ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಬಸ್ ಬಂದ್ ಮಾಡಿ ಮುಷ್ಕರ ನಡೆಸುತ್ತಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಕಳೆದ ಮೂರು ದಿನಗಳಿಂದ ನಗರದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.
ಮುಷ್ಕರದಿಂದಾಗಿ ಕಾರವಾರ, ಮಂಗಳೂರು, ಮೈಸೂರು ಸೇರಿದಂತೆ ದೂರದೂರಿನ ಡಿಪೋಗಳಿಂದ ನಗರಕ್ಕೆ ಬಂದಿರುವ ಚಾಲಕ, ನಿರ್ವಾಹಕರು ಕೇಂದ್ರ ನಿಲ್ದಾಣದ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿದ್ದು, ನೌಕರರಿಗೆ ಸಮರ್ಪಕವಾಗಿ ಉಪಹಾರ, ಊಟ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಬಸ್ ನಿಲ್ದಾಣದಲ್ಲಿರುವ ಮಳಿಗೆಗಳು ಕಳೆದ ಮೂರು ದಿನಗಳಿಂದ ಬಾಗಿಲು ಮುಚ್ಚಿದ್ದು, ಹೊರ ಜಿಲ್ಲೆಗಳಿಂದ ಒಟ್ಟು 10 ಸಿಬ್ಬಂದಿಗಳು ಮರಳಿ ತಮ್ಮ ಮೂಲ ಸ್ಥಳಗಳಿಗೆ ಹೋಗಲಾಗದೇ ಪರದಾಡುತ್ತಿದ್ದಾರೆ.
ಅಲ್ಲದೇ, ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಸ್ ಮತ್ತು ಪ್ರಯಾಣಿಕರಿಲ್ಲದೇ ಬಣಗುಡುತ್ತಿದೆ. ಮತ್ತೊಂದೆಡೆ ಮೂರು ದಿನಗಳಿಂದ ಸಾರಿಗೆ ಬಸ್ ಸಂಚಾರವಿಲ್ಲದೇ ಪರದಾಡುತ್ತಿರುವ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೊರಟಿದ್ದಾರೆ.
ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಹತ್ತೇ ದಿನಗಳಲ್ಲಿ ಜಿಲ್ಲೆಯಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಬಾಕ್ಸ್ ಮದ್ಯ ಮಾರಾಟವಾಗಿದೆ.
ಗ್ರಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನವೆಂಬರ್ 30 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಡಿಸೆಂಬರ್ 1 ರಿಂದ 10 ರವರೆಗೆ ಸುಮಾರು 33130 ಬಾಕ್ಸ್ ಮದ್ಯ (ಐಎಮ್‌ಎಲ್), 8248 ಬಿಯರ್ ಮಾರಾಟವಾಗಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ತಿಂಗಳಿನಲ್ಲಿ ಹೆಚ್ಚು ಮದ್ಯ ಮಾರಾಟವಾಗಿದೆ.
ಮದ್ಯಪಾನ ಆರೋಗ್ಯಕ್ಕೆ ಹಾನಿಕರ
ಜಿಲ್ಲೆಯ ಗದಗ-10314, ಮುಂಡರಗಿ-4256, ನರಗುಂದ-3753, ರೋಣ-6270 ಮತ್ತು ಶಿರಹಟ್ಟಿ ತಾಲ್ಲೂಕಿನಲ್ಲಿ 8537 ಮದ್ಯದ ಬಾಕ್ಸ್ ಮಾರಾಟವಾಗಿವೆ. ಜಿಲ್ಲೆಯಾದ್ಯಂತ ದಿನವೊಂದಕ್ಕೆ ಅಂದಾಜು 4077 ರಷ್ಟು ಮದ್ಯದ ಬಾಕ್ಸ್, 892 ಬಿಯರ್ ಮಾರಾಟವಾಗುತ್ತಿವೆ.
ಡಿಸೆಂಬರ್ ತಿಂಗಳ ಮೊದಲ ಹತ್ತು ದಿನಗಳಲ್ಲಿ ಗದಗ ತಾಲ್ಲೂಕಿನಲ್ಲಿಯೇ ಅತಿಹೆಚ್ಚು ಮದ್ಯ ಮಾರಾಟವಾಗಿದೆ. ಕಳೆದ ನವೆಂಬರ್‌ನಲ್ಲಿ 23223 ಬಾಕ್ಸ್ ಮದ್ಯ, 8077 ಬಿಯರ್ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 34 ಪ್ರಕರಣಗಳು ದಾಖಲಾಗಿದ್ದು, 23 ಜನರನ್ನು ಬಂಧಿಸಿದ್ದಾರೆ. ಅಕ್ರಮ ಮದ್ಯ ಸಾಗಿಸುತ್ತಿದ್ದ ಆರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 1,86,626 ರೂ. ಮೌಲ್ಯದ 108 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.
ಅದರಂತೆ ಜಿಲ್ಲೆಯ ಬಾಲೆಹೊಸೂರ, ಗುಡ್ಡದಬೈರಾಪೂರ ರಸ್ತೆ, ನಾಗಾವಿ ತಾಂಡಾ ಹಾಗೂ ಗಜೇಂದ್ರಗಡ ಇಳಕಲ್ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹ, ಕಳ್ಳಭಟ್ಟಿ ತಯಾರಿಕೆ ಅಡ್ಡೆಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಮದ್ಯ ಜಪ್ತಿ ಮಾಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪತ್ತೆಗಾಗಿ ಬಲೆ ಬೀಸಿದ್ದಾರೆ.
ಚುನಾವಣೆ ಸಂದರ್ಭಗಳಲ್ಲಿ ಅಕ್ರಮ ಮದ್ಯ ಮಾರಾಟ, ಮದ್ಯ ಹಂಚಿಕೆಯಾಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಎರಡು ಪ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ. ಅಲ್ಲದೇ, ಜಿಲ್ಲೆಯಲ್ಲಿರುವ ಸನ್ನದುದಾರರು ಮತ್ತು ಅಬಕಾರಿ ಅಧಿಕಾರಿಗಳಿಗೆ ಮಾದರಿ ನೀತಿ ಸಂಹಿತೆ ಹಾಗೂ ಇಲಾಖಾ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಡಿಸೆಂಬರ್ 12 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 144412 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 149507 ಮಾದರಿಗಳಲ್ಲಿ 137526 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 1155 ಮಾದರಿಗಳ ವರದಿ ಬರಲು ಬಾಕಿ ಇದೆ.
ಜಿಲ್ಲೆಯಲ್ಲಿ ಇಂದಿನ 06 ಪ್ರಕರಣಗಳು ಸೇರಿದಂತೆ ಒಟ್ಟು 10826 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 10 ಜನ ಸೇರಿದಂತೆ ಒಟ್ಟು 10632 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 53 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿ ಪ್ರತ್ಯೇಕ ಪಂಚಾಯತಿಗಾಗಿ ಆಗ್ರಹಿಸಿ ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಂಚಲಿ ಗ್ರಾ.ಪಂ. ವ್ಯಾಪ್ತಿಗೆ ಬರುವ ನೀಲಗುಂದ ಗ್ರಾಮಸ್ಥರು ಈ ಬಾರಿಯ ಗ್ರಾ.ಪಂ.ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ರು. ಯಾರೊಬ್ಬರೂ ನಾಮಪತ್ರ ಸಲ್ಲಿಸಬಾರದು ಎಂದು ತಾಕೀತು ಮಾಡಿದ್ದರು. ಅಲ್ಲದೇ, ಉಮೇದುವಾರಿಕೆ ಸಲ್ಲಿಸಿದರೆ ಗ್ರಾಮದಿಂದ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಗ್ರಾಮಸ್ಥರ ಲೆಕ್ಕಾಚಾರಗಳೆಲ್ಲವೂ ಇದೀಗ ತಲೆಕೆಳಗಾಗಿವೆ. ಬೇರೊಂದು ಊರಿನ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಿಂದಾಗಿ ನೀಲಗುಂದ ಗ್ರಾಮಸ್ಥರು ದಿಗ್ಬ್ರಾಂತರಾಗಿದ್ದಾರೆ. ಚಿಂಚಲಿ ಗ್ರಾಮದ ಅಭ್ಯರ್ಥಿ ವೀರೇಂದ್ರ ಲಕ್ಷ್ಮೀಗುಡಿ ಎಂಬಾತ ನೀಲಗುಂದದ ಒಂದನೇ ವಾರ್ಡ್‌ನ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾನೆ.
ನಾಮಪತ್ರ ಸಲ್ಲಿಕೆಯ ಬಗ್ಗೆ ವಿಜಯಸಾಕ್ಷಿಗೆ ಪ್ರತಿಕ್ರಿಯಿಸಿರುವ ವೀರೇಂದ್ರ ಲಕ್ಷ್ಮೀಗುಡಿ, ನಾನು ನೀಲಗುಂದ ಗ್ರಾಮಸ್ಥರಿಗೆ ನಾಮಪತ್ರ ಸಲ್ಲಿಸುವ ಕುರಿತು ಮೊದಲೇ ಹೇಳಿದ್ದೆ. ಅದಕ್ಕೆ ಅವರು ಬೇಡ ಎಂದಿದ್ದರು. ನಾನು ಚುನಾವಣೆ ಬಹಿಷ್ಕರಿಸುವುದು ಸರಿಯಲ್ಲ ಎಂದು ನಾಮಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿ ಅಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನನಗೆ ಯಾರ ಬೆಂಬಲವೂ ಇಲ್ಲ. ಅಭಿವೃದ್ಧಿ ಕೆಲಸವೇ ನನ್ನ ಗುರಿ. ನೀಲಗುಂದ ಗ್ರಾಮಸ್ಥರು ಅವಕಾಶ ಮಾಡಿಕೊಟ್ಟರೆ ಗ್ರಾಮದಲ್ಲಿ ಆಗದಿರುವ ಅಭಿವೃದ್ಧಿ ಕೆಲಸಗಳನ್ನು ನಾನು ಗ್ರಾಮ ಪಂಚಾಯತಿ ಸದಸ್ಯನಾಗುವ ಮೂಲಕ ಮಾಡಿ ತೋರಿಸುತ್ತೇನೆ ಎಂದರು.
ನೀಲಗುಂದ ಗ್ರಾಮದಲ್ಲಿ ಕೋಟಿಗಟ್ಟಲೇ ಅಭಿವೃದ್ಧಿ ಕೆಲಸಗಳಾಗಿವೆ. ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಟ್ಟಿದೆ. ಎಚ್.ಕೆ.ಪಾಟೀಲರು ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ನೀಲಗುಂದ ಗ್ರಾಮದಲ್ಲಿ ನಾಮಪತ್ರ ಸಲ್ಲಿಸೋಕೆ ಮೂವತ್ತು ಜನ ಸಿದ್ದರಾಗಿದ್ದರು. ಯಾರನ್ನ ಆಯ್ಕೆ ಮಾಡಬೇಕು ಎಂಬ ಗೊಂದಲದಿಂದಾಗಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಇದರಲ್ಲಿ ಅಭಿವೃದ್ಧಿಯ ಕಾರಣವಿಲ್ಲ ಎಂದು ವೀರೇಂದ್ರ ಲಕ್ಷ್ಮೀಗುಡಿ ವಿಜಯಸಾಕ್ಷಿಗೆ ಸ್ಪಷ್ಟಪಡಿಸಿದರು.
ಇದರಿಂದ ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಶುಕ್ರವಾರ ಚಿಂಚಲಿ ಗ್ರಾ.ಪಂ.ನ 22 ಸ್ಥಾನಗಳಿಗೆ ಒಟ್ಟು 48 ನಾಮಪತ್ರಗಳು ಸಲ್ಲಿಕೆಯಾಗಿವೆ. ಅದರಲ್ಲಿ ಚಿಂಚಲಿ- 37, ಕಲ್ಲೂರ – 10 ಹಾಗೂ ನೀಲಗುಂದದಲ್ಲಿ ಒಬ್ಬರು ನಾಮಪತ್ರ ಸಲ್ಲಿಸಿದಂತಾಗಿದೆ.
ನೀಲಗುಂದ ಮತ್ತು ಕಲ್ಲೂರ ಗ್ರಾಮಸ್ಥರು ಗ್ರಾ.ಪಂ.ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದರು. ಇದಕ್ಕಾಗಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನವೂ ನಡೆದಿತ್ತು. ಕಡೆಗೆ ಕಲ್ಲೂರ ಗ್ರಾಮದವರು ಒಪ್ಪಿಗೆ ನೀಡಿ ನಾಮಪತ್ರ ಸಲ್ಲಿಸಿದ್ದಾರೆ. ಅದರಂತೆ ನೀಲಗುಂದ ಗ್ರಾಮದಲ್ಲೂ ಯಾರೋ ಒಬ್ಬರು ನಾಮಪತ್ರ ಸಲ್ಲಿಸಿರುವ ಬಗ್ಗೆ ಮಾಹಿತಿ ಇದೆ. ಆದರೆ, ಯಾರೆಂಬುದು ನನಗೆ ಗೊತ್ತಿಲ್ಲ.
-ಹನಮಂತಪ್ಪ ಪೂಜಾರ, ಜಿ.ಪಂ.ಸದಸ್ಯ
ನಮ್ಮೂರಾಗ ಗೆಲ್ಲಾಕ ಆಗಂಗಿಲ್ರಿ. ಇಲ್ಲಿ ಎಲ್ಲಾರೂ ದೊಡ್ಡಾವ್ರು, ದುಡ್ಡಿದ್ದಾವ್ರ ಅದಾರ್ರೀ. ನಾವು ಬಡವರು. ಇಲ್ಲೇ ಎಲೆಕ್ಷನ್‌ಗೆ ನಿಂತ್ರ ದುಡ್ಡಿಲ್ದ ಗೆಲ್ಲಬೋದು. ಅಭಿವೃದ್ಧಿ ಕೆಲಸ ಮಾಡಬೋದು ಅಂತಾ ನಾಮಪತ್ರ ಸಲ್ಲಿಸಿನ್ರಿ… ನನಗೆ ನಾಮಪತ್ರ ಹಿಂಪಡೆಯುವಂತೆ ಬೆದರಿಕೆ ಕರೆಗಳು ಬರುತ್ತಿವೆ. ಎಷ್ಟೇ ಒತ್ತಡ ತಂದರೂ ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ.
ಇಲ್ಲೊಬ್ಬ ಹಸೆಮಣೆ ಏರುವ ದಿನವೇ ಹಣೆಗೆ ಬಾಸಿಂಗ ಕಟ್ಟಿಕೊಂಡು ಬಂದು ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಗದಗ ತಾಲ್ಲೂಕಿನ ಸೊರಟೂರು ಗ್ರಾ.ಪಂ.ಗ ಅದೇ ಗ್ರಾಮದ ೩ನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಮದುಮಗ ಪರಶುರಾಮ ಮಲ್ಲಾರಿ ಉಮೇದುವಾರಿಕೆ ಸಲ್ಲಿಸಿದ್ದಾನೆ.
ಮದುವೆ ದಿನವೇ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಪರಶುರಾಮ ಹಣೆಗೆ ಬಾಸಿಂಗ ಕಟ್ಟಿಕೊಂಡು, ಮದುವೆ ದಿರಿಸಿನಲ್ಲೇ ಗ್ರಾಮಸ್ಥರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದಾನೆ. ನಾಮಪತ್ರ ಸಲ್ಲಿಸಿದ ನಂತರ ಮದುವೆ ಮಂಟಪಕ್ಕೆ ತೆರಳಿ ವಧುವಿಗೆ ಮಾಂಗಲ್ಯಧಾರಣೆ ಮಾಡಿದ್ದಾನೆ. ವೈವಾಹಿಕ ಜೀವನಕ್ಕೆ ಕಾಲಿಡುವುದರೊಂದಿಗೆ ರಾಜಕೀಯ ಭವಿಷ್ಯಕ್ಕೂ ಮುನ್ನುಡಿ ಬರೆದಿದ್ದಾರೆ.
ಅವು ದೈತ್ಯಾಕಾರದ ಗಾಡಿಗಳು, ರಸ್ತೆಯಲ್ಲಿ ಬಂದರೆ ಯಮ ಸ್ವರೂಪಿಯಂತೆ ಭಾಸವಾಗುತ್ತವೆ. ಮಗ್ಗಲಲ್ಲಿ ಹಿಂದೆ ಮುಂದೆ ಯಾರಿದ್ದರೇನೂ ಯಾವ ಗಾಡಿಗಳಿದ್ದರೇನು ನುಗ್ಗುವುದೊಂದೆ ಅದರ ಕೆಲಸ. ಇದರ ಭಾರಕ್ಕೆ ರಸ್ತೆ ಕಿತ್ತುಕೊಂಡು ಬಂದರೆ, ಹೋಗುವ ರಭಸಕ್ಕೆ ಮಗ್ಗುಲಲ್ಲಿ ಹೋಗುವವರ ಎದೆ ಒಂದು ಕ್ಷಣ ಝಲ್ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇತ್ತೀಚಿಗೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚುತ್ತಿದೆ. ಟಿಪ್ಪರ್‌ಗಳಲ್ಲಿ ಮಿತಿಮಿರಿ ಸಾಮಾಗ್ರಿಗಳನ್ನು ತುಂಬುತ್ತಿರುವುದರಿಂದ ರಸ್ತೆಯ ಇಕ್ಕಲಗಳೆಲ್ಲಾ ಗುಂಡಿಗಳಿಂದ ಆವೃತವಾಗಿವೆ. ಇದರಿಂದ ದಿನಕ್ಕೊಬ್ಬರಾದ್ರೂ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯವೋ ಟಿಪ್ಪರ್ ಚಾಲಕರ ಬೇಜವಾಬ್ದಾರಿತನವೋ ಗೊತ್ತಿಲ್ಲ.
ಅತಿಯಾದ ಹೊರೆಹೊತ್ತು ನಗರದೊಳಗೆ ರಾಜಾರೋಷವಾಗಿ ನುಗ್ಗುವ ಟಿಪ್ಪರ್‌ಗಳ ಬಗ್ಗೆ ಪೊಲೀಸರಿಗೆ ಚೆನ್ನಾಗಿಯೇ ಗೊತ್ತಿದೆ. ಆದರೂ, ಟಿಪ್ಪರ್‌ಗಳಿಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಇದಕ್ಕೆ ಕಾರಣ ಬೇರೆಯದ್ದೇ ಇದೆ ಎಂದು ಜನ ಅಂದುಕೊಳ್ಳುತ್ತಿದ್ದಾರೆ. ಟಿಪ್ಪರ್‌ಗಳ ಹಾವಳಿಯಿಂದಾಗಿ ದಾರಿ ಹೋಕರು ಮತ್ತು ಸಣ್ಣಪುಟ್ಟ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ವಾತಾವರಣ ಸೃಷ್ಠಿಯಾಗಿದೆ.
ಇಂತಹದ್ದೇ ಒಂದು ದುರ್ಘಟನೆ ಹುಬ್ಬಳ್ಳಿಯಲ್ಲಿ ಶನಿವಾರ ನಡೆದಿದೆ. ಇಲ್ಲಿನ ಗೋಕುಲ್ ರಸ್ತೆಯ ಬಸವೇಶ್ವರ ನಗರದ ನಿವಾಸಿ ರಾಕೇಶ್ ಕುಲಕರ್ಣಿ ಎಂಬ ಯುವಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಸಿವಿಲ್ ಇಂಜನಿಯರಿಂಗ್ ವಿದ್ಯಾರ್ಥಿಯಾಗಿರುವ ರಾಕೇಶ್ ಅವರ ಸ್ಕೂಟರ್ ಹಾಗೂ ನರೇಶ ನಾಯಕ್ ಮಾಲಿಕತ್ವದ ಟಿಪ್ಪರ್ ಮಧ್ಯೆ ಶನಿವಾರ ಮುಂಜಾನೆ ಅಪಘಾತ ಸಂಭವಿಸಿದೆ. ರಾಕೇಶ್ ಸಾವಿನ ದವಡೆಯಿಂದ ಪಾರಾಗಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.
ಅಪಘಾತಗೊಂಡಿರುವ ಲಾರಿ ಕಲಘಟಗಿ ತಾಲ್ಲೂಕಿನ ಎಮ್ಮೆಟ್ಟಿ ಕಲ್ಲಿನ ಗಣಿಯಿಂದ ಜಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಬೈಪಾಸ್‌ನಿಂದ ಗೋಕುಲ ರಸ್ತೆಯ ಮಾರ್ಗವಾಗಿ ಮಾರಡಗಿ ಗ್ರಾಮಕ್ಕೆ ಹೋಗುತ್ತಿತ್ತು. ಟಿಪ್ಪರ್ ಚಾಲಕ ತಿರುವಿನಲ್ಲಿ ಹಠಾತ್ತಾಗಿ ತಿರುವಿದ್ದರಿಂದ ಲಾರಿಯ ಹಿಂಬದಿ ಟೈಯರ್‌ಗೆ ಸಿಲುಕಿಕೊಂಡ ರಾಕೇಶ್ ಕಿರುಚಾಡಿದ್ದರಿಂದಾಗಿ ಚಾಲಕ ಲಾರಿ ನಿಲ್ಲಿಸಿದ್ದಾನೆ. ಇದರಿಂದ ರಾಕೇಶ್ ಜೀವ ಉಳಿಯಿತು.
ಮಿತಿಮೀರಿ ಜಲ್ಲಿ ತುಂಬಿದ ಭಾರೀ ಗಾತ್ರದ ಟಿಪ್ಪರ್‌ಗಳು ನಗರದೊಳಗೆ ಸಂಚರಿಸುತ್ತಿರುವುದರಿಂದ ಜನರ ಜೀವಕ್ಕೆ ಕಂಟಕವಾಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಟಿಪ್ಪರ್ ಹಾವಳಿಗೆ ಕಟಿವಾಣ ಹಾಕಿ ಜನರ ಜೀವ ರಕ್ಷಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯಿಸಿದ್ದಾರೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಸದ್ಯದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಯುವಕರು ಹೆಚ್ಚು ಸ್ಪರ್ದೆ ಮಾಡುವ ಅಗತ್ಯವಿದೆ ಎಂದು ಯುವ ಮುಖಂಡ ಮುತ್ತು ರಾಯರೆಡ್ಡಿ ಆಶಯ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿಯ 3ನೇ ವಾರ್ಡ್‌ಗೆ ಸ್ಪರ್ದಿಸಿರುವ ಮುತ್ತು ರಾಯರೆಡ್ಡಿ, ಗ್ರಾಮಗಳ ಶಕ್ತಿ ಕೇಂದ್ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈ ಬಾರಿ ಯುವಕರು ಹೆಚ್ಚಿನ ಸಂಖೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಯುವಕರಿಂದಲೇ ಗ್ರಾಮ. ಪಟ್ಟಣ. ತಾಲ್ಲೂಕು ಜಿಲ್ಲೆ ಸೇರಿದಂತೆ ರಾಜ್ಯ, ರಾಷ್ಟ್ರಗಳ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಪ್ರಸಕ್ತ ಗ್ರಾಮ ಪಂಚಾಯಿತಿ ಚುಣಾವಣೆಯಲ್ಲಿ ಸ್ಪರ್ಧೆಗಿಳಿಯುತ್ತಿರುವ ಯುವ ಪಡೆಯನ್ನು ಬೆಂಬಲಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಗ್ರಾಮದ ಅಭಿವೃದ್ಧಿಯಾಗದ ಹೊರತು ರಾಷ್ರದ ಅಭಿವೃದ್ಧಿ ಸಾಧ್ಯವಿಲ್ಲ. ಹಳ್ಳಿಗಳಿಗೆ ನೈರ್ಮಲ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಯುವಕರು ನಿಸ್ವಾರ್ಥ ಸೇವೆ ಮಾಡಲಿದ್ದಾರೆ ಎಂದ ಮುತ್ತು, ತಾತ ಮುತ್ತಾತರ ಕಾಲದಿಂದಲೂ ರಾಜಕೀಯ ಮಾಡುತ್ತಿರುವ ಹಳೆ ಮುಖಗಳ ಬದಲಿಗೆ ಅಭಿವೃದ್ಧಿಗಾಗಿ ನಾನಾ ಕನಸುಗಳನ್ನು ಹೊತ್ತು ಹಳ್ಳಿ ಅಖಾಡಕ್ಕೆ ಧುಮುಕುತ್ತಿರುವ ಯುವಕರ ದಂಡು ಈ ಬಾರಿಯ ಗ್ರಾಮ ಪಂಚಾಯತಿಯ ಚುನಾವಣೆಗಳಲ್ಲಿ ಗೆಲುವಿನ ನಗೆ ಬೀರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರಗಳ ಸ್ವೀಕರಿಸುವ ಅವಧಿ ಶುಕ್ರವಾರದಂದು(ಡಿ.11) ಮುಕ್ತಾಯವಾಗಿದೆ. ಮೊದಲ ಹಂತದ ಗ್ರಾಮ ಪಂಚಾಯತಿಗಳ ಒಟ್ಟು 801 ಸ್ಥಾನಗಳಿಗೆ 1212 ಮಹಿಳೆಯರು ಸೇರಿದಂತೆ ಒಟ್ಟು 2802 ನಾಮಪತ್ರಗಳ ಸಲ್ಲಿಕೆಯಾಗಿವೆ.
ಮೊದಲ ಹಂತದಲ್ಲಿ ಗದಗ ತಾಲೂಕಿನ 26 ಗ್ರಾಮ ಪಂಚಾಯತಿಗಳ 438 ಸ್ಥಾನಗಳಿಗೆ ಅನುಸೂಚಿತ ಜಾತಿ 251, ಅನುಸೂಚಿತ ಪಂಗಡದ 85, ಹಿಂದುಳಿದ ‘ಅ ವರ್ಗ 263, ಹಿಂದುಳಿದ ‘ಬ ವರ್ಗ 52, ಸಾಮಾನ್ಯ 789 ಸೇರಿ ಒಟ್ಟು 1440 ನಾಮಪತ್ರಗಳು ಸಲ್ಲಿಕೆಯಾಗಿವೆ.
ಲಕ್ಷ್ಮೇಶ್ವರ ತಾಲೂಕಿನ 13 ಗ್ರಾಮ ಪಂಚಾಯತಿಗಳ 174 ಸ್ಥಾನಗಳಿಗೆ ಅನುಸೂಚಿತ ಜಾತಿಯ 184, ಅನುಸೂಚಿತ ಪಂಗಡದ 55, ಹಿಂದುಳಿದ ‘ಅ ವರ್ಗ 67, ಹಿಂದುಳಿದ ‘ಬ ವರ್ಗ 12, ಸಾಮಾನ್ಯ 337 ಸೇರಿ ಒಟ್ಟು 655 ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ.
ಶಿರಹಟ್ಟಿ ತಾಲೂಕಿನ 14 ಗ್ರಾಮ ಪಂಚಾಯತಿಗಳ 189 ಸ್ಥಾನಗಳಿಗೆ ಅನುಸೂಚಿತ ಜಾತಿಯ 157, ಅನುಸೂಚಿತ ಪಂಗಡದ 66, ಹಿಂದುಳಿದ ‘ಅ ವರ್ಗ 97, ಹಿಂದುಳಿದ ‘ಬ ವರ್ಗ 24, ಸಾಮಾನ್ಯ 367 ಸೇರಿ ಒಟ್ಟು 707 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ತಿಳಿಸಿದೆ.