Home Blog Page 310

ಬಿಟ್ ಕಾಯಿನ್ ಪ್ರಕರಣ: SIT ತನಿಖೆ ವಿಳಂಬ – ಮಧ್ಯಂತರ ವರದಿ ಕೇಳಿದ ಗೃಹ ಸಚಿವ

ಬೆಂಗಳೂರು: ಬಿಟ್‌ಕಾಯಿನ್ ಪ್ರಕರಣದ ಎಸ್‌ಐಟಿ ತನಿಖೆಯಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮಧ್ಯಂತರ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಶೀಘ್ರಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದೇ ಸೂಚನೆ ನೀಡಿದ್ದಾರೆ. ಮಧ್ಯಂತರ ವರದಿ ನೀಡುವಂತೆ ಎಸ್‌ಐಟಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ, ಎಸ್‌ಐಟಿ ಮೂಲಕ ಇಡಿ ಕೆಲವು ಮಾಹಿತಿಗಳನ್ನು ಪಡೆದಿರಬಹುದು. ಬಿಟ್‌ಕಾಯಿನ್ ಪ್ರಕರಣದ ಕುರಿತು ಸ್ಪಷ್ಟ ಮಾಹಿತಿ ನೀಡುವುದು ಇಡಿಯವರ ಜವಾಬ್ದಾರಿ. ಶ್ರೀಕಿ ಜೊತೆ ಪ್ರಭಾವಿ ವ್ಯಕ್ತಿಗಳ ಮಕ್ಕಳ ಸಂಪರ್ಕವಿದೆ ಎಂಬ ವಿಚಾರವನ್ನು ಇಡಿಯವರೇ ದೃಢಪಡಿಸಬೇಕು. ರಾಜಕೀಯವಾಗಿ ಹೇಳಿಕೆ ನೀಡಬಹುದಾದರೂ, ಸತ್ಯಾಸತ್ಯತೆ ಪರಿಶೀಲನೆ ಮುಖ್ಯ ಎಂದು  ಹೇಳಿದರು.

ನಲಪಾಡ್ ಮೇಲಿನ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಹ್ಯಾರಿಸ್ ಅವರ ಇಬ್ಬರು ಪುತ್ರರ ಮನೆಗಳ ಮೇಲೆ ಇಡಿ ದಾಳಿ ನಡೆಸಲಾಗಿದೆ. ದಾಳಿಯ ಒಳಹೊರಗಿನ ವಿವರಗಳು ನಮಗೆ ತಿಳಿದಿಲ್ಲ. ಈ ಬಗ್ಗೆ ಇಡಿಯವರು ಅಧಿಕೃತ ಪ್ರೆಸ್‌ನೋಟ್ ಹೊರಡಿಸಬೇಕು ಎಂದು ಹೇಳಿದರು.

ಈ ಹಿಂದೆ ಸರ್ಕಾರವೇ ಎಸ್‌ಐಟಿ ರಚನೆ ಮಾಡಿದ್ದು, ಇದುವರೆಗೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ ಎಂಬುದನ್ನೂ ಗಮನಕ್ಕೆ ತಂದರು.

ದಲಿತ ಅಧಿಕಾರಿಗಳಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ವರದಿ ಕೇಳಲಾಗಿದೆ. ಡಿಜಿಪಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇನ್ಸ್‌ಪೆಕ್ಟರ್ ಶ್ರೀನಿವಾಸ್ ಪತ್ರ ಬರೆದಿರುವುದಾಗಿ ತಿಳಿದುಬಂದಿದ್ದು, ಎಸ್‌ಪಿ ಕಾಶೀನಾಥ್ ಅವರಿಂದಲೂ ಪ್ರಕರಣದ ವರದಿ ಕೇಳಲಾಗಿದೆ. ಎರಡು ಪ್ರಕರಣಗಳ ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

Sharad Pawar: ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು

0

ಮುಂಬೈ: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಶರದ್ ಪವಾರ್ ಅವರನ್ನು ನಿಯಮಿತ ಆರೋಗ್ಯ ತಪಾಸಣೆಗಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

85 ವರ್ಷದ ಪವಾರ್ ಅವರನ್ನು ಎರಡು ದಿನಗಳ ಹಿಂದೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಅವರು ವ್ಹೀಲ್ಚೇರ್‌ನಲ್ಲಿ ಕುಳಿತು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಫೆಬ್ರವರಿ ಆರಂಭದಲ್ಲಿ, ಎದೆಯ ಸೋಂಕು ಹಾಗೂ ನಿರ್ಜಲೀಕರಣ ಸಮಸ್ಯೆಯಿಂದ ಅವರು ಪುಣೆಯಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.

RTO ಅಧಿಕಾರಿಗಳ ಕಾರ್ಯಾಚರಣೆ: 8 ಸ್ಲೀಪರ್ ಬಸ್ ಗಳ ಪಾರ್ಟಿಷನ್ ಡೋರ್ ತೆರವು

ಬೆಂಗಳೂರು: ಸ್ಲೀಪರ್ ಕೋಚ್ ಬಸ್‌ಗಳ ಪದೇಪದೇ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ, ದೇವನಹಳ್ಳಿ ಆರ್‌ಟಿಒ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ.

ದೇವನಹಳ್ಳಿ ಪಟ್ಟಣದ ರಾಣಿ ಕ್ರಾಸ್ ಬಳಿ ಬಸ್‌ಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಖಾಸಗಿ ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಇರುವ ಪಾರ್ಟಿಷನ್ ಡೋರ್‌ಗಳನ್ನು ತೆರವುಗೊಳಿಸಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ಗಳನ್ನು ತಪಾಸಣೆ ಮಾಡಿದ ವೇಳೆ, ಡ್ರೈವರ್ ಮತ್ತು ಪ್ರಯಾಣಿಕರ ನಡುವೆ ಅಳವಡಿಸಿದ್ದ ಡೋರ್‌ಗಳನ್ನು ತೆಗೆದುಹಾಕಲಾಗಿದೆ.

ಒಟ್ಟು 8 ಬಸ್‌ಗಳ ಡೋರ್‌ಗಳನ್ನು ಬಿಚ್ಚಿಸಿ ಸೀಜ್ ಮಾಡಲಾಗಿದೆ. ಈ ಕಾರ್ಯಾಚರಣೆ ದೇವನಹಳ್ಳಿ ಆರ್‌ಟಿಒ ಸುಧೀರ್ ಅವರ ನೇತೃತ್ವದಲ್ಲಿ ನಡೆಯಿತು.

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ತಪ್ಪಿದ ಭಾರೀ ದುರಂತ

0

ತುಮಕೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿದ್ದು, ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ನಡೆದಿದೆ. ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಿಪಟೂರು ಡಿಪೋಗೆ ಸೇರಿದ ಈ ಬಸ್ ಹೊಸದುರ್ಗದಿಂದ ಬೆಂಗಳೂರಿನತ್ತ ಸಾಗುತ್ತಿದ್ದ ವೇಳೆ, ಗುಬ್ಬಿ ಸಮೀಪದ ಕಳ್ಳಿಪಾಳ್ಯ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ತೀವ್ರತೆಗೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಅಪಘಾತದಲ್ಲಿ ಐದಾರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SSLC ಹಿಂದಿ ಭಾಷೆ ಪರೀಕ್ಷೆಗೆ ಗ್ರೇಡ್ ಬದಲು ಅಂಕ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆ (ಹಿಂದಿ ಸೇರಿದಂತೆ) ವಿಷಯಕ್ಕೆ ಈ ವರ್ಷ ಗ್ರೇಡ್ ನೀಡದೇ, ಅಂಕಗಳನ್ನು ನೀಡಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.

ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ವರ್ಷ ಹಳೆಯ ಪದ್ಧತಿಯನ್ನು ಮುಂದುವರಿಸುವಂತೆ ಸೂಚಿಸಿದೆ.

ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. 2025ರ ಅಕ್ಟೋಬರ್ 28ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, 2026ರ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಪರೀಕ್ಷೆಗಳು ನಡೆದಿವೆ ಎಂದು ಅವರು ತಿಳಿಸಿದರು.

ಈ ವೇಳೆ ನ್ಯಾಯಮೂರ್ತಿಗಳಾದ ಇಂದಿರೇಶ್ ಅವರು, “ನಿಮ್ಮ ಅಧಿಸೂಚನೆಯ ಉದ್ದೇಶವೇನು? ಕಳೆದ ವರ್ಷ 1.75 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾದರು. ಎಲ್ಲರನ್ನೂ ಪಾಸ್ ಮಾಡುವುದು ನಿಮ್ಮ ಉದ್ದೇಶವೇ?” ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಜಿ, ಗ್ರಾಮೀಣ ಭಾಗದ ಸುಮಾರು 80% ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಅದರಿಂದ ಅವರ ಮೇಲಿನ ಒತ್ತಡ ಕಡಿಮೆ ಮಾಡಲು ಗ್ರೇಡಿಂಗ್ ವ್ಯವಸ್ಥೆ ಪರಿಚಯಿಸಲಾಗಿದೆ ಎಂದು ವಿವರಿಸಿದರು.

ಆದರೆ ನ್ಯಾಯಾಲಯ, “ಈ ವರ್ಷ ಹಳೆಯ ಪದ್ಧತಿಯನ್ನೇ ಅನುಸರಿಸಿ. ಮುಂದಿನ ವರ್ಷ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು” ಎಂದು ಸ್ಪಷ್ಟಪಡಿಸಿ, ಅಂಕಗಳನ್ನು ನೀಡಲು ನಿರ್ದೇಶಿಸಿತು.

ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಪರೀಕ್ಷೆಗಳು ನಡೆದಿದ್ದು, ಏಪ್ರಿಲ್ 10ರಂದು ಕರಡು ನಿಯಮಗಳು ರೂಪಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ, ತನ್ನ ಆದೇಶವನ್ನು ಮರುಪರಿಶೀಲಿಸಲು ಹೈಕೋರ್ಟ್ ನಿರಾಕರಿಸಿದೆ.

ಇನ್ನೂ ಒಂದು ವಾರ ಬಿಸಿಲಿನ ಕಾಟ: ಬೆಂಗಳೂರು ಸೇರಿ ರಾಜ್ಯದಲ್ಲಿ ಉಷ್ಣಾಂಶ ಏರಿಕೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೊಂದು ವಾರ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಸಿಎಸ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಕರುನಾಡು ತೀವ್ರ ಬಿಸಿಲಿನಿಂದ ಬಳಲುತ್ತಿದ್ದು, ರಣಬೇಸಿಗೆಯ ತಾಪಕ್ಕೆ ಜನರು ಹೈರಾಣಾಗಿದ್ದಾರೆ. ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ದಾಟಿದೆ.

ಬೆಂಗಳೂರು ನಗರದಲ್ಲೂ ಉಷ್ಣಾಂಶ 36ರಿಂದ 37 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ 40ರಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿಯೂ ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಹಗಲು ಮಾತ್ರವಲ್ಲದೆ, ರಾತ್ರಿ ವೇಳೆಯಲ್ಲೂ ಉಷ್ಣಾಂಶ ಕಡಿಮೆಯಾಗದೆ ಇರುವುದರಿಂದ ಹೆಚ್ಚುವರಿ ಸೆಕೆ ಅನುಭವವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮದುವೆ ನಿರಾಕರಣೆಗೇ ಜೀವಭಯ: ತಂದೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಯುವತಿ

ಬೆಂಗಳೂರು: ತನ್ನ ಒಪ್ಪಿಗೆಯಿಲ್ಲದೆ ನಿಶ್ಚಯಿಸಿದ ಮದುವೆಯನ್ನು ತಿರಸ್ಕರಿಸಿದ್ದಕ್ಕೆ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿರುವ ಯುವತಿ ಹೈಕೋರ್ಟ್ ಮೊರೆ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಕಾಜಲ್ ರಾಜಪುರೋಹಿತ್ ಎಂಬ ಯುವತಿ ತನ್ನ ತಂದೆ ಅಶೋಕ್ ರಾಜಪುರೋಹಿತ್ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದಾಳೆ.

ಕಳೆದ ಎರಡು ವರ್ಷಗಳಿಂದ ಉದ್ಯೋಗದಲ್ಲಿರುವ ಕಾಜಲ್‌ಗೆ ಮದುವೆಯ ಮೇಲೆ ಆಸಕ್ತಿ ಇರಲಿಲ್ಲ. ತನ್ನ ಅಕ್ಕನಿಗೂ ಬಲವಂತವಾಗಿ ಮದುವೆ ಮಾಡಿದ್ದನ್ನು ಕಂಡಿದ್ದ ಆಕೆಗೆ ಇದೇ ಪರಿಸ್ಥಿತಿ ತಾನೂ ಎದುರಿಸಬೇಕಾಗುತ್ತದೆ ಎಂಬ ಆತಂಕ ಕಾಡುತ್ತಿತ್ತು. ತನ್ನ ಜೀವನದಲ್ಲಿ ಸ್ವತಂತ್ರವಾಗಿ ಏನಾದರೂ ಸಾಧಿಸಬೇಕೆಂಬ ಆಶಯ ಹೊಂದಿದ್ದರೂ, ತಂದೆ ಆಕೆಯ ಒಪ್ಪಿಗೆಯಿಲ್ಲದೆ ರಾಜಸ್ಥಾನ ಮೂಲದ ಡಾ. ಯಶ್‌ಪಾಲ್ ಜೊತೆ ವಿವಾಹ ನಿಶ್ಚಯ ಮಾಡಿರುವುದಾಗಿ ಆರೋಪಿಸಲಾಗಿದೆ.

ಮದುವೆಗೆ ಸಿದ್ಧತೆಗಳು ಮುಂದುವರಿದ ಹಿನ್ನೆಲೆಯಲ್ಲಿ ಜೀವಭಯ ವ್ಯಕ್ತಪಡಿಸಿರುವ ಯುವತಿ ನ್ಯಾಯಾಲಯದ ರಕ್ಷಣೆಯನ್ನು ಕೋರಿದ್ದಾಳೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವೈಟ್‌ಫೀಲ್ಡ್ ಪೊಲೀಸರಿಗೆ ಯುವತಿಗೆ ಸೂಕ್ತ ಭದ್ರತೆ ಒದಗಿಸಲು ನಿರ್ದೇಶನ ನೀಡಿದೆ. ಈ ಘಟನೆ ಕುಟುಂಬದ ಒಳಜಗಳದಿಂದ ಮೀರಿದು, ಮಹಿಳೆಯರ ಸ್ವಾತಂತ್ರ್ಯ ಮತ್ತು ಸುರಕ್ಷತೆ ಕುರಿತ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಜೀವಂತ ಗ್ರೆನೇಡ್ ಪತ್ತೆ ಪ್ರಕರಣ: ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟ

ಬೆಂಗಳೂರು: ನಗರದಲ್ಲಿ ಜೀವಂತ ಗ್ರೆನೇಡ್ ಪತ್ತೆಯಾದ ಸಂಚು ಪ್ರಕರಣದಲ್ಲಿ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ. 2008ರ ಮಾದರಿಯಲ್ಲಿ ಸ್ಫೋಟ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರ್ಟಿ ನಗರದಲ್ಲಿನ ಮನೆಯಲ್ಲಿ ಜೀವಂತ ಗ್ರೆನೇಡ್, ಪಿಸ್ತೂಲ್ ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣವನ್ನು 2023ರಲ್ಲಿ ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದರು.

ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ದಾಳಿ ನಡೆಸಿ ಸ್ಫೋಟಕ ವಸ್ತುಗಳು, ವಾಕಿ-ಟಾಕಿ ಹಾಗೂ ನಕ್ಷೆಗಳನ್ನು ವಶಪಡಿಸಿಕೊಂಡಿತ್ತು. ಬಳಿಕ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡು ಮುಂದಿನ ತನಿಖೆ ನಡೆಸಿತು.

ತನಿಖೆಯಲ್ಲಿ ಬೆಂಗಳೂರು ಸ್ಫೋಟದ ರೂವಾರಿಯಾದ ಟಿ. ನಾಜೀರ್ ಜೊತೆ ಆರೋಪಿಗಳಿಗೆ ಸಂಪರ್ಕವಿದ್ದದ್ದು ಬಹಿರಂಗವಾಯಿತು. ಜೈಲಿನಲ್ಲಿದ್ದಾಗಲೇ ನಾಜೀರ್‌ನಿಂದ ಉಗ್ರ ಚಟುವಟಿಕೆಗಳಿಗೆ ಪ್ರೇರಣೆ ಪಡೆದಿದ್ದರು ಎಂಬುದು ತಿಳಿದುಬಂದಿದೆ. ಜೈಲಿನಿಂದ ಬಿಡುಗಡೆಯಾದ ನಂತರ ವಿವಿಧ ಸ್ಥಳಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ.

2023ರಲ್ಲಿ ಸಂಚು ರೂಪಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಎ1 ಟಿ. ನಾಜೀರ್, ಎ2 ಜುನೈದ್, ಎ3 ಸೈಯಾದ್ ಸುಹೈಲ್ ಖಾನ್, ಎ4 ಮಹಮ್ಮದ್ ಉಮರ್, ಎ5 ಜಾಹಿದ್ ತಬ್ರೇಜ್, ಎ6 ಸೈಯದ್, ಎ7 ಮುದಾಸೀರ್ ಪಾಷಾ, ಎ8 ಮಹಮ್ಮದ್ ಫಜೀದ್, ಎ9 ಅನೀಸ್ ಫಾತೀಮ್, ಎ10 ಚಾನ್ ಪಾಷಾ ಮತ್ತು ಎ11 ವೈದ್ಯ ಡಾ. ನಾಗರಾಜ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.

ಅರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಎನ್‌ಐಎ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಮಧ್ಯಾಹ್ನದ ಬಳಿಕ ತೀರ್ಪು ಪ್ರಕಟವಾಗಲಿದೆ.

ಹಾಸ್ಟೆಲ್ ಕಟ್ಟಡದಲ್ಲೇ ಕೋಚಿಂಗ್ ವ್ಯವಹಾರ: ಯಾದಗಿರಿಯಲ್ಲಿ ಅಕ್ರಮ ಬಯಲು, ಅಧಿಕಾರಿಗಳ ವಿರುದ್ಧ ಆಕ್ರೋಶ

0

ಯಾದಗಿರಿ: ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ನಡೆಯುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವು ಖಾಸಗಿ ಕೋಚಿಂಗ್ ಕೇಂದ್ರವಾಗಿ ಬಳಸಲಾಗುತ್ತಿರುವ ಅಕ್ರಮ ಬೆಳಕಿಗೆ ಬಂದಿದೆ. ಲಿಂಗೇರಿ ಸ್ಟೇಷನ್ ಸಮೀಪದ ಈ ಹಾಸ್ಟೆಲ್ ಕಟ್ಟಡದಲ್ಲಿ ದೇವಿಂದ್ರಪ್ಪ ಎಂಬಾತ ಅಕ್ರಮವಾಗಿ ತರಬೇತಿ ಕೇಂದ್ರ ಆರಂಭಿಸಿರುವ ಆರೋಪ ಕೇಳಿಬಂದಿದೆ.

ಬೇಸಿಗೆ ಶಿಬಿರದ ಹೆಸರಿನಲ್ಲಿ ನಡೆಯುತ್ತಿರುವ ಈ ಚಟುವಟಿಕೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದು, ಪ್ರತಿ ವಿದ್ಯಾರ್ಥಿಯಿಂದ ತಿಂಗಳಿಗೆ 5 ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳ ಜೊತೆಗೆ ಹೊರಗಿನ ಮಕ್ಕಳಿಗೂ ಅವಕಾಶ ನೀಡಲಾಗಿದ್ದು, ರಾತ್ರಿ ವೇಳೆ ಹಾಸ್ಟೆಲ್ ಕೊಠಡಿಗಳಲ್ಲೇ ವಾಸ ಮಾಡುವಂತೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಉಮೇಶ್ ಹಾಗೂ ಸ್ಥಳೀಯ ನಾಗರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರಿ ಆಸ್ತಿಯ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತನ್ನದೇ ಪಿಂಡ ಬಿಟ್ಟು ಸನ್ಯಾಸಿ ಆದ ಮಾಡೆಲ್: ಹರ್ಷ ರಿಚಾರಿಯಾ ಸ್ವಾಮಿ ಹರ್ಷಾನಂದ ಗಿರಿ ಆಗಿ ಪರಿವರ್ತನೆ

ಮಾಡೆಲ್ ಮತ್ತು ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದ ಹರ್ಷ ರಿಚಾರಿಯಾ ಇದೀಗ ಜೀವನದ ದಿಕ್ಕೇ ಬದಲಿಸಿ ಸನ್ಯಾಸ ಸ್ವೀಕರಿಸಿದ್ದಾರೆ. ಪ್ರಯಾಗರಾಜ್ ಮಹಾಕುಂಭದ ಬಳಿಕ ಗಮನ ಸೆಳೆದಿದ್ದ ಅವರು, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ತಮ್ಮ ಗುರು ಮಹಾಮಂಡಲೇಶ್ವರ ಸುಮಾನಂದ ಮಹಾರಾಜರ ಸಮ್ಮುಖದಲ್ಲಿ ಪಿಂಡ ಬಿಡುವ ಮೂಲಕ ಲೌಕಿಕ ಬದುಕಿಗೆ ಅಂತ್ಯ ಘೋಷಿಸಿದ್ದಾರೆ. ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ನಡೆದ ದೀಕ್ಷಾ ಕಾರ್ಯಕ್ರಮದ ಬಳಿಕ ಅವರು ‘ಸ್ವಾಮಿ ಹರ್ಷಾನಂದ ಗಿರಿ’ ಎಂದು ಹೊಸ ಹೆಸರನ್ನು ಪಡೆದಿದ್ದಾರೆ.

32ನೇ ವಯಸ್ಸಿನಲ್ಲಿ ಇಂತಹ ತೀವ್ರ ನಿರ್ಧಾರ ಕೈಗೊಂಡಿರುವುದು ವಿಶೇಷವಾಗಿದ್ದು, ಕಳೆದ ಒಂದೂವರೆ ವರ್ಷಗಳಿಂದ ಅವರು ಆಧ್ಯಾತ್ಮದತ್ತ ಒಲವು ತೋರಿಸುತ್ತಿದ್ದರು. ಸನ್ಯಾಸ ಸ್ವೀಕಾರದ ನಂತರ ಮಾತನಾಡಿದ ಅವರು, ಇನ್ನು ಮುಂದೆ ಧರ್ಮ ಮತ್ತು ಸಮಾಜ ಸೇವೆಯತ್ತ ತಮ್ಮ ಜೀವನವನ್ನು ಸಮರ್ಪಿಸುವುದಾಗಿ ತಿಳಿಸಿದ್ದಾರೆ.

ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವಂತೆ, ಪಿಂಡ ವಿಧಿ ಸಾಮಾನ್ಯವಾಗಿ ಪೂರ್ವಜರ ಶಾಂತಿಗಾಗಿ ನಡೆಯುತ್ತದೆ. ಆದರೆ ಕೆಲವರು ತಮ್ಮ ಲೌಕಿಕ ಜವಾಬ್ದಾರಿಗಳನ್ನು ತ್ಯಜಿಸುವ ಸಂಕೇತವಾಗಿ ಜೀವಂತವಾಗಿಯೇ ಪಿಂಡ ಬಿಡುವ ಮೂಲಕ ಸನ್ಯಾಸ ಸ್ವೀಕರಿಸುತ್ತಾರೆ. ಹರ್ಷ ರಿಚಾರಿಯಾ ಅವರ ಈ ಹೆಜ್ಜೆ ಆಧ್ಯಾತ್ಮಿಕ ಪರಿವರ್ತನೆಯ ಸ್ಪಷ್ಟ ಉದಾಹರಣೆಯಾಗಿ ಕಾಣಿಸುತ್ತಿದೆ.