Home Blog Page 3

ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್: ವಾರ ಕಳೆದರೂ ಸಿಗದ ಸುಳಿವು!

ಚಿಕ್ಕಮಗಳೂರು:- ನಿಗೂಢವಾಗಿ ಫಾರೆಸ್ಟ್ ಗಾರ್ಡ್ ಓರ್ವರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್​ನಲ್ಲಿ ಜರುಗಿದೆ. ಶರತ್ ನಾಪತ್ತೆಯಾಗಿರುವ ಫಾರೆಸ್ಟ್ ಗಾರ್ಡ್.

ಕಳೆದ 6 ದಿನಗಳಿಂದ ನೂರಾರು ಅರಣ್ಯ ಸಿಬ್ಬಂದಿ ಸೇರಿ ಪೊಲೀಸರು, ನೀಲಗಿರಿ ಪ್ಲಾಂಟೇಶನ್ ಮತ್ತು ಅರಣ್ಯದಲ್ಲಿ ಹುಡುಕಾಟ ನಡೆಸಿದರೂ ಗಾರ್ಡ್ ಸುಳಿವು ಮಾತ್ರ ಸಿಗುತ್ತಿಲ್ಲ. ಜಿಲ್ಲೆಯ ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆಯ ಕಾಲೂರು ಗ್ರಾಮದ ‌33 ವರ್ಷದ ಫಾರೆಸ್ಟ್ ಗಾರ್ಡ್ ಶರತ್​​, ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಅರಣ್ಯ ವಿಭಾಗಕ್ಕೆ ಮಂಗಳೂರಿನ ಸುಳ್ಯದಿಂದ ಕಳೆದ‌ 6 ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದರು.

ಜೂನ್ 24ರಂದು ಸಖರಾಯಪಟ್ಟಣ ಅರಣ್ಯದ ನೀಲಗಿರಿ ಪ್ಲಾಂಟೇಶನ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ನಾಪತ್ತೆ ಆಗಿದ್ದರು. ನೀಲಗಿರಿ ಪ್ಲಾಂಟೇಶನ್ ಸಮೀಪದ ಅರಣ್ಯದಲ್ಲಿ ಶರತ್ ಬೈಕ್ ಪತ್ತೆಯಾಗಿದ್ದರೆ, ಬೈಕ್ ಸಿಕ್ಕ ಸ್ಥಳದಿಂದ ಎರಡು ಕಿಮೀ ದೂರದಲ್ಲಿ ಬಟ್ಟೆ ಸಿಕ್ಕಿದ್ದು, ನಾಪತ್ತೆ ಬಗ್ಗೆ ನೂರಾರು ಅನುಮಾನಗಳು ಮೂಡಿವೆ. ಶರತ್ ನಾಪತ್ತೆ ಸಂಬಂಧ ಪೋಷಕರು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಿ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಯಾವುದೇ ಸಮಾಜದವರಿರಲಿ, ಎಲ್ಲರೂ ಮೊದಲು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ವಂಚಿತರಾದ ಭೋವಿ ಮತ್ತಿತರ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಬೇಕೆಂದು ರೋಣ ಶಾಸಕ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಭೋವಿ ಕಾಲೋನಿಯಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರ 131ನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗದಲ್ಲಿ ಜನಿಸಿ, ಸಾಧನೆಗೈದ ಡಾ. ಬಾಬಾಸಾಹೇಬ ಅಂಬೇಡ್ಕರರನ್ನು ನೋಡಿಯೇ ನೀವು ಕಲಿಯಬೇಕು. ಓದಿನಿಂದಲೇ ಮುಂದೆ ಬಂದ ಅವರು ಈ ದೇಶಕ್ಕೆ ಒಪ್ಪುವ ಸಂವಿಧಾನವನ್ನು ನೀಡಿದ ಮಹನೀಯರು. ಕೇಂದ್ರದ ಕಾನೂನು ಸಚಿವರಾಗಿಯೂ ಅವರು ಮಾಡಿದ ಕಾರ್ಯ ಸಣ್ಣದೇನಲ್ಲ. ಅಂದರೆ ವಿದ್ಯೆ ಯಾವ ವ್ಯಕ್ತಿಯನ್ನು ಬೇಕಾದರೂ ಅತ್ಯಂತ ಎತ್ತರದ ಮಟ್ಟಕ್ಕೆ ಒಯ್ಯಬಲ್ಲುದು ಎಂಬುದನ್ನು ಇದರಿಂದ ತಿಳಿಯಬೇಕು. ಇಂತಹ ಮಹನೀಯರ ಕಥೆಗಳನ್ನು ನಿಮ್ಮ ಮಕ್ಕಳಿಗೆ ಹೇಳಿ ಅವರಲ್ಲಿ ವಿದ್ಯಾಭ್ಯಾಸದ ಕಿಚ್ಚನ್ನು ಹಚ್ಚಲು ಪಾಲಕರು ಮುಂದಾಗಬೇಕೆAದು ಹೇಳಿದರು.

ಸಮಾರಂಭದಲ್ಲಿ ಶಾಸಕರು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಶಾಸಕ ಜಿ.ಎಸ್. ಪಾಟೀಲ ಪಟ್ಟಣದ ಈಶ್ವರ ನಗರದಲ್ಲಿನ ಸಾಯಿಬಾಬಾ ದೇವಸ್ಥಾನದ ಸಮೀಪದ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಯುವ ಧುರೀಣ ಮಿಥುನ ಪಾಟೀಲ, ಸ್ಥಾಯಿ ಸಮಿತಿ ಚೇರಮನ್ ಮುತ್ತಪ್ಪ ನೂಲ್ಕಿ, ವಾರ್ಡ್ ಸದಸ್ಯರಾದ ದಾವುದ್ ಅಲಿ ಕುದರಿ, ಮೈಲಾರಪ್ಪ ಚಳ್ಳಮರದ, ಸಂತೋಷ ಮಣ್ಣೊಡ್ಡರ, ಅಕ್ಕಮ್ಮ ಮಣ್ಣೊಡ್ಡರ ಇತರರಿದ್ದರು.

ಪಾರದರ್ಶಕ ಚುನಾವಣೆಗೆ ಎಸ್‌ಡಿಪಿಐ ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಗೆ ನಡೆಯಬೇಕಿರುವ ಚುನಾವಣೆ ಪ್ರಕ್ರಿಯೆಯನ್ನು ಅನಗತ್ಯವಾಗಿ ವಿಳಂಬಗೊಳಿಸಲಾಗುತ್ತಿದೆ. ಶಿಕ್ಷಣ ಮತ್ತು ಸಮುದಾಯ ಸೇವೆಯಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಇಂತಹ ಮಹತ್ವದ ಸಂಸ್ಥೆಯ ಆಡಳಿತಾತ್ಮಕ ಶಿಷ್ಟಾಚಾರಗಳ ಹಾಗೂ ಬದ್ಧತೆಯ ದಿಕ್ಕು ತಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದನ್ನು ಎಸ್‌ಡಿಪಿಐ ಗದಗ ಜಿಲ್ಲಾಧ್ಯಕ್ಷ ಬಿಲಾಲ ಗೋಕಾವಿ ಖಂಡಿಸಿದ್ದಾರೆ.

ಯಾವುದೇ ಸ್ಥಳೀಯ ರಾಜಕೀಯ ವ್ಯಕ್ತಿಗಳ ಅಥವಾ ರಾಜಕಾರಣಿಗಳ ಬಾಹ್ಯ ಒತ್ತಡಗಳ ಅಡಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳದೆ, ಸಂಪೂರ್ಣವಾಗಿ ನ್ಯಾಯಸಮ್ಮತ, ಪಾರದರ್ಶಕ ಮತ್ತು ಸಮಯಬದ್ಧವಾಗಿ ಚುನಾವಣೆ ಪ್ರಕ್ರಿಯೆಯನ್ನು ನಡೆಸಬೇಕು.

ಸ್ಥಳೀಯ ಸಮುದಾಯದ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕಾದದ್ದು ಸಂಬಂಧಿತ ಆಡಳಿತ ಮತ್ತು ಚುನಾವಣೆ ಅಧಿಕಾರಿಗಳ ನೈತಿಕ ಜವಾಬ್ದಾರಿಯಾಗಿದೆ. ಶೀಘ್ರದಲ್ಲಿ ಚುನಾವಣೆ ಘೋಷಣೆ ಮಾಡದಿದ್ದಲ್ಲಿ ಮುಂದೆ ಗದಗ ನಗರದ ಜಾಗೃತ ಯುವ ಸಮೂಹ ಹಾಗೂ ಸಮಾಜದ ಮುಖಂಡರು ಸೇರಿ ವಕ್ಫ್ ಇಲಾಖೆ ಅಧಿಕಾರಿಗಳ ವಿರುದ್ಧ ಗದಗ ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

5 ಹುಲಿಗಳ ಸರಣಿ ಸಾವು ಬೆನ್ನಲ್ಲೇ 20ಕ್ಕೂ ಹೆಚ್ಚು ಕೋತಿಗಳ ಶವ ಪತ್ತೆ: ಚಾಮರಾಜನಗರದಲ್ಲಿ ಆಘಾತಕಾರಿ ಘಟನೆ!

ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಕೋತಿಗಳ ಶವ ಪತ್ತೆಯಾಗಿದೆ. ಕೋತಿಗಳನ್ನು ವಿಷವಿಕ್ಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೋತಿಗಳನ್ನು ವಿಷವಿಕ್ಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೋತಿಗಳಿಗೆ ಬೇರೆಡೆ ವಿಷ ಹಾಕಿ ಕೊಂದು ನಂತರ ಇಲ್ಲಿ ತಂದು ಹಾಕಿರುವ ಅನುಮಾನವೂ ವ್ಯಕ್ತವಾಗಿದೆ. ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಕೋತಿಗಳ ಶವ ಪತ್ತೆಯಾಗಿರೋದು ಆತಂಕ ಮೂಡಿಸಿದೆ.

ಕಾರಿಗೆ ಡಿಕ್ಕಿ ಹೊಡೆದ ಲಾರಿ: ಓರ್ವ ಸಾವು.. ಮತ್ತೋರ್ವ ಗಂಭೀರ!

ಶಿವಮೊಗ್ಗ:- ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೂದೂರು ಸಮೀಪದ ಬೇಗುವಳ್ಳಿಯಲ್ಲಿ ಜರುಗಿದೆ.

ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಸಾಗುತ್ತಿದ್ದ ಲಾರಿ ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಈ ಪೈಕಿ ಓರ್ವ ಸಾವನ್ನಪ್ಪಿದ್ದು, ಮಕ್ಕಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮಾಳೂರು ಠಾಣೆ ಪೊಲೀಸರು ಆಗಮಿಸಿದ್ದು, ಪರಿಶೀಲಿಸಿದರು.

ಮಾರಕಾಸ್ತ್ರ ಹಿಡಿದು ಮುಸುಕುಧಾರಿಗಳಿಂದ ಸರಣಿಗಳ್ಳತನ: ಸಾರ್ವಜನಿಕರಲ್ಲಿ ಆತಂಕ!

ಗದಗ:- ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮುಸುಕುಧಾರಿಗಳಿಂದ ಸರಣಿಗಳ್ಳತನ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಛಬ್ಬಿ, ಬೆಳ್ಳಟ್ಟಿ, ಬನ್ನಿಕೊಪ್ಪ, ಗ್ರಾಮಗಳಲ್ಲಿ ಜರುಗಿದೆ.

ಛಬ್ಬಿ ಗ್ರಾಮದಲ್ಲಿ ಕಳ್ಳರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕೃಷ್ಣ ಲಮಾಣಿ ಎಂಬುವವರ ಮನೆ ಬೀಗ ಮುರಿದು ಒಳ ಹೊಕ್ಕು ಅಲ್ಮೇರಾದಲ್ಲಿದ್ದ 6000 ನಗದು ಕಳ್ಳತನ ಮಾಡಿದ್ದು, 50 ಗ್ರಾಂ ಬಂಗಾರದ ಆಭರಣಗಳನ್ನು ದೋಚಿ ಪರಾರಿ ಆಗಿದ್ದಾರೆ.

ಕೆಲವು ಮನೆಯಲ್ಲಿ ಕಳ್ಳತನ ಮುಂದಾಗಿದ್ದಾಗ ಸಿಸಿ ಟಿವಿ ನೋಡಿ ಕಳ್ಳರು ಓಡಿ ಹೋಗಿದ್ದಾರೆ. ಇವೆಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿವೆ.

ಕಳ್ಳರ ಹಾವಳಿಗೆ ಸುತ್ತಮುತ್ತಲಿನ ಪ್ರದೇಶದ ಜನರು ಬೆಚ್ಚಿ ಬಿದ್ದಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಶಿರಹಟ್ಟಿ ಪಿಎಸ್ ಐ ಚನ್ನಯ್ಯ ದೇವೂರು ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದರು, ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಕ್ಸಲರನ್ನ ನೆನೆದ ಬುಡಕಟ್ಟು ಜನಾಂಗ: ಮೂಲಭೂತ ಸೌಲಭ್ಯಗಳಿಗೆ ಅಂಗಲಾಚಿದ ಗ್ರಾಮಸ್ಥರು!!

ಚಿಕ್ಕಮಗಳೂರು:- ನಕ್ಸಲ್ ಮುಕ್ತ ಕರ್ನಾಟಕದ ಘೋಷಣೆಯ ಭಾಗವಾಗಿ ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ, ಶರಣಾಗತರಾಗಿದ್ದರು. ಈ ವೇಳೆ ನಕ್ಸಲರಿಗೆ ಮೂಲಭೂತ ಸೌಕರ್ಯ ಒದಗಿಸುವುದಾಗಿ ಹಾಗೂ ಅವರ ಹಲವು ಬೇಡಿಕೆ ಈಡೇರಿಕೆಗೆ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದರು. ಆ ಬೆನ್ನಲ್ಲೇ ನಕ್ಸಲರು ಸಿಎಂ ಸಮ್ಮುಖದಲ್ಲಿ ಶರಣಾದರು.

ಇದೀಗ ಕಳಸ ತಾಲೂಕಿನ ಹಾದಿಓಣಿ ಗ್ರಾಮದ ಬುಡಕಟ್ಟು ಜನಾಂಗದವರು ಮೂಲಭೂತ ಸೌಲಭ್ಯಗಳಿಗಾಗಿ ನಕ್ಸಲರನ್ನ ನೆನೆದಿದ್ದಾರೆ. ನಾವು ನಕ್ಸಲ್ ಆಗಬೇಕಿತ್ತು, ಆಗ ಸೌಲಭ್ಯ ಸಿಗ್ತಿಕ್ತು. ಅಂತಹ ಸಂಘಟನೆಯಲ್ಲಿ ನಾವು ಇರಬೇಕಿತ್ತು, ಈಗ ಅವ್ರು ಶರಣಾಗಿದ್ದಾರೆ. ನಾವು ಅವರ ಜೊತೆ ಅದೇ ದಾರಿ ತುಳಿದಿದ್ರೆ ನಮಗೆ ಹೊಳೆ ದಾಟಿ ಬದ್ಕೋ ಸ್ಥಿತಿ ಬರ್ತಿರ್ಲಿಲ್ಲ ಎಂದು ರಸ್ತೆ ಸೇರಿ ಮೂಲಭೂತ ಸೌಲಭ್ಯಕ್ಕಾಗಿ ಹೆಂಗಸರು-ಗಂಡಸರು ಕಣ್ಣೀರು ಹಾಕಿದ್ದಾರೆ.

ಈ ಬುಡಕಟ್ಟು ಜನಾಂಗ ಸುಮಾರು 40 ವರ್ಷಗಳಿಂದ ತೆಪ್ಪದಲ್ಲಿ ಭದ್ರಾ ನದಿ ದಾಟಿ ಬದುಕ್ತಿದ್ದು, ತೆಪ್ಪ ಇಲ್ಲದಿದ್ದರೆ ಇವರಿಗೆ ಬದುಕೇ ಇಲ್ಲ, ಒಂದು ತುತ್ತು ಅನ್ನ ತಿನ್ನೋದಕ್ಕೂ ತೆಪ್ಪ ಬೇಕು. ಗ್ರಾಮದಲ್ಲಿ ಯಾರಾದ್ರು ಸತ್ರು ಹೆಣವನ್ನೂ ತೆಪ್ಪದಲ್ಲೇ ಸಾಗಿಸ್ಬೇಕು. ಹೀಗಾಗಿ ರಸ್ತೆ ಮಾಡಿ ಕೊಡಿ, ಇಲ್ಲ ತೂಗುಸೇತುವೆ ಮಾಡಿ, ಇಲ್ಲ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಬುಡಕಟ್ಟು ಜನಾಂಗ ಕಣ್ಣೀರು ಹಾಕಿ ಮೂಲಸೌಕರ್ಯಕ್ಕೆ ಅಂಗಲಾಚಿದ್ದಾರೆ.

ನೂತನ ಶಾಲಾ ಕೊಠಡಿ ಉದ್ಘಾಟನೆ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ರಣತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಗ್ರಾಮೀಣ ಪ್ರದೇಶಗಳ ಸರಕಾರಿ ಶಾಲೆಗಳಿಗೆ ಅವಶ್ಯಕವಿರುವ ಮೂಲಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಚವ್ಹಾಣ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ದಾನಮ್ಮನವರ, ಸಂತೋಷ ಓಬಾಜಿ, ಬಿಇಓ ಎಚ್.ಎನ್. ನಾಯ್ಕ, ಬಿ.ಡಿ. ಪಲ್ಲೇದ, ಜಾನು ಲಮಾಣಿ, ಶಂಕರ ಮರಾಠೆ, ಅಶೋಕ ಬಳ್ಳಾರಿ, ಸುರೇಶ ಸಣ್ಣತಂಗಿ, ವಿಠೋಬ ಬಡಕಂಡಪ್ಪನವರ, ಫಕ್ಕೀರೇಶ ವಾರದ, ಧರ್ಮಣ್ಣ ಚವ್ಹಾಣ, ಬಸಪ್ಪ ಪ್ಯಾಟಿ, ಮಲ್ಲನಗೌಡ ಪಾಟೀಲ, ಗಂಗಾಧರ ಬಳಿಗಾರ, ಶಿವಯೋಗಪ್ಪ ನಿರ್ವಾಣಶೆಟ್ಟರ, ಹನುಮಂತಪ್ಪ ದೊಡ್ಡಮನಿ, ಹನುಮಂತಪ್ಪ ಸಂಗಮ್ಮನವರ, ಅರ್ಜುನಪ್ಪ ಸಂಗಮ್ಮನವರ, ಕುರುಗೋಡಪ್ಪ ಬಡಖಂಡಪ್ಪನವರ, ದೇವಪ್ಪ ಮಾಗಡಿ, ಅಜ್ಜಪ್ಪ ಛಬ್ಬಿ, ಪರಶುರಾಮ ವಡವಿ, ಮಲ್ಲಪ್ಪ ಪ್ಯಾಟಿ, ಭಾರ್ಗವ ಗದಗ, ಶ್ರೀಕಾಂತ ಕಮ್ಮಾರ, ದೇವು ಶಲವಡಿ, ಶಾಂತಮ್ಮ ತಳವಾರ, ಹನುಮಂತ ದಾಸರ, ರಾಜು ಪರಸಪ್ಪನವರ, ಲಕ್ಷ್ಮಣ ಮರಾಠೆ, ಪಿಡಿಓ ಅನಿತಾ ಮಾಢಳ್ಳಿ ಮುಂತಾದವರು ಉಪಸ್ಥಿತರಿದ್ದರು.

ನಿವೃತ್ತಿ ಜೀವನ ಸಮಾಜಮುಖಿ ಚಿಂತನೆಗೆ ಮೀಸಲು

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನನ್ನ ಸೇವಾವಧಿಯಲ್ಲಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರ, ಸಿಬ್ಬಂದಿಗಳ ಸಹಕಾರದಿಂದ ನಿರ್ವಹಿಸಿದ ಹುದ್ದೆ ಖುಷಿ ನೀಡಿದೆ. ಪ್ರಾಧ್ಯಾಪಕನಾಗಿದ್ದಾಗ ಮಕ್ಕಳ ಜೊತೆಗೆ ಪಡೆದ ವೃತ್ತಿ ಅನುಭವವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆದ್ದರಿಂದ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಹೊಸಮನಿ ಹೇಳಿದರು.

ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಅವರ ಸೇವಾ ನಿವೃತ್ತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಹೆಚ್ಚಿನ ಕಾಲ ಬೋಧಕನಾಗಿ, ಪ್ರಾಂಶುಪಾಲನಾಗಿ ಪಡೆದ ಅನುಭವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಧೃಡ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಹಾಗೂ ಪದವಿ ಹಂತದ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಅಂತಹ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕನಾಗಿ ನಿವೃತ್ತಿ ಪಡೆಯುತ್ತಿರುವುದು ನನ್ನ ಸೇವೆಯಲ್ಲಿ ಸ್ಮರಣೀಯ ದಿನಗಳಾಗಿವೆ. ನಿವೃತ್ತಿಯ ಕೊನೆಯ ದಿನದವೆರೆಗೂ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ಸೇವೆ ಮಾಡಿರುವೆ. ಸೇವಾ ದಿನಗಳಲ್ಲಿ ಮಾಡಿದ ಕೆಲಸ ಆತ್ಮತೃಪ್ತಿ ನೀಡಿದೆ ಎಂದು ಹೇಳಿ ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು.

ನಿವೃತ್ತ ಪ್ರಾಂಶುಪಾಲ ಎಫ್.ಎಸ್. ಸಿದ್ನೇಕೊಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಈ.ಆರ್. ಲಗಳೂರ, ಎಸ್.ಜಿ. ಕೇಶಣ್ಣವರ, ಆರ್.ಎಂ. ಕಲ್ಲನಗೌಡರ, ಡಿ.ಬಿ. ಗವಾನಿ, ಉಮೇಶ ಹಿರೇಮಠ, ಉಮೇಶ ಅರಹುಣಸಿ, ಕಮತಗಿ, ಆನಂದ ಲಾಲಸಿಂಗ್, ಕೃಷ್ಣಾ, ಬಿ.ಎಚ್. ಕೊಳ್ಳಿ, ಗಿರಿರಾಜ, ಶೋಭಾ ಮೆರವಾಡೆ, ಜ್ಯೋತಿ ಬೋಳಣ್ಣವರ, ಲಕ್ಷ್ಮೀ ನಾಗರಾಳ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

ನರೇಗಲ್ಲ ಕಾಲೇಜಿನ ಪ್ರಾಂಶುಪಾಲ ಎಸ್.ಎಲ್. ಗುಳೇದಗುಡ್ಡ ಮಾತನಾಡಿ, ಹೊಸಮನಿಯವರು ಕಾಲೇಜಿಗೆ ಬರುವ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ನಮ್ಮ ಕಾಲೇಜಿನ ಮೇಲೆ ಬಹಳಷ್ಟು ಪ್ರೀತಿಯನ್ನು ಹೊಂದಿದ್ದರು ಎಂದರು.

ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿ

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಯಾಣಿಕರ ಆರೋಗ್ಯ ರಕ್ಷಣೆಗಾಗಿ ಬಸ್ ನಿಲ್ದಾಣ ಆವರಣದ ಸ್ವಚ್ಛತೆಗೆ ಪ್ರಥಮಾದ್ಯತೆ ನೀಡಬೇಕು ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಸೂಚಿಸಿದರು.

ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಸೋಮವಾರ ಶಿರಹಟ್ಟಿ ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಜುಲೈ 20ರಂದು ಪುನಃ ಬಸ್ ನಿಲ್ದಾಣದ ಸ್ವಚ್ಛತೆಯ ಪರಿಶೀಲನೆಗಾಗಿ ಆಗಮಿಸುವುದಾಗಿ ತಿಳಿಸಿದ ಅವರು, ಈಗ ನೀಡಿರುವ ಎಲ್ಲ ಸೂಚನೆಗಳು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸಂಬAಧಿತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಲಾಗುವುದು. ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕೂರಲು ಉತ್ತಮ ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಪ್ಲಾಸ್ಟಿಕ್ ಮುಕ್ತ ನಿಲ್ದಾಣ ಆಗಬೇಕು. ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮಗಳಿಂದ ಶಿರಹಟ್ಟಿಗೆ ಬಂದು ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆ ಮಾಡಬೇಕು ಎಂದು ಬಿ.ಬಿ. ಅಸೂಟಿ ನಿರ್ದೇಶನ ನೀಡಿದರು.

ನಿಲ್ದಾಣದ ಆವರಣದಲ್ಲಿರುವ ಶಿಶು ಆರೈಕೆ ವಿಶ್ರಾಂತಿ ಕೊಠಡಿಗೆ ಭೇಟಿ ನೀಡಿದ ಅವರು, ವಿಶ್ರಾಂತಿ ಕೊಠಡಿಯಲ್ಲಿ ಶುದ್ಧ ಗಾಳಿ, ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ಸಾರಿಗೆ ಸಂಸ್ಥೆಯ ಅಧಿಕಾರಿ ಡಿ.ಸಿ. ದೇವರಾಜ ಅವರಿಗೆ ನಿರ್ದೇಶನ ನೀಡಿದರು.

ಶಿರಹಟ್ಟಿ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ ಮಾತನಾಡಿ, ಪ್ರತಿ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಭೆಗಳನ್ನು ನಡೆಸಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡಬೇಕೆಂದರು.

ಜಿಲ್ಲಾ ಸಮಿತಿಯ ಸದಸ್ಯ ಅಶೋಕ ಮಂದಾಲಿ ಮಾತನಾಡಿ, ಸರ್ಕಾರದ ಮಹಾತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ದುರ್ಬಲರನ್ನು ಆರ್ಥಿಕ ಸಬಲರನ್ನಾಗಿ ಮಾಡುತ್ತಿವೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಶಿವನಗೌಡ ಪಾಟೀಲ, ಮಲ್ಲಪ್ಪ ಹುಯಲಗೋಳ, ಬುಡೆನಸಾಬ್ ಮಕಾನದಾರ, ದೇವಪ್ಪ ಲಮಾಣಿ, ವಿಶಾಲ ಹೊನ್ನಣ್ಣವರ, ಸುರೇಶರಡ್ಡಿ ಕೆಂಚರೆಡ್ಡಿ, ಶಕುಂತಲಾ ವಿಭೂತಿಮಠ, ಹೊನ್ನೇಶ್ ಪೋಟಿ, ಮಹಾವೀರ್ ಮಂಟಗನ್ನಿ, ಅಂದನಗೌಡ ಪಾಟೀಲ್, ಸೋಮನಗೌಡ ಮರಿಗೌಡ, ಪ್ರಮುಖರಾದ ಹೂಮಾಯನ್ ಮಾಗಡಿ, ಪವನ್ ಈಳಿಗೇರ, ಹಸನ್ ಸಾಬ್ ನದಾಫ್, ಸಂತೋಷ್ ಕುರಿ, ಸಂಗಪ್ಪ ಕೆರಕಲಮಟ್ಟಿ, ಚಾಂದಸಾಬ ಕೊಟ್ಟೂರ ಮತ್ತಿತರರು ಹಾಜರಿದ್ದರು.

“ಶಕ್ತಿ ಯೋಜನೆ ಮಹಿಳೆಯರ ಸಬಲತೆಗೆ ಶಕ್ತಿಯಾಗಿ ನಿಂತಿರುವುದು ಅಕ್ಷರಶಃ ಸತ್ಯ ಎಂದು ಫಲಾನುಭವಿಗಳು ತಮ್ಮ ಮನದಾಳದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಕೆ. ಪಾಟೀಲ ಸೇರಿದಂತೆ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು”

ನಿಲ್ದಾಣದ ಆವರಣದಲ್ಲಿರುವ ಶೌಚಾಲಯದ ಪರಿಶೀಲನೆ ನಡೆಸಿ, ಅಲ್ಲಿಯೂ ಸಹ ಸ್ವಚ್ಛತೆ ಅಗತ್ಯವಾಗಿದೆ. ವಿಕಲಚೇತನರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಬೇಕು. ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿದ್ದು, ಪುನಃ ದೂರುಗಳು ಬರದಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಿಗಾ ವಹಿಸಲು ಬಿ.ಬಿ. ಅಸೂಟಿ ಸೂಚಿಸಿದರು.

error: Content is protected !!