾಲ ಕಳೆದರು. ಆಹಾರ, ಹಣ್ಣು ನೀಡಿ ಆರೈಕೆ ಮಾಡಿದರು. ಸಚಿವರ ಪ್ರೀತಿ-ಕಾಳಜಿಗೆ ಮನಸೋತ ವಾನರವೊಂದು ಅವರ ಹೆಗಲೇರಿ ಆಹಾರ ತಿಂದದ್ದು ವಿಶೇಷವಾಗಿತ್ತು.

ಜನರು ಸಹಕರಿಸದಿದ್ದರೆ ಲಾಕ್‌ಡೌನ್ ಅನಿವಾರ್ಯ; ಬಿ ಸಿ ಪಾಟೀಲ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಜನರೂ ಸಹಕಾರ ನೀಡಬೇಕು. ಜನರು ಸಹಕರಿಸದಿದ್ದರೆ ಲಾಕ್‌ಡೌನ್ ಅನಿವಾರ್ಯ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.

ಕೊಪ್ಪಳದ ಗಿಣಗೇರಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಜನರ ಸಹಕಾರವೂ ಮುಖ್ಯವಾಗಿದೆ ಎಂದರು.

ಕೊಪ್ಪಳ ತಾಲೂಕಿನ ಕಾಸನಕಂಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಈ ಹಿಂದೆ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆದಿದೆ. 46 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಅವು ಪೈಪ್ ಸರಿ ಇಲ್ಲ. ಸ್ಥಳ ಪರಿಶೀಲನೆ ಮಾಡಿದ್ದೇವೆ. ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಈ ಕಾಮಗಾರಿಗೆ ತ್ವರಿತಗತಿಯಲ್ಲಿ ಪುನಃ ಚಾಲನೆ ನೀಡಲಾಗುವುದು ಎಂದರು.

ಇನ್ನೂ 240 ಎಕರೆ ವಿಸ್ತಾರದ ಗಿಣಗೇರಿ ಕೆರೆ ಹೂಳೆತ್ತುವ ಕಾಮಗಾರಿ ಜನರ ಸಹಕಾರದ ಜೊತೆಗೆ ನಡೆದಿದೆ. ಗವಿಶ್ರೀ ನೇತೃತ್ವದಲ್ಲಿ ಕೆರೆ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಸಮಾಜಮುಖಿ ಕಾರ್ಯಗಳತ್ತ ಗಮನ ಹರಿಸುವ ಸ್ವಾಮೀಜಿ ಕೊಪ್ಪಳದ ನೆಲದಲ್ಲಿರುವುದು ಈ ಭಾಗದ ಜನರ ಪುಣ್ಯ ಎಂದು‌ ಹೇಳಿದರು.

ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಈಶ್ವರಪ್ಪ- ಸಿದ್ದರಾಮಯ್ಯ ಎರಡೂ ಮದ್ದಾನೆಗಳು. ಅವರವರ ಮಾತುಗಳಿಗೆ ಅವರವರೇ ಪ್ರತಿಕ್ರಿಯೆ ಕೊಡ್ತಾರೆ. ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಎಂದರು.

ಬೆಳೆ ಕುಸಿತ ಪ್ರಶ್ನೆಗೆ ಉಡಾಫೆ ಉತ್ತರ: ಬೆಳೆಗಳ ಬೆಲೆ ಕುಸಿತಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ ಸಚಿವ ಬಿ. ಸಿ ಪಾಟೀಲ್ ಸುಖಾಸುಮ್ಮನೆ ಗರಂ ಆಗಿ, ನೀವೆಲ್ಲ ಕಾಂಟ್ರಾವರ್ಸಿ ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮದವರ ವಿರುದ್ಧ ಹರಿಹಾಯ್ದರು.

ರೈತರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ಸರ್ಕಾರ ರೈತರ ನೆರವಿಗೆ ಬರಬೇಕು ಎನ್ನುವುದಕ್ಕೂ ಅವರು ಗರಂ ಆದರು. ಕೊನೆಗೆ ರೈತರು ಬೆಲೆ ಕುಸಿತದಿಂದ ನಷ್ಟ ಅನುಭವಿಸಿದರೆ ಬೆಳೆ ನಾಶ ಮಾಡದೇ ಸ್ವಲ್ಪ ದಿನ ಕಾಯ್ದು ಬೆಳೆ ಮಾರಾಟ ಮಾಡಬೇಕು. ರೈತರಿಗೆ ತಾಳ್ಮೆ ಬೇಕು ಎಂದು ಸಮಜಾಯಿಷಿ ನೀಡಿದರು.

ತುಂಗಭದ್ರಾ ಜಲಾಶಯದಿಂದ ಏ.30ರ ವರೆಗೂ ಕಾಲುವೆಗೆ ನೀರು ಹರಿಸಲು ಹಂತ ಹಂತವಾಗಿ ನಿರ್ಧಾರ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಅಮರೇಶ ಕರಡಿ-ರಾಘಣ್ಣ ಅಕ್ಕಪಕ್ಕ

ಗಿಣಗೇರಾ‌ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಸಚಿವ ಬಿ.ಸಿ.ಪಾಟೀಲ ಭೇಟಿ ನೀಡಿದ ವೇಳೆ ಸಚಿವರು ಮಾಧ್ಯಮದವರೊಂದಿಗೆ ಮಾತನಾಡುವಾಗ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನ ಕರೆದು ಪಕ್ಕದಲ್ಲಿ ನಿಲ್ಲಿಸಿಕೊಂಡರು. ಪರಿಶೀಲನೆ ಮುಗಿದ ಬಳಿಕ ಗುಳದಳ್ಳಿಗೆ ತೆರಳುವಾಗ ಅಮರೇಶ್ ಕರಡಿ ಕುಳಿತಿದ್ದ ವಾಹನವೇರಿದ ಶಾಸಕ ರಾಘವೇಂದ್ರ ಹಿಟ್ನಾಳ ಅಮರೇಶ್ ಕರಡಿ ಪಕ್ಕದಲ್ಲಿ ಕುಳಿತುಕೊಂಡು ಒಟ್ಟಿಗೆ ತೆರಳಿದರು. ಈ ಸನ್ನಿವೇಶ ಹೊಂದಾಣಿಕೆ ರಾಜಕಾರಣಕ್ಕೆ ಸಾಕ್ಷ್ಯ ನೀಡಿದಂತಿತ್ತು.

ಕೊರೋನಾ ಎರಡನೇ ಅಲೆ; ಗುರುವಾರ 34 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 15 ಗುರುವಾರದಂದು ಜಿಲ್ಲೆಯಲ್ಲಿ 34 ಜನರಿಗೆ ಸೋಂಕು ಪತ್ತೆಯಾಗಿದೆ. ಗದಗ ನಗರ ಹಾಗೂ ತಾಲೂಕಿನ 18 ಜನರಿಗೆ, ಮುಂಡರಗಿಯ 02, ನರಗುಂದದ 03, ರೋಣ ತಾಲೂಕಿನಲ್ಲಿ 05 ಹಾಗೂ ಶಿರಹಟ್ಟಿ ತಾಲೂಕಿನ 05 ಹಾಗೂ ಹೊರಜಿಲ್ಲೆಯ-01 ಜನರಿಗೆ ಸೋಂಕು ತಗುಲಿದೆ.

ಗುರುವಾರ 34 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11470 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 18 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 11168 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 161 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 311 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 314431 ಮಾದರಿಗಳಲ್ಲಿ 302650 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅನ್ ಲೈನ್ ಮೂಲಕ ಹಣ ವರ್ಗಾವಣೆ; ಆರೋಪಿ ರಾಜು ಸೈಬರ್ ಪೊಲೀಸರ ಬಲೆಗೆ

ವಿಜಯಸಾಕ್ಷಿ ಸುದ್ದಿ, ಗದಗ

ಆನ್ ಲೈನ್ ಮೂಲಕ ಲಕ್ಷಾಂತರ ರೂ, ಹಣ ವಂಚಿಸಿದ ಆರೋಪಿಯನ್ನು ಗದಗ ಜಿಲ್ಲಾ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಹಳ್ಳಿಯ 24 ವರ್ಷದ ಮುರಾರಿ ವೆಂಕಟಯ್ಯ ಅಲಿಯಾಸ್ ರಾಜು ಮಿಖಾಯೆಲು ಎಂಬಾತನೇ ಬಂದಿಸಿಲಾಗಿದೆ.

ಬಂಧಿತನಿಂದ ಒಂದು ಲ್ಯಾಪ್‌ಟಾಪ್, ಮೊಬೈಲ್ ಹಾಗೂ ನಗದು 68 ಸಾವಿರ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಮುರಾರಿ ವೆಂಕಟಯ್ಯ ಎಂಬಾತ ಕಳೆದ ವರ್ಷ 2020 ಜುಲೈ 04 ರಂದು ವೀರಪ್ಪ ಚನ್ನಪ್ಪ ಮಾಳಗಿ ಎಂಬುವವರ ಎಸ್ ಬಿ ಐ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ, 21 ಸಾವಿರದ 726 ರೂ,ಗಳನ್ನು ಆನ್ ಲೈನ್ ಮುಖಾಂತರ ವರ್ಗಾವಣೆ ಮಾಡಿಕೊಂಡು ಮೋಸವೆಸಗಿದ್ದ.

ಸೈಬರ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.

ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಮಹಾಂತೇಶ್ ಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ ಪಿ ದೊಡ್ಡಮನಿ, ಎಮ್ ವ್ಹಿ ಹೂಲಿಹಳ್ಳಿ, ಎಸ್ ಬಿ ಪಮ್ಮಾರ್, ಆನಂದಸಿಂಗ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾಗಿದ ಪೊಲೀಸ್ ತಂಡಕ್ಕೆ ಎಸ್ಸಿ ಯತೀಶ್ ಎನ್ ಶ್ಲಾಘಿಸಿದ್ದಾರೆ.

error: Content is protected !!