Home Blog Page 3094

ಬಿಜೆಪಿಗೆ ಸೇರ್ತಿನಿ ಅಂದ್ರೆ ತಾಲೂಕುಗಳನ್ನೇ ಜಿಲ್ಲೆ ಮಾಡ್ತಾರೆ: ತಂಗಡಗಿ ವ್ಯಂಗ್ಯ

ಇವಿಎಂ ಬದಲಾಗಿ ಬ್ಯಾಲೆಟ್ ಬಳಸಿ ಚುನಾವಣೆಯಲ್ಲಿ ಗೆಲ್ಲಲಿ, ಶರಣಾಗತಿ ಆಗ್ತೇವೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಈಗ ವಿಜಯನಗರ ಜಿಲ್ಲೆಗೆ ತಾತ್ವಿಕ ಒಪ್ಪಿಗೆ ನೀಡುವ ಅಗತ್ಯ ಇರಲಿಲ್ಲ. ಆನಂದ್ ಸಿಂಗ್ ಸಂತೋಷಕ್ಕಾಗಿ ಬಳ್ಳಾರಿ ಇಬ್ಭಾಗ ಮಾಡುವ ಹುನ್ನಾರವಿದು. ಬೇರೆ ಪಕ್ಷದವರು ಬಿಜೆಪಿಗೆ ಸೇರೋದಾದ್ರೆ ತಾಲೂಕುಗಳನ್ನೇ ಜಿಲ್ಲೆಯನ್ನಾಗಿ‌ ಮಾಡ್ತಾರೆ ಬಿಜೆಪಿಯವರು ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದಲ್ಲಿ ರವಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನಾಯಕರನ್ನು ಹುಟ್ಟು ಹಾಕುವ, ಬೆಳೆಸುವ ಸಾಮರ್ಥ್ಯ ಇಲ್ಲ. ಅದು ಕೇವಲ ಕಾಂಗ್ರೆಸ್‌ಗೆ ಮಾತ್ರ ಇರೋದು. ವಲಸೆ ಹೋದವರನ್ನೇ ಮಂತ್ರಿಗಳನ್ನಾಗಿ ಮಾಡಿದೆ ಬಿಜೆಪಿ. ಮೂಲ ಬಿಜೆಪಿಯವರು ಎಷ್ಟು ಜನ ಮಂತ್ರಿಗಳಿದ್ದಾರೆ ಲೆಕ್ಕ ಹಾಕಿ ನೋಡೋಣ? ಎಂದು ಅವರು ಪ್ರಶ್ನಿಸಿದರು.

ಹಾಗೆ ಬೇರೆ ಪಕ್ಷ ಬಿಟ್ಟು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದವರೆಲ್ಲ ಇವಿಎಂ ಮಷೀನ್ ದೋಷದಿಂದ ಗೆದ್ದಿದ್ದಾರೆ. ಶಿರಾದಲ್ಲಿ ಜಯಚಂದ್ರ ಅವರಿಗೆ ಜನಬೆಂಬಲ ಇತ್ತು. ಆದರೂ ಅಲ್ಲೂ ಬಿಜೆಪಿ ಗೆದ್ದಿದೆ ಅಂದ್ರೆ ಏನರ್ಥ? ದೇಶದಲ್ಲಿ ಮುಂಬರುವ ಚುನಾವಣೆಗಳಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಬಳಸಿ ಗೆಲ್ಲಲಿ. ಹಾಗೊಂದು ವೇಳೆ ಗೆದ್ದರೆ ಬಿಜೆಪಿಗೆ ನಾವು ಶರಣಾಗತಿ ಆಗುತ್ತೇವೆ. ಮುಂಬರುವ ಮಸ್ಕಿ ಚುನಾವಣೆಯಲ್ಲೂ ಇವಿಎಂ ಬಳಸಿದರೆ ನಮಗೆ ಫಲಿತಾಂಶದ ಬಗ್ಗೆ ಅನುಮಾನ ಇರುತ್ತೆ ಎಂದು ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ 10-15 ವರ್ಷಗಳಿಂದ ಚುನಾವಣೆ ನೋಡುತ್ತಿರಬಹುದು. ನಾನು 19ನೇ ವಯಸ್ಸಿನಲ್ಲಿ ಕಾಲೇಜು ದಿನಗಳಲ್ಲೇ ಚುನಾವಣೆ ಎದುರಿಸಿದವನು. ಅವರು ಇಲ್ಲಿಗೆ ಬರೋದು ಜಿಲ್ಲೆಯ ಅಭಿವೃದ್ಧಿ ಮಾಡುವುದಕ್ಕಲ್ಲ, ಬದಲಾಗಿ ಸೂಟ್‌ಕೇಸ್ ಒಯ್ಯಲಿಕ್ಕೆ. ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಿ ಬೈತಾರೆ. ಆನಂತರ ಬೇರೊಂದು ಜಾಗದಲ್ಲಿ ಅವರನ್ನು ಕರೆಸಿಕೊಂಡು ಗಂಟುಮೂಟೆ ಕಟ್ತಾರೆ. ನಿಜವಾಗಲೂ ಅಧಿಕಾರಿಗಳು ತಪ್ಪು ಮಾಡಿದ್ದರೆ ಜಿಲ್ಲೆಯಲ್ಲಿ ಒಬ್ಬ ಅಧಿಕಾರಿಯನ್ನಾದರೂ ಅಮಾನತು ಮಾಡಬೇಕಿತ್ತಲ್ಲವೇ? ಎಂದು ಅವರು ಅನುಮಾನ ಪಟ್ಟರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಮಾಲತಿ ನಾಯಕ್, ಶೈಲಜಾ ಹಿರೇಮಠ, ಅಕ್ಬರ್ ಪಲ್ಟಾನ್, ಗುರು ಹಲಗೇರಿ, ಮುತ್ತುರಾಜ ಕುಷ್ಟಗಿ ಮತ್ತಿತರರು ಇದ್ದರು

ಬಣ್ಣ ಬಯಲಾಗುತ್ತೆ: ಹಿಟ್ನಾಳ

ಕೊಪ್ಪಳ: ಬಿಜೆಪಿ ಆಡಳಿತ ಜನರಿಗೆ ರೋಸಿ ಹೋಗಿದೆ. ಈಗಾಗಲೇ ಜನರಿಗೆ ಬಿಜೆಪಿ ಬಂಡವಾಳ ಗೊತ್ತಾಗಿದೆ. ಇನ್ನೂ ಎರಡು-ಮೂರು ತಿಂಗಳಲ್ಲಿ ಬಿಜೆಪಿ ಬಣ್ಣ ಬಯಲಾಗಲಿದೆ. ಬಿಜೆಪಿ ಸೇರುವವರ ಸಂಖ್ಯೆ ಜಾಸ್ತಿಯಾಗಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವರು ಹರಿವು ಹೆಚ್ಚುತ್ತಿದೆ. ಕೆಲವೇ ತಿಂಗಳು ಕಾದು ನೋಡಿ, ಗೊತ್ತಾಗುತ್ತೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ ನೀಡಿ ಸಂಚಲನ ಮೂಡಿಸಿದರು.

ಜೀವದ ಹಂಗು ತೊರೆದು ಮಾನವೀಯತೆ ಮೆರೆದ ರೈತ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಕಳೆದ ಮೂರು ದಿನಗಳಿಂದ ಬಾವಿಯಲ್ಲಿ ಸಿಲುಕಿಕೊಂಡಿದ್ದ ಸಾಕುಪ್ರಾಣಿಯ ಪ್ರಾಣ ಉಳಿಸಿದ ರೈತನೊಬ್ಬನ ವಿಡಿಯೋ ಈಗ ವೈರಲ್ ಆಗಿದೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸಾಕುಪ್ರಾಣಿ ಬೆಕ್ಕು ಬಾವಿಯಲ್ಲಿ ಬಿದ್ದು ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಜೀವ ಕಾಪಾಡಿ ಎಂದು ಪೊದೆಯ ಮೇಲೆ ಕುಳಿತು ತನ್ನ‌ ಆರ್ತನಾದದ ಮೂಲಕ ಹೊರಹಾಕುತ್ತಿತ್ತು.

ಇದನ್ನು ಗಮನಿಸಿದ ಗ್ರಾಮದ ರೈತ ಮಹಾಂತೇಶ್ ತನ್ನ ಪ್ರಾಣವನ್ನು ಲೆಕ್ಕಿಸದೇ ಗೆಳಯರ ಸಹಾಯದಿಂದ ಹಗ್ಗದ ಮೂಲಕ ಬಾವಿಯಲ್ಲಿ ಇಳಿದು ಬೆಕ್ಕಿನ ಪ್ರಾಣ ಉಳಿಸಿದ್ದಾನೆ.

ಬೆಕ್ಕಿನ ರಕ್ಷಣಾ ಕಾರ್ಯದ ದೃಶ್ಯ ಸ್ಥಳೀಯ ಯುವಕರು ಮೊಬೈಲ್ ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದಾರೆ.

ಬೆಕ್ಕಿನ ಜೀವ ಉಳಿಸಿದ ರೈತ ಮಹಾಂತೇಶ್ ನ ಮಾನವೀಯ ಕಾರ್ಯಕ್ಕೆ ಎಲ್ಲಡೇ ಮೆಚ್ಚುಗೆ ವ್ಯಕ್ತವಾಗಿದೆ.

ಅಪರಿಚಿತ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಹೊರವಲಯದ ಕಾಡು ಪ್ರದೇಶದಲ್ಲಿ ಅಪರಿಚಿತ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದನ ಕಾಯುವವರು ಶನಿವಾರ ಸಂಜೆ ಜಾನುವಾರು ಮೇಯಿಸಲು ಅಲ್ಲಿಗೆ ಹೋದಾಗ ದುರ್ವಾಸನೆ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾತ್ರಿ ಶೋಧ ಕಾರ್ಯಾಚರಣೆಗೆ ಇಳಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲಿ ಮದ್ಯ, ನೀರಿನ ಪೌಚ್‌ಗಳಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕುರಿತು ಕುಷ್ಟಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಾಲಕ್ಕೆ ಹೆದರಿ ನೇಣಿಗೆ ಶರಣು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಸಾಲಕ್ಕೆ ಹೆದರಿ ಶನಿವಾರ ರಾತ್ರಿ ನೇಣಿಗೆ ಶರಣಾದ ಘಟನೆ ಕೊಪ್ಪಳದ ಜೆ.ಪಿ.ಮಾರ್ಕೆಟ್ ಬಳಿಯ ಬಟ್ಟೆ ಅಂಗಡಿಯೊಂದರ ಮಹಡಿ ಮೇಲೆ ನಡೆದಿದೆ.

ಮೃತನನ್ನು ಯಲ್ಲಪ್ಪ (20) ಎಂದು ಗುರುತಿಸಲಾಗಿದೆ. ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರ ನಿರ್ಮಿಸಿ ಕೊಟ್ಟ ಮನೆ ಸದುಪಯೋಗಕ್ಕೆ ಸಚಿವ ಪಾಟೀಲ ಕರೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ನರಗುಂದ

ಸಂತ್ರಸ್ತರಿಗಾಗಿ ಸರ್ಕಾರ 14 ಸ್ಥಳಾಂತರ ಗ್ರಾಮಗಳ ಕುಟುಂಬಗಳಿಗೆ ಸುಮಾರು 8,000 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಸರ್ಕಾರ ನಿರ್ಮಿಸಿಕೊಟ್ಟ ಈ ಮನೆಗಳ ಸದುಪಯೋಗಪಡಿಸಿಕೊಳ್ಳುವಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಅವರು ತಾಲೂಕಿನ ಕುರ್ಲಗೇರಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಲಾದ ನರಗುಂದ -ಕುರ್ಲಗೇರಿ- ಗದಗ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಅರಭಾವಿ ಚಳ್ಳಕೇರಿ ರಾಷ್ಟ್ರೀಯ ಹೆದ್ದಾರಿ 45 ರ ಕಿ.ಮೀ 90 ರಿಂದ 94.60 ರವರೆಗೆ ರಸ್ತೆ ಸುಧಾರಣೆ (ನರಗುಂದದಿಂದ ಕುರ್ಲಗೇರಿವರೆಗೆ) ಅಂದಾಜು 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಗ್ರಾಮಸ್ಥರು ಉತ್ತಮ ಕಾಮಗಾರಿ ನಡೆಯುವಂತೆ ನಿಗಾವಹಿಸಬೇಕು ಎಂದರು.

ಸ್ಥಳಾಂತರ ಗ್ರಾಮಗಳ ನಿವಾಸಿಗಳಿಗೆ ನಿರ್ಮಿಸಲಾದ ಮನೆಗಳನ್ನು ಸೌಹಾರ್ದತೆಯಿಂದ ಎಲ್ಲರೂ ಸೇರಿಕೊಂಡು ಮನೆ ಹಂಚಿಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ನಿರ್ಮಿಸಿಕೊಟ್ಟ ಮನೆಗಳನ್ನು ಸದ್ಭಳಕೆ ಮಾಡಿಕೊಳ್ಳಲು ತಿಳಿಸಿದರು. ಕೆಲವು ಕುಟುಂಬಗಳಿಗೆ ಮನೆ ಹಂಚಿಕೆಯಲ್ಲಿ ಕೊರತೆ ಅಥವಾ ಕಡಿಮೆ ಆದಲ್ಲಿ ಮುಂದಿನ ದಿನಗಳಲ್ಲಿ ಅವರಿಗೂ ಸಹ ಮನೆ ನಿರ್ಮಿಸಿಕೊಡಲು ಸರ್ಕಾರ ಸಿದ್ಧವಿದ್ದು, ಸರ್ಕಾರ ಸದಾ ನಿಮ್ಮೊಂದಿಗಿದೆ ಎಂದರು.

ಕುರ್ಲಗೇರಿ ನಿವಾಸಿಗಳ ಬೇಡಿಕೆಯಾದ ಸೇತುವೆ ನಿರ್ಮಾಣ , ರಸ್ತೆನಿರ್ಮಾಣ ಕಾಮಗಾರಿಗಳನ್ನು ಮುಂದಿನ ಹಂತದಲ್ಲಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಣುಕಾ ಅವರಾದಿ, ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಶಂಕರಪ್ಪ ಬ್ಯಾಹಟ್ಟಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಮ್.ಎಸ್. ಪಾಟೀಲ, ಮುದುಕಯ್ಯ ಹಿರೇಮಠ, ಬಸವರಾಜ ಬ್ಯಾಹಟ್ಟಿ, ಈಶ್ವರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರು , ತಹಶೀಲ್ದಾರ ಮಹೇಂದ್ರ, ಶಿಕ್ಷಕ ಎಸ್.ಪಿ.ದೊಡ್ಡಮನಿ ಸೇರಿದಂತೆ ಇತರರು ಇದ್ದರು.

ಕೊವಿಡ್-19: ಗದಗ ಜಿಲ್ಲೆಯ ಶನಿವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ನವೆಂಬರ್ 21 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 117374 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 121157 ಮಾದರಿಗಳಲ್ಲಿ 109669 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 828 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 12 ಪ್ರಕರಣಗಳು ಸೇರಿದಂತೆ ಒಟ್ಟು 10660 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 5 ಜನ ಸೇರಿದಂತೆ ಒಟ್ಟು 10448 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 71 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಭಿವೃದ್ಧಿ ಕಾಮಗಾರಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಸಚಿವ ಪಾಟೀಲ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ

ಅಭಿವೃದ್ಧಿಯೆಡೆಗೆ ಸಾಗುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ ಅವರು ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ಏರ್ಪಡಿಸಲಾದ ನರಗುಂದ ಪುರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನರಗುಂದದ ವಿವಿಧ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸುಮಾರು 550 ಲಕ್ಷ ರೂ.ಗಳಲ್ಲಿ ಕೈಗೊಳ್ಳಲಾಗುತ್ತಿದೆ. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದರು. ಅದೇ ರೀತಿ ಬಹುದಿನಗಳ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಬೇಡಿಕೆಯಾಗಿದ್ದ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 30 ಲಕ್ಷ ರೂ.ಗಳಲ್ಲಿ ಕೈಗೊಳ್ಳಲಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಸಚಿವ ಪಾಟೀಲ ಹೇಳಿದರು.

ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದರಿಂದ ಜನಜೀವನ ಯಥಾಸ್ಥಿತಿಗೆ ಮರಳುತ್ತಿದ್ದು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯ ಬರುತ್ತಿದೆ. ಈ ಆದಾಯವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡುವ ಮೂಲಕ ರಾಜ್ಯವನ್ನು ಅಭಿವೃದ್ಧಿಯಡೆಗೆ ಕೊಂಡೊಯ್ಯೋಣವೆಂದರು.

ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ತಹಸೀಲ್ದಾರ ಪ್ರಶಾಂತ , ಪ್ರಮುಖರಾದ ಹಾಲಪ್ಪನವರ, ಎಮ್.ಎಸ್. ಪಾಟೀಲ, ಅಜ್ಜಪ್ಪ ಸೇರಿದಂತೆ ಅಧಿಕಾರಿಗಳು ಇದ್ದರು.

ರೈತರಿಗೆ ಯಾವುದೇ ರೀತಿಯ ನೀರಿನ ತೊಂದರೆಯಾಗದಂತೆ ಕ್ರಮ : ಆನಂದ್ ಸಿಂಗ್

0

ತುಂಗಭದ್ರಾ ಜಲಾಶಯ 114ನೇ ನೀರಾವರಿ ಸಲಹಾ ಸಮಿತಿ ಸಭೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಮತ್ತು ಬಲ ದಂಡೆ ಕಾಲುವೆಗಳ ವ್ಯಾಪ್ತಿಯ ರೈತರಿಗೆ ಯಾವುದೇ ರೀತಿಯ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಕರ್ನಾಟಕ ಸರ್ಕಾರದ ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.

ಅವರು ಇಂದು ಮುನಿರಾಬಾದ್‌ನ ಕಾಡಾ ಕಚೇರಿಯಲ್ಲಿ ನಡೆದ ತುಂಗಭದ್ರ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 114ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಂದು ವೇಳೆ ನೀರಿನ ತೊಂದರೆ ಯಾಗುವ ಲಕ್ಷಣಗಳು ಕಂಡುಬಂದರೆ ಮುಂಜಾಗೃತೆಯಾಗಿ ನೀರಾವರಿ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ದೇವರ ದಯೆಯಿಂದ ನೀರಿನ ಹರಿವು ಪ್ರಮಾಣ ಹೆಚ್ಚಾದರೆ ನಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. ನಾವೆಲ್ಲರೂ ಈ ಹಿಂದೆ ತುಂಗಭದ್ರಾ ಡ್ಯಾಂನ ನೀರಿನ ಬಳಕೆ ಕುರಿತು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಮಾಡಿಕೊಂಡಿರುವ ಬೆಳೆಗಳನ್ನು ಬೆಳೆಯುವ ಒಪ್ಪಂದವನ್ನು ನಾವು ಯಾರೂ ಪಾಲಿಸುತ್ತಿಲ್ಲ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಹೆಕ್ಟೆರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದೇವೆ. ಹೀಗಾಗಿ ನೀರಿನ ಸಮಸ್ಯೆಯಾಗುತ್ತಿದೆ ಎಂದರು.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ

ನ. 25 ರಿಂದ ಡಿಸೆಂಬರ್. 02 ರವರೆಗೆ ಮೈಲ್-104ರ ಮೇಲ್ಭಾಗದಲ್ಲಿ ಬರುವ ವಿತರಣಾ ಕಾಲುವೆಗಳನ್ನು ನಿಯಂತ್ರಿಸಿ ಗಣೇಕಲ್ ಜಲಾಶಯಕ್ಕೆ ನೀರನ್ನು ಸಂಗ್ರಹಿಸಿಕೊಳ್ಳುವುದು ಹಾಗೂ ರಾಯಚೂರು ನಗರ/ ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ ಮತ್ತು ವಿತರಣಾ ಕಾಲುವೆ ಅಡಿ ನಿಂತಿರುವ ಬೆಳೆಗಳನ್ನು ಸಂರಕ್ಷಿಸುವುದು. ಡಿ. 01 ರಿಂದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಲಭ್ಯವಾಗಬಹುದಾದ, ಡಿ. 01 ರಿಂದ 20 ರವರೆಗೆ 2400 ಕ್ಯೂಸೆಕ್ಸನಂತೆ 20 ದಿನಗಳಿಗೆ, ಡಿ. 21 ರಿಂದ 31 ರವರೆಗೆ 3300 ಕ್ಯೂಸೆಕ್ಸನಂತೆ 101 ದಿನಗಳಿಗೆ, 2021ರ ಏಪ್ರಿಲ್. 01 ರಿಂದ ಮೇ. 10 ರವರೆಗೆ ಎಡದಂಡೆ ವಿಜಯನಗರ ಕಾಲುವೆಗಳಿಗಾಗಿ 100 ಕ್ಯೂಸೆಕ್ಸ್ನಂತೆ 40 ದಿನಗಳಿಗೆ, ಏ. 01 ರಿಂದ 10 ರವರೆಗೆ 2000 ಕ್ಯೂಸೆಕ್ಸನಂತೆ 10 ದಿನಗಳಿಗೆ ಕುಡಿಯುವ ನೀರಿಗಾಗಿ (ಈ ಅವಧಿಯಲ್ಲಿ ಫೆಬ್ರವರಿ. 15ರ ಬೆಳಗ್ಗೆ 08 ರಿಂದ ಫೆ. 20ರ ಬೆಳಗ್ಗೆ 08 ರವರೆಗೆ ತಖ್ತೆ-2ರಲ್ಲಿ ತೋರಿಸಿದಂತೆ ವಡ್ಡರಹಟ್ಟಿ, ಸಿಂಧನೂರು ವಿಭಾಗಗಳ ವಿತರಣಾ ಕಾಲುವೆಗಳನ್ನು ಆನ್/ಆಫ್ ಮಾಡಿ ಮೈಲ್-104 ರಲ್ಲಿ ಬರುವ ಸಮತೋಲನ ಜಲಾಶಯಕ್ಕೆ ಪೂರೈಕೆ ಮಾಡಿ ಸಂಗ್ರಹಿಸಿಕೊಂಡು ಯರಮರಸ್ ವಿಭಾಗದ ಅಚ್ಚುಕಟ್ಟಿನಲ್ಲಿ ನಿಂತಿರುವ ಬೆಳಗಳನ್ನು ಸಂರಕ್ಷಿಸುವುದು ಹಾಗೂ ರಾಯಚೂರು ಮತ್ತು ಇತರೆ ಕುಡಿಯುವ ನೀರು ಯೋಜನೆಗಳಿಗೆ ನೀರು ಒದಗಿಸುವುದು.) ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ

ಡಿಸೆಂಬರ್. 01 ರಿಂದ 10 ರವರೆಗೆ 10 ದಿನಗಳಿಗೆ ನೀರು ನಿಲುಗಡೆ. ಡಿ. 11 ರಿಂದ 20 ರವರೆಗೆ 750 ಕ್ಯೂಸೆಕ್ಸನಂತೆ 10 ದಿನಗಳಿಗೆ, ಡಿ. 21 ರಿಂದ 31 ರವರೆಗೆ 11 ದಿನಗಳಿಗೆ ನೀರು ನಿಲುಗಡೆ. 2021ರ ಜನವರಿ. 01 ರಿಂದ 15 ರವರೆಗೆ 770 ಕ್ಯೂಸೆಕ್ಸನಂತೆ 15 ದಿನಗಳಿಗೆ ಕಾಲುವೆಯಡಿ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ. ಹರಿವಿನ ಪ್ರಮಾಣಗಳು ಟ್ರಾನ್ಸಮಿಷನ್ ಲಾಸ್‌ಗಳನ್ನೊಳಗೊಂಡಿರುತ್ತವೆ.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ

ಡಿ. 01 ರಿಂದ 25 ರವರೆಗೆ 250 ಕ್ಯೂಸೆಕ್ಸನಂತೆ 25 ದಿನಗಳಿಗೆ, ಡಿ. 26 ರಿಂದ 31 ರವರೆಗೆ 660 ಕ್ಯೂಸೆಕ್ಸನಂತೆ 100 ದಿನಗಳಿಗೆ ದಿನಾಂಕ ಏಪ್ರಿಲ್. 01 ರಿಂದ 10 ರವರೆಗೆ 200 ಕ್ಯೂಸೆಕ್ಸನಂತೆ 10 ದಿನಗಳಿಗೆ ಕುಡಿಯುವ ನೀರಿನ ಸಲುವಾಗಿ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ. ಹರಿವಿನ ಪ್ರಮಾಣಗಳು ಟ್ರಾನ್ಸಮಿಷನ್ ಲಾಸ್‌ಗಳನ್ನೊಳಗೊಂಡಿರುತ್ತವೆ.

ರಾಯಾ ಬಸವಣ್ಣ ಕಾಲುವೆ

ನವೆಂಬರ್. 16 ರಿಂದ 2021ರ ಜನವರಿ. 15 ರವರೆಗೆ 61 ದಿನಗಳಿಗೆ ನೀರು ನಿಲುಗಡೆ. ಜನವರಿ. 16 ರಿಂದ ಮೇ. 31 ರವರೆಗೆ 180 ಕ್ಯೂಸೆಕ್ಸನಂತೆ 136 ದಿನಗಳಿಗೆ ರವರೆಗೆ ಅಥವಾ ಈ ಕಾಲುವೆಯಡಿ ನೀರು ಲಭ್ಯವಿರುವವರೆಗೆ ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ

ಡಿಸೆಂಬರ್. 01 ರಿಂದ 25ಕ್ಯೂಸೆಕ್ಸ ನಂತೆ ಅಥವಾ ಕಾಲುವೆಯ ಮಟ್ಟ 1585.00 ಅಡಿ ತಲುಪುವವರೆಗೆ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ತುಂಗಭದ್ರಾ ಯೋಜನೆಯ 114ನೇ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಸಂರಕ್ಷಿಸಲು ಹಾಗೂ ಹಿಂಗಾರು ಹಂಗಾಮಿಗೆ ಲಭ್ಯವಾಗುವ ನೀರನ್ನು ಎಡದಂಡೆ ಕಾಲುವೆ, ಬಲದಂಡೆ ಕಾಲುವೆಗಳಿಗೆ ಹಾಗೂ ವಿಜಯನಗರ ಕಾಲುವೆಗಳಿಗೆ ಮಿತ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗಾಗಿ ನೀರು ಬಿಡುವ ಬಗ್ಗೆ ಸುಧೀರ್ಘವಾಗಿ ಮತ್ತು ವಿಸ್ತೃತವಾಗಿ ಚರ್ಚಿಸಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಮಾತನಾಡಿ, ನಮ್ಮ ರೈತರು ಭತ್ತದ ಬೆಳೆ ಒಂದನ್ನೇ ಬೆಳೆಯದೇ ಪ್ರತಿ ವರ್ಷ ಒಂದೊಂದು ಬೆಳೆಗಳನ್ನು ಬದಲಾಯಿಸಿ ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆಯಬೇಕು. ಇದರಿಂದ ಭೂಮಿಯ ಫಲವತ್ತತೆ ನಾಶವಾಗದೇ ಇಳುವರಿಯೂ ಹೆಚ್ಚುತ್ತದೆ. ಆದರೆ, ಈ ಭಾಗದ ರೈತರು ಹೆಚ್ಚಾಗಿ ಭತ್ತವನ್ನು ಪ್ರತಿ ಬಾರಿ ಬೆಳೆಯುತ್ತಿರುವುದರಿಂದ ನೀರಿನ ಸಮಸ್ಯೆ ಮಾತ್ರವಲ್ಲ ಭೂಮಿಯ ಫಲವತ್ತತೆಯೂ ಕಡಿಮೆ ಯಾಗುತ್ತದೆ. ರೈತರು ತಮ್ಮ ಭೂಮಿಯ ಫಲವತ್ತತೆ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಅಂದಾಗ ಮಾತ್ರ ಭೂಮಿಯನ್ನು ದೀರ್ಘ ಕಾಲದವರೆಗೆ ಸಂರಕ್ಷಿಸಬಹುದು ಎಂದು ಹೇಳಿದರು.

ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಮಾತನಾಡಿ, ಈ ಬಾರಿ ಅತಿಯಾಗಿ ಮಳೆಯಾಗಿರುವುದರಿಂದ ತುಂಗಭದ್ರಾ ಎಡದಂಡೆ ಕಾಲುವೆ ಭಾಗಗಳಲ್ಲಿ ಬಿತ್ತನೆ ತಡವಾಗಿ ಮಾಡಲಾಗಿದೆ. ಮಸ್ಕಿ ಮತ್ತು ಜವಳಗೇರಾ ಉಪ ವಿಭಾಗದಲ್ಲಿ ಜೋಳ, ಸೂರ್ಯಕಾಂತಿ ಹೆಚ್ಚಾಗಿ ಬಿತ್ತನೆಯಾಗಿರುವುದರಿಂದ ಜನವರಿ. 15 ರವರೆಗೆ ನೀರು ಬೇಕಾಗುತ್ತದೆ ಎಂದು ರೈತರು ಹೇಳುತ್ತಿದ್ದಾರೆ. ಹಾಗಾಗಿ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಿರಗುಪ್ಪಾ ಶಾಸಕ ಎಂ.ಎಸ್ ಸೋಮಲಿಂಗಪ್ಪ, ಕಂಪ್ಲಿ ಶಾಸಕ ಜೆ.ಎನ್ ಗಣೇಶ, ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ, ಕೊಪ್ಪಳ ಎಸ್.ಪಿ ಟಿ.ಶ್ರೀಧರ್, ರಾಯಚೂರು ಎಸ್.ಪಿ ನಿಕಮ್ ಪ್ರಕಾಶ ಅಮ್ರಿತ್ ಹಾಗೂ ಮುನಿರಾಬಾದ್ ಕಾಡಾ ಕಚೇರಿಯ ಮುಖ್ಯ ಇಂಜಿನಿಯರ್ ಎಸ್.ಹೆಚ್.ಮಂಜಪ್ಪ, ಅಧೀಕ್ಷಕ ಅಭಿಯಂತರರಾದ ಬಸವರಾಜ ಹಾಗೂ ಪ್ರಕಾಶ, ವಡ್ಡರಹಟ್ಟಿ ಕಾರ್ಯನಿರ್ವಾಹಕ ಇಂಜಿನಿಯರ್ ರಮೇಶ ವಲ್ಕ್ಯಾಪುರ ಸೇರಿದಂತೆ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಮತ್ತು ನೀರಾವರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಪ್ಪತಗುಡ್ಡದ ಹಸಿರಿಗೆ ಮತ್ತೆ ಬೆಂಕಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಜಿಲ್ಲೆಯ ಸಹ್ಯಾದ್ರಿ ಕಪ್ಪತಗುಡ್ಡದ ಹಸಿರಿನ ವೈಭವದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ದಟ್ಟವಾದ ಹೊಗೆಯಲ್ಲಿ ಕಪ್ಪತಗುಡ್ಡ ಆವರಿಸಿಕೊಂಡಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಬಳಿಯ ಕಪ್ಪತಮಲ್ಲಯ್ಯನ ದೇವಸ್ಥಾನದ ಬಳಿ‌ ಇಂದು ಮಧ್ಯಾಹ್ನ ಬೆಂಕಿ ಬಿದ್ದಿದೆ.
ಇದರಿಂದಾಗಿ ಅಪಾರ ಪ್ರಮಾಣದ ಆಯುರ್ವೇದ ಔಷಧೀಯ ಸಸ್ಯಗಳು ಸುಟ್ಟಿವೆ.

ಕಳೆದ ಬುಧವಾರವೂ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಬೆಂಕಿ ಕಪ್ಪತ್ತಮಲ್ಲಯ್ಯನ ಗುಡ್ಡದವರೆಗೂ ಹರಡಿತ್ತು.

ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಬೆಂಕಿ ಪ್ರಕರಣಗಳು ಕಂಡು ಬರುತ್ತಿದ್ದವು.

ಡಿಎಫ್ಒ ಸ್ಪಷ್ಟನೆ

ಕಪ್ಪತಗುಡ್ಡದಲ್ಲಿ ಯಾವುದೇ ಬೆಂಕಿ ಅವಘಡ ಸಂಭವಿಸಿಲ್ಲ. ಬೇಸಿಗೆ ಸಮಯಯ ಸಂಭವಿಸುವ ಬೆಂಕಿಯನ್ನು ತಪ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆಯಿಂದ ಕೈಗೊಂಡಿರುವ ಫೈರ್ ಲೈನ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಯಾವುದೇ ಬೆಂಕಿ ಹೊತ್ತಿಲ್ಲ ಎಂದು ಡಿಎಫ್ಒ ಸೂರ್ಯಸೇನ್ ಮಾಹಿತಿ ನೀಡಿದ್ದಾರೆ.

ಇದು ಆತ್ಮಹತ್ಯೆ ಅಲ್ಲ: ಹಿಟ್ ಆಂಡ್ ರನ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಮುಳಗುಂದನಾಕಾದಲ್ಲಿ ಮಧ್ಯರಾತ್ರಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅದು ಸುಸೈಡ್ ಅಲ್ಲ ಬದಲಾಗಿ ಹಿಟ್ ಆಂಡ್ ರನ್ ಕೇಸ್ ಎಂದು.

ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಶುಕ್ರವಾರ ‌ಮಧ್ಯರಾತ್ರಿ ಮುಳಗುಂದನಾಕಾದಲ್ಲಿ ಯುವಕನೋರ್ವ ರಸ್ತೆ ದಾಟುತ್ತಿದ್ದಾಗ ಭಾರಿ ಗಾತ್ರದ ಲಾರಿ ಡಿಕ್ಕಿ ಪಡಿಸಿ ಪರಾರಿಯಾಗಿತ್ತು. ನಂತರ ಆ ಯುವಕ ಮೃತಪಟ್ಟಿದ್ದ. ಮೃತಪಟ್ಟವನ ಬಗ್ಗೆ ಮೊದಲು ಮಾಹಿತಿ ಇರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಮೃತನ ಬಗ್ಗೆ ಮಾಹಿತಿ ಸಿಕ್ಕಿದ್ದು, ಗದಗನ‌ ರಹಮತ್ ನಗರ ನಿವಾಸಿ ನಾಗರಾಜ್ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ ಚಲಿಸುವ ಲಾರಿಯಡಿ ಬಿದ್ದು ಯುವಕ ಆತ್ಮಹತ್ಯೆ

ಈ ಮೊದಲು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಈಗ ಮೃತನ ಕುಟುಂಬದವರು, ಯಾವುದೋ ಗಾಡಿ ಡಿಕ್ಕಿ ಹೊಡೆದಿದ್ದರಿಂದಲೇ ನಾಗರಾಜ್ ಮೃತಪಟ್ಟಿದ್ದಾನೆ ಎಂದು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡಿಕ್ಕಿ ಪಡಿಸಿ ಪರಾರಿಯಾದ ಚಾಲಕ ಹಾಗೂ ಲಾರಿ ಪತ್ತೆಗಾಗಿ ಜಾಲ ಬೀಸಿದ್ದಾರೆ.

error: Content is protected !!