Home Blog Page 3092

ಜನವರಿ ಅಂತ್ಯಕ್ಕೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಶಿಪ್

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೋವಿಡ್ -19 ಸೋಂಕಿನ ಹಾವಳಿಯಿಂದಾಗಿ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಒ) ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ನ್ನು 2021 ಜನವರಿ ಅಂತ್ಯಕ್ಕೆ ಮುಂದೂಡಿದೆ.

ಕೋವಿಡ್ ಉಂಟು ಮಾಡಿರುವ ಸದ್ಯದ ಪರಿಸ್ಥಿತಿಯಲ್ಲಿ ಚಾಂಪಿಯನ್‌ಶಿಪ್ ನಡೆಸುವುದು ಕಷ್ಟ. ಹಾಗಾಗಿ ಒಂದು ತಿಂಗಳು ಮುಂದೂಡಬೇಕಾಯಿತು ಎಂದು ಡಬ್ಲ್ಯುಎಫ್ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ನುಡಿದಿದ್ದಾರೆ.

ಉತ್ತರ ಪ್ರದೇಶದ ಗೊಂಡಾದಲ್ಲಿ ಡಿ.18 ರಿಂದ 20 ರವರೆಗೆ ಈ ಬಾರಿಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಆಯೋಜಿಸಲು ನಿರ್ಧರಿಸಲಾಗಿತ್ತು. ಟೂರ್ನಿ ಆಯೋಜನೆಗೆ ಇನ್ನಷ್ಟು ರಾಜ್ಯಗಳು ಬಯಸಿದರೆ, ಸ್ಥಳ ಬದಲಾಗಬಹುದು ಎಂದು ವಿನೋದ್ ತೋಮರ್ ಹೇಳಿದ್ದಾರೆ.

ಸರ್ಬಿಯಾದ ಬಿಲ್ ಗ್ರೇಡ್ ನಲ್ಲಿ ಡಿ.12 ರಿಂದ 18 ರವರೆಗೆ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಕಳುಹಿಸಿ ಕೊಡಲಾಗುವುದು ಎಂದು ಡಬ್ಲ್ಯುಎಫ್ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್ ಗೆ ಆಯ್ಕೆ ಟ್ರಯಲ್ಸ್ ನಡೆಸದಿರಲು ತೀರ್ಮಾನಿಸಲಾಗಿದೆ.ಅದೇ ತಂಡವನ್ನು ಬೆಲ್ ಗ್ರೇಡ್ ಗೆ ಕಳುಹಿಸಲಾಗುವುದು.

ಬಜರಂಗ್ ಪುನಿಯಾ(65 ಕೆಜಿ ವಿಭಾಗ), ವಿನೇಶ್ ಪೋಗಟ್ (ಮಹಿಳೆಯರ 53 ಕೆಜಿ ವಿಭಾಗ), ಜೀತೆಂದರ್ ಕುಮಾರ್ (74 ಕೆಜಿ ವಿಭಾಗ) ಹಾಗೂ ಸೋಮವೀರ್ ರಾಠೆ (92 ಕೆಜಿ ವಿಭಾಗ) ಅವರು ಟೂರ್ನಿಯಲ್ಲಿ ಭಾಗವಹಿಸದಿರಲು ಅನುಮತಿ ಕೇಳಿದ್ದು, ಒಪ್ಪಿಗೆ ನೀಡಲಾಗಿದೆ ಎಂದು ಡಬ್ಲ್ಯುಎಫ್ಐನ ಅಧಿಕಾರಿ ಹೇಳಿದ್ದಾರೆ.

ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ವಿಡಿಯೋ ಕಾರಣ!; ಡಿಕೆಶಿ

ವಿಜಯಸಾಕ್ಷಿ ಸುದ್ದಿ, ಕಾರವಾರ

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ರಹಸ್ಯ ವಿಡಿಯೋ ಕಾರಣವಿರಬಹದು. ಅದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರು ಮತ್ತು ಎಂಎಲ್ ಸಿಗೆ ಯಾವುದೋ ಒಂದು ವೈಯಕ್ತಿಕ ರಹಸ್ಯ ವಿಡಿಯೋ ಕೊಟ್ಟ ಮಾಹಿತಿ ಎರಡು ತಿಂಗಳ ಹಿಂದಿತ್ತು. ಇವರಿಬ್ಬರೂ ಸೇರಿ ಮುಖ್ಯಮಂತ್ರಿ ಹಾಗೂ ಅವರು ರಾಜಕೀಯ ಕಾರ್ಯದರ್ಶಿ ಸಂತೋಷ್ ಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಕೇಳಿದ್ದೆ. ಆದರೆ, ಇದರ ಸತ್ಯಾಂಶ ಗೊತ್ತಿಲ್ಲ. ಅದೇ ವಿಚಾರವಾಗಿ ಬೇಸರಗೊಂಡು ಸಂತೋಷ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಏನೋ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು. ಕಟೀಲ್ ಗೆ ಅಲ್ಪಸ್ವಲ್ಪ ಜ್ಞಾನವಿದೆ ಎಂದುಕೊಂಡಿದ್ದೆ. ಅವರು ಜವಾಬ್ದಾರಿ ಸ್ಥಾನದಲ್ಲಿದ್ದು, ಆ ಸ್ಥಾನಕ್ಕೆ ಕಳಂಕ ತರುವ ಹೇಳಿಕೆ ನೀಡದೆ ಗೌರವದಿಂದ ನಡೆದುಕೊಳ್ಳಬೇಕು ಎಂದರು.

ನಾನು ಕೂಡಾ ಸಿದ್ದರಾಮಯ್ಯ ಸರ್ಕಾರಲ್ಲಿದ್ದೆ. ಮಾದಕ ದ್ರವ್ಯದಿಂದ ಸರ್ಕಾರ ನಡೆಸುತ್ತಿದ್ದಾರೆ ಎಂದಾದರೆ ಎಫ್ಐಆರ್ ಏಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ಮಾದಕ ದ್ರವ್ಯದಿಂದ ಸರ್ಕಾರ ನಡೆಸುತ್ತಿದ್ದರು ಎಂಬ ನಳೀನ್ ಕುಮಾರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಗ್ರಾಮೀಣ ಮಟ್ಟದಲ್ಲೂ ಕ್ರೀಡಾ ತಂಡಗಳನ್ನು ರಚಿಸಲು ಸಹಕರಿಸಿ: ಸುರಳ್ಕರ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರವಲ್ಲ, ಎಲ್ಲ ಆಟಗಳನ್ನು ಸಮಾನ ದೃಷ್ಟಿಯಿಂದ ಕಾಣಬೇಕು. ಗ್ರಾಮೀಣ ಮಟ್ಟದಲ್ಲೂ ಕ್ರೀಡಾ ತಂಡಗಳನ್ನು ರಚಿಸಿ ಪ್ರತಿಭಾಶೋಧದ ಜೊತೆಗೆ ವೇದಿಕೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭಗೊಂಡ ಕೆಡಬ್ಲ್ಯೂಎಸ್‌ಸಿ ಆಯೋಜಿಸಿದ ಎರಡು ದಿನಗಳ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತದಿಂದಲೂ ಕ್ರೀಡಾ ತಂಡಗಳನ್ನು ರಚಿಸಲಾಗುತ್ತಿದ್ದು, ಕೊರೋನಾದ ಈ ದಿನಗಳಲ್ಲಿ ಬಹಳಷ್ಟು ನೌಕರರು ಮನೆ, ಕಚೇರಿಗೆ ಮಾತ್ರ ಸೀಮಿತವಾಗಿದ್ದಾರೆ. ಒತ್ತೆ ನಿವಾರಣೆಗೆ, ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾತನಾಡಿ, ಕಡಬ್ಲ್ಯೂಎಸ್‌ಸಿ ಕೇವಲ ಕ್ರೀಡೆಗೆ ಸೀಮಿತವೆಂದು ಭಾವಿಸಿದ್ದೆ. ಆದರೆ ಈ ಕ್ಲಬ್ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿರುವುದು ಶ್ಲಾಘನೀಯ ಕಾರ್ಯ. ಇಂಥ ಸಂಘಟನೆಗಳು ಹೆಚ್ಚಲಿ, ಬಡವರಿಗೆ ಇನ್ನಷ್ಟು ಅನುಕೂಲ ಆಗಲಿ ಎಂದು ಆಶಿಸಿದರು.

ಕ್ಲಬ್‌ನ ಮುಖಂಡ ಗಿರೀಶ್ ಮುಂಡಾದ ಮಾತನಾಡಿ, ಜಿಲ್ಲಾ ಕ್ರೀಡಾಂಗಣದ ಸ್ಥಿತಿ-ಗತಿ ವಿವರಿಸಿ ಇಲ್ಲಿ ಶೌಚಾಲಯದ ಅಗತ್ಯವಿದೆ ಎಂದು ಮನವಿ ಮಾಡಿದರು. ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸೋಮವಾರದಿಂದಲೇ ಶೌಚಾಲಯ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಬಸವರಾಜ ಕರುಗಲ್ ಮಾತನಾಡಿ, ನಿತ್ಯ ಬೆಳಗ್ಗೆ ಈ ಕ್ರೀಡಾಂಗಣದಲ್ಲಿ ವಿವಿಧ ಹುದ್ದೆಗಳಲ್ಲಿರುವ ಅಧಿಕಾರಿಗಳು, ವೈದ್ಯರು, ಪೊಲೀಸರು, ಪತ್ರಕರ್ತರು, ವ್ಯಾಪಾರಸ್ಥರು ವಯೋಮಾನ ಮರೆತು ಏಕತೆಯಿಂದ ಆಟವಾಡುತ್ತಾರೆ. ಈ ಒಗ್ಗಟ್ಟಿನ ಸಂಕೇತವಾಗಿ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದರು.

ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಗಳಾದ ರವಿ ವಕ್ಕುಂದ, ಅಮರೇಶ ಹುಬ್ಬಳ್ಳಿ, ಮೌನೇಶ್, ವಿಶ್ವನಾಥ ಹಿರೇಗೌಡರ್, ಆಂಜನೇಯ ಮತ್ತಿತರರು ಇದ್ದರು.

ಚಂದ್ರು, ಸೂರಿ, ವಿನೋದ್, ಸಿದ್ದು, ಪ್ರವೀಣ್, ಗವಿ, ಗಂಗಾಧರ, ಶ್ರೀನಿವಾಸ, ಮೌನೇಶ್, ನಾಗರಾಜ, ಮಂಜುನಾಥ ಇನ್ನಿತರರು ಪಾಲ್ಗೊಂಡಿದ್ದರು.

ಈರಣ್ಣ ಕಾರ್ಯಕ್ರಮ ನಿರ್ವಹಿಸಿದರು.

ಗಂಗಾವತಿಯಲ್ಲಿ ಹೆಚ್‍ಐವಿ ಸೋಂಕು ತಡೆ ಜಾಗೃತಿ ಕಾಯಕ್ರಮ: ಲಿಂಗರಾಜು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಜಿಲ್ಲೆಯ ಗಂಗಾವತಿ ನಗರದಲ್ಲಿ ಡಿ.01 ರಂದು ಆರೋಗ್ಯ ಇಲಾಖೆ, ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಹೆಚ್‍ಐವಿ ಸೋಂಕು ನಿಯಂತ್ರಣದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಎಚ್‍ಒ ಡಾ. ಲಿಂಗರಾಜು ಅವರು ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‍ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಏಡ್ಸ್ ತಡೆಗಟ್ಟುವಿಕೆಗೆ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೇ, ಜನರಲ್ಲೂ ಜಾಗೃತಿ ಮೂಡಿಸುವ ಕಾರ್ಯವೂ ನಡೆದಿವೆ. ಜನರಲ್ಲಿ ಈ ಬಗ್ಗೆ ಜಾಗೃತಿ‌ ಮೂಡಿದ್ದು ಎಚ್ಐವಿ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಇಳಿಮುಖವಾಗಿದೆ ಎಂದರು.

ಡಾ. ಮಹೇಶ ಮಾತನಾಡಿ, ಜಿಲ್ಲೆಯಲ್ಲಿ 2002 ರಿಂದ 2020ರ ಅಕ್ಟೋಬರ್ ವರೆಗೂ 4,31,054 ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ಈ ಪೈಕಿ 15173 ಜನರಲ್ಲಿ ಹೆಚ್‍ಐವಿ ಸೋಂಕು ಇರುವುದು ಪತ್ತೆಯಾಗಿದೆ. ಇವರಲ್ಲಿ 850 ಗರ್ಭಿಣಿಯರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ವರ್ಷ ಏಪ್ರಿಲ್‍ನಿಂದ ಅಕ್ಟೋಬರ್ ವರೆಗೂ 14514 ಜನರ ರಕ್ತ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 131 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ ಎಂದರು.

ಸೋಂಕಿತರ ಪೈಕಿ 35-49 ವರ್ಷದೊಳಗಿನ ವ್ಯಕ್ತಿಗಳಲ್ಲಿಯೇ ಹೆಚ್ಚು ಸೋಂಕು ಪತ್ತೆಯಾಗುತ್ತಿರುವುದು ಪರೀಕ್ಷೆ ವೇಳೆ ಬೆಳಕಿದೆ ಬಂದಿದೆ ಎಂದರಲ್ಲದೇ, ಜಿಲ್ಲೆಯಲ್ಲಿ ಎಆರ್‍ಟಿ ಆರಂಭ ಪೂರ್ವ 12492 ಜನರು ನೊಂದಣಿ ಮಾಡಿಸಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಎಆರ್‍ಟಿ ಆರಂಭವಾದ ಬಳಿಕ 10622 ಜನರು ನೊಂದಣಿಯಾಗಿದ್ದಾರೆ. ಇವರಲ್ಲಿ 5556 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, 3627 ಜನರು ಸಾವನ್ನಪ್ಪಿದ್ದಾರೆ. ಉಳಿದವರು ಅನ್ಯ ಜಿಲ್ಲೆ ಹಾಗೂ ಅನ್ಯ ರಾಜ್ಯದವರೂ ಆಗಿದ್ದಾರೆ. ಟ್ರಕ್ ಸಂಚಾರಿಗಳೂ ಆಗಿದ್ದಾರೆ. ಅವರನ್ನು ಪರೀಕ್ಷೆ ಮಾಡಿದ ವೇಳೆ ಸೋಂಕು ಇರುವುದು ಪತ್ತೆಯಾಗಿದೆ. ಅಂತವರ ವಿಳಾಸ ಪತ್ತೆ ಮಾಡಿ ಅವರು ಇರುವ ಜಿಲ್ಲೆಗೆ ಚಿಕಿತ್ಸೆ ಪಡೆಯಲು ಕಳುಹಿಸಿಕೊಡಲಾಗಿದೆ ಎಂದರು.

ರಾಜ್ಯದಲ್ಲಿ ಹೆಚ್‍ಐವಿ ಸೋಂಕಿತರ ಪ್ರಮಾಣ 5ನೇ ಸ್ಥಾನದಲ್ಲಿದೆ. ಈ ಹಿಂದಿನ ಅಂಕಿ-ಅಂಶ ಹೋಲಿಕೆ ಮಾಡಿದರೆ ಸ್ವಲ್ಪ ಕಡಿಮೆಯಾಗುತ್ತಿದೆ. ಅಲ್ಲದೇ, ಕಳೆದ ವರ್ಷ ಕುಷ್ಟಗಿಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾಡಲಾಗಿದೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತ್ತು. ಈ ವರ್ಷ ಗಂಗಾವತಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಹಾಗಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಗಂಗಾವತಿಯಲ್ಲಿಯೇ ನಡೆಯಲಿದೆ. ಮ್ಯಾರಥಾನ್ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಡಿಸೆಂಬರ್‌ ಕೊನೆಗೆ ತೆರೆಗೆ ಬರ್ತಾರೆ ದೇವದಾಸಿಯರು

-ನಿರ್ದೇಶಕ ಸ್ವಾತಿ ಅಂಬರೀಶ್ ಅವರ ಮೂರನೇ ಸಿನಿಮಾ

-ಕಾಸ್ಟಿಂಗ್ ಕೌಚ್ ಅವರ ವರ್ತನೆ ಮೇಲೆ ಅವಲಂಬನೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ವಿಜಯಲಕ್ಷ್ಮಿ ಮಂಜುನಾಥರಡ್ಡಿ ಅವರು ಬರೆದ ದೇವದಾಸಿಯರು ಕೃತಿಯನ್ನು ತೆರೆಗೆ ತರಲು ಸಿದ್ಧತೆ ನಡೆದಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು, ಡಿಸೆಂಬರ್‌ ಕೊನೆ ವೇಳೆಗೆ ತೆರೆಗೆ ತರಲು ಯೋಜಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಸ್ವಾತಿ ಅಂಬರೀಶ್ ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಿಂದ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು ಮಾರ್ಚ್-ಏಪ್ರಿಲ್ ವೇಳೆಗೆ ತೆರೆಗೆ ತರಬೇಕೆನ್ನುವಷ್ಟರಲ್ಲಿ ಕೊರೋನಾದಿಂದ ಲಾಕ್‌ಡೌನ್ ಶುರುವಾಗಿ ಬಿಡುಗಡೆಗೆ ತೊಂದರೆ ಆಯಿತು ಎಂದರು.

ಕೊಪ್ಪಳ ಸುತ್ತಮುತ್ತ ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಲಾಗಿತ್ತು. ಪರವಾನಗಿ ಸಿಗಲಿಲ್ಲವಾದ್ದರಿಂದ ಜಿಲ್ಲೆಯ ಹುಲಗಿ ಮತ್ತಿತರೆಡೆ ಚಿತ್ರೀಕರಣ ಮಾಡಲಾಗಲಿಲ್ಲ. ಚಿತ್ರದಲ್ಲಿ ಉತ್ತರ ಕರ್ನಾಟಕದ ಕಲಾವಿದರೂ ಸಹ ಅಭಿನಯಿಸಿದ್ದು ಈ ಭಾಗದ ಜನರು ನಮ್ಮ ತಂಡವನ್ನು ಹರಸಿ, ಆಶೀರ್ವದಿಸಬೇಕು ಎಂದು ಕೋರಿದರು.

ನಮ್ಮ ಈ ಸಿನಿಮಾದಲ್ಲಿ ಮೂರು ಹಾಡುಗಳಿದ್ದು ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಸಿನಿಮಾದ ಇಡೀ ತಿರುಳು ಮಧ್ಯಂತರದ ನಂತರ ಇದೆ. ಮೊದಲಾರ್ಧ ಕಥೆಯ ಹಿನ್ನೆಲೆಗೆ ಸೀಮಿತವಾಗಿರುತ್ತೆ. ಡಿಸೆಂಬರ್ ಕೊನೆಗೆ ರಾಜ್ಯದ ಸುಮಾರು 80 ಥೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ ಎಂದು ಅವರು ತಿಳಿಸಿದರು.

ಚಿತ್ರದ ನಾಯಕಿ ಸಂಜನಾ ನಾಯ್ಡು ಮಾತನಾಡಿ, ಚಿತ್ರದಲ್ಲಿ ಸಮಾಜಕ್ಕೆ‌ ಒಂದೊಳ್ಳೆ ಸಂದೇಶ ಇದೆ. ಚಿತ್ರದಲ್ಲಿ ನನ್ನದು ದೇವದಾಸಿ ಪಾತ್ರ. ದೇವದಾಸಿಯರ ಸಮಸ್ಯೆ, ಬದುಕು-ಸಂಕಷ್ಟ‌ ಕುರಿತು ಅನೇಕ ಸಿನಿಮಾಗಳು ಬಂದಿದ್ದು, ಅವುಗಳಿಗಿಂತ ನಮ್ಮ ಸಿನಿಮಾ ವಿಭಿನ್ನವಾಗಿದೆ ಎಂದು ತಿಳಿಸಿದರು.

ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಕುರಿತು ಚರ್ಚೆಯಾಗುತ್ತಿದೆ. ಯಾರೊ ಒಂದಿಬ್ಬರು ಅದರಲ್ಲಿ ಭಾಗಿಯಾಗಿದ್ದಾರೆ ಎಂದ ಮಾತ್ರಕ್ಕೆ ಎಲ್ಲರನ್ನೂ ಅನುಮಾನದಿಂದ ನೋಡಬಾರದು. ಕಾಸ್ಟಿಂಗ್ ಕೌಚ್ ಅವರವರ ವರ್ತನೆ ಮೇಲೆ ಅವಲಂಬನೆ ಆಗಿರುತ್ತೆ. ಇಷ್ಟು ವರ್ಷದ ಚಿತ್ರ ಬದುಕಿನಲ್ಲಿ ನನಗೆ ಅಂಥ ಅನುಭವ ಆಗಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಹೇಮಾ ಇದ್ದರು.

ಜಾರಕಿಹೊಳಿ ದೆಹಲಿಯಿಂದ ವಾಪಾಸ್; ಸಿಎಂ ಜೊತೆ ಚರ್ಚೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಿಜೆಪಿ ವರಿಷ್ಠರ ಭೇಟಿಗಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಸಿಎಂ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಯಡಿಯೂರಪ್ಪ ಅವರೊಂದಿಗೆ ದೆಹಲಿ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ.

ಸ್ನೇಹಿತ ಸಿಪಿ ಯೋಗೇಶ್ವರ್ ಅವರಿಗೆ ಸ್ಥಾನ ಕೊಡಿಸಲು ಸಾಹುಕಾರ್ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ನಿನ್ನೆಯಷ್ಟೇ ಸಭೆ ನಡೆಸಿದ್ದ ಮಿತ್ರ ಮಂಡಳಿ ‘ನಮ್ಮ‌ಜೊತೆ ಪಕ್ಷ ಬಿಟ್ಟು ಬಂದವರಿಗೂ ನಿಗಮ-ಮಂಡಳಿ ಕೊಡಿ. ಕ್ಷೇತ್ರ ಭೇಟಿ ಹೋದಾಗ ಕಾರ್ಯಕರ್ತರಿಗೆ ಉತ್ತರಿಸೋಕೆ ಆಗುತ್ತಿಲ್ಲ ಎಂದು ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರೊಂದಿಗೆ ಚರ್ಚಿಸಿ ಬೇಡಿಕೆ ಇಡೇರಿಸುವಂತೆ ಪಟ್ಟು ಹಿಡಿದಿದ್ದಾರೆ’ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ ‘ಇಂತಹ ಸಭೆಗಳನ್ನು ಸಿಎಂ ಕಚೇರಿ, ಪಕ್ಷದ ಕಚೇರಿ ಮಾತ್ರ ನಡೆಸಬೇಕು. ನಾನು ನಾಯಕ ಅಂತಾ ಎಲ್ಲೂ ಹೇಳಿಲ್ಲ. ನಮ್ಮದು ಸಾಮೂಹಿಕ ನಾಯಕತ್ವ’ ಎಂದು ಮಿತ್ರ ಮಂಡಳಿಗೆ ಟಾಂಗ್ ಕೊಟ್ಟಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ರಮೇಶ ಜಾರಕಿಹೊಳಿ
ವಾಪಾಸ್ ಆಗುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಸೇರಿದಂತೆ ಹಲವು ನಾಯಕರು ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಸರ್ಕಾರಿ ಕಟ್ಟಡಕ್ಕೆ ಜನಪ್ರತಿನಿಧಿ ಹೆಸರು: ಗ್ರಾಮಸ್ಥರ ವಿರೋಧ

ವಿಜಯಸಾಕ್ಷಿ ಸುದ್ದಿ, ಮುಳಗುಂದ

ಸಮೀಪದ ನೀಲಗುಂದ ಗ್ರಾಮದಲ್ಲಿ ನಿರ್ಮಿತಿ ಕೇಂದ್ರ ನೂತನಾವಾಗಿ ನಿರ್ಮಿಸಿರುವ ಸಾಂಸ್ಕೃತಿಕ ಭವನಕ್ಕೆ ರಾತ್ರೋರಾತ್ರಿ
ಜನಪ್ರತಿನಿಧಿಯೊಬ್ಬರ ಹೆಸರು ನಾಮಕರಣ ಮಾಡಿದ್ದಕ್ಕಾಗಿ ಗ್ರಾಮಸ್ಥರು ಸೇರಿದಂತೆ ಬಿಜೆಪಿ ಗದಗ ಗ್ರಾಮೀಣ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರವಿ ವಗ್ಗನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಮೊದಲು ಬರೀ ಸಾಂಸ್ಕೃತಿಕ ಭವನ ಎಂದು ಹೆಸರಿಡಲಾಗಿತ್ತು. ಆದರೆ ರಾತ್ರೋರಾತ್ರಿ ಬದಲಾಗಿ ಗದಗ ತಾಲ್ಲೂಕು ಪಂಚಾಯತ ಅಧ್ಯಕ್ಷರಾಗಿದ್ದ ದಿ.ರವಿಕುಮಾರ ಇನಾಮತಿ ಅವರ ಹೆಸರಿಟ್ಟಿದ್ದಾರೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದು, ಅಧಿಕಾರಿಗಳು ಕಾಂಗ್ರೆಸ್ ಶಾಸಕರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ರವಿ ದೂರಿದ್ದಾರೆ.

ಗ್ರಾಮ ಪಂಚಾಯತಿ ಠರಾವು ಇಲ್ಲದೇ , ಗ್ರಾಮಸ್ಥರ ಅಭಿಪ್ರಾಯಗಳನ್ನೂ ಸಂಗ್ರಹಿಸದೆ ಸಾಂಸ್ಕೃತಿಕ ಭವನಕ್ಕೆ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಯೊಬ್ಬರ ಹೆಸರಿಟ್ಟಿರುವುದು ಖಂಡನೀಯ ಎಂದಿರುವ ಅವರು, ಗ್ರಾಮಕ್ಕೆ ಅವರ ಕೊಡುಗೆ ಏನು? ನಾಮಕರಣ ಮಾಡುವ ಮೊದಲು ಗ್ರಾಮಸ್ಥರ ಸಭೆ ಕರೆದು ಕೇಳಿದರೆ ಒಪ್ಪಿಕೊಳ್ಳುತ್ತಿದ್ದೆವೇನೋ? ಆದರೆ, ಇದ್ಯಾವುದು ಮಾಡದೆ ತರಾತುರಿಯಲ್ಲಿ ಸಾಂಸ್ಕೃತಿಕ ಕಟ್ಟಡಕ್ಕೆ ಹೆಸರಿಟ್ಟಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಸಾಂಸ್ಕೃತಿಕ ಕಟ್ಟಡಕ್ಕೆ ಶರಣರ ಹೆಸರಿಡಿ

2017-18 ಸಾಲಿನ ವಿಶೇಷ ಘಟಕ ಯೋಜನೆಯಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಾಂಸ್ಕೃತಿಕ ಭವನಕ್ಕೆ ಗ್ರಾಮದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರ ಹೆಸರಿಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಕೇಳಲು ತಾಲ್ಲೂಕು ಪಂಚಾಯತ ಇಒ ಜಿನಗಾ ಅವರಿಗೆ ಕರೆ ಮಾಡಿದರೆ, ಅವರ ಫೋನ್ ನಂಬರ್ ವ್ಯಾಪ್ತಿಯ ಪ್ರದೇಶದ ಹೊರಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯತ ಸಿಇಒ ಡಾ. ಕೆ ಆನಂದ,
‘ನನಗೂ ಈ ವಿಷಯದ ಬಗ್ಗೆ ಗೊತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸುತ್ತೇನೆ’ ಎಂದರು.

‘ಕಟ್ಟಡದ ಉದ್ಘಾಟನೆ ಇವತ್ತೈತ್ರಿ, ಅದಕ್ಕ ನಾವು ಅಲ್ಲಿಗೆ ಹೊರಟೀವಿ. ಆದರೆ, ಕಟ್ಟಡಕ್ಕೆ ಜನಪ್ರತಿನಿಧಿಯೊಬ್ಬರ ಹೆಸರು ಇಟ್ಟಿರುವುದು ನಮಗೆ ಗೊತ್ತಿಲ್ಲ ರೀ, ನಮ್ಮ ಗಮನಕ್ಕೂ ತಂದಿಲ್ಲ ರೀ, ತಾಲ್ಲೂಕು ಪಂಚಾಯತ ಇಒ ಅವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇನೆ’.

ಶಿವಾನಂದ ತೊಂಡಿಹಾಳ, ಪಿಡಿಒ, ಗ್ರಾಮ ಪಂಚಾಯತಿ ಚಿಂಚಲಿ

ರಾಜಕೀಯ ಒತ್ತಡದಿಂದ ಸಿಎಂ ಕಾರ್ಯದರ್ಶಿ ಆತ್ನಹತ್ಯೆಗೆ ಯತ್ನಿಸಿದ್ರಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಅಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಶುಕ್ರವಾರ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದರು.ಅವರನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚಿಗಷ್ಟೇ ಸಿಎಂ ಯಡಿಯೂರಪ್ಪ ರಾಜಕೀಯ ಸಲಹೆಗಾರರು ಮತ್ತು ಮಾಧ್ಯಮ ಸಲಹೆಗಾರರಾಗಿದ್ದ ಮಹದೇವ ಪ್ರಕಾಶ ಅವರು ರಾಜೀನಾಮೆ ನೀಡಿದ್ದರು. ಅದರಂತೆ ಯಡಿಯೂರಪ್ಪ ಪರಮಾಪ್ತ ಪರಮಾಪ್ತ ಎಂ.ಬಿ.ಮರಮಕ್ಕಲ್ ರಾಜಕೀಯ ಹುದ್ದೆಯಿಂದ ವಜಾ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಂತೋಷ ಆತ್ಮಹತ್ಯೆಗೆ ಯತ್ನಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಂತೋಷ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದ ಜೀವನ ಸಾಕೆನಿಸಿದೆ ಎಂದ್ದು ನನ್ನೆದುರು ಹೇಳಿದ್ದರು. ಇದರಿಂದ ನಿದ್ದೆ ಬರಲಿಲ್ಲವೆಂದರೆ, ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ಸಂತೋಷ ಪತ್ನಿ ಜಾಹ್ನವಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ‌.

ಆದರೆ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜ್ಯ ರಾಜಕೀಯದ ಬೆಳವಣಿಗೆಗಳಾ? ಅಥವಾ ಸಿಎಂ ಕಚೇರಿಯಲ್ಲಾಗುತ್ತಿರುವ ಬೆಳವಣಿಗೆಗಳಿಂದಾ? ಎಂಬುದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ತುಮಕೂರು ಜಿಲ್ಲೆ ತಿಪಟೂರು ಹೊಣವಿನಕೆರೆ ಎನ್.ಆರ್.ಸಂತೊಷ ಅವರನ್ನು ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ದೊಂದಿಗೆ ಸಿಎಂ ಕಾರ್ಯದರ್ಶಿಯಾಗಿ ನೇಮಿಸಿದ್ದು, ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಇನ್ನೂ ವಿಧಾ‌ನಸೌಧದ ಪಡಸಾಲೆಯಲ್ಲಿ ಸಂತೋಷ ಅವರಿಗೆ ರಾಜೀನಾಮೆ ಕೊಡಿ ಎಂದು ಸೂಚಿಸಿದ್ದೆ ಆತ್ಮಹತ್ಯೆ ಯತ್ನಕ್ಕೆ ಕಾರಣವಿರಬಹುದು? ಎಂಬ ಗುಸುಗುಸು ಮಾತುಗಳು ಕೇಳಿ ಬರುತ್ತಿವೆ. ಆದರೆ, ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ತಿಳಿಯಬೇಕಿದೆ.

ಸದ್ಯ ಸದಾಶಿವನಗರ ಪೊಲೀಸರು ಸಂತೋಷ ಅವರ ವಿರುದ್ಧ ಆತ್ಮಹತ್ಯೆಗೆ ಯತ್ನ ಐಪಿಸಿ ಸೆಕ್ಷನ್ 309 ರ ಅಡಿ ಪ್ರಕರಣ ದಾಖಲಿಸಿಕೊಂಡು, ಜಾಹ್ನವಿ ಅವರ ಹೇಳಿಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಕೊರೊನಾ ಲಸಿಕೆ ತಯಾರಿಕಾ ಘಟಕಗಳಿಗಿಂದು ಮೋದಿ ಭೇಟಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ

ಕೊರೊನಾ ಲಸಿಕೆ ತಯಾರಿಕೆ ಘಟಕಗಳಿಗಿಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲಿದ್ದಾರೆ.

ಅವರು ಪುಣೆಯ ಫಾರ್ಮಾ ದೈತ್ಯ ಸಿರಮ್ ಇನ್ಸ್ಟಿಟ್ಯೂಟ್, ಅಲಹಾಬಾದ್ ನ ಜೈಡಸ್ ಕ್ಯಾಡಿಲಾ ಹಾಗೂ ಹೈದರಾಬಾದ್ ನ ಭಾರತ್ ಬಯೋಟೆಕ್ ಫಾರ್ಮಾ ಲಸಿಕೆ ತಯಾರಿಸುವ ಘಟಕಗಳಿಗೆ ಭೇಟಿ ಕೊಟ್ಟು , ವ್ಯಾಕ್ಸಿನ್ ಅಭಿವೃದ್ಧಿ ಮತ್ತು ತಯಾರಿಕೆ ಬಗ್ಗೆ ಪರಿಶೀಲಿಸಲಿದ್ದಾರೆ.

ಗುಜರಾತ್ ಗೆ ಇಂದು ಭೇಟಿ ನೀಡಲಿರುವ ಮೋದಿ, ಬೆಳಗ್ಗೆ 9.30 ಕ್ಕೆ ಅಲಹಾಬಾದ್ ನ ಜೈಡಸ್ ಕ್ಯಾಡಿಲಾ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಘಟಕವು ಅಲಹಾಬಾದ್ ನ ಚಾಂಗೋದಾರ್ ಇಂಡಸ್ಟ್ರಿಯಲ್ ಪ್ರದೇಶದಲ್ಲಿದೆ. ತನ್ನ ಕೊರೊನಾ ZyCoV-D ನ ಮೊದಲ ಹಂತದ ಪರೀಕ್ಷೆ ಮುಗಿಸಿದ್ದಾಗಿ ತಿಳಿಸಿತ್ತು. ಅಲ್ಲದೇ, ಸಂಸ್ಥೆ ಅಗಸ್ಟ್ ನಿಂದ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಪ್ರಾರಂಭಿಸಿರುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಲಸಿಕೆ ಅಭಿವೃದ್ಧಿಯಲ್ಲಿ ಎಷ್ಟು ಪ್ರಗತಿ ಕಂಡಿದೆ ಎಂಬುದರ ಬಗ್ಗೆ ಪ್ರಧಾನಿ ಮಾಹಿತಿ ಪಡೆಯಲಿದ್ದಾರೆ.

ಅದರಂತೆ, ಮಧ್ಯಾಹ್ನ 1.30 ಕ್ಕೆ ಪುಣೆಯಲ್ಲಿರುವ ಸೀರಮ್ ಇನ್ಸ್ಟಿಟ್ಯೂಟ್ ಗೆ ಭೇಟಿ ಕೊಟ್ಟು ಕೋವಿಶೀಲ್ಡ್ ವ್ಯಾಕ್ಸಿನ್ ಬಗ್ಗೆ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ನಂತರ ತೆಲಂಗಾಣದ ಭಾರತ್ ಬಯೋಟೆಕ್ ಸಂಸ್ಥೆಗೆ ತೆರಳಲಿದ್ದಾರೆ. ಈ ವೇಳೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿರುವ ಕೋವ್ಯಾಕ್ಸಿನ್ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ, ಲಸಿಕೆ ತಯಾರಿಕೆ, ಸವಾಲುಗಳು ಮತ್ತು ದೇಶದ 130 ಕೋಟಿ ಜನರಿಗೆ ಲಸಿಕೆ ವಿತರಣೆ ಮಾಡಲು ರೋಡ್ ಮ್ಯಾಪ್ ಬಗ್ಗೆ ವಿಜ್ಞಾನಿಗಳು ಪ್ರಧಾನಿ ನರೇಂದ್ರ ಮೋದಿಗೆ ವಿವರಣೆ ನೀಡಲಿದ್ದಾರೆ.

ರಾಜ್ಯದಲ್ಲಿ ಕನ್ನಡ ಕಡ್ಡಾಯ; ರಾಜ್ಯ ಸರ್ಕಾರ ಆದೇಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿರುವ ಜಿಲ್ಲೆಯ ಪ್ರಮುಖ ರಸ್ತೆ, ವೃತ್ತಗಳಿಗೆ ನಾಡಿಗೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ, ಸಾಹಿತಿಗಳ ಹೆಸರಿಡುವುದು ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಕನ್ನಡ ಕಾಯಕ ಹೆಸರಿನಲ್ಲಿ ರಾಜ್ಯ ಸರ್ಕಾರ 2020-21 ನೇ ವರ್ಷಾಚರಣೆ ಆಚರಿಸಿಲಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.

ಅದರಲ್ಲಿ ತಂತ್ರಾಂಶದಲ್ಲಿ ಕನ್ನಡವನ್ನು ಯಶಸ್ವಿಯಾಗಿ ಬಳಸುವಂತೆ ಕಾರ್ಯಕ್ರಮ ರೂಪಿಸುವುದು

ಇಲಾಖೆಗಳು ರೂಪಿಸುವ ನೀತಿ, ಕರಡು ಪ್ರತಿಗಳನ್ನು ಕನ್ನಡದಲ್ಲಿಯೇ ತಯಾರಿಸಬೇಕು. ಅಲ್ಲದೇ, ಅನುಮೋದಿತ ಪ್ರತಿಯನ್ನು ಕನ್ನಡದಲ್ಲಿ ಸಿದ್ದಪಡಿಸಬೇಕು.

ತಂತ್ರಾಂಶ ವ್ಯವಸ್ಥೆಯ ಮೂಲಕ ಅರ್ಜಿದಾರರಿಗೆ ಕನ್ನಡದಲ್ಲಿ ಸಂದೇಶ (ಎಸ್ಎಂಎಸ್) ಹಾಗೂ ಇಮೇಲ್ ಕಳುಹಿಸುವುದು.

ರಾಜ್ಯದ ನಗರ ಪಟ್ಟಣಗಳ ಹೆಸರುಗಳನ್ನು ಕನ್ನಡದಲ್ಲಿಯೇ ಬರೆಯುವುದು. ಮೈಲುಗಲ್ಲುಗಳ ಮೇಲೆ ಕನ್ನಡ ಅಂಕಿ ಬಳಸುವುದು. ಎಲ್ಲ ಇಲಾಖೆಗಳ ಜಾಲತಾಣಗಳ ಪ್ರಧಾನ ಮತ್ತು ಒಳ ಪುಟಗಳು, ಸಾಮಾಜಿಕ ಜಾಲತಾಣದಲ್ಲೂ ಕನ್ನಡ ಕಡ್ಡಾಯ ಬಳಕೆ ಮಾಡುವುದು.

ಇಲಾಖೆ, ಸಚಿವ ಸಂಪುಟದ ಟಿಪ್ಪಣಿಗಳು, ಕಾಯ್ದೆ ಕಾನೂನುಗಳ ಆದೇಶಗಳನ್ನು ಕನ್ನಡದಲ್ಲಿ ಬಳಕೆ ಮಾಡುವುದು. ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಬಳಸಲು ಒತ್ತಾಯಿಸಿಸುವುದು.

ನಿಗಮ ಮಂಡಳಿಗಳು, ಸರ್ಕಾರದಿಂದ ಅನುದಾನ ಪಡೆಯುವ ಸಂಘ ಸಂಸ್ಥೆಗಳು ವಾರ್ಷಿಕ ವರದಿ, ದಾಖಲೆಗಳನ್ನು ಕನ್ನಡದಲ್ಲಿ ಸಲ್ಲಿಸುವುದು.

ರಾಜ್ಯ ಸರ್ಕಾರ ‌ನೇಮಕ ಮಾಡಿಕೊಳ್ಳುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಕಡ್ಡಾಯವಾಗಿ ಕನ್ನಡಿಗರನ್ನೇ ಒದಗಿಸುವಂತೆ ಮಾನ ಸಂಪನ್ಮೂಲ ಸೇವೆ ಒದಗಿಸುವ ಸಂಸ್ಥೆಗಳಿಗೆ ಷರತ್ತು ವಿಧಿಸುವುದು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ಹೋಂಗಳು ನಾಗರಿಕರಿಗೆ ಕನ್ನಡದಲ್ಲಿಯೇ ಮಾಹಿತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ಟಿ.ಎಂ.ಭಾಸ್ಕರ್ ತಿಳಿಸಿದ್ದಾರೆ.

error: Content is protected !!