Home Blog Page 3091

ನಾಳೆಯಿಂದ ಉಪವಾಸ ಸತ್ಯಾಗ್ರಹ: ಸಾರಿಗೆ ನೌಕರರ ನಿರ್ಧಾರ

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಸಾರಿಗೆ ನೌಕರರು, ಕಾರ್ಮಿಕ ಸಂಘಟಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಗರದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.

ಜಿಲ್ಲೆಯಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಪರವಾನಿಗೆ ನೀಡಿಲ್ಲ. ನಾಳೆಯಿಂದ ಪರವಾನಿಗೆ ಕೊಡಲಿ ಕೊಡದಿರಲಿ ಉಪವಾಸ ಸತ್ಯಾಗ್ರಹ ಮಾಡೇ ಮಾಡ್ತೀವಿ. ಬೇಡಿಕೆ ಇಡೇರುವರೆಗೂ ಹೋರಾಟ ಹಿಂಪಡೆಯೋದಿಲ್ಲವೆಂದು ತಿಳಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಮಾತುಕತೆ ನಡೆಸಲು ಸಾರಿಗೆ ಸಚಿವರು ಜಿದ್ದಿಗೆ ಬಿದ್ದಿದ್ದಾರೆ. ಅವರನ್ನು ಕರೆಯದಿರುವ ಉದ್ದೇಶ ಗೊತ್ತಾಗುತ್ತಿಲ್ಲ. ಖಾಸಗಿ ವಾಹನಗಳನ್ನು ರಸ್ತೆಗಿಳಿಸುವ ಸರ್ಕಾರದ ಯತ್ನ ವಿಫಲವಾಗಿದೆ ಎಂದರು.

ರಾಜ್ಯದಲ್ಲೆಲ್ಲೂ ಖಾಸಗಿ ವಾಹನಗಳು ಓಡಾಡುವುದಿಲ್ಲ. ಖಾಸಗಿ ವಾಹನ ಸಿಬ್ಬಂದಿಗಳು ಸಹೋದರರಿದ್ದಂತೆ. ನಮ್ಮ‌ ಕಷ್ಟ-ನಷ್ಟಗಳು ಖಾಸಗಿಯವರಿಗೂ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅವರು ಖಂಡಿತ ಬರುವುದಿಲ್ಲ ಎಂದ ಸಾರಿಗೆ ನೌಕರರು, ನಮ್ಮ ಮೇಲೆ ಎಸ್ಮಾ ಆದರೂ ಜಾರಿ ಮಾಡಲಿ, ಜೈಲಿಗಾದ್ರೂ ಹಾಕಲಿ ಯಾವುದೇ ಕಾರಣಕ್ಕೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಸರ್ಕಾರ ಯಾವುದೇ ಅಸ್ತ್ರ ಪ್ರಯೋಗಿಸಿದರು ಎದುರಿಸಲು ಸಿದ್ಧವಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆ ಎಸ್ ಆರ್ ಟಿಸಿ ನೌಕರ ಎಸ್.ಕೆ.ಅಯ್ಯನಗೌಡರ ಆಕ್ರೋಶ ಹೊರ ಹಾಕಿದರು.

ಮೊದಲ ಹಂತದ ನಾಮಪತ್ರಗಳ ಪರಿಶೀಲನೆ: 71 ಉಮೇದುವಾರಿಕೆ ತಿರಸ್ಕೃತ, 2657 ಅಭ್ಯರ್ಥಿಗಳು ಅಂತಿಮ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆಯ ಅವಧಿ ಶುಕ್ರವಾರದಂದು (ಡಿ.11) ಮುಕ್ತಾಯಗೊಂಡಿದೆ.

ಮೊದಲ ಹಂತದ 53 ಗ್ರಾಮ ಪಂಚಾಯತಿಗಳ ಒಟ್ಟು 801 ಸ್ಥಾನಗಳಿಗೆ 2802 ನಾಮಪತ್ರಗಳು ಸಲ್ಲಿಕೆಯಾಗಿವೆ. ಶನಿವಾರದಂದು (ಡಿ.12) ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆದದ್ದು,
71 ನಾಮಪತ್ರಗಳು ತಿರಸ್ಕೃತಗೊಂಡಿವೆ. ಇದರಿಂದ ಒಟ್ಟು 2657 ಉಮೇದುವಾರಿಕೆಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿಗಳ ಚುನಾವಣಾ ಶಾಖೆ ತಿಳಿಸಿದೆ.

ನಾಳೆ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ, ಆಯೋಗ ಸೂಚಿಸಿರುವ ಚಿಹ್ನೆಗಳನ್ನೇ ಆಯ್ದುಕೊಳ್ಳಬೇಕು: ಡಿಸಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ನೀಡಿದ ಸಮಯಾವಕಾಶ ನಾಳೆ ಮುಕ್ತಾಯಗೊಳ್ಳಲಿದೆ. ಡಿ.14 ರಂದು ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನಿಯಮಾನುಸಾರ ಚುನಾವಣಾಧಿಕಾರಿಗಳು ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಚುನಾವಣಾ ಆಯೋಗವು ಆಧಿಸೂಚನೆಯ ಮೂಲಕ ಮುಕ್ತ ಚಿಹ್ನೆಗಳ ಪಟ್ಟಿ ಪ್ರಕಟಿಸಿದೆ. ರಾಷ್ಟ್ರೀಯ ಪ್ರಾದೇಶಿಕ ಹಾಗೂ ಇತರ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳಿಗೆ ಈಗಾಗಲೇ ಹಂಚಿಯಾಗಿರುವ ಚಿಹ್ನೆಗಳನ್ನು ಹೊರತುಪಡಿಸಿ ಹಂಚಿಕೆಗೆ ಮುಕ್ತವಾಗಿರುವ ಚಿಹ್ನೆಗಳ ಪೈಕಿ ಅಭ್ಯರ್ಥಿಗಳು ನಾಮಪತ್ರದಲ್ಲಿ ಯಾವುದಾದರೂಂದು ಚಿಹ್ನೆ ನಮೂದಿಸಬೇಕು. ನಮೂದಿಸಿರುವ ಚಿಹ್ನೆಗಳ ಹೊರತು ಬೇರಾವ ಚಿಹ್ನೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸುಂದರೇಶ್ ಬಾಬು

ನಿಯಮ 22 ರಂತೆ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನಾಮಪತ್ರದ ಕ್ರಮಾಂಕ ಅನುಸರಿಸಿ ಹಂಚಿಕೆ ಮಾಡಲಾಗುತ್ತದೆ. ಅದಕ್ಕೂ ಮೊದಲು ಇಬ್ಬರು ಅಭ್ಯರ್ಥಿಗಳು ಒಂದೇ ಚಿಹ್ನೆ ಕೋರಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತದೆ. ಒಂದೇ ಚಿಹ್ನೆ ಇಬ್ಬರಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕೋರಿದ್ದಲ್ಲಿ ನಿಯಮ 22 (5)(ಎ) ಪ್ರಕಾರ ಚೀಟಿ ಎತ್ತುವ ಮೂಲಕ ಯಾರಿಗೆ ಆ ಚಿಹ್ನೆ ನೀಡಬೇಕೆಂಬುದನ್ನು ನಿರ್ಧರಿಸಲಾಗುತ್ತದೆ. ಉಳಿದ ಅಭ್ಯರ್ಥಿಗಳಿಗೆ ಅವರು ಕೋರಿದ 2ನೇ ಅಥವಾ 3ನೇ ಚಿಹ್ನೆಯನ್ನು ನಿಯಮ 22 ಅನುಸರಿಸಿ ನೀಡಲಾಗುವುದು.

ಉಮೇದುವಾರರಿಗೆ ಮಂಜೂರು ಮಾಡಿದ ಚುನಾವಣಾ ಚಿಹ್ನೆಯ ಮಾದರಿ ಪ್ರತಿಯನ್ನು ಸ್ಪರ್ಧಿಸುವ ಅಭ್ಯರ್ಥಿಗೆ ಅಥವಾ ಚುನಾವಣಾ ಏಜಂಟನಿಗೆ ನೀಡಿ ಸ್ವೀಕೃತಿ ಪಡೆದುಕೊಳ್ಳಲಾಗುತ್ತದೆ. ಯಾವುದೇ ಅಭ್ಯರ್ಥಿಯು ಹಾಜರಿಲ್ಲದಿದ್ದಲ್ಲಿ ಚುನಾವಣಾಧಿಕಾರಿಯು ಆ ಅಭ್ಯರ್ಥಿಗೆ ಮಂಜೂರು ಮಾಡಿರುವ ಚಿಹ್ನೆಯ ಬಗ್ಗೆ ನಡಾವಳಿ ಮಾಡಿ, ಇತರೆ ಅಭ್ಯರ್ಥಿಗಳಿಂದ ಸಹಿ ಪಡೆದುಕೊಳ್ಳುವರು.
 
ಕ್ಷೇತ್ರವಾರು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ತಯಾರಿಸಿ, ಅವರಿಗೆ ಚುನಾವಣಾ ಚಿಹ್ನೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಗಳು ಮಾತ್ರ ಹಾಜರಿರಬೇಕು. ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕ್ರಮವಾಗಿ ಒಬ್ಬೊಬ್ಬರನ್ನೇ ಕರೆದು ಅವರಿಗೆ ನಿಯಮವನ್ನು ಅನುಸರಿಸಿ ಚುನಾವಣಾ ಚಿಹ್ನೆ ಹಂಚಿಕೆ ಮಾಡಲಾಗುತ್ತದೆ.

ಹೆಚ್ಚಿನ ಅಭ್ಯರ್ಥಿಗಳು ಒಂದೇ ಚಿಹ್ನೆ ಕೋರಿರುವ ಸಂದರ್ಭದಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಬೇಕಾಗಿರುವುದರಿಂದ, ಇಂತಹ ಎಲ್ಲಾ ಅಭ್ಯರ್ಥಿ ಕರೆದು ಚಿಹ್ನೆ ಹಂಚಿಕೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂರನೇ ದಿನವೂ ಮುಂದುವರೆದ ಮುಷ್ಕರ; ಊಟಕ್ಕಾಗಿ ಪರದಾಡುತ್ತಿರುವ ಸಿಬ್ಬಂದಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಬಸ್ ಬಂದ್ ಮಾಡಿ ಮುಷ್ಕರ ನಡೆಸುತ್ತಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಕಳೆದ ಮೂರು ದಿನಗಳಿಂದ ನಗರದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.

ಮುಷ್ಕರದಿಂದಾಗಿ ಕಾರವಾರ, ಮಂಗಳೂರು, ಮೈಸೂರು ಸೇರಿದಂತೆ ದೂರದೂರಿನ ಡಿಪೋಗಳಿಂದ ನಗರಕ್ಕೆ ಬಂದಿರುವ ಚಾಲಕ, ನಿರ್ವಾಹಕರು ಕೇಂದ್ರ ನಿಲ್ದಾಣದ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿದ್ದು, ನೌಕರರಿಗೆ ಸಮರ್ಪಕವಾಗಿ ಉಪಹಾರ, ಊಟ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಬಸ್ ನಿಲ್ದಾಣದಲ್ಲಿರುವ ಮಳಿಗೆಗಳು ಕಳೆದ ಮೂರು ದಿನಗಳಿಂದ ಬಾಗಿಲು ಮುಚ್ಚಿದ್ದು, ಹೊರ ಜಿಲ್ಲೆಗಳಿಂದ ಒಟ್ಟು 10 ಸಿಬ್ಬಂದಿಗಳು ಮರಳಿ ತಮ್ಮ ಮೂಲ ಸ್ಥಳಗಳಿಗೆ ಹೋಗಲಾಗದೇ ಪರದಾಡುತ್ತಿದ್ದಾರೆ.

ಅಲ್ಲದೇ, ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಸ್ ಮತ್ತು ಪ್ರಯಾಣಿಕರಿಲ್ಲದೇ ಬಣಗುಡುತ್ತಿದೆ. ಮತ್ತೊಂದೆಡೆ ಮೂರು ದಿನಗಳಿಂದ ಸಾರಿಗೆ ಬಸ್ ಸಂಚಾರವಿಲ್ಲದೇ ಪರದಾಡುತ್ತಿರುವ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೊರಟಿದ್ದಾರೆ.

ಗ್ರಾ.ಪಂ. ಚುನಾವಣೆ: ಎರಡನೇ ದಿನ 91 ನಾಮಪತ್ರಗಳು ಸಲ್ಲಿಕೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಜಿಲ್ಲೆಯ ಎರಡನೇ ಹಂತದ 64 ಗ್ರಾಮ ಪಂಚಾಯತಿಗಳ 895 ಸ್ಥಾನಗಳ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಯ 2ನೇ ದಿನವಾದ ಶನಿವಾರದಂದು (ಡಿ.12) 91 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮುಂಡರಗಿ -15, ನರಗುಂದ -01, ರೋಣ-67 ಹಾಗೂ ಗಜೇಂದ್ರಗಡ ತಾಲ್ಲೂಕಿನಲ್ಲಿ 08 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗ ತಿಳಿಸಿದೆ.

ಹತ್ತೇ ದಿನದಲ್ಲಿ ಅಪಾರ ಪ್ರಮಾಣದ ಮದ್ಯ ಸೇಲ್ ! 33 ಸಾವಿರ ಬಾಕ್ಸ್ ಮದ್ಯ ಮಾರಾಟ

0

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಹತ್ತೇ ದಿನಗಳಲ್ಲಿ ಜಿಲ್ಲೆಯಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಬಾಕ್ಸ್ ಮದ್ಯ ಮಾರಾಟವಾಗಿದೆ.

ಗ್ರಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನವೆಂಬರ್ 30 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಡಿಸೆಂಬರ್ 1 ರಿಂದ 10 ರವರೆಗೆ ಸುಮಾರು 33130 ಬಾಕ್ಸ್ ಮದ್ಯ (ಐಎಮ್‌ಎಲ್), 8248 ಬಿಯರ್ ಮಾರಾಟವಾಗಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ತಿಂಗಳಿನಲ್ಲಿ ಹೆಚ್ಚು ಮದ್ಯ ಮಾರಾಟವಾಗಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಜಿಲ್ಲೆಯ ಗದಗ-10314, ಮುಂಡರಗಿ-4256, ನರಗುಂದ-3753, ರೋಣ-6270 ಮತ್ತು ಶಿರಹಟ್ಟಿ ತಾಲ್ಲೂಕಿನಲ್ಲಿ 8537 ಮದ್ಯದ ಬಾಕ್ಸ್ ಮಾರಾಟವಾಗಿವೆ. ಜಿಲ್ಲೆಯಾದ್ಯಂತ ದಿನವೊಂದಕ್ಕೆ ಅಂದಾಜು 4077 ರಷ್ಟು ಮದ್ಯದ ಬಾಕ್ಸ್, 892 ಬಿಯರ್ ಮಾರಾಟವಾಗುತ್ತಿವೆ.

ಡಿಸೆಂಬರ್ ತಿಂಗಳ ಮೊದಲ ಹತ್ತು ದಿನಗಳಲ್ಲಿ ಗದಗ ತಾಲ್ಲೂಕಿನಲ್ಲಿಯೇ ಅತಿಹೆಚ್ಚು ಮದ್ಯ ಮಾರಾಟವಾಗಿದೆ. ಕಳೆದ ನವೆಂಬರ್‌ನಲ್ಲಿ 23223 ಬಾಕ್ಸ್ ಮದ್ಯ, 8077 ಬಿಯರ್ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.

ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 34 ಪ್ರಕರಣಗಳು ದಾಖಲಾಗಿದ್ದು, 23 ಜನರನ್ನು ಬಂಧಿಸಿದ್ದಾರೆ. ಅಕ್ರಮ ಮದ್ಯ ಸಾಗಿಸುತ್ತಿದ್ದ ಆರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 1,86,626 ರೂ. ಮೌಲ್ಯದ 108 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.

ಅದರಂತೆ ಜಿಲ್ಲೆಯ ಬಾಲೆಹೊಸೂರ, ಗುಡ್ಡದಬೈರಾಪೂರ ರಸ್ತೆ, ನಾಗಾವಿ ತಾಂಡಾ ಹಾಗೂ ಗಜೇಂದ್ರಗಡ ಇಳಕಲ್ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹ, ಕಳ್ಳಭಟ್ಟಿ ತಯಾರಿಕೆ ಅಡ್ಡೆಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಮದ್ಯ ಜಪ್ತಿ ಮಾಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪತ್ತೆಗಾಗಿ ಬಲೆ ಬೀಸಿದ್ದಾರೆ.

ಚುನಾವಣೆ ಸಂದರ್ಭಗಳಲ್ಲಿ ಅಕ್ರಮ ಮದ್ಯ ಮಾರಾಟ, ಮದ್ಯ ಹಂಚಿಕೆಯಾಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಎರಡು ಪ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ. ಅಲ್ಲದೇ, ಜಿಲ್ಲೆಯಲ್ಲಿರುವ ಸನ್ನದುದಾರರು ಮತ್ತು ಅಬಕಾರಿ ಅಧಿಕಾರಿಗಳಿಗೆ ಮಾದರಿ ನೀತಿ ಸಂಹಿತೆ ಹಾಗೂ ಇಲಾಖಾ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

-ಮೋತಿಲಾಲ್, ಉಪ ಆಯುಕ್ತರು ಅಬಕಾರಿ ಇಲಾಖೆ

ಕೊವಿಡ್-19: ಗದಗ ಜಿಲ್ಲೆಯ ಶನಿವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಿಸೆಂಬರ್‌ 12 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 144412 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 149507 ಮಾದರಿಗಳಲ್ಲಿ 137526 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 1155 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 06 ಪ್ರಕರಣಗಳು ಸೇರಿದಂತೆ ಒಟ್ಟು 10826 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 10 ಜನ ಸೇರಿದಂತೆ ಒಟ್ಟು 10632 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 53 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಗ್ರಾ.ಪಂ. ಚುನಾವಣೆ- ಬಹಿಷ್ಕರಿಸಿದ ಗ್ರಾಮಸ್ಥರು! ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ ಪಕ್ಕದೂರಿನ ಯುವಕ

-ತಲೆ ಕೆಳಗಾದ ಗ್ರಾಮಸ್ಥರ ಲೆಕ್ಕಾಚಾರ

ವಿಜಯಸಾಕ್ಷಿ ವಿಶೇಷ ಸುದ್ದಿ, ಗದಗ

ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿ ಪ್ರತ್ಯೇಕ ಪಂಚಾಯತಿಗಾಗಿ ಆಗ್ರಹಿಸಿ ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಂಚಲಿ ಗ್ರಾ.ಪಂ. ವ್ಯಾಪ್ತಿಗೆ ಬರುವ ನೀಲಗುಂದ ಗ್ರಾಮಸ್ಥರು ಈ ಬಾರಿಯ ಗ್ರಾ.ಪಂ.ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ರು. ಯಾರೊಬ್ಬರೂ ನಾಮಪತ್ರ ಸಲ್ಲಿಸಬಾರದು ಎಂದು ತಾಕೀತು ಮಾಡಿದ್ದರು. ಅಲ್ಲದೇ, ಉಮೇದುವಾರಿಕೆ ಸಲ್ಲಿಸಿದರೆ ಗ್ರಾಮದಿಂದ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಗ್ರಾಮಸ್ಥರ ಲೆಕ್ಕಾಚಾರಗಳೆಲ್ಲವೂ ಇದೀಗ ತಲೆಕೆಳಗಾಗಿವೆ. ಬೇರೊಂದು ಊರಿನ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಿಂದಾಗಿ ನೀಲಗುಂದ ಗ್ರಾಮಸ್ಥರು ದಿಗ್ಬ್ರಾಂತರಾಗಿದ್ದಾರೆ. ಚಿಂಚಲಿ ಗ್ರಾಮದ ಅಭ್ಯರ್ಥಿ ವೀರೇಂದ್ರ ಲಕ್ಷ್ಮೀಗುಡಿ ಎಂಬಾತ ನೀಲಗುಂದದ ಒಂದನೇ ವಾರ್ಡ್‌ನ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾನೆ.

ನಾಮಪತ್ರ ಸಲ್ಲಿಕೆಯ ಬಗ್ಗೆ ವಿಜಯಸಾಕ್ಷಿಗೆ ಪ್ರತಿಕ್ರಿಯಿಸಿರುವ ವೀರೇಂದ್ರ ಲಕ್ಷ್ಮೀಗುಡಿ, ನಾನು ನೀಲಗುಂದ ಗ್ರಾಮಸ್ಥರಿಗೆ ನಾಮಪತ್ರ ಸಲ್ಲಿಸುವ ಕುರಿತು ಮೊದಲೇ ಹೇಳಿದ್ದೆ. ಅದಕ್ಕೆ ಅವರು ಬೇಡ ಎಂದಿದ್ದರು. ನಾನು ಚುನಾವಣೆ ಬಹಿಷ್ಕರಿಸುವುದು ಸರಿಯಲ್ಲ ಎಂದು ನಾಮಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿ ಅಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನನಗೆ ಯಾರ ಬೆಂಬಲವೂ ಇಲ್ಲ. ಅಭಿವೃದ್ಧಿ ಕೆಲಸವೇ ನನ್ನ ಗುರಿ. ನೀಲಗುಂದ ಗ್ರಾಮಸ್ಥರು ಅವಕಾಶ ಮಾಡಿಕೊಟ್ಟರೆ ಗ್ರಾಮದಲ್ಲಿ ಆಗದಿರುವ ಅಭಿವೃದ್ಧಿ ಕೆಲಸಗಳನ್ನು ನಾನು ಗ್ರಾಮ ಪಂಚಾಯತಿ ಸದಸ್ಯನಾಗುವ ಮೂಲಕ ಮಾಡಿ ತೋರಿಸುತ್ತೇನೆ ಎಂದರು.

ನೀಲಗುಂದ ಗ್ರಾಮದಲ್ಲಿ ಕೋಟಿಗಟ್ಟಲೇ ಅಭಿವೃದ್ಧಿ ಕೆಲಸಗಳಾಗಿವೆ. ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಟ್ಟಿದೆ. ಎಚ್.ಕೆ.ಪಾಟೀಲರು ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ನೀಲಗುಂದ ಗ್ರಾಮದಲ್ಲಿ ನಾಮಪತ್ರ ಸಲ್ಲಿಸೋಕೆ ಮೂವತ್ತು ಜನ ಸಿದ್ದರಾಗಿದ್ದರು. ಯಾರನ್ನ ಆಯ್ಕೆ ಮಾಡಬೇಕು ಎಂಬ ಗೊಂದಲದಿಂದಾಗಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಇದರಲ್ಲಿ ಅಭಿವೃದ್ಧಿಯ ಕಾರಣವಿಲ್ಲ ಎಂದು ವೀರೇಂದ್ರ ಲಕ್ಷ್ಮೀಗುಡಿ ವಿಜಯಸಾಕ್ಷಿಗೆ ಸ್ಪಷ್ಟಪಡಿಸಿದರು.

ಇದರಿಂದ ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಶುಕ್ರವಾರ ಚಿಂಚಲಿ ಗ್ರಾ.ಪಂ.ನ 22 ಸ್ಥಾನಗಳಿಗೆ ಒಟ್ಟು 48 ನಾಮಪತ್ರಗಳು ಸಲ್ಲಿಕೆಯಾಗಿವೆ. ಅದರಲ್ಲಿ ಚಿಂಚಲಿ- 37, ಕಲ್ಲೂರ – 10 ಹಾಗೂ ನೀಲಗುಂದದಲ್ಲಿ ಒಬ್ಬರು ನಾಮಪತ್ರ ಸಲ್ಲಿಸಿದಂತಾಗಿದೆ.

ನೀಲಗುಂದ ಮತ್ತು ಕಲ್ಲೂರ ಗ್ರಾಮಸ್ಥರು ಗ್ರಾ.ಪಂ.ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದರು. ಇದಕ್ಕಾಗಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನವೂ ನಡೆದಿತ್ತು. ಕಡೆಗೆ ಕಲ್ಲೂರ ಗ್ರಾಮದವರು ಒಪ್ಪಿಗೆ ನೀಡಿ ನಾಮಪತ್ರ ಸಲ್ಲಿಸಿದ್ದಾರೆ. ಅದರಂತೆ ನೀಲಗುಂದ ಗ್ರಾಮದಲ್ಲೂ ಯಾರೋ ಒಬ್ಬರು ನಾಮಪತ್ರ ಸಲ್ಲಿಸಿರುವ ಬಗ್ಗೆ ಮಾಹಿತಿ ಇದೆ. ಆದರೆ, ಯಾರೆಂಬುದು ನನಗೆ ಗೊತ್ತಿಲ್ಲ.

-ಹನಮಂತಪ್ಪ ಪೂಜಾರ, ಜಿ.ಪಂ.ಸದಸ್ಯ

ನಮ್ಮೂರಾಗ ಗೆಲ್ಲಾಕ ಆಗಂಗಿಲ್ರಿ. ಇಲ್ಲಿ ಎಲ್ಲಾರೂ ದೊಡ್ಡಾವ್ರು, ದುಡ್ಡಿದ್ದಾವ್ರ ಅದಾರ್ರೀ. ನಾವು ಬಡವರು. ಇಲ್ಲೇ ಎಲೆಕ್ಷನ್‌ಗೆ ನಿಂತ್ರ ದುಡ್ಡಿಲ್ದ ಗೆಲ್ಲಬೋದು. ಅಭಿವೃದ್ಧಿ ಕೆಲಸ ಮಾಡಬೋದು ಅಂತಾ ನಾಮಪತ್ರ ಸಲ್ಲಿಸಿನ್ರಿ… ನನಗೆ ನಾಮಪತ್ರ ಹಿಂಪಡೆಯುವಂತೆ ಬೆದರಿಕೆ ಕರೆಗಳು ಬರುತ್ತಿವೆ. ಎಷ್ಟೇ ಒತ್ತಡ ತಂದರೂ ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ.

ವೀರೇಂದ್ರ ಲಕ್ಷ್ಮೀಗುಡಿ, ಅಭ್ಯರ್ಥಿ

ಗ್ರಾ.ಪಂ.ಚುನಾವಣೆ- ಬಾಸಿಂಗದೊಂದಿಗೆ ಬಂದು ನಾಮಪತ್ರ ಸಲ್ಲಿಸಿದ ಮದುಮಗ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಇಲ್ಲೊಬ್ಬ ಹಸೆಮಣೆ ಏರುವ ದಿನವೇ ಹಣೆಗೆ ಬಾಸಿಂಗ ಕಟ್ಟಿಕೊಂಡು ಬಂದು ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಗದಗ ತಾಲ್ಲೂಕಿನ ಸೊರಟೂರು ಗ್ರಾ.ಪಂ.ಗ ಅದೇ ಗ್ರಾಮದ ೩ನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಮದುಮಗ ಪರಶುರಾಮ ಮಲ್ಲಾರಿ ಉಮೇದುವಾರಿಕೆ ಸಲ್ಲಿಸಿದ್ದಾನೆ.

ಮದುವೆ ದಿನವೇ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಪರಶುರಾಮ ಹಣೆಗೆ ಬಾಸಿಂಗ ಕಟ್ಟಿಕೊಂಡು, ಮದುವೆ ದಿರಿಸಿನಲ್ಲೇ ಗ್ರಾಮಸ್ಥರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದಾನೆ. ನಾಮಪತ್ರ ಸಲ್ಲಿಸಿದ ನಂತರ ಮದುವೆ ಮಂಟಪಕ್ಕೆ ತೆರಳಿ ವಧುವಿಗೆ ಮಾಂಗಲ್ಯಧಾರಣೆ ಮಾಡಿದ್ದಾನೆ. ವೈವಾಹಿಕ ಜೀವನಕ್ಕೆ ಕಾಲಿಡುವುದರೊಂದಿಗೆ ರಾಜಕೀಯ ಭವಿಷ್ಯಕ್ಕೂ ಮುನ್ನುಡಿ ಬರೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಿತಿಮೀರಿದ ಟಿಪ್ಪರ್ ಹಾವಳಿ; ಸಾವಿನ ದವಡೆಯಿಂದ ಬೈಕ್ ಸವಾರ ಪಾರು!

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಅವು ದೈತ್ಯಾಕಾರದ ಗಾಡಿಗಳು, ರಸ್ತೆಯಲ್ಲಿ ಬಂದರೆ ಯಮ ಸ್ವರೂಪಿಯಂತೆ ಭಾಸವಾಗುತ್ತವೆ. ಮಗ್ಗಲಲ್ಲಿ ಹಿಂದೆ ಮುಂದೆ ಯಾರಿದ್ದರೇನೂ ಯಾವ ಗಾಡಿಗಳಿದ್ದರೇನು ನುಗ್ಗುವುದೊಂದೆ ಅದರ ಕೆಲಸ. ಇದರ ಭಾರಕ್ಕೆ ರಸ್ತೆ ಕಿತ್ತುಕೊಂಡು ಬಂದರೆ, ಹೋಗುವ ರಭಸಕ್ಕೆ ಮಗ್ಗುಲಲ್ಲಿ ಹೋಗುವವರ ಎದೆ ಒಂದು ಕ್ಷಣ ಝಲ್ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಇತ್ತೀಚಿಗೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚುತ್ತಿದೆ. ಟಿಪ್ಪರ್‌ಗಳಲ್ಲಿ ಮಿತಿಮಿರಿ ಸಾಮಾಗ್ರಿಗಳನ್ನು ತುಂಬುತ್ತಿರುವುದರಿಂದ ರಸ್ತೆಯ ಇಕ್ಕಲಗಳೆಲ್ಲಾ ಗುಂಡಿಗಳಿಂದ ಆವೃತವಾಗಿವೆ. ಇದರಿಂದ ದಿನಕ್ಕೊಬ್ಬರಾದ್ರೂ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯವೋ ಟಿಪ್ಪರ್ ಚಾಲಕರ ಬೇಜವಾಬ್ದಾರಿತನವೋ ಗೊತ್ತಿಲ್ಲ.

ಅತಿಯಾದ ಹೊರೆಹೊತ್ತು ನಗರದೊಳಗೆ ರಾಜಾರೋಷವಾಗಿ ನುಗ್ಗುವ ಟಿಪ್ಪರ್‌ಗಳ ಬಗ್ಗೆ ಪೊಲೀಸರಿಗೆ ಚೆನ್ನಾಗಿಯೇ ಗೊತ್ತಿದೆ. ಆದರೂ, ಟಿಪ್ಪರ್‌ಗಳಿಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಇದಕ್ಕೆ ಕಾರಣ ಬೇರೆಯದ್ದೇ ಇದೆ ಎಂದು ಜನ ಅಂದುಕೊಳ್ಳುತ್ತಿದ್ದಾರೆ. ಟಿಪ್ಪರ್‌ಗಳ ಹಾವಳಿಯಿಂದಾಗಿ ದಾರಿ ಹೋಕರು ಮತ್ತು ಸಣ್ಣಪುಟ್ಟ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ವಾತಾವರಣ ಸೃಷ್ಠಿಯಾಗಿದೆ.

ಇಂತಹದ್ದೇ ಒಂದು ದುರ್ಘಟನೆ ಹುಬ್ಬಳ್ಳಿಯಲ್ಲಿ ಶನಿವಾರ ನಡೆದಿದೆ. ಇಲ್ಲಿನ ಗೋಕುಲ್ ರಸ್ತೆಯ ಬಸವೇಶ್ವರ ನಗರದ ನಿವಾಸಿ ರಾಕೇಶ್ ಕುಲಕರ್ಣಿ ಎಂಬ ಯುವಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಸಿವಿಲ್ ಇಂಜನಿಯರಿಂಗ್ ವಿದ್ಯಾರ್ಥಿಯಾಗಿರುವ ರಾಕೇಶ್ ಅವರ ಸ್ಕೂಟರ್ ಹಾಗೂ ನರೇಶ ನಾಯಕ್ ಮಾಲಿಕತ್ವದ ಟಿಪ್ಪರ್ ಮಧ್ಯೆ ಶನಿವಾರ ಮುಂಜಾನೆ ಅಪಘಾತ ಸಂಭವಿಸಿದೆ. ರಾಕೇಶ್ ಸಾವಿನ ದವಡೆಯಿಂದ ಪಾರಾಗಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ಅಪಘಾತಗೊಂಡಿರುವ ಲಾರಿ ಕಲಘಟಗಿ ತಾಲ್ಲೂಕಿನ ಎಮ್ಮೆಟ್ಟಿ ಕಲ್ಲಿನ ಗಣಿಯಿಂದ ಜಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಬೈಪಾಸ್‌ನಿಂದ ಗೋಕುಲ ರಸ್ತೆಯ ಮಾರ್ಗವಾಗಿ ಮಾರಡಗಿ ಗ್ರಾಮಕ್ಕೆ ಹೋಗುತ್ತಿತ್ತು. ಟಿಪ್ಪರ್ ಚಾಲಕ ತಿರುವಿನಲ್ಲಿ ಹಠಾತ್ತಾಗಿ ತಿರುವಿದ್ದರಿಂದ ಲಾರಿಯ ಹಿಂಬದಿ ಟೈಯರ್‌ಗೆ ಸಿಲುಕಿಕೊಂಡ ರಾಕೇಶ್ ಕಿರುಚಾಡಿದ್ದರಿಂದಾಗಿ ಚಾಲಕ ಲಾರಿ ನಿಲ್ಲಿಸಿದ್ದಾನೆ. ಇದರಿಂದ ರಾಕೇಶ್ ಜೀವ ಉಳಿಯಿತು.

ಮಿತಿಮೀರಿ ಜಲ್ಲಿ ತುಂಬಿದ ಭಾರೀ ಗಾತ್ರದ ಟಿಪ್ಪರ್‌ಗಳು ನಗರದೊಳಗೆ ಸಂಚರಿಸುತ್ತಿರುವುದರಿಂದ ಜನರ ಜೀವಕ್ಕೆ ಕಂಟಕವಾಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಟಿಪ್ಪರ್ ಹಾವಳಿಗೆ ಕಟಿವಾಣ ಹಾಕಿ ಜನರ ಜೀವ ರಕ್ಷಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

error: Content is protected !!