Home Blog Page 5

4,500 ಕೋಟಿ ರೂ. ವಂಚನೆ ಪ್ರಕರಣ: ಶಿವಾನಂದ ನೀಲಣ್ಣವರ್ʼಗೆ ಷರತ್ತುಬದ್ಧ ಜಾಮೀನು ಮಂಜೂರು

ಬೆಳಗಾವಿ: ಬಹುಕೋಟಿ ರೂಪಾಯಿ ಹೂಡಿಕೆ ವಂಚನೆ ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ನೀಲಣ್ಣವರ್‌ಗೆ 93ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯವು ₹3 ಲಕ್ಷದ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಹಾಗೂ ವಿಚಾರಣೆ ಪೂರ್ಣಗೊಳ್ಳುವವರೆಗೆ ದೇಶ ತೊರೆಯಬಾರದು ಎಂಬ ಷರತ್ತು ವಿಧಿಸಿ ಜಾಮೀನು ನೀಡಿದೆ.

ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕರಾಗಿರುವ ಶಿವಾನಂದ ನೀಲಣ್ಣವರ್ ವಿರುದ್ಧ ಸಾವಿರಾರು ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಭಾರೀ ಪ್ರಮಾಣದ ಹಣ ಸಂಗ್ರಹಿಸಿ ವಂಚನೆ ಎಸಗಿದ ಆರೋಪ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಆರೋಪಗಳ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಥವಾ ಭಾರತೀಯ ಷೇರುಪೇಟೆ ಮತ್ತು ವಿನಿಮಯ ಮಂಡಳಿ (ಸೆಬಿ)ಯಿಂದ ಯಾವುದೇ ಅಧಿಕೃತ ಅನುಮೋದನೆ ಪಡೆಯದೇ, ಹೆಚ್ಚಿನ ಲಾಭಾಂಶದ ಭರವಸೆ ನೀಡಿ ಹೂಡಿಕೆದಾರರಿಂದ ಸಾವಿರಾರು ಕೋಟಿ ರೂಪಾಯಿ ಹಣ ಸಂಗ್ರಹಿಸಲಾಗಿತ್ತು.

ಸುಮಾರು ₹4,500 ಕೋಟಿ ಮೌಲ್ಯದ ವಂಚನೆ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತನಿಖೆ ಮುಂದುವರಿದಿದ್ದು, ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಶಿವಾನಂದ ನೀಲಣ್ಣವರ್ ಸೋಮವಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಭೀಕರ ಅಪಘಾತ: ಡಿವೈಡರ್ʼಗೆ ಡಿಕ್ಕಿ ಹೊಡೆದ ಬೆಂಜ್ ಕಾರು, ಯುವತಿ ಸಾವು

0

ಬೆಂಗಳೂರು: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಹೊಸಕೋಟೆ ಸಮೀಪದ ದೊಡ್ಡ ಹುಲ್ಲೂರು ಬಳಿ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಸಂಚರಿಸುತ್ತಿದ್ದ ಬೆಂಜ್ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯುವತಿಯ ಗುರುತು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಕಾರು ಚಾಲಕನ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

10 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ರೆವೆನ್ಯೂ ಇನ್​ʼಸ್ಪೆಕ್ಟರ್!

ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆವಿನ್ಯೂ ಇನ್‌ಸ್ಪೆಕ್ಟರ್‌ (ಆರ್‌ಐ) ಮಧುಸೂದನ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಭೂ ದಾಖಲೆಗಳಿಗೆ ಸಂಬಂಧಿಸಿದ ಪೋಡಿ ಕೆಲಸ ಮಾಡಿಕೊಡುವುದಕ್ಕಾಗಿ ರೈತ ನಂಜುಂಡಸ್ವಾಮಿ ಅವರ ಬಳಿ ಮಧುಸೂದನ್ ಒಟ್ಟು ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಈ ಮೊತ್ತದ ಮುಂಗಡವಾಗಿ ₹10,000 ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಲಗೂರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರೈತನಿಂದ ಲಂಚದ ಹಣವನ್ನು ಕೈಯಲ್ಲಿ ಪಡೆದು ಜೇಬಿಗೆ ಹಾಕಿಕೊಳ್ಳುತ್ತಿದ್ದಾಗಲೇ ಅಧಿಕಾರಿಗಳು ಮಧುಸೂದನ್ ಅವರನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲೋಕಾಯುಕ್ತ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರು ಲಂಚ ಬೇಡಿಕೆ ಸಂಬಂಧ ದೂರು ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸಿದ್ದಗಂಗಾ ಮಠಕ್ಕೆ 14.25 ಎಕರೆ ಜಮೀನು ಮಂಜೂರು ಆದೇಶಕ್ಕೆ ಹೈಕೋರ್ಟ್ ಮನ್ನಣೆ

ಬೆಂಗಳೂರು: ತುಮಕೂರಿನ ಸಿದ್ದಗಂಗಾ ಮಠದ ‘ದಾಸೋಹ ಪ್ರಸಾದ ವಿತರಣಾ ಕೇಂದ್ರ’ ನಿರ್ಮಾಣಕ್ಕಾಗಿ ಬೆಂಗಳೂರು ಉತ್ತರ ತಾಲೂಕಿನ ಕದರನಹಳ್ಳಿಯಲ್ಲಿ 14 ಎಕರೆ 25 ಗುಂಟೆ ಜಮೀನು ಮಂಜೂರು ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.

ಈ ಕುರಿತು ಸಿದ್ದಗಂಗಾ ಮಠದ ಆಡಳಿತಾಧಿಕಾರಿ ಎಸ್. ವಿಶ್ವನಾಥಯ್ಯ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠ, ಜಮೀನು ಮಂಜೂರಾತಿಯನ್ನು ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.

ಜೊತೆಗೆ, ಈ ಪ್ರಕರಣದಲ್ಲಿ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಸಹ ಹೈಕೋರ್ಟ್ ಎತ್ತಿಹಿಡಿದಿದೆ. ಮಠದ ಜನಪರ ಮತ್ತು ಧಾರ್ಮಿಕ ಸೇವಾ ಚಟುವಟಿಕೆಗಳಿಗಾಗಿ ಸರ್ಕಾರ ಜಮೀನು ಮಂಜೂರು ಮಾಡಿರುವುದನ್ನು ನ್ಯಾಯಪೀಠ ಸಮರ್ಥಿಸಿದೆ.

ವಿಚಾರಣೆ ವೇಳೆ ಪ್ರತಿವಾದಿಗಳು ಸಲ್ಲಿಸಿದ್ದ ಸಾಗುವಳಿ ಚೀಟಿ ಮತ್ತು ಇತರೆ ದಾಖಲೆಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಆಧಾರದ ಮೇಲೆ ಅವು ನಕಲಿ ದಾಖಲೆಗಳಾಗಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಿದೆ.

ಅಲ್ಲದೆ, ಅಮೂಲ್ಯವಾದ ಸರ್ಕಾರಿ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ತೆರೆಮರೆಯಲ್ಲಿ ಕಾರ್ಯನಿರ್ವಹಿಸಿರುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯ ಮೇಲೆ ಹಕ್ಕು ಸಾಧಿಸಲು ಸಂಚು ರೂಪಿಸಿರುವುದು ಸ್ಪಷ್ಟವಾಗಿದೆ ಎಂದು ಪೀಠ ಹೇಳಿದೆ.

“ವಂಚನೆಯ ಮೂಲಕ ಪಡೆಯುವ ಯಾವುದೇ ಆದೇಶ ಅಥವಾ ತೀರ್ಪು ಕಾನೂನಿನ ದೃಷ್ಟಿಯಲ್ಲಿ ಅಮಾನ್ಯವಾಗುತ್ತದೆ. ವಂಚನೆ ಮತ್ತು ನ್ಯಾಯ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ನ್ಯಾಯಾಲಯವನ್ನು ತಪ್ಪು ದಾರಿಗೆಳೆಯಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ ಪ್ರತಿವಾದಿಗಳ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ದಂಡ ವಿಧಿಸಿಲ್ಲ” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಅವರು ದಾಸೋಹ ಪ್ರಸಾದ ವಿತರಣಾ ಕೇಂದ್ರ ನಿರ್ಮಾಣಕ್ಕಾಗಿ ಸೂಕ್ತ ಜಮೀನು ಮಂಜೂರು ಮಾಡುವಂತೆ 2007 ಮತ್ತು 2008ರಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಗಣಿಸಿದ್ದ ಕಂದಾಯ ಇಲಾಖೆ, 2009ರ ಮೇ ತಿಂಗಳಲ್ಲಿ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಕದರನಹಳ್ಳಿ ಗ್ರಾಮದ ಸರ್ವೇ ನಂ. 41ರಲ್ಲಿನ 14.25 ಎಕರೆ ಗೋಮಾಳ ಜಮೀನನ್ನು ಮಠಕ್ಕೆ ಮಂಜೂರು ಮಾಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ಕದರನಹಳ್ಳಿಯ ನಿವಾಸಿಗಳಾದ ಕೆ.ಎಸ್. ಮಂಜೇಶ್ ಸೇರಿದಂತೆ ಐವರು, ತಾವು ಆ ಜಮೀನಿಗೆ ಸಾಗುವಳಿ ಚೀಟಿ ಹೊಂದಿರುವುದಾಗಿ ಹೇಳಿ ತಕರಾರು ಸಲ್ಲಿಸಿದ್ದರು. ಬಳಿಕ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ ಮಠದ ಪರ ತೀರ್ಪು ನೀಡಿತ್ತು.

ಆದರೆ ಆ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರ ಪರವಾಗಿ ಏಕಸದಸ್ಯ ಪೀಠ ಆದೇಶ ನೀಡಿದ್ದು, ಅವರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ನಮೂದಿಸಲು ತಹಶೀಲ್ದಾರ್‌ಗೆ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿದ್ದಗಂಗಾ ಮಠ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ವಿಭಾಗೀಯ ಪೀಠ ಅಂಗೀಕರಿಸಿ, ಮಠದ ಪರವಾಗಿ ತೀರ್ಪು ನೀಡಿದೆ.

ರಾಜ್ಯಾದ್ಯಂತ ಮಳೆ ಅಬ್ಬರ: ಕರಾವಳಿ-ಮಲೆನಾಡಿನಲ್ಲಿ ಹೈ ಅಲರ್ಟ್, ಗುಡುಗು ಸಹಿತ ಭಾರೀ ಮಳೆ

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಇಂದು (ಜೂನ್ 13) ರಾಜ್ಯಾದ್ಯಂತ ಮಿಶ್ರ ಹವಾಮಾನ ಕಂಡುಬರುವ ಸಾಧ್ಯತೆಯಿದ್ದು, ಮಧ್ಯಾಹ್ನದ ಬಳಿಕ ಹಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಸ್ತುತ ರಾಜ್ಯದಲ್ಲಿ ಸರಾಸರಿ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬೆಳಗಿನ ವೇಳೆಯಲ್ಲಿ ಭಾಗಶಃ ಬಿಸಿಲಿನ ವಾತಾವರಣ ಕಂಡುಬಂದಿದೆ. ಆದರೆ ಮಧ್ಯಾಹ್ನದ ನಂತರ ಹವಾಮಾನದಲ್ಲಿ ಬದಲಾವಣೆ ಉಂಟಾಗಿ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಶೇ.50ರಷ್ಟಿದೆ. ಹಗಲಿನ ವೇಳೆಯಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಲಿದ್ದು, ಉಷ್ಣಾಂಶದ ನಡುವೆಯೇ ದಿಢೀರ್ ಮಳೆ ಸುರಿಯುವ ಸಾಧ್ಯತೆಯಿದೆ.

ರಾತ್ರಿಯ ವೇಳೆಗೆ ಮಳೆಯ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದ್ದರೂ, ಬಹುತೇಕ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಸಾಧ್ಯತೆ ಇದ್ದು, ತಂಪಾದ ಗಾಳಿ ಬೀಸುವ ನಿರೀಕ್ಷೆಯಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಮುಂಗಾರು ಮಳೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಕರಾವಳಿ ತೀರ ಪ್ರದೇಶಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳುವ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ. ಈ ಭಾಗಗಳಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಹಾಗೂ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ದಾಖಲಾಗುವ ಸಾಧ್ಯತೆಯಿದೆ.

ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಸೇರಿದಂತೆ ಕರಾವಳಿ ಭಾಗಗಳು ಹಾಗೂ ಶಿರಸಿ, ಸಿದ್ದಾಪುರದಂತಹ ಘಟ್ಟ ಪ್ರದೇಶಗಳಲ್ಲಿ ದಿನಪೂರ್ತಿ ಮೋಡ ಕವಿದ ವಾತಾವರಣ ಇರಲಿದ್ದು, ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆಯಿದೆ. ಜಿಲ್ಲೆಯ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ಮಲೆನಾಡಿನಲ್ಲಿ ಮುಂಗಾರು ಅಬ್ಬರ

ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಮಲೆನಾಡು ಭಾಗಗಳಲ್ಲಿ ಮುಂಗಾರು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಈ ಪ್ರದೇಶಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ನದಿಗಳು ಮತ್ತು ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗತೊಡಗಿದೆ. ಈ ಭಾಗಗಳಲ್ಲಿ ಗರಿಷ್ಠ ತಾಪಮಾನ 26ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆಯಿರಲಿದ್ದು, ರಾತ್ರಿ ವೇಳೆಯಲ್ಲಿ ತಂಪಾದ ವಾತಾವರಣ ಮುಂದುವರಿಯಲಿದೆ.

ಭಾರೀ ಮಳೆ, ಬಿರುಗಾಳಿ ಮತ್ತು ಗುಡುಗು ಸಂಭವಿಸುವ ಸಾಧ್ಯತೆ ಇರುವುದರಿಂದ ಕರಾವಳಿ ಹಾಗೂ ಮಲೆನಾಡಿನ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತಗಳು ಸೂಚಿಸಿವೆ. ವಾಹನ ಸವಾರರು ಮಳೆಗಾಲದ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

ಜನಸಾಮಾನ್ಯರಿಗೆ ಮತ್ತೊಂದು ಹೊರೆ: ಅಕ್ಕಿ ಬೆಲೆಯಲ್ಲಿ ಭಾರಿ ಏರಿಕೆ – ಕೆಜಿಗೆ 10 ರಿಂದ 20 ರೂ. ಹೆಚ್ಚಳ

ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ತರಕಾರಿ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಇದೀಗ ಅಕ್ಕಿ ದರ ಏರಿಕೆ ಮತ್ತೊಂದು ಆರ್ಥಿಕ ಹೊಡೆತ ನೀಡಿದೆ. ನಿತ್ಯದ ಆಹಾರದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಅಕ್ಕಿಯ ಬೆಲೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಏರಿಕೆಯಾಗಿದ್ದು, ಗ್ರಾಹಕರ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬೀಳುವಂತಾಗಿದೆ.

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ತಳಿಯ ಅಕ್ಕಿಗಳ ಬೆಲೆ ಪ್ರತಿ ಕೆಜಿಗೆ 10ರಿಂದ 20 ರೂಪಾಯಿವರೆಗೆ ಏರಿಕೆಯಾಗಿದೆ. ಇದರಿಂದ ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದು, ದಿನನಿತ್ಯದ ಖರ್ಚು-ವೆಚ್ಚಗಳನ್ನು ನಿರ್ವಹಿಸುವುದು ಕಷ್ಟಕರವಾಗುತ್ತಿದೆ.

ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಸಮತೋಲನವೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಇದರ ಜೊತೆಗೆ ಕೇಂದ್ರ ಸರ್ಕಾರ ಅಕ್ಕಿ ರಫ್ತಿಗೆ ಮುಕ್ತ ಅವಕಾಶ ನೀಡಿರುವುದರಿಂದ ಉತ್ತಮ ಗುಣಮಟ್ಟದ ಅಕ್ಕಿಯ ಹೆಚ್ಚಿನ ಪ್ರಮಾಣ ವಿದೇಶಗಳಿಗೆ ಸಾಗುತ್ತಿದೆ. ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕಡಿಮೆಯಾಗಿದ್ದು, ಇದರ ನೇರ ಪರಿಣಾಮವಾಗಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಲೆಗಳು ಏರಿಕೆಯಾಗಿವೆ.

ಅಕ್ಕಿ ದರದಲ್ಲಿ ಉಂಟಾಗಿರುವ ಈ ದಿಢೀರ್ ಏರಿಕೆ ಗ್ರಾಹಕರ ಖರೀದಿ ಸಾಮರ್ಥ್ಯದ ಮೇಲೂ ಪರಿಣಾಮ ಬೀರಿದೆ. ಬೆಲೆ ಹೆಚ್ಚಳದ ಕಾರಣ ಅನೇಕರು ಅಕ್ಕಿ ಖರೀದಿಯ ಪ್ರಮಾಣವನ್ನು ಕಡಿಮೆ ಮಾಡುತ್ತಿರುವುದು ಕಂಡುಬರುತ್ತಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆಗಳ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವ್ಯಾಪಾರಿ ಅರುಣ್ ಪರಮೇಶ್, “ಅಕ್ಕಿ ದರ ಏರಿಕೆಯಿಂದ ಗ್ರಾಹಕರು ಖರೀದಿಯನ್ನು ಕಡಿಮೆ ಮಾಡಿದ್ದಾರೆ. ಇದರಿಂದ ವ್ಯಾಪಾರಿಗಳ ಮಾರಾಟದಲ್ಲೂ ಗಮನಾರ್ಹ ಕುಸಿತ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಪೂರೈಕೆ ಪರಿಸ್ಥಿತಿ ಸುಧಾರಿಸದಿದ್ದರೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಏಜೆಂಟ್ ದರ್ಬಾರ್ ಆರೋಪ: ರಾಮನಗರ RTO ಮೇಲೆ ಲೋಕಾಯುಕ್ತ ರೇಡ್!

ರಾಮನಗರ: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹಾಗೂ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಪಿ.ವಿ. ಸ್ನೇಹಾ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕಚೇರಿಯಲ್ಲಿನ ಎಲ್ಲಾ ಪ್ರಮುಖ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಹಲವು ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.

ನಿಯಮದ ಪ್ರಕಾರ 7 ದಿನಗಳಲ್ಲಿ ವಿತರಿಸಬೇಕಾಗಿದ್ದ ಲೈಸೆನ್ಸ್ ಮತ್ತು ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳು ತಿಂಗಳುಗಳ ಕಾಲ ವಿಳಂಬವಾಗಿ ಕಚೇರಿಯಲ್ಲೇ ಸಂಗ್ರಹವಾಗಿದ್ದವು ಎಂಬುದು ದಾಳಿ ವೇಳೆ ಪತ್ತೆಯಾಗಿದೆ. ಸಾರ್ವಜನಿಕರು ನೇರವಾಗಿ ಬಂದರೆ ಕೆಲಸ ವಿಳಂಬವಾಗುತ್ತಿದ್ದು, ಏಜೆಂಟ್‌ಗಳ ಮೂಲಕ ಹಣ ನೀಡಿದರೆ ಮಾತ್ರ ಕೆಲಸ ಮಾಡಲಾಗುತ್ತಿತ್ತು ಎಂಬ ದೂರುಗಳಿಗೂ ತಾಳೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಇದೇ ಕಚೇರಿಯಲ್ಲಿ ಏಜೆಂಟ್‌ಗಳ ನಡುವೆ ಕಮಿಷನ್ ವಿಚಾರಕ್ಕೆ ನಡೆದ ಗಲಾಟೆಯ ಕುರಿತು ಯಾವುದೇ ಪೊಲೀಸ್ ದೂರು ದಾಖಲಿಸದಿರುವ ವಿಷಯವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

ಕಳೆದ ಒಂದು ವರ್ಷದಲ್ಲಿ ಇದೇ ಕಚೇರಿಯ ಮೇಲೆ ಮೂರು ಬಾರಿ ಲೋಕಾಯುಕ್ತ ದಾಳಿ ನಡೆದಿದ್ದರೂ ಭ್ರಷ್ಟಾಚಾರದಲ್ಲಿ ಬದಲಾವಣೆ ಕಂಡುಬಂದಿಲ್ಲ ಎಂದು ಆರೋಪಗಳು ಕೇಳಿಬಂದಿವೆ.

ದಾಳಿಯ ವೇಳೆ ಲೋಕಾಯುಕ್ತ ಎಸ್‌ಪಿ ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲು ಆರ್‌ಟಿಒ ಅಧಿಕಾರಿ ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪ್ರಮುಖ ಕಡತಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.

ಕಾಂಗ್ರೆಸ್ ಆಡಳಿತದಲ್ಲಿ ಗದಗ ಜಿಲ್ಲೆ ಅತಿ ಹಿಂದುಳಿದಿದೆ: ರಾಜು ಕುರುಡಗಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಗೋವಿಂದರಾವ್ ವರದಿಯಲ್ಲಿ ಗದಗ ಜಿಲ್ಲೆಯನ್ನು ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಗುರುತಿಸಿರುವುದು ಜಿಲ್ಲೆಯ ಅಭಿವೃದ್ಧಿ ಸ್ಥಿತಿಗತಿಗಳನ್ನು ಬಯಲು ಮಾಡಿದ್ದು, ಇದಕ್ಕೆ ಕಾಂಗ್ರೆಸ್ ಆಡಳಿತ ಮತ್ತು ಮಾಜಿ ಸಚಿವ ಎಚ್.ಕೆ. ಪಾಟೀಲ ನೇರ ಹೊಣೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆರೋಪಿಸಿದರು.

ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರ ನಂಜುಂಡಪ್ಪ ವರದಿ ಬದಲಿಗೆ ಗೋವಿಂದರಾವ್ ವರದಿ ಆಧರಿಸಿ ಅನುದಾನ ಹಂಚಿಕೆ ಮಾಡಲು ಮುಂದಾಗಿದ್ದು, ಹೊಸ ವರದಿಯಲ್ಲಿ ಗದಗ ಜಿಲ್ಲೆ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿನ್ನಡೆ ಕಂಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಈ ಹಿಂದೆ ನಂಜುಂಡಪ್ಪ ವರದಿಯಲ್ಲಿ ಶಿರಹಟ್ಟಿ ಹಾಗೂ ರೋಣ ತಾಲೂಕುಗಳು ಮಾತ್ರ ಹಿಂದುಳಿದ ಪಟ್ಟಿಯಲ್ಲಿದ್ದವು. ಆದರೆ ಗೋವಿಂದರಾವ್ ವರದಿಯಲ್ಲಿ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳು ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಸೇರಿರುವುದು ಜಿಲ್ಲೆಯ ಅಭಿವೃದ್ಧಿಯ ನೈಜ ಚಿತ್ರಣವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ರೋಣ ಮತ್ತು ಮುಂಡರಗಿ ತಾಲೂಕುಗಳು ಆರೋಗ್ಯ, ಆದಾಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಹಿಂದುಳಿದಿವೆ. ನರಗುಂದ, ಲಕ್ಷ್ಮೇಶ್ವರ, ಶಿರಹಟ್ಟಿ, ಗಜೇಂದ್ರಗಡ ಹಾಗೂ ಗದಗ ತಾಲೂಕುಗಳೂ ವಿವಿಧ ಅಭಿವೃದ್ಧಿ ಮಾನದಂಡಗಳಲ್ಲಿ ಹಿನ್ನಡೆ ಕಂಡಿವೆ ಎಂದು ವರದಿ ಉಲ್ಲೇಖಿಸಿರುವುದಾಗಿ ತಿಳಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಸೂಚ್ಯಂಕ ಮತ್ತು ತಲಾ ಆದಾಯದ ಸ್ಥಿತಿಯನ್ನು ಗಮನಿಸಿದರೆ ಜನಪ್ರತಿನಿಧಿಗಳು ಹಾಗೂ ಆಡಳಿತ ವ್ಯವಸ್ಥೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ರಾಜು ಕುರುಡಗಿ ಆರೋಪಿಸಿದ್ದಾರೆ.

“ಗದಗ ಜಿಲ್ಲೆ ಕೈಗಾರಿಕೆ, ಶಿಕ್ಷಣ, ಆರೋಗ್ಯ, ಆದಾಯ ಹಾಗೂ ಸಾಮಾಜಿಕ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹಿಂದುಳಿದಿರುವುದು ವರದಿಯಿಂದ ಸಾಬೀತಾಗಿದೆ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಈ ವರದಿಗೆ ಉತ್ತರ ನೀಡಬೇಕು.”

ತೋಟಪ್ಪ (ರಾಜು) ಕುರುಡಗಿ

ಬಿಜೆಪಿ ಜಿಲ್ಲಾಧ್ಯಕ್ಷರು

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಕೊಡಿ: ಹಾಲಕೆರೆ ಗ್ರಾಮದಲ್ಲಿ ದೀರ್ಘದಂಡ ನಮಸ್ಕಾರ ಹೋರಾಟ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ಕ್ಷೇತ್ರದ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹಾಲಕೆರೆ ಗ್ರಾಮದಲ್ಲಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ವಿನೂತನ ಹೋರಾಟ ನಡೆಸಿದರು.

ಗ್ರಾಮದ ಬಸವೇಶ್ವರ ವೃತ್ತದಿಂದ ಶ್ರೀ ಅನ್ನದಾನೇಶ್ವರ ಮಠದವರೆಗೆ ನಡೆದ ದೀರ್ಘದಂಡ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಲಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಂದಾನಗೌಡ ಪಾಟೀಲ, ಜಿ.ಎಸ್. ಪಾಟೀಲರ ಹಿರಿತನ, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅವರು ತೋರಿದ ಬದ್ಧತೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.

ಜಿ.ಎಸ್. ಪಾಟೀಲರು ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಆಡಳಿತ ಅನುಭವ ಹೊಂದಿದ್ದಾರೆ. ಅವರ ಕಾರ್ಯದಕ್ಷತೆ ಮತ್ತು ಜನಪರ ಚಿಂತನೆಗೆ ಸಚಿವ ಸ್ಥಾನ ಸೂಕ್ತ ಗೌರವವಾಗಲಿದೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶಗೌಡ ಮುಲ್ಕಿಪಾಟೀಲ ಮಾತನಾಡಿ, ಜಿ.ಎಸ್. ಪಾಟೀಲರು ಯಾವುದೇ ಹಗರಣಗಳಿಲ್ಲದ ಸ್ವಚ್ಛ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದು, ಈ ಭಾಗಕ್ಕೆ ಸಚಿವ ಸ್ಥಾನ ಸಿಗದಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಈ ಬಾರಿ ಸಚಿವ ಸ್ಥಾನ ನೀಡದಿದ್ದರೆ ಕಾರ್ಯಕರ್ತರು ಹಾಗೂ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ ಮಾತನಾಡಿ, ಸಚಿವ ಸ್ಥಾನಕ್ಕಾಗಿ ಅಗತ್ಯವಿದ್ದರೆ ರೋಣ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ತುಮಕೂರಿನಿಂದ ಬೆಂಗಳೂರಿನ ಕೆಪಿಸಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಹೋರಾಟ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದರು.

ಆನಂದ ಹಳ್ಳಿ, ಬಸವರಾಜ ಪೂಜಾರ, ಅಪ್ಪಣ್ಣ ಹಳ್ಳಿ, ಪರಶುರಾಮ ತಲೇಖಾನ್, ಅಭಿಷೇಕ ಕುಸಮ್ಮನವರ, ಅಂದಪ್ಪ ಕುರಿ, ಬಸವರಾಜ ಹುಲ್ಯಾಳ, ಭೀಮಪ್ಪ ಖ್ಯಾರ, ಮುತ್ತಪ್ಪ ಪೂಜಾರ, ದುರುಗಪ್ಪ ತಲೇಖಾನ್, ಹುಲಗಪ್ಪ ಬಂಗಾಳಿಗಿಡದ, ಮುದಿಯಪ್ಪ ಪೂಜಾರ ಸೇರಿದಂತೆ ಅನೇಕರು ಭಾಗವಹಿಸಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

ಸೊಪ್ಪಯ್ಯ ಸೊಪ್ಪಿಹಿರೇಮಠ, ವೀರಣ್ಣ ಹಳ್ಳಿ, ಮಹೇಶ ಕುರಿ, ಹನಮಪ್ಪ ತೊಂಡಿಹಾಳ, ತಿಮ್ಮರೆಡ್ಡೆಪ್ಪ ಹೊಸಮನಿ, ಶರಣಪ್ಪ ಪೂಜಾರ, ಬಾಳಪ್ಪ ಬುರಡಿ, ಬಸಪ್ಪ ಮೂಲಿಮನಿ, ಮಹಾಂತೇಶ ಪ್ರಭಣ್ಣವರ, ಪ್ರವೀಣ ಬೈರಗೊಂಡ, ನವೀನ್ ಮಾದಿನೂರ, ಅಂದೇಶ ಶಿರೂರು, ವೀರಭದ್ರಪ್ಪ ನವಲಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಭಿಮಾನಿಗಳ ಹಕ್ಕೊತ್ತಾಯ

  • ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು
  • ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗಬೇಕು
  • ಹಿರಿತನ ಮತ್ತು ಸಂಘಟನಾ ಸೇವೆಗೆ ಗೌರವ ಸಿಗಬೇಕು
  • ಸಚಿವ ಸ್ಥಾನ ನೀಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು

“ಜಿ.ಎಸ್. ಪಾಟೀಲರು ಜಾತಿ, ಮತಗಳ ಗಡಿಯನ್ನು ಮೀರಿದ ಜನನಾಯಕರು. ಪಕ್ಷ ಸಂಘಟನೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಅಂತಹ ನಾಯಕನಿಗೆ ಸಚಿವ ಸ್ಥಾನ ನೀಡುವುದು ಕಾಂಗ್ರೆಸ್ ಪಕ್ಷದ ಕರ್ತವ್ಯವಾಗಿದೆ.”

ಅಂದಾನಗೌಡ ಪಾಟೀಲ

ಅಧ್ಯಕ್ಷರು, ಹಾಲಕೆರೆ ಪಿಕೆಪಿಎಸ್

AI ಅಶ್ಲೀಲ ವಿಡಿಯೋ ಬಳಸಿ ಯುವತಿಗೆ ಬ್ಲ್ಯಾಕ್‌ಮೇಲ್: ಇಬ್ಬರು ಬಂಧನ!

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಿಂದ ಯುವತಿಯೊಬ್ಬಳ ಫೋಟೋವನ್ನು ಪಡೆದು ಕೃತಕ ಅಶ್ಲೀಲ ವಿಡಿಯೋ ಸೃಷ್ಟಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಬಂಧಿತರನ್ನು ಅಕ್ಷಯ್ ಮತ್ತು ಸಾಹುಲ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳು AI ಹಾಗೂ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್‌ಗಳ ಸಹಾಯದಿಂದ 25 ವರ್ಷದ ಯುವತಿಯ ಚಿತ್ರವನ್ನು ದುರುಪಯೋಗಪಡಿಸಿಕೊಂಡು ಅಶ್ಲೀಲ ವಿಡಿಯೋ ತಯಾರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆ ಬಳಿಕ ಯುವತಿಯ ತಾಯಿಗೆ “ಯೋಗೇಶ್” ಎಂಬ ಹೆಸರಿನಲ್ಲಿ ನಿರಂತರವಾಗಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಬ್ಲ್ಯಾಕ್‌ಮೇಲ್‌ಗೆ ಒಳಗಾದ ಕುಟುಂಬ ಲಕ್ಕವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ತನಿಖೆಯ ವೇಳೆ ಆರೋಪಿಗಳ ನಿಜವಾದ ಗುರುತು ಪತ್ತೆಯಾಗಿ ಇಬ್ಬರನ್ನು ಬಂಧಿಸಲಾಗಿದೆ.

ಆರೋಪಿಗಳು ಹಣದ ಅಗತ್ಯದಿಂದ ಸಾಲ ತೀರಿಸಲು ಈ ಕೃತ್ಯಕ್ಕೆ ಕೈಹಾಕಿದ್ದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

error: Content is protected !!