Home Blog Page 310

ಮೊಳೆ ಬಿತ್ತಿ ಹಣ ವಸೂಲಿ: ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ‘ಪಂಕ್ಚರ್ ಮಾಫಿಯಾ’!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರಿಗೆ ಹೊಸ ಆತಂಕ ಎದುರಾಗಿದೆ.

ನಗರದ ಹೆಬ್ಬಾಳ ಮತ್ತು ಗೊರಗುಂಟೆಪಾಳ್ಯ ನಡುವಿನ ಪ್ರಮುಖ ರಸ್ತೆಯಲ್ಲಿ ಪಂಕ್ಚರ್ ದಂಧೆಕೋರರ ಸಂಚು ಬೆಳಕಿಗೆ ಬಂದಿದೆ.

ಕಳೆದ ಕೆಲವು ದಿನಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಸರಣಿ ಪಂಕ್ಚರ್ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ಸಂಶಯಗೊಂಡು ಪರಿಶೀಲನೆ ನಡೆಸಿದಾಗ ರಸ್ತೆಯ ಮೇಲೆ ಉದ್ದೇಶಪೂರ್ವಕವಾಗಿ ನೂರಾರು ಮೊಳೆಗಳನ್ನು ಹರಡಿರುವುದು ಪತ್ತೆಯಾಗಿದೆ. ಇದು ಸಾಮಾನ್ಯ ಘಟನೆ ಅಲ್ಲ, ವಾಹನ ಸವಾರರನ್ನು ಸುಲಿಗೆ ಮಾಡಲು ನಡೆಸುತ್ತಿರುವ ಸಂಚು ಎಂಬ ಆರೋಪ ಕೇಳಿಬಂದಿದೆ.

ವಿಶೇಷವೆಂದರೆ, ಮೊಳೆಗಳು ಬಿದ್ದಿರುವ ಸ್ಥಳದ ಹತ್ತಿರವೇ ಪಂಕ್ಚರ್ ರಿಪೇರಿ ಅಂಗಡಿಗಳು ಇರುವುದರಿಂದ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ. ವಾಹನಗಳು ಪಂಕ್ಚರ್ ಆದಾಗ ಹೆಚ್ಚಿನ ಹಣ ವಸೂಲಿ ಮಾಡಲು ಈ ರೀತಿಯ ಕೃತ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ.

ವೇಗವಾಗಿ ಸಾಗುತ್ತಿರುವ ವಾಹನಗಳ ಟೈರ್ ಏಕಾಏಕಿ ಪಂಕ್ಚರ್ ಆದರೆ ನಿಯಂತ್ರಣ ತಪ್ಪಿ ಭಾರೀ ಅಪಘಾತ ಸಂಭವಿಸುವ ಅಪಾಯವಿದೆ. ಇದರಿಂದ ಸಾರ್ವಜನಿಕರ ಪ್ರಾಣಕ್ಕೂ ಅಪಾಯ ಉಂಟಾಗುತ್ತಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಂತಹ ಐಟಿ ನಗರದಲ್ಲಿ ಇಂತಹ ದಂಧೆಗಳು ನಡೆಯುತ್ತಿರುವುದು ನಗರದ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಊಟಕ್ಕೆ ಹೋದ ಯುವತಿ ಮೇಲೆ ಹಲ್ಲೆ: ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಮ್ಯಾನೇಜರ್ ಮೇಲೆ ಗಂಭೀರ ಆರೋಪ!

ಬೆಂಗಳೂರು: ನಗರದ ಎಂ.ಜಿ. ರಸ್ತೆಯಲ್ಲಿರುವ ಪ್ರಖ್ಯಾತ ತಂದೂರ್ ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೇಲೆ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಆರೋಪ ಬೆಳಕಿಗೆ ಬಂದಿದೆ.

ಈ ಸಂಬಂಧ ಮ್ಯಾನೇಜರ್ ರವಿ ವಿರುದ್ಧ ಪ್ರಕರಣ ದಾಖಲಾಗಿದೆ. ಕೀರ್ತಿ ಎಂಬ ಯುವತಿ ಏ.27ರಂದು ಮಧ್ಯಾಹ್ನ ಸುಮಾರು 2:30ರ ವೇಳೆಗೆ ಸ್ನೇಹಿತರೊಂದಿಗೆ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗ್ರಾಹಕರು ಮತ್ತು ಮ್ಯಾನೇಜರ್ ನಡುವೆ ವಾಗ್ವಾದ ಉಂಟಾಗಿ, ಅದು ತೀವ್ರಗೊಂಡಿದೆ ಎಂದು ತಿಳಿದುಬಂದಿದೆ.

ದೂರು ಪ್ರಕಾರ, ಮ್ಯಾನೇಜರ್ ರವಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಲಾಟೆಯ ವೇಳೆ ಯುವತಿಯ ಬಟ್ಟೆ ಹರಿಯಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಘಟನೆ ನಂತರ ಯುವತಿ ಹಲಸೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.

ಈ ಘಟನೆ ನಗರದಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.

ಪತ್ನಿಯನ್ನು ಕೊಂದು ಮಗುವಿನೊಂದಿಗೆ ಬಾವಿಗೆ ಹಾರಿದ ಪತಿ: ಸ್ಥಳೀಯರಿಂದ ಮಗುವಿನ ರಕ್ಷಣೆ, ಲಕ್ಷ್ಮೀಪುತ್ರ ಸಾವು!

0

ಕಲಬುರಗಿ: ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಜನರಲ್ಲಿ ಆತಂಕ ಮೂಡಿಸಿದೆ. ಅಫಜಲಪುರ ತಾಲೂಕಿನ ಮದರಾ (ಕೆ) ಗ್ರಾಮದ ಸಮೀಪ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿಯನ್ನು ಹತ್ಯೆ ಮಾಡಿ, ಬಳಿಕ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಲಕ್ಷ್ಮೀಪುತ್ರ ಎಂಬಾತ ತನ್ನ 23 ವರ್ಷದ ಪತ್ನಿ ಅಂಜಲಿಯನ್ನು ಮನೆಯಲ್ಲೇ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಕೃತ್ಯದ ನಂತರ ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಸಮೀಪದ ಬಾವಿಗೆ ಹಾರಿದ್ದಾನೆ.

ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಧಾವಿಸಿ, ಸಮಯಪ್ರಜ್ಞೆ ಮೆರೆದು ಬಾವಿಗೆ ಇಳಿದು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ ಲಕ್ಷ್ಮೀಪುತ್ರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ರೇವೂರು ಪೊಲೀಸರು ಹಾಗೂ SOCO ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಜಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಾವಿಯಿಂದ ಲಕ್ಷ್ಮೀಪುತ್ರನ ಶವವನ್ನು ಹೊರತೆಗೆಯಲಾಗಿದೆ.

ಈ ಸಂಬಂಧ ರೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮತ್ತು ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಡಿಜಿಟಲ್ ಅರೆಸ್ಟ್ ವಿರುದ್ಧ ಕಠಿಣ ಕ್ರಮ: 9,400 ವಾಟ್ಸಪ್ ಖಾತೆಗಳು ಡಿಲೀಟ್!

ನವದೆಹಲಿ: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಡೆಯುತ್ತಿದ್ದ ವಂಚನೆಗಳಿಗೆ ಕಡಿವಾಣ ಹಾಕಲು ಮೇಟಾ ಒಡೆತನದ ವಾಟ್ಸಪ್ ಕಂಪನಿಯು ಕಳೆದ 12 ವಾರಗಳಲ್ಲಿ 9,400 ಖಾತೆಗಳನ್ನು ನಿಷೇಧಗೊಳಿಸಿದೆ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಡಿಜಿಟಲ್ ಅರೆಸ್ಟ್ ಮೋಸಗಳ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆ ವೇಳೆ ಈ ಮಾಹಿತಿ ನೀಡಲಾಗಿದೆ. ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದು, ವಾಟ್ಸಪ್ ಸಲ್ಲಿಸಿದ ವರದಿಯನ್ನು ಅಟಾರ್ನಿ ಜನರಲ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C), ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (MeitY) ಹಾಗೂ ದೂರಸಂಪರ್ಕ ಇಲಾಖೆ (DoT)ಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ವಾಟ್ಸಪ್ ಈ ಕ್ರಮ ಕೈಗೊಂಡಿದೆ.

ಮೋಸಗಾರರು “ದೆಹಲಿ ಪೊಲೀಸ್”, “ಮುಂಬೈ HQ”, “CBI”, “ATS Department” ಮುಂತಾದ ಹೆಸರನ್ನು ಬಳಸಿ, ಅಧಿಕೃತ ಲೋಗೋಗಳನ್ನು ಪ್ರೊಫೈಲ್ ಚಿತ್ರಗಳಾಗಿ ಇಟ್ಟುಕೊಂಡು ಜನರನ್ನು ಬೆದರಿಸುತ್ತಿದ್ದರು. ನಕಲಿ ಸಹಿ ಮತ್ತು ಸೀಲ್ಗಳ ಮೂಲಕ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಸರ್ಕಾರಿ ಏಜೆನ್ಸಿಗಳು ಗುರುತಿಸಿದ ಸುಮಾರು 3,800ಕ್ಕೂ ಹೆಚ್ಚು ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು 9,400 ಖಾತೆಗಳು ನಿಷೇಧಗೊಳಿಸಲಾಗಿದೆ.

ವಾಟ್ಸಪ್ ಲೋಗೋ ಮ್ಯಾಚಿಂಗ್ ಸಿಸ್ಟಮ್, ಡಿಸ್ಪ್ಲೇ ನೇಮ್ ಲಾಗಿಂಗ್ ಮತ್ತು ಸ್ಕ್ಯಾಮ್ ಪ್ಯಾಟರ್ನ್ ಗುರುತಿಸುವ ತಂತ್ರಜ್ಞಾನಗಳ ಸಹಾಯದಿಂದ ಈ ವಂಚನೆ ಜಾಲವನ್ನು ಪತ್ತೆಹಚ್ಚಿದೆ. ಪ್ರತಿ ಪ್ರಕರಣವನ್ನು ವಿಶ್ಲೇಷಿಸಿ ಸಂಪೂರ್ಣ ಕ್ರೈಮ್ ನೆಟ್ವರ್ಕ್ ಅನ್ನು ಗುರುತಿಸಿ ಅಳಿಸುವ ಕ್ರಮ ಮುಂದುವರಿಯುತ್ತಿದೆ ಎಂದು ಕಂಪನಿ ತಿಳಿಸಿದೆ.

ಇದಲ್ಲದೆ, ಡಿಜಿಟಲ್ ಅರೆಸ್ಟ್ ಮೋಸಗಳನ್ನು ತಡೆಯಲು ಹೊಸ ನಿಯಮಗಳು ಮತ್ತು ವೈಶಿಷ್ಟ್ಯಗಳನ್ನು ಜಾರಿಗೆ ತರಲಾಗುತ್ತಿದೆ. ಹೊಸದಾಗಿ ಸೃಷ್ಟಿಸಿದ ಅಥವಾ ಅವಧಿ ಮೀರಿದ ಖಾತೆಗಳಿಂದ ಕರೆ ಬಂದಾಗ ಬಳಕೆದಾರರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಪರಿಚಯಿಸುವ ಕುರಿತು ಚಿಂತನೆ ನಡೆದಿದೆ. ಅನುಮಾನಾಸ್ಪದ ಸಿಮ್ ಕಾರ್ಡ್‌ಗಳನ್ನು ಗುರುತಿಸಿದ ಕೆಲವೇ ಗಂಟೆಗಳಲ್ಲಿ ನಿರ್ಬಂಧಿಸುವ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.

ಯಾದಗಿರಿಯಲ್ಲಿ ವರುಣನ ಅಟ್ಟಹಾಸ: ಸಿಡಿಲಿಗೆ ಬಲಿಯಾದ 60 ಕುರಿಗಳು

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಬುದುರು ಗ್ರಾಮದಲ್ಲಿ ಸಿಡಿಲು ಬಡಿದು 60 ಕುರಿಗಳು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.

ಕುರಿಗಾಹಿಗಳಾದ ಮಲ್ಲಪ್ಪ ಮತ್ತು ಜಲ್ಲಪ್ಪ ಅವರಿಗೆ ಸೇರಿದ ಕುರಿಗಳು ಈ ಅವಘಡದಲ್ಲಿ ಮೃತಪಟ್ಟಿವೆ. ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದ ವೇಳೆ, ಕುರಿಗಳನ್ನು ಹೊಡೆದುಕೊಂಡು ಬರುತ್ತಿದ್ದಾಗ ಸಿಡಿಲು ಬಡಿದಿದೆ.

ಸಿಡಿಲಿನ ಹೊಡೆತದಿಂದ ಒಂದೇ ಸಾರಿ 60 ಕುರಿಗಳು ಮೃತಪಟ್ಟಿದ್ದು, ಕುರಿಗಾಹಿಗಳಿಗೆ ಭಾರೀ ನಷ್ಟ ಉಂಟಾಗಿದೆ. ಈ ಘಟನೆ ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆಸರಿನಲ್ಲಿ ಅಹಿಂಸೆ, ಮಾತಿನಲ್ಲಿ ಕನ್ನಡಿಗರಿಗೆ ಹಿಂಸೆ; ಚೇತನ್‌ʼಗೆ ನಿಖಿಲ್ ಕುಮಾರಸ್ವಾಮಿ ಖಡಕ್ ತಿರುಗೇಟು

ಬೆಂಗಳೂರು: ಬೆಂಗಳೂರು : ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ. ಅಣ್ಣಾವ್ರ ಬಗ್ಗೆ ಹಗುರವಾಗಿ ಮಾತನಾಡುವುದು ಅಹಂಕಾರದ ಪರಮಾವಧಿ. ಹೆಸರಿನಲ್ಲಿ ಅಹಿಂಸೆ ಇರಬಹುದು, ಆದರೆ ನಿಮ್ಮ ಪ್ರತಿಯೊಂದು ಮಾತೂ ಕನ್ನಡಿಗರ ಭಾವನೆಗಳಿಗೆ ಮಾಡುವ ಹಿಂಸೆ” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಟ ಚೇತನ್ ಅಹಿಂಸಾ ಅವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಡಾ. ರಾಜ್‌ಕುಮಾರ್ ಕುರಿತು ಚೇತನ್ ಮಾಡಿದ್ದ ಪೋಸ್ಟ್‌ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ನಿಖಿಲ್, “ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ಧೀಮಂತ ವ್ಯಕ್ತಿತ್ವದ ಬಗ್ಗೆ ಟೀಕಿಸುವ ಮೊದಲು ಇತಿಹಾಸ ತಿಳಿದುಕೊಳ್ಳಿ” ಎಂದು ಸಲಹೆ ನೀಡಿದರು.

ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜವಾದರೂ ಅವುಗಳಿಗೆ ಒಂದು ಘನತೆ ಇರಬೇಕು” ಎಂದ ಅವರು, ನಮ್ಮ ಕುಟುಂಬದ ಮೇಲಿನ ವೈಯಕ್ತಿಕ ದಾಳಿ ಅಥವಾ ಸೋಲು-ಗೆಲುವಿನ ಮಾತುಗಳನ್ನು ನಾವು ಸದಾ ವಿನಮ್ರತೆಯಿಂದಲೇ ಸ್ವೀಕರಿಸುತ್ತೇವೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪುಗಾರರು ಜನರೇ ಹೊರತು, ಸಮಾಜದಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳಲ್ಲ. ಸಂಸ್ಕಾರ ಮನೆಯಿಂದ ಬರಬೇಕು, ಟೀಕೆಗಳು ಜನರ ಪ್ರೀತಿಯ ಅಡಿಪಾಯದ ಮೇಲಿರಬೇಕು. ಕೇವಲ ಪ್ರಚಾರದ ಹಪಾಹಪಿಯಿಂದಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಮೇ 15ರೊಳಗೆ ಡಿಕೆ ಶಿವಕುಮಾರ್ ಸಿಎಂ ಖಚಿತ: ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇ 15ರೊಳಗೆ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದಾರೆ. ಇದೇ ತಮ್ಮ ಅಂತಿಮ ದಿನಾಂಕ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಡಿಕೆ ಶಿವಕುಮಾರ್ ಸಿಎಂ ಆಗುವ ಕುರಿತು ಹಲವು ದಿನಾಂಕಗಳನ್ನು ಸೂಚಿಸಿದ್ದ ಇಕ್ಬಾಲ್ ಹುಸೇನ್, ಇದೀಗ ಮೇ 15 ಅಂತಿಮ ಗಡುವು ಎಂದು ತಿಳಿಸಿದ್ದಾರೆ. ಈ ಅವಧಿಯಲ್ಲೇ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರಕಬೇಕು ಎಂಬುದು ಅನೇಕ ಶಾಸಕರ ಆಶಯವಾಗಿದೆ. ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯಲಿವೆ ಎಂದು ಹೇಳಿದರು. ಅವರ ಮಾರ್ಗದರ್ಶನದಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಅವಕಾಶ ಸಿಗಬೇಕು ಎಂಬುದು ನಮ್ಮೆಲ್ಲರ ನಿರೀಕ್ಷೆಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಸತೀಶ್ ಜಾರಕಿಹೊಳಿ ಹಾಗೂ ಹೆಚ್.ಸಿ. ಮಹಾದೇವಪ್ಪ ದೆಹಲಿಗೆ ಭೇಟಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ಹಿರಿಯ ನಾಯಕರು ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪಿಲ್ಲ. ರಾಜ್ಯದ ವಿಚಾರಗಳು ಮತ್ತು ಪಕ್ಷದ ಬೆಳವಣಿಗೆಗಳ ಕುರಿತು ಚರ್ಚಿಸಲು ಅವರು ತೆರಳಿರಬಹುದು ಎಂದು ಅಭಿಪ್ರಾಯಪಟ್ಟರು.

ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅಕ್ರಮ ಆರೋಪ: ಸದನ ಸಮಿತಿ ರಚನೆಗೆ ಆರ್. ಅಶೋಕ್ ಆಗ್ರಹ

ಬೆಂಗಳೂರು: ನಗರದಲ್ಲಿ ಗುಂಡಿ ಮುಚ್ಚುವ ಕಾಮಗಾರಿಗಳ ಹೆಸರಿನಲ್ಲಿ ಸರ್ಕಾರ ಹಣ ವ್ಯರ್ಥ ಮಾಡಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಂಡಿ ಮುಚ್ಚಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂಬುದು ಅಸಂಬದ್ಧವಾಗಿದೆ. ಒಂದು ಗುಂಡಿ ಮುಚ್ಚಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆಯೇ ಎಂದು ಪ್ರಶ್ನಿಸಿದರು. ಈ ಕಾಮಗಾರಿಗಳ ಬಗ್ಗೆ ಬೆಂಗಳೂರು ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಹೇಳಿದರು.

ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಹೆಚ್ಚಿಸಿದ್ದು, ಗುಂಡಿ ಮುಚ್ಚುವ ಕಾಮಗಾರಿಗಳಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, “ಈ ಕೆಲಸಗಳಲ್ಲಿ ಹೇಗೆ ಹಣ ಮಾಡಬೇಕು ಎಂದು ಕಾಂಗ್ರೆಸ್‌ವರನ್ನೇ ಕೇಳಬೇಕು” ಎಂದು ಟೀಕಿಸಿದರು.

ಇಷ್ಟು ದೊಡ್ಡ ಮೊತ್ತದ ವೆಚ್ಚ ಬೋಗಸ್ ಆಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕು. ಮುಚ್ಚಿದ ಗುಂಡಿಗಳು ಮತ್ತೆ ತೆರೆಯುತ್ತಿರುವುದರಿಂದ ಈ ಕಾಮಗಾರಿಗಳ ಗುಣಮಟ್ಟದ ಮೇಲೂ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಈ ಸಂಬಂಧ ನಾವು ಸಂಪೂರ್ಣ ಲೆಕ್ಕ ನೀಡಲು ಸಿದ್ಧವಿದ್ದೇವೆ. ಸರ್ಕಾರದ ವಿರುದ್ಧ ಇರುವ ಅಕ್ರಮಗಳನ್ನು ಬಹಿರಂಗಪಡಿಸಲು ಸದನ ಸಮಿತಿ ರಚನೆ ಅಗತ್ಯ ಎಂದು ಆರ್. ಅಶೋಕ್ ಆಗ್ರಹಿಸಿದರು.

SSLC ಫೇಲ್ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ: ಪರೀಕ್ಷೆ-2ಗೆ ಶುಲ್ಕ ಸರ್ಕಾರವೇ ಭರಿಸಲಿದೆ – ಮಧು ಬಂಗಾರಪ್ಪ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆ-2ಗೆ ಹಾಜರಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರೆ ನೀಡಿದ್ದಾರೆ. ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದಾರೆ.

ಪರೀಕ್ಷೆ-1ರಲ್ಲಿ ಒಟ್ಟು 45,415 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ವಿಷಯವಾರು ಅಂಕಿಅಂಶಗಳನ್ನು ಸಚಿವರು ಪ್ರಕಟಿಸಿದ್ದಾರೆ. ಒಂದು ವಿಷಯದಲ್ಲಿ 20,691 ವಿದ್ಯಾರ್ಥಿಗಳು, ಎರಡು ವಿಷಯಗಳಲ್ಲಿ 10,509 ವಿದ್ಯಾರ್ಥಿಗಳು, ಮೂರು ವಿಷಯಗಳಲ್ಲಿ 6,103 ವಿದ್ಯಾರ್ಥಿಗಳು, ನಾಲ್ಕು ವಿಷಯಗಳಲ್ಲಿ 3,799 ವಿದ್ಯಾರ್ಥಿಗಳು, ಐದು ವಿಷಯಗಳಲ್ಲಿ 2,552 ವಿದ್ಯಾರ್ಥಿಗಳು ಹಾಗೂ ಎಲ್ಲಾ ವಿಷಯಗಳಲ್ಲಿ 1,716 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಪರೀಕ್ಷೆಯ ಫಲಿತಾಂಶದಿಂದಾಗಿ ಯಾರೂ ನಿರಾಶೆಗೊಂಡು ಶಿಕ್ಷಣವನ್ನು ಮಧ್ಯದಲ್ಲಿ ಬಿಡಬಾರದು ಎಂದು ಸಚಿವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಮುಂಬರುವ ‘ಪರೀಕ್ಷೆ-2’ಗೆ ಕಡ್ಡಾಯವಾಗಿ ನೋಂದಾಯಿಸಿ, ಅವರಿಗೆ ಅಗತ್ಯ ಮಾರ್ಗದರ್ಶನ ಮತ್ತು ಶೈಕ್ಷಣಿಕ ಸಿದ್ಧತೆ ಒದಗಿಸಲು ಇಲಾಖೆಯ ಉಪ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಶಾರಿಕ್ ಬಿಡುಗಡೆ ಭೀತಿ: ಶಿಕ್ಷೆ ಪ್ರಮಾಣ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು NIA ಸಿದ್ಧತೆ

ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಅಪರಾಧಿ ಉಗ್ರ ಶಾರಿಖ್‌ಗೆ ವಿಧಿಸಲಾದ 10 ವರ್ಷಗಳ ಕಠಿಣ ಶಿಕ್ಷೆ ಕಡಿಮೆ ಎಂದು ಅಭಿಪ್ರಾಯಪಟ್ಟಿರುವ ಎನ್ಐಎ ಅಧಿಕಾರಿಗಳು, ಶಿಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಪ್ರಸ್ತುತ 27 ವರ್ಷದ ಶಾರಿಖ್ ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದು, ಇನ್ನೂ 7 ವರ್ಷ ಶಿಕ್ಷೆ ಮಾತ್ರ ಉಳಿದಿದೆ. ಈ ಹಿನ್ನೆಲೆ, ಕಡಿಮೆ ಅವಧಿಯಲ್ಲಿ ಬಿಡುಗಡೆಗೊಂಡರೆ ಆತ ಮತ್ತೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಇದೆ ಎಂದು ಎನ್ಐಎ ಆತಂಕ ವ್ಯಕ್ತಪಡಿಸಿದೆ.

ಮನೋಭಾವದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಮಧ್ಯಮ ವಯಸ್ಸಿನಲ್ಲಿ ಹೊರಬಂದರೆ ಮತ್ತೆ ಅಪಾಯ ಉಂಟಾಗಬಹುದು, ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಕನಿಷ್ಠ 20 ರಿಂದ 30 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವಂತೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ಏಪ್ರಿಲ್ 27ರಂದು ಎನ್ಐಎ ವಿಶೇಷ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121ಎ, 122, 326 ಹಾಗೂ ಯುಎಪಿಎ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಶಾರಿಖ್‌ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತ್ತು.