ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎಲ್ಲರಿಗೂ ವಿದ್ಯೆ ಮುಖ್ಯ. ವಿದ್ಯೆ ಇಲ್ಲದಿದ್ದರೆ ಜೀವನವೇ ಶೂನ್ಯ. ಕಾರಣ ಹಾಲುಮತ ಸಮಾಜ ಬಾಂಧವರು ಮಕ್ಕಳಿಗೆ ಶಿಕ್ಷಣ ದೊರಕಿಸಲು ಆದ್ಯತೆ ನೀಡಬೇಕು. ಹಾಲುಮತ ಸಮಾಜದಲ್ಲಿ ಸಾಕಷ್ಟು ವಿದ್ಯಾವಂತರಿದ್ದು, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಪಾಲ್ಗೊಂಡು ಸಮಾಜ ಸಂಘಟನೆಗೆ ಒತ್ತು ನೀಡಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಚನ್ನಮ್ಮನ ವನದಲ್ಲಿ ಲಕ್ಷ್ಮೇಶ್ವರ ತಾಲೂಕು ಕನಕ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಹಾಲುಮತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಧಾರವಾಡದ ಡಾ. ಬಸವರಾಜ ದೇವರು ಮಹಾಸ್ವಾಮಿಗಳು ಮತ್ತು ಹುಲ್ಲೂರು ಅಮೋಘಿಮಠದ ಸಿದ್ದಯ್ಯ ಅಮೋಘಿಮಠ ಸ್ವಾಮಿಗಳ ಸಾನ್ನಿಧ್ಯದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಾ ಕನಕ ನೌಕರರ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿದ ಶಾಂತಪ್ಪ ಮಾತನಾಡಿ, ಅನುತ್ತೀರ್ಣರಾದ ತಕ್ಷಣ ಇಡೀ ಜೀವನವೇ ಮುಗಿಯುವುದಿಲ್ಲ. ಮತ್ತೆ ಪರೀಕ್ಷೆ ಬರೆದು ಪಾಸಾಗಿ ಬದುಕಿನಲ್ಲಿ ಸಾಧನೆ ಮಾಡುವುದೇ ಮುಖ್ಯ. ಸೋಲುಗಳನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, 1ರಿಂದ 4ನೇ ತರಗತಿವರೆಗೆ ಕನ್ನಡದಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು. ನಂತರ ಇಂಗ್ಲೀಷ್ ಭಾಷೆಯ ಶಿಕ್ಷಣ ಕೊಡಿಸಬೇಕು. ಪಾಲಕರು ಮಕ್ಕಳಿಗೆ ಮೊಬೈಲ್ ಕೊಡಬಾರದು ಮತ್ತು ಒತ್ತಡ ಹಾಕಬಾರದು. ಪರೀಕ್ಷೆಯಲ್ಲಿ ನಪಾಸಾದ ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿಗಳ ಲಕ್ಷಣ. ಸಮಸ್ಯೆಗಳನ್ನು ಎದುರಿಸಿ ಜೀವನ ರೂಪಿಸಿಕೊಳ್ಳುವದೇ ಸಾಧನೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಮಂಜುನಾಥ ಕೊಕ್ಕರಗುಂದಿ ಅಧ್ಯಕ್ಷತೆ ವಹಿಸಿದ್ದರು. ಸಿದ್ದಯ್ಯ ಅಮೋಘಿಮಠ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಎಚ್.ಕೆ. ಭಾರ್ಗವ ಮಾತನಾಡಿದರು. ಈ ಸಂದರ್ಭದಲ್ಲಿ ವಿ.ಜಿ. ಪಡಿಗೇರಿ, ಫಕ್ಕೀರಪ್ಪ ಹೆಬಸೂರ, ನಿಂಗಪ್ಪ ಬನ್ನಿ, ವೀರೇಂದ್ರಗೌಡ ಪಾಟೀಲ, ಭಾರ್ಗವ್, ಜಿ.ಆರ್. ಕೊಪ್ಪದ, ಹನಮಂತಪ್ಪ ಹುಳಕನವರ, ಬಸಣ್ಣ ಹೊಳಲಾಪುರ, ಯಲ್ಲಪ್ಪ ಸೂರಣಗಿ, ಅಣ್ಣಪ್ಪ ರಾಮಗೇರಿ, ಮಂಜುನಾಥ ಕೊಪ್ಪದ, ಯಲ್ಲವ್ವ ದುರ್ಗಣ್ಣವರ, ಶೇಕಪ್ಪ ಕಾಳೆ, ಮುದಕಪ್ಪ ಗದ್ದಿ, ಸೋಮಣ್ಣ ಬೆಟಗೇರಿ, ಅಡಿವೆಕ್ಕ ಬೆಟಗೇರಿ, ನಿಂಗಪ್ಪ ಬಂಕಾಪುರ, ಛಾಯಪ್ಪ ಬಸಾಪೂರ, ಅಣ್ಣಪ್ಪ ರಾಮಗೇರಿ ಮುಂತಾದವರಿದ್ದರು. ಬಸವರಾಜ ಯರಗುಪ್ಪಿ, ನಾಗರಾಜ ಶಿಗ್ಲಿ ನಿರೂಪಿಸಿದರು.
ಸಾನ್ನಿಧ್ಯ ವಹಿಸಿದ್ದ ಧಾರವಾಡ ರೇವಣ ಸಿದ್ಧೇಶ್ವರಮಠದ ಬಸವರಾಜ ದೇವರು ಮಾತನಾಡಿ, ಹಾಲುಮತ ಸಮಾಜದವರು ಶ್ರಮ ವಹಿಸಿ ಕೆಲಸ ಮಾಡುವವರು. ಅವರಿಂದ ಇನ್ನೂ ಜಾನಪದ ಸಾಹಿತ್ಯ ಉಳಿದುಕೊಂಡಿದೆ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸಬೇಕು. ಎಲ್ಲರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಾದ್ದು ಸಮಾಜದ ಕರ್ತವ್ಯ ಎಂದರು.