HomeGadag Newsಕಾರ್ಗಿಲ್ ವೀರರಿಗೆ ಗೌರವ ನಮನ

ಕಾರ್ಗಿಲ್ ವೀರರಿಗೆ ಗೌರವ ನಮನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: “ದೇಶ ನನಗೆ ಏನು ಕೊಟ್ಟಿದೆ ಎಂದು ಕೇಳುವುದಕ್ಕಿಂತ, ದೇಶಕ್ಕಾಗಿ ನಾನು ಏನು ಕೊಡುಗೆ ನೀಡಿದ್ದೇನೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶಸೇವೆಗೆ ಸದಾ ಸಿದ್ಧರಾಗಿರುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು” ಎಂದು ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧ ಎ.ಬಿ. ಹೆಸರೂರ ಹೇಳಿದರು.

ಪಟ್ಟಣದ ಎಫ್.ಎಂ. ಡಬಾಲಿ ಪದವಿಪೂರ್ವ ಮಹಾವಿದ್ಯಾಲಯದ ರೇಂಜರ್ಸ್ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಹಾಗೂ ಪೋಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶ ಸೇವೆ ಸಲ್ಲಿಸುವ ಅವಕಾಶ ದೊರೆತದ್ದು ತಮ್ಮ ಬದುಕಿನ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ತಾಯಿಯಷ್ಟೇ ತಾಯ್ನಾಡೂ ಅಮೂಲ್ಯವಾಗಿದ್ದು, ಅದರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಇಂಡಿಯನ್ ಏರ್ ಫೋರ್ಸ್‌ನಲ್ಲಿ 20 ವರ್ಷ ಸೇವೆ ಸಲ್ಲಿಸಿದ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಡಿ.ಪಿ. ಪವಾರ್ ಮಾತನಾಡಿ, ತಾಯ್ನಾಡಿನ ಸೇವೆ ಸಲ್ಲಿಸಿದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆ ಮಾಡುವ ಅವಕಾಶ ದೊರೆತಿರುವುದು ತಮ್ಮ ಬದುಕಿನ ಸೌಭಾಗ್ಯವಾಗಿದೆ. ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಯೋಧರಾದ ಎ.ಬಿ. ಹೆಸರೂರ ಹಾಗೂ ಡಿ.ಪಿ. ಪವಾರ್ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದಿನಾಚರಣೆಯ ಅಂಗವಾಗಿ ಗಂಗವ್ವ ಬಸಪ್ಪ ಬಡ್ಡೆಪ್ಪನವರ ಅವರನ್ನೂ ಸನ್ಮಾನಿಸಲಾಯಿತು.

ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ ಡೊಳ್ಳಿನ, ಸ್ನೇಹಾ ಮುಳುಗುಂದ ಹಾಗೂ ಚೈತ್ರಾ ಲಮಾಣಿ ಕಾರ್ಗಿಲ್ ವಿಜಯ ದಿವಸದ ಮಹತ್ವ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಕುಟುಂಬ ಮೌಲ್ಯಗಳ ಅರಿವು ಮೂಡಿಸುವ ಉದ್ದೇಶದಿಂದ “ವಂಶವೃಕ್ಷ” ವಿಷಯದ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ವಿಜಯಲಕ್ಷ್ಮಿ ಡೊಳ್ಳಿನ ಪ್ರಥಮ, ಅಪ್ಸಾನಾ ತಹಸೀಲ್ದಾರ್ ದ್ವಿತೀಯ ಹಾಗೂ ಸುಮಯ್ಯ ಡಾಲಾಯತ್ ತೃತೀಯ ಸ್ಥಾನ ಪಡೆದರು. ಲಿಂಗಮ್ಮ ಮಾದರ ಮತ್ತು ಸಿಮ್ರಾನ್ ಒಂಟಿಯವರ ಸಮಾಧಾನಕರ ಬಹುಮಾನ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಮಾತನಾಡಿ, ದೇಶದ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಯುವಜನರಲ್ಲಿ ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವ ಬೆಳೆಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿವೆ ಎಂದರು.

ರೇಂಜರ್ಸ್ ಘಟಕದ ಲೀಡರ್ ಹಾಗೂ ಕಾರ್ಯಕ್ರಮದ ಆಯೋಜಕಿ ಸುಧಾ ಹುಚ್ಚಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಐದು ವರ್ಷಗಳಿಂದ ರೇಂಜರ್ಸ್ ಘಟಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಪ್ರಾಮಾಣಿಕತೆ, ಸೇವಾ ಮನೋಭಾವ ಮತ್ತು ರಾಷ್ಟ್ರಪ್ರೇಮ ಬೆಳೆಸುವ ನಿಟ್ಟಿನಲ್ಲಿ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎನ್. ಹನುಮರಡ್ಡಿ, ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ್, ವೈ.ಎಸ್. ಪಂಗಣ್ಣವರ, ಪಿ.ವಿ. ಹೊಸೂರು, ನೀಲಕಂಠ ಕಂಕನವಾಡಿ, ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ದೇಶಕ್ಕಾಗಿ ಸೇವೆ ಸಲ್ಲಿಸುವುದೇ ಪ್ರತಿಯೊಬ್ಬ ಭಾರತೀಯನ ಅತ್ಯುನ್ನತ ಕರ್ತವ್ಯ. ಯುವಕರು ರಾಷ್ಟ್ರಪ್ರೇಮವನ್ನು ಜೀವನದ ಮೌಲ್ಯವನ್ನಾಗಿ ಬೆಳೆಸಿಕೊಳ್ಳಬೇಕು.”

– ಎ.ಬಿ. ಹೆಸರೂರ, ಕಾರ್ಗಿಲ್ ಯುದ್ಧದ ಮಾಜಿ ಯೋಧ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img