Home Blog Page 6

ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಸ್ತಿಬಣದಲ್ಲಿನ ಉಮಚಗಿಯವರ ಓಣಿ, ಕೌಲಪೇಟೆ ಓಣಿಗಳಲ್ಲಿ ಕಳೆದ ಎಂಟು ದಿನಗಳಿಂದ ಕೊಳವೆ ಬಾವಿ ನೀರು ಪೂರೈಕೆ ಆಗಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ನೀರಿನ ಹಾಹಾಕಾರ ಉಂಟಾಗಿದ್ದು ಬೇಗನೇ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಆಗ್ರಹಿಸಿ ಗುರುವಾರ ನಿವಾಸಿಗಳು ಪುರಸಭೆ ವ್ಯವಸ್ಥಾಪಕಿ ಮಂಜುಳ ಹೂಗಾರ ಅವರಿಗೆ ಮನವಿ ಸಲ್ಲಿಸಿದರು.

ನದಿ ನೀರು ತಿಂಗಳಿಗೊಮ್ಮೆ ಪೂರೈಕೆ ಆಗುತ್ತಿದೆ. ಹೀಗಾಗಿ ಉಳಿದ ದಿನಗಳಲ್ಲಿ ಕೊಳವೆ ಬಾವಿ ನೀರೇ ನಮಗೆ ಗತಿ. ಆದರೆ ಎಂಟು ದಿನಗಳಿಂದ ಆ ನೀರೂ ಪೂರೈಕೆ ಆಗುತ್ತಿಲ್ಲ. ದನ-ಕರುಗಳಿಗೆ ನೀರು ಕುಡಿಸಲೂ ಸಹ ತೊಂದರೆ ಆಗಿದೆ. ಕಾರಣ ಬೇಗನೇ ನೀರು ಪೂರೈಸಬೇಕು. ಓಣಿಯಲ್ಲಿನ ಚರಂಡಿಗಳನ್ನು ಸ್ವಚ್ಛ ಮಾಡಿಲ್ಲ. ಹೀಗಾಗಿ ಓಣಿ ತುಂಬ ಹೊಲಸು ವಾಸನೆ ತುಂಬಿದೆ. ಆದಷ್ಟು ಬೇಗನೇ ಪುರಸಭೆ ಚರಂಡಿಗಳನ್ನು ಸ್ವಚ್ಛ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನೀರಾಲೋಟಿ, ಪರಮೇಶ ಹತ್ತಿಕಟ್ಟಿ, ಅಶೋಕ ಹೊಂಗಲ, ನಾಗರಾಜ ಅಂಬಲಿ, ಮಲ್ಲಪ್ಪ ಉಮಚಗಿ, ಅಕ್ಷಯ್ ಓದುನವರ ಮತ್ತಿತರರು ಇದ್ದರು.

`ಜನತಾ ದರ್ಶನ’ವನ್ನು ಸಮರ್ಪಕವಾಗಿ ಆಯೋಜಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜನತಾ ದರ್ಶನವು ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಮಹತ್ವದ ವೇದಿಕೆಯಾಗಿದ್ದು, ಯಾವುದೇ ತೊಂದರೆ ಉಂಟಾಗದಂತೆ ಪೂರ್ವಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಸಮರ್ಪಕವಾಗಿ, ಶಿಸ್ತಿನೊಂದಿಗೆ ಆಯೋಜಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅರ್ಜಿದಾರರಿಗೂ ಸರಿಯಾದ ಮಾರ್ಗದರ್ಶನ ನೀಡಬೇಕು ಹಾಗೂ ಅವರ ಅರ್ಜಿಗಳನ್ನು ತಕ್ಷಣ ದಾಖಲಿಸಿ ಸಂಬಂಧಿಸಿದ ಇಲಾಖೆಗೆ ರವಾನಿಸುವ ವ್ಯವಸ್ಥೆ ಇರಬೇಕು ಎಂದರು.

ಜನತಾ ದರ್ಶನ ಕಾರ್ಯಕ್ರಮವು ಜನರಲ್ಲಿ ಸರ್ಕಾರದ ಮೇಲೆ ವಿಶ್ವಾಸ ಹೆಚ್ಚಿಸುವ ಪ್ರಮುಖ ಅವಕಾಶವಾಗಿರುವುದರಿಂದ, ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಫೆ. 27ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಸಭೆಯಲ್ಲಿ ಜನತಾ ದರ್ಶನ ಕುರಿತು ವಿವಿಧ ಇಲಾಖೆಗಳಿಂದ ಸ್ವೀಕೃತವಾದ ಅರ್ಜಿಗಳ ವಿವರ, ಕೈಗೊಂಡ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ತಹಸೀಲ್ದಾರರು, ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಬಾಕಿ ಅರ್ಜಿಗಳ ವಿವರಗಳನ್ನು ಪೂರ್ವಭಾವಿಯಾಗಿ ಪರಿಶೀಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ನೀಡುವ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಸಮಯಬದ್ಧವಾಗಿ ಪೂರ್ಣಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಹಿರಿಯರಿಗೆ ಪೊಲೀಸ್ ಇಲಾಖೆ `ಆಸರೆ’

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಮಿಲ್ ಆವರಣದಲ್ಲಿ ತಾಲೂಕಾ ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ವಿಶೇಷ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಹಿರಿಯ ನಾಗರಿಕರಿಗೆ ಇರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿ, ಹಿರಿಯರು ಸಮಾಜದ ಆಧಾರ ಸ್ತಂಭಗಳಿದ್ದಂತೆ. ಅವರಿಗಿರುವ ಜ್ಞಾನ, ಅನುಭವ ಈಗಿನವರಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ವಯಸ್ಸಾಗುತ್ತಿದ್ದಂತೆ ಅವರನ್ನು ಮಕ್ಕಳು ಕಡೆಗಣಿಸುವ ಕಾರ್ಯಗಳು ಬಹಳಷ್ಟು ಕಡೆಗಳಲ್ಲಿ ಕಾಣುತ್ತಿರುವುದು ವಿಷಾದದ ಸಂಗತಿಯಾಗಿದೆ. ಅವರ ಕೊನೆಗಾಲದಲ್ಲಿಯೂ ಸಹ ಅವರ ಬೇಡಿಕೆಗಳನ್ನು ಈಡೇರಿಸುವವರು ಇಲ್ಲದಂತಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆಯ ಬಗ್ಗೆ ಸದಾ ಆತಂಕ ಇದ್ದೇ ಇರುತ್ತದೆ. ಕೆಲವು ಕಡೆ ಸಮಾಜ ಕಂಟಕರಿಂದ ಕಿರುಕುಳ, ಮತ್ತೆ ಕೆಲವು ಕಡೆ ಸ್ವತಃ ಕುಟುಂಬದವರಿಂದಲೇ ನಿರ್ಲಕ್ಷ್ಯ. ಇಂತಹ ಆತಂಕವನ್ನು ದೂರ ಮಾಡಲು ಮತ್ತು ಅವರಿಗೆ ಧೈರ್ಯ ತುಂಬಲು ಕರ್ನಾಟಕ ಪೊಲೀಸ್ ಇಲಾಖೆ `ಆಸರೆ’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಬಗ್ಗೆ ಹಿರಿಯ ನಾಗರಿಕರು ತಿಳಿದುಕೊಂಡು ಅದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಡಿ ಪೊಲೀಸರೇ ಅಂತಹ ಮನೆಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುವುದು, ತುರ್ತು ವೈದ್ಯಕೀಯ ಸೇವೆ, ಸರ್ಕಾರಿ ಸೇವೆ ಇತ್ಯಾದಿಗಳ ಬಗ್ಗೆ ನೆರವಾಗುತ್ತಾರೆ ಎಂದರು.

ಹಿರಿಯರ ಬಗ್ಗೆ ನಿರ್ಲಕ್ಷ್ಯ ತೋರುವ ಕುಟುಂಬದ ಸದಸ್ಯರಿಗೆ ಪೊಲೀಸರು ತಿಳುವಳಿಕೆ ನೀಡುವ ಕಾರ್ಯವನ್ನು ಸಹ ಮಾಡುತ್ತಾರೆ. ಅದಕ್ಕಾಗಿ ಹಿರಿಯರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ಇಲಾಖೆಯ ಆಸರೆ ಸದಾ ಇರುತ್ತದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ವಹಿಸಿದ್ದರು. ಸಿ.ಪಿ.ಐ ಬಿ.ವೈ. ನ್ಯಾಮಗೌಡ್ರ, ಚನ್ನಪ್ಪ ಕೋಲಕಾರ, ಚಂಬಣ್ಣ ಬಾಳಿಕಾಯಿ, ಐ.ಎಸ್. ಮಡಿವಾಳರ, ಎಸ್.ಸಿ. ಅಳಗವಾಡಿ, ಡಾ. ಪಿ.ಡಿ. ತೋಟದ, ದೇವಣ್ಣ ಬಳಿಗಾರ, ಕುಬೇರಪ್ಪ ಮಹಾಂತಶೆಟ್ಟರ, ಅಶೋಕ ಪಡ್ನೀಸ್, ಎಸ್.ಎಸ್. ಪವಾಡಶೆಟ್ಟರ, ಸೂಗಿರಪ್ಪ ವಾಲಿಶೆಟ್ಟರ, ಶಿವಣ್ಣ ಕುಮಸಿ, ತೋಟಪ್ಪ ಸೂರಣಗಿ, ನಿಂಗಪ್ಪ ಬನ್ನಿ, ನೀಲಪ್ಪ ಕರ್ಜೆಕಣ್ಣವರ ಮುಂತಾದವರು ಹಾಜರಿದ್ದರು.

ಧಾರವಾಡ ಪ್ರತಿಭಟನೆಗೆ ಫಲ: 56 ಸಾವಿರ ಹುದ್ದೆ ಭರ್ತಿಗೆ ಕ್ಯಾಬಿನೆಟ್ ಒಪ್ಪಿಗೆ

0

ಬೆಂಗಳೂರು: ಇತ್ತೀಚೆಗೆ ವಿದ್ಯಾಕಾಶಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ Dharwad Protest ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೇಮಕಾತಿಗೆ ಸಂಬಂಧಿಸಿದ ಸಾಧಕ–ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ನಡೆದಿದ್ದು, ಅಂತಿಮವಾಗಿ ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ನೇಮಕಾತಿ ನಡೆಸಲು ತೀರ್ಮಾನಿಸಲಾಗಿದೆ. ಇದರಂತೆ, ಕರ್ನಾಟಕದ ವಿವಿಧ ಇಲಾಖೆಗಳಲ್ಲಿರುವ ಸುಮಾರು 56 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದರಿಂದ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಸ್ಪಷ್ಟ ಫಲ ದೊರಕಿದಂತಾಗಿದೆ.

ರಾಜ್ಯ ಸರ್ಕಾರವು ಹಲವು ಸವಾಲುಗಳ ನಡುವೆಯೇ 15% ಎಸ್‌ಸಿ ಮೀಸಲಾತಿಗೆ ಒಳಮೀಸಲಾತಿ ನೀಡಿ ತಾತ್ಕಾಲಿಕ ಪರಿಹಾರವಾಗಿ ನೇಮಕಾತಿಗೆ ಮುಂದಾಗಿದ್ದು, ಎಸ್‌ಸಿ ಮೀಸಲಾತಿಯನ್ನು 17%ಕ್ಕೆ ಹೆಚ್ಚಿಸಿ ತಕ್ಷಣ ಜಾರಿಗೆ ತರುವುದು ಕಾನೂನು ಅಡೆತಡೆಗಳ ಕಾರಣ ಅಸಾಧ್ಯವಾಗಿದೆ. ರಾಜ್ಯಪಾಲರು ಒಳಮೀಸಲಾತಿ ಮಸೂದೆಗೆ ಒಪ್ಪಿಗೆ ನೀಡಿದ್ದರೂ, ಕಾನೂನು ಹೋರಾಟ ಮುಂದುವರಿಸಬೇಕಿರುವುದರಿಂದ ಹಳೆಯ ಸೂತ್ರದ ಅನ್ವಯವೇ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ವಿದ್ಯಾರ್ಥಿನಿಯರ ಪ್ರತಿಭಟನೆಗೆ ಪ್ರೇರಣೆ? ಪುತ್ತೂರು ಕಾಲೇಜು ಪ್ರಾಂಶುಪಾಲೆ ಸಸ್ಪೆಂಡ್

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ವಿದ್ಯಾರ್ಥಿನಿಯರ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಡಿಗ್ರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾರನ್ನು ಅಮಾನತು ಮಾಡಿ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ತಾಲೂಕು ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿರುವ ಕಾಲೇಜಿನಲ್ಲಿ ನಡೆಯುತ್ತಿರುವ ಆಸ್ಪತ್ರೆ ಕಾಮಗಾರಿಯಿಂದಾಗಿ ತರಗತಿಗಳಲ್ಲಿ ಧೂಳು ತುಂಬಿ ಶಿಕ್ಷಣಕ್ಕೆ ಅಡಚಣೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಕಾಲೇಜಿನ ಅವ್ಯವಸ್ಥೆ ಖಂಡಿಸಿ ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿಯರು ರಸ್ತೆ ತಡೆದು ಧರಣಿ ನಡೆಸಿದ್ದರು. ಈ ಪ್ರತಿಭಟನೆಗೆ ಪ್ರಾಂಶುಪಾಲೆ ಪ್ರೇರೇಪಿಸಿದ್ದಾರೆ ಹಾಗೂ ಕಾನೂನು ಉಲ್ಲಂಘನೆಯಾಗಿದೆ ಎಂಬ ಆರೋಪದಡಿ ಇಲಾಖೆ ಕ್ರಮ ಕೈಗೊಂಡಿದೆ.

ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸಮಸ್ಯೆಗಳನ್ನು ತನ್ನ ಗಮನಕ್ಕೆ ಏಕೆ ತರಲಿಲ್ಲ ಎಂದು ಪ್ರಾಂಶುಪಾಲೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಈ ವೇಳೆ ಇಬ್ಬರ ನಡುವೆ ವಾಗ್ವಾದವೂ ನಡೆದಿತ್ತು. ಈ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಮತ್ತಷ್ಟು ರಾಜಕೀಯ ಮತ್ತು ಆಡಳಿತಾತ್ಮಕ ತಿರುವು ನೀಡಿದೆ.

ಕಲಬೆರಕೆ ಹಾಲಿನ ವಿರುದ್ಧ ಕಠಿಣ ಕ್ರಮ: ಕೆಜಿಎಫ್‌ನಲ್ಲಿ 8 ಮಂದಿ ಬಂಧನ

0

ಕೋಲಾರ: ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಇದೀಗ ಕಲಬೆರಕೆ ಹಾಲಿನ ದಂಧೆ ತಲೆದೋರಿದ್ದು ಆತಂಕಕ್ಕೆ ಕಾರಣವಾಗಿದೆ.

ಮುಳಬಾಗಿಲು, ಕೆಜಿಎಫ್ ಹಾಗೂ ಶ್ರೀನಿವಾಸಪುರ ತಾಲೂಕುಗಳಲ್ಲಿ ಸುಮಾರು 32 ಸ್ಥಳಗಳಲ್ಲಿ ಕಲಬೆರಕೆ ಹಾಲು ಮಾರಾಟವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕೆಜಿಎಫ್‌ನಲ್ಲಿ ಎಸ್‌ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿದೆ.

ಕಲಬೆರಕೆ ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಆಧರಿಸಿ ಖಾಸಗಿ ಹಾಗೂ ಅನಧಿಕೃತ ಡೇರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

188 ಕೋಟಿ ರೂ. ಆದಾಯ ಕೊರತೆ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ

0

ಹುಬ್ಬಳ್ಳಿ: ಜನರಿಂದ ತಪ್ಪದೇ ವಿದ್ಯುತ್ ಬಿಲ್ ವಸೂಲಿ ಮಾಡುವ ಹೆಸ್ಕಾಂ, ಸೇವೆ ನೀಡುವಲ್ಲಿ ವಿಫಲವಾಗುತ್ತಿದೆ ಎಂಬ ಆರೋಪಗಳ ನಡುವೆ, ಸಂಸ್ಥೆಯ ಆರ್ಥಿಕ ಸಂಕಷ್ಟದ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

2024–25 ಸಾಲಿನಲ್ಲಿ 188 ಕೋಟಿ ರೂ. ಆದಾಯ ಕೊರತೆ ಎದುರಾಗಿದೆ ಎಂದು ಹೆಸ್ಕಾಂ ತಿಳಿಸಿದ್ದು, ಈ ನಷ್ಟವನ್ನು ಸರಿದೂಗಿಸಲು ಅವಕಾಶ ನೀಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಈ ಹಿನ್ನೆಲೆ ಹುಬ್ಬಳ್ಳಿಯ ಹೆಸ್ಕಾಂ ಕಚೇರಿಯಲ್ಲಿ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಏಳು ಜಿಲ್ಲೆಗಳಿಂದ ಬಂದ ಗ್ರಾಹಕರು, ರೈತರು ಮತ್ತು ಕೈಗಾರಿಕೋದ್ಯಮಿಗಳು ಹೆಸ್ಕಾಂ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮ ವೆಚ್ಚ, ಹಗರಣಗಳು, ಸರಿಯಾದ ಬಿಲ್ ವಸೂಲಿ ಆಗದಿರುವುದು ಹಾಗೂ ಸೇವಾ ವೈಫಲ್ಯವೇ ನಷ್ಟಕ್ಕೆ ಕಾರಣ ಎಂದು ಆರೋಪಿಸಿದ ಸಾರ್ವಜನಿಕರು, ಯಾವುದೇ ಕಾರಣಕ್ಕೂ ಈ ಹೊರೆಯನ್ನು ಗ್ರಾಹಕರ ಮೇಲೆ ಹಾಕಬಾರದು ಎಂದು ಒತ್ತಾಯಿಸಿದರು. ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲ, ಟ್ರಾನ್ಸ್‌ಫಾರ್ಮರ್ ದುರಸ್ತಿಯಲ್ಲಿ ವಿಳಂಬ ಸೇರಿದಂತೆ ಹಲವು ದೂರುಗಳು ಸಭೆಯಲ್ಲಿ ಕೇಳಿಬಂದವು. ಈ ವೇಳೆ ಮಾತನಾಡಿದ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್, ಇದು ವಿದ್ಯುತ್ ದರ ಹೆಚ್ಚಳಕ್ಕೆ ಸಂಬಂಧಿಸಿದ ಸಭೆಯಲ್ಲ ಎಂದು ಸ್ಪಷ್ಟಪಡಿಸಿ, ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಗ್ಯಾರಂಟಿಗಳು ಹೊರೆಯಾದರೂ ನಿಲ್ಲಿಸುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

0

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗುತ್ತಿವೆ ಎಂಬ ಚರ್ಚೆಗಳ ನಡುವೆಯೂ, ಯಾವುದೇ ಗ್ಯಾರಂಟಿಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಮತ್ತು ಯಾವುದೇ ರೀತಿಯ ಪರಿಷ್ಕರಣೆಯನ್ನೂ ಮಾಡಲಾಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಅನಾವಶ್ಯಕ ಊಹಾಪೋಹಗಳು ಹರಡಲಾಗುತ್ತಿವೆ. ಕೆಲವು ಪ್ರಕರಣಗಳಲ್ಲಿ ಮೃತಪಟ್ಟಿರುವವರ ಬ್ಯಾಂಕ್ ಖಾತೆಗಳಿಗೆ ಗ್ಯಾರಂಟಿ ಯೋಜನೆಯ ಹಣ ಜಮೆಯಾಗಿರುವುದು ಮತ್ತು ಪಡಿತರ ಅಕ್ಕಿಯನ್ನೂ ಸಹ ಮೃತರ ಹೆಸರಿನಲ್ಲಿ ಪಡೆಯಲಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯಲ್ಲಿ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ ಎಂದ ಅವರು, ಇತರ ಯೋಜನೆಗಳಲ್ಲಿ ದುರುಪಯೋಗವಾಗಿರುವುದು ಸತ್ಯವಾಗಿದ್ದು, ಮೃತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಪಡೆದಿರುವ ಪ್ರಕರಣಗಳಿವೆ ಎಂದು ಹೇಳಿದರು. ಈ ರೀತಿಯ ಅಕ್ರಮಗಳನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಮೃತಪಟ್ಟವರ ನಿಖರ ಲೆಕ್ಕ ಸಿಗದೆ ಇರುವುದೇ ದೊಡ್ಡ ಸವಾಲಾಗಿದೆ ಎಂದರು. ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎಂಬ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಶಿವಕುಮಾರ್ ಹೇಳಿದರು. ಸ್ಥಿತಿವಂತರು ಸ್ವಯಂಪ್ರೇರಿತವಾಗಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಬಾರದು ಎಂಬ ಸಲಹೆ ಕುರಿತು ಕೇಳಿದಾಗ, ಆ ವಿಷಯವನ್ನೂ ಪರಿಶೀಲಿಸಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.

ಗ್ಯಾರಂಟಿಗಳ ಭಾರ! 2.30 ಲಕ್ಷ ಮೃತರ ಖಾತೆಗೆ ಹಣ ಜಮೆ – ಸರ್ಕಾರಕ್ಕೆ ಆರ್ಥಿಕ ಸಂಕಷ್ಟ

0

ಬೆಂಗಳೂರು: ಪಂಚ ಗ್ಯಾರಂಟಿಗಳ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ ಆರ್ಥಿಕ ಒತ್ತಡಕ್ಕೆ ಸಿಲುಕಿರುವುದಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟವರ ಬ್ಯಾಂಕ್ ಖಾತೆಗಳಿಗೆ ಸಹ ಹಣ ಜಮೆಯಾಗಿರುವ ಅಂಶ ಬಹಿರಂಗವಾಗಿದ್ದು, ಒಟ್ಟು 2.30 ಲಕ್ಷ ಮೃತ ಫಲಾನುಭವಿಗಳ ಖಾತೆಗಳಿಗೆ ಸುಮಾರು 79 ಕೋಟಿ ರೂ. ಪಾವತಿಯಾಗಿರುವುದು ಬೆಳಕಿಗೆ ಬಂದಿದೆ. ಈ ಮೊತ್ತವನ್ನು ವಾಪಸ್ ಪಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಂಡಿದ್ದು, ಈಗಾಗಲೇ 2.30 ಕೋಟಿ ರೂ. ಮರುಪಡೆಯಲಾಗಿದೆ. ಈ ಬೆಳವಣಿಗೆಯ ನಡುವೆ ಗ್ಯಾರಂಟಿ ಯೋಜನೆಗಳ ಅನುಷ್ಠಾನವೇ ಸರ್ಕಾರಕ್ಕೆ ಭಾರವಾಗುತ್ತಿದೆ ಎಂಬ ಮಾತುಗಳು ಆಡಳಿತ ವಲಯದಿಂದಲೇ ಕೇಳಿಬರುತ್ತಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆ ಉಂಟಾಗಿದೆ ಎಂದು ಸ್ವಪಕ್ಷದ ಶಾಸಕರು ಹಾಗೂ ಜನಪ್ರತಿನಿಧಿಗಳೇ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಉಚಿತ ಹಾಗೂ ಗ್ಯಾರಂಟಿ ಯೋಜನೆಗಳು ದೇಶದ ಆರ್ಥಿಕತೆಗೆ ಮಾರಕವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿತ್ತು. ಇದಾದ ಬಳಿಕ ರಾಜ್ಯದ ಡಿಸಿಎಂ ಡಿ.ಕೆ. ಶಿವಕುಮಾರ್ ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಬರ್ಡನ್ ಆಗಿವೆ ಎಂದು ಹೇಳಿದ್ದು, ಸಿಎಂ ಸಿದ್ದರಾಮಯ್ಯ ವರ್ಷಕ್ಕೆ 52 ಸಾವಿರ ಕೋಟಿ ರೂ.ಕ್ಕಿಂತ ಹೆಚ್ಚು ಹಣ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ದಿನೇಶ್ ಗುಂಡೂರಾವ್ ಕೂಡ ಸರ್ಕಾರಕ್ಕೆ ಎಲ್ಲವೂ ಹೊರೆಯಾಗಿದೆ ಎಂಬ ಮಾತು ಆಡಿದ್ದು, ಗ್ಯಾರಂಟಿಗಳ ಆರ್ಥಿಕ ಪರಿಣಾಮವನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ.

ಆದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಅವುಗಳನ್ನು ಮುಂದುವರಿಸಲಾಗುವುದು ಎಂದು ಸಿಎಂ, ಡಿಸಿಎಂ ಹಾಗೂ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲರೂ ಸೇರಿಯೇ ಗ್ಯಾರಂಟಿ ಘೋಷಣೆ ಮಾಡಿದ್ದೇವೆ, ಈಗ ಅವು ಹೊರೆಯಾಗಿವೆ ಎಂದು ಭಾಸವಾಗಿರಬಹುದು ಎಂದಿದ್ದಾರೆ. ಇದೇ ವೇಳೆ ಗ್ಯಾರಂಟಿ ಯೋಜನೆಗಳು ಹೊರೆಯಲ್ಲ ಎಂದು ಸಚಿವ ಎಂಬಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.

ಇತ್ತ ಆಡಳಿತ ಪಕ್ಷದ ಈ ಹೇಳಿಕೆಗಳ ವಿರುದ್ಧ ಭಾಜಪ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಅಶ್ವಥ್ ನಾರಾಯಣ್, ಗ್ಯಾರಂಟಿಗಳ ಮೇಲೆಯೇ ಸರ್ಕಾರಕ್ಕೆ ನಂಬಿಕೆ ಇಲ್ಲದಂತಾಗಿದೆ, ಗೊಂದಲ ಮೂಡಿಸದೆ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಗೃಹಲಕ್ಷ್ಮಿ ಯೋಜನೆಯಲ್ಲಿ 5,000 ಕೋಟಿ ರೂ. ನಾಪತ್ತೆಯಾಗಿದೆ ಎಂದು ಆರೋಪಿಸಿದ್ದು, ಖಾಲಿ ಹುದ್ದೆಗಳಿದ್ದರೂ ಯುವ ನಿಧಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಬಿಜೆಪಿ ನಾಯಕ ಸಿಟಿ ರವಿ, ಜನ ಉದ್ಯೋಗ ಕೇಳುತ್ತಿದ್ದಾರೆ, ಭಿಕ್ಷೆ ಅಲ್ಲ ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಕೇಂದ್ರ ಸಚಿವ ಕುಮಾರಸ್ವಾಮಿ, ಗ್ಯಾರಂಟಿಗಳ ಭರವಸೆಯೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ನಾಡಿನ ಅಭಿವೃದ್ಧಿಗೆ ಪೂರಕವಾದ ಸ್ಪಷ್ಟ ಕಾರ್ಯಕ್ರಮಗಳು ಕಾಣುತ್ತಿಲ್ಲ. ಜನರಿಂದ ಸಂಗ್ರಹಿಸಿದ ತೆರಿಗೆ ಹಣದ ಸಮರ್ಪಕ ಬಳಕೆ ಆಗುತ್ತಿಲ್ಲ ಎಂಬುದೇ ಇಂದಿನ ಸ್ಥಿತಿಗೆ ಕಾರಣ ಎಂದು ಟೀಕಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಭವಿಷ್ಯ ಮತ್ತು ಸರ್ಕಾರದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿವೆ.

ಫ್ರಿಡ್ಜ್ ನೀರಿಗಿಂತ ಮಣ್ಣಿನ ಮಡಕೆ ನೀರೇ ಬೆಸ್ಟ್: ಬೇಸಿಗೆಯಲ್ಲಿ ಆರೋಗ್ಯ ಕಾಪಾಡುವ ಸರಳ ಉಪಾಯ!

0

ಹಿಂದಿನ ಕಾಲದಲ್ಲಿ ಮಣ್ಣಿನ ಮಡಕೆಯಲ್ಲೇ ನೀರನ್ನು ಸಂಗ್ರಹಿಸಿ ಕುಡಿಯುವ ಪದ್ಧತಿ ಸಾಮಾನ್ಯವಾಗಿತ್ತು. ಅಡುಗೆಗೆ, ಕುಡಿಯಲು ಹಾಗೂ ದೇಹವನ್ನು ತಂಪಾಗಿಸಲು ಮಣ್ಣಿನ ಮಡಕೆ ನೀರನ್ನೇ ಬಳಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫ್ರಿಡ್ಜ್ ಬಳಕೆ ಹೆಚ್ಚಾಗುತ್ತಿದ್ದಂತೆ ಮಣ್ಣಿನ ಮಡಕೆಗಳು ನಮ್ಮ ಬದುಕಿನಿಂದ ನಿಧಾನವಾಗಿ ಮಾಯವಾಗಿವೆ.

ಆರೋಗ್ಯ ತಜ್ಞರ ಅಭಿಪ್ರಾಯದಂತೆ, ಅತಿಯಾಗಿ ತಣ್ಣನೆಯ ಫ್ರಿಡ್ಜ್ ನೀರು ದೇಹಕ್ಕೆ ಎಲ್ಲ ಸಂದರ್ಭದಲ್ಲೂ ಸೂಕ್ತವಲ್ಲ. ಅದರ ಬದಲು ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರು ದೇಹಕ್ಕೆ ನೈಸರ್ಗಿಕವಾಗಿ ಹೊಂದಿಕೊಳ್ಳುವ ತಾಪಮಾನದಲ್ಲಿದ್ದು, ಆರೋಗ್ಯಕ್ಕೆ ಹೆಚ್ಚು ಲಾಭಕಾರಿ.

ಮಣ್ಣಿನ ಮಡಕೆ ಜೇಡಿಮಣ್ಣಿನಿಂದ ತಯಾರಾಗಿರುವುದರಿಂದ ಅದರಲ್ಲಿ ಸಂಗ್ರಹಿಸಿದ ನೀರು ಸ್ವಾಭಾವಿಕವಾಗಿ ತಂಪಾಗುತ್ತದೆ. ಜೇಡಿಮಣ್ಣಿನ ರಂಧ್ರಗಳ ಮೂಲಕ ನೀರು ನಿಧಾನವಾಗಿ ವಾಷ್ಪೀಕರಣಗೊಂಡು ತಾಪಮಾನ ಕಡಿಮೆಯಾಗುತ್ತದೆ. ಈ ಪ್ರಕ್ರಿಯೆಯಿಂದ ನೀರು ಅತಿಯಾಗಿ ತಣ್ಣಗಾಗದೆ ದೇಹಕ್ಕೆ ಅನುಕೂಲಕರವಾಗಿರುತ್ತದೆ. ಮಣ್ಣಿನ ಮಡಕೆ ನೀರಿನ pH ಮಟ್ಟವು ಸಮತೋಲನದಲ್ಲಿರುವುದರಿಂದ ದೇಹದಲ್ಲಿನ ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಗ್ಯಾಸ್ಟ್ರಿಕ್, ಆಮ್ಲೀಯತೆ, ಮಲಬದ್ಧತೆ ಹಾಗೂ ಇತರ ಹೊಟ್ಟೆ ಸಂಬಂಧಿತ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ.

ಇದಲ್ಲದೆ, ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರು ದೇಹದ ನಿರ್ವಿಷೀಕರಣಕ್ಕೆ ಸಹಕಾರಿ. ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹಾಕಲ್ಪಡುತ್ತವೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಣ್ಣಿನ ಮಡಕೆಯಲ್ಲಿರುವ ನೈಸರ್ಗಿಕ ಖನಿಜಗಳು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ ದೇಹವನ್ನು ಚುರುಕಾಗಿಡುತ್ತವೆ. ಬೇಸಿಗೆಯ ತೀವ್ರ ಬಿಸಿಲಿನ ಸಮಯದಲ್ಲಿ ಶಾಖದ ಹೊಡೆತದಿಂದ ರಕ್ಷಣೆ ನೀಡಲು ಮಣ್ಣಿನ ಮಡಕೆ ನೀರು ಅತ್ಯಂತ ಪರಿಣಾಮಕಾರಿಯಾಗಿದೆ. ಇದು ದೇಹವನ್ನು ತ್ವರಿತವಾಗಿ ಪುನರ್ಜಲೀಕರಣಗೊಳಿಸಿ ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ.

ಫ್ರಿಡ್ಜ್ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಗಂಟಲು ನೋವು, ಶೀತ, ಜ್ವರ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಮಣ್ಣಿನ ಮಡಕೆ ನೀರು ಕುಡಿಯುವುದರಿಂದ ಇಂತಹ ಸಮಸ್ಯೆಗಳ ಅಪಾಯ ಕಡಿಮೆ. ಜೊತೆಗೆ ಮಣ್ಣಿನ ಮಡಕೆಯ ನೀರಿಗೆ ಇರುವ ಸಹಜ ಮಣ್ಣಿನ ವಾಸನೆ ಮತ್ತು ಶುದ್ಧೀಕರಣ ಗುಣಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತವೆ. ಹೀಗಾಗಿ ಪಾರಂಪರಿಕ ಜ್ಞಾನವನ್ನು ಮರಳಿ ಅಳವಡಿಸಿಕೊಂಡು, ಈ ಬೇಸಿಗೆಯಲ್ಲಿ ಫ್ರಿಡ್ಜ್ ನೀರಿನ ಬದಲು ಮಣ್ಣಿನ ಮಡಕೆ ನೀರನ್ನು ಆಯ್ಕೆ ಮಾಡುವುದು ಆರೋಗ್ಯಕರ ಮತ್ತು ಸುರಕ್ಷಿತ ನಿರ್ಧಾರವಾಗುತ್ತದೆ.

error: Content is protected !!