ವಿಶಾಖಪಟ್ಟಣ: ವಿನೂ ಮಂಕಡ್ ಟ್ರೋಫಿ ಅಂಡರ್-19 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡದ ನಾಯಕ ಅನ್ವಯ್ ದ್ರಾವಿಡ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲಿ ಅಜೇಯ 85 ರನ್ ಸಿಡಿಸಿದ ಅನ್ವಯ್, ಕರ್ನಾಟಕ ತಂಡದ 198 ರನ್ಗಳ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಹಾಗೂ ದೆಹಲಿ ತಂಡಗಳು ಮುಖಾಮುಖಿಯಾಗಿದ್ದವು. ವಿಶೇಷವೆಂದರೆ, ಕರ್ನಾಟಕ ತಂಡವನ್ನು ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಮುನ್ನಡೆಸಿದರೆ, ದೆಹಲಿ ತಂಡಕ್ಕೆ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ನಾಯಕತ್ವ ವಹಿಸಿದ್ದರು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ ಬ್ಯಾಟರ್ಗಳಾದ ರೋಹಿತ್ ರೆಡ್ಡಿ 70 ರನ್ ಹಾಗೂ ನಿತೀಶ್ ಆರ್ಯ 111 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಬಳಿಕ ಕ್ರೀಸ್ಗೆ ಬಂದ ಧ್ರುವ್ ಕಿಶನ್ 103 ರನ್ಗಳ ಶತಕ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ನಾಯಕ ಅನ್ವಯ್ ದ್ರಾವಿಡ್ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಕೇವಲ 41 ಎಸೆತಗಳನ್ನು ಎದುರಿಸಿದ ಅವರು 5 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಅಜೇಯ 85 ರನ್ ಗಳಿಸಿದರು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ನಿಗದಿತ 49 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 418 ರನ್ಗಳ ಬೃಹತ್ ಮೊತ್ತ ದಾಖಲಿಸಿತು.
419 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ದೆಹಲಿ ತಂಡ ಕರ್ನಾಟಕದ ಬೌಲರ್ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು. ದೆಹಲಿ ನಾಯಕ ಆರ್ಯವೀರ್ ಸೆಹ್ವಾಗ್ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದ ಬ್ಯಾಟರ್ಗಳಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಪರಿಣಾಮ ದೆಹಲಿ ತಂಡ 41.1 ಓವರ್ಗಳಲ್ಲಿ 220 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ 198 ರನ್ಗಳ ಅಂತರದಿಂದ ಗೆಲುವು ಸಾಧಿಸಿತು.
ಇತ್ತೀಚೆಗೆ ಭಾರತದ ಅಂಡರ್-19 ತಂಡಕ್ಕೆ ಪದಾರ್ಪಣೆ ಮಾಡಿರುವ ಅನ್ವಯ್ ದ್ರಾವಿಡ್ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ಇದಕ್ಕೂ ಮೊದಲು ಚಂಡೀಗಢ ವಿರುದ್ಧ ಕೇವಲ 62 ಎಸೆತಗಳಲ್ಲಿ 104 ರನ್ಗಳ ಶತಕ ಬಾರಿಸಿ ಗಮನ ಸೆಳೆದಿದ್ದರು.
ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅನ್ವಯ್ ದ್ರಾವಿಡ್ ಹಾಗೂ ಆರ್ಯವೀರ್ ಸೆಹ್ವಾಗ್ ಮುಂಬರುವ ಅಂಡರ್-19 ಏಷ್ಯಾ ಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

