ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗದಗ ಜಿಲ್ಲಾ ಘಟಕದ ಆಶ್ರಯದಲ್ಲಿ ಆಗಸ್ಟ್ 1ರಂದು ಗದಗ ತಾಲೂಕಿನ ಹೊಸಳ್ಳಿ ಗ್ರಾಮದ ಜಗದ್ಗುರು ಬೂದೀಶ್ವರ ಮಠದ ಆವರಣದಲ್ಲಿ ನಡೆಯಲಿರುವ ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಮಕ್ಕಳ ಸಾಹಿತಿ, ಚಿಂತಕ ಡಾ. ನಿಂಗು ಸೊಲಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಶನಿವಾರ ಸಂಜೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನಿಯೋಗವು ಮುಂಡರಗಿಯಲ್ಲಿರುವ ಡಾ. ನಿಂಗು ಸೊಲಗಿ ಅವರ ನಿವಾಸಕ್ಕೆ ಭೇಟಿ ನೀಡಿ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಧಿಕೃತ ಆಹ್ವಾನ ಪತ್ರ ನೀಡಿ ಗೌರವಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗಾರ, ಬಸವಾದಿ ಶರಣರ ವಿಚಾರಧಾರೆ ಹಾಗೂ ನೈತಿಕ ಮೌಲ್ಯಗಳನ್ನು ಬಾಲಮನಸ್ಸುಗಳಲ್ಲಿ ಬಿತ್ತುವ ಪವಿತ್ರ ಕಾರ್ಯವನ್ನು ಮಕ್ಕಳ ಶರಣ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಬಳಗಾನೂರಿನಲ್ಲಿ ಮೊದಲ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಬಳಿಕ ಇದೀಗ ಎರಡನೇ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದರು.
ಡಾ. ನಿಂಗು ಸೊಲಗಿ ಅವರು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕ, ಸಾಹಿತಿ, ಸಂಶೋಧಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದು, ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು ಹಾಗೂ ಸಂಪಾದಿತ ಕೃತಿಗಳನ್ನು ನೀಡಿದ್ದಾರೆ. ಮಕ್ಕಳ ರಂಗಭೂಮಿ ಕುರಿತು ಸಂಶೋಧನೆ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. 2014ರಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ ಎಂದು ವಿವರಿಸಿದರು.
ಸರ್ವಾಧ್ಯಕ್ಷರ ಆಹ್ವಾನ ಸ್ವೀಕರಿಸಿದ ಡಾ. ನಿಂಗು ಸೊಲಗಿ ಮಾತನಾಡಿ, ಕಳೆದ 33 ವರ್ಷಗಳಿಂದ ಮುಂಡರಗಿಯ ಜನರ ಪ್ರೀತಿ, ವಿಶ್ವಾಸ ಹಾಗೂ ಬೆಂಬಲವೇ ತಮ್ಮ ಸಾಹಿತ್ಯಿಕ ಪಯಣಕ್ಕೆ ಪ್ರೇರಣೆಯಾಗಿದೆ. ಸಮಾಜ ನೀಡಿದ ಗೌರವವನ್ನು ಸಮಾಜಕ್ಕೇ ಅರ್ಪಿಸುವ ಮನೋಭಾವದಿಂದ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಅತ್ಯಂತ ವಿನಯದಿಂದ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದರು.
ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಬೂದಪ್ಪ ಅಂಗಡಿ, ಕೋಶಾಧ್ಯಕ್ಷ ಡಿ.ಎಸ್. ಬಾಪುರೆ, ಗಜೇಂದ್ರಗಡ ತಾಲೂಕು ಅಧ್ಯಕ್ಷ ಬಸವರಾಜ ಕೊಟಗಿ, ಗದಗ ಗ್ರಾಮೀಣ ಘಟಕದ ಅಧ್ಯಕ್ಷ ಎಸ್.ಎಂ. ಮರಿಗೌಡ್ರ, ವೀರೇಶ ಬದಾಮಿ, ಕಳಕಯ್ಯ ಸಾಲಿಮಠ, ಬಿ.ಕೆ. ನಿಂಬಣಗೌಡ್ರ, ಪ್ರಸನ್ನ ಕೊಟಗಿ, ಕಾಶಿನಾಥ ಶಿರಬಡಗಿ, ಎಂ.ಜಿ. ಗಚ್ಚಣ್ಣವರ, ಎಸ್.ಎಂ. ಹೊಸಮಠ, ಎಸ್.ಸಿ. ಚಕ್ಕಡಿಮಠ, ಮಂಜುನಾಥ ತೆಗ್ಗಿನಮನಿ, ಮಂಜುನಾಥ ಇಟಗಿ, ಎಸ್.ಸಿ. ಹರ್ತಿ, ಎನ್.ಎಸ್. ಶೀರನಹಳ್ಳಿ, ಮಂಜುನಾಥ ಮುಧೋಳ, ಎಂ.ಎಸ್. ಶೀರನಹಳ್ಳಿ, ಸುರೇಶ್ ಭಾವಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಸಮಾಜವೇ ನನಗೆ ಶಿಕ್ಷಣ ನೀಡಿದೆ, ಸಮಾಜವೇ ನನ್ನನ್ನು ಬೆಳೆಸಿದೆ. ಆದ್ದರಿಂದ ನನ್ನ ಜೀವನ ಮತ್ತು ಸಾಹಿತ್ಯದ ಸೇವೆ ಸಮಾಜಕ್ಕಾಗಿಯೇ ಮೀಸಲು.”
– ಡಾ. ನಿಂಗು ಸೊಲಗಿ, ಸರ್ವಾಧ್ಯಕ್ಷರು, ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನ



