Home Blog Page 3106

ಮನೆ ಮಾಡಿದ ದಸರಾ ಸಂಭ್ರಮ, ಗದಗ ಮಾರ್ಕೆಟ್ ಫುಲ್ ರಶ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣು ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಜನಜಾತ್ರೆಯೇ ನೆರೆದಿತ್ತು.

ಗದಗ ನಗರದ ತರಕಾರಿ ಮಾರ್ಕೆಟ್, ಗ್ರೇನ್ ಮಾರ್ಕೆಟ್, ಬಟ್ಟೆ ಹಾಗೂ ಹೂವಿನ ಮಾರ್ಕೆಟ್ ಜನಜಂಗುಳಿಯಿಂದ ಕೂಡಿತ್ತು. ಪೂಜಾ ಸಾಮಗ್ರಿ, ಹೂವು, ಹಣ್ಣು, ಕಿರಾಣಿ ಸಾಮಗ್ರಿಗಳ ಖರೀದಿಗೆ ಜನರು ಮನೆಯಿಂದ ಮಾರ್ಕೆಟ್ ಗೆ ಮುಗಿಬಿದ್ದಿದ್ದಾರೆ.

ಇನ್ನು ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ದುಬಾರಿಯಾಗಿತ್ತು. ಸೇಬು 100 ರೂ. ಇದ್ದಿದ್ದು ಇಂದು 200 ರೂ.ಗೆ ತಲುಪಿತ್ತು. ಹೂವು ಮತ್ತು ಪೂಜಾ ಸಾಮಗ್ರಿಗಳೂ ಇಂದು ದುಬಾರಿಯಾಗಿದ್ವು.

ದುಬಾರಿಯಾದರೂ ಹಬ್ಬ ಆಚರಿಸುವ ತವಕದಲ್ಲಿ ಜನ ಸಾಮಗ್ರಿಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ಆದರೆ ಕೊರೊನಾ ಮುಂಜಾಗ್ರತಾ ಕ್ರಮಗಳ ನಿಯಮಗಳನ್ನು ಯಾರು ಅನುಸರಿಸಲಿಲ್ಲಾ ಅನ್ನೋದು ವಿಪರ್ಯಾಸ.

ಹುಲಕೋಟಿಯಲ್ಲಿ ಅಬಕಾರಿ ಪೊಲೀಸರ ದಾಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಪರಾರಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕಳೆದ ಹಲವು ದಿನಗಳಿಂದ ಹುಲಕೋಟಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ದಾಳಿ ಮಾಡಿರುವ ಅಬಕಾರಿ ಪೊಲೀಸರು, 80 ಸಾವಿರ ರೂ, ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದು, ಮಹಿಳೆ ಪರಾರಿಯಾಗಿದ್ದಾರೆ.

ಪರಾರಿಯಾಗಿರುವ ಮಹಿಳೆಯನ್ನು ದೇವಕ್ಕ ನಾರಾಯಣ ಬೆಳ್ಳಿಕೊಪ್ಪ ಎಂದು ಗುರುತಿಸಲಾಗಿದ್ದು, 80 ಸಾವಿರ ರೂ, ಮೌಲ್ಯದ ನಾಲ್ಕು ಕೆ.ಜಿ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಸಿಬ್ಬಂದಿಗಳಾದ ಗುರುರಾಜ್ ವಸ್ತ್ರದ, ಚಂದ್ರು ರಾಠೋಡ್, ನಜೀರ ಖುದಾವಂದ, ಸುರೇಶ್ ಮಳೇಕರ್, ಸವಿತಾ ಕೋಳಿವಾಡ ಪಾಲ್ಗೊಂಡಿದ್ದರು.

ಚುನಾವಣಾ ಪ್ರಚಾರಕ್ಕೆ ವರ್ಚುವಲ್ ರ‍್ಯಾಲಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೀಗ ವರ್ಚುವಲ್ ರ‍್ಯಾಲಿ ಬಳಕೆಯಾಗುವ ಮೂಲಕ ಡಿಜಿಟಲ್ ಟಚ್ ಬಂದಿದೆ. ಹೌದು ಶನಿವಾರ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಹಾಗೂ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ವರ್ಚುವಲ್ ರ‍್ಯಾಲಿ ಮೂಲಕ ಪ್ರಜ್ಞಾವಂತ ಮತದಾರರನ್ನು ಸಂಪರ್ಕಿಸಿದರು.
ವರ್ಚುವಲ್ ರ‍್ಯಾಲಿಗೆ ಮತದಾರರು ಸ್ವಯಂ ಪ್ರೇರಿತರಾಗಿ ಸಂಪರ್ಕವಾಗುವ ಮೂಲಕ ರ‍್ಯಾಲಿ ಯಶಸ್ವಿಗೊಳಿಸಿದರು. ಈ ವೇಳೆ ಮತದಾರರ ಬಳಿ ಮಾತನಾಡಿದ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಕೊವಿಡ್ ಪರಿಸ್ಥಿತಿಯಿದ್ದರೂ ಸಹ ನಾವು ಸರ್ಕಾರದ ನಿಯಮಗಳ ಪಾಲನೆಯೊಂದಿಗೆ ಮತದಾರರನ್ನು ಸಂಪರ್ಕ ಮಾಡಿದ್ದೇವೆ. ಆದರೂ ಸಹ ವರ್ಚುವಲ್ ರ‍್ಯಾಲಿ ಮೂಲಕವೂ ಪ್ರಜ್ಞಾವಂತರ ಸಂಪರ್ಕದ ಪ್ರಯತ್ನವಾಗಿ ಇಂದು ಈ ರ‍್ಯಾಲಿ ನಡೆಯುತ್ತಿದೆ ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಹಾಗೂ ಮಾಡುತ್ತಿರುವ ಬದಲಾವಣೆಗಳನ್ನು ನಿಮ್ಮ ಗಮನಕ್ಕೆ ತರುವ ಉದ್ದೇಶದಿಂದ ವರ್ಚುವಲ್ ರ‍್ಯಾಲಿ ಮಾಡಲಾಗುತ್ತಿದೆ.
ರಾಜ್ಯದಲ್ಲಿಯೂ ಬದಲಾವಣೆ ನಡೆಯುತ್ತಿದ್ದು, ಸಿಎಂ ಬಿಎಸ್ವೈ ಅವರೂ ಸಹ ಮೋದಿಯವರಂತೆ ಹಗಲಿರುಳು ಶ್ರಮ ವಹಿಸಿ ದುಡಿಯುತ್ತಿದ್ದಾರೆ. ಕೊವಿಡ್-19 ಹಾಗೂ ನೆರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಜನರಿಗೆ ಸಹಾಯಹಸ್ತ ಚಾಚಿದ್ದಾರೆ ಎಂದರು.

ದೇಶದಲ್ಲಿ ಜಾರಿಯಾಗಿರುವ ನೂತನ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಾರಿ ಮಾಡುವ ಉದ್ದೇಶ ಸಿಎಂ ಬಿಎಸ್‌ವೈ ಅವರಿಗಿದೆ. ಅವರ ಕೈ ಬಲಪಡಿಸಬೇಕಿದ್ದರೆ, ವಿಧಾನಪರಿಷತ್‌ನಲ್ಲಿಯೂ ಸಹ ಬಿಜೆಪಿಗೆ ಹೆಚ್ಚಿನ ಸ್ಥಾನಗಳ ಅವಶ್ಯಕತೆಯಿದೆ. ಹೀಗಾಗಿ ಎಸ್ ವಿ ಸಂಕನೂರ ಅವರ ಗೆಲುವಿಗೆ ಎಲ್ಲರೂ ಸಹಕರಿಸಬೇಕೆಂದು ವರ್ಚುವಲ್ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಮತದಾರರಲ್ಲಿ ವಿನಂತಿಸಿಕೊಂಡರು.
ಇದೇ ವೇಳೆ ಮತದಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲಾಗಿದೆ. ಇದರಿಂದುಂಟಾಗುವು ಅನುಕೂಲತೆಗಳನ್ನು ತಿಳಿಸುವುದು ಬಿಟ್ಟು ಬಿಜೆಪಿ ವಿರುದ್ಧ ಕಾಂಗ್ರೆಸ್‌ನವರು ಆರೋಪ ಮಾಡುವುದರಲ್ಲಿಯೇ ನಿರತರಾಗಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಸಹ ಕೈಗಾರಿಕಾ ಕ್ಲಸ್ಟರ್ ನಿರ್ಮಾಣಕ್ಕಾಗಿ ಈಗಾಗಲೇ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಬ್ಲೂ ಪ್ರಿಂಟ್ ತಯಾರು ಮಾಡಿದ್ದಾರೆ. ಕೈಗಾರಿಕಾ ಕ್ಲಸ್ಟರ್‌ಗಳ ನಿರ್ಮಾಣದಿಂದ ಆಯಾ ಜಿಲ್ಲೆಗಳಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆಂದು ವಿವರಿಸಿದರು.

ಯಾವುದೇ ಬಗೆಯ ಕಾನೂನು ಹಾಗೂ ನೂತನ ನೀತಿಗಳಿಗೆ ವಿಧಾನ ಪರಿಷತ್‌ನಲ್ಲಿನ ಅನುಮೋದನೆಯೂ ಪ್ರಮುಖವಾಗಿದ್ದು, ನಮ್ಮ ಸಂಖ್ಯೆಯನ್ನು ಹೆಚ್ಚಿಸಲು ಪಕ್ಷದ ಅಭ್ಯರ್ಥಿ ಎಸ್ ವಿ ಸಂಕನೂರ ಅವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ವರ್ಚುವಲ್ ರ‍್ಯಾಲಿಯಲ್ಲಿ ಹಲವು ಯುವ ಪದವೀಧರರು ಭಾಗವಹಿಸಿದ್ದರು.
 

ರೈತರಿಗೆ ತಲುಪದ ಸಾಲಮನ್ನಾ ಯೋಜನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರಗುಂದ
ರೈತರ ಸಾಲಮನ್ನಾ ಕುರಿತಂತೆ ಸರ್ಕಾರವಿನ್ನೂ ಸರಿಯಾದ ಮಾನದಂಡ ಬಳಸಿಲ್ಲ. ಹೀಗಾಗಿ ಸಾಲಮನ್ನಾ ಯೋಜನೆ ರೈತರಿಗೆ ಇನ್ನೂ ಸರಿಯಾಗಿ ತಲುಪಿಲ್ಲವೆಂದು ರೈತ ಸೇನಾ ಕರ್ನಾಟಕ ರಾಜ್ಯ ವಕ್ತಾರ ಗುರು ರಾಯನಗೌಡ್ರ ಸಿಡಿಮಿಡಿಗೊಂಡರು.
ಪಟ್ಟಣದಲ್ಲಿ ಮಹದಾಯಿ ಮಲಪ್ರಭೆ ಜೋಡಣೆಗಾಗಿ ನಡೆಯುತ್ತಿರುವ ರೈತಸೇನಾ ಕರ್ನಾಟಕ ಹೋರಾಟ ಸಮಿತಿ ಧರಣಿ ಶನಿವಾರಕ್ಕೆ 1926 ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರು ರೈತರ 2 ಲಕ್ಷ ರೂ ವರೆಗಿನ ಸಾಲಮನ್ನಾ ಮಾಡುವುದಾಗಿ 2017 ರಲ್ಲಿ ಘೋಷಿಸಿದ್ದರು. ಸಾಲಮನ್ನಾ ಮಾಡಲು ಕೆಲವೊಂದು ದಾಖಲೆಗಳನ್ನು ರೈತರು 2017 ರ ಡಿ. 30 ರೊಳಗಾಗಿ ನೀಡುವಂತೆ ಸರ್ಕಾರ ಬ್ಯಾಂಕುಗಳಿಗೆ ನಿರ್ದೇಶನ ನೀಡಿತ್ತು. ಅನೇಕರು ಈ ಅವಧಿಯಲ್ಲಿ ಎಲ್ಲ ದಾಖಲೆಗಳನ್ನು ನೀಡಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಸಾಲಮನ್ನಾ ಯೋಜನೆ ಸರಿಯಾದ ರೂಪದಲ್ಲಿ ಜಾರಿಯಾಗಲಿಲ್ಲ. ಮುಂದೆ ಬಿಜೆಪಿ ರಾಜ್ಯ ಸರ್ಕಾರ ಇದೇ ಅ. 20 ರೊಳಗಾಗಿ ಎಲ್ಲ ದಾಖಲೆಗಳನ್ನು ನೀಡಲು ರೈತರಿಗೆ ಸೂಚಿಸಿತ್ತು. ಈ ಅವಧಿಯಲ್ಲಿಯೂ ಅನೇಕ ಕಟುಬಾಕಿದಾರರು ಅಗತ್ಯದ ಪಡಿತರ ಚೀಟಿ ಮತ್ತು ಇನ್ನಿತರ ದಾಖಲೆ ನೀಡಿದಾಗಲೂ ಅವರ ಸಾಲಮನ್ನಾ ಮಾಡಲು ಸರ್ಕಾರ ಚಿಂತನೆ ಮಾಢಿಲ್ಲ. ದಾಖಲೆಗಳನ್ನು ನೀಡಲು ಕಡಿಮೆ ಅವಧಿ ಸರ್ಕಾರ ನೀಡಿದ್ದರಿಂದ ತೊಂದರೆಯಾಗಿದೆ. ಹೀಗಾಗಿ ಈ ಅವಧಿ ವಿಸ್ತರಿಸಬೇಕೆಂದು ರಾಯನಗೌಡ್ರ ಸರ್ಕಾರಕ್ಕೆ ಆಗ್ರಹಿಸಿದರು.
ಸಚಿವ ಜಗದೀಶ ಶೆಟ್ಟರ ಅವರನ್ನು ಅ. ೨೩ ರಂದು ರೈತ ಸೇನಾ ಕರ್ನಾಟಕ ಹೋರಾಟ ಸಮಿತಿ ಸದಸ್ಯರು ಭೇಟಿಯಾಗಿ ಎಲ್ಲ ಮಾಹಿತಿ ನೀಡಿದ್ದೇವೆ. ಅ. 27ರೊಳಗಾಗಿ ಈ ಸಮಸ್ಯೆ ಪರಿಹರಿಸುವುದಾಗಿ ಸಚಿವರು ತಿಳಿಸಿದ್ದಾರೆ. ಇದಾಗದಿದ್ದರೆ ಹೋರಾಟ ದೀರ್ಘವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ರಾಯನಗೌಡ್ರ ಹೇಳಿದರು.
ಎಸ್.ಬಿ. ಜೋಗಣ್ಣವರ, ಶಂಕರಗೌಡ ಪಾಟೀಲ,ಮಲ್ಲಣ್ಣ ಅಲೈಕಾರ ಮಾತನಾಡಿದರು. ಧರಣಿಯಲ್ಲಿ ರಮೇಶ ನಾಯ್ಕರ್, ವಾಸು ಚವ್ಹಾಣ, ಅರ್ಜುನ ಮಾನೆ, ಹುನಮಂತ ಸರನಾಯ್ಕರ್, ಎ.ಪಿ. ಪಾಟೀಲ, ಶಂಕರಗೌಡ ಪಾಟೀಲ, ಮಹೇಶ ನಾವಳ್ಳಿ, ಕಲ್ಲಪ್ಪ ಮೊರಬದ ಅನೇಕರು ಉಪಸ್ಥಿತರಿದ್ದರು.

ಕೊರೋನಾ ನಿಯಂತ್ರಣ ಕ್ರಮಗಳ ಪಾಲಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಅ. 28 ರಂದು ಜಿಲ್ಲೆಯಲ್ಲಿ ಜರುಗುವ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಆರೋಗ್ಯ ಇಲಾಖೆ ಹೊರಡಿಸಿರುವ ಕೊವಿಡ್-19 ನಿಯಂತ್ರಣ ಕ್ರಮಗಳ ಪಾಲನೆ ಮಾಡುವುದರೊಂದಿಗೆ ಚುನಾವಣೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಹೇಳಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ತಹಸೀಲ್ದಾರರಿಗೆ ಹಾಗೂ ಚುನಾವಣಾ ದಿನಗಳಂದು ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.
ಪ್ರತಿ ಮತಗಟ್ಟೆಗೆ ಅಗತ್ಯವಿರುವಷ್ಟು ಸ್ಯಾನಿಟೈಸರ್, ಸಿಬ್ಬಂದಿಗಳಿಗೆ ಮಾಸ್ಕ್, ಹ್ಯಾಂಡ್‌ಗ್ಲೌಸ್, ಪಲ್ಸ್ ಆಕ್ಷಿಮಿಟರ್, ಥರ್ಮಲ್ ಸ್ಕ್ಯಾನರ್, ಪಿಪಿಇ ಕಿಟ್ ಮತ್ತು ಹ್ಯಾಂಡ್ ವಾಶಗಳನ್ನು ನೀಡಲಾಗುತ್ತಿದ್ದು, ಮತದಾನಕ್ಕೆ ಬರುವ ಮತದಾರರಿಗೆ ಪಲ್ಸ್ ಆಕ್ಷಿಮೀಟರ್ ಹಾಗೂ ಐ.ಆರ್.ಥರ್ಮಲ್ ಸ್ಕ್ಯಾನರ್ ಮೂಲಕ ಆರೋಗ್ಯ ತಪಾಸಣೆಯನ್ನು ನಿಯೋಜಿಸಲಾದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಡಬೇಕು ಎಂದರು.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಸುಸಜ್ಜಿತ ಕೋಣೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳು ಸುಸ್ಥಿತಿಯಲ್ಲಿ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಮತಗಟ್ಟೆ ಹತ್ತಿರ ಕೊವಿಡ್ ಲಕ್ಷಣ ಇರುವವರ ವಿಶ್ರಾಂತಿ, ತಕ್ಷಣ ಆರೈಕೆಗಾಗಿ ಪ್ರತ್ಯೇಕ ಐಸೋಲೇಶನ್ ರೂಮ್ ವ್ಯವಸ್ಥೆ ಮಾಡಬೇಕು.
ಬಿಎಲ್‌ಓಗಳ ಮೂಲಕ ಓಟರ್ ಸ್ಲಿಪ್‌ಗಳನ್ನು ಮತದಾರನ ಮನೆಗೆ ತಲುಪಿಸುವ ಕಾರ್ಯ ನಡೆಯಬೇಕು. ಕೊವಿಡ್-19 ಸೋಂಕಿಗೆ ಒಳಗಾದ ಮತದಾರ ಮತದಾನ ಮಾಡಲು ಬರುವುದನ್ನು ಮುಂಚಿತವಾಗಿ ಖಚಿತಪಡಿಸಿದರೆ, ಅವರಿಗೆ ಅಂಬುಲೆನ್ಸ್ ಮೂಲಕ ಅವರಿದ್ದ ಸ್ಥಳದಿಂದ ನೇರವಾಗಿ ಮತಗಟ್ಟೆಗೆ ಕರೆ ತಂದು, ಮತದಾನದ ನಂತರ ಅವರ ಸ್ಥಳಕ್ಕೆ ಬಿಡಲಾಗುತ್ತದೆ. ಮತದಾನದ ದಿನದಂದು ಸಂಜೆ 4 ಗಂಟೆ ನಂತರದ ಅವಧಿಯನ್ನು ಕೊವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ, ಕೊವಿಡ್ ಲಕ್ಷಣ ಇರುವವರಿಗೆ ಮತದಾನ ಮಾಡಲು ಅವಕಾಶ ಒದಗಿಸಲಾಗಿದ್ದು, ಎಲ್ಲ ರೀತಿಯ ಆರೋಗ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ, ಮಾತನಾಡಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳ ಹಾಗೂ ಮೊಬೈಲ್ ಫೋನ್‌ನಂಬರ್‌ಗಳ ವಿನಿಮಯ ಮಾಡುವುದು ಹಾಗೂ ತಂಡದ ಪ್ರತಿಯೊಬ್ಬರ ಕಾರ್ಯವಿಧಾನದ ಬಗ್ಗೆ ತಿಳುವಳಿಕೆ ನೀಡುವುದು ಪ್ರಿಸೈಡಿಂಗ್ ಅಧಿಕಾರಿಗಳ ಕರ್ತವ್ಯವಾಗಿದ್ದು ಚುನಾವಣಾಧಿಕಾರಿಗೆ ಸಂಬಂಧಿಸಿದ ಎಲ್ಲಾ ಆದೇಶಗಳ ಪ್ರತಿಗಳನ್ನು ಇವರು ಹೊಂದಿರಬೇಕು. ಪೂರ್ವಭಾವಿ ಅಭ್ಯಾಸ ಮತ್ತು ತರಬೇತಿಗಳಿಗೆ ಕಡ್ಡಾಯವಾಗಿ ಹಾಜರಾಗಿ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಮದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಕೊವಿಡ್-19 ಮುಂಜಾಗೃತಿ ವಿಷಯ ಕುರಿತ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿ ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ, ಸೇರಿದಂತೆ ಮತ್ತಿತರರು ಬಿಡುಗಡೆಗೊಳಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ ಬಸರೀಗಿಡದ ಅವರು ಕೊವಿಡ್-19 ಮಾರ್ಗಸೂಚಿಗಳ ಪಾಲನೆ ಕುರಿತು ಮಾತನಾಡಿದರು. ತರಬೇತಿ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿಡಿಎಲ್‌ಆರ್ ಅಧಿಕಾರಿ ರವಿಕುಮಾರ ಸೇರಿದಂತೆ ಆಯಾ ತಾಲೂಕುಗಳ ತಹಸೀಲ್ದಾರರು, ಪಿಆರ್‌ಓಗಳು ಹಾಜರಿದ್ದರು.
 

ಹದಗೆಟ್ಟ ರಸ್ತೆ, ಗ್ರಾಮಸ್ಥರಿಂದ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕಂಪ್ಲಿ
ತಾಲೂಕಿನ ನಂ. 10 ಮುದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕಣ್ವಿ ತಿಮ್ಮಲಾಪುರದಿಂದ ಕಂಪ್ಲಿಗೆ ಬರುವ ಮಾರ್ಗ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ತುಂಬಾ ಮಳೆ ನೀರು ಸಂಗ್ರಹವಾಗಿ ರಸ್ತೆಯೇ ಮಾಯವಾಗಿದೆ. ಇದರಿಂದ ವಾಹನ ಸವಾರರು, ಸಾರ್ವಜನಿಕರು ಸಂಚರಿಸುವುದು ಹೇಗೆಂದು ಗ್ರಾಮದ ಯುವಕರು ದಿಢೀರ್ ಪ್ರತಿಭಟನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಉಗ್ರ ಹೋರಾಟದ ಎಚ್ಚರಿಸಿಕೆ ನೀಡಿದ್ದಾರೆ.
ಕಣ್ವಿ ತಿಮ್ಮಲಾಪುರದಿಂದ ಕಂಪ್ಲಿಗೆ ಎರಡು ಮಾರ್ಗಗಳಿದ್ದು, ಒಂದು ಗ್ರಾಮದಿಂದ ರಾಮಸಾಗರ ಮುಖಾಂತರ ಮತ್ತೊಂದು ಗ್ರಾಮದಿಂದ ಸಿದ್ದೇಶ್ವರ ಕ್ರಾಸ್ ಮೂಲಕ ಕಂಪ್ಲಿಗೆ ಸಂಪರ್ಕಿಸುತ್ತದೆ. ಆದರೆ ಗ್ರಾಮದಿಂದ ಈ ಎರಡು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯ ರಸ್ತೆಯೇ ಸಂಪೂರ್ಣವಾಗಿ ಹಾಳಾಗಿದ್ದು, ಸಂಚಾರ ಹೇಗೆಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ. ರಸ್ತೆಯನ್ನು ನೋಡಿದರೆ, ರಸ್ತೆಯಲ್ಲಿ ಗುಂಡಿಯೋ, ಗುಂಡಿಯಲ್ಲಿ ರಸ್ತೆಯೋ ಎನ್ನುವಂತಾಗಿದ್ದು, ಇದೀಗ ನಿರಂತರ ಮಳೆಯಿಂದಾಗಿ ರಸ್ತೆಯಲ್ಲಿ ಎರಡು ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ರಸ್ತೆಯೇ ಮಾಯವಾಗಿದೆ.
ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸ ಪಟ್ಟು ಸಂಚರಿಸುತ್ತಿದ್ದು, ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಅಸಮಧಾನ ವ್ಯಕ್ತ ಪಡಿಸಿದ ಗ್ರಾಮಸ್ಥರು ಕೂಡಲೇ ತಾಲ್ಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳು ಹದಗೆಟ್ಟ ರಸ್ತೆಯ ದುರಸ್ತಿಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ತಮ್ಮ ಗ್ರಾಮದ ಹದಗೆಟ್ಟ ರಸ್ತೆಯ ಚಿತ್ರಗಳನ್ನು, ರಸ್ತೆಯ ದುಸ್ಥಿತಿಯನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪರಶುರಾಮ, ಜಗದೀಶ್, ಸಂತೋಷ್, ಯು.ನಾಗಪ್ಪ, ಟಿ.ರಮೇಶ್ ಸೇರಿದಂತೆ 30 ರಿಂದ 40 ಜನ ಭಾಗವಹಿಸಿದ್ದರು.

ಸರಳವಾಗಿ ರಾಜ್ಯೋತ್ಸವ ಆಚರಣೆ: ಗೌಸಿಯಾಬೇಗಂ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಂಪ್ಲಿ
ಕೊರೊನಾ ವೈರಸ್ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ನ.೧ರಂದು ಆಚರಣೆ ಮಾಡಲಿರುವ ಕರ್ನಾಟಕ ರಾಜ್ಯೋತ್ಸವವನ್ನು ತಾಲೂಕು ಆಡಳಿತದಿಂದ ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯೋತ್ಸವ ಮತ್ತು ಹಬ್ಬಗಳ ಆಚರಣೆಗೆ ಸರ್ಕಾರದಿಂದ ನಿಯಮಗಳನ್ನು ಜಾರಿಗೊಳಿಸಿದ್ದು, ಸರ್ಕಾರದ ಆದೇಶದಂತೆ ಅತ್ಯಂತ ಸರಳವಾಗಿ ಆಚರಿಸಲಾಗುವುದು ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವವನ್ನು ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜಾರೋಹಣದೊಂದಿಗೆ ಆಚರಣೆ ಮಾಡಲಾಗುವುದು. ಅಂದು ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪ್ರಥಮ ಬಾರಿಗೆ ನೂರಕ್ಕೆ ನೂರು ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಗುರುಗಳನ್ನು ಹಾಗೂ ಅಧಿಕ ಅಂಕ ಪಡೆದ ಶಾಲೆಯ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಅಧಿಕಾರಿಗಳ ಗೈರು: ತಾಲೂಕು ಆಡಳಿತ ಹಬ್ಬಗಳ ಆಚರಣೆ, ಜಯಂತಿಗಳಿಗೆ ಕರೆಯುವ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಿ ಹಾಗೂ ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಿರುವ ಬಗ್ಗೆ ಗರಂ ಆದ ತಹಸೀಲ್ದಾರ್ ಗೌಸಿಯಾಬೇಗಂ, ಕಳೆದ ಹಲವಾರು ಸಭೆಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಿದರೂ ಸಹಿತ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿಯಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕನ್ನಡ ಜಾಗೃತಿ ಸಮತಿ ಸದಸ್ಯರಾದ ಜಿ. ಚಂದ್ರಶೇಖರಗೌಡ, ಎಸಿ. ದಾನಪ್ಪ, ಸಿಆರ್. ಹನುಮಂತಪ್ಪ, ಶಿರಸ್ತೇದಾರ ಎಸ್. ರೇಖಾಮಠ, ಮಾಲತೇಶ ದೇಶಪಾಂಡೆ, ಪಟ್ಟಣದ ಮುಖಂಡರು ಭಾಗವಹಿಸಿದ್ದರು.

ಸರ್ಕಾರಿ ನೌಕರಿ ತೊರೆದು ಸಂಘಟನೆ ಕಟ್ಟಿದ ನಾಯಕ ಮಾನ್ವಡೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ಮಾರುತಿ ಮಾನ್ವಡೆಯವರು ಸಿಐಟಿಯು ಪ್ರ. ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಅವರು ಅಕ್ಷರ ದಾಸೋಹ ಮತ್ತು ಅಂಗನವಾಡಿ ಕಾರ್ಯಕರ್ತರು ರೈತ ಕಾರ್ಮಿಕರ ಬೇಡಿಕೆಗಳ ಕುರಿತು ಚಳುವಳಿಯ ಮೂಲಕ ಗುರುತಿಸಿಕೊಂಡು ಕಾರ್ಮಿಕರ ಸೌಲಭ್ಯಕ್ಕಾಗಿ ಶ್ರಮವಹಿಸಿದ್ದರು ಎಂದು ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಹೇಳಿದರು.
ಮಾರುತಿ ಮಾನ್ವಡೆಯವರ ನಿಧನ ನಿಮಿತ್ತ ಅಂಗನವಾಡಿ ಮತ್ತು ಅಕ್ಷರ ದಾಸೋಹ ಗ್ರಾಮ ಪಂಚಾಯತಿ ಸಿಬ್ಬಂದಿ, ಸದಸ್ಯರು ಪಟ್ಟಣದ ವಿಠೋಭ ಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಿ ಮೇಣಬತ್ತಿ ಬೆಳಗಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, 1981 ರಲ್ಲಿ ಸರ್ಕಾರಿ ನೌಕರಿ ತೊರೆದು ರೈತ ಕಾರ್ಮಿಕರ ಸಂಘಟನೆ ಕಟ್ಟುವ ಮೂಲಕ ಸಾರ್ವಜನಿಕ ಜೀವನದಲ್ಲಿ ಮಾನ್ವಡೆ ಸೇವೆ ಸಲ್ಲಿಸಿದ್ದರು.
ಕೇಂದ್ರ ಸರ್ಕಾರ 2015 ರಲ್ಲಿ ಭೂ ಸ್ವಾಧೀನ ಕಾಯ್ದೆ ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲು ಹೊರಟ ಸಂದರ್ಭದಲ್ಲಿ ನರಗುಂದದಿಂದ ಬೆಂಗಳೂರವರೆಗೆ ಪಾದಯಾತ್ರೆಯಲ್ಲಿ ಹೊರಟು ದೊಡ್ಡ ಚಳುವಳಿ ಮಾಡಿದ್ದರು. ಇಂತಹ ಮುಖಂಡರ ಆದರ್ಶಗಳನ್ನು ನಾವೆಲ್ಲ ಬೆಳೆಸಿಕೊಂಡು ನಮ್ಮ್ಮ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಎಲ್ಲರೂ ಮುಂದಾಗುವಂತೆ ಚಿಟಕಿ ಕರೆ ನೀಡಿದರು.
ಗ್ರಾಮ ಪಂಚಾಯತ್ ನೌಕರ ಸಂಘಟಣೆಯ ಜಿಲ್ಲಾ ಮುಖಂಡ ಯಲ್ಲಪ್ಪ ಪೂಜಾರ, ತಾಲೂಕಾ ಪ್ರ. ಕಾರ್ಯದರ್ಶಿ ರಮೇಶ ವಾಸನ, ಅಂಗನವಾಡಿ ನೌಕರ ಸಂಘಟನೆಯ ತಾಲೂಕಾ ಪ್ರ. ಕಾರ್ಯದರ್ಶಿ ಶಾರದಾ ರೋಣದ, ತಾಲುಕಾ ಅಂಗನವಾಡಿ ಉಪಾಧ್ಯಕ್ಷೆ ನೀಲಗಂಗಾ ಮಾದರ, ಲಕ್ಷ್ಮೀ ಗಾಯಕವಾಡ, ಸಹಕಾರ್ಯದರ್ಶಿ ಬಸಮ್ಮಗುರಿಕಾರ, ಅಕ್ಷರದಾಸೋಹ ಸಂಘಟಣೆಯ ಅಧ್ಯಕ್ಷೆ ಮಂಜುಳಾ ಮುಳ್ಳೂರಮಾತನಾಡಿದರು.
ಎಸ್.ವಿ. ಮಣ್ಣೂರಮಠ ನೌಕರ ಸಂಘಟನೆಯ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಭೂವ್ಮಣ್ಣವರ, ಬೀಬೀಜಾನ ಮುಲ್ಲಾನವರ, ಅಂಗನವಾಡಿ ನೌಕರ ಸಂಘಟಣೆಯ ಅಧ್ಯಕ್ಷೆ ಗಿರಿಜಾ ಮಾಚಕನೂರ ಹಾಗೂ ಅಂಗನವಾಡಿ ಸಿಬ್ಬಂದಿ, ಅಕ್ಷರ ದಾಸೋಹ ಸಿಬ್ಬಂದಿ, ಕಾರ್ಮಿಕರ ಸಂಘಟಣೆ ಸದಸ್ಯರು, ರೈತ ಕಾರ್ಮಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನಯ್ಯ ಹುಂಡೇಕಾರಮಠ, ರಮೇಶ ವಾಸನ, ಲಕ್ಷ್ಮೀ ಗಾಯಕವಾಡ ನಿರ್ವಹಿಸಿದರು.

ಎಸ್.ಟಿ. ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲು ನೀಡಲು ಮೀನಾಮೇಶ ಎಣಿಸುತ್ತಿರುವ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಶೀಘ್ರ ಮೀಸಲು ಘೋಷಣೆಗೆ ಒತ್ತಾಯಿಸಿ ರಾಜ್ಯದಾದ್ಯಂತ ನಡೆಯುತ್ತಿರುವ ಧರಣಿ ಸರಕಾರದ ಭರವಸೆ ಮೇರೆಗೆ ಮೂರನೇ ದಿನಕ್ಕೆ ಮೊಟಕುಗೊಳಿಸಲಾಗಿದೆ.
ನಗರದ ಜಿಲ್ಲಾಡಳಿತ ಭವನದ ಎದುರು ಹಾಗೂ ವಿವಿಧ ತಾಲೂಕ ಕೇಂದ್ರಗಳಲ್ಲಿ ಕೊಪ್ಪಳ ಜಿಲ್ಲಾ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹತ್ತು ದಿನಗಳ ಪ್ರತಿಭಟನಾ ಧರಣಿಯ ಮೂರನೆ ದಿನ ಜಿಲ್ಲಾ ಮುಖಂಡರ ಜೊತೆ ತಿಗರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.
ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 7.5 ಮೀಸಲು ಕೊಡುವುದು ಸಂವಿಧಾನ ಬದ್ಧವಾಗಿದೆ. ಆದರೆ ಮಾತು ತಪ್ಪಿದ ಯಡಿಯೂರಪ್ಪ ಸರಕಾರಕ್ಕೆ ಆಸಕ್ತಿ ಇಲ್ಲದ ಕಾರಣ ಹೋರಾಟ ತೀವ್ರವಾಗಿತ್ತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಕುಳಿತಿದ್ದ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಯವರ ಜೊತೆಗೆ ಸರಕಾರದ ವಿವಿಧ ಸಚಿವರು ಸಿಎಂ ಅವರ ಪರವಾಗಿ ಮಾತನಾಡಿದ ಕಾರಣ, ಧರಣಿ ಕೈಬಿಡಲಾಗಿದೆ. ಸರಕಾರ 40 ದಿನಗಳ ಕೊನೆಯ ಅವಕಾಶವನ್ನು ತೆಗೆದುಕೊಂಡಿದ್ದು ಅದನ್ನು ತಪ್ಪಿದಲ್ಲಿ ಮುಂದಿನ ಉಗ್ರ ಹೋರಾಟದ ರೂಪ ಕೊಡಲಾಗುವುದು ಎಂದು ಮಠದ ಹೇಳಿಕೆಯನ್ನು ಆಧರಿಸಿ ಹೋರಾಟ ಕೈಬಿಡಲಾಗಿದೆ.
ಹೋರಾಟದಲ್ಲಿ ರಾಜ್ಯ ಕಾರ್ಯದರ್ಶಿ ಸುರೇಶ ಡೊಣ್ಣಿ, ಕೊಪ್ಪಳ ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ, ತಾಲೂಕ ಅಧ್ಯಕ್ಷ ಶರಣಪ್ಪ ನಾಯಕ್, ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ್, ಮಾರ್ಕಂಡಪ್ಪ ಕಲ್ಲನವರ, ಗೋವಿಂದಪ್ಪ ಬಂಡಿ, ಪಟ್ಟಣ ಪಂಚಾಯತಿ ಸದಸ್ಯ ರುಕ್ಮಣ್ಣ ಶಾವಿ, ಹನುಮಂತಪ್ಪ ಗುದಗಿ, ಮುದಿಯಪ್ಪ ಅಡವಳ್ಳಿ ತಿಗರಿ, ವೀರಪ್ಪ ವಾಸ್ತೆನೂರ ಕವಲೂರ, ಬಸವರಾಜ ಶಹಪೂರ, ವಿರುಪಾಕ್ಷಗೌಡ್ರು ಗಂಗನಾಳ, ಬೀಮನಗೌಡ ಪೋ.ಪಾ., ವಿ. ಬಿ. ಬದೂರ, ವೆಂಕಟೇಶ ಹಲವಾಗಲಿ, ಪ್ರಶಾಂತ ಕರಡಿ, ಉಮೇಶಗೌಡ ಪಾಟೀಲ್, ಭರಮಜ್ಜ ಬ್ಯಾನಿ ಹನುಕುಂಟಿ, ಮಲ್ಲಿಕಾರ್ಜುನ ಕಲ್ಲನವರ, ಹನುಮಂತಪ್ಪ, ಯಲ್ಲಪ್ಪ ಕರಡಿ ಇತರರು ಇದ್ದರು.

ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಂಗಾವತಿ
ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್‌ಶಾಲೆಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಅಧ್ಯಕ್ಷ ಸೂರಿಬಾಬು ನೆಕ್ಕಂಟಿಯವರು ಕಿತ್ತೂರು ರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಕನ್ನಡ ಭಾಷಾ ಶಿಕ್ಷಕರಾದ ಮಂಜುನಾಥ, ಕಿತ್ತೂರು ರಾಣಿ ಚೆನ್ನಮ್ಮನವರ ಬಾಲ್ಯದ ಜೀವನ, ಬ್ರಿಟೀಷರ ವಿರುದ್ಧ ಹೋರಾಡಿದ ಸಂದರ್ಭ, ಹಾಗೂ ತಮ್ಮ ಆಡಳಿತದ ಅವಧಿಯಲ್ಲಿ ಅವರು ಎದುರಿಸಿದ ಸವಾಲುಗಳನ್ನು ಕುರಿತು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಮಾತನಾಡಿ, ಕಿತ್ತೂರು ಚೆನ್ನಮ್ಮನವರು ಒಬ್ಬ ಮಹಿಳೆಯಾದರೂ ನಾಡಿನ ರಕ್ಷಣೆಗಾಗಿ ಹಾಗೂ ಕಿತ್ತೂರಿನ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಇಡೀ ಜಗತ್ತಿಗೆ ಸ್ತ್ರೀಶಕ್ತಿ ತೋರಿದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ. ಅವರ ಧೈರ್ಯ, ಸಾಹಸ ಹಾಗೂ ಸಾಧನೆ ಮತ್ತು ನಾಡು ನುಡಿಯ ರಕ್ಷಣೆಗಾಗಿ ಅವರು ಅನುಸರಿಸಿದ ಆದರ್ಶ ಗುಣಗಳನ್ನು ನಾವೆಲ್ಲರೂ ಅನುಸರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಕೃಷ್ಣವೇಣಿ, ಶಾಲೆಯ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ ಹಾಗೂ ಪಾಲಕರು ಭಾಗವಹಿಸಿದ್ದರು.

error: Content is protected !!