Home Blog Page 3102

ಕಳೆದ 24 ಗಂಟೆಗಳಲ್ಲಿ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದಲ್ಲಿ ಕೊರೊನಾ 2ನೇ ಅಲೆ ಜೋರಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,11,170 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಈ ಅವಧಿಯಲ್ಲಿ 4,077 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,46,84,077ಕ್ಕೆ ಏರಿಕೆಯಾಗಿದ್ದು, ಬಲಿಯಾದವರ ಸಂಖ್ಯೆ 2,70,284ಕ್ಕೆ ತಲುಪಿದೆ.

ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 36,18,458ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 3,62,437 ಜನ ಗುಣಮುಖರಾಗಿ ದೇಶದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಲಾಗಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 18,22,20,164 ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕೊರೊನಾ ರೋಗಿಗಳಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬುತ್ತಿರುವ ಗವಿಮಠದ ಶ್ರೀ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ವಿಡಿಯೋ ಕಾಲ್ ಮಾಡಿ ಕೊರೊನಾ ರೋಗಿಗಳಲ್ಲಿ ಧೈರ್ಯ ತುಂಬುವ ಕಾರ್ಯವನ್ನು ಗವಿಮಠದ ಶ್ರೀ ಮಾಡಿದ್ದಾರೆ.
ಶ್ರೀಗಳು ಇತ್ತೀಚೆಗಷ್ಟೇ ವೃದ್ಧಾಶ್ರಮದಲ್ಲಿ 100 ಬೆಡ್ ಗಳ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ತೆರೆದಿದ್ದರು. ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲಾದ ರೋಗಿಗಳಿಗೆ ವೀಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ.

ಆರೋಗ್ಯ ವಿಚಾರಿಸಿ, ಯಾವುದೇ ರೀತಿಯ ಭಯಪಡದಂತೆ ರೋಗಿಗಳಲ್ಲಿ ಧೈರ್ಯ ತುಂಬಿದ್ದಾರೆ. ವೀಡಿಯೋ ಕಾಲ್ ಮೂಲಕ ಧೈರ್ಯ ತುಂಬಿದ ಶ್ರೀಗಳಿಗೆ ರೋಗಿಗಳು ಸಂತಸದಿಂದ ಕೈ ಮುಗಿದಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ ಫುಲ್ ಆಗುತ್ತಿದ್ದಂತೆ ಗವಿಮಠದಿಂದ 100 ಬೆಡ್ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಗವಿ ಮಠದ ಸ್ವಾಮೀಜಿ ಕಾರ್ಯಕ್ಕೆ ಸಿಎಂ ಯಡಿಯೂರಪ್ಪ ಅವರು ಕೂಡ ಧನ್ಯವಾದ ಅರ್ಪಿಸಿದ್ದಾರೆ.

ಒಟ್ಟು 100 ಹಾಸಿಗೆಯಲ್ಲಿ 70 ಆಕ್ಸಿಜನ್ ಬೆಡ್, 20 ಸಾಮಾನ್ಯ ಬೆಡ್ ಮಾಡಲಾಗಿದೆ. ಬಾಕಿ 10 ಬೆಡ್ ನಲ್ಲಿ 6 ಎಚ್‍ ಎಫ್ ಎನ್ ಸಿ ಬೆಡ್ ಮತ್ತು 4 ವೆಂಟಿಲೇಟರ್ ಬೆಡ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವಾಮೀಜಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸೋಂಕಿಗೆ ತಾಯಿ ಬಲಿ..ನೋಡಲು ಬಂದ ಮಗ ತಾಯಿಯೊಂದಿಗೆ ಹೋದ!

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಮಹಾಮಾರಿಗೆ ಬಲಿಯಾಗಿದ್ದ ತಾಯಿಯನ್ನು ಕೊನೆಯ ಬಾರಿ ನೋಡಲು ಬಂದಿದ್ದ ಮಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನ ಹುರುಳಿನಂಜನಪುರ ಗ್ರಾಮದಲ್ಲಿ ನಡೆದಿದೆ. ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅವರ ಅತ್ತೆ ಸರೋಜಮ್ಮ(76) ಮಹಾಮಾರಿಗೆ ಬಲಿಯಾಗಿದ್ದರು.

ಕೊನೆಯ ಬಾರಿಗೆ ತಾಯಿಯನ್ನು ನೋಡಲು ಬೆಂಗಳೂರಿನಿಂದ ಬಂದಿದ್ದ ಮಗ ಸುರೇಶ್ ಕುಮಾರ್ (53) ಕೂಡ ಅಂತ್ಯಕ್ರಿಯೆ ನಡೆಯುವ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ತಾಯಿ, ಮಗ ಇಬ್ಬರೂ ಒಂದೇ ದಿನ ಸಾವನ್ನಪ್ಪಿದ್ದು, ಕುಟುಂಬದ ನೀರವ ಮೌನಕ್ಕೆ ಕಾರಣವಾಗಿದೆ.

ಆರೋಗ್ಯ ಇಲಾಖೆಯ ಯಡವಟ್ಟು; ಗ್ರಾಮದಲ್ಲಿ ಮನೆ ಮಾಡಿದ ಆತಂಕ!

ವಿಜಯಸಾಕ್ಷಿ ಸುದ್ದಿ, ಹಾವೇರಿ

ರಾಜ್ಯದಲ್ಲಿ ಈಗಾಗಲೇ ಕೊರೊನಾ 2ನೇ ಅಲೆ ಶುರುವಾಗಿದೆ. ಹಳ್ಳಿ ಹಳ್ಳಿಗೂ ಕೊರೊನಾ ಲಗ್ಗೆಯಿಟ್ಟಿದೆ. ಲಸಿಕೆ, ಚಿಕಿತ್ಸೆಯ ಕೊರತೆಗಳ ಮಧ್ಯೆ ಜನ ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಸಂದರ್ಭದಲ್ಲಿಯೇ ಆರೋಗ್ಯ ಇಲಾಖೆಯ ಮತ್ತೊಂದು ಯಡವಟ್ಟು ಬೆಳಕಿಗೆ ಬಂದಿದೆ.
ಕೊವೀಡ್ ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಕೊರೊನಾದಿಂದ ಸತ್ತಿಲ್ಲ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಶವವನ್ನು ಹಸ್ತಾಂತರ ಮಾಡಿದ್ದಾರೆ. ಈ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದಲ್ಲಿ ನಡೆದಿದೆ. ಸದ್ಯ ನಿಜ ಸಂಗತಿ ತಿಳಿಯುತ್ತಿದ್ದಂತೆ ಜನ ಆತಂಕದಲ್ಲಿ ಬದುಕುವಂತಾಗಿದೆ.

ಮೇ. 10ರಂದು ಗ್ರಾಮದ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಆದರೆ, ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ಮೃತ ದೇಹವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಅಂತ್ಯಕ್ರಿಯೆ ಮುಗಿದ ಮೂರು ದಿನಗಳ ನಂತರ ಮೃತನ ವರದಿ ಬಂದಿದ್ದು, ಅದರಲ್ಲಿ ಕೊರೊನಾ ಪಾಸಿಟಿವ್ ಇದೆ ಎನ್ನಲಾಗಿದೆ. ಹೀಗಾಗಿ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಕೊರೊನಾ ಇಲ್ಲವೆಂದು ಅಂತ್ಯಕ್ರಿಯೆಯಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಆರೋಗ್ಯ ಇಲಾಖೆ, ಸರಿಯಾದ ಮಾಹಿತಿ ನೀಡಿದ್ದರೆ ನಾವು ಕೊರೊನಾ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ಮಾಡುತ್ತಿದ್ದೇವು ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ಹುಷಾರ್..! ಸದ್ದಿಲ್ಲದೆ ಯುವಕರ ಪ್ರಾಣವಾಯುವನ್ನೇ ನಿಲ್ಲಿಸುತ್ತಿದೆ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶಾದ್ಯಂತ ಸದ್ಯ ಕೊರೊನಾ ಎರಡನೇ ಅಲೆ ಜೋರಾಗಿದೆ. ಈ ಅಲೆಗೆ ಯುವ ಸಮುದಾಯವೇ ಹೆಚ್ಚಾಗಿ ಸೋಂಕಿಗೆ ಬಲಿಯಾಗುತ್ತಿದೆ. ಸುಮಾರು 35 ರಿಂದ 45 ವರ್ಷ ವಯಸ್ಸಿನೊಳಗಿನವರಲ್ಲಿಯೇ ಸೋಂಕಿನ ಗಂಭೀರತೆ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ರೂಪಾಂತರಿ ಕೊರಾನಾದಿಂದಾಗಿ ಯುವಕರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.

ಯುವಕರ ರಕ್ತದಲ್ಲಿ ಅಥವಾ ದೇಹದಲ್ಲಿ ಆಮ್ಲಜನಕದ ಪ್ರಮಾಣ ದಿಢೀರ್‌ ಕುಸಿಯುವ ‘ಹ್ಯಾಪಿ ಹೈಪೊಕ್ಸಿಯಾ’ದಿಂದ ಯುವಕರು ಸಾವನ್ನಪ್ಪುವಂತಾಗುತ್ತಿದೆ. ಆಕ್ಸಿಮೀಟರ್‌ ನಿಂದ ಸೋಂಕಿತರು ನಿಯಮಿತವಾಗಿ ತಮ್ಮ ಆಮ್ಲಜನಕ ಪ್ರಮಾಣ ಚೆಕ್‌ ಮಾಡಿಕೊಳ್ಳುವುದೊಂದೇ ಸದ್ಯದ ಪರಿಹಾರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಹಳಷ್ಟು ಯುವಕರಿಗೆ ತಮ್ಮ ದೇಹದ ಆಮ್ಲಜನಕ ಪ್ರಮಾಣ ಇಳಿಕೆಯಾಗುತ್ತಿರುವುದು ತಕ್ಷಣಕ್ಕೆ ಗೊತ್ತಾಗುತ್ತಿಲ್ಲ. ಆಮ್ಲಜನಕದ ಪ್ರಮಾಣ ಶೇ. 20 ರಿಂದ 30ರಷ್ಟು ಇಳಿಕೆ ಕಂಡಾಗಲೇ ತಿಳಿಯುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಯುವಕರ ತುಟಿಗಳ ಬಣ್ಣ ಬದಲಾಗಿ ನೀಲಿಗೆ ತಿರುಗುವುದು. ಕೈ -ಕಾಲುಗಳ ಚರ್ಮದ ಬಣ್ಣ ಕೆಂಪಾಗುವುದು. ಏಕಾಏಕಿಯಾಗಿ ವಿಪರೀತ ಬೆವರುವುದು ಕಂಡು ಬರುತ್ತಿದ್ದರೆ, ಯುವಕರು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಅಂತ್ಯಕ್ರಿಯೆ ನಡೆಯಬೇಕು ಎನ್ನುವಷ್ಟರಲ್ಲಿಯೇ ಕಣ್ಣು ತೆರೆದ ಸೋಂಕಿತ ಮಹಿಳೆ

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಸೋಂಕಿತ ಮಹಿಳೆಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆಂದು ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ನಡೆದಿತ್ತು. ಕುಟುಂಬದವರ ಆಕ್ರಂದನ ಕೂಡ ಮುಗಿಲು ಮುಟ್ಟಿತು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಇನ್ನೇನು ಅಂತ್ಯಕ್ರಿಯೆ ನಡೆಯಬೇಕು ಎನ್ನುವಷ್ಟರಲ್ಲಿಯೇ ಮಹಿಳೆ ಎದ್ದು ಕುಳಿತಿರುವ ಘಟನೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದಿದೆ.

76 ವರ್ಷದ ಮಹಿಳೆ ಈ ರೀತಿಯಾಗಿ ಎದ್ದು ಕುಳಿತಿದ್ದಾರೆ. ಅಂತ್ಯಸಂಸ್ಕಾರಕ್ಕೂ ಕೆಲವೇ ನಿಮಿಷಗಳಿರುವಾಗ ಎಚ್ಚರಗೊಂಡು ಎದ್ದು ಕುಳಿತಿದ್ದಾರೆ. ಶಕುಂತಲಾ ಗಾಯಕ್‌ವಾಡ್ ಅವರಿಗೆ ಇತ್ತೀಚೆಗಷ್ಟೇ ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ. ಅವರನ್ನು ಕಾರಿನಲ್ಲಿಯೇ ಇರಿಸಿಕೊಳ್ಳಲಾಗಿತ್ತು. ಆದರೆ, ಅವರು ಕಾರಿನಲ್ಲಿ ಕುಸಿದು ಬಿದ್ದಿದ್ದರು. ಹೀಗಾಗಿ ಕುಟುಂಬದವರು ಮಹಿಳೆ ಮೃತಪಟ್ಟಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು.

ಕೆಲವು ಸಮಯದ ನಂತರ ಮಹಿಳೆ ಕಣ್ಣು ತೆರೆದು ಅಳಲು ಪ್ರಾರಂಭಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಚಿಕಿತ್ಸೆಗಾಗಿ ಮಹಿಳೆಯನ್ನು ಸಿಲ್ವರ್ ಜುಬ್ಲೀ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತೌಖ್ತೆ ಅಬ್ಬರ – ಎಲ್ಲೆಡೆ ಮಳೆರಾಯನ ಅಟ್ಟಹಾಸ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ತೌಖ್ತೆ ಅಬ್ಬರ ಈಗ ಶುರುವಾಗಿದೆ. ದೇವರ ನಾಡಿನಲ್ಲಿ ಅಲೆಗಳು ಮನೆಗಳತ್ತ ನುಗ್ಗಿ ಬರುತ್ತಿವೆ. ಪರಿಣಾಮ ರಾಜ್ಯದ ಕರಾವಳಿ ಪ್ರದೇಶದಲ್ಲಿಯೂ ಮಳೆಯ ಅವಾಂತರ ಮುಂದುವರೆದಿದೆ. ಕೊರೊನಾ ಕಾಟದ ಮಧ್ಯೆ ಸದ್ಯ ಜನರಿಗೆ ತೌಖ್ತೆ ಕಾಟ ನುಂಗಲಾರದ ತುತ್ತಾಗಿದೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ 165ರಿಂದ 175 ಕೀಮೀ ವೇಗದಲ್ಲಿ ಚಂಡಮಾರುತ ಕೇರಳ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಈಗಾಗಲೇ ಕೇರಳದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇರಳದ ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಮಲಪುರಂ, ಕೊಯಿಕ್ಕೋಡ್, ವಯನಾಡು, ಕಣ್ಣೂರಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಅರಬ್ಬೀ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ಏಳುತ್ತಿವೆ. ತಿರುವನಂತಪುರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಅರ್ಧದಷ್ಟು ರಸ್ತೆ ಸಮುದ್ರಪಾಲಾಗಿವೆ. ಮನೆಗಳಿಗೆ ನೀರು ನುಗ್ಗುತ್ತಿದೆ. ತ್ರಿಶೂರ್ ಕೂಡ ತೌಖ್ತೆ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿದೆ. ಅಲಪುಜ್ಜದಲ್ಲಿ ತೌಕ್ತೆ ಎಫೆಕ್ಟ್ ಜೋರಾಗಿದೆ. ಇಲ್ಲಿನ ಮನೆ, ಶಾಲೆಯ ಮೇಲೆ ಮರ, ವಿದ್ಯುತ್ ಕಂಬಗಳು ಉರುಳಿಬಿದ್ದಿವೆ.
ಕರ್ನಾಟಕದ ಕರಾವಳಿಗೂ ತೌಖ್ತೆ ಹಾನಿ ಮಾಡುತ್ತಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡದ ಕಡಲತೀರದಲ್ಲಿ ಮಳೆ ಅಬ್ಬರಕ್ಕೆ ಸೋಮೇಶ್ವರ ಕಡಲತೀರದಲ್ಲಿದ್ದ ಸ್ಮಶಾನದ ತಡೆಗೋಡೆ ಕೊಚ್ಚಿಹೋಗಿದೆ. ಉಳ್ಳಾಲ, ಕೋಟೆಪುರ, ಕೈಕೊ, ಸಸಿಹಿತ್ಲು ಪ್ರದೇಶದಲ್ಲಿ ಕಡಲ ಕೊರೆತ ಆತಂಕ ಶುರುವಾಗಿದೆ.
ಉಡುಪಿಯ ಸಮುದ್ರ ತೀರದಲ್ಲಿಯೂ ಪ್ರವಾಹ ಅಬ್ಬರ ಜೋರಾಗಿದೆ.

ಉಪ್ಪುಂದದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಮೀನುಗಾರಿಕಾ ಶೆಡ್, ಜನರನ್ನು ಶಿಫ್ಟ್ ಮಾಡಲಾಗಿದೆ. ಈಗಾಗಲೇ ಕಡಲತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೊಡಗು, ಮೈಸೂರು, ಹಾಸನ, ಕೋಲಾರದಲ್ಲಿ ಮಳೆ ರಭಸವಾಗಿ ಸುರಿಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಜನರ ರಕ್ಷಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ಯೋಧರು ಬಂದಿದ್ದಾರೆ.

ಶನಿವಾರವೂ ಶನಿದೇವರ ಕಾಟ; ಗದಗ ಜಿಲ್ಲೆಯಲ್ಲಿ 459 ಜನರಿಗೆ ಸೋಂಕು, ಮತ್ತೆ ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 15 ಶನಿವಾರವೂ ಪಾಸಿಟಿವ್ ಪ್ರಕರಣಗಳು ನಾಲ್ಕು ನೂರರ ಗಡಿ ದಾಟಿದೆ. ಸೋಂಕು ಹಳ್ಳಿ ಹಳ್ಳಿಗೂ‌ ವ್ಯಾಪಿಸುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನ‌ ಆತಂಕದಿಂದ ಕಾಲ ಕಳೆಯುವಂತಾಗಿದೆ.

ಇವತ್ತಿನ ವರದಿಯಂತೆ ಮತ್ತೆ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 459 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 17359ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -197, ಮುಂಡರಗಿ-77, ನರಗುಂದ-21, ರೋಣ-117, ಶಿರಹಟ್ಟಿ-36 ಹೊರಜಿಲ್ಲೆಯ-11 ಸೇರಿದಂತೆ 459 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 179 ಕ್ಕೇರಿದೆ.

ಧಾರವಾಡ ಜಿಲ್ಲೆಯ ನವಲಗುಂದ ನಿವಾಸಿ 60 ವರ್ಷದ ಮಹಿಳೆ ಮೇ 04 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು, ಮೇ 12 ರಂದು ಮೃತಪಟ್ಟಿರುತ್ತಾರೆ.

ಗದಗನ 42 ವರ್ಷದ ಮಹಿಳೆ ಮೇ 10 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 12 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

58 ವರ್ಷದ ಮಹಿಳೆ ಮೇ 09 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 12 ರಂದು ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಆದ್ರಹಳ್ಳಿ ಗ್ರಾಮದ ನಿವಾಸಿ 64 ವರ್ಷದ ಮಹಿಳೆ ಮೇ 04 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 13 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 273 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 14769 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2411 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 195 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಬಿಜೆಪಿ ಮುಖಂಡನ ಮೊಂಡಾಟಕ್ಕೆ ಬ್ರೇಕ್ ಹಾಕಿದ ಖಡಕ್ ರಾಮರಾಜನ್

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಲಾಕ್ ಡೌನ್ ಇರುವುದರಿಂದಾಗಿ ಪೊಲೀಸರು ಓಡಾಡುತ್ತಿರುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆಯ ಮಾಜಿ ಸದಸ್ಯರೊಬ್ಬರು ಡಿಸಿಪಿಗೆ ಅವಾಜ್ ಹಾಕಿರುವ ಘಟನೆ ನಡೆದಿದೆ.
ಈ ಘಟನೆ ಇಲ್ಲಿಯ ಚನ್ನಮ್ಮ ವೃತ್ತದಲ್ಲಿ ನಡೆದಿದೆ. ಸೀಟ್ ಬೆಲ್ಟ್ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಡಿಸಿಪಿ ರಾಮರಾಜನ್ ಅವರಿಗೆ ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ ಅವಾಜ್ ಹಾಕಿದ್ದಾರೆ.

ನಗರದ ಚೆನ್ನಮ್ಮ ವೃತ್ತದಲ್ಲಿ ತಮ್ಮ ಕಾರು ಚಾಲಕನೊಂದಿಗೆ ರಾಜಣ್ಣ ಕೊರವಿ ಆಗಮಿಸುತ್ತಿದ್ದರು. ಸೀಟ್ ಬೆಲ್ಟ್ ಹಾಕದಿರುವ ಹಿನ್ನೆಲೆಯಲ್ಲಿ‌ ಡಿಸಿಪಿ ಸೀಟ್ ಬೆಲ್ಟ್ ಏಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ ಡಿಸಿಪಿ ಜೊತೆಗೆ ರಾಜಣ್ಣ ಕೊರವಿ ವಾಗ್ವಾದಕ್ಕಿಳಿದಿದ್ದಾರೆ‌.
ನಾನು ಮಾಜಿ ಕಾರ್ಪೊರೇಟರ್. ನಾನ್ಯಾರು ಅಂತಾ ಪರಿಚಯ ಮಾಡಿಕೊಳ್ಳಬೇಕಲ್ಲ ಎಂದು ಅವಾಜ್ ಹಾಕಿದ್ದಾರೆ. ಆಗ ಡಿಸಿಪಿ ನಮಗೆ ಯಾರಾದರೇನು? ಎಂದಿದ್ದಾರೆ. ಅಷ್ಟಕ್ಕೆ ರಾಜಣ್ಣ ಕೊರವಿ ಹಾಗೂ ಅವರ ಕಾರು ಚಾಲಕ ಡಿಸಿಪಿ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಕೊನೆಗೂ ಸೀಟ್ ಬೆಲ್ಟ್ ಹಾಕದ ರಾಜಣ್ಣ ಕೊರವಿಗೆ ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ.

ನಿಯಮಗಳನ್ನು ಉಲ್ಲಂಘಿಸಿದ ರಾಜಣ್ಣ ಕೊರವಿಗೆ ರೂ. 500 ರೂ ದಂಡ ಹಾಕಲಾಗಿದೆ. ರಾಜಣ್ಣ ಕೊರವಿ ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಪಿ ರಾಮರಾಜನ್, ಇದು ‌ಪೊಲೀಸರಿಗೆ ಕಾಮನ್. ಜನಸಾಮಾನ್ಯರು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ. ಆದರೆ, ನಾವು ಕಾನೂನು ಪ್ರಕಾರ ತಪ್ಪು ಮಾಡಿದವರಿಗೆ ದಂಡ ವಿಧಿಸುತ್ತೇವೆ. ರಾಜಕೀಯ ವ್ಯಕ್ತಿ, ಸಾಮಾನ್ಯ ವ್ಯಕ್ತಿ ಆದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳಿದ್ದಾರೆ.

ಸದ್ದಿಲ್ಲದೆ ಅಲೆಮಾರಿಗಳ ಹಸಿವು ನೀಗಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ !

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆಯಾದಾಗಿನಿಂದ ಜನ- ಜೀವನ ಅಸ್ತವ್ಯಸ್ಥಗೊಂಡಿದೆ. ಇದರಿಂದಾಗಿ ಬಡವರ ಬದುಕು ಬೀದಿಗೆ ಬಂದಿದೆ. ಹೊರ ರಾಜ್ಯದಿಂದ ಬಂದು ನಗರದ ಕೋರ್ಟ್ ಬಳಿ ನೆಲೆ ಊರಿರುವ ಅಲೆಮಾರಿ ಕುಟುಂಬಗಳು ರಸ್ತೆ ಪಕ್ಕದಲ್ಲಿ ಕರಕುಶಲ ವ್ಯಾಪಾರ ಮಾಡುತ್ತ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

ಆದರೆ, ಕೊರೊನಾದಿಂದಾಗಿ ಅವರು ಸಂಕಷ್ಟ ಪಡುವಂತಾಗಿತ್ತು. ಪೊಲೀಸರ ಆದೇಶದಂತೆ ಈ ಕುಟುಂಬಸ್ಥರು ತಮ್ಮ ವ್ಯಾಪಾರ – ವಹಿವಾಟು ಮೊಟಕುಗೊಳಿಸಿದ್ದರು. ಕೈಯಲ್ಲಿ ಹಣ ಕೂಡ ಇರಲಿಲ್ಲ. ಹೀಗಾಗಿ ಹಸಿವಿನಿಂದ ಕಂಗಾಲಾಗಿದ್ದರು.

ಈ ಕುಟುಂಬದ ಮಾಹಿತಿ ಪಡೆದಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು, ಇಂದು ಸದ್ದಿಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಆ ಕುಟುಂಬಸ್ಥರಿಗೆ ದಿನ ಬಳಕೆಯ ದಿನಸಿ ವಸ್ತುಗಳನ್ನು ನೀಡಿದ್ದಾರೆ. ಲಘು ಉಪಹಾರಗಳನ್ನು ವಿತರಿಸಿದ್ದಾರೆ. ಅಲ್ಲದೇ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಆ ಕುಟುಂಬಗಳಿಗೆ ಆತ್ಮ ಸ್ಥೈರ್ಯ ತುಂಬುವ ಮೂಲಕ ಅಧಿಕಾರಕ್ಕಿಂತ ಮಾನವಿಯತೆ ದೊಡ್ಡದೆಂದು ತೊರಿಸಿ ಕೊಟ್ಟಿದ್ದಾರೆ.

ಆಹಾರ ಪದಾರ್ಥಗಳನ್ನು ಪಡೆದ ಅಲೆಮಾರಿ ಕುಟುಂಬಸ್ಥರು ಮಾತನಾಡಿ, ಕಳೆದ ಕೆಲವು ದಿನಗಳಿಂದ ವ್ಯಾಪಾರವಿಲ್ಲ. ಹೀಗಾಗಿ ದಿನಸಿ ಪದಾರ್ಥಗಳನ್ನು ಖರೀದಿಸಲು ಕೈಯಲ್ಲಿ ಹಣವಿರಲಿಲ್ಲ. ಆದರೆ, ಇಂದು ದೈವ ಸ್ವರೂಪದಲ್ಲಿ ಆಗಮಿಸಿದ ಬಡಾ ಸಾಹೇಬ್ (ಎಸ್ಪಿ) ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ತಿಂಗಳಿಗಾಗುವಷ್ಟು ದಿನ ಬಳಕೆಯ ಆಹಾರ ವಸ್ತುಗಳನ್ನು ನೀಡಿದ್ದಾರೆ. ಇದರೊಂದಿಗೆ ನಮಗೆ ಧೈರ್ಯ ತುಂಬಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

error: Content is protected !!