Home Blog Page 4

ಪಡಿತರ ಅಕ್ಕಿ ಅಕ್ರಮ ಸಂಗ್ರಹ, ಮಾರಾಟ ತಡೆಗಟ್ಟಲು ಮನವಿ

ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ಪಡಿತರ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟ ತಡೆಗಟ್ಟುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ತಾಲೂಕಾಧ್ಯಕ್ಷ ಇಸ್ಮಾಯಿಲ್ ಉಮಚಗಿ ಮಾತನಾಡಿ, ಅಕ್ರಮ ಪಡಿತರ ಅಕ್ಕಿ ಸಂಗ್ರಹ ಹಾಗೂ ಸಾಗಾಟ ನಿರಂತರ ನಡೆಯುತ್ತಿದ್ದು, ಅವಳಿ ನಗರದಲ್ಲಿ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಅಕ್ರಮ ಅಕ್ಕಿ ಸಾಗಾಟ ತಡೆಯಬೇಕಾದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಮತ್ತು ಅಕ್ರಮ ಪಡಿತರ ಅಕ್ಕಿ ಸಾಗಾಟಗಾರ ಜೊತೆಗೆ ಕೈಜೋಡಿಸಿದ್ದಾರೆ.

ಈ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಹಾಗೂ ಸಾಗಾಟಕ್ಕೆ ಕಡಿವಾಣ ಹಾಕಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಬಡವರ ಹೊಟ್ಟೆ ತುಂಬಿಸುವ ಯೋಜನೆಯ ಉದ್ದೇಶ ಸಾಕಾರವಾಗಬೇಕು ಎಂದರು.

ಈ ಸಂದರ್ಭದಲ್ಲಿ ಖಾಜಾಸಾಬ ಕೊಪ್ಪಳ, ಅಸ್ಲಮ್ ಮಾಲದಾರ, ಸಾಧಿಕ ಚಿತವಾಡಗಿ, ಅನ್ವರ ಕೊಪ್ಪಳ, ಸಲೀಂ ಶಹಪೂರ, ಫಾರುಕ ದಂಡಿನ, ಸತೀಶ ರೋಣ, ಹೈದರಲಿ ಸವಣೂರ, ಮಹಮ್ಮದ ಅಲಿ, ಶಬೀರ ದ್ಯಾಪೂರ, ಹಮಾಯತ್, ಆಸಿಫ್ ಮಾಲದಾರ, ನೌವೀದ ಕಂಪ್ಲಿ, ರಸೂಲ ಬೇಪಾರಿ ಸೋಯಲ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಡಾ. ಬಸವರಾಜ ಬಳ್ಳಾರಿ ಅವರಿಗೆ ಸನ್ಮಾನ

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಬಸವರಾಜ ಬಳ್ಳಾರಿ ಅವರನ್ನು ಜಿಲ್ಲಾಡಳಿತ ಭವನದ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪಾಧಿಕಾರದ ಕಚೇರಿಯಲ್ಲಿ ಶುಕ್ರವಾರ ಸನ್ಮಾಸಿಲಾಯಿತು.

ಈ ಸಂದರ್ಭದಲ್ಲಿ ಲಕ್ಕುಂಡಿ ಪ್ರಾಧಿಕಾರ ಆಯುಕ್ತ ಡಾ. ಶರಣು ಗೊಗೇರಿ, ರಾಜ್ಯ ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ರವಿ ಗುಂಜೀಕರ, ಜಿಲ್ಲಾ ನೌಕರ ಸಂಘದ ಖಜಾಂಚಿ ಮಹಾಂತೇಶ ನಿಟ್ಟಾಲಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ, ವಯಸ್ಕರ ಶಿಕ್ಷಣಾಧಿಕಾರಿ ಶಿವಕುಮಾರ ಕುರಿಯವರ, ಡಯಟ್ ಉಪನ್ಯಾಸಕ ಎಚ್.ಬಿ. ರಡ್ಡೇರ, ಡಿಡಿಪಿಐ ಕಛೇರಿ ಪರಿವೀಕ್ಷಕ ಶ್ರೀಧರ ಬಡಿಗೇರ, ಕರೀಂ ಸುಣಗಾರ ಹಾಜರಿದ್ದರು.

ವೈದ್ಯರು ನಮ್ಮೆಲ್ಲರ ಪಾಲಿನ ದೇವರು

ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಸತ್ಯವಾದುದು. ಆರೋಗ್ಯವು ಅನಾರೋಗ್ಯವಾದಾಗ ಔಷಧ ನೀಡಿ ಗುಣಪಡಿಸುವದು ವೈದ್ಯ ವೃತ್ತಿಧರ್ಮ ಎಂದು ಗದಗ ಜೇಂಟ್ಸ್ ಗ್ರುಪ್ ಆಫ್ ಸಖೀಸಹೇಲಿ ಸಂಘದ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.

ಅವರು ಗದುಗಿನ ಖ್ಯಾತ ಚಿಕ್ಕಮಕ್ಕಳ ತಜ್ಞರಾದ ಡಾ. ಎಸ್.ಎಫ್. ವರವಿ ಅವರನ್ನು ‘ವೈದ್ಯ ದಿನಾಚರಣೆ’ ಪ್ರಯುಕ್ತ ಸನ್ಮಾನಿಸಿ ಮಾತನಾಡಿದರು.

ನೋವಿನ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಪುನರ್ಜನ್ಮ ನೀಡುವ ವೈದ್ಯರು ನಮ್ಮೆಲ್ಲರ ಪಾಲಿನ ದೇವರು. ಇವರಿಗೆ ವಿಶೇಷ ಗೌರವ ನೀಡುವ ಮೂಲಕ ವೈದ್ಯರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ನಮ್ಮ ಉತ್ತಮ ಹಾಗೂ ಆರೋಗ್ಯಕರ ಬದುಕಿಗಾಗಿ ಸಮರ್ಪಣಾ ಮನೋಭಾವದಲ್ಲಿ ಕಳೆದ 40 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ವರವಿ ಅವರ ಸೇವೆ ಅಭಿನಂದನೀಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಿರ್ಮಲಾ ಪಾಟೀಲ, ವೈದ್ಯರು ಭೂಮಿಯ ಮೇಲಿರುವ ದೇವರು ಎನ್ನುವ ನಂಬಿಕೆ ನಮ್ಮಲ್ಲಿದೆ. ನಿಸ್ವಾರ್ಥ ಸೇವೆಯನ್ನೇ ಗುರಿಯಾಗಿಸಿಕೊಂಡು ನಿರಂತರ ಸೇವೆಗೈಯುತ್ತಿರುವ ವೈದ್ಯರು ರೋಗಿಗಳ ಬದುಕಿನ ಆಶಾಕಿರಣ ಎಂದು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ವರವಿ, ವೈದ್ಯಕೀಯ ಕ್ಷೇತ್ರದಲ್ಲಿ ಹಗಲಿರುಳು ಸೇವೆ ಸಲ್ಲಿಸಿ ನೋವು ಎಂದು ಬಂದವರ ಮುಖದಲ್ಲಿ ನಗು ತರಿಸುವ ಕಾರ್ಯ ನಿರಂತರ ನಡೆಯುತ್ತಿದೆ. ನೋವು ಕಡಿಮೆ ಆದಾಗ ನಮ್ಮೊಂದಿಗೆ ರೋಗಿಗಳು ಸಂತಸ ಹಂಚಿಕೊಂಡು ಆರೋಗ್ಯವಂತರಾಗಿ ನಡೆದಾಗ ನಮ್ಮ ವೃತ್ತಿ ಘನತೆ ಹೆಚ್ಚುತ್ತದೆ ಎಂದರು.

ಮಾಧುರಿ ಮಾಳೇಕೊಪ್ಪ ಹಾಗೂ ಶಶಿಕಲಾ ಮಾಲೀಪಾಟೀಲ ಪ್ರಾರ್ಥಿಸಿದರು. ಪ್ರಿಯಾಂಕಾ ಹಳ್ಳಿ ಸ್ವಾಗತಿಸಿದರು. ಆಶಾ ಪಟ್ಟಣಶೆಟ್ಟಿ ಪರಿಚಯಿಸಿದರು. ಅಶ್ವಿನಿ ಮಾದಗುಂಡಿ ನಿರೂಪಿಸಿದರು. ಚಂದ್ರಕಲಾ ಸ್ಥಾವರಮಠ ವಂದಿಸಿದರು.

ಕಾರ್ಯಕ್ರಮದಲ್ಲಿ ರೇಖಾ ರೊಟ್ಟಿ, ಅನ್ನಪೂರ್ಣ ವರವಿ, ಶಾಂತಾ ಮುಂದಿನಮನಿ, ಲಕ್ಷ್ಮೀ ಕಟ್ಟೇಣ್ಣವರ, ಯಲ್ಲಮ್ಮ ಬೇಲೇರಿ, ಗೀತಾ ಮಠದ, ನಿವೇದಿತಾ ಅಡ್ನೂರ, ವಿಜಯಲ ಲಕ್ಷ್ಮೀ ಬಾರಿಕಾಯಿ, ಹೇಮಾ ಬಿ, ಜಯಶ್ರೀ ಕುರುಬರ ಮುಂತಾದವರಿದ್ದರು.

ರಾಷ್ಟ್ರೀಯ ವೈದ್ಯರ ದಿನ ಆಚರಣೆ

ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಗದಗ ಸೆಂಟ್ರಲ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ವೈದ್ಯರಾದ ಡಾ. ಸಿ.ಬಿ. ಹಿರೇಗೌಡರ, ಡಾ. ವಿ.ಸಿ. ಶಿರೋಳ, ಡಾ. ಶಿಲ್ಪಾ ಪವಾಡಶೆಟ್ಟರ, ಡಾ. ಪ್ರಕಾಶ ರಕ್ಕಸಗಿ, ಡಾ. ಮಧುಸೂದನ ಚಿಂತಾಮಣಿ, ಡಾ. ಕುಮಾರ ಕಂಠಿಮಠ ಅವರನ್ನು ಈ ಸಂದರ್ಭದಲ್ಲಿ ಸನ್ಮಾಸಲಾಯಿತು.

ಡಾ. ಸಿ.ಬಿ. ಹಿರೇಗೌಡರ ಮಾತನಾಡಿ, ರೋಟರಿ ಸೆಂಟ್ರಲ್ ಸಂಸ್ಥೆ ವೈದ್ಯರ ದಿನಾಚರಣೆಯ ನಿಮಿತ್ತ ವೈದ್ಯರ ಮನೆಗೆ, ಅವರಿರುವ ಆಸ್ಪತ್ರೆಗಳಿಗೆ ಹೋಗಿ ಸನ್ಮಾನಿಸುತ್ತಿರುವದು ಶ್ಲಾಘನೀಯ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ. ಬಿಧನ್ ಚಂದ್ರ ರಾಯ್ ಅವರ ನೆನಪಿಗಾಗಿ ಭಾರತದಾದ್ಯಂತ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಸಮಾಜಕ್ಕೆ ವೈದ್ಯರ ಸೇವೆ ಅನುಪಮವಾದದ್ದು. ಎಲ್ಲ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯವೇ ದೊಡ್ಡದು. ಅನಾರೋಗ್ಯವನ್ನು ಕಳೆದು ಉತ್ತಮ ಆರೋಗ್ಯವನ್ನು ಸೃಷ್ಟಿಸಿ ಬದುಕಿಗೆ ಚೈತನ್ಯ ನೀಡುವ ವೈದ್ಯ ರೋಗಿಗಳ ಪಾಲಿಗೆ ದೇವರು ಎಂದರು.

ಈ ಸಂದರ್ಭದಲ್ಲಿ ರೋಟರಿ ಸೆಂಟ್ರಲ್ ಗದಗನ 2025-26ನೇ ಸಾಲಿನ ನೂತನ ಅಧ್ಯಕ್ಷ ಚೇತನ ಅಂಗಡಿ, ಕಾರ್ಯದರ್ಶಿ ರಾಜು ಉಮನಾಬಾದಿ, ಖಜಾಂಚಿ ಡಾ. ಪ್ರಭು ಗಂಜಿಹಾಳ, ಮಾಜಿ ಅಸಿಸ್ಟಂಟ್ ಗವರ್ನರ್ ಮಲ್ಲಿಕಾರ್ಜುನ ಐಲಿ, 3170ದ ನೂತನ ಅಸಿಸ್ಟಂಟ್ ಗವರ್ನರ್ ವಿ.ಕೆ. ಗುರುಮಠ, ಚಂದ್ರಗೌಡ ಹಿರೇಗೌಡರ, ಎಸ್.ಆಯ್. ಅಣ್ಣಗೇರಿ, ಶ್ರೀಕಾಂತ ಲಕ್ಕುಂಡಿ, ರಾಜು ಕುರಡಗಿ, ಮಲ್ಲಿಕಾರ್ಜುನ ಚಂದಪ್ಪನವರ, ಪರಶುರಾಮ ನಾಯ್ಕರ್ ಮೊದಲಾದ ಸದಸ್ಯರು ಪಾಲ್ಗೊಂಡಿದ್ದರು.

ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಲು ಗುರುವಾರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಗಜೇಂದ್ರಗಡ ತಾಲೂಕಿನ ನಿಡಗುಂದಿ ಮತ್ತು ಮಾರನಬಸರಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದರು.

ನಿಡಗುಂದಿ ಗ್ರಾಮದ ಸೊಬಗಿನ ಅವರ ಹೊಲದಿಂದ ಕೆಂಪಯ್ಯನವರ ಹೊಲದವರೆಗೆ 2.20 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಅಭಿವೃದ್ಧಿ ಕಾರ್ಯವನ್ನು ಪರಿಶೀಲಿಸಿದರು. ಈ ವೇಳೆ ರಸ್ತೆ ನಿರ್ಮಾಣದಲ್ಲಿ ಕ್ರಿಯಾಯೋಜನೆಯಂತೆ ರಸ್ತೆ ನಿರ್ಮಾಣ ಕಾರ್ಯ ನಡೆದಿದಿಯೇ ಎಂಬುದನ್ನು ಕಡತ ಪರಿಶೀಲಿಸಿ ತಿಳಿದುಕೊಂಡರು. ಬಳಿಕ ಗ್ರಾಮದ ಸಂಜೀವಿನಿ ವರ್ಕ್ ಶೆಡ್ ಮತ್ತು ಸಿಸಿ ರಸ್ತೆ ನಿರ್ಮಾಣ ಹಾಗೂ ಸರ್ಕಾರಿ ಕಾಲೇಜಿನಲ್ಲಿ ನಿರ್ಮಿಸಿದ ಪಿಂಕ್ ಶೌಚಾಲಯ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಗುಣಮಟ್ಟ ಅವಲೋಕಿಸಿದರು.

ಮಾರನಬಸರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಗ್ರಂಥಾಲಯ ಕಟ್ಟಡಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಂಥಾಲಯದ ಪುಸ್ತಕಗಳ ಸಂಗ್ರಹ ಕೋಣೆ, ಪಿಠೋಪಕರಣಗಳ ಗುಣಮಟ್ಟ, ಗ್ರಂಥಾಲಯದಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ಸೇರಿದಂತೆ ಹಲವು ಮಾಹಿತಿಯನ್ನು ಗ್ರಂಥಪಾಲಕರಿಂದ ಪಡೆದುಕೊಂಡರು. ಬಳಿಕ ಗ್ರಾಮದ ಮೊಹರಂ ರಸ್ತೆ ಅಭಿವೃದ್ಧಿ, ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ನೂತನ ಶಾಲಾ ಕಟ್ಟಡವನ್ನು ಪರಿಶೀಲಿಸಿದರು.

ಬಳಿಕ ವಸತಿ ನಿಯಲದ ಕಟ್ಟಡ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆಯೇ ಎಂದು ತಿಳಿಯಲು ಸ್ವತಃ ವಿದ್ಯಾರ್ಥಿಗಳೊಂದಿಗೆ ಕ್ಲಾಸ್‌ನಲ್ಲಿ ಕುಳಿತು ಶಿಕ್ಷಕರ ಪಾಠ ಆಲಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಉಪಹಾರ ಸವಿದು ವಸತಿ ನಿಲಯದ ಆಹಾರ ಗುಣಮಟ್ಟ ಮತ್ತು ವಸತಿ ನಿಲಯದ ಕಟ್ಟಡ ಪರಿಶೀಲಿಸಿದರು. ಬಳಿಕ ತಾಲೂಕಿನ ಶಿಕ್ಷಕರಿಗೆ ಜಿಲ್ಲೆಯ ಫಲಿತಾಂಶ ಹೆಚ್ಚಿಸಲ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗಜೇಂದ್ರಗಡ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ, ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಫಣಿಬಂದ, ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕರು, ತಾಲೂಕಿನ ನರೇಗಾ ಸಿಬ್ಬಂದಿ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ನರೇಗಾ ಕಾಮಗಾರಿಗಳ ಜೊತೆಗೆ ಭರತ್ ಎಸ್ ಅವರು ಸರ್ಕಾರಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಶೈಕ್ಷಣೀಕ ಚಟುವಟಿಕೆಗಳ ಬಗ್ಗೆ ಸಂವಾದ ನಡೆಸಿದರು. ಕಾಲಕಾಲೇಶ್ವರ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದದ ವೇಳೆ 9ನೇ ತರಗತಿಯಲ್ಲಿ ಶೇ.98 ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿನಿಯೊಬ್ಬಳು ಸಿಇಒ ಅವರ ಗಮನಸೆಳೆದಳು. ಈ ವೇಳೆ ವಿದ್ಯಾರ್ಥಿಗೆ ಸಿಇಒ ಅವರು, 10ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮಳಾಗಿ ತೇರ್ಗಡೆ ಹೊಂದುವಂತೆ ಹರಸಿದರು.

ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ಸ್ ದಿನಾಚರಣೆ

ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಗದಗ ಸೆಂಟ್ರಲ್ ವತಿಯಿಂದ ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಚಾರ್ಟರ್ಡ್ ಅಕೌಂಟೆಂಟ್ಸ್ ಕೆ.ಎಸ್. ಚೆಟ್ಟಿ , ಕಿರಣ ಶಾವಿ, ಆನಂದ ಪೋತ್ನಿಸ್ ಅವರನ್ನು ಗೌರವ ಪೂರ್ವಕವಾಗಿ ಸನ್ಮಾಸಲಾಯಿತು.

ಈ ಸಂದರ್ಭದಲ್ಲಿ ಕೆ.ಎಸ್. ಚೆಟ್ಟಿ ಮಾತನಾಡಿ, ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ ದಿನವನ್ನು ಪ್ರತಿ ವರ್ಷ ಜುಲೈ 1ರಂದು ಆಚರಿಸಲಾಗುತ್ತದೆ. ಭಾರತವು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಸ್ಥಾಪನೆಯ ಗುರುತಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಸೆಂಟ್ರಲ್‌ನ 2025-26ನೇ ಸಾಲಿನ ನೂತನ ಅಧ್ಯಕ್ಷ ಚೇತನ ಅಂಗಡಿ, ಕಾರ್ಯದರ್ಶಿ ರಾಜು ಉಮನಾಬಾದಿ, ಖಜಾಂಚಿ ಡಾ. ಪ್ರಭು ಗಂಜಿಹಾಳ, ಮಾಜಿ ಅಸಿಸ್ಟಂಟ್ ಗವರ್ನರ್ ಮಲ್ಲಿಕಾರ್ಜುನ ಐಲಿ, 3170ದ ನೂತನ ಅಸಿಸ್ಟಂಟ್ ಗವರ್ನರ್ ವಿ.ಕೆ. ಗುರುಮಠ, ರಾಜು ಕುರಡಗಿ, ಎಸ್.ಆಯ್. ಅಣ್ಣಗೇರಿ, ಚಂದ್ರಗೌಡ ಹಿರೇಗೌಡರ, ಶ್ರೀಕಾಂತ ಲಕ್ಕುಂಡಿ, ಪರಶುರಾಮ ನಾಯ್ಕರ್, ಮಲ್ಲಿಕಾರ್ಜುನ ಚಂದಪ್ಪನವರ ಮೊದಲಾದ ಸದಸ್ಯರು ಪಾಲ್ಗೊಂಡಿದ್ದರು.

MLC ರವಿಕುಮಾರ್‌ಗೆ ಬಿಗ್ ರಿಲೀಫ್‌: ಬಂಧನದಿಂದ ತಪ್ಪಿಸಿಕೊಂಡ ಬಿಜೆಪಿ ಮುಖಂಡ.. ಹೈಕೋರ್ಟ್ ಹೇಳಿದ್ದೇನು?

ಬೆಂಗಳೂರು:- ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ ಆರೋಪದಡಿ MLC ರವಿಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ.

ಜೂನ್‌ 8ರ ವರೆಗೆ ಬಂಧಿಸದಂತೆ ಆದೇಶ ನೀಡಿರುವ ಕೋರ್ಟ್‌, ತನಿಖೆಗೆ ಸಹಕರಿಸುವಂತೆ ರವಿಕುಮಾರ್‌ ಅವರಿಗೆ ಸೂಚನೆ ನೀಡಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು ಮಾಡುವಂತೆ ರವಿಕುಮಾರ್‌ ಸಲ್ಲಿಸಿದ್ದ ಅರ್ಜಿ ನ್ಯಾ.ಎಸ್.ಆರ್ ಕೃಷ್ಣಕುಮಾರ್ ಪೀಠದಲ್ಲಿ ವಿಚಾರಣೆ ನಡೆಯಿತು. ರವಿಕುಮಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಎಂಎಲ್‌ಸಿ ರವಿಕುಮಾರ್ ಅವರು ವಿಧಾನಸೌಧ ಬಳಿ ಪ್ರತಿಭಟನೆ ವೇಳೆ ಮಾತನಾಡಿದ್ದಾರೆ ಎನ್ನಲಾಗಿದೆ. ಟಿವಿಯಲ್ಲಿ ಮಾತನಾಡಿದ್ದಾರೆ ಎಂದು ದೂರುದಾರರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ರವಿಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ. ಇದು ರಾಜಕೀಯ ದುರುದ್ದೇಶದ ಪ್ರಕರಣವಾಗಿದ್ದು, ಪೀಠಕ್ಕೆ ರವಿಕುಮಾರ್ ಏನು ಮಾತನಾಡಿದ್ದಾರೆ ಎಂಬುದರ ವಿಡಿಯೋವನ್ನು ಟ್ಯಾಬ್ ಮೂಲಕ ತೋರಿಸಿದ್ರು.

ಎಸ್‌ಪಿಪಿ ಬೆಳ್ಳಿಯಪ್ಪ ಪ್ರತಿವಾದ ಮಂಡಿಸಿ, ರವಿಕುಮರ್ 2ನೇ ಬಾರಿ ಹೀಗೆ ಮಾತನಾಡ್ತಿದ್ದಾರೆ. ಈ ಹಿಂದೆ ಮಹಿಳಾ ಜಿಲ್ಲಾಧಿಕಾರಿಯೊಬ್ಬರನ್ನ ಪಾಕಿಸ್ತಾನದ ಸಹೋದರಿ ಅಂದಿದ್ರು. ನಾವು ಇಲ್ಲಿ ಡಿಸೈಡ್ ಮಾಡೋದಕ್ಕೆ ಬರೋದಿಲ್ಲ, ತನಿಖೆ ಆಗಲಿ, ಎಫ್‌ಐಆರ್ ಆಗಿ 24 ಗಂಟೆ ಕಳೆದಿಲ್ಲ ಆಗಲೇ ಕೋರ್ಟ್‌ಗೆ ಬಂದಿದ್ದಾರೆ. ವಿಕ್ಟಿಮ್ ಮುಖ್ಯ ಕಾರ್ಯದರ್ಶಿ ಅವರ ಹೇಳಿಕೆ ದಾಖಲಿಸಬೇಕಿದೆ. ಮಾಧ್ಯಮಗಳ ಹೇಳಿಕೆಯನ್ನೂ ದಾಖಲಾಸಲಾಗುತ್ತೆ, ಇದೊಂದು ಏಳು ವರ್ಷಗಳವರೆಗಿನ ಸಜೆಯುಳ್ಳ ಕೇಸ್ ಆಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಇಲ್ಲಿ ರಕ್ಷಣೆ ಕೋರೋದು ಸರಿಯಿಲ್ಲ. ಐಎಎಸ್ ಅಧಿಕಾರಿಗಳು ಇವ್ರ ವಿರುದ್ಧ ಪ್ರತಿಭಟಿಸ್ತಿದ್ದಾರೆ ಅಂತ ವಾದ ಮಂಡಿಸಿದ್ರು. ರಾಜಕಾರಣಿಗಳು ಬಳಸುವ ಭಾಷೆ ಕೆಳಮಟ್ಟಕ್ಕಿಳಿದಿದೆ ಅಂತ ಅಭಿಪ್ರಾಯ ಪಟ್ಟ ನ್ಯಾಯಾಧೀಶರು, ಜುಲೈ 8ರ ವರೆಗೆ ಬಂಧಿಸದಂತೆ, ತನಿಖೆಗೆ ಸಹಕಾರ ನೀಡುವಂತೆ ಆದೇಶ ನೀಡಿದ್ರು.

ಇನ್ನೂ ರಾಜ್ಯ ರಾಜಕಾರಣದಲ್ಲಿ ಸದ್ಯ ಎಮ್‌ಎಲ್‌ಸಿ ರವಿಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂಬ ಆರೋಪ ಭಾರೀ ಚರ್ಚೆಗೆ ಗುರಿಯಾಗಿದೆ.

ಗುಡ್ಡಕ್ಕೆ ಡಿಕ್ಕಿ ಹೊಡೆದ ಲಾರಿ: ಓರ್ವ ಸಾವು.. ಚಾಲಕ ಗಂಭೀರ!

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ಮಧ್ಯೆ ಇರುವ ಕಣಿವೆ ಪ್ರದೇಶದಲ್ಲಿ ಬೃಹತ್ ಗಾತ್ರದ ಗ್ರಾನೈಟ್‌ಗಳನ್ನು ಸಾಗಿಸುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಗುಡ್ಡಕ್ಕೆ ಡಿಕ್ಕಿಯಾದ ಪರಿಣಾಮ ಲಾರಿ ಮಾಲೀಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

ದೊಡ್ಡಪ್ಪಯ್ಯ ಮೃತ ಲಾರಿ ಮಾಲೀಕ. ವೆಂಕಟೇಶ್ ಗಾಯಗೊಂಡ ಚಾಲಕ. ರಾಷ್ಟ್ರೀಯ ಹೆದ್ದಾರಿ 69ರ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ಮಧ್ಯೆ ಕಣಿವೆ ಪ್ರದೇಶದಲ್ಲಿ ಇಳಿಜಾರು ಇದ್ದು, ಒಂದೆಡೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಇದೇ ರಸ್ತೆಯಲ್ಲಿ ಚಿಕ್ಕಬಳ್ಳಾಪುರದ ಕಡೆಯಿಂದ ಗೌರಿಬಿದನೂರಿಗೆ ಗ್ರಾನೈಟ್‌ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿದ್ದ ಗ್ರಾನೈಟ್‌ಗಳು ಕ್ಯಾಬಿನ್‌ಗೆ ಬಡಿದ ಪರಿಣಾಮ ಕ್ಯಾಬಿನ್‌ನಲ್ಲಿದ್ದ ಲಾರಿ ಮಾಲೀಕ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನು ಗಂಭೀರ ಗಾಯಗೊಂಡ ಲಾರಿ ಚಾಲಕನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿಕುಮಾರ್ ಸದನದಲ್ಲಿ ಅಲ್ಲ, ನಿಮ್ಮಾನ್ಸ್’ನಲ್ಲಿಇರಬೇಕು: ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

ಕಲಬುರಗಿ:: ಶಾಲಿನಿ ರಜನೀಶ್ ವಿರುದ್ಧ ಎಂಎಲ್‌ಸಿ ರವಿ ಕುಮಾರ್ ಅಸಂಸದೀಯ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪವಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,

ರವಿಕುಮಾರ್ ಅವರಿಗೆ ಮುಂಚೆಯಿಂದ ಬಾಯಿ ಚಪಲವಿದೆ. ಕಲಬುರಗಿಯಲ್ಲೂ ಜಿಲ್ಲಾಧಿಕಾರಿಗಳ ವಿರುದ್ಧ ಬಾಯಿಗೆ ಬಂದ ಹಾಗೇ ಮಾತಾಡಿದ್ದಾರೆ.

ಅದಕ್ಕೆ ಕೋರ್ಟ್ ಸಹ ಛೀಮಾರಿ ಹಾಕಿದೆ. ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಗ್ಗೆ ಕೆಟ್ಟ ಮಾತನಾಡುವ ಮೂಲಕ ತಮ್ಮ ಕೊಳಕು ಬುದ್ಧಿ, ಕೊಳಕು ಮನಸ್ಸನ್ನು ರವಿಕುಮಾರ್ ತೋರಿದ್ದಾರೆ. ರವಿಕುಮಾರ್ ಸದನದಲ್ಲಿ ಅಲ್ಲ. ನಿಮ್ಮಾನ್ಸ್’ನಲ್ಲಿ ಇರಬೇಕು ಎಂದು ಲೇವಡಿ ಮಾಡಿದ್ದಾರೆ

ಚನ್ನರಾಯಪಟ್ಟಣ ಬಳಿ ಚಳುವಳಿ; ಪ್ರತಿಭಟನೆ ಮಾಡುತ್ತಿರುವವರಲ್ಲಿ 10 ದಿನ ಸಮಯ ಕೇಳಿದ್ದೇನೆ: ಸಿದ್ದರಾಮಯ್ಯ

ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನಾರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ತಲೆಯೆತ್ತುವುದನ್ನು ವಿರೋಧಿಸಿ ಚಳುವಳಿ ನಡೆಸುತ್ತಿರುವ ರೈತಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಭೆ ನಡೆಸಿದರು. ರೈತರ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ,

ದೇವನಹಳ್ಳಿ, ಚನ್ನರಾಯಪಟ್ಟಣ ಹೋರಾಟಗಾರರ ಸಭೆ ಕರೆದಿದ್ದೆ. ಅನೇಕರೈತಪರ ಹೋರಾಟಗಾರರು ಭಾಗವಹಿಸಿದ್ರು. ಭೂಸ್ವಾಧೀನ ಸಂಬಂಧ ಫೈನಲ್ನೋಟಿಫಿಕೇಷನ್ ಆಗಿಬಿಟ್ಟಿದೆ. ಆದ್ದರಿಂದ ಲೀಗಲ್ ಇಶ್ಯೂಸ್ ಇದೆ, ಸಮಯ ಬೇಕು ಅಂತ ಹೇಳಿದ್ದೇನೆ. ಸರ್ಕಾರಕ್ಕೆ ಹತ್ತು ದಿನ ಸಮಯ ಬೇಕು ಅಂತ ಹೇಳಿದ್ದೇನೆ. ಜು.15ನೇ ತಾರೀಖು ಬೆಳಗ್ಗೆ ರೈತರ ಜೊತೆ ಮತ್ತೆ ಸಭೆ ನಡೆಸಲಾಗುವುದು ಎಂದರು.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವುದಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನು ತೊಡಕುಗಳಿದ್ದು, ಅದನ್ನು ಸರಿಪಡಿಸಿಕೊಳ್ಳುವ ಸಲಹೆಯನ್ನು ಕಾನೂನು ತಜ್ಞರು ನೀಡಿದ್ದಾರೆ.

ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಅಂತಿಮ ನೋಟಿಫಿಕೇಶನ್ ಆಗಿರುವ ಕಾರಣ ಅದರ ಸಾಧಕಬಾಧಕಗಳ ಕುರಿತು ಚರ್ಚೆ ನಡೆಸುವ ಅಗತ್ಯವಿದೆ. ಹಿನ್ನೆಲೆಯಲ್ಲಿ 10 ದಿನಗಳ ಕಾಲಾವಕಾಶ ಅಗತ್ಯವಿದೆ. ಕಾಲಾವಧಿಯಲ್ಲಿ ಸರ್ಕಾರಕ್ಕೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಿದೆ ಎಂದು ತಿಳಿಸಿದರು.

error: Content is protected !!