ಸಮೀಪದ ಶಿರುಂಜ ಗ್ರಾಮದ ಮನೆಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಮಹಿಳೆಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಗ್ರಾಮದ ಮಲ್ಲಮ್ಮ ನಿಂಗಪ್ಪ ಹುಡೇದ(35) ಮೃತ ಗೃಹಿಣಿ ಎಂದು ಗುರುತಿಸಲಾಗಿದೆ.
ಪತ್ನಿ ಸಾವಿನ ಬಳಿಕ ಪತಿ ನಿಂಗಪ್ಪ ನಾಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಮುಳಗುಂದ ಠಾಣಾ ಪಿಎಸ್‌ಐ ಸಚಿನ್ ಅಲಮೇಲಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈ ಘಟನೆ ಕುರಿತು ಸ್ಪಷ್ಟ ಪಡಿಸಬೇಕಿದೆ.
ವಿಜಯಸಾಕ್ಷಿ ಸುದ್ದಿ, ಯಾದಗಿರಿ: ಚಿನ್ನಕ್ಕಾಗಿ ಉದ್ಯಮಿ ಮಗನನ್ನು ಹತ್ಯೆ ಮಾಡಿದ ಪಾಪಿಗಳು ಕೊನೆಗೂ ಅಂದರ್ ಆಗಿದ್ದಾರೆ. ಕೊಲೆ ನಡೆದ ಒಂದೇ ದಿನದಲ್ಲಿ ಆರೋಪಿಗಳನ್ನು ಜಿಲ್ಲೆಯ ಹುಣಸಗಿ ಪೊಲೀಸರು ಬಂಧಿಸಿದ್ದಾರೆ.
ಜನವರಿ 13 ರಂದು, ಜಿಲ್ಲೆಯ ಹುಣಸಗಿ ಪಟ್ಟಣದ ರಾಜಸ್ಥಾನ ಮೂಲದ ಚಿನ್ನದ ವ್ಯಾಪಾರಿ ಜಗದೀಶ್ ಎಂಬುವರ 22 ವರ್ಷದ ಪುತ್ರ ನರೇಂದ್ರನನ್ನು ಆತನ ರೂಮ್ ನಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ನರೇಂದ್ರನ ಜೊತೆಗಿದ್ದ ಕಿಶೋರ್ ಎಂಬಾತ ಈ ಕೊಲೆಯ ಸೂತ್ರಧಾರಿ.
ಮಹಾರಾಷ್ಟ್ರ ಮೂಲದ ಅಜಿತ್ ಎಂಬಾತನ ಸಹಾಯದಿಂದ ತನ್ನ ಯಜಮಾನನನ್ನೇ ಹತ್ಯೆ ಮಾಡಿದ್ದ ಕಿಶೋರ್, ರೂಮ್ ನಲ್ಲಿದ್ದ 1 ಕೆಜಿ 570 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು 1 ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಪಾರಾರಿಯಾಗಿದ್ದ.
ನರೇಂದ್ರನನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳು ಕಿಶೋರ್ ನನ್ನು ಅಪರಿಸಿದ್ದಾರೆಂಬಂತೆ ಬಿಂಬಿಸಲಾಗಿತ್ತು. ಹಾಡ ಹಗಲೇ ನಡೆದಿದ್ದ ಈ ಕೊಲೆ ಇಡೀ ಯಾದಗಿರಿ ಜನರನ್ನು ತಲ್ಲಣಗೊಳ್ಳಿಸಿತ್ತು.
ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಯಾದಗಿರಿ ಪೊಲೀಸರು ಎಸ್ಪಿ ಋಷಿಕೇಶ್ ಸೋನಾವಣೆ ನೇತೃತ್ವದಲ್ಲಿ, ಸುರಪುರ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ, ಸಿಪಿಐ ದೌಲತ್ ಕುರಿ ಮತ್ತು ಪಿಎಸ್ಐಗಳಾದ ಬಾಪುಗೌಡ, ಬಾಷಾಮಿಯಾ, ಮತ್ತು ಸಿಬ್ಬಂದಿ ಕೊಲೆ ನಡೆದ ಒಂದೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ, ಬಂಧಿತರಿಂದ 1 ಕೆಜಿ 570 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು 1 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಯಾರು ಬ್ಲಾಕ್ ಮೇಲ್ ಮಾಡಿಲ್ಲ, ಬ್ಲಾಕ್‌ಮೇಲ್ ಗೆ ಮಂತ್ರಿ ಸ್ಥಾನ ಕೊಡಲ್ಲ. ಸಿಡಿ, ಸಿಡಿ ಅಂತಿದ್ದಾರೆ. ಸಿಡಿ ವಿಚಾರ ನನಗೆ ಗೊತ್ತಿಲ್ಲ ಎಂದು ನೂತನ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಈ ಕುರಿತು ಮಾತನಾಡಿದ ಅವರು, ಸಿಡಿ ವಿಚಾರ ವಿಶ್ವನಾಥ್ ಗೆ ಗೊತ್ತಿದೆಯೋ ಏನೋ ನನಗೆ ಗೊತ್ತಿಲ್ಲ. ಅವರನ್ನ ಸಚಿವರನ್ನಾಗಿ ಮಾಡಲು ಕಾನೂನಿನ ತೊಡಕುಗಳಿವೆ. ಮುಂದಿನ ದಿನಗಳಲ್ಲಿ ಅವರಿಗೂ ಮಂತ್ರಿಸ್ಥಾನ ಸಿಗಬಹುದು ಎಂದು ತಿಳಿಸಿದರು.
ಶಾಸಕ ಮುನಿರತ್ನದು ತೊಂದರೆ ಇದೆ. ಅವರ ಮೇಲೋ ಕೆಲವೊಂದು ಪ್ರಕರಣಗಳಿವೆ. ಮುಂದಿನ ದಿನಗಳಲ್ಲಿ ಮುನಿರತ್ನಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂದ ಅವರು, ಯೋಗೇಶ್ವರ ಮೇಲೆ ಏನು ಕೇಸ್ ಗಳಿವೆ ಎಂಬುವುದನ್ನು ಸಾಬೀತು ಮಾಡಬೇಕು ಎಂದು ಸಚಿವರು ಒತ್ತಾಯಿಸಿದರು.
ಸಿದ್ದರಾಮಯ್ಯ ಎಸ್ಟಿ ಹೋರಾಟಕ್ಕೆ ಯಾಕೆ ಬರುತ್ತಿಲ್ಲ ಎಂಬುದನ್ನ ಅವರನ್ನೇ ಕೇಳಬೇಕು. ನಾವೆಲ್ಲಾ ಸಂಪರ್ಕ ಮಾಡಿದ್ದೇವೆ. ಈಶ್ವರಪ್ಪನವರು, ಸ್ವಾಮೀಜಿ ಸೇರಿದಂತೆ ಹಲವರು ಸಿದ್ದರಾಮಯ್ಯರನ್ನ ಭೇಟಿ ಆಗಿ ಪಾದಯಾತ್ರೆಗೆ ಬರಬೇಕು ಅಂತಾ ಆಹ್ವಾನ ಕೊಟ್ಟಿದ್ದೆವು ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಎರಡು ದಿನ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು, 16 ರಂದು ಬೆಂಗಳೂರಿಗೆ ಬರಲಿದ್ದು, ಅಲ್ಲಿ ಇಲಾಖೆ ಪರಿಶೀಲನೆ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಭದ್ರಾವತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳಿ ಬೆಂಗಳೂರಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಮಾಹಿತಿ ತಿಳಿಸಿದ ಅವರು, ಜ.17 ರಂದು ಬೆಳಗ್ಗೆ 10.30ಕ್ಕೆ ಅಮಿತ್ ಶಾ ಅವರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರಲಿದ್ದು, ಬೆಳಗ್ಗೆ ಬಾಗಲಕೋಟೆಯಲ್ಲಿ ಸಕ್ಕರೆ ಕಾರ್ಖಾನೆ ಉದ್ಘಾಟನೆ ಮಾಡಿ ಮರಳಿ ಬೆಳಗಾವಿಗೆ ಬರಲಿದ್ದಾರೆ. ಅಂದು ಮಧ್ಯಾಹ್ನ ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ಬೆಳಗಾವಿಯಲ್ಲಿಯೇ ಅಮಿತ್ ಶಾ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ ಎಂದರು.
ಬಳಿಕ ದಿ.ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಜ.17 ರ ಸಂಜೆ ಅಧಿಕಾರಿಗಳ ಸಭೆ ನಡೆಸಿ ಮರಳಿ ದೆಹಲಿಗೆ ತೆರಳಲಿದ್ದಾರೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಪಕ್ಷದಲ್ಲಿ ಭಿನ್ನಮತ, ಅಸಮಾಧಾನ ಸಹಜವಾಗಿಯೇ ಇರುತ್ತವೆ. ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅವರಿಗೆ ಬೇಸರ ಆಗಿರುತ್ತದೆ. ಹಾಗಾಗಿ ಬೇಸರದಿಂದ ಅಸಮಾಧಾನ ಹೊರ ಹಾಕುತ್ತಾರೆ. ಪಕ್ಷದ ಕುಟುಂಬದದಲ್ಲಿರುವ ಅಸಮಾಧಾನವಾಗಿದ್ದು, ಅವೆಲ್ಲವೂ ಮುಂದಿನ ದಿನಗಳಲ್ಲಿ ಸರಿ ಹೋಗಲಿವೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಕ್ಷದಲ್ಲಿ ನೋವು ತೊಡಿಕೊಳ್ಳಲು ಮುಕ್ತ ಅವಕಾಶವಿದೆ. ನಮ್ಮ ನಾಯಕರ ಎದುರು ನೋವು ತೋಡಿಕೊಳ್ಳದೇ ಮತ್ಯಾರ ಮುಂದೆ ಹೇಳಿಕೊಳ್ಳಬೇಕು. ಅಸಮಾಧಾನಿತ ಶಾಸಕರು ನನ್ನ ಸಂಪರ್ಕಕ್ಕೆ ಬಂದಿಲ್ಲ. ನೋಡೋಣಾ, ಇನ್ನೂ ಸ್ವಲ್ಪ ದಿನಗಳ ಬಳಿಕ ಮಾತನಾಡೋಣ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪಗೆ ಸಿಡಿ ಬ್ಲ್ಯಾಕ್ ಮೇಲ್ ಕುರಿತು ಯಾವ ಸಿಡಿನೂ ಇಲ್ಲಾ ಗಿಡಿನೂ ಇಲ್ಲ ಎಂದು ಒಂದೇ ವಾಕ್ಯದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಉತ್ತರಿಸಿದರು.
ವಿಜಯಸಾಕ್ಷಿ ಸುದ್ದಿ,ಕೊಪ್ಪಳ: ರಾಜ್ಯದ ಸಾಂಸ್ಕೃತಿಕ, ನಾಡಿನ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸಮೀಪಿಸಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವೀರಣ್ಣ ನಿಂಗೋಜಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಹೇಶ್ ಜೋಶಿ ಸ್ಪರ್ಧಿಸಲು ನಿಶ್ಚಯಿಸಿದ್ದು ಇವರನ್ನು ಬೆಂಬಲಿಸುವಂತೆ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕೋರಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವೀರಣ್ಣ ನಿಂಗೋಜಿ ಕಸಾಪದ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಹಲವು ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ. ಕಸಾಪ ಸದಸ್ಯರು ಇನ್ನೊಂದು ಅವಧಿಗೆ ನಿಂಗೋಜಿಯವರನ್ನು ಬೆಂಬಲಿಸಬೇಕು ಎಂದರು.
ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ಮಾತನಾಡಿ, ಸಾಹಿತ್ಯಕ್ಷೇತ್ರದಲ್ಲಿ ಕೃಷಿ ಮಾಡಿದವರು ಕಸಾಪ ಪ್ರತಿನಿಧಿಸಿದರೆ ಸೂಕ್ತ. ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದಿದ್ದರೆ ಪರಿಷತ್ತಿನ ಕಾರ್ಯ, ಉದ್ದೇಶ ಸಮರ್ಪಕವಾಗಿ ಅನುಷ್ಠಾನ ಕಷ್ಟಸಾಧ್ಯ. ನಿಂಗೋಜಿಯವರು ಈಗಾಗಲೇ ಹಲವು ಕೃತಿಗಳನ್ನು ಹೊರ ತಂದಿದ್ದಾರೆ. ಕಸಾಪ ಬೆಳವಣಿಗೆ ಕುರಿತಂತೆ ಹಲವು ಕನಸು ಕಂಡಿದ್ದಾರೆ ಎಂದರು.
ಕಸಾಪದ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಡಾ.ಕೆ.ಬಿ.ಬ್ಯಾಳಿ ಮಾತನಾಡಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲು ಒಲವಿದೆ. ನಿಂಗೋಜಿಯವರಿಗಿಂತ ಸಮರ್ಥರು ಯಾರಾದರೂ ಇದ್ದರೆ ಜಿಲ್ಲೆಯ ಎಲ್ಲ ಸದಸ್ಯರು ಸೇರಿಕೊಂಡು ಅವಿರೋಧ ಆಯ್ಕೆ ಮಾಡಲು ನಮಗೇನೊ ಮನಸ್ಸಿದೆ. ಆದರೆ ಚುನಾವಣೆ ಎಂದಾಕ್ಷಣ ಸ್ಪರ್ಧೆ, ಆಕಾಂಕ್ಷೆ ಹಾಗೂ ಆಕಾಂಕ್ಷೆಗಳು ಸಹಜ ಎಂದು ತಿಳಿಸಿದರು.
ಕಸಾಪದ ಮತ್ತೊಬ್ಬ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಮಾತನಾಡಿ, ಗಂಗಾವತಿಗೆ ಪ್ರಾತಿನಿಧ್ಯ ಸಿಗಬೇಕೆನ್ನುವುದು ಸರಿ. ಪ್ರತಿ ಚುನಾವಣೆಯಲ್ಲೂ ಗಂಗಾವತಿ ಭಾಗದವರು ಸ್ಪರ್ಧಿಸುತ್ತಿದ್ದಾರೆ. ಇದೊಂದು ಬಾರಿ ನಿಂಗೋಜಿವರಿಗೆ ಅವಕಾಶ ಕೊಡೋಣ ಎಂದರು.
ಆಕಾಂಕ್ಷಿ ವೀರಣ್ಣ ನಿಂಗೋಜಿ ಮಾತನಾಡಿ, ಎಲ್ಲರ ಒತ್ತಾಸೆ ಮೇರೆಗೆ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆಯ ಕಣಕ್ಕೆ ಧುಮುಕಲು ನಿರ್ಧರಿಸಿದ್ದೇನೆ. ಕಸಾಪಕ್ಕೆ ಸಂಬಂಧಿಸಿದಂತೆ ಇದು ನನ್ನ ಕೊನೆ ಚುನಾವಣೆ ಎಂದು ಘೋಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಅಕ್ಬರ್ ಸಿ.ಕಾಲಿಮಿರ್ಚಿ ಮತ್ತಿತರರು ಇದ್ದರು.
ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸಹೋದರರಿಬ್ಬರನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಮಲಾಪುರ ತಾಲೂಕಿನ ತಡಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ನೀಲೇಶ್ 40, ರಾಜಶೇಖರ 35 ಎಂದು ಗುರುತಿಸಲಾಗಿದೆ. ಈ ಹಿಂದೆ ಕುಡಿದ ಮತ್ತನಲ್ಲಿ ಬೇರೆಯವರೊಂದಿಗೆ ಕ್ಷುಲಕ ಕಾರಣಕ್ಕೆ ಸಹೋದರರಿಬ್ಬರೂ ಜಗಳವಾಡಿದ್ದರು ಎಂದು ತಿಳಿದುಬಂದಿದೆ. ಇದೇ ಈ ಕೊಲೆಗೆ ಕಾರಣವಾಗಿರಬಹುದು ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಹೋದರರ ಮೃತದೇಹದ ಮುಂದೆ ಸಂಬಂಧಿಕರ ರೋಧನ ಮನ ಕಲುಕುವಂತಿತ್ತು. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಮಹಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಜಯಸಾಕ್ಷಿ ಸುದ್ದಿ, ಮಂಗಳೂರು: ಅಂಡ್ ವೇರ್ ನ ಸೀಕ್ರಟ್ ಜೇಬಿನಲ್ಲಿಟ್ಟು ಸ್ಮಗ್ಲಿಂಗ್ ಮಾಡ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಶಾರ್ಜಾದಿಂದ ಚಿನ್ನ ಕಳ್ಳಸಾಗಣಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಕೇರಳದ ಕಾಸರಗೋಡಿನ ಫೈಜಲ್ (37), ಮಹಮ್ಮದ್ ಹುಸೈನ್ (31) ಬಂಧಿತ ಆರೋಪಿತರಾಗಿದ್ದಾರೆ ಕಸ್ಟಮ್ಸ್ ನ ಡಿಆರ್ ಐ ವಿಭಾಗದ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಪೇಸ್ಟ್ ರೂಪದಲ್ಲಿ ತರಲಾಗುತ್ತಿದ್ದ 1.09 ಕೋಟಿ ರೂಪಾಯಿ ಮೌಲ್ಯದ 2 ಕೇಜಿ ಅಕ್ರಮ ಚಿನ್ ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ನಿಲ್ದಾಣಕ್ಕೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ, ಶಾರ್ಜಾದಿಂದ ಬಂದಿದ್ದ ಈ ಇಬ್ಬರನ್ನು ತಪಾಸಣೆ ನಡೆಸಿದ ವೇಳೆ ಚಿನ್ನ ಪತ್ತೆಯಾಗಿದೆ. ಅಂಡರ್ ವೇರ್ ನಲ್ಲಿ ಎರಡು ಚಿನ್ನದ ಪೇಸ್ಟ್ ಪ್ಯಾಕೆಟನ್ನು ಅಡಗಿಸಿ ಇಡಲಾಗಿತ್ತು.
ಎಸ್ಟಿಗೆ ಕುರುಬ ಸಮಾಜ ಸೇರಿಸೊಕೆ ಬರುವುದಿಲ್ಲ ಎಂದವರು ಬೆಂಬಲ ಯಾಕೆ ಕೊಟ್ಟರು. ಈ ರೀತಿಯ ಹೋರಾಟ ಬೇಡವೆಂದರೆ ಮತ್ಯಾವ ರೀತಿಯಲ್ಲಿ ಹೋರಾಟ ಮಾಡಬೇಕೆಂಬುವುದನ್ನು ಹೇಳಲಿ ಹಾಗೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರನ್ನು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಸಚಿವರು, ಸ್ವಾಮಿಜಿಗಳಿಬ್ಬರು ಚರ್ಚೆ ಮಾಡಿ ಹೋರಾಟ ರೂಪಿಸಿದಾಗ ನನ್ನ ಬೆಂಬಲವಿದೆ. ಬರುವುದಕ್ಕೆ ಆಗುವುದಿಲ್ಲ ಎಂದಿದ್ದರು. ಈಗಲೂ ಬಂದು ಹೋರಾಟದಲ್ಲಿ ಪಾಲ್ಗೊಳ್ಳಲಿ ನಮ್ಮ ಆಭ್ಯಂತರವಿಲ್ಲ ಎಂದ ಅವರು, ಕುರುಬ ಸಮಾಜವನ್ನು ಎಸ್ ಟಿ ಮೀಸಲಾತಿಗೆ ಸೇರಿಸುವ ಕಾಗೆನೆಲೆಯ ಇಬ್ಬರು ಸ್ವಾಮೀಜಿಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಪಂಚಮಸಾಲಿ ಸಮಾಜದವರು ಪಾದಯಾತ್ರೆ ಮೂಲಕ ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಪಾದಯಾತ್ರೆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆ ಬರುವುದಿಲ್ಲ. ಯಾರು ಅರ್ಹರೋ ಅವರಿಗೆ ಖಂಡಿತವಾಗಿ ಮೀಸಲಾತಿ ಸಿಗುತ್ತದೆ. ಅಲ್ಲದೇ, ಅರ್ಹತೆ ಇರುವವರಿಗೆ ಸರ್ಕಾರ ಮೀಸಲಾತಿ ಕೊಡಲೇ ಬೇಕಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಹುಟ್ಟು ಹಬ್ಬ ಆಚರಣೆ ವೇಳೆ ತಲ್ವಾರ್ ಝಳಪಿಸಿದ ಯುವಕರೀಗ ಪೊಲೀಸರ ಅತಿಥಿಯಾಗಿದ್ದಾರೆ. ತಲ್ವಾರ್ ಹಿಡಿದು, ಡಿ.ಜೆ. ಗೆ ಹೆಜ್ಜೆ ಹಾಕಿದ್ದ ಯುವಕರನ್ನು ರೋಜಾ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕಲಬುರ್ಗಿಯ ಮೆಹಬೂಬ ನಗರದಲ್ಲಿ ಈ ಘಟನೆ ನಡೆದಿತ್ತು. ಇಮ್ರಾನ್ ಎಂಬಾತನ ಬರ್ತಡೇ ಸೆಲೆಬ್ರೇಷನ್ ವೇಳೆ ಇಮ್ರಾನ್, ತಬ್ರೇಜ್, ರಶೀದ್, ಅಫ್ರೋಜ್, ತಲ್ಹಾ, ಸೋಹೆಲ್ ಹಾಗೂ ಜಹೀರ್ ರಾಜಾರೋಣವಾಗಿ ತಲ್ವಾರ್ ಝಳಪಿಸಿದ್ದಲ್ಲದೇ, ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿದ್ದರು.
ಕೋವಿಡ್ ನಡುವೆ ಯಾವುದೇ ಪರವಾನಿಗೆ ಪಡೆಯದೇ ಸಾರ್ವಜನಿಕ ಸ್ಥಳದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿದ್ದರು. ಅಲ್ಲದೇ, ಅನುಮತಿ ಇಲ್ಲದೆಯೇ ಸಾರ್ವಜನಿಕ ಸ್ಥಳದಲ್ಲಿ ವೇದಿಕೆ ನಿರ್ಮಾಣ ಮಾಡಿ, ವೇದಿಕೆ ಮೇಲೆ ತಲ್ವಾರ್ ಹಿಡಿದು ಕುಣಿದು ಕುಪ್ಪಳಿಸಿದ್ದರು.
ಈ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿ ಅದು ವೈರಲ್ ಆಗಿತ್ತು. ಇದು ಕಲಬುರಗಿ ಜನತೆಯಲ್ಲಿ ಆತಂಕ ಹುಟ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ತಲ್ವಾರ್ ಹಿಡಿದು ಕುಣಿದ ಏಳು ಯುವಕರನ್ನು ಬಂಧಿಸಿದ್ದಾರೆ. ಕಲಬುರ್ಗಿ ಎ ಡಿವಿಜನ್ ಎಸಿಪಿ ಅಂಶುಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದ್ದು, ಆರೋಪಿತರನ್ನು, ಸೆಕ್ಷನ್ 107 ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ.