ತವರು ಮನೆಯಲ್ಲಿ ಅಮ್ಮ, ಮದುವೆಯಾದ ಬಳಿಕ ಅತ್ತೆ… ಇಬ್ಬರ ಬಾಯಲ್ಲೂ ಒಂದೇ ಮಾತು – “ಒಳಕಲ್ಲಿನಲ್ಲಿ ರುಬ್ಬಿದ ಚಟ್ನಿಯ ರುಚಿಯೇ ಬೇರೆ… ಈಗಿನ ಮಿಕ್ಸಿ ಜಾರಿನ ಚಟ್ನಿಗೆ ಆ ಸೊಗಸೇ ಇಲ್ಲ!”
ಆಗ ಅವರ ಮಾತು ಕೇಳಿದಾಗ, “ಇದೇನು ಒಳಕಲ್ಲಿನ ಪುರಾಣ!” ಎಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಿದ್ದ ನಮ್ಮಂಥ ಹುಡುಗಿಯರು ಎಷ್ಟೋ ಜನ ಇರಬಹುದು.
ಕಾಲ ಬದಲಾಗುತ್ತಿದ್ದಂತೆ ಇಂದು ಒಳಕಲ್ಲು ಎಂದರೆ ಕೆಲವರು ಗೂಗಲ್ನಲ್ಲಿ ಹುಡುಕುವ ಪರಿಸ್ಥಿತಿ ಬಂದಿದೆ. ಆದರೆ ನಮ್ಮದು ಸಂಪ್ರದಾಯಿಕ ಕುಟುಂಬವಾಗಿದ್ದರಿಂದ ಮನೆಯಲ್ಲೊಂದು ಒಳಕಲ್ಲು ಇತ್ತು. ಅದನ್ನು ನಾನು ಎಂದಿಗೂ ಬಳಸಿರಲಿಲ್ಲ.
ಒಂದು ಭಾನುವಾರ ಇಡ್ಲಿಗೆ ಚಟ್ನಿ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದೆ. ಅಷ್ಟರಲ್ಲಿ ವಿದ್ಯುತ್ ಕೈಕೊಟ್ಟಿತು. ಕಾದು ಕಾದು ಬೇಸತ್ತು ಕೊನೆಗೆ ಒಳಕಲ್ಲಿನ ಮೊರೆ ಹೋದೆ.
ಕೊಬ್ಬರಿ, ಹುರಿದ ಕಡಲೆ, ಎಣ್ಣೆಯಲ್ಲಿ ಸ್ವಲ್ಪ ಹುರಿದ ಒಣ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನೆನೆಸಿದ ಹುಣಸೆಹಣ್ಣು, ಚಿಟಿಕೆ ಬೆಲ್ಲ, ಸ್ವಲ್ಪ ಜೀರಿಗೆ… ಎಲ್ಲವನ್ನೂ ಹಾಕಿ ನಿಧಾನವಾಗಿ ರುಬ್ಬಲು ಆರಂಭಿಸಿದೆ.
ಅಬ್ಬಾ… ಮೊದಲ ಸುತ್ತಿನಲ್ಲೇ ಘಮಘಮ ಪರಿಮಳ ಮೂಗಿಗೆ ತಟ್ಟಿತು. ಆ ಸುವಾಸನೆ ತಡೆಯಲಾಗದೆ ಸ್ವಲ್ಪ ಚಟ್ನಿಯನ್ನು ರುಚಿ ನೋಡಿದೆ. ನಿಜಕ್ಕೂ ಅದ್ಭುತ! ನನ್ನ ಪತಿಯೂ ರುಚಿಯ ವ್ಯತ್ಯಾಸವನ್ನು ಗಮನಿಸಿ ಆಶ್ಚರ್ಯಪಟ್ಟರು.
ಆಗ ಅಮ್ಮ ಮತ್ತು ಅತ್ತೆ ಹೇಳುತ್ತಿದ್ದ ಒಳಕಲ್ಲಿನ ಮಹತ್ವ ಎಷ್ಟು ಸತ್ಯ ಎಂಬುದು ಅರ್ಥವಾಯಿತು. ಅಷ್ಟೇ ಅಲ್ಲ, ಬೆಳಿಗ್ಗೆ ಮಾಡಿದ ಚಟ್ನಿ ಸಂಜೆವರೆಗೂ ಕೆಡದೆ ಅದೇ ರುಚಿಯನ್ನು ಉಳಿಸಿಕೊಂಡಿತ್ತು.
ಮಿಕ್ಸಿಯಲ್ಲಿ ಹೆಚ್ಚಿನ ವೇಗದಿಂದ ಉಂಟಾಗುವ ಉಷ್ಣತೆ ಮತ್ತು ಒಳಕಲ್ಲಿನಲ್ಲಿ ನಿಧಾನವಾಗಿ, ಸಹಜವಾಗಿ ರುಬ್ಬುವ ವಿಧಾನ – ಈ ಎರಡರ ನಡುವಿನ ವ್ಯತ್ಯಾಸವನ್ನು ಆ ದಿನ ಸ್ಪಷ್ಟವಾಗಿ ಅನುಭವಿಸಿದೆ.
ತಂತ್ರಜ್ಞಾನ ನಮ್ಮ ಕೆಲಸವನ್ನು ಸುಲಭ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಸಂಪ್ರದಾಯದ ಕೆಲವು ವಿಧಾನಗಳು ಆಹಾರದ ರುಚಿಯನ್ನು ಮಾತ್ರವಲ್ಲ, ಅದರ ಸಹಜ ಗುಣ ಮತ್ತು ಆರೋಗ್ಯವನ್ನೂ ಕಾಪಾಡುತ್ತವೆ ಎಂಬುದನ್ನು ಒಳಕಲ್ಲಿನಲ್ಲಿ ರುಬ್ಬಿದ ಆ ಚಟ್ನಿ ಮತ್ತೊಮ್ಮೆ ನೆನಪಿಸಿತು.
ಸಂಪ್ರದಾಯವನ್ನು ಉಳಿಸಿಕೊಂಡರೆ, ರುಚಿಯೂ ಉಳಿಯುತ್ತದೆ… ಆರೋಗ್ಯವೂ ಉಳಿಯುತ್ತದೆ.
– ಪವಿತ್ರ ಬಡಿಗೇರ್



