Home Blog Page 3075

ಜಿಮ್ಸ್‌ನಲ್ಲಿ ಫುಡ್ ಪಾಯಿಸನ್: 14 ವಿದ್ಯಾರ್ಥಿಗಳು ಅಸ್ವಸ್ಥ

ವಿಜಯಸಾಕ್ಷಿ ಸುದ್ದಿ, ಗದಗ

ವಿಷಪೂರಿತ ಆಹಾರ ಸೇವಿಸಿದ್ದ 14 ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಜಿಮ್ಸ್ ಕಾಲೇಜಿನ ಶಾರದಾ ಕ್ಯಾಂಟೀನ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.

ಈಗಾಗಲೇ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು ತೀವ್ರವಾಗಿ ಅಸ್ವಸ್ಥಗೊಂಡಿರುವ 11 ಜನ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳು ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ರಾತ್ರಿ ಕಾಲೇಜಿನಲ್ಲಿರುವ ಶಾರದಾ ಕ್ಯಾಂಟಿನ್‌ನಲ್ಲಿ ಅನ್ನ ಸಾಂಬಾರ ಸೇವಿಸಿದ್ದು, ಈ ವೇಳೆ ಅಸ್ವಸ್ಥಗೊಂಡಿದ್ದಾರೆ. ಅಲ್ಲದೇ, ವಿಷಪೂರಿತ ಆಹಾರ ಸೇವಿಸಿದ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ವಾಂತಿ ಬೇದಿಯಂತಹ ಸಮಸ್ಯೆಗಳಾಗಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಜಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಘಟನೆ ನಡೆದ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿಗೆ ಸನ್ಮಾನ

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ದಾವಣಗೆರೆ ಜಿಲ್ಲಾ ಬೈಲಪತ್ತಾರ್ ಸಮುದಾಯದ ವತಿಯಿಂದ ನಗರಕ್ಕೆ ಭೇಟಿ ನೀಡಿದ್ದ ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಅವರಿಗೆ ಸನ್ಮಾನಿಸಲಾಯಿತು.

ನಗರದ ಬಂಬೂಬಜಾರ್ ವಿಠ್ಠಲ ಮಂದಿರಲ್ಲಿ ನಡೆದ ಕಾರ್ಯಕ್ರಮದಲ್ಲಿ, ದಾವಣಗೆರೆ ಜಿಲ್ಲಾ ಬೈಲ್ ಪತ್ತಾರ್ ಸಂಘದ ಅಧ್ಯಕ್ಷ ಅಪ್ಪಣ್ಣ ಬೈಲ್ ಪತ್ತಾರ್, ಗೌರವಾಧ್ಯಕ್ಷ ನಿಂಗಪ್ಪ, ಉಪಾಧ್ಯಕ್ಷ ಮಾರುತಿ, ಕಾರ್ಯದರ್ಶಿ ರಾಜು, ಪರಮೇಶ್ ಸೇರಿದಂತೆ ಇತರೆ ಪದಾಧಿಕಾರಿಗಳು, ನಿಗಮಕ್ಕೆ ಶೀಘ್ರವಾಗಿ ಸಮುದಾಯದ ಸದಸ್ಯರನ್ನು ನೇಮಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿಗಮದ ನಿರ್ದೇಶಕ ಲಕ್ಷ್ಮಣ ಶಿಕಾರಿಪುರ, ಬೈಲಪತ್ತಾರ್ ಸಂಘದ ರಾಜ್ಯಾಧ್ಯಕ್ಷ ಪ್ರಕಾಶ್ ಬೈಲಪತ್ತಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪಾಕಿಸ್ತಾನಿ ಫೈಟರ್‌ ನನ್ನು ಮಣ್ಣು ಮುಕ್ಕಿಸಿದ ಬೆಂಗಳೂರಿನ ಫೈಟರ್‌ ಮೊಹಮ್ಮದ್‌ ಫರಾದ್ ಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ ಬೆಂಗಳೂರು
ಮಾರ್ಚ್‌ 11 ರಂದು ಬಹ್ರೇನ್‌ ನಲ್ಲಿ ನಡೆದ ಎಂಎಂಎ (ಮಿಕ್ಸಡ್‌ ಮಾರ್ಷಲ್‌ ಆರ್ಟ್ಸ್‌) ಫೈಟ್‌ ನಲ್ಲಿ ಬೆಂಗಳೂರಿನ ಫೈಟರ್‌ ಮೊಹಮ್ಮದ ಫರಾದ್‌ ಪಾಕಿಸ್ತಾನಿ ಫೈಟರ್‌ ಉಲೂಮಿ ಕರೀಮ್‌ ಅವರನ್ನು ನಾಕ್‌ಔಟ್‌ ಮಾಡಿ ಗೆಲವು ಸಾಧಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಾಗೂ ದೇಶದ ಪತಾಕೆಯನ್ನು ಹಾರಿಸಿದ ಬೆಂಗಳೂರಿನ ಫೈಟರ್‌ ಗೆ ಇಂದು ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌, ನಲಪಾಡ್‌ ಅಕಾಡೆಮಿ ಹಾಗೂ ಬೌರಿಂಗ್‌ ಇನ್ಸಿಟ್ಯೂಟ್‌ ಜಂಟಿಯಾಗಿ ಇಂದು ಸನ್ಮಾನಿಸಿದವು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಫೈಟರ್‌ ಮೊಹಮ್ಮದ ಫರಾದ್*, ಎಂಎಂಎ ಇತ್ತೀಚೆಗೆ ಜಗತ್ತಿನಾದ್ಯಂತ ಬಹಳಷ್ಟು ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತಿದೆ. ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಬಹಳಷ್ಟು ದೈಹಿಕ ಶ್ರಮ ಹಾಗೂ ಶಕ್ತಿಯ ಅಗತ್ಯವಿದೆ. ನಿಜವಾದ ಫೈಟ್‌ ನಲ್ಲಿ ಅದರಲ್ಲೂ ನಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಿ ಫೈಟರನ್ನು ನಾಕ್‌ಔಟ್‌ ಮಾಡಿ ಗೆಲವು ಸಾಧಿಸಿದ್ದು ಬಹಳ ಸಂತಸ ತಂದಿದೆ. ನನ್ನ ಗೆಲುವನ್ನು ಗುರುತಿಸಿ ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌, ನಲಪಾಡ್‌ ಅಕಾಡೆಮಿ ಹಾಗೂ ಬೌರಿಂಗ್‌ ಇನ್ಸಿಟ್ಯೂಟ್‌ ನನ್ನ ಊರಿನಲ್ಲಿ ಸನ್ಮಾನಿಸುತ್ತಿರುವುದು ಬಹಳ ಖುಷಿಯ ವಿಷಯವಾಗಿದೆ ಎಂದರು.
ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌ ಅಧ್ಯಕ್ಷರ ಹಾಗೂ ಶಾಸಕ ಎನ್‌ ಎ ಹ್ಯಾರಿಸ್ ಮಾತನಾಡಿ, ದೈಹಿಕ ಶಕ್ತಿಯನ್ನು ಬೇಡುವ ಕ್ರೀಡೆ ಮಿಕ್ಸಡ್‌ ಮಾರ್ಷಲ್‌ ಆರ್ಟ್ಸ್‌, ಇಂತಹ ಕ್ರೀಡೆಯಲ್ಲಿ ನಮ್ಮ ನಗರದ ಹುಡುಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಬಹಳ ಹೆಮ್ಮೆಯ ಸಂಗತಿ. ಇಂತಹ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕಾಗಿರುವುದು ನಮ್ಮ ಅದ್ಯ ಕರ್ತವ್ಯ. ಈ ಹಿನ್ನಲೆಯಲ್ಲಿ ಫುಟ್‌ಬಾಲ್‌ ಅಸೋಸಿಯೇಷನ್‌ ವತಿಯಿಂದ ಸನ್ಮಾನ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಬೇಕಾದ ಪ್ರೋತ್ಸಾಹ ನೀಡುವುದಕ್ಕೂ ಸಿದ್ದರಿದ್ದೇವೆ. ಮೊಹಮ್ಮದ್‌ ಫರಾದ್‌ ಸಾಧನೆ ಇನ್ನು ಹಲವರಿಗೆ ಸ್ಪೂರ್ತಿಯಾಗಲಿ ಹಾಗೂ ಹೆಚ್ಚು ಹೆಚ್ಚು ಯುವ ಜನಾಂಗ ಇಂತಹ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ನಲಪಾಡ್‌ ಅಕಾಡೆಮಿಯ ನಿರ್ದೇಶಕ ಓಮರ್‌ ನಲಪಾಡ್‌ ಹ್ಯಾರಿಸ್‌, ಆಲ್‌ ಇಂಡಿಯಾ ಎಂಎಂಎ ಫೆಡರೇಷನ್‌ ನ ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತಿ ನೀಡಿದ ಅಬ್ದುಲ್‌ ಮುನೀರ್, ಆಲ್‌ ಇಂಡಿಯಾ ಎಂಎಂಎ ಫೆಡರೇಷನ್‌ ನ ಅಧ್ಯಕ್ಷ ಆದಿತ್ಯ, ಬೌರಿಂಗ್‌ ಇನ್ಸಿಟ್ಯೂಟ್ ನ ಅಧ್ಯಕ್ಷರಾದ ರೂಪ್‌ ಗೋಲ್ಖಾನಿ ಉಪಸ್ಥಿತರಿದ್ದರು.

ಸಾಮಾಜಿಕ ಹೊಣೆಗಾರಿಕೆ ಸಮಿತಿಗೆ ಕಿರ್ಲೋಸ್ಕರ್ ನೇಮಕ

ವಿಜಯಸಾಕ್ಷಿ ಸುದ್ದಿ ಬೆಂಗಳೂರು
ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರೋಗ್ಯ ವ್ಯವಸ್ಥೆ ಉನ್ನತೀಕರಣ ಯೋಜನೆಗಳಿಗೆ ಮತ್ತು ಆರೋಗ್ಯ ಸೇವೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಿಎಸ್ ಆರ್ ನಿಧಿಯನ್ನು ಕ್ರೋಢೀಕರಿಸಲು ಸರ್ಕಾರ ರಚಿಸಿರುವ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಸಮಿತಿಗೆ ಗೀತಾಂಜಲಿ ಕಿರ್ಲೋಸ್ಕರ್ ಅವರನ್ನು ನೇಮಕ ಮಾಡಿರುವ ಆದೇಶವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಸ್ತಾಂತರ ಮಾಡಿದರು. ಆರೋಗ್ಯ ಸಚಿವ ಡಾ: ಕೆ.ಸುಧಾಕರ್ ಉಪಸ್ಥಿತರಿದ್ದರು.

ಪೊಲೀಸರ ದಾಳಿ, ಸ್ಫೋಟಕ ವಸ್ತುಗಳ ಜಪ್ತಿ; ಆರೋಪಿ ಶಿವರಡ್ಡಿ ಸುಬ್ಬಾರಡ್ಡಿ ತಮ್ಮನೇನೆ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕಲ್ಲಿನ ಕ್ವಾರಿಯಲ್ಲಿ ಸ್ಫೋಟಕ ವಸ್ತುಗಳನ್ನು ಉಪಯೋಗಿಸಿ ಗಣಿಗಾರಿಕೆ ನಡೆಸುವ ಉದ್ದೇಶದಿಂದ ಅಕ್ರಮವಾಗಿ ಬೈಕ್ ಮೇಲೆ ಸಾಗಾಟ ಮಾಡುತ್ತಿದ್ದ ಮೂಲತಃ ಆಂದ್ರಪ್ರದೇಶದ ಮೋಕ್ಸಗುಂಡಮ್ಮನ ಶಿವರಡ್ಡಿ ಸುಬ್ಬಾರಡ್ಡಿ ತಮ್ಮನೇನೆ ಎಂಬಾತನನ್ನು ಶಿರಹಟ್ಟಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಖಚಿತ ಮಾಹಿತಿ ಪಡೆದ ಶಿರಹಟ್ಟಿ ಸಿಪಿಐ ವಿಕಾಸ ಪಿ ಲಮಾಣಿ ಹಾಗೂ ಸಿಬ್ವಂದಿಗಳು ದಾಳಿ ಮಾಡಿ ಸುಮಾರು 23 ಸಾವಿರ ರೂ, ಮೌಲ್ಯದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

102 ಜಿಲಿಟಿನ್ ಕಡ್ಡಿ, 21 ಎಲೆಕ್ಟ್ರಾನಿಕ್ ಡಿಟೊನೇಟರ್, ಬೈಕ್ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ.

ಚಿಕ್ಕೋಡಿಯ ವಿನಯ ಟ್ರೇಡರ್ಸ್ ನಲ್ಲಿ ಈ ಸ್ಫೋಟಕಗಳನ್ನು ಖರೀದಿ ಮಾಡಲಾಗಿದ್ದು, ವಿನಯ ಟ್ರೇಡರ್ಸ್ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೋವಿಡ್-19 ನಿಯಂತ್ರಣ, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ; ಡಿಸಿ ಸುಂದರೇಶ್ ಬಾಬು

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಕೋವಿಡ್-19 ಪ್ರಕರಣಗಳು ಎರಡನೇ ಅಲೆಯ ಭೀತಿಯನ್ನು ಸೃಷ್ಟಿಸುತ್ತಿದ್ದು, ಇದನ್ನು ತಡೆಗಟ್ಟಲು ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದ್ದಾರೆ.

ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಹಾಗೂ ಕೋವಿಡ್ ಪರೀಕ್ಷೆಗೆ ಒಳಪಡುವುದು ಇತ್ಯಾದಿಗಳ ಕುರಿತು ಆರೋಗ್ಯ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು.

ವಿವಿಧ ಸಮಾರಂಭಗಳು ಹಾಗೂ ಆಚರಣೆಯ ಸಂದರ್ಭದಲ್ಲಿ ಹೆಚ್ಚು ಸಾರ್ವಜನಿಕರು ಗುಂಪು ಸೇರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಅಪಾಯವು ಹೆಚ್ಚಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಈ ಕೆಳಕಂಡಂತೆ ಸೂಚಿಸಿದ ಸಂಖ್ಯೆಯನ್ನು ಮೀರದಂತೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಆಚರಣೆಗಳು, ಸಮಾರಂಭಗಳು ಜರುಗುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ವ್ಯಕ್ತಿಗೆ 3.25ಸ್ಕ್ವೇರ್ ಮೀಟರ್ ಮಾನದಂಡವನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಮದುವೆಗೆ ತೆರೆದ ಪ್ರದೇಶಗಳಲ್ಲಿ 500 ಜನರು ಹಾಗೂ ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 200 ಜನರು ಮೀರದಂತೆ ಪ್ರವೇಶಕ್ಕೆ ಅವಕಾಶವಿದೆ.

ಜನ್ಮದಿನ ಹಾಗೂ ಇತರ ಆಚರಣೆಗಳಲ್ಲಿ ತೆರೆದ ಪ್ರದೇಶಗಳಲ್ಲಿ 100 ಜನರಿಗೆ ಹಾಗೂ ಸಭಾಂಗಣ , ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 50 ಜನರು ಮೀರದಂತೆ ಅವಕಾಶವಿದೆ.

ನಿಧನ, ಶವಸಂಸ್ಕಾರಗಳಿಗೆ ತೆರೆದ ಪ್ರದೇಶಗಳಲಿ 100 ಜನರು ಹಾಗೂ ಸಭಾಂಗಣಗಳು, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 50 ಜನರಿಗೆ ಅವಕಾಶವಿದೆ. ಇತರೆ ಸಮಾರಂಭಗಳಿಗೆ ಹಾಲ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ 100 ಜನರು ಮೀರದಂತೆ, ಧಾರ್ಮಿಕ ಆಚರಣೆಗಳು, ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 500 ಜನರು ಮೀರದಂತೆ, ರಾಜಕೀಯ ಆಚರಣೆಗಳು, ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 500 ಜನರು ಮೀರದಂತೆ ಅವಕಾಶವಿರುತ್ತದೆ.

ಕೋವಿಡ್-19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ವಿಧಿಸಿದ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆತ್ತವರೊಂದಿಗೆ ಕಿರಿಕ್; ಚಿಕ್ಕಪ್ಪನನ್ನೇ ಕೊಲೆಗೈದ ಮಗ

ವಿಜಯಸಾಕ್ಷಿ ಸುದ್ದಿ, ಗದಗ

ಹೆತ್ತ ತಾಯಿ-ತಂದೆಗೆ ಅವಾಚ್ಯವಾಗಿ ನಿಂದಿಸುತ್ತಿದ್ದ ಚಿಕ್ಕಪ್ಪನನ್ನೇ ಯುವಕನೋರ್ವ ಚಾಕುವಿನಿಂದ ಇರಿದು ಕೊಲೆಗೈದ ದುರ್ಘಟನೆ ಗದಗನ ಬೆಟಗೇರಿಯಲ್ಲಿ ನಡೆದಿದೆ.

ಬೆಟಗೇರಿಯ ಕುರಹಟ್ಟಿ ಪೇಟೆಯ ಮೈಲಾರ ಲಿಂಗಪ್ಪನ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.

ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಮಂಜುನಾಥ್ ಗದುಗಿನ ಕೊಲೆಯಾದ ದುರ್ಧೈವಿ.

ಪ್ರವೀಣ ಗದುಗಿನ ಎಂಬಾತನೇ ಕೊಲೆಗೈದ ಆರೋಪಿ ಎನ್ನಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಯಾದ ಮಂಜುನಾಥ್, ಆರೋಪಿ ಪ್ರವೀಣ್ ಇಬ್ಬರು ಸಂಬಂಧಿಕರಾಗಿದ್ದು, ವರೆಸೆಯಲ್ಲಿ ಕಾಕಾ,ಮಗ ಎನ್ನಲಾಗಿದೆ.

ಆದರೆ ಇಬ್ಬರು ಬಾರ್ ಬೆಂಡಿಂಗ್ ಕೆಲಸ ಮಾಡುತಿದ್ದರು. ಕೊಲೆಯಾದ ಮಂಜುನಾಥ್, ಆರೋಪಿ ಪ್ರವೀಣನ ತಂದೆ ತಾಯಿಯ ಜೊತೆಗೆ ಆಗಾಗ ಜಗಳ ಮಾಡುತ್ತಿದ್ದನಂತೆ, ಹೀಗಾಗಿ ಇದರಿಂದ ಚಿಕ್ಕಪ್ಪನ ವರ್ತನೆಗೆ ಬೇಸತ್ತು ಕೊಲೆ ಮಾಡಿದ್ದಾನೆ ಅಂತ ಪೊಲೀಸ ಮೂಲಗಳಿಂದ ತಿಳಿದುಬಂದಿದೆ.

ಸುದ್ದಿ ತಿಳಿದ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಕುರ್ಕಿ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ‌ಪರಿಶೀಲನೆ ನಡೆಸಿ ಆರೋಪಿ ಪ್ರವೀಣನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್; ಪ್ರಥಮ ಹಂತದಲ್ಲಿ ರೂ.50.00 ಕೋಟಿಗಳ ವೆಚ್ಚದಲ್ಲಿ ಅತೀ ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ.

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಹೊಸ ರೂಪ ಕೊಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಿತು. ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಶ್ರೀ ಸಿ.ಪಿ. ಯೋಗೇಶ್ವರ, ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟಶ್ರೀನಿವಾಸ ಪೂಜಾರಿ, ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ್, ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ ಸೇರಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಎಲ್.ಕೆ. ಅತೀಕ್, ಮಹೇಂದ್ರಜೈನ್, ಪ್ರವಾಸ್ಓದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಪಂಕಜ್ ಕುಮಾರ್ ಪಾಂಡೇ, ಜಂಗಲ್ ಲಾಡ್ಜಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕುಮಾರ್ ಪುಷ್ಕರ್, ಕೊಪ್ಪಳ ಜಿಲ್ಲಾಧಿಕಾರಿ ಶ್ರೀ ವಿಕಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಅಂಜನಾದ್ರಿ ಪರ್ವತಕ್ಕೆ ರಾಮಾಯಣದಲ್ಲಿ ವಿಶೇಷ ಸ್ಥಾನವಿದೆ. ಶ್ರೀರಾಮನ ಭಕ್ತನಾಗಿರುವ ಆಂಜನೇಯನನ್ನು ಶ್ರೀರಾಮ ಹಾಗೂ ಲಕ್ಷ್ಮಣರು ಅಂಜನಾದ್ರಿ ಬೆಟ್ಟದಲ್ಲಿ ಬೇಟಿಯಾಗಿದ್ದರಂತೆ. ಅಂಜನಾ ದೇವಿಯು ಆಂಜನೇಯನಿಗೆ ಇಲ್ಲಿ ಜನ್ಮ ನೀಡಿದ್ದರಿಂದ, ಈ ಬೆಟ್ಟಕ್ಕೆ ಅಂಜನಾದ್ರಿ ಪರ್ವತ ಎಂದು ಹೆಸರಿಡಲಾಗಿದೆ.
ತುಂಗಾಭದ್ರಾ ನದಿಯ ದಡದಲ್ಲಿರುವ ಈ ಬೆಟ್ಟಕ್ಕೆ ದಕ್ಷಿಣ ಭಾರತದ ಕಾಶಿ ಎಂದು ಪ್ರಸಿದ್ದಿ ಹೊಂದಿದೆ. ಈ ಐತಿಹಾಸಿಕ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪ್ರಥಮ ಹಂತದಲ್ಲಿ ರೂ.50.00 ಕೋಟಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಭೆ ನಿರ್ಧಾರ ಕೈಗೊಂಡಿತು. ಮುಂದಿನ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಮಂಡಿಸಿ ಅನುಮೋದನೆ ಪಡೆಯಲು ಸಹ ನಿರ್ಧರಿಸಲಾಯಿತು.
ಏಪ್ರಿಲ್ 16 ರಂದು ಸಚಿವರುಗಳಾದ ಶ್ರೀ ಕೆ.ಎಸ್. ಈಶ್ವರಪ್ಪ, ಶ್ರೀ ಸಿ.ಪಿ. ಯೋಗೇಶ್ವರ, ಶ್ರೀ ಕೋಟಶ್ರೀನಿವಾಸ ಪೂಜಾರಿ, ಶ್ರೀ ಬಿ.ಸಿ. ಪಾಟೀಲ್ ಹಾಗೂ ಅರಣ್ಯ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ ರವರು ಅಂಜನಾದ್ರಿ ಬೆಟ್ಟಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ನಂತರ, ಅಂಜನಾದ್ರಿ ಬೆಟ್ಟಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಲು ನಿರ್ಧರಿಸಲಾಯಿತು.
ಪ್ರಥಮ ಹಂತದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ಕುಡಿಯುವ ನೀರು, ಶೌಚಾಲಯ, ಸ್ನಾನದ ಗೃಹ ಮತ್ತು ರಸ್ತೆ ನಿರ್ಮಾಣ ಮಾಡುವುದು. ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಅಳವಡಿಸುವುದು. ಬೆಟ್ಟದ ಕೆಳಭಾಗದಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು.
ಬೆಟ್ಟದ ಮುಂಭಾಗದಲ್ಲಿರುವ ಹುಲಿಗಿ ಗಂಗಾವತಿ ರಾಜ್ಯ ಹೆದ್ದಾರಿಯನ್ನು 1 ಕಿ.ಮೀ. ಅಗಲೀಕರಣ ಮಾಡುವುದು. ಬೀದಿ ದೀಪಗಳನ್ನು ಅಳವಡಿಸುವುದು. ಸೇವಾ ಹಾಗೂ ಟಿಕೆಟ್ ಕೌಂಟರ್ ನಿರ್ಮಾಣ ಮಾಡುವುದು. ಪ್ರವಾಸಿಗರಿಗೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆ ಮಾಡುವುದು. ಮೊಬೈಲ್ ಸಂಪರ್ಕಕ್ಕಾಗಿ ಮೊಬೈಲ್ ಟವರ್ ಅಳವಡಿಸುವುದು.
ಮಾನ್ಯ ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ರೂ.50.00ಕೋಟಿಗಳನ್ನು ಒದಗಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರು ತಮ್ಮ ಇಲಾಖೆಯಲ್ಲಿ ಮೀಸಲಿಟ್ಟಿರುವ ರೂ.268.00ಲಕ್ಷಗಳನ್ನು ಹಾಗೂ ಮುಜರಾಯಿ ಇಲಾಖೆಯಲ್ಲಿರುವ ರೂ.140.00ಲಕ್ಷ, ಪ್ರವಾಸೋದ್ಯಮ ಇಲಾಖೆಯಿಂದ ರೂ.50.00ಲಕ್ಷ ಮತ್ತು ಕೇಂದ್ರ ಕೈಗಾರಿಕೆ ಇಲಾಖೆಯ ಹ್ಯಾಂಡಿ ಕ್ರ್ಯಾಫ್ಟ್ ನಿಂದ ರೂ.10.00ಕೋಟಿಗಳನ್ನು ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಹಣವನ್ನು ಮೀಸಲಿರಿಸಲಾಗಿದೆ. ಒಟ್ಟು ರೂ.50.00 ಕೋಟಿ 18.00ಲಕ್ಷ ಗಳಲ್ಲಿ ಪ್ರಥಮ ಹಂತದ ಕಾಮಗಾರಿಗಳನ್ನು ಮಾಡಲು ಸಭೆ ನಿರ್ಧರಿಸಿತು.
ಎರಡನೇ ಹಂತದಲ್ಲಿ ಪ್ರವಾಸಿಗರು ತಂಗಲು ಯಾತ್ರಿ ನಿವಾಸ ಹೋಟೇಲ್ ಹಾಗೂ ರೆಸಾರ್ಟ್ ಗಳನ್ನು ನಿರ್ಮಾಣ ಮಾಡುವುದು. ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸುವುದು. ತುಂಗಭದ್ರಾ ನದಿಯಲ್ಲಿ ವಾಟರ್ ಸ್ಪೋರ್ಟ್ಸ್ ಬೆಟ್ಟಕ್ಕೆ ರೋಪ್ವೇ ನಿರ್ಮಾಣ ಮಾಡುವುದು. ಋಷಿಮುಖ ಪರ್ವತದಲ್ಲಿರುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೇದ, ವಾಸ್ತು, ಜ್ಯೋತಿಷ್ಯ, ಗೃಹ ನಕ್ಷತ್ರ, ಭೂಕಂಪನ, ಸಮುದ್ರ ಕಂಪನ ಹಾಗೂ ಶರೀರ ಆವಯವಗಳ ಪಾಠಗಳ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯ ಪ್ರಾರಂಭಿಸುವುದು. ಸಾಣಾಪುರ ಕೆರೆ ಹತ್ತಿರ ನೀರನ ವಿಭಿನ್ನ ವಿನ್ಯಾಸಗಳನ್ನು ಮಾಡುವ ಲೇಸರ್ ಶೋ ಮಾಡುವುದು. ಒಟ್ಟಾರೆ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲಾ ಅನುಕೂಲಗಳನ್ನು ಕಲ್ಪಿಸಿಕೊಡಲು ನಿರ್ಧರಿಸಲಾಯಿತು.
ದೇಶದ 4 ಐತಿಹಾಸಿಕ ಹಾಗೂ ಪುರಾತನ ಸರೋವರಗಳಲ್ಲಿ ಪಂಪ ಸರೋವರ ಸಹ ಒಂದು ಆಗಿದ್ದು, ಸಮಗ್ರವಾಗಿ ಅಭಿವೃದ್ಧಿ ಮಾಡುವುದು. 101 ಬಾವಿಗಳ ಪುನಶ್ಚೇತನ ಸೇರಿದಂತೆ ಅಂಜನಾದ್ರಿ ಬೆಟ್ಟ ಮತ್ತು ಆನೆಗುಂದಿ ಪ್ರದೇಶದ 100 ಎಕರೆ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಮಾಡಲು ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅಂಜನಾದ್ರಿ ಬೆಟ್ಟದಲ್ಲಿ ಒಂದು ಗೋಶಾಲೆಯಿದ್ದು, ಸಾವಿರ ದನಕರುಗಳಿವೆ ಇದರ ಜೊತೆಗೆ ಇನ್ನೊಂದು ಗೋಶಾಲೆ ತೆರೆಯಲು ಸಭೆ ನಿರ್ಧರಿಸಿತು.
ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ದಿನ ಮೂರು ಸಾವಿರಕ್ಕೂ ಹೆಚ್ಚು ಹಾಗೂ ಮಂಗಳವಾರ ಮತ್ತು ಶನಿವಾರ ಇಪ್ಪತ್ತು ಸಾವಿರಕ್ಕೂ ಹೆಚ್ಚು ಹನುಮಂತನ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ.

ಮದರ್ ಥೇರೆಸಾ ತಂಡಕ್ಕೆ ಅವ್ವ ಕಪ್; ಅವ್ವಂದಿರಿಂದಲೇ ಕಪ್, ಪದಕ ವಿತರಣೆಯ‌ ಹೃದಯಸ್ಪರ್ಶಿ ಸಮಾರೋಪ

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಎರಡು ದಿನಗಳಿಂದ ನಡೆದ ಮಾತೃಶ್ರೀ (ಅವ್ವ) ಕಪ್ ಮದರ್ ಥೇರೆಸಾ ತಂಡದ ಮಡಿಲು ಸೇರಿತು. ರವಿವಾರ ಮದರ್ ಥೇರೆಸಾ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಮದರ್ ಥೇರೆಸಾ ತಂಡದ ಆಟಗಾರರ ಸಾಂಘಿಕ ಯತ್ನಕ್ಕೆ ಜಯ ಒಲಿದು ಬಂತು.

ಶನಿವಾರ ಆರಂಭಗೊಂಡ ಮೊದಲ ಪಂದ್ಯದಲ್ಲಿ ಡೀಸಿ ವಿಕಾಸ್ ಕಿಶೋರ್ ಸುರಳ್ಕರ್ ನೇತೃತ್ವದ ಜೀಜಾಮಾತಾ ತಂಡ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು.
ಭಾನುವಾರ ಶ್ರೀನಿವಾಸ ಗೋಂಧಳಿ ನಾಯಕತ್ವದ ದಾನ ಚಿಂತಾಮಣಿ ಅತ್ತಿಮಬ್ವೆ ತಂಡದ ಜೊತೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೀಸಿ ಟೀಮ್ ನಿಗದಿತ 10 ಓವರ್‌ಗಳಲ್ಲಿ 86 ರನ್‌ಗಳನ್ನು ಕಲೆ ಹಾಕುವಲ್ಲಿ ಶಕ್ತವಾಯಿತು. 87 ರನ್‌ಗಳ ಮೊತ್ತ ಬೆನ್ನು ಹತ್ತಿದ ಅತ್ತಿಮಬ್ಬೆ ತಂಡ 8.5 ಓವರ್‌ಗಳಲ್ಲಿ ಗುರಿ ಸಾಧಿಸಿ ಫೈನಲ್ ಪ್ರವೇಶಿಸಿತು. ಅದೃಷ್ಟದ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದ ಡೀಸಿ ಟೀಮ್, ಈ ಪಂದ್ಯದ ಸೋಲಿನೊಂದಿಗೆ ಟೂರ್ನಿಯಿಂದ ಹೊರ ಬಿತ್ತು.

ಕ್ವಾರ್ಟರ್ ಫೈನಲ್‌ನಲ್ಲಿ ಜಿಪಂ ತಂಡದೊಂದಿಗೆ ಮುಖಾಮುಖಿಯಾಗಿದ್ದ ಮದರ್ ಥೇರೆಸಾ ತಂಡ ಟಾಸ್‌ನಲ್ಲಿ ಸೋತು ಫಿಲ್ಡಿಂಗ್‌ಗೆ ಇಳಿದಿತ್ತು. ನಿಗದಿತ 10 ಓವರ್‌ಗಳಲ್ಲಿ ಜಿಪಂ ತಂಡ 94 ರನ್‌ಗಳನ್ನು ಕಲೆ ಹಾಕಿತು. 95 ರನ್‌ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಮದರ್ ಥೇರೆಸಾ ತಂಡ 8.4 ಓವರ್‌ಗಳಲ್ಲಿ ಗುರಿ ಸಾಧಿಸಿತು. ಈ ಗೆಲುವಿನೊಂದಿಗೆ ಮದರ್ ಥೇರೆಸಾ ತಂಡ, ಅದೃಷ್ಟದ ಮೂಲಕ ಫೈನಲ್ ಪ್ರವೇಶಿಸಿತು.

12 ಓವರ್‌ಗಳ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ ಮುಖಾಮುಖಿಯಾದ ಕೊಪ್ಪಳ ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಲಬ್‌ನ ಅತ್ತಿಮಬ್ಬೆ ಹಾಗೂ ಥೇರೆಸಾ ತಂಡಗಳು ನೋಡಗರಿಗೆ ರೋಮಾಂಚನದ ರಸದೌತಣ‌ ನೀಡಿದವು. ಫೈನಲ್ ಪಂದ್ಯದ ಟಾಸ್ ಗೆದ್ದ ಅತ್ತಿಮಬ್ಬೆ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಥೇರೆಸಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
ಓಪನರ್ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದ ಸೂರಿ (ಗುಂಡಾ) ಇನ್ನಿಂಗ್ಸ್‌ನ ಕೊನೆಯ ಬೌಲ್‌ತನಕ ಸ್ಕ್ರೀಜ್‌ಗೆ ನೆಲಕಚ್ಚಿ‌ ನಿಂತು ಆಕರ್ಷಕ ಅರ್ಧಶತಕ ಪೂರೈಸಿ ಅಜೇಯರಾಗಿ ಉಳಿದು 79 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ನಿಗದಿತ 12 ಓವರ್‌ಗಳಲ್ಲಿ 155 ರನ್‌ಗಳನ್ನು ಪೇರಿಸಿದ ಥೇರೆಸಾ ತಂಡ ಅತ್ತಿಮಬ್ಬೆ ತಂಡಕ್ಕೆ 156 ರನ್ ಗಳಿಸುವ ಸವಾಲು ಎಸೆಯಿತು.

156 ರನ್‌ಗಳ ಬೃಹತ್ ಮೊತ್ತದ ಬೆನ್ನು ಬಿದ್ದ ಅತ್ತಿಮಬ್ಬೆ ತಂಡ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಬ್ಯಾಟ್ಸ್‌ಮನ್ ಉಮಾಕಾಂತ ಬಿರುಸಿನ 48 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. 4ನೇ ಓವರ್‌‌‌ವೊಂದರಲ್ಲೇ 32 ರನ್ ಗಳಿಸಿದ ಅತ್ತಿಮಬ್ಬೆ ತಂಡದತ್ತ ಗೆಲುವು ಒಲಿಯಿತು ಎಂದುಕೊಳ್ಳುವಷ್ಟರಲ್ಲಿ ಥೇರೆಸಾ ತಂಡದ ಬೌಲರ್‌ಗಳ ದಾಳಿಗೆ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. ನಿಗದಿತ 12 ಓವರ್‌ಗಳಲ್ಲಿ ಅತ್ತಿಮಬ್ಬೆ ತಂಡ 108 ರನ್‌ಗಳನ್ನು ಮಾತ್ರ ಕಲೆ ಹಾಕುವಲ್ಲಿ ಶಕ್ತವಾಗಿ ಫೈನಲ್ ಪಂದ್ಯ ಕೈಚೆಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿತು.
ಶಿವು, ಕಿರಣ್ ಬರ್ತಡೆ ಬಾಯ್ಸ್..
ಎರಡು ದಿನಗಳ ಕಾಲ ನಡೆದ ಅದ್ಭುತ ಟೂರ್ನಮೆಂಟ್‌ನಲ್ಲಿ ಸಂಭ್ರಮ, ಸಂತಸಕ್ಕೆ ಪಾರವೇ‌ ಇರಲಿಲ್ಲ. ಕ್ಲಬ್‌ನ ಆಟಗಾರರಾದ ಒನಕೆ ಓಬವ್ವ ತಂಡದ ಶಿವಕುಮಾರ್ ನಾಲ್ವಾಡ್ ಹಾಗೂ ಝಾನ್ಸಿರಾಣಿ ಲಕ್ಷ್ಮೀಬಾಯಿ ತಂಡದ ಕಿರಣ್ ಅವರ ಜನ್ಮದಿನವನ್ನು ಟೂರ್ನಮೆಂಟ್‌ನಲ್ಲಿ ಆಚರಿಸಿದ್ದು ಅವಿಸ್ಮರಣೀಯ ಸಂಗತಿಗಳಲ್ಲಿ ಒಂದಾಗಿ ದಾಖಲಾಯಿತು.

ಸಮಾರೋಪದಲ್ಲಿ ಭಾವುಕರಾದ ಆಟಗಾರರು
ಟೂರ್ನಮೆಂಟ್‌ನ ಫೈನಲ್ ಪಂದ್ಯದಲ್ಲಿ ಅವ್ವ ಟ್ರೋಫಿ ಗೆದ್ದ ಮದರ್ ಥೇರೆಸಾ ತಂಡ ಹಾಗೂ ರನ್ನರ್ ಅಪ್ ಸ್ಥಾನ ಗಳಿಸಿದ ಅತ್ತಿಮಬ್ಬೆ ತಂಡಕ್ಕೆ ಟ್ರೋಫಿ ನೀಡಲು ಆಟಗಾರರ ಅವ್ವಂದಿರೇ ಸಾಕ್ಷಿಯಾದದ್ದು ಎಲ್ಲ ಆಟಗಾರರು ಕೆಲ ಕ್ಷಣ ಭಾವುಕರಾದರು.

ಮುಖಂಡ ಗಿರೀಶ್ ಮುಂದಡಾ ಅವರ ಮಾತೃಶ್ರೀ ಶೋಭಾ ಮುಂದಡಾ ಮಾತನಾಡಿ, ತಾಯಿ-ಮಕ್ಕಳ ಬಾಂಧವ್ಯ, ಮಕ್ಕಳ ಬಗ್ಗೆ ತಾಯಿಗಿರುವ ಮಮತೆ, ಕಾಳಜಿ ಕುರಿತು ತಿಳಿಸಿದ ಅವರು, ಮಕ್ಕಳಿಂದ ತಾಯಿ ಬಯಸೋದು ಒಂದೆರಡು ಹಿತನುಡಿಗಳನ್ನೇ ಹೊರತು ಹಣ, ಬಂಗಾರವನ್ನಲ್ಲ. ಯಾಕೆಂದರೆ ತಾಯಿಗೆ ತನ್ನ ಮಕ್ಕಳೇ ಬಂಗಾರ. ಇಲ್ಲಿರುವ ಎಲ್ಲರೂ ಬಂಗಾರವೇ ಎಂದಾಗ ಆಟಗಾರರ ಕಣ್ಣಂಚಲಿ ನೀರು ಜಿನುಗಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬಸವರಾಜ ಕರುಗಲ್ ಅವರ ಮಾತೃಶ್ರೀ ಗಿರಿಜಮ್ಮ ಕರುಗಲ್ ಹಾಎ ಮುಂಜುನಾಥ ಅಜ್ಜನವರ ಮಾತೃಶ್ರೀ ರತ್ನಮ್ಮ ವಿಜೇತ ಆಟಗಾರರಿಗೆ ಪದಕ ಹಾಗೂ ಟ್ರೋಫಿ ವಿತರಿಸಿದರು. ಪೂನಂ ಮುಂದಡಾ ಹಾಗೂ ಶೋಭಾ ಮುಂದಡಾ ವಿಜೇತರಿಗೆ ಕಪ್ ಹಾಗೂ ರನ್ನರ್ ಅಪ್ ಪಾರಿತೋಷಕ ನೀಡಲು ಸಹಕರಿಸಿದರು.

ಟ್ರೋಫಿ ಎತ್ತಿ ಹಿಡಿಯುವ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದ ಮದರ್ ಥೇರೆಸಾ ತಂಡ, ಅಂತಿಮವಾಗಿ ಕಪ್ ಗೆದ್ದಾಗ ತಂಡದ ಆಟಗಾರರ ಸಂಭ್ರಮಕ್ಕೆ ಪಾರವಢ ಇರಲಿಲ್ಲ. ತಂಡದ ಆಟಗಾರ ಈರಣ್ಣ ಸಂಭ್ರಮಿಸಿದ ಪರಿ ನೆರೆದಿದ್ದ ಎಲ್ಲ ಆಟಗಾರರನ್ನು ರಂಜಿಸಿತು.

ಒಂದೇ ಮನೆಯಲ್ಲಿ 35 ಹಾವಿನ ಮರಿಗಳು ಪತ್ತೆ!

0

ವಿಜಯಸಾಕ್ಷಿ ಸುದ್ದಿ, ನರಗುಂದ

ಮನೆಯೊಂದರಲ್ಲಿ 35 ಕ್ಕೂ ಹೆಚ್ಚು ಹಾವಿನ ಮರಿಗಳು ಪತ್ತೆಯಾಗಿರುವ ಘಟನೆ ಪಟ್ಟಣದ ವಿದ್ಯಾಗಿರಿಯಲ್ಲಿ ನಡೆದಿದೆ.

ಕಮಲಾಕ್ಷಿ ಕುಲಕರ್ಣಿ ಎಂಬುವವರಿಗೆ ಸೇರಿದ ಮನೆಯಲ್ಲಿ ಅಪರೂಪದ ಹಾವಿನ ಮರಿಗಳು ಪತ್ತೆಯಾಗಿದ್ದು, ಹಾವಿನ ಮರಿಗಳನ್ನು ಕಂಡು ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.

35 ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಉರಗ ತಜ್ಞ ಬಿ.ಆರ್ ಸುರೇಬಾನ ಅವರಿಂದ ರಕ್ಷಿಸಲಾಗಿದೆ. ಹಾವಿನ ಮರಿಗಳನ್ನು ರಕ್ಷಿಸಿದ ನಂತರ ಸುರೇಬಾನ್ ಅವರು ಕಾಡಿಗೆ ಬಿಟ್ಟು ಬಂದಿದ್ದಾರೆ.

error: Content is protected !!