ಶಿವಮೊಗ್ಗ: ಶರಾವತಿ ಹಿನ್ನೀರಿನ ನದಿ ಪಾತ್ರದ ಜನರು ಸೇತುವೆ ಲೋಕಾಪರ್ಣೆಗೊಂಡ ಖುಷಿಯಲ್ಲಿದ್ದಾರೆ. ನಮ್ಮದು ದ್ವೀಪವಲ್ಲ, ನಮ್ಮೂರಿಗೆ ಸಂಪರ್ಕದ ಕೊಂಡಿ ಸಿಕ್ಕಿದೆ ಎನ್ನುವ ಸಂತಸ ಅಲ್ಲಿನ ಜನರಲ್ಲಿ ಮನೆ ಮಾಡಿದೆ. ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಸಿಗಂದೂರು ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ಎಂದು ನಾಮಕರಣ ಮಾಡಲಾಗಿದೆ ಎಂದು ಘೋಷಿಸಿದರು. ಸಾಗರ ಪಟ್ಟಣದ ನೆಹರು ಮೈದಾನದಲ್ಲಿ ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ನಿರ್ಮಾಣಕ್ಕೆ ನಾನೇ ಭೂಮಿಪೂಜೆ ಮಾಡಿದ್ದೆ.
ಇದೀಗ, ನಾನೇ ಉದ್ಘಾಟನೆ ಮಾಡಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನೂತನ ಹೆದ್ದಾರಿ ನಿರ್ಮಾಣ ಮಾಡಿದ್ದೇವೆ. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗ-ತುಮಕೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಹುಬ್ಬಳ್ಳಿ-ಧಾರವಾಡ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪೂರ್ಣ ಆಗಲಿದೆ ಎಂದು ತಿಳಿಸಿದರು.