Home Blog Page 3085

ದುರ್ಗಾ ಬೆಟ್ಟದಲ್ಲಿ ಸೆರೆಯಾದ ಮತ್ತೊಂದು ಚಿರತೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಗಂಗಾವತಿ ತಾಲೂಕಿನ ದುರ್ಗಾ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬೆಳಗ್ಗೆ ಮೂರು ಗಂಟೆಯ ಸುಮಾರಿಗೆ ಚಿರತೆಯೊಂದು ಬಿದ್ದಿದೆ.
ಬೆಳಗ್ಗೆ ದೇಗುಲದ ಸಿಬ್ಬಂದಿ ಯುವಕರು ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಗಮನಿಸಿದ್ದಾರೆ.

ಬಳಿಕ ದೇಗುಲದ ಪ್ರಧಾನ ಅರ್ಚಕ ಬ್ರಹ್ಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ದೇಗುಲದ ಸಿಬ್ಬಂದಿ‌ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದೇ ದುರ್ಗಾ ಬೆಟ್ಟದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಚಿರತೆಯೊಂದು ಸೆರೆಯಾಗಿತ್ತು. ಇದೀಗ ಎರಡನೇ‌ ಚಿರತೆ ಇದಾಗಿದ್ದು, ಬೆಟ್ಟದಲ್ಲಿ ಸೆರೆಯಾಗಿದೆ. ಇನ್ನು ಎಷ್ಟು ಚಿರತೆಗಳಿವೆ ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. ಆದರೆ, ಜನರಲ್ಲಿ ಚಿರತೆಗಳ ಬಗ್ಗೆ ಆತಂಕ ಮಾತ್ರ ದೂರವಾಗಿಲ್ಲ.

ಸೋತ ಅಭ್ಯರ್ಥಿ ಮೇಲೆ ನೂತನ ಸದಸ್ಯನಿಂದ ಮಾರಾಣಾಂತಿಕ ಹಲ್ಲೆ!

ವಿಜಯಸಾಕ್ಷಿ ಸುದ್ದಿ, ತುಮಕೂರು: ಗ್ರಾ.ಪಂನ ನೂತನ ಸದಸ್ಯ ಸೋತ ಅಭ್ಯರ್ಥಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಗುಂಡಗಲ್ಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಾಸಿ ನರಸಪ್ಪ ಎಂಬಾತನ ಮೇಲೆ ಹಲ್ಲೆಯಾಗಿದ್ದು, ನೂತನ ಸದಸ್ಯ ಲಕ್ಷ್ಮೀನಾರಾಯಣ ಹಲ್ಲೆ ಮಾಡಿರುವ ಆರೋಪ ಹೊತ್ತಿದ್ದಾರೆ. ಚುನಾವಣೆಗೂ ಮುನ್ನ ಲಕ್ಷ್ಮೀನಾರಾಯಣಗೆ, ನರಸಪ್ಪ ಹಣವನ್ನು ಸಾಲವಾಗಿ ನೀಡಿದ್ದ.

ಚುನಾವಣೆಯಲ್ಲಿ ಸೋತ ನಂತರ ತನ್ನ ಹಣ ಮರಳಿ ನೀಡುವಂತೆ ಕೇಳಿದ್ದಕ್ಕಾಗಿ ಲಕ್ಷ್ಮೀನಾರಾಯಣ ತನ್ನ ಸ್ನೇಹಿತರಾದ ಗಂಗಪ್ಪ, ನರೇಂದ್ರ ಬಾಬು, ಗಂಗಾಧರಪ್ಪ, ನಾರಾಯಣಪ್ಪ ಅವರೊಂದಿಗೆ ಸೇರಿ ಲಾಂಗು, ಮಚ್ಚು ಹಾಗೂ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದಾನೆ. ಈ ಕುರಿತು ಕೊಡಿಗೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇಶದ ಬಡವರಿಗೆ ಕಾಂಗ್ರೆಸ್ ಸಿಲಿಂಡರ್ ತಲುಪಿಸಿಲ್ಲ, ಮನೆ ಕಟ್ಟಿಸಿಲ್ಲ, ಆಯುಷ್ಮಾನ್ ಮಾಡಲಿಲ್ಲ; ಏಕೆಂದರೆ, ಅವರಿಗೆ ಬಡವರನ್ನು ಹೊಡೆದೋಡಿಸುವ ಉದ್ದೇಶವಿತ್ತು: ಅಮಿತ್ ಶಾ ಕಿಡಿ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಕೊರೊನಾ ಸಂಕಷ್ಟವನ್ನು ಮೋದಿ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಪ್ರಪಂಚದಲ್ಲಿಯೇ ಅತಿ ಕಡಿಮೆ ಜನರು ಮರಣ ಹೊಂದಿದ್ದಾರೆ. ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಜನರು ಕಾಂಗ್ರೆಸ್ ನಾಯಕರ ಮಾತು ಕೇಳಬಾರದು.
ಕೊರೊನಾ ಲಸಿಕೆ ಪಡೆದು ಆದಷ್ಟು ಬೇಗ ಕೊರೊನಾ ಮುಕ್ತ ದೇಶ ಮಾಡೋಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜನಸೇವಕ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರು ಇತಿಹಾಸ ಸೃಷ್ಟಿಸಿದ್ದಾರೆ. ಆ ಕಾರಣಕ್ಕೆ ನಾನು ಬೆಳಗಾವಿಗೆ ಬಂದಿದ್ದೇನೆ.
ಅತಿ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರನ್ನು ಚುನಾಯಿಸಿದ್ದಾರೆ.
ನರೇಂದ್ರ ಮೋದಿಯ ನಾಯಕತ್ವಕ್ಕೆ ಜನರು ಸಾಥ್ ನೀಡಿದ್ದಾರೆ ಎಂದು ಅಭಿಪ್ರಾಯ ಪಟ್ಟ ಅವರು, ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸಿದರು.

ಪಂಡಿತ ನೆಹರೂವಿನಿಂದ ಹಿಡಿದು ಮನಮೋಹನ್ ಸಿಂಗ್ ವರೆಗೂ ಕಾಶ್ಮೀರ ವಶ ಮಾಡಿಕೊಳ್ಳಲು ಆಗಿಲ್ಲ. ತ್ರಿವಳಿ ತಲಾಕ್ ನಿಷೇಧಿಸಿದೆ. ಸರ್ಜಿಕಲ್ ಸ್ಟ್ರೈಕ್ ಏರ್ ಸ್ಟ್ರೈಕ್ ಮಾಡಿ ಪಾಕಿಸ್ತಾನದ ವೈರಿಗಳನ್ನು ಹೊಡೆದು ಉರುಳಿಸಿದ್ದೇವೆ.ಇನ್ನು ಕೆಲವೇ ತಿಂಗಳಲ್ಲಿ ಶ್ರೀರಾಮ ಮಂದಿರ ನಿರ್ಮಿಸುತ್ತೇವೆ ಎಂದು ಶಾ ತಿಳಿಸಿದರು.

ದೇಶದ ಅಭಿವೃದ್ಧಿಗಾಗಿ ಮೋದಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಗ್ರಾಮೀಣ ಪ್ರದೇಶದ ಮನೆ ಮನೆಗೆ ಸಿಲಿಂಡರ್ ತಲುಪಿಸುವ ಕೆಲಸ ಮೋದಿ ಸರ್ಕಾರ ಮಾಡಿದೆ ಎಂದ ಅವರು, ನಾನು ಕಾಂಗ್ರೆಸ್ ನವರಿಗೆ ಕೇಳುತ್ತೇನೆ ‘ಯಾಕೆ ನೀವು ಸಿಲಿಂಡರ್ ತಲುಪಿಸಿಲ್ಲ, ಮನೆ ಕಟ್ಟಿಸಿಲ್ಲ, ಆಯುಷ್ಮಾನ್ ಮಾಡಲಿಲ್ಲ. ಏಕೆಂದರೆ, ಅವರಿಗೆ ದೇಶದಲ್ಲಿ ಬಡತನ ಹೋಗಲಾಡಿಸುವ ಉದ್ದೇಶ ಇರಲಿಲ್ಲ. ಬಡವರನ್ನು ಹೊಡೆದೋಡಿಸುವ ಉದ್ದೇಶವಿತ್ತು ಎಂದು ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಎಂಟಿಎಂ ಕಳ್ಳತನಕ್ಕೆ ವಿಫಲ ಯತ್ನ: ಸಿಸಿ ಕ್ಯಾಮೆರಾಗೆ ಸ್ಟಿಕರ್ ಹಚ್ಚಿದರೂ ಫಲಿಸಲಿಲ್ಲ ಕಳ್ಳರ ಯತ್ನ!

  • ವಿಜಯಸಾಕ್ಷಿ ಸುದ್ದಿ, ಗದಗ

ಖದೀಮರು ಎಟಿಎಂ ಹೊರಗಿನ ಸಿಸಿ ಕ್ಯಾಮೆರಾಕ್ಕೆ ಸ್ಟಿಕರ್ ಹಚ್ಚಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ
ನಗರದ ಹಾತಲಗೇರಿ ರಸ್ತೆಯಲ್ಲಿರುವ ಎಸ್ ಬಿ ಐ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ.

ಇದನ್ನೂ ಒದಿ ಕಳ್ಳತನ ತಡೆಯಲು ಹೋದ ಗೂರ್ಖಾ ಥಳಿಸಿ ಪರಾರಿಯಾದ ದರೋಡೆಕೊರರು

ಗ್ಯಾಸ್ ಮಷಿನ್ ‌ನಿಂದ ಎಟಿಎಂ ಯಂತ್ರ ಕೊರೆಯಲೆತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಎಲ್ಲವೂ ಸುಭದ್ರವಾಗಿದೆ. ಬೆಳಿಗ್ಗೆ ಗ್ರಾಹಕರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಗರದ ಬಡಾವಣೆ ಪೊಲೀಸರು
ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಿ ಬೆರಳಿನ ಗುರುತು ತೆಗೆದುಕೊಂಡು ಹೋಗಿದ್ದಾರೆ ಎಂದು ಎಸ್ ಬಿಐ ಬ್ಯಾಂಕ್ ನೌಕರ ಆಕಾಶ್ ಎಂಬುವವರು ತಿಳಿಸಿದ್ದಾರೆ.

ದನ್ನೂ ಓದಿ ಮದುವೆಯಾಗುತ್ತೇನೆಂದು ನಂಬಿಸಿ ಮೋಸವೆಸಗಿದ ಯುವಕ: ಪೊಲೀಸ್ ಠಾಣೆಯ ಮೆಟ್ಟಿಲೇರಿದ ಯುವತಿ

ಈ ಕುರಿತು ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಖೋಟಾನೋಟು ಸಾಗಿಸುತ್ತಿದ್ದ ವ್ಯಕ್ತಿ ಬಂಧನ; ಹೊಸ ನೋಟುಗಳೂ ಆದವು ಖೋಟಾ!

0

ವಿಜಯಸಾಕ್ಷಿ ಸುದ್ದಿ, ಕಲಬುರಗಿ: 500, 200, 100 ಮುಖಬೆಲೆಯ ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಸೇಡಂನಲ್ಲಿ ನಡೆದಿದೆ. ಈ ಎಲ್ಲಾ ನೋಟುಗಳು ಹೊಸ ರೂಪದ ನೋಟುಗಳೆನ್ನುವುದು ಗಮನಾರ್ಹವಾಗಿದೆ.

ಖೋಟಾ ನೋಟು ಸಾಗಿಸುತ್ತಿದ್ದ
ಚಿಂಚೋಳಿ ರಸ್ತೆಯ ಆಶ್ರಯ ಕಾಲೋನಿ ನಿವಾಸಿ ಅಲ್ಲಾವುದ್ದೀನ್ ಚಿನ್ನುಸಾಬ ಮಳಗಿ ಎಂಬಾತನನ್ನು ಖೋಟಾ ನೋಟು ಸಹಿತ ಪೊಲೀಸರು ಬಂಧಿಸಿದ್ದಾರೆ. ಡಿಸಿಐಬಿ ಪಿಎಸ್ಐ ಪರಶುರಾಮ ವನಂಜಕರ ನೇತೃತ್ವದ ತಂಡ ದಾಳಿ ನಡೆಸಿ, ಅಲ್ಲಾವುದ್ದೀನ್ ನನ್ನು ಬಂಧಿಸಿದ್ದು, ಆತನಿಂದ
500, 200 ಮತ್ತು 100 ರೂಪಾಯಿ ಮುಖಬೆಲೆಯ 4.22 ಲಕ್ಷ ನಕಲಿ ನೋಟುಗಳು, ಒಂದು ಬೈಕ್ ಹಾಗೂ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.

ಖೋಟಾನೋಟುಗಳನ್ನು ಎಲ್ಲಿಗೆ ಕೊಂಡೊಯ್ಯಲು ಯತ್ನಿಸುತ್ತಿದ್ದ, ಎಲ್ಲಿಂದ‌ ತಂದಿದ್ದ, ಎಲ್ಲಿ ಪ್ರಿಂಟ್ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆ ಮುಂದುವರೆಸಿರುವುದಾಗಿ ಪಿಎಸ್ಐ ನಾನಾಗೌಡ ಅವರು ತಿಳಿಸಿದ್ದಾರೆ.

ಅಲ್ಲಾವುದ್ದೀನ್, ಕೆಲ ಪ್ರಮುಖ ವ್ಯಕ್ತಿಗಳ ಮುಖಾಂತರ ನೋಟು ಚಲಾವಣೆ ಮಾಡ್ತಿದ್ದ, ಕಮಿಷನ್ ಆಧಾರದ ಮೇಲೆ ಹಣ ಸಾಗಾಟ ನಡೆಸುತ್ತಿದ್ದ ಎನ್ನಲಾಗಿದೆ. ಕಳೆದ‌ ಕೆಲ‌ ವರ್ಷಗಳ ಹಿಂದೆಯೂ ಸಹ ಖೋಟಾನೋಟು ಚಲಾವಣೆ ಪ್ರಕರಣದಲ್ಲಿ ಅಲ್ಲಾವುದ್ದೀನ್ ಬಂಧಿತನಾಗಿದ್ದ ಎಂದು ತಿಳಿದು ಬಂದಿದೆ.

ಮದುವೆಯಾಗುತ್ತೇನೆಂದು ನಂಬಿಸಿ ಮೋಸವೆಸಗಿದ ಯುವಕ: ಪೊಲೀಸ್ ಠಾಣೆಯ ಮೆಟ್ಟಿಲೇರಿದ ಯುವತಿ

ವಿಜಯಸಾಕ್ಷಿ ಸುದ್ದಿ, ಗದಗ

ಹುಡುಗನೊಬ್ಬ ಮದುವೆಯಾಗುತ್ತೇನೆ ಎಂದು ಪಕ್ಕದ ಮನೆಯ ಅನ್ಯ ಜಾತಿಯ ಹುಡುಗಿಯನ್ನು ನಂಬಿಸಿ ಮೋಸ ಮಾಡಿರುವ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಉಮೇಶ್ ಶೇಖಪ್ಪ ಹಳ್ಳಿ ಎಂಬ ವ್ಯಕ್ತಿ ಅದೇ ಗ್ರಾಮದ ಯುವತಿಯ ಎಂಬ ಯುವತಿಗೆ ಮೋಸವೆಸಗಿದ್ದಾನೆ.

ಯುವತಿ ಹುಬ್ಬಳ್ಳಿಯಲ್ಲಿ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದು, ಅಲ್ಲಿಯೇ ವಾಸವಾಗಿದ್ದಳು. ಬಿಡುವಿದ್ದಾಗ ಆಗಾಗ್ಗೆ ಲಕ್ಕುಂಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ತಾಯಿ, ಅಜ್ಜಿ, ತಂಗಿ ನೋಡಲು ಮನೆಗೆ ಬರುತ್ತಿದ್ದಳು.

ಯುವತಿ ಊರಿಗೆ ಬಂದಾಗಲೆಲ್ಲಾ ಸಲುಗೆಯಿಂದ ಮಾತನಾಡಿಸುತ್ತಿದ್ದ ಉಮೇಶ್ ಕಳೆದ ನಾಲ್ಕೈದು ವರ್ಷಗಳಿಂದ ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಿನ್ನನ್ನೇ ಮದುವೆಯಾಗುತ್ತೇನೆ ಎಂಬ ಬಣ್ಣ ಬಣ್ಣದ ಮಾತುಗಳನ್ನಾಡಿ ನಂಬಿಸಿ ಉಮೇಶ್ ಬಲವಂತವಾಗಿ ಅತ್ಯಾಚಾರವೆಸಗಿದ್ದಾ‌ನೆ.

ಯುವತಿಯ ಜನ್ಮದಿನದಂದು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ, ಕರೆದಾಗಲೆಲ್ಲಾ ಮಂಚಕ್ಕೆ ಬರಬೇಕು ಎಂದು ಎಚ್ಚರಿಕೆ ನೀಡಿದ್ದಾನೆ. ಅಲ್ಲದೇ, ಬೇರೆ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಮಾಡಿರುವ ಯುವತಿ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಸಚಿವ ಮಾಧುಸ್ವಾಮಿ: ನೀರು ಕೇಳಿದ ಗ್ರಾಮಸ್ಥರಿಗೆ ಅಸಂವಿಧಾನಿಕ ಪದ ಬಳಕೆ

0

ವಿಜಯಸಾಕ್ಷಿ ಸುದ್ದಿ, ತುಮಕೂರು: ಸಚಿವ ಮಾಧುಸ್ವಾಮಿ ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಘಟನೆ ನಡೆದಿದೆ. ಗ್ರಾಮಸ್ಥರು ನೀರು ಕೇಳಿದ್ದಕ್ಕೆ ಅವಾಚ್ಯ ಶಬ್ದದಿಂದ ಸಚಿವರು ನಿಂದಿಸಿದ್ದಾರೆ.

ಜಿಲ್ಲೆಯ ಶಿರಾ ತಾಲೂಕಿನ ಗೋಪಾಲದೇವರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೀರು, ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ, ಗ್ರಾ.ಪಂ. ಚುನಾವಣೆಯನ್ನು ಈ ಗ್ರಾಮಸ್ಥರು ಬಹಿಷ್ಕರಿಸಿದ್ದರು.

ಇನ್ನು ಚುನಾವಣೆ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವ ಮಾಧುಸ್ವಾಮಿ, ಚುನಾವಣೆ ಬಹಿಷ್ಕರಿಸಿದ್ದಕ್ಕೆ ಕುಪಿತಗೊಂಡು ಆಕ್ರೋಷ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ, ಹೇಮಾವತಿ ನೀರು ಕೇಳಿದ ರೈತರಿಗೆ ತರಾಟೆ ತೆಗೆದುಕೊಂಡರು.

ಅಷ್ಟೇ ಅಲ್ಲದೇ ನೆರದಿದ್ದವರಿಗೆ ಅಸಂವಿಧಾನಿಕ ಪದಗಳ ಬಳಸಿ ಅವಾಜ್ ಹಾಕಿದರು. ಶೇಷೇನಹಳ್ಳಿ ಕೆರೆ,ದೊಡ್ಡ ಅಗ್ರಹಾರ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕು ಅಂತಾ ರೈತರು ಒತ್ತಾಯಿಸಿದ್ದರು. ಮಾಧುಸ್ವಾಮಿ ಅವರು ಬಾಯಿ ಹರಿಬಿಟ್ಟ ವಿಡಿಯೋ ಈಗ ವೈರಲ್ ಆಗಿದೆ.

ಕುಡಿದ ಮತ್ತಿನಲ್ಲಿ ಜೀವ ತೆಗೆದರಾ ತಹಸೀಲ್ದಾರ್?

0

ವಿಜಯಸಾಕ್ಷಿ ಸುದ್ದಿ, ತುಮಕೂರು: ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಯುವಕನ ಸಾವಿಗೆ ತಹಸೀಲ್ದಾರ್ ಒಬ್ಬರು ಕಾರಣರಾಗಿದ್ದಾರಾ ಎನ್ನುವ ಅನುಮಾನ ಬರುವಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮದ್ಯದ ಮತ್ತಿನಲ್ಲಿ ಹರೀಶ್(25) ಎಂಬ ಯುವಕನಿಗೆ ಪಾವಗಡ ತಹಸೀಲ್ದಾರ್ ನಾಗರಾಜು ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹರೀಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಪಾವಗಡ-ಮಡಕಶಿರಾ ರಸ್ತೆಯ ರಾಜವಂತಿ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಗಾಯಗೊಂಡಿದ್ದ ಹರೀಶ್ ನನ್ನು ಆಸ್ಪತ್ರೆಗೆ ಸೇರಿಸುವ ಸೌಜನ್ಯವನ್ನೂ ತಹಸೀಲ್ದಾರ್ ನಾಗರಾಜು ತೋರಿಸದೇ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದು ರಾಜವಂತಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ತಡೆಯಲು ಹೋದ ಗೂರ್ಖಾ ಥಳಿಸಿ ಪರಾರಿಯಾದ ದರೋಡೆಕೊರರು

ವಿಜಯಸಾಕ್ಷಿ ಸುದ್ದಿ, ನರಗುಂದ

ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಗೂರ್ಖಾ ಮೇಲೆ ನಾಲ್ಕೈದು ಜನರ ಇದ್ದ ತಂಡ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ
ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಬೆಳಗಿನ ಜಾವ ನಡೆದಿದೆ.

ನೇಪಾಳ ಮೂಲದ ನರ್ಸಿಂಗ್ ಹರೀಶಸಿಂಗ್ ಸೌಧ್ ಎಂಬ (60) ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ.

ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿ ಕಳ್ಳತನ ಮಾಡುವುದನ್ನು ತಡೆಯಲು ಮುಂದಾಗಿದ್ದಕ್ಕೆ ದುಷ್ಕರ್ಮಿಗಳು ರಾಡ್ ಸೇರಿದಂತೆ ಮಾರಾಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ತೀವ್ರ ಗಾಯಗೊಂಡ ಗೂರ್ಖಾನನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ನರ್ಸಿಂಗ್ ಹರೀಶಸಿಂಗ್ ಸೌದ್ ಕಳೆದ 40 ವರ್ಷಗಳಿಂದ ಪಟ್ಟಣದಲ್ಲಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ.

ಸುದ್ದಿ ತಿಳಿದ ವ್ಯಾಪಾರಸ್ಥರು ಮಾರುಕಟ್ಟೆ ಪ್ರದೇಶದಲ್ಲಿ ಜಮಾವಣೆಗೊಂಡಿದ್ದು, ಪದೇ ಪದೇ ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಕಳ್ಳರನ್ನು ಹಿಡಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಾವಿಯಲ್ಲಿ ಶವ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಕೊಲೆ ಮಾಡಿದ್ದವರೀಗ ಪೊಲೀಸರ ಅತಿಥಿ

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ: ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದ, ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸಿ ಶಿವಮ್ಮ ಎಂಬಾಕೆಯ ಶವ ಬಾವಿಯಲ್ಲಿ ಪತ್ತೆಯಾದ ಪ್ರಕರಣಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಂತೆ ಇಬ್ಬರು ಯುವಕರನ್ನು ಕೊಳ್ಳೇಗಾಲ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಶಿವು ಹಾಗೂ ರಾಜು ಬಂಧಿತ ಆರೋಪಿಗಳಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಮಧುವನಹಳ್ಳಿ ಗ್ರಾಮದ ಶಿವಮ್ಮ ನೆರೆ ಮನೆಯವರಾದ ನಂಜಮಣಿ ಎಂಬುವರಿಗೆ 1 ಲಕ್ಷ ರೂಪಾಯಿ ಸಾಲ ನೀಡಿದ್ದರು. ಕೊಟ್ಟಿದ್ದ ಸಾಲದ ಹಣವನ್ನು ವಾಪಸ್ ಕೇಳಿದಾಗ ನಂಜುಮಣಿ ಪದೇ ಪದೇ ನೆಪ ಹೇಳುತ್ತಿದ್ದರು ಎನ್ನಲಾಗಿದ್ದು, ಮೂರು ದಿನಗಳ ಹಿಂದೆ ಶಿವಮ್ಮ ಬಹಿರ್ದೆಸೆಗೆ ತೆರಳಿದ್ದ ವೇಳೆ ಕಾಲಿಗೆ ಕಲ್ಲು ಕಟ್ಟಿ ಗ್ರಾಮದ ಬಾವಿಗೆ ಬಿಸಾಡಿದ್ದಾರೆ ಎನ್ನಲಾಗಿದೆ.

ಶನಿವಾರ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾಲ ಪಡೆದಿದ್ದ ನಂಜಮಣಿಯ ಮಗ ಶಿವು ಹಾಗೂ ಸ್ನೇಹಿತ ರಾಜು ಎಂಬುವವರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಶಿವಮ್ಮ ಅವರ ಕುಟುಂಬಸ್ಥರೂ ದೂರು ನೀಡಿದ್ದರು.

ದೂರು ಬಂದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಗ್ರಾಮೀಣ ಪೊಲೀಸರು ಹತ್ಯೆ ಮಾಡಿರುವ ಶಂಕೆಯ ಮೇಲೆ ಶಿವು ಮತ್ತು ರಾಜು ಎಂಬ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!