Home Blog Page 3096

ಸಿದ್ದರಾಮಯ್ಯ ಮೊಘಲರ ಕಾಲದಲ್ಲಿದ್ದಾರೆ; ಸಚಿವ ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಉಡುಪಿ

ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧ ಕಾನೂನು ಕುರಿತು ಪರ ವಿರೋಧದ ಚರ್ಚೆಗಳು ಶುರುವಾಗಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಪ್ರಾರಂಭವಾಗಿದೆ.

ಲವ್ ಜಿಹಾದ್ ವಿಚಾರವಾಗಿ ಉಡುಪಿಯಲ್ಲಿ ಗುರುವಾರ ಪ್ರತಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯನವರು ಮೊಘಲ್ ಶಕೆಯಲ್ಲಿ ಬದುಕುತ್ತಿದ್ದಾರೆ.
ಮುನ್ನೂರು ವರ್ಷದಿಂದ ಲವ್ ಜಿಹಾದ್ ಇದೆ ಎಂದು ಅವರೇ ಹೇಳಿದ್ದಾರೆ. ಅದಕ್ಕೆ ಅವರಿನ್ನೂ ಮೊಘಲ್ ಶಕೆಯಲ್ಲಿ ಇದ್ದಾರೆ ಎಂದರು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಜಾರಿಗೆ ತರಲು ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತದೆ.
ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶ ಸರ್ಕಾರಗಳು ಲವ್ ಜಿಹಾದ್ ಕಾನೂನು ಜಾರಿಗೆ ಚಿಂತನೆ ಮಾಡಿವೆ. ಅದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಚಿಂತನೆ ನಡೆಸಿದೆ ಎಂದರು.

ಲವ್ ಜಿಹಾದ್ ಕಾನೂನು ಹೇಗೆ ಜಾರಿಗೊಳಿಸಬೇಕು, ಯಾವ ಅಂಶಗಳನ್ನು ಸೇರಿಸಬೇಕೆಂಕು ಎಂಬುವುದು ಮುಖ್ಯವಾಗಿದೆ. ಲವ್ ಜಿಹಾದ್ ಕಾನೂನು ಕುರಿತು ಉತ್ತರಪ್ರದೇಶ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅಧಿಸೂಚನೆಯ ಪ್ರತಿಗಳನ್ನು ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಇದನ್ನು ಘೋಷಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಡಿ.5ರಂದು ಬಂದ್ ಮಾಡಬೇಡಿ; ಸಚಿವ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ,ಉಡುಪಿ

ಡಿ.5 ರಂದು ಎಲ್ಲಾ ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತದೆ. ಬಂದ್ ಮಾಡಬಾರದು ಎಂದು ಸುಪ್ರೀಂಕೋರ್ಟ್ ನ ಸ್ಪಷ್ಟ ಆದೇಶವಿದ್ದು, ಬಂದ್ ಮಾಡಿದರೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದಂತೆ ಆಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಡಿ.5 ರ ಕರ್ನಾಟಕ ಬಂದ್ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂದ್ ಮಾಡಬೇಡಿ ಎಂದು ಮುಖ್ಯಮಂತ್ರಿ ಅವರೊಂದಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ.
ಇಷ್ಟರ ಮೇಲೆಯೂ ಬಂದ್ ಮಾಡಿದರೆ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಬೇಕಾಗಿರುವ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಭದ್ರತೆಗೆ ಬೇಕಾದ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹೊಸ ವರ್ಷಾಚರಣೆಗೆ ತಡೆ ವಿಚಾರವಾಗಿ ಮಾತನಾಡಿದ ಅವರು, ನೈಟ್ ಕರ್ಪ್ಯೂ ಬಗ್ಗೆ ಯಾವುದೇ ಸಭೆ ಕರೆದಿಲ್ಲ. ಜನ ಸೇರದಂತೆ ನೋಡಿಕೊಳ್ಳಲು ತಜ್ಞರು ತಿಳಿಸಿದ್ದಾರೆ. ಇವತ್ತು ಅಥವಾ ನಾಳೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ.
ನೈಟ್ ಕರ್ಪ್ಯೂ ಬಗ್ಗೆ ಯಾವುದೇ ಚಿಂತನೆ ಇಲ್ಲ. ಬದಲಾಗಿ ಹೊಸ ವರ್ಷಾಚರಣೆಯಲ್ಲಿ ಜನ ಸಂದಣಿಯಾಗದಂತೆ ನೋಡುವ ಜವಾಬ್ದಾರಿ ಇದೆ.
ನೈಟ್ ಕರ್ಪ್ಯೂ ಹೊರತಾಗಿಯೂ ಕ್ರಮ‌ ಕೈಗೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು.

ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ ಜಾಕೀರ್ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಜಾಕೀರ್ ಬಂಧನವಾಗಿದೆ.
ಇವತ್ತು ರಜೆ ಇರುವುದರಿಂದ ನಾಳೆ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ಜಾಕೀರ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.

ಮಾಜಿ ಶಾಸಕ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಕುರಿತು ಕೋಲಾರ ಪೊಲೀಸರು ತನಿಖೆ ಆರಂಭಿಸಿದ್ದು, ಸ್ಥಳ ಭೇಟಿ, ಟವರ್ ಡಂಪಿಂಗ್ ಮಾಡಿ ಸೇರಿದಂತೆ ಪ್ರತಿಯೊಂದರ ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿಯೊಂದಿಗೆ ಚೆನ್ನಾಗಿದ್ದೇನೆ ; ಶಾಸಕ ಎನ್.ಮಹೇಶ್

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಬಿಜೆಪಿ ಸರ್ಕಾರದ ಜೊತೆ ಚೆನ್ನಾಗಿದ್ದು,
ಕ್ಷೇತ್ರದ ಜನರಿಗೆ ಒಳ್ಳೆಯ ಸುದ್ದಿ ನೀಡಲು ಬಿಜೆಪಿಯವರೊಂದಿಗೆ ಚೆನ್ನಾಗಿದ್ದೇನೆ ಎಂದು ಬಿಎಸ್ಪಿ ಉಚ್ಚಾಟಿತ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೊಳ್ಳೆಗಾಲದಲ್ಲಿ ಮಾತನಾಡಿದ ಅವರು, ಬಿಜೆಪಿ ಸೇರುವ ಆಪ್ಶನ್ ಯಾವತ್ತಿಗೂ ತೆರೆದಿದ್ದು, 2008 ರಿಂದ ಯಡಿಯೂರಪ್ಪ ಅವರು ನನ್ನೊಂದಿಗೆ ಚೆನ್ನಾಗಿದ್ದಾರೆ ಎಂದರು.

ಕ್ಷೇತ್ರದ ಅಭಿವೃದ್ಧಿಯಾದ ದಿನವೇ ನನ್ನ‌ ಕ್ಷೇತ್ರದ ಜನರಿಗೆ ಒಳ್ಳೆಯ ಸುದ್ದಿ. ಸಂಕ್ರಾಂತಿ ಹಬ್ಬಕ್ಕೆ ಸಾಕಷ್ಟು ಅನುದಾನ ಕೊಟ್ಟರೆ ಪಕ್ಕಾ ಒಳ್ಳೆಯ ಸುದ್ದಿ ಕೊಡುತ್ತೇನೆ. ಅಲ್ಲದೇ, ನನ್ನ‌ ಕ್ಷೇತ್ರದ ಬಸ್ ನಿಲ್ದಾಣ, ಅಂಬೇಡ್ಕರ್ ಭವನ, ವಾಲ್ಮೀಕಿ‌ ಭವನ ಲೋಕಾರ್ಪಣೆಗೊಳ್ಳಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು.

ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ; ಶಾಸಕ ಶ್ರೀನಿವಾಸಮೂರ್ತಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧನವಾಗಿರುವ ಬಗ್ಗೆ ಮಾಹಿತಿ ಇದ್ದು, ಇದರಿಂದ ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದರು.

ತಮ್ಮ ಡಿ.ಜೆ.ಹಳ್ಳಿಯಲ್ಲಿನ ಮನೆಯ ಮೇಲಿನ ದಾಳಿಯಿಂದಾಗಿ ಆತಂಕಕ್ಕೆ ಒಳಗಾಗಿದ್ದ ಶಾಸಕರು, ಮಾಜಿ ಕಾರ್ಪೊರೇಟರ್ ಜಾಕೀರ್ ಬಂಧನದ ವಿಚಾರವಾಗಿ ಬೆಂಗಳೂರಿನಲ್ಲಿ ಗುರುವಾರ
ಮಾತನಾಡಿದ್ದಾರೆ.

ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಜಾಕೀರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದೆ. ಅವರು ಶಿಸ್ತು ಸಮಿತಿಗೆ ವಹಿಸುವ ಭರವಸೆ ಕೊಟ್ಟಿದ್ದರು‌. ಆದರೆ ಅವರು ಈವರೆಗೆ ಡಿ.ಜೆ.ಹಳ್ಳಿ ಗಲಭೆ ಪ್ರಕರಣವನ್ನು ಶಿಸ್ತು ಸಮಿತಿಗೆ ವಹಿಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಅಲ್ಲದೇ, ಇದು ನನ್ನ ಮನೆಗೆ ಸಂಬಂಧಿಸಿದ ವಿಷಯವಾಗಿದ್ದು, ಹಾಗಾಗಿ ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೇನೆ. ಒಂದು ವೇಳೆ ಶಿಸ್ತು ಸಮಿತಿ ಸ್ಪಂದಿಸದಿದ್ದಲ್ಲಿ ಎಐಸಿಸಿಗೆ ಪತ್ರ ಬರೆಯುತ್ತೇನೆ. ಒಟ್ಟಿನಲ್ಲಿ ನನಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ ಶಾಸಕರು, ಅರವಿಂದ ಲಿಂಬಾವಳಿ ಅವರು ನನಗೆ ಸಂಬಂಧಿಕರು ಹಾಗಾಗಿ ನನಗೆ ಬೆಂಬಲ ನೀಡಿದ್ದಾರೆ. ನಾನು ಪಕ್ಷ ಬಿಡುವುದಿಲ್ಲ. ಬಿಜೆಪಿ ಸೇರುವ ಪ್ರಶ್ನೆ ಇಲ್ಲ. ನನ್ನ ತಂದೆ ಕಾಲದಿಂದ ನಾವು ಕಾಂಗ್ರೆಸ್ ಪಕ್ಷದಲ್ಲಿದ್ದೇವೆ. ಮುಂದೆಯೂ ಕಾಂಗ್ರೆಸ್ ನಲ್ಲಿಯೇ ಇರುತ್ತೇವೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ಅಕ್ರಮ ಶ್ರೀಗಂಧ ವಶಕ್ಕೆ; ಆರೋಪಿಗಳ ಬಂಧನ

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಇಲ್ಲಿನ ಹೊಸನಗರ ತಾಲೂಕಿನ ಬಾವಿಯೊಂದರಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಸುಮಾರು 3 ಲಕ್ಷಕ್ಕೂ ಅಧಿಕ ಮೌಲ್ಯದ 38 ಕೆ.ಜಿ. ಶ್ರೀಗಂಧ ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ‌‌.

ಶ್ರೀಗಂಧದ ತುಂಡುಗಳನ್ನು ಬಾಣಿಗ ವಾಸಿ ಹನೀಫ್ ಸಾಬ್ ಎಂಬಾತ ಅಕ್ರಮವಾಗಿ ಯಾರಿಗೂ ಗೊತ್ತಾಗದಂತೆ ಬಾವಿಯೊಳಗೆ ಪಂಪ್ ಸೆಟ್ ಇಳಿಸುವಂತೆ ಶ್ರೀಗಂಧವನ್ನು ಚೀಲದೊಳಗೆ ತುಂಬಿ ಬಾವಿಗೆ ಇಳಿಸಿ ಸಂಗ್ರಹಿಸಿಟ್ಟಿದ್ದ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿವಮೊಗ್ಗದ ಅರಣ್ಯ ಸಂಚಾರಿ ದಳ ಮತ್ತು ಹೊಸನಗರ ಅರಣ್ಯ ವಲಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಹೊಸನಗರ ಅರಣ್ಯ ವಲಯ ವ್ಯಾಪ್ತಿಯ ಬಾಣಿಗ ಗ್ರಾಮದಲ್ಲಿ ಬಾವಿಯಲ್ಲಿ ಬಚ್ಚಿಟ್ಟಿದ್ದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಅರಣ್ಯಾಧಿಕಾರಿಗಳು ಮೊದಲು ಆರೋಪಿ ಹನೀಫ್ ನನ್ನು ಬಂಧಿಸಿದ್ದು, ಬಳಿಕ ಆತನ ಹೇಳಿಕೆ ಆಧರಿಸಿ ಕೃತ್ಯದಲ್ಲಿ ಭಾಗಿಯಾದ ತಾಲೂಕಿನ ದುಮ್ಮಾ ನಿವಾಸಿ ಮಂಜುನಾಥ್, ಹೊಸಕೆಸರೆ ಹಾಲೇಶ್, ಸಾಗರದ ಶಿವಪ್ಪನಾಯಕ ಮತ್ತು ರಸ್ತೆ ವಾಸಿಯಾದ ಮಂಜುನಾಥ್ ಎಂಬುವವರನ್ನು ಬಂಧಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕೃಷ್ಣಯ್ಯಗೌಡ ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಅರಣ್ಯ ಸಂಚಾರಿದಳದ ಎಸಿಎಫ್ ಬಾಲಚಂದ್ರ, ಹೊಸನಗರ ಎಸಿಎಫ್ ಶಿವಮೂರ್ತಿ, ವಲಯ ಅರಣ್ಯಾಧಿಕಾರಿ ಕೃಷ್ಣಯ್ಯಗೌಡ ಅರಣ್ಯ ಸಿಬ್ಬಂದಿಗಳು ಭಾಗಿಯಾಗಿದ್ದರು.

ಕುಖ್ಯಾತ ರೌಡಿ ಖಲೀಲ ಸೇರಿದಂತೆ ನಾಲ್ವರ ಬಂಧನ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಇಲ್ಲಿನ ಶಹಾಬಾದ್ ರಿಂಗ್ ರೋಡ್ ಬಳಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಖದೀಮರನ್ನು ವಿವಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಸುಕು ಧರಿಸಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನಾಲ್ಕು ಜನ ಖದೀಮರು ಕುಖ್ಯಾತ ರೌಡಿ ಖಲೀಲ್ ಸಹಚರರು ಎಂದು ತಿಳಿದು ಬಂದಿದೆ.

ಗಜಾನಂದ ದೇಶಪಾಂಡೆ, ಇಕ್ಬಾಲ್ ರಜಾಕ್, ಮಹಮ್ಮದ್ ಇಕ್ಬಾಲ್, ಅಸ್ಪಕ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಒಂದು ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಕಲಬುರಗಿ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ನದ್ದು ಕ್ರಾಸ್ ಬ್ರೀಡ್ ಸಂತತಿ; ಸಚಿವ ಈಶ್ವರಪ್ಪ

ಸಿದ್ದರಾಮಯ್ಯ ಇನ್ನೊಮ್ಮೆ ಹುಟ್ಟಿ ಬಂದರೂ ಕಾಯ್ದೆ ಜಾರಿಗೆ ತರುವುದನ್ನು ನಿಲ್ಲಿಸಲು ಆಗುವುದಿಲ್ಲ: ಶೋಭಾ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

‘ಕ್ರಾಸ್ ಬ್ರೀಡ್ ಬಗ್ಗೆ ಸಿದ್ದರಾಮಯ್ಯನವರಿಗೆ ತುಂಬಾ ಆಸಕ್ತಿ ಇದೆ. ಕಾಂಗ್ರೆಸ್ ನವರದ್ದು ಕ್ರಾಸ್ ಬ್ರೀಡ್ ಸಂತತಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಹಿಂದೂ ಮುಸ್ಲಿಂ ಕ್ರಾಸ್ ಆಗಿ ಬಹಳ ಜನ ಹುಟ್ಟಿದ್ದಾರೆ ಎಂಬ ಸಿದ್ದರಾಮಯ್ಯನವರ
ಹೇಳಿಕೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಪ್ರತಿಕ್ರಿಯಿಸಿದ ಅವರು, ಲವ್ ಜಿಹಾದ್ ಬ್ಯಾನ್ ಮಾಡಬೇಕೆಂಬ ಚಿಂತನೆ ಇರುವುದು ನಿಜ. ಸಿದ್ದರಾಮಯ್ಯನವರ ಹೇಳಿಕೆಯೇ ಮೂರ್ಖತನದ್ದು. ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು.
ಮುಸಲ್ಮಾನರನ್ನು ಓಲೈಸುವುದು ಇನ್ನಾದರೂ ಬಿಡಬೇಕು ಎಂದು ಸಿದ್ದರಾಮಯ್ಯಗೆ ಸಚಿವ ಈಶ್ವರಪ್ಪ ಕುಟುಕಿದರು.

‘ಲವ್ ಜಿಹಾದಿಗೆ ಕಾನೂನು ಬರಲೇಬೇಕು, ಅದು ಬರುತ್ತದೆ. ಲವ್ ಜಿಹಾದ್ ಕೇವಲ ಪ್ರೀತಿಯ ಸಂಗತಿಯಲ್ಲ ಮತಾಂತರದ ಷಡ್ಯಂತ್ರ, ದೇಶಾಂತರದ ಷಡ್ಯಂತ್ರ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಇನ್ನೊಮ್ಮೆ ಹುಟ್ಟಿ ಬಂದರೂ ಕಾಯ್ದೆ ಜಾರಿಗೆ ತರುವುದನ್ನು ನಿಲ್ಲಿಸಲು ಆಗುವುದಿಲ್ಲ.
ಸಿದ್ದರಾಮಯ್ಯನವರು ಹಗುರವಾಗಿ, ಕೇವಲವಾಗಿ ಮಾತನಾಡಿದ್ದಾರೆ. ಅವರು ಯಾವ ಕ್ರಾಸ್ ಬಗ್ಗೆ ಮಾತನಾಡಿದ್ದಾರೆ? ಅವರಿಗೆ ಯಾವ ಕ್ರಾಸ್ ಬಗ್ಗೆ ಗೊತ್ತಿದೆ.? ಅದರಲ್ಲಿ ಅವರ ಪಾತ್ರವೇನು? ಈ ಬಗ್ಗೆ ನನಗೆ ಗೊತ್ತಿಲ್ಲ.ಹಾಗಾಗಿ ಅವರೇ ಉತ್ತರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

ಲವ್ ಜಿಹಾದ್ ನಿಷೇಧದ ಕುರಿತ ವಿಚಾರಕ್ಕೆ ಸಿಟ್ಟಾದ ಸಿದ್ದರಾಮಯ್ಯ ಮದುವೆ ಎಂಬುವುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ಇಂತವರನ್ನೇ ಮದುವೆಯಾಗಿ ಎಂಬುವುದು ಸರಿಯಲ್ಲ. ಹಿಂದೂ ಮುಸ್ಲಿಂ ಕ್ರಾಸ್ ಆಗಿ ಬಹಳ ಜನ ಜನಿಸಿದ್ದಾರೆ. ಲವ್ ಜಿಹಾದ್ ನಿಷೇಧ ಕಾನೂನು ಜಾರಿಗೆ ತರಲು ನಮ್ಮ ವಿರೋಧವಿದೆ ಎಂದಿದ್ದರು.

ರಾಜ್ಯ ಸರಕಾರದ ಭ್ರಷ್ಟಾಚಾರ ವಿರೋಧಿಸಿ ಸೈಕಲ್ ಯಾತ್ರೆ

-ಬೆಳಗಾವಿಯಿಂದ ಬಳ್ಳಾರಿವರೆಗೆ ಕೆಆರ್‌ಎಸ್‌ನಿಂದ ಚಲಿಸು ಕರ್ನಾಟಕ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯ ಕೊರೋನಾ ವೈರಸ್‌ನಿಂದ ನಲುಗಿದಂತೆ ಭ್ರಷ್ಟ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಿಂದ ಸೊರಗಿದೆ. ರಾಜ್ಯ ಸರಕಾರದ ದುರಾಡಳಿತ, ಭ್ರಷ್ಟಾಚಾರ ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಬೆಳಗಾವಿಯಿಂದ ಬಳ್ಳಾರಿವರೆಗೆ ಸುಮಾರು 300 ಕಿ.ಮೀ. ಸೈಕಲ್ ಯಾತ್ರೆ ಹಮ್ಮಿಕೊಂಡಿದೆ ಎಂದು ಕೆಆರ್‌ಎಸ್‌ಪಿ ಮುಖಂಡ ಪ.ಯ.ಗಣೇಶ ತಿಳಿಸಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್‌ 30ರಂದು ಕಿತ್ತೂರಿನಿಂದ ಆರಂಭಗೊಂಡಿರುವ ಸೈಕಲ್ ಯಾತ್ರೆಗೆ ಹಿರಿಯ ಸಾಮಾಜಿಕ ಹೋರಾಟಗಾರ, ಚಿಂತಕ ಎಸ್.ಆರ್.ಹಿರೇಮಠ ಚಾಲನೆ ನೀಡಿದರು. ಡಿಸೆಂಬರ್ 3ರಂದು ಭಾನಾಪುರದವರೆಗೆ ಆಗಮಿಸುವ ಸೈಕಲ್ ಯಾತ್ರೆ ಡಿಸೆಂಬರ್ 4ರಂದು ಕೊಪ್ಪಳಕ್ಕೆ ಆಗಮಿಸಿ ನಗರದ ಮೂರು ಕಡೆ ಸಾರ್ವಜನಿಕರನ್ನು ಉದ್ದೇಶಿಸಿ ಮುಖಂಡರು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಡಿಸೆಂಬರ್ 7ರಂದು ಬಳ್ಳಾರಿಯಲ್ಲಿ ಸೈಕಲ್ ಯಾತ್ರೆ ಸಮಾರೋಪಗೊಳ್ಳಲಿದ್ದು, ಆನಂತರ ನಮ್ಮ ಪಕ್ಷವು ಗ್ರಾಪಂ ಚುನಾವಣೆಯತ್ತ ಗಮನ ಹರಿಸಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಆರ್‌ಪಿಯ ಮುಖಂಡ ಪ್ರಶಾಂತ್ ಕೆ. ಇದ್ದರು.

ಬಿಜೆಪಿ ವಿಶ್ವನಾಥ್ ಬೆನ್ನಿಗಿರುತ್ತೆ: ಸವದಿ

-ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸುವ ಪ್ರಸ್ತಾವನೆಯೇ ಇಲ್ಲ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪನ್ನು ಖಂಡಿಸಲಾಗದು, ಆದರೆ ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಬಿಜೆಪಿ ವಿಶ್ವನಾಥ್ ಅವರ ಬೆನ್ನಿಗೆ ನಿಲ್ಲುತ್ತೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಕೊಪ್ಪಳದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಕಹಿ ಘಟನೆಗಳಿಂದ ಬೇಸರವಾಗುವುದು ಸಹಜ. ಬೇಸರದಲ್ಲಿ ವಿಶ್ವನಾಥ್ ಅವರು ಸಾಹಿತ್ಯೀಕ ಧಾಟಿಯಲ್ಲಿ ಮಾತನಾಡಿರಬಹುದು. ವಿಶ್ವನಾಥ್ ಸೇರಿದಂತೆ ಬೇರೆ ಪಕ್ಷಗಳಿಂದ ಬಿಜೆಪಿ ಸೇರಿದ ಶಾಸಕರ ಬಗ್ಗೆ ಬಿಜೆಪಿ ಸದಾ ಜೊತೆಗಿರುತ್ತದೆ ಎಂದರು.

ಸಿದ್ದರಾಮಯ್ಯನವರು ತಮಗಾದ ಅನುಭವ ಹೇಳಿಕೊಳ್ಳುತ್ತಾರೆ. ಬಿಜೆಪಿಯಲ್ಲಂತು ಭಿನ್ನಮತವಿಲ್ಲ. ಒಗ್ಗಟ್ಟಿನಿಂದ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಮತ್ತು ಪಕ್ಷದ ನಾಯಕರು, ಸಚಿವರು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಿಂದ ಗ್ರಾಮ ಸ್ವರಾಜ್ ಮಾಡ್ತಾ ಇದ್ದೇವೆ. 6 ತಂಡಗಳಿಂದ 62 ಸಭೆ 30 ಜಿಲ್ಲಾದ್ಯಂತ ನಡೆಸಲಿದ್ದೇವೆ. ಪಕ್ಷದ ಬೆಂಬಲಿಗರನ್ನು, ಶ್ರಮಿಸಿದ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಗ್ರಾಮ ಸ್ವರಾಜ್ಯ ಕನಸು, ನನಸಾಗಿಸಲು ಪಕ್ಷ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ಚುಕ್ಕಾಣಿ ನೀಡಲು ಪಕ್ಷ ಯೋಚಿಸಿದೆ. ಬೂತ್‌ವೊಂದರಲ್ಲಿ ಪಂಚರತ್ನ ಕಮಿಟಿ ಇರುತ್ತೆ. ಈ ಕಮಿಟಿ ಎಲ್ಲ ಕುಟುಂಬಗಳನ್ನು ಭೇಟಿ ಮಾಡಿ ಮತ ಕೇಳುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಸಮಗ್ರ ಮಾಹಿತಿ ನೀಡಿದರು.

ಇನ್ನುಳಿದ ಅವಧಿಗೂ ಯಡಿಯೂರಪ್ಪ ಅವರೇ ಸಿಎಂ

ಅರಣ್ಯ ಜಾಗವನ್ನು ಎಲ್ಲೇ, ಯಾರೇ ಒತ್ತುವರಿ ಮಾಡಿದ್ರೂ ಸಹಿಸಲ್ಲ, ಕಾನೂನು ಮೀರಿ ಸಸ್ಯ ಸಂಪತ್ತನ್ನು ವಿನಾಶ ಮಾಡಿದ್ರೆ ಕ್ರಮ ಖಚಿತ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.

ಕೊಪ್ಪಳದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಚ್.ವಿಶ್ವನಾಥ್ ಅವರಿಗೆ ಅನ್ಯಾಯ ಆಗಲು ಬಿಡಲ್ಲ. ಆ ರೀತಿ ಏನಾದರೂ ಆದರೆ ನಾವು ಅವರ ಹಿಂದೆ ನಿಲ್ಲುತ್ತೇವೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಸರಕಾರದ ಇನ್ನುಳಿದ ಅವಧಿಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಅವರು ತಿಳಿಸಿದರು.

ಗ್ರಾ.ಪಂ. ಚುನಾವಣೆ: ಸರ್ಕಾರಿ ವಾಹನ, ಅತಿಥಿ ಗೃಹ ವಶಕ್ಕೆ ಸೂಚನೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ಗದಗ: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು ಗದಗ ಜಿಲ್ಲೆಯಲ್ಲಿ ಡಿ. 22 ಮತ್ತು 27ರಂದು ಒಟ್ಟು ಎರಡು ಹಂತಗಳಲ್ಲಿ ಜರುಗಲಿದೆ. ಈ ಕುರಿತು ನ. 30ರಂದು ನೀತಿ ಸಂಹಿತೆ ಜಾರಿಗೆ ಬಂದಿದೆ. ಜಿ.ಪಂ., ತಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹಾಗೂ ಎಪಿಎಂಸಿ ಅಧ್ಯಕ್ಷರಿಗೆ ಒದಗಿಸಲಾದ ಸರ್ಕಾರಿ ವಾಹನಗಳನ್ನು ತಕ್ಷಣದಿಂದ ಹಿಂದಕ್ಕೆ ಪಡೆಯಲಾಗಿದೆ.

ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಅವುಗಳನ್ನು ಆಯಾ ತಾಲೂಕಿನ ತಹಸೀಲ್ದಾರರ ವಶಕ್ಕೆ ನೀಡತಕ್ಕದ್ದು. ಗದಗ ತಾಲೂಕಿನ ವಾಹನಗಳನ್ನು ತಹಸೀಲ್ದಾರರು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಒಪ್ಪಿಸಬೇಕು. ಜಿಲ್ಲೆಯ ಗ್ರಾಮೀಣ ಮಟ್ಟದಲ್ಲಿ ಬರುವ ಎಲ್ಲ ನಿರೀಕ್ಷಣಾ ಮಂದಿರಗಳು, ಪ್ರವಾಸಿ ಮಂದಿರಗಳು, ಮಂಡಳಿಗಳ/ ನಿಗಮಗಳ ಅತಿಥಿ ಗೃಹಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಜಿಲ್ಲಾಧಿಕಾರಿಗಳ ಅಧೀನಕ್ಕೆ ಪಡೆದುಕೊಳ್ಳಲಾಗಿದೆ.

ತಹಸೀಲ್ದಾರರು ತಮ್ಮ ತಾಲೂಕಿನಲ್ಲಿರುವ ಅತಿಥಿಗೃಹ  ಕಟ್ಟಡಗಳನ್ನು ವಶಕ್ಕೆ ಪಡೆದುಕೊಂಡು ವರದಿ ಸಲ್ಲಿಸಬೇಕೆಂದು ಗದಗ ಜಿಲ್ಲಾಧಿಕಾರಿಗಳು ಮತ್ತು  ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. 

error: Content is protected !!