Home Blog Page 3087

ಇಂದಲ್ಲ, ನಾಳೆಯಿಂದ ನೈಟ್ ಕರ್ಪ್ಯೂ ಜಾರಿ; ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದಿಢೀರ್ ರಾತ್ರಿ ಕರ್ಪ್ಯೂ ಘೋಷಣೆಯಿಂದ ರಾಜ್ಯದ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬುಧವಾರ ಘೋಷಿಸಿರುವ ನೈಟ್ ಕರ್ಪ್ಯೂ ನಾಳೆಯಿಂದ ಜಾರಿಯಾಗಲಿದೆ ಎಂದಿರುವ ರಾಜ್ಯ ಸರ್ಕಾರ ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕೆಲವು ಬದಲಾವಣೆ ಮಾಡಿದೆ.

ಗುರುವಾರ (ಡಿ.24) ರಂದು ರಾತ್ರಿ 11 ರಿಂದ 5 ರವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ ಕೊರೋನಾ ಹೊಸ ವೈರಸ್; ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ

ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ್ದು,
ಯಾವುದೇ ಧಾರ್ಮಿಕ ಕಾರ್ಯಕರ್ಮಗಳಿಗೆ ಅಡಚಣೆ ಇಲ್ಲದೇ ಪ್ರಾರ್ಥನೆ ಸಲ್ಲಿಸಬಹುದು.

ನೈಟ್ ಕರ್ಪ್ಯೂ ಸಂದರ್ಭದಲ್ಲಿ ಬಸ್, ರೈಲು ಸಂಚಾರಕ್ಕೆ ಯಾವುದೇ ಅಡತಡೆ ಇರುವುದಿಲ್ಲ. ಬಸ್ ಸಂಚಾರ ನಿರಂತರವಾಗಿ ಓಡಾಡುವುದಕ್ಕೆ ಅವಕಾಶವಿದೆ. ಆಟೋ, ಟ್ಯಾಕ್ಸಿಗಳಿಗೂ ಅವಕಾಶ ಕಲ್ಪಿಸಿದ್ದು, ಪ್ರಯಾಣಿಕರನ್ನು ಕರೆದುಕೊಂಡು ಹೋಗಬಹುದು. ರೈಲು, ಬಸ್, ವಿಮಾನ ನಿಲ್ದಾಣಗಳಲ್ಲಿ ಸೇವೆ ಒದಗಿಸಬಹುದು.

ಬ್ರಿಟನ್ ಹೈಸ್ಪೀಡ್ ಕೊರೋನಾ ವೈರಸ್ ; ಜನವರಿ 1 ರಿಂದ ಶಾಲಾ-ಕಾಲೇಜು ಆರಂಭ ಅನುಮಾನ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಚೀನಾ ವೈರಸ್ ತಡೆಗಟ್ಟಿದ ಬೆನ್ನಲ್ಲೇ ಮತ್ತೊಂದು ಬ್ರಿಟನ್ ಹೈಸ್ಪೀಡ್ ಕೊರೋನಾ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ರಾತ್ರಿ ಕರ್ಪ್ಯೂ ಜಾರಿ ಮಾಡಿದೆ‌.

ಇದರಿಂದ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ತುರ್ತು ಸೇವೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಸೇವೆಗಳು ಬಂದ್ ಆಗಿರಲಿವೆ. ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ.

ಶಾಲಾ- ಕಾಲೇಜು ಆರಂಭದ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಳೆದ ಡಿ.19 ರಂದು ಜನವರಿ 1 ರಿಂದ 10 ಮತ್ತು 12ನೇ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪ್ರಾರಂಭಿಸಲಾಗುವುದು. ಅದರಂತೆ ಜ.1 ರಿಂದ 6 ರಿಂದ 9 ತರಗತಿ ಮಕ್ಕಳಿಗೆ ವಿದ್ಯಾಗಮ ತರಗತಿಗಳನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದರು.

ಇದೀಗ ಬ್ರಿಟನ್ ಹೈಸ್ಪೀಡ್ ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ- ಕಾಲೇಜು ಪುನರಾರಂಭದ ಬಗ್ಗೆ ಸರ್ಕಾರ ಇನ್ನೂ ಎರಡು ದಿನಗಳವರೆಗೆ ಕಾದು ನೋಡುವ ನಿರ್ಧಾರಕ್ಕೆ ಬಂದಿದೆ. ಈ ಕುರಿತು ಡಿ.28 ರಂದು ಮತ್ತೊಂದು ಸುತ್ತಿನ ತಜ್ಞರ ಸಭೆ ನಡೆಸಿ ಶಾಲೆ ಆರಂಭದ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಹಾಗಾಗಿ ಜನವರಿ 1 ರಿಂದ ಶಾಲಾ ಕಾಲೇಜುಗಳು ಆರಂಭವಾಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್: ಆರೋಪಿ ಕವಿರಾಜ್ ಸೇರಿ ಐವರ ಬಂಧನ

ವಿಜಯಸಾಕ್ಷಿ ಸುದ್ದಿ, ಕೋಲಾರ

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣಕ್ಕೆ ಸಂಬಧಿಸಿದಂತೆ ಅಪಹರಿಸಿದ್ದ ಆರು ಜನ ಅಪಹರಣಕಾರರನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಗಳಿಂದ ಮಾರಕಾಸ್ತ್ರ, ಮೊಬೈಲ್ ಸೇರಿದಂತೆ ಸುಮಾರು 20 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಕವಿರಾಜ್(43), ಲಿಖಿತ್(20), ಉಲ್ಲಾಸ್(21), ಮನೋಜ್(20), ರಾಘವೇಂದ್ರ(34), ಪ್ರವೀಣ್(20) ಬಂಧಿತ ಆರೋಪಿಗಳಾಗಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿದ ಐಜಿ ಸೀಮಂತ್ ಕುಮಾರ್ ಸಿಂಗ್ ಅವರು, ಆರೋಪಿಗಳ ಪತ್ತೆಗಾಗಿ ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು ಅಲೆದಾಡಿದ್ದು, ಪ್ರಕರಣದ ಎ1 ಆರೋಪಿಯಾಗಿರುವ ಕವಿರಾಜ್ ಎಂಬುವವನನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅಲ್ಲಿಂದಲೇ ತಪ್ಪಿಸಿಕೊಂಡಿದ್ದು, ಅವನ ಪತ್ತೆಗೆ ಹುಡುಕಾಟ ನಡೆದಿದೆ. ಕವಿರಾಜ್ ವಿರುದ್ಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ 10 ಪ್ರಕರಣಗಳಿವೆ. ತಮಿಳುನಾಡು ಮತ್ತು ಬೆಂಗಳೂರಿನಲ್ಲೂ ಕೇಸ್‌ಗಳಿವೆ ಎಂದು ಮಾಹಿತಿ ನೀಡಿದರು.

ನ.25 ರಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿದ್ದ ಆರೋಪಿಗಳು ನ.28 ರಂದು ಮೂರು ದಿನಗಳ ಬಳಿಕ ಹೊಸಕೋಟೆ ತಾಲೂಕಿನ ನಂದಗುಡಿಯ ಶಿವನಾಪುರ ಬಳಿ ಬಿಟ್ಟಿದ್ದರು. ಈ ಅವಧಿಯಲ್ಲಿ ಅಪಹರಣಕಾರರು ಒಟ್ಟು 48 ಲಕ್ಷ ತೆಗೆದುಕೊಂಡಿದ್ದರು. ಅದರಲ್ಲಿ ಸದ್ಯ 20,50,000 ರೂ. ಹಣ ಮರಳಿ ಪಡೆದಿದ್ದು, ಇನ್ನುಳಿದ ಹಣವನ್ನು ವಾಪಾಸ್ ಪಡೆಯಲಾಗುವುದು ಎಂದು ಐಜಿ ತಿಳಿಸಿದರು.

ಮಾಜಿ ಸಚಿವರ ಕಿಡ್ನ್ಯಾಪ್ ಪ್ರಕರಣದ ತನಿಖೆಯನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಾಯಿಲ್ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಕಾರ್ಯಾಚರಣೆಗೆ ಇಬ್ಬರು ಎಎಸ್‌ಪಿ, 3 ಸಿಪಿಐ, 3 ಪಿಎಸ್‌ಐ, 2 ಎಎಸ್‌ಐ, 4 ಹೆಚ್‌ಸಿ, 6 ಜನ ಪಿಸಿ ಅವರನ್ನು ಬಳಸಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.

ಈ ಕೃತ್ಯಕ್ಕೆ ಎರಡು ಮಾರುತಿ ಶಿಫ್ಟ್, ಒಂದು ಮಾರುತಿ ರಿಟ್ಜ್, ಇನೋವಾ, ಕೆಟಿಎಂ ಡ್ಯುಕ್, ಡ್ರಾಗರ್, ಕಬ್ಬಿಣದ ಲಾಂಗ್, ಬೇಸ್ ಬಾಲ್ ಬ್ಯಾಟ್, ಮಚ್ಚು, ಕಾರಿನ ನಂಬರ್ ಪ್ಲೇಟ್, ಮಂಕಿ ಟೋಪಿ ಬಳಸಿದ್ದರು ಎಂದು ತಿಳಿಸಿದ ಅವರು, ತನಿಖೆಯ ಸಿಬ್ಬಂದಿಗಳಿಗೆ 50 ಸಾವಿರ ನಗದು ಹಾಗೂ ಪ್ರಮಾಣಪತ್ರ ನೀಡುವ ಮೂಲಕ ಐಜಿ ಸೀಮಂತ್ ಕುಮಾರ್ ಸಿಂಗ್ ಅಭಿನಂದಿಸಿದರು.

ಕೊರೋನಾ ಹೊಸ ವೈರಸ್; ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೋನಾ ರೂಪಾಂತರ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ವೈರಸ್ ತಡೆಗಟ್ಟುವ ಸಲುವಾಗಿ ಇಂದಿನಿಂದ ಜನವರಿ 2 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಕೋವಿಡ್ ಸಲಹಾ ಸಮಿತಿ ಸಭೆಯ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವತ್ತಿನಿಂದ ಒಂಬತ್ತು ದಿನಗಳವರಗೆ ರಾತ್ರಿ ಕರ್ಪ್ಯೂ ಜಾರಿ ಇರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸೇವೆಗಳು ಬಂದ್ ಆಗಿರಲಿವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಇಂದಿನಿಂದ ಜನವರಿ 2 ರವರೆಗೆ ರಾತ್ರಿ ಕರ್ಪ್ಯೂ ಜಾರಿಯಲ್ಲಿರಲಿದೆ. ಈ ವೇಳೆ ಯಾರೂ ಅನಾವಶ್ಯಕವಾಗಿ ಹೊರಗಡೆ ಬರಬಾರದು. ಕ್ರಿಸ್ ಮಸ್, ಹೊಸ ವರ್ಷ ಹಬ್ಬದ ಆಚರಣೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಏರ್ ಪೋರ್ಟ್ ಗಳಲ್ಲಿ ಪ್ರತಿ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆ ಮಾಡಲಾಗುವುದು. ಇನ್ನು ಬ್ರಿಟನ್ ನಿಂದ ಬಂದ ಪ್ರಯಾಣಿಕರನ್ನು 28 ದಿನಗಳವರೆಗೆ ಹೋಂ ಕ್ವಾರಂಟೈನ್ ಇರಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಗ್ರಾ.ಪಂ. ಚುನಾವಣೆ: ಕೊಪ್ಪಳ ಜಿಲ್ಲೆಯಲ್ಲಿ ಶೇ.82.16ರಷ್ಟು ಮತದಾನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಮೊದಲ ಹಂತದ ಗ್ರಾ.ಪಂ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 82.16ರಷ್ಟು‌ ಮತದಾನ ದಾಖಲಾಗಿದೆ.

ಸಂಜೆ 7ರವರೆಗೆ ಕೊಪ್ಪಳ ತಾಲೂಕಿನ ಗ್ರಾಪಂಗಳಲ್ಲಿ ಶೇಕಡಾ 83.26, ಯಲಬುರ್ಗಾ ತಾಲೂಕಿನ ಗ್ರಾಪಂಗಳಲ್ಲಿ ಶೇಕಡಾ 81.41 ಹಾಗೂ ಕುಕನೂರು‌ ತಾಲೂಕಿನ ಗ್ರಾಪಂಗಳಲ್ಲಿ ಶೇಕಡಾ 79.89ರಷ್ಟು ಮತದಾನವಾಗಿದೆ.

ಒಟ್ಟಾರೆ ಕೊಪ್ಪಳ ಜಿಲ್ಲೆಯ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು‌ ತಾಲೂಕುಗಳ 73 ಗ್ರಾಪಂಗಳಲ್ಲಿ ಶೇಕಡಾ 82.16ರಷ್ಟು ಮತದಾನ ದಾಖಲಾಗಿದೆ.

ಮೊದಲ ಹಂತದ ಗ್ರಾ. ಪಂ. ಚುನಾವಣೆ:
ಜಿಲ್ಲೆಯಲ್ಲಿ ಶೇ. 79.12 ರಷ್ಟು ಮತದಾನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ಮತದಾನವು ಜಿಲ್ಲೆಯ ಗದಗ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕುಗಳ ಗ್ರಾಮ ಪಂಚಾಯತಿಗಳಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ ಹೊರತಾಗಿ ಶಾಂತಿಯುತವಾಗಿ ಜರುಗಿದೆ. ಜಿಲ್ಲೆಯಲ್ಲಿ ಅಂತಿಮವಾಗಿ ಶೇ. 79.12 ರಷ್ಟು ಮತದಾನವಾಗಿದ್ದು, ಗದಗ ತಾಲ್ಲೂಕಿನಲ್ಲಿ ಶೇ.80.03, ಲಕ್ಷ್ಮೇಶ್ವರ ಶೇ.78.23 ಹಾಗೂ ಶಿರಹಟ್ಟಿ ಶೇ.79.09 ರಷ್ಟು ಮತದಾನವಾಗಿದೆ.

ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಶೇಖಡಾವಾರು ಮತದಾನದ ವಿವರ ಇಂತಿದೆ; ಬೆ. 9 ಗಂಟೆಯವರೆಗೆ ಗದಗ ತಾಲೂಕಿನಲ್ಲಿ ಶೇಕಡ 7.31, ಲಕ್ಷ್ಮೇಶ್ವರ ಶೇ. 7.02, ಶಿರಹಟ್ಟಿ ಶೇ. 5.80, ಒಟ್ಟಾರೆ ಶೇ.6.70 ರಷ್ಟು ಮತದಾನವಾಯಿತು. ಬೆ. 11 ಗಂಟೆಯವರೆಗೆ ಗದಗ ತಾಲೂಕಿನಲ್ಲಿ ಶೇಕಡ22.82, ಲಕ್ಷ್ಮೇಶ್ವರ ಶೇ. 24.10, ಶಿರಹಟ್ಟಿ ಶೇ. 21.69 ಒಟ್ಟಾರೆ ಶೇ. 22.86 ರಷ್ಟು ಮತದಾನವಾಯಿತು.

ಮಧ್ಯಾಹ್ನ 1 ಗಂಟೆಯವರೆಗೆ ಗದಗ ತಾಲೂಕಿನಲ್ಲಿ ಶೇಕಡ 41.67 , ಲಕ್ಷ್ಮೇಶ್ವರ ಶೇ. 39.94, ಶಿರಹಟ್ಟಿ ಶೇ. 42.06 ಒಟ್ಟಾರೆ ಶೇ. 41.22ರಷ್ಟು ಮತದಾನವಾಯಿತು. ಮಧ್ಯಾಹ್ನ 3 ಗಂಟೆಯವರೆಗೆ ಗದಗ ತಾಲೂಕಿನಲ್ಲಿ ಶೇಕಡ 60.10, ಲಕ್ಷ್ಮೇಶ್ವರ ಶೇ. 58.49, ಶಿರಹಟ್ಟಿ ಶೇ. 60.49 ಒಟ್ಟಾರೆ ಶೇ. 59.70 ರಷ್ಟು ಮತದಾನವಾಯಿತು.

ಕೆಲವೊಂದು ಗ್ರಾಮಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ‌ ಕಾರ್ಯಕರ್ತರಲ್ಲಿ ಮಾತಿನ ಚಕಮಕಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು.

ಕೊವಿಡ್-19: ಗದಗ ಜಿಲ್ಲೆಯ ಸೋಮವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಿಸೆಂಬರ್‌ 21 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 156825 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 162389 ಮಾದರಿಗಳಲ್ಲಿ 151363 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 160 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 05 (ಗದಗ-05) ಪ್ರಕರಣಗಳು ಸೇರಿದಂತೆ ಒಟ್ಟು 10866 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 06 ಜನ ಸೇರಿದಂತೆ ಒಟ್ಟು 10697 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 28 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅಧಿಕಾರಿಗಳ ಎಡವಟ್ಟು; ಒಂದೇ ದಿನದಲ್ಲಿ ಕ್ರಮ ಸಂಖ್ಯೆ ಅದಲು ಬದಲು, ಗೊಂದಲದಲ್ಲಿ ಅಭ್ಯರ್ಥಿ

ವಿಜಯಸಾಕ್ಷಿ ಸುದ್ದಿ, ಗದಗ

ಒಂದೇ ದಿನದಲ್ಲಿ ಅಭ್ಯರ್ಥಿಯ ನಾಮಪತ್ರದ ಕ್ರಮ‌ ಸಂಖ್ಯೆ ಅದಲು ಬದಲು ಮಾಡುವ ಮೂಲಕ ಚುನಾವಣಾಧಿಕಾರಿಗಳು ಅಭ್ಯರ್ಥಿಗೆ ಗೊಂದಲವುಂಟು ಮಾಡಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆಯ ಎರಡನೇಯ ಹಂತದಲ್ಲಿ ನಡೆಯುವ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮ ಪಂಚಾಯತಿಯಲ್ಲಿ ಈ ಎಡವಟ್ಟು ನಡೆದಿದೆ.

ಬನಹಟ್ಟಿ ಗ್ರಾ.ಪಂ.ನ ಮೂಗನೂರು ಮತಕ್ಷೇತ್ರಕ್ಕೆ ವೀರನಗೌಡ ಶಿವನಗೌಡ ಮೂಗನೂರ ಎಂಬ ವ್ಯಕ್ತಿ ಸ್ಪರ್ಧಿಸಿದ್ದಾರೆ. ಇವರಿಗೆ ಮೊದಲು ಕ್ರಮ ಸಂಖ್ಯೆ 06 ನೀಡಿದ್ದ ಚುನಾವಣಾ ಅಧಿಕಾರಿಗಳು,
ಮರುದಿನ ಬೆಳಿಗ್ಗೆ ಕ್ರ.ಸಂ. 04 ನೀಡಿದ್ದಾರೆ ಇದರಿಂದ ಅಭ್ಯರ್ಥಿ ಗೊಂದಲಕ್ಕೀಡಾಗಿದ್ದಾರೆ.

ಅಭ್ಯರ್ಥಿ ವೀರನಗೌಡ ಅವರು ಮೊದಲು ನೀಡಿದ ಸಂಖ್ಯೆಯನ್ನೇ ನಮೂದಿಸಿ ಕರಪತ್ರ ಮುದ್ರಿಸಿದ್ದಾರೆ. ಈಗಾಗಲೇ ಮುದ್ರಿಸಿರುವ ಕರಪತ್ರಗಳನ್ನು ಪ್ರಚಾರ ಮಾಡುವ ಮೂಲಕ ಹಂಚಿದ್ದಾರೆ. ಇದೀಗ ಕ್ರಮ ಸಂಖ್ಯೆ ಅದಲು ಬದಲು ಮಾಡಿದ್ದಾರೆ.

ಕ್ರಮ ಸಂಖ್ಯೆ ಬದಲಾವಣೆಗೆ ಕಾರಣ ಕೇಳಿದರೆ ಚುನಾವಣಾಧಿಕಾರಿಗಳು ಮೇಲಾಧಿಕಾರಿಗಳತ್ತ ಬೊಟ್ಟು ಮಾಡಿ ತೋರಿಸಿತ್ತಿದ್ದಾರೆ ಎಂದು ವೀರನಗೌಡ ಆರೋಪಿಸಿದ್ದಾರೆ.

ಅಧಿಕಾರಿಗಳ ಎಡವಟ್ಟಿನಿಂದಲೋ ಅಥವಾ ತಪ್ಪಿನಿಂದಲೋ ಈಗಾಗಲೇ ಮೊದಲ ಕ್ರಮ ಸಂಖ್ಯೆಯಲ್ಲೇ ಪ್ರಚಾರ ಮಾಡಿರುವ ಗ್ರಾ.ಪಂ.ಚುನಾವಣಾ ಅಭ್ಯರ್ಥಿ ವೀರನಗೌಡ ಶಿವನಗೌಡ ಮೂಗನೂರ ಗೊಂದಲದಲ್ಲಿರುವುದಂತೂ ಸುಳ್ಳಲ್ಲ.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ; ಮೆಣಸಿನಕಾಯಿ ಆರೋಪ

ವಿಜಯಸಾಕ್ಷಿ ಸುದ್ದಿ, ಗದಗ

ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ಮಾಡಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರೋಪ ಮಾಡಿದ್ದಾರೆ.

ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕ್ ಕರೂರ ಅವರ ಮನೆ ಮುಂದೆ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಅನಿಲ್ ಮೆಣಸಿನಕಾಯಿ ಆರೋಪಿಸಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಬಿಂಕದಕಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ನೇರ ಪೈಪೋಟಿ ಒಡ್ಡಿದ್ದೇ ಈ ಘಟನೆಗೆ ಪ್ರಮುಖ ಕಾರಣ ಎಂದು ಅನಿಲ ಆರೋಪಿಸಿದ್ದಾರೆ.

ಸ್ಥಳದಲ್ಲಿ ಗದಗ ಡಿವೈಎಸ್ಪಿ ಪ್ರಹ್ಲಾದ್ ಕೆ., ಗ್ರಾಮೀಣ ಠಾಣೆ ಸಿಪಿಐ ರವಿ ಕಪ್ಪತ್ತನವರ್, ಪಿಎಸ್ಐ ಅಜಿತ್ ಕುಮಾರ್ ಹೊಸಮನಿ ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ.

ಅಲ್ಲದೆ, ಸ್ಥಳದಲ್ಲಿ ಒಂದು ಡಿಆರ್ ತುಕಡಿ ನಿಯೋಜನೆ ಮಾಡಲಾಗಿದ್ದು,ಗ್ರಾಮದಲ್ಲಿ ಪಥ ಸಂಚಲನ ನಡೆಸಲಾಗಿದೆ.

ಇ‌ನ್ನು ಈ ಕುರಿತು ಗ್ರಾಮೀಣ ಠಾಣೆ ಪಿಎಸ್ಐ ಅಜಿತ್ ಕುಮಾರ್ ಹೊಸಮನಿ ಅವರನ್ನು ಸಂಪರ್ಕಿಸಿದರೆ, ಯಾವುದೇ ಗೊಂದಲ ಗಲಾಟೆ ಇಲ್ಲವೆಂದಿದ್ದಾರೆ.

ಸದ್ಯ ಬಿಂಕದಕಟ್ಟಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ರಾಜಕೀಯ ದ್ವೇಷಕ್ಕೆ ಬಣವೆಗೆ ಬೆಂಕಿ; ಸುಟ್ಟು ಕರಕಲಾದ ಲಕ್ಷಾಂತರ ರೂ.ಮೌಲ್ಯದ ಶೇಂಗಾ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ರಾಜಕೀಯ ದ್ವೇಷಕ್ಕೆ ದುಷ್ಕರ್ಮಿಗಳು ಬಣವಿಗೆ ಬೆಂಕಿ ಇಟ್ಟಿರುವ ಕುಕೃತ್ಯ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಪರಸಾಪೂರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.

ಹನಮಂತ ಬೆರಗಣ್ಣವರ್ ಎಂಬುವವರಿಗೆ ಸೇರಿದ ಶೇಂಗಾ ಬಣವಿ ಸುಟ್ಟು ಭಸ್ಮವಾಗಿದ್ದು, ರೈತನ ಆಕ್ರಂದನ ಮುಗಿಲು ಮುಟ್ಟಿದೆ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ
ಮಾಗಡಿ ಗ್ರಾ.ಪಂ ವ್ಯಾಪ್ತಿಯ ಪರಸಾಪೂರ ಗ್ರಾಮದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದೇ ಇದಕ್ಕೆ ಕಾರಣ ಎಂದು ರೈತ ಹನುಮಂತ ಆರೋಪಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಒತ್ತಾಯಿಸಿದ್ದಾರೆ.

ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಶೇಂಗಾ ಹಾಗೂ ಹೊಟ್ಟು ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಿದರು. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!