Home Blog Page 2

ಭಾರತ–ದಕ್ಷಿಣ ಆಫ್ರಿಕಾ ಸೃಜನಶೀಲತೆಗೆ ಹೊಸ ಜೋಡಿ

0

ವಿಜಯಸಾಕ್ಷಿ ಸುದ್ದಿ, ನವದೆಹಲಿ: ಭಾರತ–ದಕ್ಷಿಣ ಆಫ್ರಿಕಾ ನಡುವಿನ ಸೃಜನಶೀಲ ಆರ್ಥಿಕ ಸಹಭಾಗಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (KSMCA) ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ ಸಂಗ್ರಹಾಲಯ, ತೀನ್ ಮೂರ್ತಿ ಭವನದಲ್ಲಿ ನಡೆದ ಸಭೆಯಲ್ಲಿ BRICS Women’s Business Alliance–South Africa Chapter (BRICS WBA-SA) ಹಾಗೂ BRICS Chamber of Commerce and Industry (BRICS CCI) ಜತೆ ತ್ರಿಪಕ್ಷೀಯ Memorandum of Coordination (MoC)ಗೆ ಸಹಿ ಮಾಡಲಾಯಿತು.

KSMCAಯ ಅಧ್ಯಕ್ಷ ಹಾಗೂ ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ ಅವರ ಮಾರ್ಗದರ್ಶನದಲ್ಲಿ ನಡೆದ ಒಡಂಬಡಿಕೆಗೆ KSMCA ವ್ಯವಸ್ಥಾಪಕ ನಿರ್ದೇಶಕ ಬಿ. ಆನಂದ್, BRICS CCI ಅಧ್ಯಕ್ಷ ಸಮೀಪ್ ಶಾಸ್ತ್ರಿ ಹಾಗೂ BRICS Women’s Business Alliance–South Africa ಕಾರ್ಯಕಾರಿ ಅಧ್ಯಕ್ಷೆ HRH ಪ್ರಿನ್ಸೆಸ್ ಲೆಬೊಗಾಂಗ್ ಜುಲು ಸಹಿ ಹಾಕಿದರು.

ಈ ಸಹಕಾರದ ಪ್ರಮುಖ ಉದ್ದೇಶ ಭಾರತ–ದಕ್ಷಿಣ ಆಫ್ರಿಕಾ BRICS Creative Economy Partnership ಅನ್ನು ಬಲಪಡಿಸುವುದಾಗಿದ್ದು, ‘Screen to Market™’ ಅನ್ನು ಪ್ರಮುಖ ಅನುಷ್ಠಾನ ಕಾರ್ಯಕ್ರಮವಾಗಿ ಗುರುತಿಸಲಾಗಿದೆ. ಸೃಜನಶೀಲ ಆರ್ಥಿಕತೆ, ಮಾಧ್ಯಮ, ಮನರಂಜನೆ, ಡಿಜಿಟಲ್ ಕಂಟೆಂಟ್, ಉದ್ಯಮಶೀಲತೆ, ನವೋದ್ಯಮ, ವ್ಯಾಪಾರ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಸಹಕಾರ ವೃದ್ಧಿಸಲು ಒಡಂಬಡಿಕೆ ನೆರವಾಗಲಿದೆ.

ಸೃಜನಶೀಲ ವೃತ್ತಿಪರರು, ಉದ್ಯಮಿಗಳು ಹಾಗೂ ಸಂಸ್ಥೆಗಳಿಗೆ ಎರಡೂ ದೇಶಗಳ ಮಾರುಕಟ್ಟೆಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಗಡಿ ದಾಟಿದ ಸಹಭಾಗಿತ್ವ, ಪ್ರತಿಭೆ ಹಾಗೂ ಜ್ಞಾನ ವಿನಿಮಯ, ಉದ್ಯಮ ಸಂಪರ್ಕ, ಮಾರುಕಟ್ಟೆ ಅಭಿವೃದ್ಧಿ ಮತ್ತು ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲಾಗುವುದು.

‘Screen to Market™’ ಮೂಲಕ ಆಲೋಚನೆ, ಪ್ರತಿಭೆ ಮತ್ತು ಸೃಜನಶೀಲ ಉದ್ಯಮಗಳನ್ನು ಹೊಸ ಮಾರುಕಟ್ಟೆಗಳು ಹಾಗೂ ಜಾಗತಿಕ ಅವಕಾಶಗಳೊಂದಿಗೆ ಸಂಪರ್ಕಿಸುವ ವೇದಿಕೆ ರೂಪಿಸುವ ಉದ್ದೇಶ ಹೊಂದಲಾಗಿದೆ. ಸೃಜನಶೀಲ ಕ್ಷೇತ್ರವನ್ನು ಕೇವಲ ವಿಷಯ ನಿರ್ಮಾಣಕ್ಕೆ ಸೀಮಿತಗೊಳಿಸದೆ, ವಾಣಿಜ್ಯೀಕರಣ, ಉದ್ಯಮ ಅಭಿವೃದ್ಧಿ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶದತ್ತ ಕೊಂಡೊಯ್ಯುವುದು ಇದರ ಆಶಯವಾಗಿದೆ.

ಕರ್ನಾಟಕ ಸರ್ಕಾರದ ಉದ್ಯಮವಾಗಿರುವ KSMCA ತನ್ನ ಮಾರ್ಕೆಟಿಂಗ್ ಕಮ್ಯುನಿಕೇಷನ್, ಜಾಹೀರಾತು ಹಾಗೂ ತಂತ್ರಾತ್ಮಕ ಸಂಪರ್ಕ ಕ್ಷೇತ್ರದ ಪರಿಣತಿಯನ್ನು ಬಳಸಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ವೇದಿಕೆಗಳು ಮತ್ತು ಸಹಭಾಗಿತ್ವಗಳನ್ನು ರೂಪಿಸಲು ಮುಂದಾಗಿದೆ. ಈ ತ್ರಿಪಕ್ಷೀಯ ಒಡಂಬಡಿಕೆಯು BRICS ವೇದಿಕೆಯ ಮೂಲಕ ಭಾರತ–ದಕ್ಷಿಣ ಆಫ್ರಿಕಾ ನಡುವಿನ ವ್ಯಾಪಾರಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳಿಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆ ಮೂಡಿಸಿದೆ.

ಸೃಜನಶೀಲತೆಗೆ ಜಾಗತಿಕ ಮಾರುಕಟ್ಟೆ

• ಸೃಜನಶೀಲ ಪ್ರತಿಭೆ ಹಾಗೂ ಆಲೋಚನೆಗಳಿಗೆ ಜಾಗತಿಕ ವೇದಿಕೆ

• ಭಾರತ–ದಕ್ಷಿಣ ಆಫ್ರಿಕಾ ನಡುವೆ ಪ್ರತಿಭೆ ಮತ್ತು ಜ್ಞಾನ ವಿನಿಮಯ

• ಸೃಜನಶೀಲ ಉದ್ಯಮಗಳಿಗೆ ಹೊಸ ಮಾರುಕಟ್ಟೆ ಅವಕಾಶ

• ಉದ್ಯಮ ಸಂಪರ್ಕ ಹಾಗೂ ಹೂಡಿಕೆ ಅವಕಾಶಗಳ ಅನ್ವೇಷಣೆ

• ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಕಂಟೆಂಟ್‌ಗೆ ಉತ್ತೇಜನ

• ಸೃಜನಶೀಲ ಕ್ಷೇತ್ರದ ವಾಣಿಜ್ಯೀಕರಣ ಹಾಗೂ ಉದ್ಯಮ ಅಭಿವೃದ್ಧಿಗೆ ಒತ್ತು

• ಸ್ಥಳೀಯ ಪ್ರತಿಭೆ ಮತ್ತು ಉದ್ಯಮಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸಂಪರ್ಕಿಸುವ ಪ್ರಯತ್ನ

ಸೆನ್ಸಾರ್‌ಗೆ ಹೊರಟ ‘ಮುತ್ತುರತ್ನ’ ಚಲನಚಿತ್ರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಜೈ ಹನುಮಾನ್ ಪ್ರೊಡಕ್ಷನ್‌ನ ‘ಮುತ್ತುರತ್ನ’ ಕನ್ನಡ ಚಲನಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಚಿತ್ರ ಸೆನ್ಸಾರ್‌ಗೆ ತೆರಳಿದೆ.

‘ಒಂದು ಪ್ರೇಮ ಗ್ರಂಥ’ ಎಂಬ ಉಪಶೀರ್ಷಿಕೆ ಹೊಂದಿರುವ ಈ ಚಿತ್ರವನ್ನು ಚಿತ್ರದುರ್ಗ ಹಾಗೂ ಹಿರಿಯೂರು ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಅಶ್ವ ನಾಯಕನಾಗಿ ಹಾಗೂ ಸಹನಾ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ. ತಿಪ್ಪೇಶ್ ಮುದ್ದಾಪುರ, ದೇವು, ಮಲ್ಲಿಕಾ, ರಕ್ಷಿತಾ, ಗೋವಿಂದೇಗೌಡ, ಸಂಜು ಬಸಯ್ಯ, ಗಿರೀಶ್, ಅಪೂರ್ವ ಪವನ್ (ಮಜಾ ಟಾಕೀಸ್), ಹುಲುಗಪ್ಪ ಟಿ., ಕೇಶವಮೂರ್ತಿ ಜಿಎಚ್ ಬಿಜಿಕೆರೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರದ ಛಾಯಾಗ್ರಹಣವನ್ನು ಗೋಪಿನಾಥ ಎಂ., ಸಂಕಲನವನ್ನು ಶಿವರಾಜ್ ಮೇಹು, ಸಾಹಸವನ್ನು ಚಂದ್ರು ಬಂಡೆ ಹಾಗೂ ನೃತ್ಯ ನಿರ್ದೇಶನವನ್ನು ಬಾಲು ರೆಕ್ಸ್ ರಾಜು ನಿರ್ವಹಿಸಿದ್ದಾರೆ. ಎಸ್.ವಿ. ಶಿವಕುಮಾರ್, ಡಿವಿಜಿ ಹಾಗೂ ತಿಪ್ಪೇಶ್ ಹಾಲುವರ್ತಿ ಸಾಹಿತ್ಯ ರಚಿಸಿದ್ದಾರೆ.

ಪ್ರಸನ್ನ ಭೋಜಶೆಟ್ಟರ್ ಸಂಗೀತ ಸಂಯೋಜಿಸಿದ್ದು, ಬಾಳು ಬೆಳಗುಂದಿ, ಐಶ್ವರ್ಯ ರಂಗರಾಜನ್, ಅನಿರುದ್ಧ ಶಾಸ್ತ್ರಿ, ಲಹರಿ ಮಹೇಶ್, ರವೀಂದ್ರ ಸೊರವಾವಿ, ಅನುರಾಮ್ ಹಾಗೂ ಪ್ರಸನ್ನ ಭೋಜಶೆಟ್ಟರ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಉತ್ತರ ಕರ್ನಾಟಕದ ‘ನಾ ಡ್ರೈವರ್ ಪೂಜಾ’ ಖ್ಯಾತಿಯ ಪೂಜಾ ಡಿಕೆಡಿ ಚಿತ್ರದಲ್ಲಿನ ಒಂದು ಹಾಡಿಗೆ ನೃತ್ಯ ಮಾಡಿದ್ದು, ಈ ಹಾಡು ಉತ್ತರ ಕರ್ನಾಟಕದ ಪ್ರೇಕ್ಷಕರಿಗೆ ವಿಶೇಷ ಕಿಕ್ ನೀಡಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಪ್ರಸಾಧನ ವಿಭಾಗವನ್ನು ಚಂದ್ರು ತಿರುಪತಿ ಹಾಗೂ ಎಂ.ಜಿ. ಕಲ್ಲೇಶ್ ನಿರ್ವಹಿಸಿದ್ದಾರೆ. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪತ್ರಿಕಾ ಸಂಪರ್ಕದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಹೇಶ್ ಜಗತಾಪ್ ಹಾಗೂ ಸತೀಶ್ ಚೆಕ್ಕಂದವಾಡಿ ಸಹ ನಿರ್ದೇಶಕರಾಗಿದ್ದಾರೆ. ರಂಜಿತ್, ಕುಶಾಲ್ ಹಾಗೂ ಅನೂಪ್ ನಿರ್ದೇಶನ ತಂಡದಲ್ಲಿದ್ದಾರೆ. ಸ್ಟಿಲ್ ಛಾಯಾಗ್ರಹಣವನ್ನು ರಘು ನಿರ್ವಹಿಸಿದ್ದಾರೆ.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿ ನಿರ್ದೇಶನದ ಹೊಣೆಯನ್ನು ತಿಪ್ಪೇಶ್ ಹಾಲುವರ್ತಿ ವಹಿಸಿಕೊಂಡಿದ್ದಾರೆ. ಹುಲುಗಪ್ಪ ಟಿ. ಹಾಗೂ ರುದ್ರಪ್ಪ ಪಿಎಚ್. ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕೇಶವಮೂರ್ತಿ ಜಿಎಚ್ ಬಿಜಿಕೆರೆ ಹಾಗೂ ಯಶೋದ ಬಾಯಿ ಸಹ ನಿರ್ಮಾಪಕರಾಗಿದ್ದಾರೆ.

ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಬಣ್ಣದ ಕನಸುಗಳು ಚಿತ್ರಕ್ಕೆ ಡಬ್ಬಿಂಗ್ ಮುಕ್ತಾಯ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಮಹದೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಬಣ್ಣದ ಕನಸುಗಳು’ ಕನ್ನಡ ಚಲನಚಿತ್ರದ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಚಿತ್ರದ ಟಾಕಿ ಪೋಷನ್, ಹಾಡುಗಳ ಚಿತ್ರೀಕರಣ, ಸಂಕಲನ ಹಾಗೂ ಡಬ್ಬಿಂಗ್ ಮುಕ್ತಾಯಗೊಂಡಿದ್ದು, ಸದ್ಯ ರಿರೆಕಾರ್ಡಿಂಗ್ ಕಾರ್ಯ ಮಾತ್ರ ಬಾಕಿಯಿದೆ. ಬಳಿಕ ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಕಳುಹಿಸಲಾಗುವುದು ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಓಂಪ್ರಕಾಶ್ ನಾಯಕ್ ತಿಳಿಸಿದ್ದಾರೆ.

ಚಿತ್ರದ ನಿರ್ದೇಶನದ ಜವಾಬ್ದಾರಿಯ ಜೊತೆಗೆ ಓಂಪ್ರಕಾಶ್ ನಾಯಕ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ರಚಿಸಿದ್ದಾರೆ. ಅಲ್ಲದೆ ಸಂಗೀತ ನಿರ್ದೇಶನ ಮತ್ತು ಸಂಕಲನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಮೂಲಕ ಪ್ರಥಮ ಬಾರಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರದಲ್ಲಿರುವ ಆರು ಹಾಡುಗಳು ಕೇಳುಗರನ್ನು ಸೆಳೆಯುವಂತಿವೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದಲ್ಲಿ ‘ಗ್ಯಾಂಗ್ ಗ್ಯಾಂಗ್ ನಮ್ದೊಂದು ಪೋಲಿ ಗ್ಯಾಂಗ್’ ಹಾಗೂ ‘ದುಡ್ಡು ದುಡ್ಡು ಇಲ್ಲಿ ಎಲ್ಲಾ ದುಡ್ಡು’ ಎಂಬ ಎರಡು ಫ್ರೆಂಡ್‌ಶಿಪ್ ಹಾಡುಗಳಿವೆ. ಎರಡು ಡ್ಯೂಯೆಟ್ ಹಾಡುಗಳ ಜೊತೆಗೆ ಒಂದು ಪ್ಯಾಥೋಸ್ ಸಾಂಗ್ ಕೂಡ ಚಿತ್ರದಲ್ಲಿದೆ.

‘ಬಣ್ಣದ ಕನಸುಗಳು’ ಚಿತ್ರದಲ್ಲಿ ಓಂಪ್ರಕಾಶ್ ನಾಯಕ್, ಅಫ್ಜಲ್ ಸೂಪರ್‌ಸ್ಟಾರ್, ಗಣೇಶ ಹಾಗೂ ಭಾಸ್ಕರ್ ಜಿ ನಾಲ್ವರು ನಾಯಕರಾಗಿ ನಟಿಸಿದ್ದಾರೆ. ಮಂಗಳ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದ ತಾರಾಗಣದಲ್ಲಿ ರಂಗಭೂಮಿಯ ರಾಜಣ್ಣ, ವೆಂಕಟೇಶ್, ರಾಮ್‌ಜಿ, ಚಂದ್ರಕಾಂತ್, ಮುತ್ತುರಾಜ್, ಅಭಿಸಾರಿಕ, ಲಲಿತಾ ಸೇರಿದಂತೆ ಹಲವು ಕಲಾವಿದರು ಹಾಗೂ ಸಹ ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರಕ್ಕೆ ರವಿ ಛಾಯಾಗ್ರಹಣ, ಮೋಹಿತ್ ಸಹ ನಿರ್ದೇಶನ, ರುದ್ರೇಶ್ ಮೇಕಪ್ ನಿರ್ವಹಿಸಿದ್ದಾರೆ. ಪತ್ರಿಕಾ ಸಂಪರ್ಕವನ್ನು ವಿ.ಎಂ.ಎಸ್. ಗೋಪಿ ವಹಿಸಿಕೊಂಡಿದ್ದಾರೆ.

ಚಿತ್ರದ ರಿರೆಕಾರ್ಡಿಂಗ್ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಸೆನ್ಸಾರ್ ಮಂಡಳಿಗೆ ಕಳುಹಿಸಿ, ಮುಂದಿನ ಹಂತದ ಬಿಡುಗಡೆ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ನಿರ್ದೇಶಕ ಓಂಪ್ರಕಾಶ್ ನಾಯಕ್ ತಿಳಿಸಿದ್ದಾರೆ.

ಗುಂಡಿಗಳ ರಸ್ತೆಗೆ ಮುಕ್ತಿ ಯಾವಾಗ?

0

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಗದಗ-ಬೆಟಗೇರಿ ನಗರೋತ್ಥಾನ ಹಂತ-3ರಡಿ ಹುಲಕೋಟಿ ಶಾಲೆಯ ಮುಂಭಾಗದಿಂದ ರಂಗಪ್ಪಜ್ಜನ ಮಠಕ್ಕೆ ಸಾಗುವ ರಸ್ತೆಯನ್ನು ಸುಮಾರು ಎಂಟು ವರ್ಷಗಳ ಹಿಂದೆ ಸಿ.ಸಿ. ರಸ್ತೆಯಾಗಿ ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ರಸ್ತೆಯ ಕೆಳಭಾಗದಲ್ಲಿ ಒಳಚರಂಡಿ ಪೈಪ್‌ಲೈನ್‌ಗಳು ಸುಮಾರು 15ರಿಂದ 20 ಅಡಿ ಆಳದಲ್ಲಿದ್ದು, ರಸ್ತೆ ನಿರ್ಮಾಣ ಸಂದರ್ಭದಲ್ಲಿ ಈ ಭಾಗಗಳಲ್ಲಿ ಸಮರ್ಪಕವಾಗಿ ಮೆಟ್ಲಿಂಗ್ ಮಾಡದಿರುವುದೇ ರಸ್ತೆ ಮಧ್ಯದಲ್ಲಿ ದೊಡ್ಡ ಗುಂಡಿಗಳು ಬೀಳಲು ಕಾರಣವಾಗಿದೆ ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಆರೋಪಿಸಿದ್ದಾರೆ.

ಈ ಮಾರ್ಗದಲ್ಲಿ ಹುಲಕೋಟಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ, ಐಟಿಐ ಕಾಲೇಜು, ಶರಣಬಸವೇಶ್ವರ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ಆರೋಗ್ಯ ಕೇಂದ್ರಗಳಿವೆ. ಪ್ರತಿನಿತ್ಯ ಶಾಲಾ ಬಸ್‌ಗಳು ಸೇರಿದಂತೆ ಸುಮಾರು 10ರಿಂದ 12 ವಾಹನಗಳು ಸಂಚರಿಸುತ್ತಿದ್ದು, ಗುಂಡಿಗಳಿಂದಾಗಿ ಲಘು ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ಶರಣಬಸವೇಶ್ವರ ನಗರ, ಬಸವನಗುಡಿ ಬಡಾವಣೆ, ಶಿವಾಜಿನಗರ, ಗಣೇಶನಗರ ಹಾಗೂ ಕಣಗಿನಹಾಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಇದಾಗಿದೆ.

ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯಳವತ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಯೋಜನಾ ನಿರ್ದೇಶಕರು ಹಾಗೂ ಗದಗ-ಬೆಟಗೇರಿ ನಗರಸಭೆಯ ಕಾರ್ಯಪಾಲಕ ಅಭಿಯಂತರರಿಗೆ ಛಾಯಾಚಿತ್ರ ಸಹಿತ ಮನವಿ ಸಲ್ಲಿಸಲಾಗಿದೆ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು, ಹಾಲಿ ಶಾಸಕರು ಹಾಗೂ ಜಿಲ್ಲಾ ಅಹವಾಲು ಸ್ವೀಕಾರ ಸಂದರ್ಭದಲ್ಲಿಯೂ ಮನವಿ ನೀಡಲಾಗಿದೆ. ಇತ್ತೀಚೆಗೆ ಬರ ವೀಕ್ಷಣೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳಿಗೂ ಈ ಕುರಿತು ಮಾಹಿತಿ ನೀಡಿ ಮನವಿ ಸಲ್ಲಿಸಲಾಗಿದೆ. ಆದರೂ ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸದಿರುವುದು ವಿಷಾದಕರ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಹುಲಕೋಟಿ ಪ್ರೌಢಶಾಲೆಯ ಮುಂಭಾಗದ ಗುಂಡಿಗಳು ಇದೀಗ ಬೃಹದಾಕಾರವಾಗಿ ಮಾರ್ಪಟ್ಟಿದ್ದು, ನಿತ್ಯ ಅಪಘಾತದ ಆತಂಕ ಎದುರಾಗಿದೆ. ಇತ್ತೀಚೆಗೆ ಗುಂಡಿಯಿಂದಾಗಿ ಮೋಟಾರ್ ಸೈಕಲ್ ಸವಾರನೊಬ್ಬ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ ಎಂದು ಯಳವತ್ತಿ ಹೇಳಿದ್ದಾರೆ.

ರಸ್ತೆ ಸಮಸ್ಯೆ ಮುಂದುವರಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ನಿತ್ಯ ಸಂಚರಿಸುವ ಸವಾರರು ಜಿಲ್ಲಾಡಳಿತ ಹಾಗೂ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಪೌರಾಯುಕ್ತರು ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಗದಗ-ಬೆಟಗೇರಿ ನಗರಸಭೆಯ ಸದಸ್ಯ ರಾಘವೇಂದ್ರ ಯಳವತ್ತಿ ಎಚ್ಚರಿಕೆ ನೀಡಿದ್ದಾರೆ.

ರಾಧಾಕೃಷ್ಣನ್‌ರ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿಗೆ ದಾರಿದೀ: ಬಸನಗೌಡ ಮಲ್ಲನಗೌಡ್ರ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಒಂದು ಕಾಲದಲ್ಲಿ ಗುರುಗಳ ಮಾತೇ ವಿದ್ಯಾರ್ಥಿಗಳಿಗೆ ದಾರಿದೀಪವಾಗಿತ್ತು. ಗುರು ತೋರಿದ ದಾರಿಯಲ್ಲಿ ನಡೆದು ಬದುಕು ಕಟ್ಟಿಕೊಳ್ಳುತ್ತಿದ್ದ ಶಿಷ್ಯರಿದ್ದರು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಹಾಗೂ ದೂರದರ್ಶನದ ಮೋಹ ವಿದ್ಯಾರ್ಥಿಗಳ ಅಮೂಲ್ಯ ಸಮಯವನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಆಕರ್ಷಣೆಯ ಜಗತ್ತಿನಿಂದ ದೂರವಿದ್ದು, ಪುಸ್ತಕ ಹಾಗೂ ವಿದ್ಯಾಭ್ಯಾಸದತ್ತ ಮನಸ್ಸು ಕೇಂದ್ರೀಕರಿಸಬೇಕು ಎಂದು ನಿವೃತ್ತ ಶಿಕ್ಷಕ ಬಸನಗೌಡ ಮಲ್ಲನಗೌಡ್ರ ಕರೆ ನೀಡಿದರು.

ಪಟ್ಟಣದ ಕೆಎಸ್‌ಎಸ್ ಪ್ರೌಢಶಾಲೆ ಹಾಗೂ ಕೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗುರು ಎಂಬುದು ಕೇವಲ ಒಂದು ಹುದ್ದೆಯಲ್ಲ, ಅದು ಬದುಕನ್ನು ರೂಪಿಸುವ ಶಕ್ತಿ ಎಂದ ಅವರು, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗುರು–ಶಿಷ್ಯರ ಸಂಬಂಧ ತಾಯಿ–ಮಗುವಿನ ಬಾಂಧವ್ಯದಷ್ಟೇ ಆತ್ಮೀಯವಾಗಿರಬೇಕು. ಶಿಕ್ಷಕರು ಪಠ್ಯಪುಸ್ತಕದ ಜ್ಞಾನ ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಶಿಸ್ತು, ಸಂಸ್ಕಾರ ಹಾಗೂ ಉತ್ತಮ ಚಿಂತನೆಗಳನ್ನು ಬೆಳೆಸಬೇಕು ಎಂದರು.

ಇಂದಿನ ಮಕ್ಕಳು ಮೊಬೈಲ್, ದೂರದರ್ಶನ ಹಾಗೂ ವಿವಿಧ ಆಕರ್ಷಣೆಗಳಿಗೆ ಒಳಗಾಗುತ್ತಿರುವುದು ಆತಂಕದ ಸಂಗತಿ. ದುಶ್ಚಟಗಳಿಂದ ದೂರವಿದ್ದು, ಸಮಯದ ಮೌಲ್ಯ ಅರಿತು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಇಂದು ಪುಸ್ತಕ ಹಿಡಿದ ಕೈಯೇ ನಾಳೆ ಸಮಾಜವನ್ನು ಮುನ್ನಡೆಸುವ ಕೈಯಾಗಬೇಕು. ಶಿಕ್ಷಕರ ಮಾರ್ಗದರ್ಶನವನ್ನು ಗೌರವದಿಂದ ಸ್ವೀಕರಿಸಿ, ಅವರ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಬದುಕಿಗೆ ನಿಜವಾದ ಅರ್ಥ ದೊರೆಯುತ್ತದೆ ಎಂದು ಹೇಳಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ವೃತ್ತಿಯ ಘನತೆಯನ್ನು ವಿಶ್ವದ ಮಟ್ಟಿಗೆ ಎತ್ತಿಹಿಡಿದ ಮಹಾನ್ ಚಿಂತಕರಾಗಿದ್ದರು. ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು, ತಮ್ಮ ಬದುಕಿನ ಮೂಲಕವೇ ಶಿಕ್ಷಕರು ಹೇಗಿರಬೇಕು ಹಾಗೂ ವಿದ್ಯಾರ್ಥಿಗಳು ಯಾವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟರು. ಅವರ ಆದರ್ಶಗಳು ಇಂದಿಗೂ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ದಾರಿತೋರಿಸುವ ಬೆಳಕಿನ ಕಿರಣಗಳಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶಿವಾನಂದ ಗೋಗೇರಿ ಮಾತನಾಡಿ, ಮಕ್ಕಳ ಭೌತಿಕ ಬೆಳವಣಿಗೆಯಷ್ಟೇ ಅವರ ಮಾನಸಿಕ ಹಾಗೂ ನೈತಿಕ ಬೆಳವಣಿಗೆಯೂ ಮುಖ್ಯವಾಗಿದೆ. ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವ ಸಾಧನವಲ್ಲ, ಅದು ಒಬ್ಬ ಉತ್ತಮ ಮನುಷ್ಯನನ್ನು ರೂಪಿಸುವ ಪ್ರಕ್ರಿಯೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ತತ್ವಶಾಸ್ತ್ರ ಅಡಿಗಲ್ಲಿನಂತಿದ್ದು, ಅದರ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟ ಮಹಾನ್ ಚಿಂತಕರಲ್ಲಿ ರಾಧಾಕೃಷ್ಣನ್ ಅವರು ಪ್ರಮುಖರು ಎಂದರು.

ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ಕತ್ತಲೆಗೆ ಬೆಳಕು ತೋರುವ ದೀಪಗಳಿದ್ದಂತೆ. ಅವರು ನೀಡುವ ಜ್ಞಾನ, ಸಂಸ್ಕಾರ ಹಾಗೂ ಮಾರ್ಗದರ್ಶನ ಜೀವನದುದ್ದಕ್ಕೂ ಶಿಷ್ಯನೊಂದಿಗೆ ಸಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಕರಿಂದ ಪಡೆದ ಜ್ಞಾನವನ್ನು ಪರೀಕ್ಷೆಯ ಅಂಕಗಳಿಗೆ ಮಾತ್ರ ಸೀಮಿತಗೊಳಿಸದೆ, ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಅಳವಡಿಸಿಕೊಂಡಾಗ ಶಿಕ್ಷಣದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ಎನ್. ಹಿರೇಮಠ, ಎಂ.ವಿ. ವೆಂಕಟಾಪುರ, ಆರ್.ಟಿ. ಅಕ್ಕಸಾಲಿ, ಪಿ.ಬಿ. ಉಪ್ಪಿನ, ಎಸ್.ಎಂ. ಉಣಕಲ್, ಭೋವಿ ಸಮಾಜದ ಅಧ್ಯಕ್ಷ ಮಣ್ಣೂವಡ್ಡರ, ಎ.ಎಂ. ಹುಡೆದ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿ–ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗುರು ಎಂಬುದು ಕೇವಲ ಒಂದು ಹುದ್ದೆಯಲ್ಲ; ಅದು ಬದುಕನ್ನು ರೂಪಿಸುವ ಶಕ್ತಿ. ಶಿಕ್ಷಕರು ಪಠ್ಯಪುಸ್ತಕದ ಜ್ಞಾನ ನೀಡುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಶಿಸ್ತು, ಸಂಸ್ಕಾರ ಹಾಗೂ ಉತ್

ಪುರಾಣದ ಶರ್ಮಿಷ್ಠೆ, ವರ್ತಮಾನದ ಹೆಣ್ಣಿನ ಧ್ವನಿ!

0

ಐತಿಹಾಸಿಕ ಗದುಗಿನ ಪಂಡಿತ ಭೀಮಸೇನ ಜೋಶಿ ರಂಗಮಂದಿರದಲ್ಲಿ ಸೆ.9ರ ರಾತ್ರಿ ನಡೆದ ‘ಶರ್ಮಿಷ್ಠೆ’ ನಾಟಕದ ಪ್ರದರ್ಶನ ಕೇವಲ ಪೌರಾಣಿಕ ಕಥೆಯ ರಂಗರೂಪವಾಗಿರಲಿಲ್ಲ. ಪುರಾಣದ ನೆರಳಿನಿಂದ ಹೊರಬಂದು ವರ್ತಮಾನದ ಹೆಣ್ಣಿನ ಅಂತರಂಗ, ನೋವು, ಪ್ರತಿರೋಧ, ಆತ್ಮಗೌರವ ಹಾಗೂ ಅಸ್ತಿತ್ವದ ಪ್ರಶ್ನೆಗಳನ್ನು ಪ್ರೇಕ್ಷಕರ ಮುಂದಿಟ್ಟ ವಿಶಿಷ್ಟ ರಂಗಾನುಭವವಾಗಿತ್ತು.

ಡಾ. ಬೇಲೂರು ರಘುನಂದನ್ ಅವರ ರಚನೆ, ಹಿರಿಯ ರಂಗಕಲಾವಿದೆ ಡಾ. ಉಮಾಶ್ರೀ ಅವರ ಅಪೂರ್ವ ಅಭಿನಯ ಹಾಗೂ ಚಿದಂಬರ ರಾವ್ ಜಂಬೆ ಅವರ ನಿರ್ದೇಶನ ‘ಶರ್ಮಿಷ್ಠೆ’ಯನ್ನು ಪರಿಣಾಮಕಾರಿ ರಂಗಪ್ರಯೋಗವನ್ನಾಗಿ ರೂಪಿಸಿವೆ. ಕಥೆಯ ಕೇಂದ್ರದಲ್ಲಿ ಶರ್ಮಿಷ್ಠೆಯಿದ್ದರೂ, ಆಕೆಯ ಸಂಘರ್ಷದ ಪ್ರತಿಧ್ವನಿ ಇಂದಿನ ಹೆಣ್ಣಿನ ಬದುಕಿನಲ್ಲೂ ಕೇಳಿಸುವಂತಿತ್ತು.

ಪುರಾಣದ ಪಾತ್ರವಲ್ಲ; ಸಂಘರ್ಷದ ಪ್ರತೀಕ

‘ಯಯಾತಿ’ ಪುರಾಣದಲ್ಲಿ ಶರ್ಮಿಷ್ಠೆ ಒಂದು ಪಾತ್ರ. ಆದರೆ ಇಲ್ಲಿ ಆಕೆ ಕೇವಲ ದಾಸಿಯಲ್ಲ. ಅಧಿಕಾರದ ಎದುರು ಅಸಹಾಯಕಳಾಗುವ ಮಹಿಳೆ, ಅವಮಾನವನ್ನು ಎದುರಿಸುವ ವ್ಯಕ್ತಿ, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುವ ಹೆಣ್ಣು ಹಾಗೂ ತಾಯ್ತನ–ಆತ್ಮಗೌರವದ ನಡುವೆ ಸಿಲುಕುವ ಮನಸ್ಸಿನ ಪ್ರತಿರೂಪ.

ಡಾ. ರಘುನಂದನ್ ಅವರು ಪುರಾಣವನ್ನು ಪುನರ್‌ಕಥನ ಮಾಡುವ ಬದಲು ಅದರೊಳಗಿನ ಅಧಿಕಾರ, ವರ್ಣಭೇದ, ಪಿತೃಪ್ರಧಾನತೆ, ಪ್ರತಿರೋಧ ಮತ್ತು ಮಾನವೀಯತೆಯ ಪ್ರಶ್ನೆಗಳನ್ನು ಸಮಕಾಲೀನ ದೃಷ್ಟಿಕೋನದಲ್ಲಿ ಕಟ್ಟಿಕೊಟ್ಟಿದ್ದಾರೆ.

ಏಕವ್ಯಕ್ತಿ ನಾಟಕ; ಆದರೆ ಏಕಾಂಗಿಯಲ್ಲ

ರಂಗದ ಮೇಲೆ ಒಬ್ಬರೇ ನಟಿಸಿದ್ದರೂ ಉಮಾಶ್ರೀ ಅವರ ಅಭಿನಯದಲ್ಲಿ ಶರ್ಮಿಷ್ಠೆ, ಯಯಾತಿ, ದೇವಯಾನಿ, ಕಚದೇವ, ರಾಜಮಾತೆ ಸೇರಿದಂತೆ ಹಲವು ಪಾತ್ರಗಳ ಭಾವಲೋಕ ಜೀವಂತವಾಯಿತು. ಧ್ವನಿಯ ಏರಿಳಿತ, ದೇಹಭಾಷೆ, ಕಣ್ಣುಗಳ ಚಲನೆ, ಮುಖಭಾವ ಹಾಗೂ ಮೌನದ ಮೂಲಕ ಪಾತ್ರಗಳನ್ನು ಬದಲಾಯಿಸುವ ಅವರ ಅಭಿನಯ ಪ್ರೇಕ್ಷಕರನ್ನು ಹಿಡಿದಿಟ್ಟಿತು.

ನೋವಿನ ದೃಶ್ಯದಲ್ಲಿ ಕಣ್ಣೀರಿಗಿಂತ ಮೊದಲು ಮೂಡುವ ಮೌನ, ಅವಮಾನ ಎದುರಾದಾಗ ದೇಹಭಾಷೆಯಲ್ಲಿ ವ್ಯಕ್ತವಾಗುವ ಪ್ರತಿರೋಧ ಹಾಗೂ ತಾಯ್ತನದ ನೋವಿನ ಸಂದರ್ಭದಲ್ಲಿ ಧ್ವನಿಯಲ್ಲಿನ ನಡುಕ—ಅವರ ಅಭಿನಯದ ಗಾಢತೆಯನ್ನು ತೆರೆದಿಟ್ಟವು.

ಪುರಾಣದೊಳಗೆ ವರ್ತಮಾನದ ಪ್ರಶ್ನೆಗಳು

ಹೆಣ್ಣಿನ ಮೇಲೆ ಅಧಿಕಾರ ಯಾರದು? ಅವಳ ದೇಹದ ಕುರಿತು ನಿರ್ಧರಿಸುವ ಹಕ್ಕು ಯಾರದು? ತಾಯ್ತನಕ್ಕಾಗಿ ಹೆಣ್ಣು ತನ್ನ ಅಸ್ತಿತ್ವ ಕಳೆದುಕೊಳ್ಳಬೇಕೇ? ಅವಮಾನವನ್ನು ಸಹಿಸುವುದೇ ಹೆಣ್ಣಿನ ವಿಧಿಯೇ? ಎಂಬ ಪ್ರಶ್ನೆಗಳು ನಾಟಕದುದ್ದಕ್ಕೂ ಪ್ರೇಕ್ಷಕರನ್ನು ಕಾಡುತ್ತವೆ.

ವಿಶೇಷವಾಗಿ ವಸ್ತ್ರಸಂಹಿತೆಯನ್ನು ಅಧಿಕಾರ ಮತ್ತು ಪಿತೃಪ್ರಧಾನ ನಿಯಂತ್ರಣದ ರೂಪಕವಾಗಿ ಬಳಸಿರುವುದು ಗಮನಾರ್ಹ. ಇಲ್ಲಿ ವಸ್ತ್ರ ಕೇವಲ ವೇಷವಲ್ಲ; ಸ್ವಾತಂತ್ರ್ಯವನ್ನು ನಿಯಂತ್ರಿಸುವ ಅಧಿಕಾರದ ಭಾಷೆಯಾಗಿದೆ.

ಸೋತವಳಲ್ಲ; ಸ್ವಾಭಿಮಾನದ ಶರ್ಮಿಷ್ಠೆ

ಶರ್ಮಿಷ್ಠೆ ಅವಮಾನ ಅನುಭವಿಸುತ್ತಾಳೆ, ದಾಸಿಯಾಗುತ್ತಾಳೆ, ತಾಯಿಯಾಗಿ ನೋವು ಅನುಭವಿಸುತ್ತಾಳೆ. ಆದರೆ ತನ್ನೊಳಗಿನ ಮನುಷ್ಯತ್ವ ಮತ್ತು ಆತ್ಮಗೌರವವನ್ನು ಉಳಿಸಿಕೊಳ್ಳುತ್ತಾಳೆ. ಇದೇ ಆಕೆಯ ನಿಜವಾದ ಗೆಲುವು.

‘ಒಡಲಾಳ’ದ ಸಾಕವ್ವನ ಪಾತ್ರದ ಮೂಲಕ ಛಾಪು ಮೂಡಿಸಿರುವ ಉಮಾಶ್ರೀ, ‘ಶರ್ಮಿಷ್ಠೆ’ಯಲ್ಲಿ ಹೊಸ ಹೆಣ್ಣಿನ ಅಸ್ತಿತ್ವವನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಅವರ ಅಭಿನಯ ಕೇವಲ ಪಾತ್ರಧಾರಣೆಯಲ್ಲ; ಪಾತ್ರದೊಳಗೆ ಪ್ರವೇಶಿಸಿ ಅದರ ಮನಸ್ಸಾಗಿ ಹೊರಬರುವ ಪರಕಾಯ ಪ್ರವೇಶದ ಅನುಭವ ನೀಡುತ್ತದೆ.

‘ಶರ್ಮಿಷ್ಠೆ’ ಮುಗಿದರೂ ಅದರ ಪ್ರಶ್ನೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ಮುಂದುವರಿಯುತ್ತವೆ. ಪೌರಾಣಿಕ ಕಥಾವಸ್ತುವನ್ನು ಆಧುನಿಕ ಚಿಂತನೆಯೊಂದಿಗೆ ಜೋಡಿಸಿದ ಈ ಪ್ರಯೋಗ ಕನ್ನಡ ರಂಗಭೂಮಿಯ ಸೃಜನಶೀಲ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ.

ನಾಟಕ ಮುಗಿದ ಮೇಲೂ ಮನಸ್ಸಿನಲ್ಲಿ ಉಳಿಯುವುದು ಯಯಾತಿಯ ತಾರುಣ್ಯವಲ್ಲ; ಶರ್ಮಿಷ್ಠೆಯ ಆತ್ಮಗೌರವ. ಅದೇ ನಾಟಕದ ಗೆಲುವು. ಅದೇ ಉಮಾಶ್ರೀ ಅವರ ಅಭಿನಯದ ಗೆಲುವು. ಶರ್ಮಿಷ್ಠೆ ರಂಗದ ಮೇಲೆ ಮುಗಿಯುವುದಿಲ್ಲ; ಪ್ರೇಕ್ಷಕರ ಮನಸ್ಸಿನಲ್ಲಿ ಮುಂದುವರಿಯುತ್ತಾಳೆ.

— ಅಮೀರನಾಯಕ (ಕಲ್ಲಿಗನೂರ)
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಲಕ್ಕುಂಡಿ

ಸತೀಶ್ ಜಾರಕಿಹೊಳಿ ವಿರುದ್ಧ ಇಡಿ ತನಿಖೆ: ಲೋಕೋಪಯೋಗಿ ಇಲಾಖೆಯ ಅಕ್ರಮ, ಲಂಚ ಸಂಗ್ರಹದ ದಾಖಲೆ ಪತ್ತೆ

0

ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದೀಗ ದಾಳಿ ಕುರಿತು ಇಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾದ ಹಲವು ಅಂಶಗಳ ಬಗ್ಗೆ ಮಾಹಿತಿ ನೀಡಿದೆ.

ಇಡಿ ಪ್ರಕಟಣೆ ಪ್ರಕಾರ, ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಸೇರಿದಂತೆ ಅವರ ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್ ಹಾಗೂ ಅಳಿಯ ವೈ.ಡಿ. ಮಂಜುನಾಥ್ ಸೇರಿದಂತೆ ಆಪ್ತರಿಗೆ ಸಂಬಂಧಿಸಿದ ಮನೆಗಳು ಮತ್ತು ಕಚೇರಿಗಳ ಮೇಲೆ ಶೋಧ ನಡೆಸಲಾಗಿದೆ. ಬೆಂಗಳೂರು, ಬೆಳಗಾವಿ, ಗೋಕಾಕ ಹಾಗೂ ಕೋಲ್ಕತ್ತಾದ ವಿವಿಧ ಸ್ಥಳಗಳು ಸೇರಿದಂತೆ ಒಟ್ಟು 21 ಕಡೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

ಶೋಧ ಕಾರ್ಯಾಚರಣೆಯಲ್ಲಿ ವಿದೇಶಿ ಹೂಡಿಕೆ ಹಾಗೂ ಗಡಿಯಾಚೆಗಿನ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ ಎನ್ನಲಾಗಿದೆ. ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.

ಇನ್ನು ದಾಳಿ ವೇಳೆ ಲೆಕ್ಕಕ್ಕೆ ತೋರಿಸದ ₹3.3 ಕೋಟಿ ನಗದು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ. ಇದರ ಜೊತೆಗೆ ಸುಮಾರು ₹15 ಲಕ್ಷ ಮೌಲ್ಯದ ಡಾಲರ್, ಯುರೋ ಸೇರಿದಂತೆ ವಿದೇಶಿ ಕರೆನ್ಸಿ ಕೂಡ ಪತ್ತೆಯಾಗಿದ್ದು, ಅದನ್ನೂ ಸೀಜ್ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗಣಿಗಾರಿಕೆ ಹೂಡಿಕೆ ಕುರಿತು ದಾಖಲೆ ಪರಿಶೀಲನೆ:

ಕಾಂಗೋದಲ್ಲಿರುವ ಗಣಿಗಾರಿಕೆ ಸಂಸ್ಥೆಗೆ ಸಂಬಂಧಿಸಿದ ಹೂಡಿಕೆ ಹಾಗೂ ಪಾಲುದಾರಿಕೆ ಕುರಿತು ದಾಖಲೆಗಳು ಪತ್ತೆಯಾಗಿವೆ ಎಂದು ಇಡಿ ತಿಳಿಸಿದೆ. ಚಿನ್ನದ ಗಣಿಗಾರಿಕೆಯಲ್ಲಿ ಶೇ.40ರಷ್ಟು ಪಾಲು ಹೊಂದಿರುವುದಕ್ಕೆ ಸಂಬಂಧಿಸಿದ ಮಾಹಿತಿಯೂ ಶೋಧದ ವೇಳೆ ಬೆಳಕಿಗೆ ಬಂದಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ವಿದೇಶಿ ಹೂಡಿಕೆಗಳು, ಹಣಕಾಸು ವಹಿವಾಟುಗಳು ಹಾಗೂ ಸಂಬಂಧಿತ ದಾಖಲೆಗಳ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಇಡಿ ತಿಳಿಸಿದೆ.

ಇನ್ನು ದಾಳಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳು ಹಾಗೂ ಗುತ್ತಿಗೆದಾರರಿಂದ ಲಂಚ ಸಂಗ್ರಹಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳು ಪತ್ತೆಯಾಗಿವೆ ಎಂದು ಇಡಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಈ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳಲ್ಲಿರುವ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಅವುಗಳ ಆಧಾರದ ಮೇಲೆ ಮುಂದಿನ ತನಿಖೆ ನಡೆಯಲಿದೆ ಎನ್ನಲಾಗಿದೆ.

ಇಡಿ ದಾಳಿಯ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲೂ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ವಿದೇಶಿ ಹೂಡಿಕೆ ಸೇರಿದಂತೆ ವಿವಿಧ ಹಣಕಾಸು ವ್ಯವಹಾರಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ ನಾಯಕರು ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಇಡಿ ವಿರುದ್ಧ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತೀಶ್ ಜಾರಕಿಹೊಳಿ ಅವರಿಗೆ ರಾಜಕೀಯವಾಗಿ ಬೆಳೆಯುವ ಅವಕಾಶವಿರುವ ಹಿನ್ನೆಲೆಯಲ್ಲಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂಬ ಆರೋಪವನ್ನೂ ಅವರ ಬೆಂಬಲಿಗರು ಮಾಡಿದ್ದಾರೆ. ಆದರೆ ಈ ಆರೋಪಗಳನ್ನು ಬಿಜೆಪಿ ಹಾಗೂ ಇಡಿ ತಳ್ಳಿಹಾಕಿರುವುದಾಗಿ ವರದಿಯಾಗಿದೆ.

ಇದೀಗ ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮ ಹಾಗೂ ಗುತ್ತಿಗೆದಾರರಿಂದ ಲಂಚ ಸಂಗ್ರಹಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ಇಡಿ ಅಧಿಕೃತವಾಗಿ ತಿಳಿಸಿರುವುದು ಪ್ರಕರಣಕ್ಕೆ ಮತ್ತೊಂದು ಆಯಾಮ ನೀಡಿದೆ.

ಒಟ್ಟಾರೆ, ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ 21 ಸ್ಥಳಗಳಲ್ಲಿ ನಡೆದ ಇಡಿ ಶೋಧ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ನಗದು, ವಿದೇಶಿ ಕರೆನ್ಸಿ, ವಿದೇಶಿ ಹೂಡಿಕೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳು ಪತ್ತೆಯಾಗಿರುವುದಾಗಿ ಇಡಿ ತಿಳಿಸಿದೆ. ಇದೀಗ ಈ ದಾಖಲೆಗಳ ಆಧಾರದ ಮೇಲೆ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

PLI ಅಸಮಾನತೆ, ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿಗೆ ಆಗ್ರಹಿಸಿ ಬ್ಯಾಂಕ್ ನೌಕರರ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸ್ಪಂದಿಸಿ ಗದಗ ನಗರದ ಗಾಂಧಿ ಸರ್ಕಲ್‌ನ ಕೆನರಾ ಬ್ಯಾಂಕ್‌ ಮುಂಭಾಗ ಶುಕ್ರವಾರ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಬಹುತೇಕ ಸಿಬ್ಬಂದಿ ಕರ್ತವ್ಯದಿಂದ ದೂರ ಉಳಿದು ಮುಷ್ಕರದಲ್ಲಿ ಪಾಲ್ಗೊಂಡರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೂನಿಯನ್ ಪ್ರತಿನಿಧಿಗಳು, ಪರಿಷ್ಕೃತ ಸಾಧನೆ ಆಧಾರಿತ ಪ್ರೋತ್ಸಾಹಧನ (PLI) ಯೋಜನೆಯಲ್ಲಿನ ಅಸಮಾನತೆಯನ್ನು ಖಂಡಿಸಿದರು. ಮಾತುಕತೆ ನಡೆಯುತ್ತಿರುವಾಗಲೇ ಯೋಜನೆ ಜಾರಿಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. 2023ರ ಡಿಸೆಂಬರ್‌ನಲ್ಲಿ ಒಪ್ಪಿಗೆಯಾಗಿದ್ದ ಐದು ದಿನಗಳ ಬ್ಯಾಂಕಿಂಗ್ ವಾರವನ್ನು ಇನ್ನೂ ಜಾರಿಗೊಳಿಸದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು.

ಮುಷ್ಕರದಿಂದ ಗ್ರಾಹಕರಿಗೆ ಉಂಟಾಗುವ ತೊಂದರೆಗೆ ವಿಷಾದ ವ್ಯಕ್ತಪಡಿಸಿದ ನಾಯಕರು, ATM, ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ ಎಂದು ತಿಳಿಸಿದರು. ಬೇಡಿಕೆ ಈಡೇರದಿದ್ದರೆ ಸೆ.28ರಿಂದ 30ರವರೆಗೆ ಮೂರು ದಿನಗಳ ಮುಷ್ಕರ ಹಾಗೂ ಅ.26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆ ನೀಡಿದರು.

ಮುಷ್ಕರದಲ್ಲಿ ಹನುಮೇಶ್ ಎಂ. ಗಂಗರಾಹುತಿ, ಎಚ್ಚರ ಸ್ವಾಮಿ ಎಸ್. ನಾಯಕ್, ಅಮರೇಶ್ವರ ಕೆ., ಸಿದ್ದಲಿಂಗಪ್ಪ ಉಮಾಚಗಿ, ಮಂಜುನಾಥ ದೊಡ್ಡಮನಿ, ಬಾಲಾಜಿ ಕುಲಕರ್ಣಿ, ಪ್ರೇಮ್, ಶಿವಾನಂದ, ಲೋಕೇಶ್, ಪಂಪಾಪತಿ, ವಿಶಾಲ್ ನಾಯಕ್, ಹರೀಶ್, ವಿಜಯಲಕ್ಷ್ಮೀ ಅಂಗಡಿ ಹಾಗೂ ಅಕ್ಷತಾ ಸೇರಿದಂತೆ ವಿವಿಧ ಬ್ಯಾಂಕ್ ಸಿಬ್ಬಂದಿ ಪಾಲ್ಗೊಂಡಿದ್ದರು.

ಗಣೇಶ ವಿಸರ್ಜನೆ ವೇಳೆ ಮದ್ಯ ಮಾರಾಟ, ಸಾಗಾಟ ನಿಷೇಧ

0

ವಿಜಯಸಾಕ್ಷಿ ಸುದ್ದಿ, ಗದಗ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗದಗ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳ 5, 7, 9, 11, 13, 15, 17, 19 ಹಾಗೂ 21ನೇ ದಿನದ ವಿಸರ್ಜನೆ ಸಂದರ್ಭದಲ್ಲಿ ವಿವಿಧ ಅವಧಿಯಲ್ಲಿ ಮದ್ಯ ಮಾರಾಟ ಮತ್ತು ಸಾಗಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ತಿಳಿಸಿದ್ದಾರೆ.

ಸೆ.18 ಬೆಳಗ್ಗೆ 6ರಿಂದ ಸೆ.19 ಬೆಳಗ್ಗೆ 6ರವರೆಗೆ, ಸೆ.20ರಿಂದ 21, ಸೆ.22ರಿಂದ 23 ಹಾಗೂ ಸೆ.24ರಿಂದ 25ರವರೆಗೆ ಜಿಲ್ಲೆಯಾದ್ಯಂತ ಮದ್ಯ ನಿಷೇಧ ಜಾರಿಯಲ್ಲಿರುತ್ತದೆ.

ಸೆ.26ರಿಂದ 27ರವರೆಗೆ ಮುಳಗುಂದ, ಲಕ್ಷ್ಮೇಶ್ವರ ಹಾಗೂ ನರೇಗಲ್ ಠಾಣಾ ವ್ಯಾಪ್ತಿಯಲ್ಲಿ, ಸೆ.28ರಿಂದ 29ರವರೆಗೆ ಲಕ್ಷ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ, ಸೆ.30ರಿಂದ ಅ.1ರವರೆಗೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮ ವ್ಯಾಪ್ತಿಯಲ್ಲಿ, ಅ.2ರಿಂದ 3ರವರೆಗೆ ಲಕ್ಷ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಅ.4ರಿಂದ 5ರವರೆಗೆ ಗದಗ–ಬೆಟಗೇರಿ ನಗರಸಭೆ ಮತ್ತು ಗಜೇಂದ್ರಗಡ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ–ಸಾಗಾಟ ನಿಷೇಧಿಸಲಾಗಿದೆ.

ನಿಷೇಧ ಅವಧಿಯಲ್ಲಿ ಸಂಬಂಧಿಸಿದ ಪ್ರದೇಶಗಳ ಬಾರ್, ಕ್ಲಬ್, ಬಿಯರ್ ಹಾಗೂ ಭಾರತೀಯ ತಯಾರಿಕಾ ಮದ್ಯದ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಪರಿಸ್ಥಿತಿಗೆ ಅನುಗುಣವಾಗಿ ಕರ್ನಾಟಕ ಅಬಕಾರಿ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಶಾಲಾ ಸಮಯಕ್ಕೆ ಬಸ್ ಕೊರತೆ : ಲಕ್ಕುಂಡಿಯಲ್ಲಿ ಬಸ್ ತಡೆದು ವಿದ್ಯಾರ್ಥಿಗಳು, ಪಾಲಕರ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಶಾಲಾ ಸಮಯಕ್ಕೆ ಸಮರ್ಪಕ ಬಸ್ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಕೂಲಿ ಕಾರ್ಮಿಕರು ಶುಕ್ರವಾರ ಲಕ್ಕುಂಡಿ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿರುದ್ಧ ಧಿಡೀರ್ ಪ್ರತಿಭಟನೆ ನಡೆಸಿದರು.

ಕಳೆದ ಒಂದು ತಿಂಗಳಿಂದ ಬೆಳಗ್ಗೆ ಶಾಲಾ–ಕಾಲೇಜು ಸಮಯಕ್ಕೆ ಸಮರ್ಪಕ ಬಸ್‌ಗಳು ಸಂಚರಿಸದ ಪರಿಣಾಮ ವಿದ್ಯಾರ್ಥಿಗಳು ಗಂಟೆಗಟ್ಟಲೆ ಬಸ್‌ಗಾಗಿ ಕಾಯುವಂತಾಗಿದೆ. ಇದರಿಂದ ಸಮಯಕ್ಕೆ ಶಾಲೆಗೆ ತೆರಳಲು ಸಾಧ್ಯವಾಗದೆ ಶಿಕ್ಷಕರು ತರಗತಿಯಿಂದ ಹೊರಗೆ ನಿಲ್ಲಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಪ್ರತಿಭಟನಾಕಾರರು ಬಸ್ ನಿಲ್ದಾಣದಲ್ಲಿ 10ಕ್ಕೂ ಹೆಚ್ಚು ಬಸ್‌ಗಳನ್ನು ತಡೆದು ಸಾರಿಗೆ ಸಂಸ್ಥೆ ವಿರುದ್ಧ ಘೋಷಣೆ ಕೂಗಿದರು. ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಗದಗ, ಹುಬ್ಬಳ್ಳಿ, ಕೊಪ್ಪಳ, ವಿಜಯನಗರ, ರಾಯಚೂರು, ಬೆಳಗಾವಿ, ಹಾವೇರಿ ಹಾಗೂ ಬಳ್ಳಾರಿ ಕಡೆಗೆ ತೆರಳುವ ಪ್ರಯಾಣಿಕರು ಪರದಾಡಿದರು.

ಬೆಳಗ್ಗೆ 8ರಿಂದ 10ರವರೆಗೆ ಗದಗ ಹಾಗೂ ಹುಬ್ಬಳ್ಳಿಗೆ ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಬಸ್ ಕೊರತೆಯಿಂದ ವಿದ್ಯಾರ್ಥಿಗಳು ನೂಕುನುಗ್ಗಲಿನ ನಡುವೆ ಸಂಚರಿಸುವಂತಾಗಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಗದಗ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿಯನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಬಗೆಹರಿಸದಿದ್ದರೆ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.

ಮುಂದಿನ ನಾಲ್ಕೈದು ದಿನಗಳಲ್ಲಿ ವಿದ್ಯಾರ್ಥಿಗಳ ಶಾಲಾ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ವಿಭಾಗೀಯ ವ್ಯವಸ್ಥಾಪಕರೊಂದಿಗೆ ಚರ್ಚಿಸುವುದಾಗಿ ಬಸ್ ನಿಲ್ದಾಣದ ಮೇಲ್ವಿಚಾರಕ ತಿಮ್ಮನಗೌಡ ಭರವಸೆ ನೀಡಿದರು. ಬೈಪಾಸ್‌ನಲ್ಲಿ ಸಂಚರಿಸುವ ಬಸ್‌ಗಳನ್ನು ಲಕ್ಕುಂಡಿ ನಿಲ್ದಾಣಕ್ಕೆ ಬರುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಎಂಟು ತಿಂಗಳ ಹಿಂದೆ ಇದೇ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಿದಾಗ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಒಂದು ವಾರ ಮಾತ್ರ ಬಸ್ ಓಡಿಸಿ ಮತ್ತೆ ಸ್ಥಗಿತಗೊಳಿಸಲಾಗಿದೆ. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ವಿದ್ಯಾರ್ಥಿಗಳೊಂದಿಗೆ ತೀವ್ರ ಪ್ರತಿಭಟನೆ ನಡೆಸಲಾಗುವುದು.”

— ಬಸವರಾಜ ಮುಳ್ಳಾಳ, ಬಸನಗೌಡ ಬಿರಾದಾರ, ವೀರೇಶ ಮುಸ್ಕಿನಭಾವಿ, ಪಾಲಕರು

ಪೊಲೀಸರ ವಿರುದ್ಧವೂ ಆಕ್ರೋಶ

ಪ್ರತಿಭಟನೆ ವೇಳೆ ಪೊಲೀಸರು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಿ ಪಾಲಕರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಕೆಲಕಾಲ ವಾಗ್ವಾದ, ಗದ್ದಲದ ವಾತಾವರಣ ನಿರ್ಮಾಣವಾಯಿತು.