Home Blog Page 3113

ಕೊರೊನಾ ಆತಂಕ; ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ನಿವೃತ್ತ ಉಪ ತಹಸೀಲ್ದಾರ್

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಕೊರೊನಾ ಭಯದಿಂದಾಗಿ ನಿವೃತ್ತ ಉಪ ತಹಸೀಲ್ದಾರ್ ಡೆತ್ ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತರೀಕೆರೆ ತಾಲೂಕಿನ ಬೇಲೇನಹಳ್ಳಿ ತಾಂಡ್ಯದಲ್ಲಿ ನಡೆದಿದೆ.
ಸೋಮಾ ನಾಯಕ್(72) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ. ಕಾರಿನಲ್ಲಿ ತಾವೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ನಿವೃತ್ತಿಯ ನಂತರ ತೋಟ ನೋಡಿಕೊಂಡಿದ್ದ ಸೋಮಾ ನಾಯಕ್ ಅವರಿಗೆ ಸೋಂಕು ತಗುಲಿತ್ತು. ಇದರಿಂದ ಮನನೊಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೊನಾ ಹರಡುವಂತಾಗಿದೆ. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಇಲ್ಲ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಎದುರೇ ಏನಾದರೂ ಆದರೆ ಅದನ್ನು ನನ್ನಿಂದ ಸಹಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಪಲ್ಸ್ ರೇಟ್ ಕಡಿಮೆಯಾಗಿ, ಉಸಿರಾಟಕ್ಕೆ ತೊಂದರೆಯಾಗಿ ಜೀವಕ್ಕೆ ಕಷ್ಟವಾದರೆ ಮಾತ್ರ ಆತ್ಮಹತ್ಯೆ. ಸುಖವಾಗಿ ಸತ್ತರೆ ಚಿಂತೆಯೇ ಇಲ್ಲ. ಮಾರಿಕಾಂಬಾ ದೇವಿ ನಿನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಅಷ್ಟರಲ್ಲಿಯೇ ನೀನು, ನನ್ನನ್ನ ಕರೆದುಕೊಂಡು ಬಿಟ್ಟೆ.
ಕೊರೊನಾ ಪಾಸಿಟಿವ್ ಇದ್ದ ಕಾರಣ ಅಗ್ನಿಸ್ಪರ್ಶ ಮಾಡಲು ಅನುಕೂಲವಾಗುವಂತೆ ಜಾಗ ಆರಿಸಿಕೊಂಡಿದ್ದೇನೆ.

ಇದು ಪ್ರಪಂಚಕ್ಕೆ ಆದ ಕೆಟ್ಟ ಕಾಯಿಲೆ. ನನ್ನ ಬಗ್ಗೆ ಯಾರೂ ಯೋಚಿಸಬೇಡಿ. ನಿಮ್ಮ ಜೀವಕ್ಕೆ ದಾರಿ ಮಾಡಿದ್ದೇನೆ. ಈ ಜೀವನ ಸಾಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಡಿಸಿಸಿ ಬ್ಯಾಂಕಿನ ನನ್ನ ಖಾತೆಯಲ್ಲಿ ರೂ. 1.28 ಲಕ್ಷ ಇದ್ದು ಈ ಹಣವನ್ನು ಜಮೆ ಮಾಡಬೇಕು. ನಾನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಟ್ಟಿದ್ದೇನೆ. ನನ್ನ ಚೈನು, ಉಂಗುರ ಬೀರೂವಿನಲ್ಲಿ ಇದೆ. ನೀವೆಲ್ಲರೂ ಚೆನ್ನಾಗಿರಿ ಎಂದು ಬರೆದಿದ್ದಾರೆ.

ಮತ್ತೊಂದು ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲು, ಸ್ಥಳಾಂತರ ಮಾಡಲು ಹಾಗೂ ಆಸ್ಪತ್ರೆಗಳಿಂದ ಬಿಡುಗಡೆ ಮಾಡುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ರೋಗ ನಿರ್ವಹಣೆಗೆ ಆಸ್ಪತ್ರೆಗಳ ಹಾಸಿಗೆಗಳು ಮುಖ್ಯವಾಗಿದೆ. ಹೀಗಾಗಿ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿರುವವರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ತೊಂದರೆ ಎದುರಿಸುವುದನ್ನು ತಪ್ಪಿಸಲು ಯಾರಿಗೆ, ಎಲ್ಲಿ ಚಿಕಿತ್ಸೆ ನೀಡಬೇಕು ಎನ್ನುವ ಕುರಿತು ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾಗಿರುವವರ ಆರೋಗ್ಯ ಸ್ಥಿತಿ ಉತ್ತಮಗೊಳ್ಳುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಿ ತಾತ್ಕಾಲಿಕ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಯಾವುದೇ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಕ್ಕೂ ಮುನ್ನ ರಾಜ್ಯ ಸರ್ಕಾರ ಹೊರಡಿಸಿರುವ ಡಿಸ್ಚಾರ್ಜ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಖಾಸಗಿ ಆಸ್ಪತ್ರೆಗೆ ದಾಖಲಾದವರಿಗೂ ಇದೇ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಮಹಾಮಾರಿಗೆ ತಂದೆ – ಮಗ ಬಲಿ

ವಿಜಯಸಾಕ್ಷಿ ಸುದ್ದಿ, ಧಾರವಾಡ

ಮಹಾಮಾರಿಗೆ 24 ಗಂಟೆಯೊಳಗೆ ತಂದೆ – ಮಗ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

ಸೋಂಕಿನ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಂದೆ ಹಾಗೂ ಮಗ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಹಾಮಾರಿ ಇಬ್ಬರನ್ನೂ ಬಲಿ ಪಡೆದಿದೆ.

ತಂದೆ ರವೀಂದ್ರನಾಥ ವಸ್ತ್ರದ (74) ಮಗ ವಿಶ್ವನಾಥ ವಸ್ತ್ರದ (47) ಸಾವನ್ನಪ್ಪಿರುವ ದುರ್ದೈವಿಗಳು. ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಂದೆ ಮಗ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು.

ತಂದೆ ಹಾಗೂ ಮಗ ಇಬ್ಬರೂ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ,  ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ತಂದೆ ಬಲಿಯಾಗಿದ್ದಾರೆ. ಇಂದು ಬೆಳಿಗ್ಗೆ ಮಗ ಸಾವನ್ನಪ್ಪಿದ್ದಾರೆ. 

ಮೃತರಿಬ್ಬರೂ ಕಿರಾಣಿ ವರ್ತಕರಾಗಿದ್ದರು. ತಂದೆ ರವೀಂದ್ರನಾಥ ಧಾರವಾಡ ಕಿರಾಣಿ ವರ್ತಕ ಸಂಘದ ಕಾರ್ಯದರ್ಶಿಯಾಗಿದ್ದರು. ಮಗ ವಿಶ್ವನಾಥ ಕಿರಾಣಿ ಅಂಗಡಿಯೊಂದಿಗೆ ಹಲವು ವ್ಯಾಪಾರಗಳನ್ನು ಮಾಡುತ್ತಿದ್ದರು.

ವೆಂಟಿಲೇಟರ್ ಸಿಗದೇ ನರಳಾಟ; ಮುಂಡರಗಿ ಆಸ್ಪತ್ರೆಯಲ್ಲಿ ಮೂರು ಜನ ಸೋಂಕಿತರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ರಾಜ್ಯದ ತುಂಬೆಲ್ಲ ತಾಂಡವಾಡುತ್ತಿದೆ. ಇದು ಇಡೀ ದೇಶವನ್ನೇ ಸದ್ಯ ನಲುಗಿಸುತ್ತಿದೆ. ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದಾಗಿ ಆಕ್ಸಿಜನ್, ವೆಂಟಿಲೇಟರ್ ತೊಂದರೆ ತಲೆದೋರುತ್ತಿದ್ದು, ಜಿಲ್ಲೆಯಲ್ಲಿ ಕೂಡ ಮೂವರು ವೆಂಟಿಲೇಟರ್ ಸಮಸ್ಯೆಯಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ನಿ‌ನ್ನೆ ನಾಲ್ವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜಿಲ್ಲೆಯ ಜಿಮ್ಸ್ ಹಾಗೂ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಕೂಡ ವೆಂಟಿಲೇಟರ್ ಸಂಪೂರ್ಣವಾಗಿ ಭರ್ತಿಯಾಗಿತ್ತು. ಹೀಗಾಗಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಸಾವನ್ನಪ್ಪುವಂತಾಗಿದೆ.

ತೀವ್ರ ಉಸಿರಾಟದ ತೊಂದರೆಯಿಂದ ರೋಗಿಗಳು ನರಳಾಟ ನಡೆಸುತ್ತಿದ್ದರು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಿದರೆ ಮಾತ್ರ ಅವರು ಬದುಕುತ್ತಾರೆ ಎಂದು ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ಕುಟುಂಬಸ್ಥರು ವೆಂಟಿಲೇಟರ್ ಗಾಗಿ ಅಲೆದಾಡುತ್ತಿದ್ದರು. ಅದೆಷ್ಟೇ ಪ್ರಯತ್ನ ನಡೆಸಿದರೂ ವೆಂಟಿಲೇಟರ್ ಮಾತ್ರ ಸಿಗಲಿಲ್ಲ. ಹೀಗಾಗಿ ಮೂವರು ರೋಗಿಗಳು ಮುಂಡರಗಿ ಆಸ್ಪತ್ರೆಯಲ್ಲಿ‌ ಸಾವನ್ನಪ್ಪಿದ್ದಾರೆ.


ಮೃತರ ಪೈಕಿ ಇಬ್ಬರು ಮುಂಡರಗಿ ತಾಲೂಕಿನ ಬಿದರಳ್ಳಿ, ಬೂದಿಹಾಳ ಗ್ರಾಮದವರಾಗಿದ್ದು, ಒಬ್ಬರು ಕೊಪ್ಪಳ ಜಿಲ್ಲೆಯ ನಿವಾಸಿ ಎಂದು ಹೇಳಲಾಗುತ್ತದೆ.

ಮತ್ತೆ ಕೊರೊನಾ ಹೋರಾಟಕ್ಕೆ ರೂ. 100 ಕೋಟಿ ದೇಣಿಗೆ ನೀಡಿದ ಸುಧಾರ್ಮೂರ್ತಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೋವಿಡ್ ಹೋರಾಟಕ್ಕೆ ದೇಶದ ಮೂಲೆ ಮೂಲೆಯಲ್ಲಿ ದೇಣಿಗೆ ಸಂಗ್ರಹವಾಗುತ್ತಿದೆ. ಸದ್ಯ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಈ ಹೋರಾಟಕ್ಕೆ ರೂ. 100 ಕೋಟಿ ದೇಣಿಗೆ ನೀಡಿದ್ದಾರೆ.

ಜನಕ್ಕೆ ಕಷ್ಟ ಎಂದರೆ ಸಾಕು ಮಿಡಿಯುವ ಸುಧಾಮೂರ್ತಿ ಅವರು ಈ ಬಾರಿಯೂ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಕೋವಿಡ್ ಹೋರಾಟಕ್ಕೆ ಅವರು ರೂ. 100 ಕೋಟಿ ದೇಣಿಗೆ ನೀಡಿದ್ದಾರೆ. ಇಲ್ಲಿಯವರೆಗೂ ಅವರು ಕೋವಿಡ್ ವಿರುದ್ಧದ ಹೋರಾಟಕ್ಕೆ ಬರೋಬ್ಬರಿ ರೂ. 200 ಕೋಟಿ ದೇಣಿಗೆ ನೀಡಿದಂತಾಗಿದೆ.

ಇತ್ತೀಚಿಗೆ ಖಾಸಗಿ ಸುದ್ದಿ ಸಂಸ್ಥೆಯಲ್ಲಿ ಸಂದರ್ಶನ ನೀಡಿದ ಸುಧಾಮೂರ್ತಿ, ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡಿದ್ದೇವೆ. ಸದ್ಯ ಆಸ್ಪತ್ರೆಯು ಪರಿಪೂರ್ಣವಾಗಿ ನಡೆಯುತ್ತಿದೆ. ಕಳೆದ ವರ್ಷ ರೂ. 100 ಕೋಟಿ ನೀಡಲಾಗಿತ್ತು. ಆದರೆ, ಈ ಬಾರಿ ರೂ. 100 ಕೋಟಿಯನ್ನು ಮೂಲಭೂತ ಸೌಕರ್ಯಗಳ ಪೂರೈಕೆಗೆ ಬಳಕೆ ಮಾಡಿಕೊಳ್ಳಲು ವಿತರಿಸಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಮಾತ್ರವಲ್ಲದೆ ಮಂಗಳೂರು ಹೈದ್ರಾಬಾದ್, ಪುಣೆ ಹಾಗೂ ಡೆಲ್ಲಿಯಲ್ಲಿ ನಿಯಂತ್ರಣಕ್ಕೆ ವೆಂಟಿಲೇಟರ್ ಆಮ್ಲಜನಕ ಹಾಗೂ ಸ್ಯಾನಿಟೈಸರ್ ಗಳು ಸೇರಿದಂತೆ ಇನ್ನಿತರ ಉಪಯುಕ್ತ ಉಪಕರಣಗಳನ್ನು ಪೂರೈಸಲಾಗಿದೆ. ಕೋವಿಡ್ ಮಾತ್ರವಲ್ಲದೆ ಎಷ್ಟೋ ಜನ ಹಸಿವಿನಿಂದ ಕೂಡ ಬಳಲುತ್ತಿದ್ದು, ಆಟೋ ಚಾಲಕರು, ದಿನಗೂಲಿ ಕಟ್ಟಡ ಕಾರ್ಮಿಕರು ಸೇರಿದಂತೆ ಬಡ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ಪೂರೈಸಿ, ಕೋವಿಡ್ ಲಸಿಕೆ ತೆಗೆದುಕೊಳ್ಳಿ ಎಂದು ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದ್ದಾರೆ.

ಕುಡಿದ ಅಮಲಿನಲ್ಲಿ ಹೊಡೆದಾಡಿಕೊಂಡರಾ ಡೇವಿಡ್ ವಾರ್ನರ್?

ವಿಜಯಸಾಕ್ಷಿ ಸುದ್ದಿ, ಮಾಲೆ

ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಹಾಗೂ ಆಸ್ಟ್ರೇಲಿಯಾದ ವೀಕ್ಷಕ ವಿವರಣೆಗಾರ ಮೈಕಲ್ ಸ್ಲೇಟರ್ ಅವರು ಕುಡಿದ ಮತ್ತಿನಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ ಮಹಾಮಾರಿಯ ಹಾವಳಿಯಿಂದಾಗಿ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ರದ್ದಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ, ವಿದೇಶಿ ಆಟಗಾರರನ್ನು ಅವರ ದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಆಟಗಾರರನ್ನು ಮಾಲ್ಡೀವ್ಸ್ ಗೆ ಕಳುಹಿಸಿ ಅಲ್ಲಿಂದ ಆಸ್ಟ್ರೇಲಿಯಾಗೆ ಕಳುಹಿಸಲಾಗುತ್ತದೆ.

ಸದ್ಯ ಆಸ್ಟ್ರೇಲಿಯಾದ ಆಟಗಾರರು, ಕೋಚ್, ವೀಕ್ಷಕ ವಿವರಣೆಗಾರರು ಮಾಲ್ಡೀವ್ಸ್ ಹೊಟೇಲ್ ನಲ್ಲಿ ತಂಗಿದ್ದಾರೆ. ಈ ಸಂದರ್ಭದಲ್ಲಿ ಬಾರ್ ಒಂದರಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಲೇಟರ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಆದರೆ, ಈ ಸುದ್ದಿಯನ್ನು ಸದ್ಯ ಪರಸ್ಪರ ಇಬ್ಬರೂ ಆಟಗಾರರು ಅಲ್ಲಗಳೆದಿದ್ದಾರೆ. ನಮ್ಮ ನಡುವೆ ಈ ರೀತಿ ಗಲಾಟೆ ನಡೆದಿಲ್ಲ. ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಸಾಕ್ಷ್ಯವಿಲ್ಲದೇ ವರದಿ ಮಾಡುವುದು ಸರಿಯಲ್ಲ. ಈ ಸುದ್ದಿ ಹೇಗೆ ಹುಟ್ಟಿಕೊಂಡಿತು ಎನ್ನುವುದು ತಿಳಿದಿಲ್ಲ ಎಂದು ಡೇವಿಡ್ ವಾರ್ನರ್ ತಿಳಿಸಿದ್ದಾರೆ.

ಇಹಲೋಕ ತ್ಯಜಿಸಿದ ಖ್ಯಾತ ಚಲನಚಿತ್ರ ಸಾಹಿತಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಖ್ಯಾತ ಚಲನಚಿತ್ರ ಸಾಹಿತಿ ಶ್ರೀರಂಗ ಅವರು ಇಹಲೋಕ ತ್ಯಜಿಸಿದ್ದಾರೆ. ಶ್ರೀರಂಗ (86 ) ಅವರು ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಲ್ಲಿಯ ನಾಗರಬಾವಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ಸುಮಾರು 1000ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿ, ಜನರ ಮನಸ್ಸಿನಲ್ಲಿ ಉಳಿದಿದ್ದರು.

ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ, ರಂಭೆ ನೀ ವಯ್ಯಾರದ ಗೊಂಬೆ, ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ, ಸುಮ್ ಸುಮ್ನೆ ಓಳು ಬಿಡೋ ಸುಂದರಿ ಸೇರಿದಂತೆ ಸಾಕಷ್ಟು ಜನಪ್ರಿಯ ಹಾಡುಗಳನ್ನು ಅವರು ರಚಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ನಿಟ್ಟಿನಲ್ಲಿ ಅವರು ಇತ್ತೀಚೆಗೆ ಸಿನಿಮಾದ ಕೆಲಸಗಳಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ಆರ್ಥಿಕ ಸಂಕಷ್ಟದಿಂದಲೂ ಬಳಲುತ್ತಿದ್ದರು. ಅವರಿಗೆ ಸಹಾಯ ಮಾಡುವಂತೆ ನಟ ಸಂಚಾರಿ ವಿಜಯ್ ಮನವಿ ಮಾಡಿದ್ದರು. ಆದರೆ, ಶ್ರೀರಂಗ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಇಡೀ ಚಿತ್ರರಂಗ ಅವರ ಸಾವಿಗೆ ಕಂಬನಿ ಮಿಡಿಯುತ್ತಿದೆ.

ಆ ಹಾವು ಈ ಹಾವನ್ನು ಹೀಗಾ ನುಂಗೋದು?

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ತಾಲೂಕಿನ ಇಲ್ಲಿನ ಗಾಮನಗಟ್ಟಿ ಗ್ರಾಮದ ಈಶ್ವರೀಯ ವಿಶ್ವವಿದ್ಯಾಲಯದ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ನಾಗರ ಹಾವನ್ನೇ ನುಂಗಿ, ಮತ್ತೊಂದು ನಾಗರಹಾವನ್ನು ಸ್ನೇಕ್ ಸಂಗಮೇಶ ರಕ್ಷಿಸಿದ್ದಾರೆ.

ಕಟ್ಟಡದಲ್ಲಿ ನಾಗರ ಹಾವೊಂದು ಮತ್ತೊಂದು ನಾಗರಹಾವು ನುಂಗಿ ಒದ್ದಾಡುತ್ತಿತ್ತು. ಇದನ್ನು ಕಂಡ ಸ್ಥಳೀಯರು ಸ್ನೇಕ್ ಸಂಗಮೇಶ್ ಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ಸಂಗಮೇಶ್ ಅವರು ಹಾವನ್ನು ಸೆರೆ ಹಿಡಿದು ನುಂಗಿದ ಹಾವನ್ನು ಹೊರೆ ತೆಗೆದಿದ್ದಾರೆ. ನಂತರ ಹಾವನ್ನು ಸುರಕ್ಷಿತವಾಗಿ ಕಲಘಟಗಿಯ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.

ಅನಗತ್ಯ ಓಡಾಟ; ಹದಿನಾರುಕ್ಕೂ ಹೆಚ್ಚು ಬೈಕ್ ಸೀಜ್ ಮಾಡಿದ ಪಿಎಸ್ಐ ನವೀನ ಜಕ್ಕಲಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಪಟ್ಟಣದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಹ ಅನಾವಶ್ಯಕವಾಗಿ ಓಡಾಡುತ್ತಿದ್ದ ಹದಿನಾರಕ್ಕೂ ಹೆಚ್ಚು ಬೈಕ್ ಗಳನ್ನು ಪಿಎಸ್ಐ ನವೀನ ಜಕ್ಕಲಿ ನೇತೃತ್ವದಲ್ಲಿ ಸಿಬ್ಬಂದಿ ಸೀಜ್ ಮಾಡಿದ್ದಾರೆ.

ಬೆಳಿಗ್ಗೆ 6 ಗಂಟೆಯಿಂದಲೇ ರೌಂಡ್ಸ್ ಆರಂಭಿಸಿರುವ ಶಿರಹಟ್ಟಿಯ ಪಿಎಸ್ಐ ನವೀನ್ ಜಕ್ಕಲಿ, ಅನಾವಶ್ಯಕವಾಗಿ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿ, ಹದಿನಾರಕ್ಕೂ ಹೆಚ್ಚು ಬೈಕುಗಳನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಕ್ ಸವಾರರು ತಮ್ಮ ಬೈಕ್ ಗಳನ್ನು ನೀಡುವಂತೆ ಎಷ್ಟೇ ವಿನಂತಿಸಿಕೊಂಡರೂ ಸಹ ಕ್ಯಾರೆ ಎನ್ನದೆ ಪಿಎಸ್ಐ ಸೀಜ್ ಮಾಡಿದ ವಾಹನಗಳನ್ನು ತಮ್ಮ ಸಿಬ್ಬಂದಿಗಳ ಮೂಲಕ ಪೊಲೀಸ್ ಠಾಣೆಗೆ ಕಳಸಿದರು.

ಪಟ್ಟಣದ ಮಾರುಕಟ್ಟೆಯಲ್ಲಿ ಒಂಬತ್ತು ಗಂಟೆಯ ಸುಮಾರಿಗೆ ಅಗತ್ಯ ವಸ್ತು ಹಾಗೂ ತರಕಾರಿಗಳನ್ನು ಕೊಂಡುಕೊಳ್ಳುವುದಕ್ಕೆ ಜನತೆ ಮುಗಿ ಬೀಳುತ್ತಿದ್ದಂತೆಯೇ ಪಿಎಸ್ಐ ನವೀನ, ಮುಗಿಬಿದ್ದ ಜನರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಂಡರು. ಇದನ್ನು ಲೆಕ್ಕಿಸದ ಜನರಿಗೆ ಲಾಠಿ ರುಚಿ ತೋರಿಸಿ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್; ಮನೆ ಬಾಗಿಲಿಗೆ ಬರಲಿದೆ ಇಷ್ಟದ ಬಾಟಲಿಗಳು!

ವಿಜಯಸಾಕ್ಷಿ ಸುದ್ದಿ, ಛತ್ತೀಸಗಢ

ವರದಿ:ಡಾ.ಅಬ್ದುಲ್ ರಜಾಕ್

ಸರಕಾರ ಬಿಗಿಯಾದ ಲಾಕ್ ಡೌನ್ ಜಾರಿ ಮಾಡಿದ್ದರೂ ಕೂಡ ಮದ್ಯ ಮಾರಾಟಕ್ಕೆ ತುಸು ಸಡಿಲ ನೀತಿ ಅನುಸರಿಸಲಾಗುತ್ತಿದೆ.

ಹೌದು… ಸರ್ಕಾರಕ್ಕೆ ಭಾರಿ ಆದಾಯ ತಂದುಕೊಡುವ ಮದ್ಯದಂಗಡಿ ಮುಚ್ಚಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಮನೆಯ ಬಾಗಿಲಿಗೆ ಮದ್ಯವನ್ನು ಪೂರೈಕೆ ಮಾಡಲು ಛತ್ತೀಸಗಢ ಸರ್ಕಾರ ಮುಂದಾಗಿದೆ.

ಈ ಬಗ್ಗೆ ಅಬಕಾರಿ ಸಚಿವ ಕವಾಸಿ ಲಖ್ಮಾ ಮಾಹಿತಿ ನೀಡಿದ್ದು, ಛತ್ತೀಸಗಢ ರಾಜ್ಯದಲ್ಲಿ ಮದ್ಯ ಹೋಂ ಡೆಲಿವರಿ ಪ್ರಾರಂಭ ಮಾಡಲಾಗುವುದು. ಲಾಕ್ ಡೌನ್ ನಿಂದ ಸರ್ಕಾರ ನಷ್ಟದಲ್ಲಿದೆ. ಈ ನಷ್ಟವನ್ನು ತುಂಬುವ ಕಾರಣಕ್ಕೆ ಈ ನಿರ್ಧಾರ ಕೈ ಗೊಳ್ಳಲಾಗಿದೆ. ಮದ್ಯ ಮಾರಾಟ ಸ್ಥಗಿತಗೊಂಡರೆ ಸರ್ಕಾರಕ್ಕೆ ಭಾರಿ ನಷ್ಟವಾಗುತ್ತದೆ ಹಾಗಾಗಿ ಈ ನಿರ್ಧಾರ ಎಂದು ತಿಳಿಸಿದ್ದಾರೆ.

error: Content is protected !!