Home Blog Page 3092

ಬಾಡಿಗೆ ಮನೆಯಲ್ಲಿಯೇ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ: 50 ಕೆಜಿಯ 94 ಮೂಟೆಗಳು ವಶಕ್ಕೆ ಪಡೆದ ಅಧಿಕಾರಿಗಳು

ವಿಜಯಸಾಕ್ಷಿ ಸುದ್ದಿ, ಗದಗ

ಪಡಿತರ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮನೆಯ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ವಿಠ್ಠಲ ರಾವ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ನಗರದ ಟ್ಯಾಗೋರ್ ರಸ್ತೆಯಲ್ಲಿ ನಡೆದಿದೆ.

ನಗರದ ಬಸವರಾಜ ವಾಲಿ ಎಂಬುವವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಇವರು ಮಹಾಂತೇಶ ಎಂಬ ವ್ಯಕ್ತಿಗೆ ಕೆಲವು ದಿನಗಳಿಂದ ಮನೆ ಬಾಡಿಗೆಗೆ ಕೊಟ್ಟಿದ್ದಾರೆ. ದವಸ ಧಾನ್ಯಗಳನ್ನು ತುಂಬಿಸುತ್ತೇನೆಂದು ಬಸವರಾಜ್ ಅವರ ಮನೆ ಬಾಡಿಗೆ ಪಡೆದು ಅಕ್ರಮ ಅಕ್ಕಿ ದಂಧೆಗೆ ಇಳಿದಿದ್ದಾನೆ.

ಅಕ್ರಮ ಅಕ್ಕಿ ದಂಧೆ ನಡೆಸುತ್ತಿದ್ದಾನೆ ಎನ್ನಲಾಗುತ್ತಿರುವ ಮಹಾಂತೇಶ ಮನೆಯಲ್ಲಿ ಸುಮಾರು 50 ಕೆಜಿಯ ಒಟ್ಟು 94 ಪಡಿತರ ಅಕ್ಕಿಯ ಮೂಟೆಗಳು ಸಿಕ್ಕಿವೆ. ಅಲ್ಲದೇ, ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸುವ ಗೋಧಿ, ತೊಗರಿ ಬೆಳೆ ಸಹ ದೊರೆತಿದ್ದು, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಗ್ರಹಿಸಿಟ್ಟಿರುವ ಇವುಗಳು ಅಂಗನವಾಡಿ ಕೇಂದ್ರಗಳ ಅಕ್ಕಿ ನಾ? ಅಥವಾ ಪಡಿತರ ಚೀಟಿಯ ಅಕ್ಕಿ ನಾ? ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.

ಅಲ್ಲದೇ, ಕೆಎಂ ಬಾಂಬೆ ಗೋಲ್ಡ್ ಹೆಸರಿನ ಪಾಕೇಟ್ ಗಳನ್ನು ನಕಲಿ ಮಾಡಿ ಅವುಗಳಲ್ಲಿ ಅಕ್ಕಿ ತುಂಬಿ ಯಾರಿಗೂ ಅನುಮಾನ ಬಾರದಂತೆ ಮಾರಾಟ ಮಾಡಲು ಯತ್ನಿಸಿರುವ ಮಹಾಂತೇಶ ಪರಾರಿಯಾಗಿದ್ದು, ಆರೋಪಿಯ ಪತ್ತೆಗಾಗಿ ಪೋಲಿಸರು ಬಲೆ ಬಿಸಿದ್ದಾರೆ.

ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿ : ಆಯೋಗಕ್ಕೆ ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮನವಿ

ವಿಜಯಸಾಕ್ಷಿ ಸುದ್ದಿ, ತುಮಕೂರು

ಸಾಮಾಜಿಕ, ಆರ್ಥಿಕವಾಗಿ ಅಲ್ಪಸಂಖ್ಯಾತರು ಸದೃಢರಾಗಲು ಶಿಕ್ಷಣ, ಮೂಲಭೂತ ಸೌಕರ್ಯ, ಆಶ್ರಯ ಯೋಜನೆಗಳಡಿಯಲ್ಲಿ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರಿಗೆ ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಮುಸ್ಲಿಂ, ಸಿಖ್, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನು ಒಳಗೊಂಡ ಧಾರ್ಮಿಕ ಅಲ್ಪಸಂಖ್ಯಾತರ ಅಭಿವೃದ್ದಿಗೆ ಹಿಂದಿನ ಸರ್ಕಾರ 3000 ಕೋಟಿ ರೂ. ಅನುದಾನ ನೀಡಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ 800 ಕೋಟಿ ರೂ.ಗಳಿಗೆ ಇಳಿಸಲಾಗಿದೆ. ಇದರಿಂದ ಶೇ.15 ಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯದ ಅಭಿವೃದ್ದಿ ಕಷ್ಟಸಾಧ್ಯ.

ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಅರಿವು ಯೋಜನೆಯಡಿಯಲ್ಲಿ ನೀಡುತ್ತಿದ್ದ ಒಟ್ಟು 292 ಕೋಟಿ ರೂ. ಬದಲಾಗಿ ಒಟ್ಟು 71 ಕೋಟಿಗೆ ಕಡಿತ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಇನ್ನೂ 30 ಕೋಟಿ ರೂ. ಹಣ ಬಾಕಿ ಇದ್ದು, ಸರ್ಕಾರ ಸಮುದಾಯವನ್ನು ಶೈಕ್ಷಣಿಕವಾಗಿ ಹಿಂದಕ್ಕೆ ತಳ್ಳುವ ಪ್ರಯತ್ನ ನಡೆಸುತ್ತಿದೆ.

ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮುದಾಯದ ಕಾಲೋನಿಯಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ನೀಡುತ್ತಿದ್ದ
ಅನುದಾನವನ್ನೂ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಬಿದಾಯಿ ಯೋಜನೆ ಪುನಃ ಜಾರಿಗೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ವಕ್ಫ್ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು. ವಕ್ಪ್ ಆಸ್ತಿಗಳ ಸರ್ವೇ ಮತ್ತು ಗಣಕೀಕರಣ, ಖಬರ್‌ಸ್ತಾನ್‌ಗಳಿಗೆ ಜಾಗ ಮೀಸಲು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಿಗೆ ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ಎಂ.ಮೆಹಬೂಬ್ ಪಾಷಾ, ಜಿಲ್ಲಾ ವಕ್ಪ್ ನಿವೃತ್ತ ಅಧಿಕಾರಿ ಮೊಹಮ್ಮದ್ ಆಸಿಫ್‌ವುಲ್ಲಾ, ತೆಹರಿಕ್-ಎ-ಉರ್ದು ಅದಬ್‌ನ ಸದಸ್ಯ ಮುಷ್ಕೂರ್ ಅಹಮದ್‌ಖಾನ್ ಸೇರಿದಂತೆ ಅನೇಕರು ಇದ್ದರು.

ಗದಗ-ಬೆಟಗೇರಿ ರೈಲು ನಿಲ್ದಾಣದಲ್ಲಿ ಆಕರ್ಷಕ ಹುಲಿ ಚಿತ್ರ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗದಗ-ಬೆಟಗೇರಿ ರೈಲು ನಿಲ್ದಾಣ ಸಂಪೂರ್ಣ ಪರಿಸರ ಸ್ನೇಹಿ ರೈಲು ನಿಲ್ದಾಣವಾಗಿ ಪರಿವರ್ತನೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ರೈಲು ನಿಲ್ದಾಣದ ಗೋಡೆಯ ಮೇಲೆ ಹಲವು ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ.

ನಿಲ್ದಾಣದ ಮೆಟ್ಟಿಲುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿ ಹೋಲುವ ಆಕರ್ಷಕ ‘3ಡಿ ಚಿತ್ರ ‘ಸೃಷ್ಟಿ ಆರ್ಟ್ಸ ಅವರ ಕೈಚಳಕದಲ್ಲಿ ಮೂಡಿ ಬಂದಿದ್ದು, ನೋಡುಗರ ಮೈನವಿರೇಳಿಸುವಂತಿದೆ. ಅಲ್ಲದೇ, ಚಿತ್ರ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.

ಊರು ಒತ್ತಟ್ಟಿಗಿರಲಿ, ಗ್ರಾ.ಪಂ.ನಲ್ಲೇ ಮೂಲಸೌಲಭ್ಯವಿಲ್ಲ!ಇಂಟರ್‌ನೆಟ್ ಸ್ಥಗಿತ, ಮೊಬೈಲ್ ವೈಫೈ ಗತಿ!

(ಅಭಿವೃದ್ಧಿ ಮರೆತ ಚಿಂಚಲಿ, ಭಾಗ-3)

ಚಿಂಚಲಿ ಪಂಚಾಯತಿ ಕಟ್ಟಡದ ಛಾವಣಿ ತೂತು- ಪಾಳುಬಿದ್ದ ಸಮುದಾಯ ಶೌಚಾಲಯಗಳು

ದುರ್ಗಪ್ಪ ಹೊಸಮನಿ


ವಿಜಯಸಾಕ್ಷಿ ವಿಶೇಷ, ಮುಳಗುಂದ

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಇತ್ತೀಚೆಗಷ್ಟೇ ನಡೆಸಿದ ‘ಮೀಷನ್ ಅಂತ್ಯೋದಯ-2020’ ಸಮೀಕ್ಷೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲಕೋಟಿ ಸುಸಜ್ಜಿತ ಗ್ರಾಮವೆಂದು ಪ್ರಥಮ ಸ್ಥಾನ ಪಡೆದು ಇಡೀ ದೇಶಕ್ಕೆ ಮಾದರಿಯಾಗಿದೆ.

ದೇಶಾದ್ಯಂತ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿರುವುದು ಜಿಲ್ಲೆಯ ಜನರ ಹೆಮ್ಮೆಯ ಸಂಗತಿ. ಆದರೆ, ಕೂಗಳತೆ ದೂರದಲ್ಲಿರುವ ಚಿಂಚಲಿ ಪಂಚಾಯತಿಗೆ ಮಾತ್ರ ಗ್ರಹಣ ಹಿಡಿದಿರುವುದು ವಿಪರ್ಯಾಸ.

ಗ್ರಾಮೀಣ ಜನರು ನಗರದ ಪ್ರದೇಶಗಳಿಗೆ ಅಲೆದಾಡಿ ಸುಸ್ತಾಗಬಾರದೆಂದು ಸರ್ಕಾರ ಸಕಾಲ ಯೋಜನೆಯಡಿ 100ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿದ್ದು, ಅವುಗಳಲ್ಲಿ ಕೆಲವು ಸೇವೆಗಳಿಗೆ ಗ್ರಾ.ಪಂ. ಮಟ್ಟದಲ್ಲಿಯೇ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಚಿಂಚಲಿ ಗ್ರಾ.ಪಂ.ನಲ್ಲಿ ಮಾತ್ರ ಈ ಎಲ್ಲ ಸೇವೆಗಳು ಸ್ಥಗಿತಗೊಂಡಿವೆ. ಜಾತಿ, ಆದಾಯ, ಉತಾರ, ರಹವಾಸಿ, ರೇಷನ್ ಕಾರ್ಡ್ ಮುಂತಾದವುಗಳಿಗೆ ಅರ್ಜಿ ಹಾಕಬೇಕಾದರೂ ಸುಮಾರು 8 ಕಿ.ಮೀ. ಪ್ರಯಾಣಿಸಬೇಕು.

ಶೌಚಾಲಯವೇ ಇಲ್ಲ!

ಮೂರ್ನಾಲ್ಕು ವರ್ಷಗಳಿಂದಲೇ ಚಿಂಚಲಿ ಬಯಲು ಮುಕ್ತ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೂ, ಬಯಲು ಶೌಚ ನಿಂತಿಲ್ಲ. ಪಂಚಾಯತಿ ಪಕ್ಕದಲ್ಲೇ ಇರುವ ಕಲ್ಲೂರ, ನೀಲಗುಂದ, ಮುಳಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಯಲು ಶೌಚದ ಕೇಂದ್ರ ಸ್ಥಾನಗಳಾಗಿವೆ. ಮೂರು ಹಳ್ಳಿಗಳಲ್ಲಿ ಸಮುದಾಯ ಶೌಚಾಲಯಗಳಂತೂ ಪಾಳು ಬಿದ್ದಿವೆ. ಪಂಚಾಯತಿ ಆವರಣದಲ್ಲಿಯೇ ಹೆಸರಿಗೊಂದು ಶೌಚಾಲಯವಿಲ್ಲದಿರುವುದು ಜನ ನಾಚುವಂತೆ ಮಾಡಿದೆ.

ಛಾವಣಿ ತೂತು

ಗ್ರಾಮ ಪಂಚಾಯತಿಯ ಕಟ್ಟಡದ ಮಾಳಿಗೆಯ ಚಾವಣಿ ಹೆಂಚು ಒಡೆದು ಹೋಗಿವೆ. ಇದರಿಂದ ಮಳೆಗಾಲದಲ್ಲಿ ನೀರು, ಚಳಿಗಾಲದಲ್ಲಿ ಚಳಿ, ಬೇಸಿಗೆಯಲ್ಲಿ ಬಿಸಿಲು ಒಳ ನುಸುಳುತ್ತಿದ್ದರೂ ದುರಸ್ತಿ ಭಾಗ್ಯ ಸಿಕ್ಕಿಲ್ಲ. ಜನರು ಕುಳಿತುಕೊಳ್ಳಲು ಸೂಕ್ತವಾದ ವ್ಯವಸ್ಥೆ ಇಲ್ಲ. ಆವರಣದಲ್ಲಿಯೇ ದನಕರುಗಳನ್ನು ಕಟ್ಟುತ್ತಿರುವುದರಿಂದ ಗ್ರಾ.ಪಂ. ಗೋಶಾಲೆಯಾಗಿ ಪರಿವರ್ತನೆಯಾಗಿದೆ. ಕಚೇರಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳನ್ನು ಬೇಕಂತಲೇ ಕೆಡಿಸಿದ್ದಾರೆ ಎಂದು ಅಲ್ಲಿನ ಜನರು ಆರೋಪಿಸುತ್ತಿದ್ದಾರೆ.

ಮೊಬೈಲ್ ವೈಫೈಯೇ ಗತಿ

ಗ್ರಾ.ಪಂ.ನಲ್ಲಿ ಒದಗಿಸಲಾಗಿದ್ದ ಇಂಟರ್ನೆಟ್ ಸಂಪರ್ಕ ಸಂಪೂರ್ಣ ಸ್ತಬ್ಧವಾಗಿದೆ. ಹಾಗಾಗಿ ಮೊಬೈಲ್ ವೈಫೈ ಕನೆಕ್ಟ್ ಮಾಡಿಕೊಂಡು ಮಾಡಬೇಕಾದ ದುಸ್ಥತಿ ಬಂದದೊಗಿದೆ. ಸ್ಥಗಿತಗೊಂಡಿರುವ ಇಂಟರ್‌ನೆಟ್ ಸೌಲಭ್ಯವನ್ನು ಅಧಿಕಾರಿಗಳು ದುರಸ್ತಿ ಮಾಡಿಸಿಲ್ಲ. ಇದರ ನಿರ್ವಹಣೆಯ ಹೊಣೆ ಯಾರದು? ಇಂಟರ್ನೆಟ್ ವ್ಯವಸ್ಥೆ ಇಲ್ಲದಿರುವುದರಿಂದ ಖಾಸಗಿ ನೆಟ್ ಸೆಂಟರ್‌ಗಳಲ್ಲಿ ದುಡ್ಡು ಕೊಟ್ಟು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹೊಸ ಕಟ್ಟಡಕ್ಕೆ ಪ್ರಸ್ತಾವನೆ
ಹೊಸ ಕಟ್ಟಡಕ್ಕಾಗಿ ಜಿಲ್ಲಾ ಪಂಚಾಯತಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಣ ಮಂಜೂರಾತಿ ಆಗಬೇಕಿದೆ. ಎಂಜಿಎನ್‌ಆರ್‌ಇಜಿ ಯೋಜನೆಯಲ್ಲಿಯೂ ೧೦ ಲಕ್ಷ ರೂ.ವರೆಗೆ ಅನುದಾನ ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ. ಕಲ್ಲೂರ ರಸ್ತೆಯಲ್ಲಿ ಪಂಚಾಯತಿ ನಿವೇಶನವಿದ್ದು, ಇಲ್ಲಿ ಕಟ್ಟಬೇಕೋ ಅಥವಾ ಹಳೆಯ ಕಟ್ಟಡವನ್ನೇ ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕೋ ಎಂಬ ಗೊಂದಲವಿದೆ. ಹಾಗಾಗಿ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅನಂತರ ಸಭೆಯಲ್ಲಿ ತೀರ್ಮಾನಿಸಲಾಗುವುದು.

ಎಸ್, ಎಸ್ ತೊಂಡಿಹಾಳ, ಪಿಡಿಒ,

ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್ ಎಂಎಲ್ಸಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಹಿಂದೆ ಸದನದಲ್ಲಿ ಕೂತು ಬಿಜೆಪಿಯ ಮೂವರು ಶಾಸಕರು ಬ್ಲೂ ಫಿಲಂ ವೀಕ್ಷಣೆ ಮಾಡಿ ಇಡೀ ದೇಶಾದ್ಯಂತ ಕರ್ನಾಟಕದ ಮಾನ ಮರ್ಯಾದೆಯನ್ನ ತೆಗೆದಿದ್ದರು. ಇದು ರಾಜ್ಯದ ಪಾಲಿಗೆ ಕಪ್ಪು ಚುಕ್ಕೆಯಾಗೇ ಉಳಿಕೊಂಡಿದೆ.

ಇದೀಗ ಮತ್ತೊಬ್ಬ ಜನಪ್ರತಿನಿಧಿ ಕಲಾಪದಲ್ಲಿ ಕುಳಿತು ಅಶ್ಲೀಲ ವಿಡಿಯೋ ನೋಡುವ ಮೂಲಕ ಸದನದ ಮಾನ ಹರಾಜು ಹಾಕಿದ ಘಟನೆ ಶುಕ್ರವಾರ ಸಂಭವಿಸಿದೆ.

ಇಂದು ವಿಧಾನಪರಿಷತ್ ಕಲಾಪ ನಡೆಯುತ್ತಿತ್ತು. ಕಾಂಗ್ರೆಸ್ ಎಂಎಲ್ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಡೀ ರಾಜ್ಯವನ್ನು ಪ್ರತಿನಿಧಿಸುವ ಶಾಸಕರುಗಳು ಕೂರುವ ಪ್ರಜಾ ದೇಗುಲದಲ್ಲಿ ಇಂತಹ ಅಸಹ್ಯ ವರ್ತನೆ ತೋರಿದ ಎಂಎಲ್​ಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ನೈತಿಕತೆಯ ಪ್ರಶ್ನೆಗೆ ಸ್ವತಃ ಆ ಎಂಎಲ್​ಸಿ ಜತೆಗೆ ಕಾಂಗ್ರೆಸ್​ ಪಕ್ಷದ ಮುಖಂಡರೂ ಸ್ಪಷ್ಟನೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಈ ಘಟನೆ ಕುರಿತು ವಿಜಯ ಸಾಕ್ಷಿ ವರದಿಗಾರನ ಜತೆ ಮಾತನಾಡಿದ ಪ್ರಕಾಶ್ ರಾಠೋಡ್, ನಾನು ಶೇ.100ಕ್ಕೆ 101ರಷ್ಟು ಹೇಳುವೆ, ಅಶ್ಲೀಲ ವಿಡಿಯೋ ನೋಡಿಲ್ಲ. ನೂರಾರು ಗ್ರೂಪ್ ಗಳಲ್ಲಿ ಇದ್ದೇನೆ. ಸಾವಿರಾರು ವಿಡಿಯೋ ಇವೆ. ಸ್ಟೋರೇಜ್ ಫುಲ್ ಆಗಿತ್ತು. ಅದನ್ನ ಡಿಲೀಟ್ ಮಾಡ್ತಿದ್ದೆ. ಅದು ಅಶ್ಲೀಲ ವಿಡಿಯೋನಾ? ಅನ್ನೋದೂ ನನಗೆ ಗೊತ್ತಿಲ್ಲ ಎಂದರು.

ವರದಿ. ಡಾ.ಅಬ್ದುಲ್ ರಜಾಕ್

ಪೊಲೀಸರ ಭರ್ಜರಿ ಕಾರ್ಯಾಚರಣೆ: 3 ಲಕ್ಷ ರೂ.ಮೌಲ್ಯದ ಮೊಬೈಲ್ ಹಸ್ತಾಂತರ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಜೂನ್-2020 ರಿಂದ ಅಕ್ಟೋಬರ್-2020 ರವರೆಗಿನ ಒಟ್ಟು 64 ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ, 2 ಲಕ್ಷ 90 ಸಾವಿರ ರೂ. ಮೌಲ್ಯದ ಒಟ್ಟು 24 ಮೊಬೈಲ್ ಕಳ್ಳತನ ಪ್ರಕರಣಗಳನ್ನು ಮುಂಡರಗಿ ಪೊಲೀಸರು ಬೇಧಿಸಿದ್ದು, ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.

ಮೊಬೈಲ್ ಫೋನ್ ಕಳ್ಳತನ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಮುಂಡರಗಿ ಪೊಲೀಸರು, ನವನವೀನ ತಂತ್ರಜ್ಞಾನ ಹಾಗೂ ಸಿಡಿಆರ್ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಅವರ ಮಾರ್ಗದರ್ಶನದಲ್ಲಿ, ಡಿಸಿಆರ್ಬಿಯ ಗುರು ಬೂದಿಹಾಳ ಮಾಹಿತಿಯಂತೆ ಸಾರ್ವಜನಿಕರು ಕಳೆದುಕೊಂಡಿದ್ದ ಸಕ್ರಿಯಗೊಂಡ ಸಿಮ್ ನಂಬರ್ ಟ್ರ್ಯಾಕ್ ಮಾಡಿ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಕೊಂಡಿದ್ದ ಮಾಲೀಕರಿಗೆ ನರಗುಂದ ಡಿಎಸ್ಪಿ ಶಂಕರ್ ರಾಗಿ, ಸಿಪಿಐ ಸುಧೀರ್ ಬೆಂಕಿ, ಪಿಎಸ್ಐ ನೂರಜಾನ್ ಸಬರ ಹಸ್ತಾಂತರಿಸಿದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಗಳಾದ ಜಾಫರ್ ಬಚ್ಚೇರಿ, ನೀಲಕಂಠ ಭಂಗಿ, ಶರಣಪ್ಪ ನಾಗೇಂದ್ರಗಡ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ನರಗುಂದ ಡಿವೈಎಸ್ಪಿ ಶಂಕರ ರಾಗಿ ಅವರು, ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗ್ರಾನೈಟ್ ಉದ್ಯಮಿಗೆ ದುಪ್ಪಟ್ಟು ಹಣ ಮಾಡಿಕೊಡುವುದಾಗಿ 35 ಲಕ್ಷ ರೂ. ವಂಚನೆ: ಇಬ್ಬರು ಆರೋಪಿಗಳ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಶೇರ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಪ್ರತಿಷ್ಠಿತ ಗ್ರಾನೈಟ್ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ಗದಗನಲ್ಲಿ ನಡೆದಿದ್ದು, ವಂಚಿಸಿದ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಪ್ರತಿಷ್ಠಿತ ಗ್ರಾನೈಟ್ ಉದ್ಯಮಿ ಪ್ರಕಾಶ್ ಮಲ್ಲನಗೌಡರ ಪಾಟೀಲ್ ಎಂಬುವವರು ವಂಚನೆಗೊಳಗಾಗಿದ್ದಾರೆ.

ದಾವಣಗೆರೆ ಮೂಲದ ವಿನಯ್ ಯಲಿಗಾರ ಹಾಗೂ ಶಂಕರ್ ಯಲಿಗಾರ ಎಂಬುವರು ತಮ್ಮ ವಿವೈ ಕ್ಯಾಪಿಟಲ್‌ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ತಾವು ಕಟ್ಟಿದ ಹಣಕ್ಕೆ 4 ತಿಂಗಳಿಗೊಮ್ಮೆ ಶೇ.30 ರಷ್ಟು ಹಣ ಲಾಭ ಪಡೆಯಬಹುದೆಂದು ಉದ್ಯಮಿಗೆ ನಂಬಿಸಿದ್ದರು.

ಕಳೆದ ವರ್ಷ ಜೂ.28ರಂದು ಗದಗನ ಪಂಚಾಕ್ಷರಿ ನಗರದಲ್ಲಿರುವ ಉದ್ಯಮಿಯ ಸಹೋದರ ನಾಗರಾಜ್ ಪಾಟೀಲ್ ಮನೆಯಲ್ಲಿ ವ್ಯವಹಾರ ಕುದುರಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 35 ಲಕ್ಷ ರೂ. ಹಣ ಆರೋಪಿತರ ಕೈಗೆ ಕೊಟ್ಟಿದ್ದಾರೆ.

ಅಂದಿನಿಂದ ಇಂದಿನವರೆಗೂ ಒಂದು ನಯಾ ಪೈಸೆನೂ ಉದ್ಯಮಿಯ ಕೈಗೆ ಸಿಕ್ಕಿಲ್ಲ. ಬಳಿಕ ಇದೇ ರೀತಿ ಕೆಲವರಿಗೆ ವಂಚನೆ ಮಾಡಿರುವ ಆರೋಪದಡಿ ವಿನಯ್ ಯಲಿಗಾರ ಹಾಗೂ ಶಂಕರ್ ಯಲಿಗಾರ ಎಂಬ ಇಬ್ಬರು ಆರೋಪಿತರು ಬೆಂಗಳೂರಿನಲ್ಲಿ ಬಂಧನವಾಗಿದೆ.

ಸದ್ಯ ಉದ್ಯಮಿ ಪ್ರಕಾಶ್ ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ಸ್ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ. ಸದ್ಯ ಆರೋಪಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲು ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ.

ಆಮೆಗತಿಯಲ್ಲಿ ಯುಜಿಡಿ ಕಾಮಗಾರಿ : ಗುಂಡಿಯಲ್ಲಿ ಬಿದ್ದು ಹಸುವಿನ ನರಳಾಟ

0

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಪಂಡಿತ ಪುಟ್ಟರಾಜ ವೃತ್ತದ ಪಾಲಾ-ಬದಾಮಿ ರಸ್ತೆಯಲ್ಲಿ ಯುಜಿಡಿ ಯೋಜನೆಯಡಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಚರಂಡಿ ಗುಂಡಿಯಲ್ಲಿ ಹಸು ಬಿದ್ದು ನರಳಾಡಿದ ಘಟನೆ ಬೆಳಗಿನ ಜಾವ ನಡೆದಿದೆ.

ಬೆಳ್ಳಂಬೆಳಗ್ಗೆ ಆಯಾತಪ್ಪಿ ಸುಮಾರು 5 ಅಡಿ ಆಳದ ಗುಂಡಿಯೊಳಗೆ ಬಿದ್ದು ಅತ್ತಿತ್ತ ಹೊರಳಾಡಲು ಜಾಲವಿಲ್ಲದೇ ಮೇಲೆದ್ದೇಳಲು ಆಗದೆ ಒದ್ದಾಡಿದೆ.

ಸುಮಾರು 2 ಗಂಟೆಗಳ ಕಾಲ ಆಕಳು ಗುಂಡಿಯಲ್ಲಿ ಬಿದ್ದು ನರಳಾಡಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಕಾರ್ಮಿಕರು ಸೇರಿ ಹಿಟಾಚಿ ಮೂಲಕ ಹಸುವನ್ನು ಮೇಲಕ್ಕೆತ್ತಿದ್ದಾರೆ.

ಯುಜಿಡಿ ಕಾಮಗಾರಿ ಸುಮಾರು 4 ವರ್ಷಗಳಿಂದ ಆಮೆವೇಗದಲ್ಲಿ ಸಾಗುತ್ತಿರುವುದರಿಂದ ನಗರದ ಜನರು ಹೈರಾಣಾಗಿದ್ದಾರೆ. ಅಲ್ಲದೇ, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದರಿಂದ ವಾಹನ ಸವಾರರು ಪರದಾಡುತ್ತಿದ್ದು, ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮನೆಗೆ ಬೆಂಕಿ: ಲಕ್ಷಾಂತರ ರೂ, ಎಲೆಕ್ಟ್ರಿಕಲ್ ಸಾಮಾಗ್ರಿ ಭಸ್ಮ

ವಿಜಯಸಾಕ್ಷಿ ಸುದ್ದಿ, ಗದಗ

ಆಕಸ್ಮಿಕ ಬೆಂಕಿಗೆ ಎಲೆಕ್ಟ್ರಿಕಲ್ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿರುವ ಘಟನೆ ಗುರುವಾರ ಸಂಜೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದಲ್ಲಿ ಎಲೆಕ್ಟ್ರಿಕಲ್ ವಸ್ತುಗಳನ್ನು ರಿಪೇರಿ ಮಾಡುತ್ತಿದ್ದ ವಿಶ್ವನಾಥ ಬಾಕಳೆ ಎಂಬುವರಿಗೆ ಸೇರಿದ ಸಾಮಾಗ್ರಿಗಳು ಅಗ್ನಿ ಕೆನ್ನಾಲೆಗೆ ಸುಟ್ಟು ಕರಕಲಾಗಿವೆ.

ಹಳೆಯ ಎಲೆಕ್ಟ್ರಿಕಲ್ ಸಾಮಾಗ್ರಿ
ರಿಪೇರಿ ಮಾಡಲು ತಂದು ಮನೆಯ ಮೇಲ್ಭಾಗದಲ್ಲಿ ಟಿವಿ, ರೆಡಿಯೋ, ಗಡಿಯಾರ, ಪ್ರಿಡ್ಜ್, ಮಿಕ್ಸರ್, ಪ್ಯಾನ್ ಹೀಗೆ ಸಂಗ್ರಹಿಸಿಡಲಾಗಿದ್ದ ಅನೇಕ ಎಲೆಕ್ಟ್ರಿಕಲ್ ವಸ್ತುಗಳು ಬೂದಿಯಾಗಿವೆ.

ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

ಕಚೇರಿ ಹೊರಗೆ ಅಧಿಕಾರಿ, ಸಿಬ್ಬಂದಿ ಕರ್ತವ್ಯ! ಗುತ್ತಿಗೆದಾರರ ಕೆಲಸ ಸಲೀಸು, ಜನರದ್ದು ಕಷ್ಟ!

(ಅಭಿವೃದ್ಧಿ ಮರೆತ ಚಿಂಚಲಿ, ಭಾಗ-2)

ದುರ್ಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಮುಳಗುಂದ

ಗದಗ ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳ ಪೈಕಿ ಚಿಂಚಲಿ ಗ್ರಾ.ಪಂ. ಆಡಳಿತ ಸಂಪೂರ್ಣ ಹಳಿ ತಪ್ಪಿ, ತುಕ್ಕು ಹಿಡಿದಿದೆ. ಅಧಿಕಾರಿಗಳು ಕಚೇರಿಗೆ ಬೇಕಾಬಿಟ್ಟಿಯಾಗಿ ಆಗಮಿಸುತ್ತಿದ್ದು, ವಾರದಲ್ಲಿ 1-2 ದಿನ ಕಚೇರಿಯಲ್ಲಿ ಕಾಣಸಿಗುತ್ತಾರೆ. ಇದರಿಂದ ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ತುರ್ತು ಕೆಲಸಗಳಿದ್ದಲ್ಲಿ ಸಾರ್ವಜನಿಕರು ಅಧಿಕಾರಿಗಳು ಇರುವಲ್ಲಿಗೆ ಹುಡುಕಿಕೊಂಡು ದೂರದ ಗದಗ ನಗರಕ್ಕೇ ಬರಬೇಕಿದೆ.

ಚಿಂಚಲಿ ಗ್ರಾ.ಪಂ.ನಲ್ಲಿ ಹಲವು ವರ್ಷಗಳಿಂದ ಅಧಿಕಾರಿಗಳ ಕಾರ್ಯವೈಖರಿ ಹದಗೆಟ್ಟು ಹಳ್ಳ ಹಿಡಿದಿದ್ದು, ಸಮಸ್ಯೆಗಳ ಕೂಪವಾಗಿದೆ.
ಗ್ರಾ.ಪಂ. ವ್ಯಾಪ್ತಿಯ ನೀಲಗುಂದ ಗ್ರಾಮಸ್ಥರು ಸಾಕಷ್ಟು ವರ್ಷಗಳಿಂದ ಇಲ್ಲಿನ ಅನನೂಕೂಲ ನೋಡಿ ಬೇಸತ್ತಿದ್ದರು. ನಿತ್ಯ ಪಂಚಾಯತಿಗೆ ಬಂದರೂ ಆಗಬೇಕಿದ್ದ ಕೆಲಸ ಒಂದು ದಿನದಲ್ಲಿ ಆಗುತ್ತಿರಲಿಲ್ಲ. ಹಾಗಾಗಿ ಪ್ರತ್ಯೇಕ ಪಂಚಾಯತಿಗಾಗಿ ಆಗ್ರಹಿಸಿ ಗ್ರಾಮಸ್ಥರು ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಗ್ರಾ.ಪಂ.ಚುನಾವಣೆ ಬಹಿಷ್ಕರಿಸಿದ್ದರು.
ಕರೆದು ಕಟ್ಟುವರಿಲ್ಲ, ತುರಿಸಿ ಮೇವು ಹಾಕುವವರಿಲ್ಲ ಎಂಬಂತೆ ಇಲ್ಲಿ ಯಾರು ಹೇಳುವವರಿಲ್ಲ, ಕೇಳುವವರಿಲ್ಲ. ತಮ್ಮಿಚ್ಛೆ, ತಮ್ಮ ಕಾರುಬಾರು ಎಂಬಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಕಾಸು ಕೊಟ್ಟರೆ ಏನು ಬೇಕಾದರೂ ಕೆಲಸ ಮಾಡಿ ಕೊಡುತ್ತಾರೆ ಎನ್ನಲಾಗುತ್ತಿದೆ. ಕೆಲಸಕ್ಕಾಗಿ ಅಲೆದಾಡುತ್ತಿರುವ ಇಲ್ಲಿನ ಜನರ ಪರಿಸ್ಥಿತಿ ಗಂಟೂ ಹೋಯ್ತು, ನಂಟೂ ಹೊಂಟೋಯ್ತು! ಎಂಬಂತಾಗಿದೆ.

ಗುತ್ತಿಗೆದಾರರ ಹಾವಳಿ: ಇಲ್ಲಿ ಬಹುತೇಕ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಗುತ್ತಿಗೆದಾರರ ಕೆಲಸ ಮಾತ್ರ ಸಲೀಸಾಗಿ ಮಾಡಿಕೊಟ್ಟಿರುವ ಮತ್ತು ಮಾಡಿಕೊಡುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಕಾಂಟ್ರ್ಯಾಕ್ಟ್ ದಾರರು ಇದ್ದಲ್ಲಿಯೇ ಬಂದು ಕೆಲಸ ಮಾಡಿಕೊಟ್ಟು ಹೋಗುತ್ತಿದ್ದಾರೆ. ಸಾರ್ವಜನಿಕರ ಕೆಲಸವೆಂದರೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಕೆಲಸಕ್ಕಾಗಿ ಕಾಲಾವಕಾಶ ತೆಗೆದುಕೊಂಡು ಅಲೆದಾಡಿಸುವ ಸಂಸ್ಕೃತಿ ಮುಂದುವರೆದಿದೆ. ಕೆಲಸವಾಗಬೇಕಾದರೆ ಜನರು ಅವರಿರವರ ಕೈ-ಕಾಲು ಹಿಡಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಹಾಗಾಗಿ ಜನರು ಪಂಚಾಯತಿಗೆ ಬರುವುದನ್ನೆ ಬಿಟ್ಟು ಬಿಟ್ಟಿದ್ದಾರೆ. ಆದರೆ, ಗುತ್ತಿಗೆದಾರರ ಹಾವಳಿ ಮಿತಿ ಮೀರಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಹಗರಣಗಳ ತಾಣ:
ಚಿಂಚಲಿ ಗ್ರಾಮ ಪಂಚಾಯತಿ ಮೇಲೆ ಯಾವೊಬ್ಬ ಅಧಿಕಾರಿಗಳು ಕಣ್ಣು ಹಾಯಿಸುತ್ತಿಲ್ಲ. ಇದರಿಂದ ಹಗರಣಗಳು ತಾಂಡವಾಡುತ್ತಿವೆ. ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸದೆ ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳು ಹಣ ಲೂಟಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಸರ್ಕಾರದ ಸುಮಾರು 15 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದ, ಓರ್ವ ಪಿಡಿಒ ಮೇಲೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಅಕ್ರಮಗಳಿಗೆ ಹೆಚ್ಚು ಆಸ್ಪದ ನೀಡುತ್ತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕಿದೆ.

ವಾರಕ್ಕೆಷ್ಟು ಸಭೆ?:
ಚಿಂಚಲಿ ಗ್ರಾ.ಪಂ. ಪಿಡಿಒ ಬರೀ ಗದಗದಲ್ಲಿ ಜಿಪಂ, ತಾಪಂ ಸಭೆ ಇದೆ ಎಂದು ದಿನನಿತ್ಯ ಒಂದಿಲ್ಲೊಂದು ಸುಳ್ಳು ಹೇಳಿ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆ. ಸಭೆಯ ಹೆಸರಿನಲ್ಲಿ ಕಚೇರಿಗೆ ಗೈರಾಗಿ ಜಿಲ್ಲಾ ಕೇಂದ್ರದಲ್ಲಿ ಕುಳಿತು ಗುತ್ತಿಗೆದಾರರ ಕೆಲಸ ಮಾಡಿ ಕೊಡುತ್ತಿದ್ದಾರೆ. ಹಾಗಾಗಿ, ಒಂದು ವಾರದಲ್ಲಿ ಜಿಪಂ ಮತ್ತು ತಾಪಂಗಳಲ್ಲಿ ಪಿಡಿಒಗಳ ಸಭೆಗಳು ಎಷ್ಟು ನಡೆಯುತ್ತವೆ ಎಂಬುವುದನ್ನು ಸಿಇಒ ಹಾಗೂ ಇಒ ಅವರೇ ಉತ್ತರಿಸಬೇಕಿದೆ.

ನಡೆಯದ ಸಭೆಗಳು
ಪ್ರತಿ 6 ತಿಂಗಳಿಗೊಮ್ಮೆ ವಾರ್ಡ್ ಮತ್ತು ಗ್ರಾಮಸಭೆ ನಡೆದಿರುವ ಉದಾಹರಣೆಗಳಿಲ್ಲ. ಜನರ ಬೇಕುಬೇಡಗಳನ್ನು ತಿಳಿಯದೆ, ಗುತ್ತಿಗೆದಾರರ ಆಣತಿಯಂತೆ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಗ್ರಾಮಸ್ಥರ ಅಗತ್ಯಕ್ಕೆ ತಕ್ಕಂತೆ ಕ್ರಿಯಾಯೋಜನೆ ತಯಾರಿ ಆಗುತ್ತಿಲ್ಲ. ಪಿಡಿಒ ಅವರು ತಂದುಕೊಟ್ಟ ಇಂತಹ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿಯ ಅಧಿಕಾರಿಗಳು ಕಣ್ಣುಮುಚ್ಚಿ ಅನುಮೋದನೆ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಕುಂದು ಕೊರತೆಗಳಿಗೆ ಶ್ವಾಶತ ಪರಿಹಾರ ಸಿಗುತ್ತಿಲ್ಲ.

error: Content is protected !!