ಕೊರೊನಾದಿಂದಾಗಿ ಸದ್ಯ ರಾಜ್ಯದಲ್ಲಿ ರೈತರ ಬದುಕು ಬೀದಿಗೆ. ಇದರ ಮಧ್ಯೆ ಸದ್ಯ ಮಳೆ ಕೂಡ ರೈತರನ್ನು ಬೀದಿಗೆ ತಂದು ನಿಲ್ಲಿಸಿದೆ. ಜಿಲ್ಲೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಮೆಣಸಿನಕಾಯಿ ಬೆಳೆದ ರೈತರನ್ನು ಚಿಂತೆಗೆ ದೂಡಿದೆ. ಈ ಮಳೆಯಿಂದಾಗಿ ಜಿಲ್ಲೆಯ ಹಾನಗಲ್ ತಾಲೂಕಿನ ಹೆರೂರು ಗ್ರಾಮದ ರೈತನ ಸ್ಥಿತಿ ಬೀದಿಗೆ ಬಂದಿದೆ.
ಹೆರೂರು ಗ್ರಾಮದ ರೈತ ಮಲ್ಲಪ್ಪ ಬಡಿಗೇರ ಎಂಬುವವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ನಿನ್ನೆ ಸುರಿದ ಮಳೆಯಿಂದಾಗಿ ಜಮೀನು ಅಕ್ಷರಶಃ ಕೆರೆಯಂತೆ ಆಗಿದೆ. ಜಮೀನಿನ ತುಂಬ ನೀರು ತುಂಬಿಕೊಂಡಿದೆ. ಈ ಭೂಮಿಯಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ನೀರಿನಲ್ಲಿ ಮುಳುಗಿ ಹೋಗಿದೆ. ಒಂದೂವರೆ ಎಕರೆಯಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಇದಕ್ಕಾಗಿ ಸುಮಾರು ರೂ. 60 ಸಾವಿರ ಖರ್ಚು ಮಾಡಿದ್ದರು.
ಈ ಬೆಳೆಯನ್ನು ರೈತ ಜೋಪಾನವಾಗಿ ನೋಡಿಕೊಂಡಿದ್ದರು. ಸಮಯಕ್ಕೆ ಸರಿಯಾಗಿ ಕ್ರಿಮಿನಾಶಕ ಹಾಗೂ ಗೊಬ್ಬರ ಹಾಕಿ ಬೆಳೆಸಿದ್ದರು. ಸದ್ಯ ಮೆಣಸಿನಕಾಯಿ ಬೆಳೆದು ನಿಂತಿತ್ತು. ಈಗಾಗಲೇ ಮೆಣಸಿನಕಾಯಿ ಕಟಾವು ಮಾಡಬೇಕಿತ್ತು. ಆದರೆ, ಲಾಕ್ ಡೌನಿಂದಾಗಿ ಖರೀದಿದಾರರು ಇಲ್ಲದ್ದಕ್ಕೆ ಕಟಾವು ಮಾಡುವುದು ತಡವಾಗಿತ್ತು. ಆದರೆ, ಕೈಗೆ ಬಂದಷ್ಟು ಬರಲಿ ಎಂದು ರೈತರ ಕಟಾವು ಮಾಡಲು ನಿರ್ಧರಿಸಿದ್ದರು. ಅಷ್ಟರೊಳಗೆ ಮಳೆ ಎಲ್ಲವನ್ನೂ ಆಹುತಿ ಮಾಡಿಕೊಂಡಿದೆ.
ಜಮೀನಿನಲ್ಲಿ ನಿಂತಿರುವ ನೀರು ಕಡಿಮೆಯಾಗಲು ಕನಿಷ್ಟ ನಾಲ್ಕೈದು ದಿನಗಳಾದರೂ ಬೇಕು. ಅಷ್ಟರಲ್ಲಿ ಬೆಳೆ ಸಂಪೂರ್ಣವಾಗಿ ಕೊಳೆತು ಹೋಗುತ್ತದೆ. ಅವರಿವರ ಬಳಿ ಸಾಲ ಮಾಡಿಕೊಂಡು ಮೆಣಸಿನಕಾಯಿ ಬೆಳೆ ಬೆಳೆದಿದ್ದ ರೈತ, ಚಿಂತೆಯಲ್ಲಿ ಮುಳುಗಿದ್ದಾನೆ.
ಒಂದೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದೆ. ಒಮ್ಮೆಯೂ ಕಟಾವು ಮಾಡಿರಲಿಲ್ಲ. ಮಾರುಕಟ್ಟೆಯಲ್ಲಿ ಈಗಿರುವ ದರ ನೋಡಿದರೆ ಆಳಿನ ಖರ್ಚು ಆಗುವುದಿಲ್ಲ. ಹೀಗಾಗಿ ಬೆಲೆ ಸಿಕ್ಕ ಮೇಲೆ ಮೆಣಸಿನಕಾಯಿ ಕಟಾವು ಮಾಡಿದರಾಯಿತು ಎಂದು ಬಿಟ್ಟಿದ್ದೆ. ಆದರೆ, ಮಳೆ ಬಂದು ಬೆಳೆಯೊಂದಿಗೆ ಬದುಕನ್ನೂ ಕಿತ್ತುಕೊಂಡಿದೆ ಎಂದು ರೈತ ಕಂಗಾಲಾಗಿದ್ದಾನೆ.
ಮದುವೆಗೆ ಸಿದ್ಧತೆ ನಡೆಸಿದ್ದ ಯುವಕನನ್ನು ಮಹಾಮಾರಿ ಬಲಿ ಪಡೆದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಈ ಘಟನೆ ಹುಲಸೂರು ಪಟ್ಟಣದಲ್ಲಿ ನಡೆದಿದೆ. ರಾಘವೇಂದ್ರ ವೈಜನಾಥ ಕಮಠಾಣೆ (27) ಸೋಂಕಿಗೆ ಬಲಿಯಾದ ದುರ್ದೈವಿ. ಮೃತ ಯುವಕನ ಮದುವೆ ಇದೇ ಮೇ. 31ರಂದು ನಿಶ್ಚಯವಾಗಿತ್ತು. ಹೀಗಾಗಿ ಮದುವೆ ಆಮಂತ್ರಣ ಪತ್ರಿಕೆಗಳು ಸಿದ್ಧಗೊಂಡಿದ್ದವು. ಹೀಗೆ ದಾಂಪತ್ಯ ಜೀವನದ ಕನಸು ಕಂಡು, ಸಿದ್ಧತೆಯಲ್ಲಿದ್ದ ಯುವಕನಿಗೆ ಕೊರೊನಾ ತಗುಲಿತ್ತು.
ಕೆಲವು ದಿನಗಳ ನಂತರ ಯುವಕನ ಆರೋಗ್ಯದಲ್ಲಿ ಹದಗೆಟ್ಟಿತ್ತು. ಪಕ್ಕದ ಮಹಾರಾಷ್ಟ್ರದ ಲಾತೂರ್ ನ ಖಾಸಗಿ ಆಸ್ಪತ್ರೆಯಲ್ಲಿ ಯುವಕನನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮೃತ ಯುವಕನ ತಂದೆ ನಿವೃತ್ತ ಶಿಕ್ಷಕರಾಗಿದ್ದರು. ಅವರು ತಮಗೆ ಇದ್ದ ಏಕೈಕ ಪುತ್ರನ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಕನಸು ಕಂಡಿದ್ದರು. ಆದರೆ, ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ನಿಗದಿ ಪಡಿಸಿದ್ದ ಸಮಯದಲ್ಲಿಯೇ ಸರಳವಾಗಿ ಆಚರಿಸಲು ನಿರ್ಧರಿಸಿದ್ದರು. ಆದರೆ, ಮಹಾಮಾರಿ ಸಂಭ್ರಮದ ಮನೆಯಲ್ಲಿ ಸೂತಕ ವಾತಾವರಣ ನಿರ್ಮಿಸಿದೆ. ಸದ್ಯ ಏಕೈಕ ಪುತ್ರನ ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಅಪಘಾತವಾಗಿ ಸಾವು, ನೋವಿನಲ್ಲಿ ಕೊರೊನಾ ವಾರಿಯರ್ಸ್ ಸಹಾಯಕ್ಕೆ ಅಂಗಲಾಚುತ್ತಿದ್ದರೂ ಶಾಸಕರು ಅಮಾನವೀಯತೆ ತೋರಿಸಿರುವ ಘಟನೆ ನಡೆದಿದೆ. ಕೊರೊನಾ ಕಾರ್ಯ ಮುಗಿಸಿ ಮರಳಿ ಮನೆಗೆ ಹೊರಟಿದ್ದ ಲಕ್ಕವಳ್ಳಿ ಹಿರಿಯ ಆರೋಗ್ಯಾಧಿಕಾರಿ ರಮೇಶ್ ಕುಮಾರ್ ಅವರ ಕಾರು ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತವಾಗಿತ್ತು.
ಅವರು ಸಾವು – ನೋವಿನಲ್ಲಿ ಓದಾಡುತ್ತಿದ್ದರು. ಆದರೆ, ಇದನ್ನು ಕಂಡ ತರೀಕೆರಿ ಶಾಸಕರು ಮಾತ್ರ ತಮ್ಮ ಕಾರು ಬಿಟ್ಟು ಕೆಳಗೆ ಇಲಿಯಲಿಲ್ಲ. ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಆ ರಸ್ತೆಯಲ್ಲಿ ಬೇರೆ ಇನ್ನಾವುದೇ ವಾಹನಗಳು ಸಂಚರಿಸಲಿಲ್ಲ. ಹೀಗಾಗಿ ಕಾರಿನಲ್ಲಿಯೇ ಒದ್ದಾಡಿದ ವೈದ್ಯ ರಮೇಶ್ ಕುಮಾರ್ ಸಾವನ್ನಪ್ಪಿದ್ದಾರೆ. ಶಾಸಕ ಸುರೇಶ್ ಅವರ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಲಕ್ಕವಳ್ಳಿ ಕ್ರಾಸ್ ನಲ್ಲಿ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಕೂಡಲೇ ವೈದ್ಯರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಅವರು ಸಾವನ್ನಪ್ಪಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿ ಕೇಳಿ ಬರುತ್ತಿದೆ. ಬಿಜೆಪಿಯ ಕೆಲ ನಾಯಕರು ಸಿಎಂ ಬದಲಾವಣೆಗೆ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೇ, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮಣಿಸುತ್ತಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ವಿರೋಧಿ ಬಣದ ನಾಯಕರಿಗೆ ಒಂದೇ ಮಾತಿನಲ್ಲಿ ಬಿಸಿ ಮುಟ್ಟಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಸಭೆ ವಿಚಾರದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ನನ್ನ ಮುಂದೆ ಇರುವುದು ಕೋವಿಡ್ ನಿಯಂತ್ರಣ ಮಾತ್ರ. ಜನರ ಹಿತ ಕಾಯುವುದು ನನ್ನ ಮೊದಲ ಆದ್ಯತೆ. ಯಾರು ದೆಹಲಿಗೆ ಹೋಗಿ ಬಂದಿದ್ದಾರೋ ಅವರಿಗೆ ಅಲ್ಲಿಯೇ ಉತ್ತರ ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳುವ ಮೂಲಕ ವಿರೋಧಿ ಬಣಗಳಿಗೆ ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಕ್ಕೆ ಜನರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಸಾಕಷ್ಟು ಸಾವುನೋವುಗಳು ಸಂಭವಿಸುತ್ತಿರುವ ಈ ಹೊತ್ತಲ್ಲಿ ನಾವು ಅವರ ಪರವಾಗಿ ಕೆಲಸ ಮಾಡಬೇಕು. ಇಂತಹ ಸಂದರ್ಭದಲ್ಲಿ ಸಚಿವರು, ಶಾಸಕರು ಎಲ್ಲರೂ ಒಗ್ಗಟ್ಟಾಗಿ ಜನರ ಸಂಕಷ್ಟ ನಿವಾರಿಸುವತ್ತ ಗಮನಕೊಡಬೇಕೇ ಹೊರತು ಬೇರೆ ವಿಚಾರಗಳ ಬಗ್ಗೆ ಅಲ್ಲ ಎಂದು ಸಿಎಂ ಬದಲಾವಣೆಯ ಕಸರತ್ತು ನಡೆಸುತ್ತಿರುವ ವಿರೋಧಿ ಬಣಕ್ಕೆ ಬಿಎಸ್ ವೈ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಮಹಾಮಾರಿಯ ಬಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾದರೂ ಸಾವಿನ ಸಂಖ್ಯೆ ಮಾತ್ರ ಇಳಿಯುತ್ತಿಲ್ಲ. ಹೀಗಾಗಿ ಲಾಕ್ ಡೌನ್ ಜೂ. 7ರ ನಂತರವೂ ಮುಂದುವರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸದ್ಯದ ಸ್ಥಿತಿ ಕಂಡರೆ ಜೂ. 7ಕ್ಕೆ ಲಾಕ್ ಡೌನ್ ತೆರೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಈ ಹಿಂದೆ ಮೊದಲ ಅಲೆಯಲ್ಲಿ ಇಡೀ ಭಾರತ ಬರೋಬ್ಬರಿ 75 ದಿನಗಲ ಕಾಲ ಲಾಕ್ ಆಗಿತ್ತು. ಆದರೆ, ಸದ್ಯ ಒಂದು ವರ್ಷದ ಕೇಸ್ ಗಳು ಕೇವಲ 2 ತಿಂಗಳಲ್ಲಿಯೇ ಕಾಡಲು ಶುರು ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ ಇಷ್ಟು ದಿನಗಳಲ್ಲಿಯೇ ಲಾಕ್ ಮಾಡಲು ಆಗುವುದಿಲ್ಲ. ಒಂದು ವೇಳೆ ರಾಜ್ಯವನ್ನು ಅನ್ ಲಾಕ್ ಮಾಡಿದರೆ, ಮತ್ತಷ್ಟು ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ಇನ್ನೊಂದೆಡೆ ಸರ್ಕಾರದ ಮುಂದೆಯೂ ಜೂ. 7ರ ನಂತರ ಲಾಕ್ ಡೌನ್ ಮುಂದುವರೆಸುವ ಚಿಂತನೆ ಇದೆ ಎನ್ನಲಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಕ್ಷೀಣವಾಗುತ್ತಿದ್ದರೂ ಸಾವಿನ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳ ಕಂಡು ಬರುತ್ತಿದೆ.
ಬೆಂಗಳೂರು ಒಂದರಲ್ಲಿಯೇ ಆಸ್ಪತ್ರೆಗೆ ದಾಖಲಾಗಿರುವ ಶೇ. 70ರಷ್ಟು ಜನ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖರಾಗುವ ಪರಿಸ್ಥಿತಿ ತುಂಬಾ ಕಡಿಮೆ ಇದೆ. ಇದನ್ನೆಲ್ಲ ಗಮನಿಸಿಯೇ ತಜ್ಞರು ಲಾಕ್ ಡೌನ್ ಯಾವಾಗ ತೆರುವುಗೊಳಿಸಬೇಕು ಎಂಬುವುದರ ಕುರಿತು ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ.
ಸೋಂಕಿನ ಪ್ರಮಾಣ ಶೇ. 5ಕ್ಕೆ ಇಳಿಯದ ಹೊರತು ಲಾಕ್ ಡೌನ್ ತೆರೆಯಬಾರದು ಎಂದು ಐಸಿಎಂಆರ್ ಹೇಳಿದೆ. ಸೋಂಕಿನ ಪ್ರಮಾಣ ಶೇ. 10ರಷ್ಟಿದ್ದರೆ ಸರ್ಕಾರ, ಲಾಕ್ ಡೌನ್ ಮುಂದುವರೆಸಬಹುದು. ಸೋಂಕಿನ ಪ್ರಮಾಣ ಶೇ. 8ಕ್ಕೆ ಇಳಿದರೆ ಲಾಕ್ ಡೌನ್ ನಿಂದ ಸ್ವಲ್ಪ ಸಡಿಲಿಕೆ ಸಾಧ್ಯವಾಗುತ್ತದೆ. ಸದ್ಯ ಹಳ್ಳಿ – ಹಳ್ಳಿಗಳಲ್ಲಿಯೂ ಸೋಂಕು ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಜ್ಞರ ಸಲಹೆಯಂತೆ ಸಚಿವರು ಕೂಡ ಲಾಕ್ ಡೌನ್ ತೆರೆಯದಂತೆ ಸಲಹೆ ನೀಡುತ್ತಿದ್ದಾರೆ.
ಒಂದು ವೇಳೆ ಸರ್ಕಾರ ಆರ್ಥಿಕ ಸ್ಥಿತಿಯಿಂದ ಚೇತರಿಸಿಕೊಳ್ಳಲು ಲಾಕ್ ಡೌನ್ ತೆರೆಯಲು ಮುಂದಾದರೆ, ಒಮ್ಮೆಲೆ ತೆರೆಯದಂತೆ ತಜ್ಞರು ಮನವಿ ಮಾಡಿದ್ದಾರೆ. ಜೂ. 7ರ ನಂತರ 14 ದಿನ ಅರ್ಧ ದಿನ ಲಾಕ್ ಡೌನ್ ಜಾರಿಗೆ ತನ್ನಿ. ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನದವರೆಗೆ ವಿನಾಯ್ತಿ ಕೊಡಿ. ನೈಟ್ ಕರ್ಫ್ಯೂ ಜಾರಿ ತನ್ನಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಹೀಗಾಗಿಯೇ ಸದ್ಯ ಸರ್ಕಾರ ಲಾಕ್ ಡೌನ್ ಮುಂದುವರೆಸಬೇಕೆ? ಅಥವಾ ಹಂತ ಹಂತವಾಗಿ ತೆರವುಗೊಳಿಸಬೇಕೆ? ಎಂಬ ಚರ್ಚೆಯಲ್ಲಿದೆ. ಆದರೆ, ಸದ್ಯದ ಪರಿಸ್ಥಿತಿ ಕಂಡರೆ ಜೂನ್ ಅಂತ್ಯದವರೆಗೂ ರಾಜ್ಯ ಲಾಕ್ ಆಗಬಹುದು ಎನ್ನಲಾಗುತ್ತಿದೆ.
ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ…….
ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ…
ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ. ಆದರೆ ಬುದ್ದನನ್ನು ಹುಡುಕುವುದೆಲ್ಲಿ, ಒಳಗೋ ಹೊರಗೋ…….
ಕ್ರಿಸ್ತ ಪೂರ್ವದ ಬುದ್ಧನೆಲ್ಲಿ, 2021 ರ ಬುದ್ದು ( ದಡ್ಡ )ವೆಲ್ಲಿ,
ಸ್ವಂತ ಮನೆಯಲ್ಲಿ ಕುಳಿತು ಆಹಾರ ಸೇವಿಸುತ್ತಾ ಟಿವಿ ನೋಡುತ್ತಾ ಬುದ್ದನನ್ನು ಹುಡುಕಿದನೊಬ್ಬ….
ಲೈಬ್ರರಿಯಲ್ಲಿ ಕುಳಿತು ಪುಸ್ತಕ ಓದುತ್ತಾ, ಬರೆಯುತ್ತಾ ಹುಡುಕಿದ ಬುದ್ದನನ್ನು ಇನ್ನೊಬ್ಬ…..
ಅಧ್ಯಯನ ಮಾಡುತ್ತಾ, ಚಿಂತಿಸುತ್ತಾ ಉಪನ್ಯಾಸ ನೀಡುತ್ತಾ ಬುದ್ದನನ್ನು ಹುಡುಕಿದ ಮಗದೊಬ್ಬ….
ಪ್ರಶಸ್ತಿಗಾಗಿ, ಪ್ರಚಾರಕ್ಕಾಗಿ, ಪ್ರಖ್ಯಾತಿಗಾಗಿ, ಬುದ್ದಿಯ ಪ್ರದರ್ಶನಕ್ಕಾಗಿ ಹುಡುಕುತ್ತಲೇ ಇದ್ದಾರೆ ಅನೇಕ ಸಿದ್ದಾರ್ಥರು ಬುದ್ದನನ್ನು…….
ಸಿಕ್ಕಾನೆಯೇ ಬುದ್ದ……
ಕಾಡು ಮೇಡುಗಳಲ್ಲಿ ಅಲೆದು, ದೇಹ ಮನಸ್ಸುಗಳನ್ನು ದಂಡಿಸಿ, ಚರ್ಚೆ ಸಂವಾದ ಮಂಥನಗಳನ್ನು ಮಾಡಿ, ಧ್ಯಾನದ ಉತ್ತುಂಗ ತಲುಪಿ ಬುದ್ದನಾದವನನ್ನು ಹುಡುಕುವುದು ಸುಲಭವೇ……
ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಉಪಹಾರ, ರಾತ್ರಿಯ ಭೋಜನ ಮಾಡಿ, ಬೆಚ್ಚಗಿನ ಮನೆಯಲ್ಲಿ, ಕುಟುಂಬದೊಂದಿಗೆ, ನಾಳಿನ ಯೋಚನೆಗಳೊಂದಿಗೆ, ಸ್ನಾನ ಶೌಚಗಳ ಅನುಕೂಲದೊಂದಿಗೆ, ಮೈಥುನದ ಸುಖದೊಳಗೆ, ಮೊಬೈಲ್ ಮಾಯೆಯೊಳಗೆ ಸಿಕ್ಕಾನೆಯೇ ಬುದ್ದ…..
ದೇಹದಲ್ಲಿ ಅಡಗಿದ್ದಾನೆಯೇ ಬುದ್ದ, ಮನಸ್ಸಿನಲ್ಲಿ ಅಡಗಿದ್ದಾನೆಯೇ ಬುದ್ದ, ಹೃದಯದಲ್ಲಿ ಅಡಗಿದ್ದಾನೆಯೇ ಬುದ್ದ,…
ಅದಕ್ಕೆ ಕಾರಣಗಳೇನು, ಪರಿಹಾರಗಳೇನು ಎಂದು ಮನಸ್ಸು ನಿನ್ನನ್ನು ಗಲಿಬಿಲಿಗೊಳಿಸಿತಂತೆ,
ಆಗ ಒಂದು ದಿನ ಇದ್ದಕ್ಕಿದ್ದಂತೆ ರಾಜ್ಯ, ಸಂಸಾರ, ಸುಖ ಭೋಗ ಎಲ್ಲಾ ತೊರೆದು ರಾತ್ರೋರಾತ್ರಿ ಹೊರಟೆಯಂತೆ,
ಬೀದಿಬೀದಿಗಳನ್ನ, ರಾಜ್ಯ ಪ್ರದೇಶಗಳನ್ನ, ಅಲೆಮಾರಿಯಂತೆ ಸುತ್ತಾಡಿದೆಯಂತೆ,
ಮಹಾನ್ ಪಂಡಿತ, ಪಾಮರ, ಜ್ಞಾನಿಗಳನ್ನು ಭೇಟಿ ಮಾಡಿ ಚರ್ಚಿಸಿದೆಯಂತೆ,
ಭಿಕ್ಷುಕನಂತೆ ಭಿಕ್ಷೆ ಬೇಡಿ ತಿಂದು ಬದುಕಿದೆಯಂತೆ,
ಉಪವಾಸವಿದ್ದು ತಿಂಗಳುಗಟ್ಟಲೆ ದೇಹ ದಂಡಿಸಿದೆಯಂತೆ,
ವರ್ಷಾನುಗಟ್ಟಲೆ ಕಾಡು ಮೇಡುಗಳಲ್ಲಿ ಅಲೆದು ಧ್ಯಾನ, ತಪಸ್ಸು ಮಾಡಿದೆಯಂತೆ,
ಒಂದು ದಿನ ನಿನಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾಯಿತಂತೆ…….
ಅಬ್ಬಾ,….
ಅದೇನು ಜ್ಞಾನೋದಯವಾಯಿತೋ ಅಥವಾ ನೀನೇ ಜ್ಞಾನವಾದೆಯೋ, ಅಲ್ಲಿಂದ ಆದೆ ನೋಡು ನೀನು ಗೌತಮ ಬುದ್ದ,
ಯಪ್ಪಾ, ಅದೇನು ಚಿಂತನೆ, ಅದೇನು ಜ್ಞಾನ, ಅದೇನು ಅರಿವು,
ಯಾವ ಡಾಕ್ಟರುಗಳು, ಯಾವ ಮನಶಾಸ್ತ್ರಜ್ಞರು, ಯಾವ ಜೀವ ವಿಜ್ಞಾನಿಗಳಿಗೂ, ಸಾಧ್ಯವಾಗದ ಮನುಷ್ಯನ ಆತ್ಮ, ಮೆದುಳು, ಮನಸ್ಸು, ಭಾವನೆ, ಜೀವನಕ್ರಮವನ್ನು ಅರೆದು ಕುಡಿದು ಅದರ ಎಲ್ಲವನ್ನೂ ತೆರೆದಿಟ್ಟ ಮಹಾನ್ ವ್ಯಕ್ತಿಯಾದೆ,
ಜನರ ಬದುಕು ಇಷ್ಟೊಂದು ಸಂಕೀರ್ಣವಾಗಿರದ, ನಾಗರಿಕತೆಯ ಮೊದಲ ಮೆಟ್ಟಿಲು ಏರುತ್ತಿದ್ದ, ಆ ದಿನಗಳಲ್ಲೇ ಮನುಷ್ಯ ಜನಾಂಗದ ಇಡೀ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ವ್ಯಕ್ತಿಯಾದೆ,
ನಿನ್ನ ಒಂದೊಂದು ಮಾತುಗಳು ಅರಗಿಸಿಕೊಳ್ಳುವುದೇ ಕಷ್ಟ,
ಕಲ್ಲಿನ ಕೆತ್ತನೆಯಿಂದ ಹಿಡಿದು ಫೇಸ್ ಬುಕ್ – ವಾಟ್ಸ್ ಆ್ಯಪ್ – ಟ್ವಿಟರುಗಳ ತನಕ ಎಲ್ಲಾ ಸ್ಥಳಗಳಲ್ಲಿ ನಿನ್ನ ಮಾತುಗಳಿಗೇ ಪ್ರಥಮ ಸ್ಥಾನ.
ಅಷ್ಟೇ ಏಕೆ, ಪಾಶ್ಚಾತ್ಯ, ಪೌರಾತ್ಯ ಸಂಸ್ಕೃತಿಗಳನ್ನ, ವಿಶ್ವದ ಬಹುತೇಕ ಧರ್ಮಗಳನ್ನ, ಅಸಾಮಾನ್ಯ ಗ್ರಂಥಗಳನ್ನ, ಅನೇಕ ದೇಶಗಳ ಸಂವಿಧಾನಗಳನ್ನ, ಓದಿ ಅರ್ಥ್ಯೆಸಿಕೊಂಡಿದ್ದ ಅಂಬೇಡ್ಕರ್ ಅವರೇ ನಿನಗೆ ಶರಣಾದರೆಂದರೆ ನೀನೇನು ಮನುಷ್ಯನೇ,
ಪ್ರಕೃತಿಯ ಅದ್ಭುತ, ಆಶ್ಚರ್ಯಕರ, ಸೃಷ್ಟಿಯಾದ ಗೌತಮ ಬುದ್ದನೇ, ನಿನ್ನನ್ನು ಒಂದೇ ಒಂದು ಬಾರಿ ನೋಡಬೇಕೆನಿಸಿದೆ, ಮಾತನಾಡಬೇಕಿನಿಸಿದೆ,
ಈ ಹುಚ್ಚರ ಸಂತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆ,
ಮನುಷ್ಯರೆಂದರೆ ಏನೆಂದು ಈ ಅನಾಗರಿಕರಿಗೆ,
ಬಾರೋ ಗೌತಮ ಬುದ್ದನಾದ ಸಿದ್ಧಾರ್ಥನೇ, ಮತ್ತೊಮ್ಮೆ ಹುಟ್ಟಿ ಬಾ,
ನನಗೆ ಯೋಗ್ಯತೆ ಇಲ್ಲದಿದ್ದರೂ ಹೇಳುತ್ತಿದ್ದೇನೆ, ಎಲ್ಲರಿಗೂ ಬುದ್ದ ಪೂರ್ಣಿಮೆಯ ನೆನಪಲ್ಲಿ,
ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ, ಪೊಲೀಸ್ ಇಲಾಖೆಯ ಬೆನ್ನೆಲುಬಾಗಿ ಹಗಲಿರುಳು ಶ್ರಮಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗಳ ಕರ್ತವ್ಯ ನಿಷ್ಠೆ ಶ್ಲಾಘನೀಯ ಎಂದು ಗವಿಮಠದ ಡಾ, ಹಿರಿ ಶಾಂತವೀರ ಮಹಾಸ್ವಾಮಿಗಳು ಹೇಳಿದರು.
ಅವರು, ಸಮಾಜ ಸೇವಕ ಮಹಾಬಲೇಶ್ ಅವರು ಹಮ್ಮಿಕೊಂಡಿದ್ದ ಗೃಹರಕ್ಷಕದಳದ ಸಿಬ್ಬಂದಿಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೊರೊನಾ ನಿಯಂತ್ರಿಸಲು ಗೃಹರಕ್ಷಕ ದಳದ ಸಿಬ್ಬಂದಿಗಳು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಪ್ರಾಮಾಣಿಕ ಕರ್ತವ್ಯ ಮಾಡುತ್ತಿದ್ದು, ಅತ್ಯಂತ ಕಡಿಮೆ ವೇತನ ಪಡೆದರೂ ಕೂಡ ಪ್ರಾಮಾಣಿಕ ಸೇವೆ ಮಾಡಿ ಜನರ ರಕ್ಷಣೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ನಂತರ ಮಾತನಾಡಿದ ಸಮಾಜ ಸೇವಕ ಮಹಾಬಲೇಶ್, ಕೊರೊನಾ ಮಹಾಮಾರಿಗೆ ಇಡೀ ದೇಶವೇ ತತ್ತರಿಸಿ ಹೋಗಿದ್ದು, ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಈ ನಿಟ್ಟಿನಲ್ಲಿ ಜನರ ರಕ್ಷಣೆಗಾಗಿ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಮೂಲಕ ಕೊರೊನಾ ನಿಯಂತ್ರಿಸಿ, ಸೋಂಕು ಮುಕ್ತ ದೇಶ ಮಾಡಲು ಪ್ರತಿಯೊಬ್ಬರೂ ಹೋರಾಟ ಮಾಡಬೇಕೆಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಜೆ. ಶಿವರಾಜ್, ಪತ್ರಕರ್ತರಾದ ಬಸವರಾಜ್ ಸುಲ್ಪಲ್ ಮಠ್, ಸೇರಿದಂತೆ ಇತರರು ಪಾಲ್ಗೊಂಡಿದ್ದರು. 50ಕ್ಕೂ ಹೆಚ್ಚು ಗೃಹರಕ್ಷಕದಳದ ಸಿಬ್ಬಂದಿಗಳಿಗೆ ಆಹಾರದ ಕಿಟ್ ವಿತರಿಸಲಾಯಿತು.
ರಾಜ್ಯದಲ್ಲಿ ಇಂದು ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡರೂ ಸಾವಿನ ಸಂಖ್ಯೆ ಮಾತ್ರ ಆತಂಕ ಮೂಡಿಸುತ್ತಿದೆ. ಇಂದು ರಾಜ್ಯದಲ್ಲಿ 26,811 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 503 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಇಂದು 40,741 ಜನ ಗುಣಮುಖರಾಗಿ ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಲ್ಲಿಯವರೆಗೆ ರಾಜ್ಯದಲ್ಲಿ 24,99,784 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಒಟ್ಟು 20,62,910 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೇ, ಸಕ್ರಿಯ ಪ್ರಕರಣಗಳ ಸಂಖ್ಯೆ 4,09,924ಕ್ಕೆ ತಲುಪಿದೆ. ಇಂದು 503 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 26,929 ಜನ ಸಾವನ್ನಪ್ಪಿದಂತಾಗಿದೆ.
ಇಂದು ಬೆಂಗಳೂರಿನಲ್ಲಿ 6,433 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 285 ಜನ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಮೈಸೂರು ಜಿಲ್ಲೆಯಲ್ಲಿ 2,792, ಹಾಸನ 1,471, ತುಮಕೂರು 1,399, ದಾವಣಗೆರೆ 1,309, ಬೆಳಗಾವಿ 1,205 ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಗದಗ ಜಿಲ್ಲೆಯಲ್ಲಿ ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿತ್ತು. ಆದರೆ ಇವತ್ತು ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ತುಸು ಆತಂಕಕ್ಕೆ ಕಾರಣವಾಗಿದೆ. ಸೋಂಕಿತರಕ್ಕಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು ಕೇವಲ 11 ಜನ ಮಾತ್ರ ಹೆಚ್ಚು.
ಇಂದಿನ 393 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 22058 ಕ್ಕೆ ಏರಿಕೆ ಕಂಡಿದೆ.
ಗದಗ ನಗರ ಹಾಗೂ ತಾಲೂಕಿನಲ್ಲಿ -177, ಮುಂಡರಗಿ-41, ನರಗುಂದ-25, ರೋಣ-73, ಶಿರಹಟ್ಟಿ-73, ಹೊರಜಿಲ್ಲೆಯ-04 ಸೇರಿದಂತೆ 393 ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 226 ಕ್ಕೇರಿದೆ.
ಮುಂಡರಗಿ ತಾಲೂಕಿನ ಹೈತಾಪೂರ ನಿವಾಸಿ 60 ವರ್ಷದ ಮಹಿಳೆ ಮೇ-22 ರಂದು ಮುಂಡರಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 2,4 ರಂದು ಮೃತಪಟ್ಟಿದ್ದಾರೆ.
ಗದಗ ಶಹರ ನಿವಾಸಿ 68 ವರ್ಷದ ವ್ಯಕ್ತಿ ಮೇ -18 ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 25 ರಂದು ಮೃತಪಟ್ಟಿದ್ದಾರೆ.
ಗದಗ ತಾಲೂಕಿನ ಬೆಟಗೇರಿ ನಿವಾಸಿ 56 ವರ್ಷದ ಮಹಿಳೆ ಮೇ 21 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 26 ರಂದು ಮೃತಪಟ್ಟಿದ್ದಾರೆ.
ಗದಗ ತಾಲೂಕಿನ ಕುರ್ತಕೋಟಿ ನಿವಾಸಿ 80 ವರ್ಷದ ಮಹಿಳೆ ಮೇ 22 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ 26 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು 404 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 18792 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.
ಇಂದು ಜಿಲ್ಲೆಯಲ್ಲಿ 3040 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 193 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕೋವಿಡ್ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಲಾಕ್ ಡೌನ್ ಜಾರಿ ಮಾಡಿದ್ದು, ಅಗತ್ಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಆದರೆ ಸರಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದ ಮಹಾಲಕ್ಷ್ಮಿ ಟ್ರೇಡರ್ಸ್ ಮಾಲೀಕ ಶಂಕರ್ ಭೀಮರಾವ್ ಚೌಧರಿ ಎಂಬುವವರು ಮೇಲೆ ಪೊಲೀಸರು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.