ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವರ್ತನೆಗೆ ಮತ್ತು ತಾಡಪಲ ವಿತರಣೆಯಲ್ಲಿ ತಾರತಮ್ಯ, ಅವ್ಯವಹಾರ ಖಂಡಿಸಿ ಮಂಗಳವಾರ ಕರ್ನಾಟಕ ರಾಜ್ಯ ದಲಿತ ರೈತ ಸಂಘ ವತಿಯಿಂದ ಉಪತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ರಾಜ್ಯ ದಲಿತ ರೈತ ಸಂಘದ ಅಧ್ಯಕ್ಷ ದುರಗೇಶ ಬಂಡಿವಡ್ಡರ ಮಾತನಾಡಿ, ರೈತರ ಅನುಕೂಲಕ್ಕಾಗಿ ಸರ್ಕಾರ ಕೃಷಿ ಇಲಾಖೆಯಿಂದ ಪ್ರತಿ ವರ್ಷ ಸಬ್ಸಿಡಿ ದರದಲ್ಲಿ ತಾಡಪಲಗಳನ್ನು ವಿತರಿಸುತ್ತಿದೆ. ಆದರೆ, ನರೇಗಲ್ಲ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಜಕೀಯ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಿಜವಾದ ರೈತರಿಗೆ ತಲುಪಬೇಕಾದ ತಾಡಪತ್ರಿಗಳನ್ನು ರಾಜಕೀಯ, ಗಣ್ಯ ವ್ಯಕ್ತಿಗಳ ಮನೆಗೆ ಸೇರಿಸುತ್ತಿದ್ದಾರೆ.
ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳನ್ನು ಬಿಟ್ಟು, ಕೇವಲ ಎಂಎಲ್‌ಎ, ಸಂಸದರ, ಜಿ.ಪಂ, ತಾ.ಪಂ ಅಧ್ಯಕ್ಷ ಹಾಗೂ ಸದಸ್ಯರ ಮಾತುಗಳನ್ನು ಕೇಳಿ ತಮಗೆ ಬೇಕಾದ ಶ್ರೀಮಂತ ರೈತರಿಗೆ ತಾಡಪತ್ರಿಗಳನ್ನು ನೀಡುತ್ತಿದ್ದಾರೆ. ಕೃಷಿ ಸಾಮಗ್ರಿಗಳ ವಿತರಣೆಯಲ್ಲಿ ಪದೇ ಪದೇ ಕೃಷಿ ಅಧಿಕಾರಿ ಜಾತಿ ತಾರತಮ್ಯ ಮಾಡುತ್ತಿದ್ದಾರೆ. ಆದ್ದರಿಂದ ಕೃಷಿ ಅಧಿಕಾರಿ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಂಡು ನರೇಗಲ್ಲ ಸುತ್ತಮುತ್ತಲಿನ ದಲಿತ ರೈತರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಉಪತಹಸೀಲ್ದಾರ ಅನುಪಸ್ಥಿತಿಯಲ್ಲಿ ನಾಡಕಚೇರಿ ಗಣಕ ಯಂತ್ರ ನಿರ್ವಾಹಕ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದುರಗಪ್ಪ ಬಂಡಿವಡ್ಡರ, ಯಲ್ಪಪ್ಪ ಮಣ್ಣೊಡ್ಡರ, ರಾಮಣ್ಣ ಹನಮಸಾಗರ, ವೆಂಕಟೇಶ ಬಂಡಿವಡ್ಡರ, ಹನಮಂತಪ್ಪ ಮಣ್ಣೊಡ್ಡರ, ಸುರೇಶ ಮಣ್ಣೊಡ್ಡರ, ಆಂಜನೇಯ ನವಲಗುಂದ, ಕಳೂಳೆಪ್ಪ ಬಂಡಿವಡ್ಡರ, ಹುಚ್ಚಪ್ಪ ಬಂಡಿವಡ್ಡರ, ಅಂಜನೇಯ ಕಟ್ಟಿಮನಿ, ಕಲ್ಲಪ್ಪ ಬಂಡಿವಡ್ಡರ, ದೊಡ್ಡಮರದಪ್ಪ ಕಟ್ಟಿಮನಿ ಸೇರಿದಂತೆ ಇತರರಿದ್ದರು.
ರೈತ ಸಂಪರ್ಕ ಕೇಂದ್ರದ ಅಧಿಕಾರಿ ವರ್ತನೆಗೆ ಖಂಡನೆ
ಸ್ಲಂ ಜನರನ್ನು ಕಡೆಗಣಿಸಿದರೆ ಹೋರಾಟ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ ವಸತಿ ಕಲ್ಪಿಸುವಲ್ಲಿ ಸ್ಲಂ ಜನರನ್ನು ಕಡೆಗಣಿಸಿದರೆ ಜಿಲ್ಲಾ ಸ್ಲಂ ಸಮಿತಿಯಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್.ಮಾನ್ವಿ ಎಚ್ಚರಿಕ್ಕೆ ನೀಡಿದ್ದಾರೆ.
ಅವರು ಜಿಲ್ಲಾ ಸ್ಲಂ ಸಮಿತಿಯ ಆವರಣದಲ್ಲಿ ಕರೆದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಳೆದ ಹಲವಾರು ವರ್ಷಗಳಿಂದ ಗದಗ-ಬೆಟಗೇರಿ ನಗರದ ವಸತಿರಹಿತರಿಗೆ ಹಾಗೂ ಗುಡಿಸಲು ನಿವಾಸಿಗಳಿಗೆ ವಸತಿ ಕಲ್ಪಿಸಲು ಆಗ್ರಹಿಸಿ ಜಿಲ್ಲಾ ಸ್ಲಂ ಸಮಿತಿಯಿಂದ ಹಲವಾರು ಹೋರಾಟಗಳನ್ನು ನಡೆಸಿ ನಮ್ಮ ಭಾಗದ ಜನಪ್ರತಿಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಆದರೆ ಮೂಲ ವಸತಿರಹಿತರಿಗೆ ಹಾಗೂ ಗುಡಿಸಲು ನಿವಾಸಿಗಳಿಗೆ ವಸತಿ ಕಲ್ಪಿಸಲು ತಾರತಮ್ಯ ನೀತಿ ಅನುಸರಿಸುತ್ತಿರುವುದು ಜಿಲ್ಲಾ ಸ್ಲಂ ಸಮಿತಿಯಿಂದ ಖಂಡಿಸುತ್ತೇವೆ. ಈಗಾಗಲೇ ಘೋಷಿತ ಹಾಗೂ ಅಘೋಷಿತ ಸ್ಲಂಗಳ ಸರ್ವೇ ನಡೆಸಿರುವುದನ್ನು ಪರಿಗಣಿಸಿ ಕನಿಷ್ಠಮಟ್ಟದ ಸೌಲಭ್ಯವಿಲ್ಲದೇ ತಮ್ಮ ಬದುಕನ್ನು ನಡೆಸುತ್ತಿರುವ ಗುಡಿಸಲು ಕುಟುಂಬಗಳಿಗೆ ವಸತಿ ಯೋಜನೆಯನ್ನು ಮಂಜೂರು ಮಾಡಬೇಕು. ಸುಮಾರು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ಮಾಡುತ್ತ ಬಂದಿರುವ ನಗರದ ಮೂಲ ವಸತಿರಹಿತ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡುವ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದರು.
ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ ಮಾತನಾಡಿ, ವಸತಿರಹಿತ ಕುಟುಂಬಗಳ ಹೋರಾಟಗಳ ಮೂಲಕ ಎಚೆತ್ತುಕೊಂಡ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಪ್ರಧಾನ ಮಂತ್ರಿ ಆವಾಸ್ ಯೋಜನೆಡಿಯಲ್ಲಿ ಸಾವಿರಾರು ಮನೆಗಳನ್ನು ಮಂಜೂರು ಮಾಡಿ ಮನೆಗಳು ನಿರ್ಮಾಣ ಹಂತದಲ್ಲಿವೆ. ಮನೆ ಹಂಚಿಕೆಯ ಆಯ್ಕೆ ಪ್ರಕ್ರಿಯ ಸಂದರ್ಭದಲ್ಲಿ ನಿಜವಾದ ವಸತಿರಹಿತರ ಕುಟುಂಬಗಳನ್ನು ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಸ್ಲಂ ಸಮಿತಿಯಿಂದ ಅನಿರ್ದಿಷ್ಟ ಧರಣಿಸತ್ಯಾಗ್ರಹ ನಡೆಸಲಾಗುವುದು ಎಂದರು.
ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಕುಸಬಿ ಮುಂದಿನ ಹೋರಾಟದ ರೂಪರೇಷಗಳ ಕುರಿತು ಮಾತನಾಡಿದರು. ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಢಾಲಾಯತ, ವಿಶಾಲಕ್ಷಿ ಹಿರೇಗೌಡ್ರ, ಭಾರತಿ ಬಗಾಡೆ, ನಜಮುನಿಸಾ ಮುರಗೋಡ, ಪುಷ್ಪಾ ಬಿಜಾಪೂರ, ಹಸೀನಾ ಕೊಪ್ಪಳ, ಮರ್ದಾನಬಿ ಬಳ್ಳಾರಿ, ಯುವ ಸಮಿತಿ ಅಧ್ಯಕ್ಷ ವಿಕ್ರಮ.ಎಫ್.ಜಿ, ಜಾಫರ ಢಾಲಾಯತ, ಸಲೀಮ ಕದಡಿ, ಶರಣಪ್ಪ, ಚಾಂದಸಾಬ ಬದಾಮಿ ಹಾಗೂ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪೈಪ್‌ಲೈನ್ ಕಾಮಗಾರಿಯಿಂದ ಭೂ ಕುಸಿತ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪಟ್ಟಣದ ವಾರ್ಡ್ ನಂ.12 ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭೂ ಕುಸಿತ ಕಂಡಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಇತ್ತೀಚಿಗೆ ಪ.ಪಂ ವತಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಪೈಪ್‌ಲೈನ್ ಕಾಮಗಾರಿಗಾಗಿ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ಮುಗಿದ ನಂತರ ಸರಿಯಾಗಿ ಮಣ್ಣು ಮುಚ್ಚದ ಪರಿಣಾಮ ಮಳೆಯಿಂದಾಗಿ ರಸ್ತೆಯ ಮಧ್ಯದಲ್ಲಿ ಭೂ ಕುಸಿತ ಕಂಡಿದೆ ಎನ್ನಲಾಗುತ್ತಿದೆ.
ಭೂ ಕುಸಿತ ಉಂಟಾಗಿರುವುದರಿಂದ ಸಾರ್ವಜನಿಕರು ಈ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುವುದಕ್ಕೆ ಮತ್ತು ಪಾದಾಚಾರಿಗಳಿಗೆ ಭಯ ಸೃಷ್ಟಿಯಾಗಿದೆ. ಕುಸಿತ ರಸ್ತೆಯಲ್ಲಿ ಹೋಗುವಾಗ ಏನಾದರೂ ಅಪಾಯ ಸಂಭವಿಸಿದರೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಅಲ್ಲದೇ ಈ ಭೂ ಕುಸಿತದಿಂದ ಸುತ್ತಮುತ್ತಲಿನ ಮನೆಗಳಲ್ಲಿ ಮಳೆಯ ನೀರು ಒಳಗೆ ಬರುವ ಭಯ ಪ್ರಾರಂಭವಾಗಿದೆ.
ಸುಮಾರು 50 ಕ್ಕೂ ಅಧಿಕ ಅಡಿ ದೂರದ ವರೆಗೆ ಭೂ ಕುಸಿತ ಕಂಡಿದೆ. ಒಂದು ಮಳೆಗೆ ಈ ರೀತಿಯಾದರೆ, ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದ ಮಳೆಗಳದರೆ ಗತಿಯೇನು ಎನ್ನುವಂತಾಗಿದೆ.
ಅಪಾಯ ನಿರ್ಮಾಣವಾಗುವ ಮೊದಲೇ ಪ.ಪಂ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಈ ರಸ್ತೆಯನ್ನು ದುರಸ್ತಿ ಕಾರ್ಯ ಮಾಡಿಸಿಬೇಕು ಎಂದು ನರೇಗಲ್ಲ ಪಟ್ಟಣದ ನಿವಾಸಿ ಆನಂದ ಕೊಟಗಿ ಆಗ್ರಹಿಸಿದ್ದಾರೆ.
ಬೆಳೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯ ಹೊಸ ಪ್ರವಾಹ ಪೀಡಿತ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ನೆರೆ ಮತ್ತು ಮಳೆಗೆ ಹಾನಿಯುಂಟಾಗಿರುವ ಕುರಿತು ಜಂಟಿ ಬೆಳೆ ಸಮೀಕ್ಷೆ ಕೈಗೊಂಡು ಶೀಘ್ರವೇ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಸರ್ಕಾರದಿಂದ ಸಿಗುವ ಪರಿಹಾರವನ್ನು ರೈತರಿಗೆ ಸಕಾಲಕ್ಕೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಂಟಿ ಬೆಳೆ ಸಮೀಕ್ಷೆ ಮತ್ತು ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಗಾರು ಹಂಗಾಮಿನಲ್ಲಿ ಆಗಷ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯ ಏಳು ತಾಲೂಕುಗಳನ್ನು ಅತಿವೃಷ್ಠಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿ ಆಗಿರುವ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲದೇ, ಜಂಟಿ ಬೆಳೆ ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಮುಕ್ತಾಯಗೊಳಿಸಿ ಬೆಳೆ ಹಾನಿಯ ಬಗ್ಗೆ ಪರಿಹಾರ ಪೋರ್ಟಲ್‌ನಲ್ಲಿ ನಮೂದಿಸಬೇಕು ಎಂದರು.
ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ. ಹೀಗಾಗಿ ಜಂಟಿ ಸಮೀಕ್ಷೆ ಕಾರ್ಯದಲ್ಲಿ ಯಾವ ರೈತರು ಬಿಟ್ಟು ಹೋಗದಂತೆ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಈಗಾಗಲೇ ಬೆಳೆ ವಿಮೆ ತುಂಬಿರುವ ರೈತರ ಬೆಳೆ ಮಳೆಗೆ ಹಾಳಾಗಿದ್ದರೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ಶೇ. 99.2 ರಷ್ಟು ಬೆಳೆ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ರೈತರು ಮಾಡಿರುವ ಸಮೀಕ್ಷೆಯಲ್ಲಿ 13,350 ಮರಳಿ ಸರ್ವೇ ಮಾಡಿದೆ. ಬೆಳೆ ಸಮೀಕ್ಷೆ ಕುರಿತು ಸಲ್ಲಿಕೆ ಆಗಿದ್ದ ಸುಮಾರು 396 ಆಕ್ಷೇಪಣಾ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 74 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದ್ದು, ಪ್ರತಿ ಎಕರೆಗೆ 15 ರಿಂದ 20 ಕ್ವಿಂಟಾಲ್ ಇಳುವರಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕಂದಾಯ ಇಲಾಖೆಯ ಅಧಿಕಾರಿಗಳು, ಲೀಡ್ ಬ್ಯಾಂಕ್ ಮುಖ್ಯಸ್ಥರು, ವಿಮಾ ಕಂಪನಿಯ ಪ್ರತಿನಿಧಿಗಳು ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.
ಕಾರ್, ಬೈಕ್ ಮುಖಾಮುಖಿ ಡಿಕ್ಕಿ; ವ್ಯಕ್ತಿ ಸಾವು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಕಾರ್ ಹಾಗೂ ದ್ವಿಚಕ್ರ ವಾಹನದ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಬಳಿ ನಡೆದಿದೆ.
ಡೋಣಿ ಗ್ರಾಮದ ನೀಲಪ್ಪ ತೋಟಗಂಟಿ (55) ಮೃತ ದುರ್ಧೈವಿಯಾಗಿದ್ದು, ಪತ್ನಿ ಯಲ್ಲವ್ವ ತೋಟಗಂಟಿ ಗಂಭೀರ ಗಾಯಗೊಂಡಿದ್ದು, ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕೊರೋನಾದಿಂದ ರಾಜ್ಯದ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಗಳು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಅವರ ಸಂಕಷ್ಟಗಳಿಗೆ ಸರಕಾರ ತಕ್ಷಣ ಸ್ಪಂದಿಸಿ ಪರಿಹಾರ ಘೋಷಣೆ ಮಾಡಬೇಕೆಂದು ಮುಖಂಡ ಸಿ.ವಿ.ಚಂದ್ರಶೇಖರ ಸರಕಾರಕ್ಕೆ ಒತ್ತಾಯಿಸಿದರು.
ಅವರು ಕೊಪ್ಪಳ ತಾಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಸಿ.ವಿ.ಚಂದ್ರಶೇಖರವರ ಸಹಯೋಗದಲ್ಲಿ ಶಿಕ್ಷಕರಿಗೆ ಫುಡ್‌ಕಿಟ್ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನ್ಯಾಯವಾದಿ ರಾಘವೇಂದ್ರ ಆರ್. ಪಾನಘಂಟಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಸರಕಾರ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪರಿಹಾರ ನೀಡಿದೆ. ಆದರೆ ಖಾಸಗಿ ಶಾಲೆಗಳ ಶಿಕ್ಷಕರಿಗೆ ಯಾವ ಪರಿಹಾರ ನೀಡದಿರುವುದು ಖೇದಕರ. ಕೂಡಲೇ ಶಾಸಕರು ಹಾಗೂ ಸಂಸದರು ಸರಕಾರಕ್ಕೆ ಒತ್ತಾಯ ಮಾಡಿ ಶಿಕ್ಷಕರಿಗೆ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಶಾಹಿದ್ ತಹಸೀಲ್ದಾರ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜಗನ್ನಾಥ ಅಲ್ಲಂಪಲ್ಲಿ ಹಾಗೂ ಕಾರ್ಯದರ್ಶಿ ಪ್ರಹ್ಲಾದ ಅಗಳಿ, ದಾನಪ್ಪ ಕವಲೂರ, ಮಹಮ್ಮದ್ ಅಲಿಮುದ್ದೀನ್, ಮಲ್ಲಿಕಾರ್ಜುನ ಚೌಕಿಮಠ, ಶಿವನಗೌಡ ಪಾಟೀಲ, ವೀರಣ್ಣ ಕಂಬಳಿ ಹಾಗೂ ಜಿಲ್ಲೆಯ ಮತ್ತು ತಾಲೂಕಿನ ಪದಾಧಿಕಾರಿಗಳು ಭಾಗವಹಿಸಿದ್ದರು.
ಎ.ಕೆ.ಮುಲ್ಲನವರ್ ಸ್ವಾಗತಿಸಿ ನಿರೂಪಣೆ ಮಾಡಿದರು. ಕಾರ್ಯದರ್ಶಿ ನಾಗರಾಜ ಗುಡಿ ವಂದನಾರ್ಪಣೆ ಮಾಡಿದರು.
ಕುಸಿದ ಮನೆಗಳ ನಷ್ಟ ವೀಕ್ಷಿಸಿದ ಇಂಜಿನಿಯರ್
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಅವುಗಳ ನಷ್ಟ ಪ್ರಮಾಣವನ್ನು ಗದಗನ ಪಂಚಾಯಿತ್ ರಾಜ್ ಇಂಜಿನಿಯರ ವಿಭಾಗದ ಇಂಜಿನಿಯರ ಮಂಜುನಾಥ ಕಲಬುರ್ಗಿ ವೀಕ್ಷಿಸಿದರು.
ಮಂಗಳವರ ಗ್ರಾಮಕ್ಕೆ ಭೇಟಿ ನೀಡಿ ಸುಮಾರು ೧೫ ಮನೆ ಗೋಡೆ ಕುಸಿದು ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಮಾತನಾಡಿದ ಅವರು, ಶೇಕಡಾ ೫೦ ಹಾನಿ ಸಂಭವಿಸಿದ್ದು, ಈ ವರದಿಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಲಾಗುವುದು. ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಮತ್ತು ಕಂದಾಯ ನಿರೀಕ್ಷಕರು ತಹಸೀಲ್ದಾರ್ ಸಮ್ಮುಖದಲ್ಲಿ ನಷ್ಟ ಪರಿಹಾರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮ ಮಾಡುತ್ತಾರೆ ಎಂದರು.
ಗ್ರಾ.ಪಂ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ, ಮಾತನಾಡಿ ತಿಮ್ಮಾಪುರ ಗ್ರಾಮಕ್ಕೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಹಳೆಯ ಮಣ್ಣಿನ ಮನೆಗಳು ಹೆಚ್ಚಿ ಪ್ರಮಾಣದಲ್ಲಿ ಇದ್ದು, ಭಾರಿ ಮಳೆಗೆ ಅವುಗಳ ಗೋಡೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದ್ದು ಕಂದಾಯ ಇಲಾಖೆ ಬೇಗನೆ ಸಂತ್ರಸ್ತರಿಗೆ ಪರಿಹಾರ ಧನವನ್ನು ನೀಡಬೇಕು ಎಂದು ಆಗ್ರಹಿಸಿದರು.
ಮುಂಡರಗಿ ಪೊಲೀಸರ ಕಾರ್ಯಚರಣೆ: ಭಾರೀ ಪ್ರಮಾಣದ ಸ್ಫೋಟಕ ವಶ, ಇಬ್ಬರ ಬಂಧನ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಕ್ರಮವಾಗಿ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಲಾರಿಯೊಂದನ್ನು ಮುಂಡರಗಿ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಒಟ್ಟು 50 ಕೆಜಿ ತೂಕದ 135 ಚೀಲಗಳಂತೆ ಒಟ್ಟು 6750 ಕೆಜಿ ಅಮೋನಿಯಂ ನೈಟ್ರೇಟ್ ರಾಸಾಯನಿಕವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಸ್ಫೋಟಕ ಸಂಗ್ರಹಿಸಿಟ್ಟ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಬಸವರಾಜ ಅಂಗಡಿ ಅವರಿಗೆ ಸೇರಿದ ಗೋದಾಮಿನಿಂದ ಡಂಬಳ ಗ್ರಾಮದ ಚಾಲಕ ಅಶೋಕ ಕೊಂಪಿಕಲ್, ಸೋಮವಾರ ರಾತ್ರಿ 8.45ರ ಸುಮಾರಿಗೆ ಕಲಕೇರಿ ಮಾರ್ಗವಾಗಿ ಬೀಡನಾಳ ಹೊರಟಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಸುಧೀರಕುಮಾರ್ ಬೆಂಕಿ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವನ್ಯಜೀವಿ ಧಾಮಕ್ಕೆ ಕುತ್ತು!
ಕಪ್ಪತಗುಡ್ಡ ಸುತ್ತಮುತ್ತಲಿನಲ್ಲಿ ನೂರಾರು ಜಲ್ಲಿ ಕ್ರಶರ್ ಗಳಿದ್ದು, ಭಾರೀ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡಸಲಾಗುತ್ತದೆ ಎನ್ನುವ ಆರೋಪ ಕೇಳಿಬರುತ್ತಿತ್ತು. ಸೋಮವಾರ ಮುಂಡರಗಿ ಪೊಲೀಸರು ನಡೆಸಿದ ದಾಳಿಯಿಂದ ಅದು ಮತ್ತಷ್ಟು ಖಚಿತವಾಗಿದೆ. ಆ ಮೂಲಕ ಕಪ್ಪತಗುಡ್ಡ ವನ್ಯಜೀವಿ ಧಾಮ ವಲಯ ಅಪಾಯಕ್ಕೆ ಸಿಲುಕಿದಂತಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
ಅಕ್ರಮವಾಗಿ ಸ್ಫೋಟಕ ರಾಸಾಯನಿಕ ಸರಬರಾಜು ಮಾಡುತ್ತಿದ್ದ ವ್ಯಕ್ತಿ, ಯಾರಿಗೆ ಸರಬರಾಜು ಆಗುತ್ತಿತ್ತು ಎನ್ನುವ ಮಾಹಿತಿ ಪತ್ತೆ ಮಾಡಿ ಕ್ರಮ ಜರುಗಿಸಬೇಕು ಎಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.
ಕೊಪ್ಪಳ ನೂತನ ಎಸ್ಪಿಯಾಗಿ ಟಿ.ಶ್ರೀಧರ್ ಅಧಿಕಾರ ಸ್ವೀಕಾರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಿ.ಶ್ರೀಧರ್ ಮಂಗಳವಾರ ಅಧಿಕಾರ ವಹಿಸಿಕೊಂಡರು.
ಮೊನ್ನೆಯಷ್ಟೆ ಕೊಪ್ಪಳ ಎಸ್ಪಿ ಜಿ.ಸಂಗೀತಾರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ಸರಕಾರ ಕೊಪ್ಪಳಕ್ಕೆ ರಾಜ್ಯ ಗುಪ್ತಚರ ಇಲಾಖೆಯಲ್ಲಿದ್ದ ಟಿ.ಶ್ರೀಧರರನ್ನು ಎಸ್ಪಿಯಾಗಿ ವರ್ಗಾವಣೆ ಮಾಡಿತ್ತು.
ಮೂಲತಃ ಬಳ್ಳಾರಿ ಜಿಲ್ಲೆಯ ಟಿ.ಶ್ರೀಧರ, ಅಧಿಕಾರ ಸ್ವೀಕರಿಸಿದ ನಂತರ ಕೊಪ್ಪಳ ಜಿಲ್ಲೆಯ ವಿವಿಧ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಹನಿ/ತುಂತುರು ನೀರಾವರಿ ವಿತರಕರ ಬದುಕು ಬೀದಿಗೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯದ ಸೂಕ್ಷ್ಮ ನೀರಾವರಿ ಯೋಜನೆಯ ಅನುಷ್ಠಾನದಲ್ಲಿ ಏಕಾಏಕಿ ವಿತರಕರ ಬಿಲ್‌ಗಳನ್ನು ರದ್ದುಪಡಿಸಿದ್ದರಿಂದ ವಿತರಕರ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವೆಂಕನಗೌಡ ಮೇಟಿ ಅಳಲು ತೋಡಿಕೊಂಡರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 1991ರಿಂದ ರೈತರಿಗಾಗಿ ರಾಜ್ಯದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮ ಜಾರಿಗೆ ಬಂದಾಗಿನಿಂದ ವಿತರಕರಾಗಿರುವ ನಾವು, ಕಾರ್ಯಕ್ರಮವನ್ನು ರೈತರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಹಗಲಿರುಳು ಎನ್ನದೆ ಇಲಾಖೆಯ ಜೊತೆ ಕೈ ಜೋಡಿಸಿ ಶ್ರಮಿಸಿದ್ದೇವೆ. ಜೊತೆಗೆ ಇದರಲ್ಲೇ ಭವಿಷ್ಯ ಕಂಡುಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಈಗ ಏಕಾಏಕಿ ನಮ್ಮ ಬಿಲ್‌ಗಳು ಬೇಕಿಲ್ಲ ಎಂದು ಸರಕಾರ ಹೇಳಿರುವುದರಿಂದ ಮುಂದೇನು ಎನ್ನುವ ಪ್ರಶ್ನೆ ಕಣ್ಮುಂದೆ ಬಂದು ತೀವ್ರ ಆತಂಕಕ್ಕೊಳಗಾಗಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 4 ಸಾವಿರ ವಿತರಕರಿದ್ದು, ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಂಪನಿಗಳ 50 ಜನ ವಿತರಕರಿದ್ದೇವೆ. ಇದುವರೆಗೂ ಸರಕಾರದಿಂದ ಬರಬೇಕಾದ 14-15 ಕೋಟಿ ರೂಪಾಯಿ ಬಾಕಿ ಇದೆ. ಈಗ ನಮ್ಮ ಬಿಲ್‌ಗಳನ್ನೇ ರದ್ದುಗೊಳಿಸಿರುವುದರಿಂದ ಚಿಂತಿತರಾಗಿದ್ದೇವೆ ಎಂದು ದುಃಖ ತೋಡಿಕೊಂಡರು.
ಈ ವೇಳೆ ಸಂಘದ ಬಸವರಾಜ ಅಳವಂಡಿ, ಮಂಜುನಾಥ ಮಾಳೆಕೊಪ್ಪ ಇತರರು ಇದ್ದರು.

