Home Blog

ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ದಾಖಲೆ ಬೆಳವಣಿಗೆ; ಹೆಚ್ ಡಿ ಕುಮಾರಸ್ವಾಮಿ

0

ಪುಣೆ:- ದೇಶಿಯ ಆಟೋಮೊಬೈಲ್‌ ಕ್ಷೇತ್ರವು ನಾಗಾಲೋಟದಲ್ಲಿ ಬೆಳವಣಿಗೆ ಸಾಧಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿಕೆ ಕುಮಾರಸ್ವಾಮಿ ಹೇಳಿದ್ದಾರೆ.

ಪುಣೆಯಲ್ಲಿ ಮಂಗಳವಾರ ಆಯೋಜಿಸಲಾದ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ (SIAT)–2026ರ ಮೂರು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುರಕ್ಷಿತ, ಸುಸ್ಥಿರ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಚಲನಶೀಲತಾ ಪರಿಹಾರಗಳತ್ತ ಭಾರತ ಸಾಧಿಸುತ್ತಿರುವ ಬೆಳವಣಿಗೆ ಮಹತ್ವದ ಮೈಲಿಗಲ್ಲಾಗಿದೆ ಎಂದರು.

ಭಾರತೀಯ ಆಟೋಮೊಬೈಲ್ ಕ್ಷೇತ್ರದ ವೇಗದ ಬೆಳವಣಿಗೆಯನ್ನು ಉಲ್ಲೇಖಿಸಿದ ಸಚಿವರು, 2023–24ನೇ ಹಣಕಾಸು ವರ್ಷದಲ್ಲಿ 28.4 ಮಿಲಿಯನ್ ಯೂನಿಟ್‌ಗಳಾಗಿದ್ದ ವಾಹನ ಉತ್ಪಾದನೆ 2024–25ರಲ್ಲಿ 31 ಮಿಲಿಯನ್ ಯೂನಿಟ್‌ಗಳಿಗೆ ಏರಿಕೆಯಾಗಿದೆ. ಅದೇ ಅವಧಿಯಲ್ಲಿ ರಫ್ತು 4.5 ಮಿಲಿಯನ್ ಯೂನಿಟ್‌ಗಳಿಂದ 5.36 ಮಿಲಿಯನ್ ಯೂನಿಟ್‌ಗಳಿಗೆ ಹೆಚ್ಚಾಗಿದೆ. ಈ ಅಂಕಿ-ಅಂಶಗಳು ಸ್ವಚ್ಛ, ಸ್ಪರ್ಧಾತ್ಮಕ ಮತ್ತು ಸುಸ್ಥಿರ ವಾಹನ ವಲಯವನ್ನು ಉತ್ತೇಜಿಸುವಲ್ಲಿ ಕೇಂದ್ರ ಸರ್ಕಾರದ ನೀತಿಗಳ ಯಶಸ್ಸನ್ನು ತೋರಿಸುತ್ತವೆ ಎಂದು ಹೇಳಿದರು.

ಭಾರತದ ಆರ್ಥಿಕ ಪ್ರಗತಿಯ ಬಗ್ಗೆ ಮಾತನಾಡಿದ ಅವರು, 4.18 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಭಾರತ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲೇ ಮೂರನೇ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂದರು. 2030ರ ವೇಳೆಗೆ ದೇಶದ ಜಿಡಿಪಿ 7.3 ಟ್ರಿಲಿಯನ್ ಡಾಲರ್ ಮೈಲಿಗಲ್ಲು ತಲುಪುವ ಸಾಮರ್ಥ್ಯ ಹೊಂದಿದ್ದು, ಉತ್ಪಾದನೆ ಮತ್ತು ಬೆಳವಣಿಗೆ ಸಮತೋಲಿತ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, 2070ರ ವೇಳೆಗೆ ಇಂಗಾಲದ ನಿವ್ವಳ ಶೂನ್ಯ ಹೊರಸೂಸುವಿಕೆ ಸಾಧಿಸುವ ಗುರಿಯತ್ತ ಭಾರತ ಸ್ಪಷ್ಟ ಮತ್ತು ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ರೂಪಿಸಿದೆ. ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ದೃಷ್ಟಿಕೋನವು ಮುಂದುವರಿದ ಉತ್ಪಾದನಾ ವಲಯಗಳನ್ನು ಬಲಪಡಿಸಿ, ಭಾರತದ ಭವಿಷ್ಯದ ಬೆಳವಣಿಗೆ ಮತ್ತು ಜಾಗತಿಕ ಸ್ಥಾನವನ್ನು ಮತ್ತಷ್ಟು ದೃಢಪಡಿಸುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಹೈಬ್ರಿಡ್ ಕಾಡು ಬೆಕ್ಕು ಪತ್ತೆ

0

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಇಟಗಿ ಹಾಗೂ ಅಬ್ಬಿಗೇರಿ ಗ್ರಾಮದ ಬಳಿ ಎರಡು ಹೈಬ್ರಿಡ್ ಕಾಡು ಬೆಕ್ಕುಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಚ್ಚರಿ ಮೂಡಿಸಿದೆ. ಹೈಬ್ರಿಡ್ ಕಾಡು ಬೆಕ್ಕು ರಾಜ್ಯದಲ್ಲಿ ಮೊದಲ ಬಾರಿಗೆ ನೆಲಮಂಗಲ ತಾಲೂಕಿನ ಮರಳುಕುಂಟೆ ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿತ್ತು. ನಂತರ ರೋಣ ತಾಲೂಕಿನಲ್ಲಿ ಈ ವಿಧದ ಕಾಡು ಬೆಕ್ಕು ಕಂಡುಬಂದಿದೆ. ರೋಣ ಅರಣ್ಯಾಧಿಕಾರಿ ಅನ್ವರ ಕೊಲ್ಹಾರ ತಮ್ಮ ತಂಡದೊಂದಿಗೆ ವನ್ಯಜೀವಿಗಳ ಗಣತಿ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹೈಬ್ರಿಡ್ ಕಾಡು ಬೆಕ್ಕುಗಳು ಪತ್ತೆಯಾಗಿವೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ತಿಳಿಸಿದ್ದಾರೆ.

ನೌಕರರ ಸಂಘದ ವಾರ್ಷಿಕ ಮಹಾಸಭೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಎನ್‌ಎಂಎಎಸ್ ಉಚಿತ ತರಬೇತಿ ಸಮಾರೋಪ ಸಮಾರಂಭವು ಸೋಮವಾರ ಪಟ್ಟಣದಲ್ಲಿ ಜರುಗಿತು.

ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ತಾಲೂಕಾ ಶಾಖೆಯಿಂದ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಸಂಘದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಅದರಲ್ಲಿ ಎನ್‌ಎಂಎಎಸ್ ಉಚಿತ ತರಬೇತಿಯೂ ಒಂದಾಗಿದೆ. ಎನ್‌ಎಂಎಎಸ್‌ನಿಂದ ಮಕ್ಕಳಿಗೆ ಹೆಚ್ಚು ಉಪಯೋಗವಾಗಲಿದ್ದು, ಅವರ ಭವಿಷ್ಯಕ್ಕೆ ಸಹಾಯಕಾರಿಯಾಗುತ್ತದೆ. ಲಕ್ಷ್ಮೇಶ್ವರ ತಾಲೂಕು ಶಾಖೆಯು ಗದಗ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಮಾದರಿಯೆಂದು ಸಂತಸ ವ್ಯಕ್ತಪಡಿಸಿದರು.

ನಿಕಟಪೂರ್ವ ಅಧ್ಯಕ್ಷ ರವಿ ಗುಂಜೀಕರ ಮಾತನಾಡಿ, ನೌಕರರಿಗೆ ಅನುಕೂಲವಾಗುವ ರೀತಿ ಸಂಘಟನೆಯ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ತಾಲೂಕಾಧ್ಯಕ್ಷ ಗುರುರಾಜ ಹವಳದ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ನಾಣಕಿ ನಾಯಕ, ಎಂ.ಎ. ನಿಟ್ಟಾಲಿ, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್, ಜಿಲ್ಲಾ ಕಾರ್ಯದರ್ಶಿ ಮಲಕಶೆಟ್ಟಿ, ಆಯ್.ಎ. ಗಾಡಗೋಳಿ, ತಾಲೂಕಾ ಕಾರ್ಯದರ್ಶಿ ಎಂ.ಎ. ನದಾಫ್, ರಾಜ್ಯ ಪರಿಷತ್ ಸದಸ್ಯ ಎ.ಬಿ. ಗೌಡರ, ಎಮ್.ಡಿ. ವಾರದ, ಎಂ.ಎಸ್. ಹಿರೇಮಠ, ಎಲ್.ಎನ್. ನಂದೆಣ್ಣವರ, ಮಂಜುನಾಥ ಕೊಕ್ಕರಗುಂದಿ, ಬಿ.ಎಂ. ಯರಗುಪ್ಪಿ, ಫಕೀರಪ್ಪ ಹೂಗಾರ್, ಮಹಮ್ಮದ್‌ಹನೀಫ್ ಶಿರಹಟ್ಟಿ, ಎ.ಎಮ್. ಅಕ್ಕಿ, ಪ್ರಶಾಂತ ಸನದಿ ಇದ್ದರು. ನವೀನ ಅಂಗಡಿ ನಿರೂಪಿಸಿದರು.

ತಹಸೀಲ್ದಾರರ ಕೊಲೆಗೆ ಯತ್ನ ಆರೋಪಿಗಳಿಬ್ಬರ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ: ರೋಣ ತಹಸೀಲ್ದಾರ ಕಚೇರಿಯಲ್ಲಿ ದಂಡಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಕೆ ಅವರ ಮೇಲೆ ಆರೋಪಿಗಳಿಬ್ಬರು ಭಾನುವಾರ ತಡರಾತ್ರಿ ಕೊಲೆಗೆ ಯತ್ನಿಸಿದ್ದು, ಸಕಾಲದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಿಡಬ್ಲುಡಿ ಪ್ರವಾಸಿ ಮಂದಿರದ ಆವರಣದಲ್ಲಿರುವ ತಹಸೀಲ್ದಾರರ ಮನೆಗೆ ಭಾನುವಾರ ರಾತ್ರಿ ನುಗ್ಗಿದ ಆರೋಪಿಗಳು ತಹಸೀಲ್ದಾರ ನಾಗರಾಜ ಕೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಕೊಲೆಗೆ ಯತ್ನ ನಡೆಸಿದ್ದಾರೆ ಎಂದು ತಹಸೀಲ್ದಾರ ನಾಗರಾಜ ಕೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿ ಆರೋಪಿಗಳಾದ ಪಟ್ಟಣದ ಹನ್ಮಂತ ಚಲವಾದಿ ಹಾಗೂ ಶರಣಪ್ಪ ಗದಗಿನ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಹನ್ಮಂತ ಚಲವಾದಿ ಮೇಲೆ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು. ಆರೋಪಿ ಆಗಾಗ ತಹಸೀಲ್ದಾರ ಕಚೇರಿಗೆ ತೆರಳಿ ತನ್ನ ಮೇಲೆ ಇರುವ ಪ್ರಕರಣಗಳನ್ನು ಖುಲಾಸೆಗೊಳಿಸುವಂತೆ ಒತ್ತಾಯಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದ ಎನ್ನಲಾಗಿದ್ದು, ಪ್ರಕರಣ ಖುಲಾಸೆಗೊಳಿಸದಿದ್ದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ತಹಸೀಲ್ದಾರ ನಾಗರಾಜರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಆದರೆ ತಹಸೀಲ್ದಾರ ನಾಗರಾಜ ಕೆ ಯಾವುದಕ್ಕೂ ಜಗ್ಗದೆ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಇದನ್ನು ಸಹಿಸದ ಆರೋಪಿಗಳು ಭಾನುವಾರ ತಡರಾತ್ರಿ ಅವರ ನಿವಾಸಕ್ಕೆ ತೆರಳಿ ಕತ್ತು ಹಿಸುಕಿ ಅವರ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಅಂಚೆ ಆಧೀಕ್ಷಕರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಅಂಚೆ ಇಲಾಖೆಗೆ ಅಂಚೆ ಆಧೀಕ್ಷಕರಾಗಿ ಆಗಮಿಸಿದ ಎಸ್.ಎಸ್. ಶಿರಹಟ್ಟಿ ಅವರನ್ನು ಹಾಲುಮತ ಮಹಾಸಭಾ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಯುವ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ, ಮುತ್ತು ಜಡಿ, ರಾಘು ವಗ್ಗನವರ, ಹೇಮಂತ ಗಿಡ್ಡಹನಮಣ್ಣನವರ, ಮಂಜು ಜಡಿ, ಸತೀಶ ಗಿಡ್ಡಹನಮಣ್ಣನವರ, ರವಿ ಜೋಗಿನ, ಸುರೇಶ ಹೆಬಸೂರ, ಕುಮಾರ ಮಾರನಬಸರಿ, ಪರಶುರಾಮ ಜಡಿ, ಸೋಮು ಮೇಟಿ, ಸೋಮು ಬಿಂಗಿ, ಅಂಚೆ ಇಲಾಖೆ ಅಧಿಕಾರಿಗಳಾದ ವೆಂಕಟೇಶ ಕೊಳ್ಳಿ, ಎಂ.ಟಿ. ಕರಿಗಾರ, ನವೀನ ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲೆಯ ಹೆಸರನ್ನು ನಾಡಿನಾದ್ಯಂತ ಪಸರಿಸಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಕುವೆಂಪು ಅವರು ಹೇಳಿದಂತೆ ಗದಗ ಸರ್ವ ಜನಾಂಗದ ಶಾಂತಿಯ ತೋಟ ಎಂಬುದಕ್ಕೆ ಸಾಕ್ಷಿಯಾಗಿದ್ದು ಕಲೆ ಎಂಬುದನ್ನು ಗದಗ ಜನರಿಂದ ತಿಳಿದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಭೀಷ್ಮಕೆರೆ ಆವರಣದಲ್ಲಿ ಸೋಮವಾರ ಸಾಯಂಕಾಲ ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿನ ಭೀಷ್ಮ ಕೆರೆ ಪ್ರವಾಸಿ ತಾಣವಾಗಿದ್ದು, ಕಪ್ಪತಗುಡ್ಡದಲ್ಲಿ ಸಫಾರಿ ವ್ಯವಸ್ಥೆ ಮಾಡಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಪರಿಸರದ ಅರಿವು ಮೂಡಿಸುವ ಉದ್ದೇಶದೊಂದಿಗೆ ಒಮ್ಮೆಯಾದರೂ ಭೇಟಿ ನೀಡಲು ತಿಳಿಸಿದ ಸಚಿವರು, ಲಕ್ಕುಂಡಿಯಲ್ಲಿ ಸದ್ಯ ಚಿನ್ನ ದೊರೆಯುತ್ತಿದ್ದು, ಚಿನ್ನಕ್ಕಿಂತ ಹೆಚ್ಚಿನ ಬೆಲೆಯ ಅಲ್ಲಿನ ಶಿಲ್ಪಕಲೆಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ. ಇಂದು ಚಿತ್ರಕಲಾ ಶಿಕ್ಷಕರ ಸಂಘದಿಂದ ಆಯೋಜಿಸಲಾದ ಚಿತ್ರಕಲಾ ಪ್ರದರ್ಶನ ಮನಸೂರೆಗೊಂಡಿದ್ದು, ಚಿತ್ರಕಲೆಯನ್ನು ಅಭಿವ್ಯಕ್ತಪಡಿಸಿದ ಚಿತ್ರಕಲಾ ಶಿಕ್ಷಕರ ಸಂಘಕ್ಕೆ 1.5 ಲಕ್ಷ ರೂ.ಗಳ ಅನುದಾನವನ್ನು ಪ್ರೋತ್ಸಾಹ ಧನವನ್ನಾಗಿ ಒದಗಿಸಲು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣು ಗೊಗೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸರ್ವರನ್ನೂ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲಾ ವಿದ್ಯಾರ್ಥಿಗಳು ಹಾಗೂ ಜಾನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬಾಕ್ಸ್
ಜಿಲ್ಲೆಯಲ್ಲಿ ಅನೇಕ ಕಲಾವಿದರಿದ್ದು, ಅದನ್ನು ಅಭಿವ್ಯಕ್ತಪಡಿಸುವ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಕಲಾವಿದರು ಇದರ ಸದುಪಯೋಗ ಪಡೆದುಕೊಂಡು ಗದಗ ಜಿಲ್ಲೆಯ ಹೆಸರನ್ನು ನಾಡಿನಾದ್ಯಂತ ಪಸರಿಸಬೇಕೆಂದು ಎಚ್.ಕೆ. ಪಾಟೀಲ ಕರೆ ನೀಡಿದರು.

ಲಕ್ಕುಂಡಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 77ನೇ ಗಣರಾಜ್ಯೋತ್ಸವವನ್ನು ಇಲ್ಲಿಯ ವಿವಿಧ ಸಂಘ-ಸಂಸ್ಥೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ನೆರವೇರಿಸಿದರು. ಇದಕ್ಕೂ ಪೂರ್ವ ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮಕ್ಕಳು ಸಂವಿಧಾನ ಪೀಠಿಕೆಯನ್ನು ಓದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನಂತರ ವಿವಿಧ ಶಾಲೆಯ ಮಕ್ಕಳಿಂದ ದೇಶ ಭಕ್ತಿಯ ಗೀತೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಡಾ. ಬಿ.ಆರ್. ಅಂಬೇಡ್ಕರರು ಈ ದೇಶಕ್ಕೆ ನೀಡಿದ ಸಂವಿಧಾನದಿಂದ ಎಲ್ಲ ಕ್ಷೇತ್ರಗಳಲ್ಲಿ ಸಮಾನವಾದ ಅಧಿಕಾರ, ಉದ್ಯೋಗ, ಮೂಲಭೂತ ಸೌಲಭ್ಯಗಳು ದೊರೆತಿದ್ದು, ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು ಎಂದರು.

ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾ.ಪಂ ಸದಸ್ಯರು, ಪಿ.ಡಿ.ಒ ಅಮೀರಾನಾಯಕ, ಕಾರ್ಯದರ್ಶಿ ಎಂ.ಎ. ಗಾಜಿ ಸಿಬ್ಬಂದಿ ಹಾಜರಿದ್ದರು.

ಸರಕಾರಿ ಬಾಲಕಿಯರ ಪ್ರೌಢಶಾಲೆ, ಸರಕಾರಿ ಮಾದರಿಯ ದ್ವಿಭಾಷಾ ಪ್ರಾಥಮಿಕ ಶಾಲೆ, ಕೆ.ಜಿ.ಎಸ್ ಸರಕಾರಿ ಉರ್ದು ಶಾಲೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರಾಥಮಿಕ ಡಿ.ಪಿ.ಇ.ಪಿ ಶಾಲೆ, ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ, ಜನತಾ ವಿದ್ಯಾವರ್ಧಕ ಸಂಸ್ಥೆ, ಬಿ.ಎಚ್. ಪಾಟೀಲ ಸಂಯುಕ್ತ ಪದವಿಪೂರ್ವ ಕಾಲೇಜು, ವಿವಿಧ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 1, 2, 3, ಲಕ್ಷ್ಮೀ ನಾರಾಯಣ ಸೌಹಾರ್ದ ಸಹಕಾರಿ ಸಂಘ ಸೇರಿದಂತೆ ವಿವಿಧ ಸಂಘಗಳಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರಕಾರಿ ಮಾದರಿ ದ್ವಿಭಾಷಾ (ಆಂಗ್ಲ) ಪ್ರಾಥಮಿಕ ಶಾಲೆಯ 1ನೇ ತರಗತಿ ವಿದ್ಯಾರ್ಥಿ ಸಾಹಿತ್ಯ ನಂದಪ್ಪನವರ ಸಂವಿಧಾನ ಪೀಠಿಕೆಯನ್ನು ನಿರರ್ಗಳವಾಗಿ ಇಂಗ್ಲೀಷ್‌ನಲ್ಲಿ ಹೇಳಿದ್ದು ಎಲ್ಲರ ಗಮನ ಸೆಳೆಯಿತು.

ಶ್ರೀಮಾತೆ ಶಾರದಾ ದೇವಿ ಸ್ತ್ರೀತನದ ಶಕ್ತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರೀಮಾತೆ ಶಾರದಾ ದೇವಿ ಎಂದ ಕೂಡಲೇ ಕಣ್ಮುಂದೆ ಹಾಯುವುದು ಅವರ ಪರಮಪವಿತ್ರವಾದ ಜೀವನ. ತಮ್ಮ ಆಧ್ಯಾತ್ಮಿಕ ಶಕ್ತಿ, ಸರಳ ಬದುಕಿನ ಮೂಲಕ ಗುರುಮಾತೆಯ ಸ್ಥಾನ ಪಡೆದವರು ಎಂದು ಕನ್ನಡ ಉಪನ್ಯಾಸಕಿ ರೇಶ್ಮಿ ಮೇಲಗಿರಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಸೋಮವಾರ ಹಮ್ಮಿಕೊಂಡ ಶ್ರೀಮಾತೆ ಶಾರದಾ ದೇವಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಢನಂಬಿಕೆ, ಹೆಣ್ಣುಮಕ್ಕಳ ಅಸಹಾಯಕತೆ, ಸ್ತ್ರೀಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಶಾರದಾ ದೇವಿ ಮೌನವಾಗಿಯೇ ಈ ಎಲ್ಲ ನಿರ್ಬಂಧಗಳನ್ನು ಎದುರಿಸಿ ಬೆಳೆದರು. ಶ್ರೀಮಾತೆ ಬಾಲ್ಯದಿಂದಲೂ ತಮ್ಮ ಸ್ತ್ರೀತನದೊಳಗಿನ ಶಕ್ತಿಯನ್ನು ಪ್ರದರ್ಶಿಸುತ್ತಲೇ ಬೆಳೆದವರು. ಅವರ ನಿತ್ಯ ಜೀವನದಲ್ಲಿ ಪೂಜೆ, ಜಪಕ್ಕಿಂತಲೂ ಹೆಚ್ಚಿನ ಮನ್ನಣೆ ಸೇವಾಕಾರ್ಯಗಳಿಗೆ ಮೀಸಲಾಗಿರುತ್ತಿತ್ತು. ವಾಸ್ತವದಲ್ಲಿ ರಾಮಕೃಷ್ಣ ಪರಮಹಂಸರ ಸಾಧನೆ ಪರಿಪೂರ್ಣಗೊಂಡದ್ದು ಶಾರದಾ ದೇವಿಯವರ ಸಹಕಾರದಿಂದಲೇ ಎಂದು ರಾಮಕೃಷ್ಣರೇ ಹೇಳಿಕೊಂಡಿದ್ದರಂತೆ. ಸ್ವಾಮಿ ವಿವೇಕಾನಂದರು ಶಾರದೇವಿಯವರನ್ನು ಮಾತೃಸ್ವರೂಪ ಸ್ಥಾನದಲ್ಲಿ ಕಾಣುತ್ತಿದ್ದರೆಂದು ಅಭಿಪ್ರಾಯಪಟ್ಟರು.

ನಿವೃತ್ತ ಶಿಕ್ಷಕಿ ಸಾವಿತ್ರಿಬಾಯಿ ನೇಕಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಾರ್ವತಿ ಪಾಟೀಲ, ಅನ್ನಪೂರ್ಣ ಓದುನವರ, ಗಾಯತ್ರಿ ಓದುನವರ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತರಾದ ನಿರ್ಮಲಾ ಅರಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವೇದಿಕೆಯ ಅಧ್ಯಕ್ಷೆ, ಸಾಹಿತಿ ಲಲಿತಾ ಕೆರಿಮನಿ, ಪ್ರತಿಮಾ ಮಹಾಜನಶೆಟ್ಟರ್, ಲತಾ ತಟ್ಟಿ, ಶಾಂತಾ ಅಬ್ಬಿಗೇರಿ, ಕಾಂಚನಮಾಲಾ ಹಸರೆಡ್ಡಿ, ನೀಲಕ್ಕ ಬೂದಿಹಾಳ, ಲಲಿತಾ ಲಮಾಣಿ, ಅರುಂಧತಿ ಬಿಂಕದಕಟ್ಟಿ, ಜಯಶ್ರೀ ಮತ್ತಿಕಟ್ಟಿ, ವೀಣಾ ಕುಂಬಿ, ಅಶ್ವಿನಿ ಅಂಕಲಕೋಟಿ, ದೇವಕ್ಕ ಕೊಡ್ಲಿವಾಡ, ರತ್ನಾ ಕರ್ಕಿ, ಶಾರದಾ ಮಹಾಂತಶೆಟ್ಟರ ಮುಂತಾದವರಿದ್ದರು. ಶೈಲಾ ಬಿಂಕದಕಟ್ಟಿ, ಶೋಭಾ ಗಾಂಜಿ, ಮಹಾನಂದಾ ಕೊಣ್ಣೂರ ನಿರೂಪಿಸಿದರು.

ವಿಜ್ರಂಭಣೆಯ ಶ್ರೀ ಬೀರಲಿಂಗೇಶ್ವರ ಜಾತ್ರೆ

ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ತಿಮ್ಮಾಪೂರ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜ್ರಂಭಣೆಯಿಂದ ನಡೆಯಿತು. ಬೆಳಿಗ್ಗೆ ಶ್ರೀದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಅನೇಕ ಪೂಜಾ ಕೈಂಕರ್ಯಗಳು ನಡೆದವು.

ಬೆಳಿಗ್ಗೆ 10 ಗಂಟೆಗೆ ಸಕಲ ಮಂಗಳ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ ಗಂಗಾ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವದ ಮೂಲಕ ಸಂಚರಿಸಿ ಗುಡಿಯನ್ನು ತಲುಪಿತು. ಮಧ್ಯಾಹ್ನ ಮಹಾ ದಾಸೋಹದಲ್ಲಿ ನೂರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.

ರಾತ್ರಿ ಶಾಲಾ ಮಕ್ಕಳಿಂದ ಜಾನಪದ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಅವರು ದೇವಸ್ಥಾನಕ್ಕೆ ದೇಣಿಗೆ ನೀಡಿದ ದಾನಿಗಳಾದ ರಾಮಣ್ಣ ಕಂಕರಿ, ಮಾದೇವಪ್ಪ ಇದ್ಲಿ ಹನುಮಪ್ಪ ದೇವರವರ, ಶ್ರೀಕಾಂತ ಸೋಂಟಿ ರಾಮಣ್ಣ ಡಂಬಳ ನಾಗಪ್ಪ ಆಲೂರು, ಶರಣಪ್ಪ ಗಾಜಿ ಇವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬೀರಲಿಂಗೇಶ್ವರ ಜಾತ್ರಾ ಕಮಿಟಿ ಸದಸ್ಯರಾದ ರಮೇಶ ಬನಾಪೂರ, ಬಸಪ್ಪ ದೇವರವರ, ಶಿವಾನಂದ ಡಂಬಳ, ಚಂದ್ರು ಆಲೂರ, ಹನುಮಪ್ಪ ಬಿಚಗಲ್ಲ, ಮಾರುತಿ ಕಟಗಿ, ಬಸವರಾಜ ಇದ್ಲಿ, ಮಂಜುನಾಥ ಕೊಪ್ಪಳ, ಶ್ರೀಕಾಂತ ಬಾಬರಿ, ಮಾರುತಿ ಹಚ್ಚಪ್ಪನವರ, ಬೀರಪ್ಪ, ಬಂಡಿಹಾಳ, ಮಲ್ಲಪ್ಪ ಡಂಬಳ, ಬೀರಪ್ಪ ಬನಾಪೂರ, ಪ್ರಕಾಶ ಯತ್ನಟ್ಟಿ ಮುಂತಾದವರಿದ್ದರು.

ರಾಜೀವ್ ಗೌಡನನ್ನು ಜೈಲಿಗೆ ಕರೆದೊಯ್ಯವಾಗ ಭಾರೀ ಹೈಡ್ರಾಮಾ; ವಾಹನ ಅಡ್ಡಹಾಕಿದ ಬೆಂಬಲಿಗರು, ಪೊಲೀಸರಿಂದ ಲಾಠಿ ಚಾರ್ಜ್!

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬಿಜೆಪಿ ಮುಖಂಡ ರಾಜೀವ್ ಗೌಡನ ಜಾಮೀನು ಅರ್ಜಿಯನ್ನು ಶಿಡ್ಲಘಟ್ಟ ಜೆಎಂಎಫ್​ಸಿ ಕೋರ್ಟ್ ವಜಾಗೊಳಿಸಿ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ಜೈಲಿಗೆ ಕರೆದೊಯ್ಯುವ ವೇಳೆ ಕೋರ್ಟ್​​ ಮುಂಭಾಗದಲ್ಲಿ ರಾಜೀವ್ ಗೌಡ ಬೆಂಬಲಿಗರು ತೊಂದರೆ ಉಂಟುಮಾಡಿದ್ದು, ರಾಜೀವ್ ಗೌಡನ ವಾಹನವನ್ನು ಅಡ್ಡಹಾಕಿ ಜನರು ಜೈಕಾರ ಮಾಡಲು ಯತ್ನಿಸಿದರು. ಕೂಡಲೇ ಅಲರ್ಟ್ ಆದ ಪೊಲೀಸರು, ಲಾಠಿ ರುಚಿ ತೋರಿಸಿ ಗುಂಪು ಚದುರಿಸಿದರು. ಬಳಿಕ ರಾಜೀವ್ ಗೌಡನನ್ನು ಜೈಲಿಗೆ ಕರೆದೊಯ್ದರು.

ಜಾಮೀನು ನೀಡಲು ಕೋರ್ಟ್ ನಿರಾಕರಣೆ; ಧಮ್ಕಿ ಪುಢಾರಿ ರಾಜೀವ್‌ ಗೌಡಗೆ ಜೈಲು!

ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ರಾಜಕೀಯ ಪುಢಾರಿ ರಾಜೀವ್ ಗೌಡನನ್ನು ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು ಜೆಎಂಎಫ್‌ಸಿ ಕೋರ್ಟ್ ಮುಂದೆ ಹಾಜರುಪಡಿಸಿದರು.

ಆರೋಪಿಯ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರೂ, ತನಿಖೆ ಇನ್ನೂ ಮುಂದುವರಿಯಬೇಕಿದ್ದು ಆರೋಪಿಯ ಮೊಬೈಲ್ ಹಾಗೂ ಪರಾರಿಯಾಗಲು ಬಳಸಿದ ಕಾರನ್ನು ವಶಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ವಾದಿಸಿದರು. ವಾದಗಳನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ರಾಜೀವ್ ಗೌಡನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಇದೇ ಪ್ರಕರಣದಲ್ಲಿ ರಾಜೀವ್ ಗೌಡಗೆ ಆಶ್ರಯ ನೀಡಿದ್ದ ಮಂಗಳೂರು ಉದ್ಯಮಿ ಮೈಕಲ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

 

error: Content is protected !!