ಪ್ರವಾಹದ ಅಲೆಗೆ ತತ್ತರಿಸಿ ಹೋಗಿದ್ದ ಜಿಲ್ಲೆಯ ಮಲಪ್ರಭಾ ನದಿ ತೀರದ ಜನರಿಗೀಗ ಮತ್ತೊಂದು ಆತಂಕ ಸೃಷ್ಟಿಯಾಗಿದೆ.
ನೆರೆ ಬಂದು ಹೋಗಿ ತಿಂಗಳುಗಳೇ ಕಳೆದಿದ್ದು, ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಇದರಿಂದ ಗ್ರಾಮದ ಜನರು ಭಯಭೀತರಾಗಿದ್ದಾರೆ.
ಆತಂಕಗೊಂಡಿರುವ ಗ್ರಾಮಸ್ಥರು ರೋಣ ಅರಣ್ಯ ವಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮೊಸಳೆ ಸೆರೆ ಹಿಡಿಯಲು ಮುಂದಾಗಿದ್ದಾರೆ. ಅಲ್ಲದೇ, ನದಿ ತೀರದತ್ತ ಯಾರೂ ಹೋಗದಂತೆ ಎಚ್ಚರಿಕೆ ಡಂಗುರ ಸಾರಿದ್ದಾರೆ.
ಈ ಹಿಂದೆಯೂ ಇದೇ ಭಾಗದ ಹೊಳೆಆಲೂರು ಗ್ರಾಮದ ಪಕ್ಕ ಮೊಸಳೆ ಪ್ರತ್ಯಕ್ಷವಾಗಿತ್ತು. ಮೂರು ದಿನಗಳ ನಂತರ ಮೊಸಳೆ ನಿಗೂಢವಾಗಿ ಸಾವನ್ನಪ್ಪಿತ್ತು.
ಸಲಿಂಗಕಾಮಕ್ಕಾಗಿ ಕೊಪ್ಪಳದ ಗವಿಮಠ ಹಾಸ್ಟೇಲ್‌ನಿಂದ ಬಾಲಕನನ್ನು ಅಪಹರಿಸಿದ್ದ ಅಪರಾಧಿಗೆ 10 ವರ್ಷ ಜೈಲು ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
2018ರಲ್ಲಿ ಮೂವರು ವಿದ್ಯಾರ್ಥಿಗಳಿಗೆ ಮೊಬೈಲ್ ತೋರಿಸುವ ಆಮಿಷವೊಡ್ಡಿ ಗದಗ, ಕಲಬುರ್ಗಿ, ತಿರುಪತಿ, ರಾಯಚೂರು, ಬೆಂಗಳೂರು ಸೇರಿದಂತೆ ನಾನಾ ಊರುಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ತಿರುಗಾಡಿದ್ದ ಅಪರಾಧಿ ಶರಣಪ್ಪ ಕೆಂಬಾವಿ, ವಿದ್ಯಾರ್ಥಿಗಳನ್ನು ಲೈಂಗಿಕ ತೃಷೆಗೆ ಬಳಸಿಕೊಂಡಿದ್ದ. ಬೆಂಗಳೂರಿನಲ್ಲಿ ಇದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿತ್ತು.
ಇದುವರೆಗೂ ಪ್ರಕರಣದ ವಿಚಾರಣೆಯನ್ನು ಕೂಲಂಕಷವಾಗಿ ಆಲಿಸಿದ ಕೊಪ್ಪಳದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಎಸ್.ಎಂ.ಜಲವಾದಿಯವರು ಆರೋಪ ಸಾಬೀತಾಗಿದ್ದನ್ನು ತಿಳಿಸಿ ಪ್ರಕರಣದ ಆರೋಪಿಯನ್ನು ಅಪರಾಧಿ ಎಂದು ತೀರ್ಮಾನಿಸಿ 10 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ನಗರದಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಕಾಂಗ್ರೆಸ್ ಮುಖಂಡ ಶ್ರೀಧರ್ ವಜ್ರಬಂಡಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಆರೋಪಿತರು ಪರಾರಿಯಾಗಿರುವ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಂಗ್ರೆಸ್ ಮುಖಂಡ ಶ್ರೀಧರ್ ವಜ್ರಬಂಡಿ, ಚಾಲಕ ಸಿದ್ದಲಿಂಗಯ್ಯ ಮರಿಯಮ್ಮನವರ, ಪ್ರಮೋದ್ ಮಾನೇದ ಬಂಧಿತ ಆರೋಪಿಗಳಾಗಿದ್ದಾರೆ. ವಾಹನ ಮಾಲೀಕ ನಾಗರಾಜ್ ಹಾಗೂ ಗೋದಾಮಿನ ಮಾಲೀಕ ನಾಗರಾಜ್ ಮುರಗಿ ಪರಾರಿಯಾಗಿದ್ದಾರೆ.
ಆರೋಪಿತರು ಜಿಲ್ಲಾಡಳಿತ ಭವನದ ಎದುರಿಗಿರುವ ಕನ್ನಡ ಸಾಹಿತ್ಯ ಭವನದ ಹತ್ತಿರದ ಗೋದಾಮೊಂದರಿಂದ ಅಕ್ರಮ ಅಕ್ಕಿ ಸಾಗಿಸುತ್ತಿದ್ದರು. ಈ ವೇಳೆ ಪೊಲೀಸ್ ಇಲಾಖೆಯ ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಸಂಖ್ಯೆ 112 ಕ್ಕೆ ಕರೆ ಬಂದಿದ್ದು, ಖಚಿತ ಮಾಹಿತಿ ಆಧಾರಿಸಿ ಎಆರ್‌ಎಸ್‌ಐ ಬಿ.ವಿ. ಮಲ್ಲನಗೌಡರ ನೇತೃತ್ವದಲ್ಲಿ ಸಿಎಚ್‌ಸಿ ಎಸ್.ಎ. ಬಸಾಪೂರ್ ಅವರು ದಾಳಿ ನಡೆಸಿದ್ದಾರೆ.
ಆರೋಪಿಗಳು ಅಕ್ರಮವಾಗಿ ಅಕ್ಕಿ ತುಂಬಿದ್ದ ವಾಹನವನ್ನು ಬೆನ್ನಟ್ಟಿದ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿ, 50 ಕೆ.ಜಿ. ತೂಕದ 80 ಚೀಲಗಳನ್ನು ವಶಪಡಿಸಿಕೊಂಡು ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಹೆಚ್ಚಿನ ತನಿಖೆ ಕೈಗೊಂಡ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ, ಸಾಹಿತ್ಯ ಭವನದ ಹತ್ತಿರವಿರುವ ಗೋದಾಮಿನ ಮೇಲೆ ದಾಳಿ ನಡೆಸಿ, ಅಲ್ಲಿ ಸಂಗ್ರಹಿಸಿಟ್ಟಿದ್ದ 2,79,000 ರೂ. ಮೌಲ್ಯದ 126 ಕ್ವಿಂಟಾಲ್ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದ್ದು, ಆರೋಪಿಗಳು ಎಲ್ಲಿಗೆ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದರು ಎನ್ನುವುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
2020ರ ಮೇ ತಿಂಗಳಲ್ಲಿ ಜಿಲ್ಲೆಗೆ ಕಾಲಿಟ್ಟ ಕೊರೊನಾ ಪ್ರಕರಣಗಳು, ಜೂನ್‌ನಿಂದ ನಿರಂತರವಾಗಿ ಹೆಚ್ಚಳವಾಗುತ್ತಲೇ ಬಂದವು. ಡಿಸೆಂಬರ್‌ನಿಂದ ಇಳಿಮುಖವಾದ ಕೊರೊನಾ ಪತ್ತೆ ಪ್ರಕರಣಗಳು 2021ರ ಜನೇವರಿ 7ರಂದು ಶೂನ್ಯಕ್ಕೆ ಬಂದು ನಿಂತಿದೆ.
ಜಿಲ್ಲೆಯಲ್ಲಿ ಇನ್ನೂ 53 ಸಕ್ರೀಯ ಪ್ರಕರಣಗಳಿದ್ದು, ಜನರು ಕೊಂಚ ನೆಮ್ಮದಿ ಪಡುವಂತಾಗಿದೆ.
ಚಾಲಕ ಸೇರಿದಂತೆ ಐದು ಜನ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಬಂಧಿಸಿ ಅವರಿಂದ 2500 ಕ್ಕೂ ಹೆಚ್ಚು ಹಣ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದಿದೆ.
ಖಚಿತ ಮಾಹಿತಿ ಪಡೆದ ಪಿಎಸ್ಐ ಗುರುಶಾಂತ ದಾಸ್ಯಾಳ ಹಾಗೂ ಸಿಬ್ಬಂದಿ ಇಲ್ಲಿನ ಗೌಡಗೇರಿ ರಸ್ತೆಯಲ್ಲಿ ಇರುವ ಪುರಸಭೆಯ ಕಸ ವಿಲೇವಾರಿ ಸ್ಥಳದ ಹತ್ತಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಚಾಲಕ ಪ್ರಭು ಯಲ್ಲಪ್ಪ ಕಲಾಲ್, ಕಳಕಪ್ಪ ಮಹಾಂತಪ್ಪ ಮಂಗಳೂರು, ಈರಪ್ಪ ರಾಮಣ್ಣ ಭಜಂತ್ರಿ, ರಾಮಪ್ಪ ದುರಗಪ್ಪ ಶಿಗ್ಗಾಂವಿ, ಬಸೆಟ್ಟೆಪ್ಪ ಮಹಾಬಲೇಶ್ವರ ಸಂಗಮದ ಎಂಬುವರನ್ನು ಬಂಧಿಸಿದ್ದಾರೆ.
ನಗರದ ಕೆ ಎಚ್ ಪಾಟೀಲ್ ಸರ್ಕಲ್ ಬಳಿಯ ವೀರೇಶ್ವರ ಲೈಬ್ರರಿ ಹಿಂದೆ ಬಾಂಬೆ ಮಟಕಾ ಓ ಸಿ ನಂಬರ್ ಬರೆಯುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬನನ್ನು ಸೈಬರ್ ಕ್ರೈಮ್ ನ ಇನ್ಸ್ಪೆಕ್ಟರ್ ಟಿ ಮಹಾಂತೇಶ್ ನೇತೃತ್ವದಲ್ಲಿ ದಾಳಿ ಮಾಡಿ ಬಂಧಿಸಿಲಾಗಿದೆ.
ಬಂಧಿತ ಗಂಗಾಪೂರಪೇಟಿಯ ಸಂತೋಷ ರಘುನಾಥಸಾ ನಾಕೋಡ್ ಎನ್ನಲಾಗಿದೆ. ಬಂಧಿತನಿಂದ 7555 ರೂ.ನಗದು ಹಾಗೂ ಮಟಕಾ ಸಾಮಾಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕೊರೊನಾ ಲಸಿಕೆ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡುತ್ತಿದ್ದಂತೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲೂ ಕೋವಿಡ್ ಲಸಿಕೆ ವಿತರಿಸಲು ಜಿಲ್ಲಾಡಳಿತ ಭರ್ಜರಿ ಸಿದ್ಧತೆ ನಡೆಸಿದೆ.
ಈ ಬಗ್ಗೆ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಕೋವಿಡ್ ಲಸಿಕೆ ವಿತರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿರುವ ಅವರು, ‘ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಗುರುತಿಸಲಾಗಿರುವ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಲಸಿಕೆ ತೆಗೆದುಕೊಳ್ಳುವವರು ಸೋಂಕು ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಯನುಸಾರ ಲಸಿಕೆ ಪಡೆಯಲು ಸೂಚಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಿ ನಿಗಾವಹಿಸಬೇಕು ಎಂದು ತಿಳಿಸಿದರು.
ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ತಪಾಸಣೆ ಹಾಗೂ ಪರೀಕ್ಷೆ ನಡೆಸುವುದು ನಿರಂತರವಾಗಿರಬೇಕು. ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಸೂಚಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿ.ಪಂ. ಸಿಇಒ ಡಾ.ಆನಂದ ಕೆ. ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ತಪಾಸಣೆಯನ್ನು ನಿರಂತರ ಹಾಗೂ ಸರಿಯಾಗಿ ನಡೆಸಬೇಕು. ಸೋಂಕು ಲಕ್ಷಣವಿರುವವರನ್ನು, ವೃದ್ಧರು ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿರುವವರ ಮೇಲೆ ನಿಗಾವಹಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಬಸರಿಗಿಡದ, ಜಿಲ್ಲಾ ಸಮೀಕ್ಷಾಣಾಧಿಕಾರಿ ಡಾ.ಜಗದೀಶ್ ನುಚ್ಚಿನ್, ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಬೂಸರಡ್ಡಿ ಸೇರಿದಂತೆ ಮತ್ತಿತರರು ಇದ್ದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ಸಿಬ್ಬಂದಿಗಳು, ಸೇರಿದಂತೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊದಲ ಹಂತದಲ್ಲಿ ಕೋವಿಡ್ ಲಸಿಕೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಎಂ.ಸುಂದರೇಶ್‌ಬಾಬು, ಜಿಲ್ಲಾಧಿಕಾರಿ
8895 ಜನರಿಗೆ ಕೊರೊನಾ ಲಸಿಕೆ
ಜಿಲ್ಲೆಯಲ್ಲಿ ಪ್ರಥಮ ಹಂತದ ಕೋವಿಡ್ ಲಸಿಕೆ ನೀಡಲು ೪೮ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿ ಕೇಂದ್ರಗಳಲ್ಲ್ಲೂ ಪ್ರತಿ ದಿನಕ್ಕೆ ನೂರು ಜನರಿಗೆ ಲಸಿಕೆ ಹಾಕಬಹುದು. ಪ್ರಥಮ ಹಂತದಲ್ಲಿ ಲಸಿಕೆ ನೀಡಲು ಒಟ್ಟು 8895 ಜನ ಕೊರೊನಾ ವಾರಿಯರ‍್ಸ್‌ಗಳನ್ನು ಗುರುತಿಸಲಾಗಿದ್ದು, ಅಷ್ಟೂ ಜನರಿಗೆ ಮೂರು ದಿನಗಳಲ್ಲಿ ಲಸಿಕೆ ವಿತರಿಸಬಹುದು ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ಮಾಹಿತಿ ನೀಡಿದರು.
ಪರನಾರಿ ಜೊತೆ ನನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಸಣ್ಣನೀರಾವರಿ ಇಲಾಖೆಯ ಅಧಿಕಾರಿಯ ಪತ್ನಿ ರಂಪಾಟ ನಡೆಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ನಗರದ ಕುಷ್ಟಗಿ ಸರ್ಕಲ್ ಬಳಿಯ ಸಣ್ಣನೀರಾವರಿ ಇಲಾಖೆಯ ಅಧಿಕಾರಿ ವಿನೋದ್ ಕುಮಾರ್ ಗುಪ್ತಾ ಪರ ಸ್ತ್ರೀಯೊಂದಿಗೆ ಮನೆಯಲ್ಲಿದ್ದಾಗ ಗುಪ್ತಾಳ ಪತ್ನಿ ಹಾಗೂ ಮಕ್ಕಳು ದಾಳಿ ಮಾಡಿದ್ದಾರೆ. ಇದೇ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಬಿದ್ದ ವಿನೋದ್ ಕುಮಾರ್ ಗುಪ್ತಾ ಹಾಗೂ ಪರನಾರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಗುಪ್ತಾಳ ಪತ್ನಿ ಹಾಗೂ ಅನೈತಿಕ ಸಂಬಂಧ ಹೊಂದಿದ ಮಹಿಳೆ ಮನೆಯೊಳಗೆ ಕೈ ಕೈ ಮಿಲಾಯಿಸಿದ್ದು, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ವಿಷಯ ತಿಳಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣ ಇದೀಗ ಕೊಪ್ಪಳ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಗದಗ-ಬೆಟಗೇರಿ ನಗರದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮೂರು ಅಂತಸ್ಥಿನ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಬಹುತೇಕ ಕಟ್ಟಡ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ನಗರದ ಪಾಲಾ ಬದಾಮಿ ರಸ್ತೆಯ ಪಕ್ಕದ ರಿಜಿಸ್ಟರ್ ಸರ್ವೆ ನಂಬರ್ 6706/75ಎ ದಿಂದ 22/2ಎ1 ನೇದ್ದರಲ್ಲಿ ಮೂರು ಅಂತಸ್ಥಿನ ವಾಣಿಜ್ಯ ಕಟ್ಟಡ ಕಟ್ಟಲಾಗುತ್ತಿದೆ. ದಲಿಚಂದ ಮೇಘರಾಜ ಕೋಠಾರಿ ಸೇರಿ 31 ಮಾಲೀಕರ ಸಹಭಾಗಿತ್ವದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ನಗರಸಭೆ ಪೌರಾಯಕ್ತರು ಅಕ್ಟೋಬರ್ 2015ರಲ್ಲಿಯೇ ಅನುಮತಿ ನೀಡಿದ್ದಾರೆ.
ತೆರವಿಗೆ ಮನವಿ
ಸದ್ಯ ನಿರ್ಮಾಣವಾಗುತ್ತಿರುವ ವಾಣಿಜ್ಯ ಕಟ್ಟಡದ ಮೂಲ ಜಾಗೆಯಲ್ಲಿ ಬಾವಿಯೊಂದಿತ್ತು. ಆದರೆ, ಆ ಬಾವಿಯನ್ನು ಮುಚ್ಚಿ ಅದರ ಮೇಲೆ ಕಟ್ಟಡ ಕಟ್ಟಿದ್ದಾರೆ. ನಿಯಮ ಬಾಹಿರವಾಗಿ ಕಟ್ಟಿರುವ ಈ ಕಟ್ಟಡವನ್ನು ತೆರುವುಗೊಳಿಸುವಂತೆ ಹೋರಾಟಗಾರ ವೆಂಕನಗೌಡ ಗೋವಿಂದಗೌಡರ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.
ವಾಣಿಜ್ಯ ಕಟ್ಟಡವನ್ನು ಎರಡು ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ಕಟ್ಟುತ್ತಿರುವ ಸ್ಥಳದಲ್ಲಿ ಎರಡು ಬಾವಿಗಳಿದ್ದು, ಅವೆರಡೂ ಬಾವಿಗಳಲ್ಲಿ ನೀರು ತುಂಬಿತ್ತು. ಅದರಲ್ಲಿ ಸ್ಥಳೀಯರು ಈಜಾಡುತ್ತಿದ್ದರಲ್ಲದೆ, ಅದೇ ನೀರನ್ನು ಕುಡಿಯಲು ಬಳಸುತ್ತಿದ್ದರು. ಕಟ್ಟಡ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದ ಮೇಲೆ ಎರಡು ಬಾವಿಗಳನ್ನು ನೆಲಸಮಗೊಳಿಸಿ, ಮಣ್ಣು ತುಂಬಿ ಅವುಗಳ ಮೇಲೆಯೇ ಕಟ್ಟಡದ ಪಿಲ್ಲರ್‌ಗಳನ್ನು ನಿರ್ಮಿಸಿದ್ದಾರೆ. ಒಂದು ವೇಳೆ ಕಟ್ಟಡ ಕುಸಿದು ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಾರ್ಕಿಂಗ್ ಜಾಗದಲ್ಲೂ ಕಟ್ಟಡ
ಕಟ್ಟಡದ ಆವರಣದಲ್ಲಿ ವಾಹನಗಳಿಗಾಗಿ ನಿಲುಗಡೆ ವ್ಯವಸ್ಥೆ ಮಾಡದೆ ಪಾರ್ಕಿಂಗ್ ಜಾಗದಲ್ಲಿ ಕಟ್ಟಡ ಕಟ್ಟಿದ್ದಾರೆ. ಪಾಲಾ-ಬಾದಾಮಿ ಮುಖ್ಯ ರಸ್ತೆಯನ್ನೂ ಅತಿಕ್ರಮಣ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಣ್ಣು ಮುಂದೆ ಇಷ್ಟೆಲ್ಲ ನಡೆಯುತ್ತಿದ್ದರೂ ಅಧಿಕಾರಿಗಳು ನೆಪಮಾತ್ರಕ್ಕೆ ನೋಟಿಸ್ ನೀಡಿ ಕೈ ಕಟ್ಟಿ ಕುಳಿತಿರುವುದು ವಿಪರ್ಯಾಸ. ಕಳೆದ ಸೆಪ್ಟಂಬರ್‌ನಲ್ಲಿಯೇ ನೀಡಿರುವ ಅಧಿಕಾರಿಗಳ ನೋಟಿಸ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಾಗಿದೆ. ಮುಂದೊಂದು ದಿನ ಅಮಾಯಕ ಜನರ ಬಲಿ ತೆಗೆದುಕೊಳ್ಳಲು ಅಧಿಕಾರಿಗಳು ರಣ ಹದ್ದಿನಂತೆ ಕಾದು ಕುಳಿತಂತೆ ಕಾಣಿಸುತ್ತಿದೆ.
ಪ್ರಭಾವಿಗಳ ಕೈವಾಡ
ಕಟ್ಟಡ ನಿರ್ಮಾಣ ಮತ್ತು ಅನುಮತಿಯಲ್ಲಿ ಅಧಿಕಾರಿಗಳು, ಕೆಲ ಪ್ರಭಾವಿ ರಾಜಕಾರಣಿಗಳೂ ಮಾಲೀಕರ ಜೊತೆ ಸೇರಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಆರೋಪಗಳಿವೆ.
ದುರಂತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಿ
ಭ್ರಷ್ಟ ಅಧಿಕಾರಗಳಿಂದಾಗಿ ಕಳೆದ ವರ್ಷ ಧಾರವಾಡದಲ್ಲೂ ಇದೇ ರೀತಿ ಅಕ್ರಮವಾಗಿ ಕಟ್ಟಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿಯೊಬ್ಬರಿಗೆ ಸೇರಿದ್ದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು ಬಿದ್ದಿತ್ತು. ಈ ಕಟ್ಟಡ ದುರಂತದಲ್ಲಿ ಸಾಕಷ್ಟು ಸಾವುನೋವು ಸಂಭವಿಸಿದ್ದವು. ಸುಮಾರು 19 ಜನ ಅಮಾಯಕರು ಪ್ರಾಣ ತೆತ್ತಿದ್ದರು. ಅದೆಷ್ಟೋ ಜನರು ಗಂಭೀರ ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ.
ಸಂಬಂಧಿಸಿದ ಮಾಲೀಕರಿಗೆ ಎರಡು ನೋಟಿಸ್ ನೀಡಲಾಗಿದೆ. ಕಟ್ಟಡದ ಕುರಿತು ವ್ಯಾಪಕ ಪ್ರಚಾರವೂ ಆಗಿದ್ದು, ಜನರಲ್ಲೂ ಅಧಿಕಾರಿಗಳು ಏನು ಮಾಡ್ತಾರೆ ಎಂಬ ಕುತೂಹಲವೂ ಹೆಚ್ಚಿದೆ. ಹಾಗಾಗಿ ಹೇಳುವುದಕ್ಕಿಂತ ಕೆಲಸ ಮಾಡಿ ತೋರಿಸುವುದೇ ಲೇಸು. ಖಂಡಿತ ಕ್ರಮ ಕೈಗೊಳ್ಳುತ್ತೇನೆ.