Home Blog Page 31

ಯೋಗೀಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದ್ದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ 15ನೇ ಆರೋಪಿ ವಿನಯ್ ಕುಲಕರ್ಣಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 19ನೇ ಆರೋಪಿ ಚನ್ನಕೇಶವ ಟಿಂಗರಿಕರ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಎ1 ಬಸವರಾಜ ಮುತ್ತಗಿಯನ್ನು ಮಾಫಿ ಸಾಕ್ಷಿಯಾಗಿ ನ್ಯಾಯಾಲಯ ಪರಿಗಣಿಸಿದೆ. ಇದಲ್ಲದೆ, ಮೃತ ಯೋಗೇಶ್ ಗೌಡ ಅವರ ಮಕ್ಕಳಿಗೆ 16 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

ಈ ತೀರ್ಪು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯಡಿ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೂ ಧಕ್ಕೆಯಾಗುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದು, ಅವರಲ್ಲಿ ಇಬ್ಬರು ಮಾಫಿ ಸಾಕ್ಷಿಗಳಾಗಿದ್ದಾರೆ. ಉಳಿದ 19 ಮಂದಿಯನ್ನು ಕೋರ್ಟ್ ದೋಷಿಗಳೆಂದು ತೀರ್ಮಾನಿಸಿದೆ. ಎ17 ಶಿವಾನಂದ ಮಾಫಿ ಸಾಕ್ಷಿಯಾದ ಬಳಿಕ ಪ್ರತಿಕೂಲ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಅವರನ್ನು ಮರುಆರೋಪಿಯಾಗಿ ಪರಿಗಣಿಸುವಂತೆ ಸಿಬಿಐ ಮನವಿ ಸಲ್ಲಿಸಿದೆ.

ಇನ್ನು ಎ20 ವಾಸುದೇವ ನಿಲೇಕಣಿ ಮತ್ತು ಎ21 ಸೋಮಶೇಖರ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇತರೆ ಆರೋಪಿಗಳಾದ ವಿಕ್ರಮ್, ಕೀರ್ತಿ ಕುಮಾರ್, ಸಂದೀಪ್, ವಿನಾಯಕ, ಮಹಾಬಲೇಶ್ವರ್, ಸಂತೋಷ್, ದಿನೇಶ್, ಅಶ್ವತ್, ಸುನಿಲ್, ನಜೀರ್ ಅಹಮದ್, ಷಾನವಾಜ್, ನೂತನ್, ಹರ್ಷಿತ್, ಚಂದ್ರು ಮಾಮ, ವಿಕಾಸ್ ಕಲಬುರ್ಗಿ ಸೇರಿದಂತೆ ಹಲವರನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಲಾಗಿದೆ.

4 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಮಾಜಿ ಪೊಲೀಸ್ ಅಧಿಕಾರಿಗೆ 20 ವರ್ಷ ಜೈಲು

0

ಜೈಪುರ್: ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ವಜಾಗೊಂಡ ರಾಜಸ್ಥಾನ ಪೊಲೀಸ್ ಸಬ್‌-ಇನ್ಸ್ಪೆಕ್ಟರ್ ಭೂಪೇಂದ್ರ ಸಿಂಗ್ ಯಾದವ್‌ಗೆ ದೌಸಾ ಜಿಲ್ಲೆಯ ಪೋಕ್ಸೊ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ನ್ಯಾಯಾಲಯವು ಆರೋಪಿಗೆ 2 ಲಕ್ಷ ರೂ. ದಂಡ ವಿಧಿಸಿದ್ದು, ಆ ಮೊತ್ತವನ್ನು ಸಂತ್ರಸ್ತೆಗೆ ನೀಡಲು ಆದೇಶಿಸಿದೆ. ಜೊತೆಗೆ ಸಂತ್ರಸ್ತೆಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಶಿಫಾರಸು ಮಾಡಿದೆ.

2023ರಲ್ಲಿ ರಾಹುವಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಭೂಪೇಂದ್ರ ಸಿಂಗ್ ಯಾದವ್, ಬಾಲಕಿಗೆ ಕ್ಯಾಂಡಿ ಕೊಡಿಸುವುದಾಗಿ ಹೇಳಿ ತನ್ನ ಕೊಠಡಿಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ, ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ನಂತರ ಪೊಲೀಸ್ ಇಲಾಖೆ ಕೂಡ ಅವನನ್ನು ಸೇವೆಯಿಂದ ವಜಾಗೊಳಿಸಿತು. ತ್ವರಿತವಾಗಿ ತನಿಖೆ ಪೂರ್ಣಗೊಳಿಸಿ ಪೋಕ್ಸೊ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಲಾಯಿತು.

ವಿಚಾರಣೆ ವೇಳೆ ಸಂತ್ರಸ್ತೆ ಪರವಾಗಿ 33 ಸಾಕ್ಷಿಗಳು ಹಾಗೂ 46 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಧೀಶೆ ರೇಖಾ ರಾಥೋಡ್ ಅವರು ಆರೋಪಿಯನ್ನು ತಪ್ಪಿತಸ್ಥ ಎಂದು ಘೋಷಿಸಿದರು.

ಶಿಕ್ಷೆ ಪ್ರಕಟವಾದ ಬಳಿಕ, ಯಾದವ್ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ತೀರ್ಪು ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ವಿಶೇಷ ಸಾರ್ವಜನಿಕ ಅಭಿಯೋಜಕ ಜಿತೇಂದ್ರ ಕುಮಾರ್ ಸೈನಿ ಈ ಪ್ರಕರಣವನ್ನು ಅತ್ಯಂತ ಗಂಭೀರ ಮತ್ತು ಮನಕಲಕುವ ಘಟನೆ ಎಂದು ವಿವರಿಸಿದ್ದಾರೆ.

ರಾಜ್ಯದಲ್ಲಿ ತಾಪಮಾನ ಏರಿಕೆ ಜೊತೆಗೆ ಮಳೆ ಭೀತಿ: ಹವಾಮಾನ ಇಲಾಖೆಯ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ದಿನೇದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದರೂ, ಇದೇ ವೇಳೆ ಏಪ್ರಿಲ್ 21ರವರೆಗೆ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಿಭಾಗದ ಮುನ್ಸೂಚನೆ ಪ್ರಕಾರ, ಏಪ್ರಿಲ್ 20ರವರೆಗೆ ಉತ್ತರ ಒಳನಾಡು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದೇ ವೇಳೆ ದಕ್ಷಿಣ ಒಳನಾಡಿನ ಭಾಗಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯೂ ಸಂಭವಿಸಬಹುದು ಎಂದು ತಿಳಿಸಲಾಗಿದೆ.

ಇದರ ನಡುವೆ ರಾಜ್ಯದಲ್ಲಿ ಸಾಮಾನ್ಯಕ್ಕಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್ ಮಟ್ಟಿಗೆ ತಾಪಮಾನ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದು, ಜನರು ಬಿಸಿಲಿನ ತಾಪಕ್ಕೆ ಬಳಲುತ್ತಿದ್ದಾರೆ.

ಏಪ್ರಿಲ್ ತಿಂಗಳಲ್ಲೇ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಮುಂದಿನ ಮೇ ತಿಂಗಳಲ್ಲಿ ಇನ್ನಷ್ಟು ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಡಂಬಳದಲ್ಲಿ ಗಾಡಾ ಓಟದ ಜೋಶ್: ಬಸವ ಜಯಂತಿಗೆ ಎತ್ತುಗಳ ಶರವೇಗದ ಸವಾರಿ!

0

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಖಾಲಿ ಗಾಡಾ ಓಟ ಸ್ಪರ್ಧೆ ಭರ್ಜರಿಯಾಗಿ ನಡೆಯಿತು. ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಪ್ರತಿಬಿಂಬಿಸಿದ ಈ ಕಾರ್ಯಕ್ರಮ ರೈತ ಬಾಂಧವರ ಸ್ವಯಂಪ್ರೇರಿತ ಪ್ರಯತ್ನದಿಂದ ಗಮನ ಸೆಳೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ಎತ್ತುಗಳ ಜೋಡಿಗಳು ಸ್ಪರ್ಧೆಗೆ ವಿಶೇಷ ಮೆರುಗು ತಂದವು. ಅಖಾಡಕ್ಕೆ ಎಂಟ್ರಿ ಕೊಟ್ಟ ಎತ್ತುಗಳ ಗಂಭೀರ ನಡೆ ಹಾಗೂ ಶರವೇಗದ ಓಟ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಕಟ್ಟು ಮಸ್ತಾಗಿ ಬೆಳೆಸಿದ ಎತ್ತುಗಳು ಧೂಳೆಬ್ಬಿಸುತ್ತಾ ಓಡಿದ ದೃಶ್ಯಗಳು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು.

ಸ್ಪರ್ಧೆಯಲ್ಲಿ ಒಂದು ನಿಮಿಷದಲ್ಲಿ ಹೆಚ್ಚು ದೂರ ಓಡಿದ ಎತ್ತುಗಳ ಜೋಡಿಯನ್ನು ವಿಜೇತರಾಗಿ ಘೋಷಿಸಲಾಯಿತು. ಪ್ರಥಮ ಬಹುಮಾನ ₹51 ಸಾವಿರ, ದ್ವಿತೀಯ ₹41 ಸಾವಿರ ಹಾಗೂ ತೃತೀಯ ₹31 ಸಾವಿರ ರೂಪಾಯಿ ನೀಡಲಾಗಿದ್ದು, ಒಟ್ಟು 9 ಬಹುಮಾನಗಳನ್ನು ವಿತರಿಸಲಾಯಿತು.

ಎತ್ತುಗಳ ಮಾಲೀಕರು ವಿಶೇಷ ಆಹಾರಗಳಾದ ಹುರುಳಿ, ಜೋಳದ ನುಚ್ಚು, ಹಿಂಡಿ ನೀಡಿ ಎತ್ತುಗಳನ್ನು ತಯಾರಿಸುತ್ತಾರೆ. ಕೃಷಿಯ ಜೊತೆಗೆ ಈ ಕ್ರೀಡೆಗೂ ಹೆಚ್ಚಿನ ಸಮಯ ಮೀಸಲಿಡುವ ರೈತರ ಅಭಿರುಚಿ ಇಲ್ಲಿ ಸ್ಪಷ್ಟವಾಗಿ ಗೋಚರಿಸಿತು.

ಸಾವಿರಾರು ಜನರು ಸ್ಪರ್ಧೆ ವೀಕ್ಷಿಸಿ ಕೇಕೆ, ಸಿಳ್ಳೆ ಹಾಗೂ ಚಪ್ಪಾಳೆಗಳಿಂದ ಎತ್ತುಗಳಿಗೆ ಹುಮ್ಮಸ್ಸು ತುಂಬಿದರು. ಗ್ರಾಮೀಣ ಕ್ರೀಡೆಗಳ ಜೀವಂತಿಕೆ ಮತ್ತು ಜನರ ಒಲವು ಈ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಕಾಣಿಸಿತು.

‘ಕಾಂತಾರ’ ಗೆ ತ್ರಿಪಲ್ ಅವಾರ್ಡ್: ನಿರ್ಮಾಪಕರಿಗೆ ಧನ್ಯವಾದ ಹೇಳದ ರಿಷಬ್ ಶೆಟ್ಟಿ

ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಕಾಂತಾರ ಸರಣಿ ಮತ್ತೊಮ್ಮೆ ಪ್ರಶಸ್ತಿ ವೇದಿಕೆಯಲ್ಲಿ ಜಯಭೇರಿ ಬಾರಿಸಿದ್ದು, ಐಎನ್ಸಿಎ ಅವಾರ್ಡ್‌ನಲ್ಲಿ ತ್ರಿಪಲ್ ಗೆಲುವು ಸಾಧಿಸಿದೆ.

ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಸಿನಿಮಾ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ, ತಮ್ಮ ನಾಲ್ಕು ವರ್ಷದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಯಶಸ್ಸನ್ನು ತಂಡದ ಶ್ರಮಕ್ಕೆ ಅರ್ಪಿಸಿದ ಅವರು, ಕುಟುಂಬದ ಬೆಂಬಲವನ್ನು ಸ್ಮರಿಸಿದರು.

ಆದರೆ, ಚಿತ್ರ ನಿರ್ಮಿಸಿದ ಹೊಂಬಾಳೆ ಫಿಲಮ್ಸ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಧನ್ಯವಾದ ಸಲ್ಲಿಸದಿರುವುದು ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಇವರಿಬ್ಬರ ನಡುವಿನ ಸಂಬಂಧಗಳಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಈ ನಡೆ ಇನ್ನಷ್ಟು ಸಂಶಯ ಹುಟ್ಟಿಸಿದೆ.

ಇದೇ ವೇಳೆ ರಿಷಬ್ ಶೆಟ್ಟಿ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಜೈ ಹನುಮಾನ್ ನಲ್ಲಿ ನಟಿಸುತ್ತಿದ್ದು, ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ರಾಣಾ ದಗ್ಗುಬಾಟಿ ಕೂಡ ಈ ಸಿನಿಮಾದ ಭಾಗವಾಗಿದ್ದಾರೆ.

ರಿಷಬ್ ಶೆಟ್ಟಿ ತಮ್ಮದೇ ನಿರ್ಮಾಣ ಸಂಸ್ಥೆಯಡಿ ಹೊಸ ಸಿನಿಮಾವನ್ನು ಘೋಷಿಸಿರುವುದು, ಅವರ ಮುಂದಿನ ಹೆಜ್ಜೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

ದೆಹಲಿ ಸೂಚನೆ ಮೇರೆಗೆ ಅಲ್ಪಸಂಖ್ಯಾತ ನಾಯಕರ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರ್

ಬೆಂಗಳೂರು: ದೆಹಲಿ ನಾಯಕತ್ವದ ಸೂಚನೆ ಮೇರೆಗೆ ಅಲ್ಪಸಂಖ್ಯಾತ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ವೈಯಕ್ತಿಕ ಕಾರಣವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈ ನಿರ್ಧಾರ ಸಂಪೂರ್ಣವಾಗಿ ಪಕ್ಷದದ್ದು. ಪಕ್ಷದ ವರದಿ ಮತ್ತು ದೆಹಲಿ ನಾಯಕರ ಸಲಹೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಎಲ್ಲರೂ ಆರೋಪ ಮಾಡಬಹುದು, ಆದರೆ ಅದರಿಂದ ನನಗೆ ಯಾವುದೇ ಚಿಂತೆಯಿಲ್ಲ. ಪಕ್ಷದ ಶಿಸ್ತಿನಂತೆ ನಾವು ನಡೆದುಕೊಳ್ಳಬೇಕು ಎಂದರು.

ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಹಾಗೂ ಅಹಿಂದ ಸಮುದಾಯಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತದೆ. ಎಲ್ಲ ವರ್ಗಕ್ಕೂ ನ್ಯಾಯ ಒದಗಿಸುವುದು ನಮ್ಮ ಉದ್ದೇಶ ಎಂದು ಅವರು ತಿಳಿಸಿದರು.

ಇದೇ ವೇಳೆ, ಪಕ್ಷದೊಳಗಿನ ಗುಂಪು ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಸಿದ್ದರಾಮಯ್ಯ ಗುಂಪು, ಡಿಕೆಶಿ ಗುಂಪು ಎಂಬುದೇ ಇಲ್ಲ. ನಾವು ಎಲ್ಲರೂ ಒಂದೇ ತಂಡ. 146 ಶಾಸಕರು ಒಂದೇ ಗುಂಪಿನವರು ಎಂದು ಹೇಳಿದರು.

ತಾವು ಮತ್ತು ಮುಖ್ಯಮಂತ್ರಿ ನಿರಂತರವಾಗಿ ಚರ್ಚೆ ನಡೆಸುತ್ತೇವೆ. ಪ್ರತ್ಯೇಕ ಗುಂಪುಗಳಿವೆ ಎಂಬುದು ಕೇವಲ ಕಲ್ಪನೆ. ಕಾಂಗ್ರೆಸ್‌ನಲ್ಲಿ ಒಂದೇ ಗುಂಪು ಇದೆ, ಅದು ಕಾಂಗ್ರೆಸ್ ಗುಂಪು ಮಾತ್ರ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

POCSO ಪ್ರಕರಣ: 60 ದಿನ ಮೀರಿದರೂ ಸ್ವಯಂ ಜಾಮೀನು ಸಿಗೋದಿಲ್ಲ – ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ 60 ದಿನಗಳೊಳಗೆ ತನಿಖೆ ಪೂರ್ಣಗೊಳ್ಳದಿದ್ದರೂ ಆರೋಪಿಗೆ ಸ್ವಯಂ (ಡೀಫಾಲ್ಟ್) ಜಾಮೀನು ಸಿಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಬಿಎನ್‌ಎಸ್‌ಎಸ್‌ನ ಸೆಕ್ಷನ್ 193(2) ಅಡಿಯಲ್ಲಿ ಜಾಮೀನು ಕೋರಿ ಗೋವಿಂದ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಮಹತ್ವದ ಆದೇಶ ನೀಡಿದ್ದಾರೆ.

ಪೋಕ್ಸೊ ಕಾಯ್ದೆಯಂತಹ ವಿಶೇಷ ಕಾನೂನುಗಳು ಸಂತ್ರಸ್ತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿವೆ. ತ್ವರಿತ ನ್ಯಾಯ ಒದಗಿಸುವುದೇ ಅವುಗಳ ಉದ್ದೇಶವಾಗಿದ್ದು, ಆರೋಪಿಗಳಿಗೆ ಕಾನೂನು ಲೋಪಗಳನ್ನು ಬಳಸಿಕೊಂಡು ತಪ್ಪಿಸಿಕೊಳ್ಳಲು ಅವಕಾಶ ನೀಡುವುದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದ್ದರಿಂದ ಬಿಎನ್‌ಎಸ್‌ಎಸ್ ಸೆಕ್ಷನ್ 193(2) ಆಧಾರದ ಮೇಲೆ ಡೀಫಾಲ್ಟ್ ಜಾಮೀನು ಪಡೆಯಲು ಅವಕಾಶವಿಲ್ಲ ಎಂದು ತಿಳಿಸಿದೆ.

ಇದೇ ವೇಳೆ, ಎಫ್‌ಎಸ್‌ಎಲ್ ಅಥವಾ ಸಿಡಿಆರ್ ವರದಿಗಳಿಲ್ಲದೇ ಸಲ್ಲಿಸಲಾದ ಚಾರ್ಜ್‌ಶೀಟ್ ಅಪೂರ್ಣವಾಗಿದೆ ಎಂಬ ಕಾರಣ ಮಾತ್ರದಿಂದ ಆರೋಪಿಗೆ ಜಾಮೀನು ಪಡೆಯುವ ಹಕ್ಕು ಸಿಗುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಕೋರ್ಟ್ ಗಮನಿಸಿದಂತೆ, 10 ವರ್ಷಗಳವರೆಗೆ ಶಿಕ್ಷೆ ಇರುವ ಅಪರಾಧಗಳಲ್ಲಿ 60 ದಿನ ಹಾಗೂ 10 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಇರುವ ಪ್ರಕರಣಗಳಲ್ಲಿ 90 ದಿನಗಳೊಳಗೆ ಅಂತಿಮ ವರದಿ ಸಲ್ಲಿಸಬೇಕು. ಗೋವಿಂದನ ಪ್ರಕರಣದಲ್ಲಿ 90 ದಿನಗಳೊಳಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದರಿಂದ ಡೀಫಾಲ್ಟ್ ಜಾಮೀನುಗೆ ಅವಕಾಶ ಇಲ್ಲ ಎಂದು ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಡಿಸೆಂಬರ್ 2025 ಹಾಗೂ ಜನವರಿ 2026ರಲ್ಲಿ ಎರಡು ಬಾರಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಆರೋಪಿಯು ಹೈಕೋರ್ಟ್ ಮೊರೆ ಹೋಗಿದ್ದ.

ಪ್ರಕರಣದ ಹಿನ್ನೆಲೆ ಪ್ರಕಾರ, ದೂರುದಾರರ ಅಪ್ರಾಪ್ತ ಪುತ್ರಿ ಒಂದು ವರ್ಷ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಆಸ್ಪತ್ರೆಯಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿದ್ದ ಆರೋಪಿಯು ಆಕೆಯೊಂದಿಗೆ ಸಂಬಂಧ ಬೆಳೆಸಿ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪವಿದೆ. ಬಳಿಕ ಅಕ್ಟೋಬರ್ 2025ರಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಸಮಯದಲ್ಲಿ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರಾಜ್ಯಸಭೆ ಉಪಾಧ್ಯಕ್ಷರಾಗಿ ಹರಿವಂಶ್ ಮೂರನೇ ಬಾರಿಗೆ ಆಯ್ಕೆ: ಅವಿರೋಧ ಗೆಲುವು!

ನವದೆಹಲಿ: ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭೆ ಉಪಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ವಿರೋಧ ಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆ, ಚುನಾವಣೆಯು ಅವಿರೋಧವಾಗಿ ನಡೆದಿದ್ದು, ಸದನವು ಧ್ವನಿಮತದ ಮೂಲಕ ಈ ನಿರ್ಧಾರವನ್ನು ಅಂಗೀಕರಿಸಿದೆ. ಏಪ್ರಿಲ್ 9ರಂದು ಅವರ ಹಿಂದಿನ ಅವಧಿ ಮುಗಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು.

ರಾಜ್ಯಸಭೆ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಕಾರ್ಯವಿಧಾನ ನಿಯಮಗಳ ಪ್ರಕಾರ ಚುನಾವಣಾ ಪ್ರಕ್ರಿಯೆಯನ್ನು ನಿಗದಿಪಡಿಸಿದ್ದು, ನಾಮಪತ್ರ ಸಲ್ಲಿಕೆಗೆ ಮಧ್ಯಾಹ್ನ 12 ಗಂಟೆಯವರೆಗೆ ಗಡುವು ನೀಡಲಾಗಿತ್ತು.

ಚುನಾವಣೆಯಲ್ಲಿ ಸದನದ ನಾಯಕ ಜೆ.ಪಿ. ನಡ್ಡಾ ಮಂಡಿಸಿದ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಿದ ಬಳಿಕ, ಸಭಾಪತಿಗಳು ಹರಿವಂಶ್ ಅವರನ್ನು ಆಯ್ಕೆಯಾಗಿ ಘೋಷಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಹರಿವಂಶ್ ಅವರ ಪುನರಾಯ್ಕೆಗೆ ಅಭಿನಂದನೆ ಸಲ್ಲಿಸಿ, “ಇದು ಸದನವು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ” ಎಂದು ತಿಳಿಸಿದ್ದಾರೆ.

ವಚನಾನಂದ ಶ್ರೀಗಳಿಗೆ ಹೆಚ್ಚಿದ ಸಂಕಷ್ಟ: ಹಾಸ್ಟೆಲ್ ವಿದ್ಯಾರ್ಥಿಗಳಿಂದಲೇ ದೂರು

0

ದಾವಣಗೆರೆ: ವಚನಾನಂದ ಶ್ರೀ ವಿರುದ್ಧದ ಆರೋಪಗಳು ಮತ್ತಷ್ಟು ತೀವ್ರಗೊಂಡಿದ್ದು, ಇದೀಗ ಹಾಸ್ಟೆಲ್ ವಿದ್ಯಾರ್ಥಿಗಳೇ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಮಸಾಜ್ ಸಂಬಂಧಿತ ವಿವಾದದ ನಡುವೆ ಈ ದೂರು ಹೊರಬಂದಿದ್ದು, ಮಕ್ಕಳ ಮೇಲೆ ಅನಾಚಾರ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಸಂಸ್ಥೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಉಚ್ಚಾಟನೆ ವಿವಾದದಿಂದ ಸುದ್ದಿಯಾಗಿದ್ದ ವಚನಾನಂದ ಶ್ರೀಗಳಿಗೆ ಈ ಬೆಳವಣಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ವಿದ್ಯಾರ್ಥಿಗಳಿಂದಲೇ ಬಂದಿರುವ ದೂರು ಪ್ರಕರಣದ ನೈತಿಕ ಹಾಗೂ ಕಾನೂನು ಅಂಶಗಳನ್ನು ಗಂಭೀರವಾಗಿ ಪ್ರಶ್ನಿಸುವಂತಾಗಿದೆ.

ಮುಂದಿನ ತನಿಖೆಯ ಮೇಲೆ ಪ್ರಕರಣದ ದಿಕ್ಕು ನಿರ್ಧಾರವಾಗಲಿದ್ದು, ಧಾರ್ಮಿಕ ಸಂಸ್ಥೆಗಳ ಕಾರ್ಯವೈಖರಿಯ ಮೇಲೂ ಇದು ಪ್ರಶ್ನೆ ಎಬ್ಬಿಸಿದೆ.

ಸತತ 3ನೇ ಬಾರಿಗೆ ರಾಜ್ಯಸಭೆಯ ಉಪಾಧ್ಯಕ್ಷರಾಗಿ ಹರಿವಂಶ್ ಅವಿರೋಧ ಪುನರಾಯ್ಕೆ!

0

ನವದೆಹಲಿ: ರಾಜ್ಯಸಭಾ ಸದಸ್ಯ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭಾ ಉಪಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಚುನಾವಣೆಯು ಅವಿರೋಧವಾಗಿ ನಡೆಯಿತು.

ಏಪ್ರಿಲ್ 9ರಂದು ಅವರ ಹಿಂದಿನ ಅವಧಿ ಮುಗಿದ ನಂತರ ಉಪಾಧ್ಯಕ್ಷ ಹುದ್ದೆ ಖಾಲಿಯಾಗಿತ್ತು. ನಂತರ ಸಿ.ಪಿ. ರಾಧಾಕೃಷ್ಣನ್ ಅವರು ಚುನಾವಣೆಯ ದಿನಾಂಕವನ್ನು ನಿಗದಿಪಡಿಸಿದ್ದರು.

ರಾಜ್ಯಸಭೆ ಸದನದ ನಾಯಕ ಜೆ.ಪಿ. ನಡ್ಡಾ ಮಂಡಿಸಿದ ಪ್ರಸ್ತಾವನೆಯನ್ನು ಸದನವು ಧ್ವನಿಮತದ ಮೂಲಕ ಅಂಗೀಕರಿಸಿತು. ಬಳಿಕ ಸಭಾಪತಿಗಳು ಹರಿವಂಶ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹರಿವಂಶ್ ಅವರ ಪುನರಾಯ್ಕೆಗೆ ಅಭಿನಂದನೆ ಸಲ್ಲಿಸಿ, ಇದು ಸದನವು ಅವರ ಮೇಲಿಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು. ಹರಿವಂಶ್ ನಾರಾಯಣ್ ಸಿಂಗ್ ಈಗಾಗಲೇ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇದು ಅವರ ಮೂರನೇ ಅವಧಿಯಾಗಲಿದೆ.

error: Content is protected !!