ಕೋವಿಡ್ ಲಸಿಕೆ ವಿತರಣೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಕೋವಿಡ್ ಚುಚ್ಚುಮದ್ದು ಲಸಿಕೆ ವಿತರಣೆ ಶುರುವಾಗಿದೆ.
ಈಗಾಗಲೇ ಜಿಲ್ಲೆಗೆ 5500 ಡೋಸ್ ಲಸಿಕೆ ಆಗಮಿಸಿದ್ದು, ನಗರದ ದುಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಲಸಿಕೆ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
7 ಕೇಂದ್ರಗಳಲ್ಲಿ ತಲಾ 100 ಜನರಂತೆ, 700 ಜನರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚುಚ್ಚುಮದ್ದು ವೀಕ್ಷಣಾ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ವಿಜಯಸಾಕ್ಷಿ ಸುದ್ದಿ, ಹಾಸನ: ಗುಂಡಿಕ್ಕಿ ಕೆಇಬಿ ನೌಕರನ ಹತ್ಯೆ ಮಾಡಿರುವ ದಾರುಣ ಘಟನೆ ಹಾಸನ ತಾಲೂಕಿನ ಹೂವಿನಹಳ್ಳಿ ಕಾವಲು ಬಳಿ ನಡೆದಿದೆ.
ಅರೇಕಲ್ಲು ಹೊಸಳ್ಳಿ ಗ್ರಾಮದ ಸಂತೋಷ್ (36) ಕೊಲೆಯಾದ ವ್ಯಕ್ತಿಯಾಗಿದ್ದು, ಗ್ರಾಮದ ಬಳಿಯ ಹೊಲದಲ್ಲಿ ಶವ ಪತ್ತೆಯಾಗಿದೆ. ಕಳೆದ ರಾತ್ರಿ ಪಾರ್ಟಿ ಮುಗಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಶವದ ಪಕ್ಕದಲ್ಲಿ ಬಿದ್ದಿರುವ ಮದ್ಯದ ಬಾಟಲ್ ಹಾಗೂ ಊಟದ ಪ್ಯಾಕೆಟ್ ಗಳಿಂದ ಪೊಲೀಸರು ಈ ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆಗ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಕ್ರಾತಿ ಹಬ್ಬದ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಕ್ಯಾಂಪ್ ಗ್ರಾಮದಲ್ಲಿ ನಡೆಯುತ್ತಿದ್ದ ಕೋಳಿ ಪಂದ್ಯಾವಳಿಗೆ ಗಂಗಾವತಿ ಪೊಲೀಸ್ರು ಮಿಂಚಿನ ದಾಳಿ ಮಾಡಿದ್ದಾರೆ.
ತಾಲ್ಲೂಕಿನ ಹೆಬ್ಬಾಳ ಕ್ಯಾಂಪ್, ಆಚಾರನರಸಾಪುರ, ಮರಳಿ, ಗಂಗಾವತಿ, ಕಾರಟಗಿ, ಶ್ರೀರಾಮ ನಗರದ ಜನರು ಭಾಗವಹಿಸಿದ್ದರು ಎನ್ನಲಾಗಿದೆ.
ನಿಷೇಧಿತ ಕೋಳಿ ಪಂದ್ಯಾವಳಿ ಭಾರಿ ಪ್ರಮಾಣದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ. ಹೆಬ್ಬಾಳ ಕ್ಯಾಂಪ್ ಸೀಮೆಯ ಬಳಿ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ ಸಿಪಿಐ ಉದಯರವಿ ಮತ್ತು ತಂಡ ದಾಳಿ ಮಾಡಿ ಜಮೀನಿನ ಮಾಲೀಕನ್ನು ಸೇರಿ ಒಂಬತ್ತು ಜನರನ್ನು ಬಂಧಿಸಿ, ಏಳು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಹುಂಜದ ಜೂಜಾಟದ ಹಣವನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ, ಜೂಜೂಕೋರರು ಕೋಳಿ ಪಂದ್ಯವನ್ನು ರಾಜಾರೋಷವಾಗಿ ನಡೆಸಿದ್ದು ಹುಂಜಗಳಿಗೆ ಸಾಕಷ್ಟು ತಯಾರಿ ಮಾಡಿ ಬಲಿಷ್ಠಗೊಳಿಸಿ, ಹುಂಜಗಳ ಕಾಲಿಗೆ ಸಣ್ಣ ರೇಜರ್ ಬ್ಲೇಡ್ ಕಟ್ಟಿ ಪಂದ್ಯ ನಡೆಸಲಾಗುತ್ತಿತ್ತು. ಇದಕ್ಕೆ ಸಾವಿರಾರು ರೂಪಾಯಿ ಜೂಜು ಕಟ್ಟಿ ಪಂದ್ಯ ನಡೆಸಲಾಗುತ್ತಿತ್ತು. ಪಂದ್ಯದ ಹುಂಜಕ್ಕೆ ಭಾರಿ ಬೇಡಿಕೆ ಇದ್ದು, ಬಲಿಷ್ಠ ಹಾಗು ಅನುಭವಿ ಹುಂಜಕ್ಕೆ ಲಕ್ಷ ಲಕ್ಷ ಬೆಲೆ ಕಟ್ಟಲಾಗುತ್ತದೆ
ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಗದಗ ಜಿಲ್ಲೆಯ 7 ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಚುನಾವಣಾ ಕ್ಷೇತ್ರಗಳಿಗೆ ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ಮೊದಲನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿಯನ್ನು ನಿರ್ಧರಿಸುವ ಸಲುವಾಗಿ ಸಭೆಯನ್ನು ನಿಗದಿಪಡಿಸಲಾಗಿದೆ.
ಸಭೆಯನ್ನು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜರುಗಿಸಲಾಗುವುದು.
ಜನೆವರಿ 24 ರಂದು ಬೆ. 11 ಗಂಟೆಗೆ ಶಿರಹಟ್ಟಿಯ ಡಿ. ದೇವರಾಜ ಅರಸ್ ಸಭಾಭವನದಲ್ಲಿ ಹಾಗೂ ಅದೇ ದಿನ ಮ. 3 ಗಂಟೆಗೆ ಲಕ್ಷ್ಮೇಶ್ವರದ ಶ್ರೀ ಜಗದ್ಗುರು ವೀರಗಂಗಾಧರ ರಂಭಾಪುರಿ ಸಮುದಾಯ ಭವನದಲ್ಲಿ ಸಭೆ ನಡೆಯಲಿದೆ. ಜನೆವರಿ 25 ರಂದು ಬೆ. 11.30 ಗಂಟೆಗೆ ಗದಗನ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಹಾಗೂ ಅದೇ ದಿನ ಸಂಜೆ 4 ಗಂಟೆಗೆ ಮುಂಡರಗಿಯ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಸಭೆ ಜರುಗುವುದು. ಜನೆವರಿ 27 ರಂದು ಬೆ. 9 ಗಂಟೆಗೆ ನರಗುಂದದ ಆರೂಡ ಜ್ಯೋತಿ ಭವನದಲ್ಲಿ ಅದೇ ದಿನ ಮ. 12 ಗಂಟೆಗೆ ರೋಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮತ್ತು ಸಂಜೆ 4 ಗಂಟೆಗೆ ಗಜೇಂದ್ರಗಡದ ಸಿದ್ಧಲಿಂಗೇಶ್ವರ ಚಿತ್ರಮಂದಿರದಲ್ಲಿ ಸಭೆ ಏರ್ಪಡಿಸಲಾಗಿದೆ.
ಗದಗ ಜಿಲ್ಲೆಯ ಎಲ್ಲಾ 7 ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ ಚುನಾಯಿತ ಎಲ್ಲ ಸದಸ್ಯರಿಗೆ ಮೇಲೆ ತಿಳಿಸಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ನಿರ್ಧರಿಸುವ ಸಭೆ ತಿಳುವಳಿಕೆ ಪತ್ರ ನೀಡಲಾಗಿದೆ. ಸದರಿ ತಿಳುವಳಿಕೆ ಪತ್ರ ತಲುಪದೇ ಇದ್ದಲ್ಲಿ ಈ ಪ್ರಕಟಣೆಯನ್ನೇ ತಿಳುವಳಿಕೆ ಪತ್ರವೆಂದು ಭಾವಿಸಿ ಸಭೆಗೆ ಹಾಜರಾಗಲು ತಿಳಿಸಿದೆ.
ಸಭೆಗೆ ಹಾಜರಾಗುವಾಗ ಆಯ್ಕೆಯಾದ ಪ್ರಮಾಣ ಪತ್ರದ ನಕಲು ಪತ್ರಿಯನ್ನು ಹಾಜರುಪಡಿಸಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗುವ ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಗದಗ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಸಾಕ್ಷಿ ಸುದ್ದಿ, ವಿಜಯಪುರ: ತನಗೆ ನೀಡಿದ್ದ ವಿಶೇಷ ಭದ್ರೆತಯನ್ನು ಈಗ ಹಿಂಪಡೆಯಲಾಗಿದ್ದು, ಈ ಮೂಲಕ ಸಿಎಂ ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.
ಈ ಕುರಿತು ಸಿಎಂ ಅವರಿಗೆ ಪತ್ರ ಬರೆದಿರುವ ಯತ್ನಾಳ್, ತನಗೆ ನೀಡಲಾಗಿದ್ದ ಪೊಲೀಸ್ ಭದ್ರತೆ ದಿಢೀರ ಹಿಂದಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ, ಅನಾಹುತವಾದರೆ ಆಡಳಿತ ನಡೆಸುತ್ತಿರುವ ತಾವೇ ಹೊಣೆ ಎಂದು ಸಿಎಂ, ಗೃಹ ಸಚಿವ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಯತ್ನಾಳ ಪತ್ರ ಬರೆದಿದ್ದಾರೆ.
ನಾನು ಪ್ರಖರ ಹಿಂದೂಪರವಾದ ಮತ್ತು ಜನಪರವಾದ ಹೋರಾಟ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ಈ ಹಿಂದೆ ಅನೇಕ ಬಾರಿ ಕೆಲವು ಹಿಂದೂ ವಿರೋಧಿ, ಮತಾಂಧ ಶಕ್ತಿಗಳು ದಾಳಿಯ ಮುನ್ಸೂಚನೆ ನೀಡಿವೆ. ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆಯ ಆದೇಶದ ಮೇರೆಗೆ ಈವರೆಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ, ನಾನು ಸಿಎಂ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ಸಿಎಂ ಎಂದಿನಂತೆ ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಪತ್ರದಲ್ಲಿ ಯತ್ನಾಳ್ ಆರೋಪ ಮಾಡಿದ್ದಾರೆ.
ಪೊಲೀಸ್ ಭದ್ರತೆಯನ್ನು ದಿಢೀರಾಗಿ ಹಿಂಪಡೆದಿದ್ದೀರಿ. ಇದರ ಹಿಂದಿರುವ ದುರುದ್ದೇಶ ಗೊತ್ತು. ಇದು ತಮ್ಮ ಹಳೆಯ ಚಾಳಿ, ವಿಕೃತ ಮನಸ್ಸನ್ನು ಇದು ಬಿಂಬಿಸುತ್ತದೆ. ಇದರಿಂದ ಹಿಂದೂಪರ, ಜನಪರ, ಅನ್ಯಾಯದ ವಿರುದ್ಧ ನನ್ನ ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಸರಕಾರವನ್ನು ನಂಬಿ ನಾನು ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟ ನಿರಂತರರವಾಗಿರುತ್ತದೆ. ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ, ಅನಾಹುತವಾದರೆ ಆಡಳಿತ ನಡೆಸುತ್ತಿರುವ ತಾವೇ ಹೊಣೆ ಎಂದು ಯತ್ನಾಳ್ ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಸಮೀಪದ ಶಿರುಂಜ ಗ್ರಾಮದ ಮನೆಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಮಹಿಳೆಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಗ್ರಾಮದ ಮಲ್ಲಮ್ಮ ನಿಂಗಪ್ಪ ಹುಡೇದ(35) ಮೃತ ಗೃಹಿಣಿ ಎಂದು ಗುರುತಿಸಲಾಗಿದೆ.
ಪತ್ನಿ ಸಾವಿನ ಬಳಿಕ ಪತಿ ನಿಂಗಪ್ಪ ನಾಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಮುಳಗುಂದ ಠಾಣಾ ಪಿಎಸ್‌ಐ ಸಚಿನ್ ಅಲಮೇಲಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈ ಘಟನೆ ಕುರಿತು ಸ್ಪಷ್ಟ ಪಡಿಸಬೇಕಿದೆ.
ವಿಜಯಸಾಕ್ಷಿ ಸುದ್ದಿ, ಯಾದಗಿರಿ: ಚಿನ್ನಕ್ಕಾಗಿ ಉದ್ಯಮಿ ಮಗನನ್ನು ಹತ್ಯೆ ಮಾಡಿದ ಪಾಪಿಗಳು ಕೊನೆಗೂ ಅಂದರ್ ಆಗಿದ್ದಾರೆ. ಕೊಲೆ ನಡೆದ ಒಂದೇ ದಿನದಲ್ಲಿ ಆರೋಪಿಗಳನ್ನು ಜಿಲ್ಲೆಯ ಹುಣಸಗಿ ಪೊಲೀಸರು ಬಂಧಿಸಿದ್ದಾರೆ.
ಜನವರಿ 13 ರಂದು, ಜಿಲ್ಲೆಯ ಹುಣಸಗಿ ಪಟ್ಟಣದ ರಾಜಸ್ಥಾನ ಮೂಲದ ಚಿನ್ನದ ವ್ಯಾಪಾರಿ ಜಗದೀಶ್ ಎಂಬುವರ 22 ವರ್ಷದ ಪುತ್ರ ನರೇಂದ್ರನನ್ನು ಆತನ ರೂಮ್ ನಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ನರೇಂದ್ರನ ಜೊತೆಗಿದ್ದ ಕಿಶೋರ್ ಎಂಬಾತ ಈ ಕೊಲೆಯ ಸೂತ್ರಧಾರಿ.
ಮಹಾರಾಷ್ಟ್ರ ಮೂಲದ ಅಜಿತ್ ಎಂಬಾತನ ಸಹಾಯದಿಂದ ತನ್ನ ಯಜಮಾನನನ್ನೇ ಹತ್ಯೆ ಮಾಡಿದ್ದ ಕಿಶೋರ್, ರೂಮ್ ನಲ್ಲಿದ್ದ 1 ಕೆಜಿ 570 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು 1 ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಪಾರಾರಿಯಾಗಿದ್ದ.
ನರೇಂದ್ರನನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳು ಕಿಶೋರ್ ನನ್ನು ಅಪರಿಸಿದ್ದಾರೆಂಬಂತೆ ಬಿಂಬಿಸಲಾಗಿತ್ತು. ಹಾಡ ಹಗಲೇ ನಡೆದಿದ್ದ ಈ ಕೊಲೆ ಇಡೀ ಯಾದಗಿರಿ ಜನರನ್ನು ತಲ್ಲಣಗೊಳ್ಳಿಸಿತ್ತು.
ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಯಾದಗಿರಿ ಪೊಲೀಸರು ಎಸ್ಪಿ ಋಷಿಕೇಶ್ ಸೋನಾವಣೆ ನೇತೃತ್ವದಲ್ಲಿ, ಸುರಪುರ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ, ಸಿಪಿಐ ದೌಲತ್ ಕುರಿ ಮತ್ತು ಪಿಎಸ್ಐಗಳಾದ ಬಾಪುಗೌಡ, ಬಾಷಾಮಿಯಾ, ಮತ್ತು ಸಿಬ್ಬಂದಿ ಕೊಲೆ ನಡೆದ ಒಂದೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ, ಬಂಧಿತರಿಂದ 1 ಕೆಜಿ 570 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು 1 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಯಾರು ಬ್ಲಾಕ್ ಮೇಲ್ ಮಾಡಿಲ್ಲ, ಬ್ಲಾಕ್‌ಮೇಲ್ ಗೆ ಮಂತ್ರಿ ಸ್ಥಾನ ಕೊಡಲ್ಲ. ಸಿಡಿ, ಸಿಡಿ ಅಂತಿದ್ದಾರೆ. ಸಿಡಿ ವಿಚಾರ ನನಗೆ ಗೊತ್ತಿಲ್ಲ ಎಂದು ನೂತನ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಈ ಕುರಿತು ಮಾತನಾಡಿದ ಅವರು, ಸಿಡಿ ವಿಚಾರ ವಿಶ್ವನಾಥ್ ಗೆ ಗೊತ್ತಿದೆಯೋ ಏನೋ ನನಗೆ ಗೊತ್ತಿಲ್ಲ. ಅವರನ್ನ ಸಚಿವರನ್ನಾಗಿ ಮಾಡಲು ಕಾನೂನಿನ ತೊಡಕುಗಳಿವೆ. ಮುಂದಿನ ದಿನಗಳಲ್ಲಿ ಅವರಿಗೂ ಮಂತ್ರಿಸ್ಥಾನ ಸಿಗಬಹುದು ಎಂದು ತಿಳಿಸಿದರು.
ಶಾಸಕ ಮುನಿರತ್ನದು ತೊಂದರೆ ಇದೆ. ಅವರ ಮೇಲೋ ಕೆಲವೊಂದು ಪ್ರಕರಣಗಳಿವೆ. ಮುಂದಿನ ದಿನಗಳಲ್ಲಿ ಮುನಿರತ್ನಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂದ ಅವರು, ಯೋಗೇಶ್ವರ ಮೇಲೆ ಏನು ಕೇಸ್ ಗಳಿವೆ ಎಂಬುವುದನ್ನು ಸಾಬೀತು ಮಾಡಬೇಕು ಎಂದು ಸಚಿವರು ಒತ್ತಾಯಿಸಿದರು.
ಸಿದ್ದರಾಮಯ್ಯ ಎಸ್ಟಿ ಹೋರಾಟಕ್ಕೆ ಯಾಕೆ ಬರುತ್ತಿಲ್ಲ ಎಂಬುದನ್ನ ಅವರನ್ನೇ ಕೇಳಬೇಕು. ನಾವೆಲ್ಲಾ ಸಂಪರ್ಕ ಮಾಡಿದ್ದೇವೆ. ಈಶ್ವರಪ್ಪನವರು, ಸ್ವಾಮೀಜಿ ಸೇರಿದಂತೆ ಹಲವರು ಸಿದ್ದರಾಮಯ್ಯರನ್ನ ಭೇಟಿ ಆಗಿ ಪಾದಯಾತ್ರೆಗೆ ಬರಬೇಕು ಅಂತಾ ಆಹ್ವಾನ ಕೊಟ್ಟಿದ್ದೆವು ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಎರಡು ದಿನ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು, 16 ರಂದು ಬೆಂಗಳೂರಿಗೆ ಬರಲಿದ್ದು, ಅಲ್ಲಿ ಇಲಾಖೆ ಪರಿಶೀಲನೆ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಭದ್ರಾವತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳಿ ಬೆಂಗಳೂರಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಮಾಹಿತಿ ತಿಳಿಸಿದ ಅವರು, ಜ.17 ರಂದು ಬೆಳಗ್ಗೆ 10.30ಕ್ಕೆ ಅಮಿತ್ ಶಾ ಅವರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರಲಿದ್ದು, ಬೆಳಗ್ಗೆ ಬಾಗಲಕೋಟೆಯಲ್ಲಿ ಸಕ್ಕರೆ ಕಾರ್ಖಾನೆ ಉದ್ಘಾಟನೆ ಮಾಡಿ ಮರಳಿ ಬೆಳಗಾವಿಗೆ ಬರಲಿದ್ದಾರೆ. ಅಂದು ಮಧ್ಯಾಹ್ನ ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ಬೆಳಗಾವಿಯಲ್ಲಿಯೇ ಅಮಿತ್ ಶಾ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ ಎಂದರು.
ಬಳಿಕ ದಿ.ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಜ.17 ರ ಸಂಜೆ ಅಧಿಕಾರಿಗಳ ಸಭೆ ನಡೆಸಿ ಮರಳಿ ದೆಹಲಿಗೆ ತೆರಳಲಿದ್ದಾರೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಪಕ್ಷದಲ್ಲಿ ಭಿನ್ನಮತ, ಅಸಮಾಧಾನ ಸಹಜವಾಗಿಯೇ ಇರುತ್ತವೆ. ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅವರಿಗೆ ಬೇಸರ ಆಗಿರುತ್ತದೆ. ಹಾಗಾಗಿ ಬೇಸರದಿಂದ ಅಸಮಾಧಾನ ಹೊರ ಹಾಕುತ್ತಾರೆ. ಪಕ್ಷದ ಕುಟುಂಬದದಲ್ಲಿರುವ ಅಸಮಾಧಾನವಾಗಿದ್ದು, ಅವೆಲ್ಲವೂ ಮುಂದಿನ ದಿನಗಳಲ್ಲಿ ಸರಿ ಹೋಗಲಿವೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಕ್ಷದಲ್ಲಿ ನೋವು ತೊಡಿಕೊಳ್ಳಲು ಮುಕ್ತ ಅವಕಾಶವಿದೆ. ನಮ್ಮ ನಾಯಕರ ಎದುರು ನೋವು ತೋಡಿಕೊಳ್ಳದೇ ಮತ್ಯಾರ ಮುಂದೆ ಹೇಳಿಕೊಳ್ಳಬೇಕು. ಅಸಮಾಧಾನಿತ ಶಾಸಕರು ನನ್ನ ಸಂಪರ್ಕಕ್ಕೆ ಬಂದಿಲ್ಲ. ನೋಡೋಣಾ, ಇನ್ನೂ ಸ್ವಲ್ಪ ದಿನಗಳ ಬಳಿಕ ಮಾತನಾಡೋಣ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪಗೆ ಸಿಡಿ ಬ್ಲ್ಯಾಕ್ ಮೇಲ್ ಕುರಿತು ಯಾವ ಸಿಡಿನೂ ಇಲ್ಲಾ ಗಿಡಿನೂ ಇಲ್ಲ ಎಂದು ಒಂದೇ ವಾಕ್ಯದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಉತ್ತರಿಸಿದರು.