ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಬೃಹತ್ ಮೊತ್ತದ ಟೆಂಡರ್‌ಗಳನ್ನು ವಿಂಗಡಿಸಿ ಉಪವಿಭಾಗವಾರು ಮಟ್ಟದಲ್ಲಿ ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ನೀಡಲು ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದಿಂದ ಹುಬ್ಬಳ್ಳಿಯ ಹೆಸ್ಕಾಂ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ರವೀಂದ್ರ ಬಿ. ಜೋಗಿನ್, ಹೆಸ್ಕಾಂದಿಂದ ಸ್ಥಳೀಯ ವಿದ್ಯುತ್ ಗುತ್ತಿಗೆದಾರರು ಯಾವುದೇ ರೀತಿಯ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯಿಂದ ಉಪಜೀವನ ನಿರ್ವಹಿಸಲು ಸಹಾಯ ದೊರಕಿರುವುದಿಲ್ಲ. ಬೃಹತ್ ಮೊತ್ತದ ಟೆಂಡರ್‌ಗಳನ್ನು ಕರೆದು ಬಂಡವಾಳಶಾಹಿಗಳಿಗೆ ನೀಡುವುದರಿಂದ ಸ್ಥಳೀಯ ಸಾಮಾನ್ಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಬೃಹತ್ ಕಾಮಗಾರಿಗಳನ್ನು ಬಂಡವಾಳಶಾಹಿಗಳು ಕಾರ್ಯವೈಖರಿಯ ಬಗ್ಗೆ ಇಲಾಖೆಗೆ ಸಂಪೂರ್ಣ ಮಾಹಿತಿ ಇದೆ. ಇಲಾಖೆಯು ೧ರಿಂದ ೫ ಲಕ್ಷದ ವರೆಗಿನ ಕಾಮಗಾರಿಗಳನ್ನು ಟೆಂಡರ್ ಕರೆಯದೇ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು. ಇದರಿಂದ ಗುಣಮಟ್ಟದ ಕಾಮಗಾರಿ ಆಗುವುದು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿವೆ ಎಂದರು.
ಅಭಿವೃದ್ಧಿ ಹೊಂದದೇ ಇರುವ ಬಡಾವಣೆಗಳಲ್ಲಿ ನಿರ್ಮಿಸಿದ ಮನೆಗಳಲ್ಲಿ ವಿದ್ಯುತ್ ಸಂಪರ್ಕ ನೀಡಲು ಕೆ.ಇ.ಆರ್.ಸಿ ೧೦ನೇ ತಿದ್ದುಪಡಿಯ ನಿಬಂಧನೆ ಪ್ರಕಾರ ವಿದ್ಯುತ್ ಸಂಪರ್ಕಕಕ್ಕೆ ಮಂಜೂರಿ ನೀಡದೆ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಕಡತವನ್ನು ಹಿಂದಿರುಗಿಸುವುದು ಆದರೆ ಇನ್ನೊಬ್ಬ ಗ್ರಾಹಕನಿಗೆ ಇದೇ ಕೆ.ಇ.ಆರ್.ಸಿ ಪ್ರಕಾರ ವಿದ್ಯುತ್ ಸಂಪರ್ಕಕ್ಕೆ ಮಂಜೂರಾತಿ ನೀಡಿದೆ. ಇಂತಹ ಮಲತಾಯಿ ಧೋರಣೆ ಅನುಸರಿಸುವುದು ಸರಿಯಲ್ಲ ಎಂದರು.
ಹೆಸ್ಕಾಂ ಗದಗ ವಿಭಾಗೀಯ ಉಗ್ರಾಣದಲ್ಲಿ ಸ್ಥಳೀಯ ಗುತ್ತಿಗೆ ಕಾಮಗಾರಿ ನಿರ್ವಹಿಸಲು ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಉಗ್ರಾಣ ಅಧಿಕಾರಿಗಳು ಸರಿಯಾಗಿ ಪೂರೈಸುತ್ತಿಲ್ಲ ಎಂದರು. ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಬೃಹತ್ ಟೆಂಡರ್ ಸ್ಥಳೀಯವಾಗಿ ನೀಡಲು ಆಗ್ರಹ
ರಸ್ತೆ ದುರಸ್ತಿಗೆ ಆಗ್ರಹಿಸಿ ಕರವೇ ಮುತ್ತಿಗೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯಾದ್ಯಂತ ಅನೇಕ ರಸ್ತೆಗಳು ಸಂಪೂರ್ಣ ಹದಗೆಟ್ಟು ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅ.12ರಂದು ಬೆಳಿಗ್ಗೆ 11.30 ಕ್ಕೆ ಲೋಕೋಪಯೋಗಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಹನಮಂತ ಎಚ್. ಅಬ್ಬಿಗೇರಿ ತಿಳಿಸಿದ್ದಾರೆ.
ಎಲ್ಲ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣ ಕೂಡಲೇ ಕೈಗೊಳ್ಳಬೇಕಂದು ಆಗ್ರಹಿಸಿ ನಗರದ ರಾಣಿಚನ್ನಮ್ಮ ವೃತ್ತದಿಂದ ನಗರದಲ್ಲಿರುವ ಲೋಕೋಪಯೋಗಿ ಇಲಾಖೆಯವರೆಗೆ ಪಾದಯಾತ್ರೆಯ ಮೂಲಕ ತೆರಳಿ ಮುತ್ತಿಗೆ ಹಾಕಲಾಗುವುದು.
ಈ ಪಾದಯಾತ್ರೆಯನ್ನು ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೋಂಪುರ ನೇತೃತ್ವದಲ್ಲಿ ಜಿಲ್ಲಾ ಕರವೇ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾಧ್ಯಕ್ಷ ಹನಮಂತ ಎಚ್. ಅಬ್ಬಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ತಪಾಸಣಾ ಶಿಬಿರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ವಿಶ್ವ ಹೃದಯ ದಿನದ ಅಂಗವಾಗಿ ಭಾರತ ಸರ್ಕಾರ ಅಕ್ಟೋಬರ್ 2 ರಿಂದ 23 ರವರೆಗೆ ಸದೃಢ ಆರೋಗ್ಯ ಕಾರ್ಯಕರ್ತರ ಅಭಿಯಾನ ಹಮ್ಮಿಕೊಳ್ಳಲು ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಎಲ್ಲಾ ಜಿಲ್ಲಾ ಮಟ್ಟದ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಅಸಾಂಕ್ರಾಮಿಕ ಕಾಯಿಲೆಗಳಾದ ರಕ್ತದೊತ್ತಡ, ಮಧುಮೇಹ ಹಾಗೂ ಸಾಮಾನ್ಯ ಕ್ಯಾನ್ಸರ್ (ಬಾಯಿ, ಸ್ತನ ಮತ್ತು ಗರ್ಭಾಶಯ ಕಂಠದ ಕ್ಯಾನ್ಸರ್) ತಪಾಸಣೆಯನ್ನು ಅಕ್ಟೋಬರ್ 12 ರಿಂದ 14 ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ 101 ರಲ್ಲಿ ಹಮ್ಮಿಕೊಳ್ಳಲಾಗಿದೆ.
ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ತಾಲೂಕಿನ ವಾಸನ ಗ್ರಾಮದಲ್ಲಿ ಪ್ರಮುಖ ರಸ್ತೆಯೊಂದು ಹಾಳಾಗಿ ತಿಂಗಳು ಕಳೆದರೂ ದುರಸ್ತಿಗಾಗಿ ಗ್ರಾಪಂ ಅಥವಾ ಸಂಬಂಧಿಸಿದ ಅಧಿಕಾರಿಗಳು ಕಾರ್ಯೋನ್ಮುಖರಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿಕೊಡಲು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ತಗ್ಗು ದಿಣ್ಣೆಗಳಿಂದ ತುಂಬಿದ ರಸ್ತೆಯನ್ನು ವಾಹನ ಸಂಚಾರಕ್ಕೆ ಗ್ರಾಮಸ್ಥರು ಬಳಸುವುದನ್ನೇ ತಟಸ್ಥಗೊಳಿಸಿದ್ದಾರೆ. ಸಮಸ್ಯೆ ಪರಿಶೀಲಿಸಿ ರಸ್ತೆ ದುರಸ್ತಿಗೊಳಿಸಬೇಕು. ಇದರಿಂದ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ರಸ್ತೆ ಮತ್ತು ಗ್ರಾಮದ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ದೊರೆತಿರಲಿಲ್ಲ. ಪ್ರಸಕ್ತ ಒಂದು ಕೋಟಿ ರೂ. ಅನುದಾನ ದೊರೆತಿದೆ. ಇದರಲ್ಲಿ ರಸ್ತೆ ಕಾಮಗಾರಿ ಮತ್ತು ಗ್ರಾಮದಲ್ಲಿ ಸಮುದಾಯ ಭವನ ಮತ್ತು ಎರಡು ಯುವಕ ಮಂಡಳ ಕಟ್ಟಡ, ಚರಂಡಿ ಕಾಮಗಾರಿ, ಗ್ರಾಮದ ಎರಡು ಭಾಗದಲ್ಲಿ ಹೈಮಾಸ್ಕ್ ಅಳವಡಿಕೆ, ಗ್ರಾಪಂ ಕಾರ್ಯಾಲಯದಲ್ಲಿ ಕೊಠಡಿ ನಿರ್ಮಾಣಕ್ಕಾಗಿ ಅನುದಾನ ಲಭ್ಯವಾಗಿದೆ.
ಹಂತ ಹಂತವಾಗಿ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು. ರಸ್ತೆ ಕಾಮಗಾರಿ ಭೂಸೇನಾ ನಿಗಮದವರಿಗೆ ವಹಿಸಲಾಗಿದ್ದು, ಅವರು ಕಳೆದ ಎರಡು ದಿನಗಳಿಂದ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ ಎಂದು ಗ್ರಾಪಂ ಪಿಡಿಒ ಎಂ.ಎ. ವಾಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿ ದಾಳಿ ಖಂಡನೀಯ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕುಂದಗೋಳ
ನಗರದ ಗಾಳಿ ಮರೆಮ್ಮ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯವರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಮೇಲೆ ಪದೇ ಪದೇ ತನಿಖೆಯನ್ನು ಮಾಡುತ್ತಿರುವುದನ್ನು ಖಂಡಿಸಿ ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಸಿ. ಶಿವಳ್ಳಿ ನೇತೃತ್ವದಲ್ಲಿ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಶಾಸಕಿ ಕುಸುಮಾವತಿ ಸಿ. ಶಿವಳ್ಳಿ, ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಪದೇಪದೇ ದಾಳಿ ಮಾಡುತ್ತಿರುವುದು ಖಂಡನೀಯ, ಇ.ಡಿ. ಮತ್ತು ಸಿ.ಬಿ.ಐ. ಮೇಲೆ ಒತ್ತಡ ಹೇರಿ ರಾಜಕಾರಣ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಿಳಿಸಿದರು.
ಅರವಿಂದ ಕಟಗಿ ಮಾತನಾಡಿ, ಕೊರೋನಾ ರಾಜ್ಯದಲ್ಲಿ ರುದ್ರ ತಾಂಡವವಾಡುತ್ತಿದೆ. ಅದರ ಕಡೆ ಗಮನ ಕೊಡುವುದನ್ನು ಬಿಟ್ಟು ಪಕ್ಷದ ನಾಯಕರ ಮೇಲೆ ದಾಳಿ ಮಾಡುವುದು ಸಲ್ಲದು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಉಮೇಶ ಹೆಬಸುರ, ಸುರೇಶ ಗಂಗಾಯಿ, ವೆಂಕನಗೌಡ್ರ ಪೊಲೀಸ್‌ಪಾಟೀಲ, ಇರ್ಷಾದ್ ಅಹ್ಮದ್ ಹುಳಗುರ, ಬೀರಪ್ಪ ಕುರಬರ, ಅಡಿವೆಪ್ಪ ಶಿವಳ್ಳಿ, ಬಸಲಿಂಗಪ್ಪ ಕೋರಿ, ರಾಯಸಾಬ ಕಳ್ಳಿಮನಿ, ನಿಂಗಪ್ಪ ಹಳ್ಳಿಕೇರಿ, ಅಪ್ಪಣ್ಣ ಹಿರೇಗೌಡ್ರ, ಸಕ್ರಪ್ಪ ಲಮಾಣಿ, ಮಲ್ಲೇಶ್ ಬೆಳವಡಿ, ಬಾಲಚಂದ್ರ, ಲಕ್ಷ್ಮೀ ಸಂಕಣ್ಣವರ, ರಾಮನಗೌಡ್ರ ಪಾಟೀಲ್, ಸಲೀಂ ಕ್ಯಾಲಕೊಂಡ, ಬಸವರಾಜ ಶಿರಸಂಗಿ, ರಮೇಶ ಲಮಾಣಿ, ಗುರುಶಾಂತ ಪಾಟೀಲ, ಸಿದ್ದಪ್ಪ ಚೂರಿ, ಮಕ್ತುಮಸಾಬ ಲಾಡಸಾಬನವರ್, ಕವಿತಾ ಸೊಟ್ಟಮನವರ್, ಯಲ್ಲಪ್ಪ ದಾಸರ್, ರಫೀಕ್ ನಧಾಪ್, ಅಶ್ಪಕ್ ಪಾಪನ್ನವರ್, ಹನಮಂತ ಲಕ್ಷ್ಮೇಶ್ವರ್, ನಿಂಗವ್ವ ಕುಮ್ಮಣ್ಣವರ್, ವೀಣಾ, ಗೀತಾ ಕೋಟಿಗೌಡ್ರ, ಸಲೀಮ್ ಕಡ್ಲಿ, ಗಿರೀಶ ಮುದಿಗೌಡ್ರ ಮತ್ತಿತರರು ಇದ್ದರು.
ರಾಮವಿಲಾಸ ಪಾಸ್ವಾನ್‌ಗೆ ಶ್ರದ್ಧಾಂಜಲಿ ಸಭೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ
ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವ ರಾಮವಿಲಾಸ ಪಾಸ್ವಾನ್ ಅವರ ಶ್ರದ್ಧಾಂಜಲಿ ಸಭೆಯು ಹುಬ್ಬಳ್ಳಿ-ಧಾರವಾಡ ಮಹಾನಗರ ಬಿಜೆಪಿ ಎಸ್.ಸಿ. ಮೋರ್ಚಾದಿಂದ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಎಸ್.ಸಿ. ಮೋರ್ಚಾದ ಅಧ್ಯಕ್ಷ ಬಸವರಾಜ ಅಮ್ಮಿನಬಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ವಿವಿಧ ಮುಖಂಡರು ರಾಮವಿಲಾಸ ಪಾಸ್ವಾನ್ ಅವರನ್ನು ಸ್ಮರಿಸಿದರು.
ಸಭೆಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ರಾಜ್ಯ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಮಹೇಂದ್ರ ಕೌತಾಳ, ರವಿ ನಾಯ್ಕ, ಹನಮಂತಪ್ಪ ಚಲವಾದಿ, ಸುಭಾಷ್ ಅಂಕಲಕೋಟಿ, ಮಂಜುನಾಥ ಬಿಜವಾಡ, ಕಿಟ್ಟು ಬಿಜವಾಡ, ರೇಣುಕಪ್ಪ ಕೇಲೂರ, ಚಂದ್ರಶೇಖರ ಗೋಕಾಕ್, ಶಶಿ ಬಿಜವಾಡ, ಮುರಗೇಶ ಹೊರಡಿ, ಸತೀಶ ಸತ್ಪತಿ, ಗುರುನಾಥ ಉಪ್ಪಲದಡ್ಡಿ ಮತ್ತಿತರರು ಭಾಗವಹಿಸಿದ್ದರು.
ಮನೀಷಾ ಹತ್ಯೆ ಖಂಡಿಸಿ ಪ್ರತಿಭಟನೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಉತ್ತರ ಪ್ರದೇಶದ ದಲಿತ ಯುವತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಬೇಕು. ಪ್ರಕರಣದಲ್ಲಿ ಅಲ್ಲಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬೆಟಗೇರಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಡಿಎಸ್‌ಎಸ್ (ಅಂಬೇಡ್ಕರವಾದ) ಮುಖಂಡ ಮುತ್ತಪ್ಪ ಭಜಂತ್ರಿ ಮಾತನಾಡಿ, ಇದೊಂದು ಪೈಶಾಚಿಕ ಕೃತ್ಯವಾಗಿದೆ. ಅತ್ಯಾಚಾರ-ಹತ್ಯೆ ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ. ಈ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಮಂಜುನಾಥ ಹೇಮಣ್ಣ ಮುಳಗುಂದ ಮಾತನಾಡಿ, ಮನೀಷಾಳಂತ ಹೆಣ್ಣು ಮಕ್ಕಳ ಗೋಳು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಅವರಿಗೆ ಗೊತ್ತಾಗುತ್ತಿಲ್ಲ. ಮುಂದಿನ ದಿನಮಾನಗಳಲ್ಲಿ ಅಂತಹ ಸರ್ಕಾರದ ವಿರುದ್ಧ ದಲಿತರ ಪ್ರತಿಭಟನೆ ಇದ್ದೇ ಇರುತ್ತದೆ ಎಂದು ಹೇಳಿದರು.
ದಲಿತ ಮುಖಂಡರಾದ ಕೆಂಚಪ್ಪ ಮ್ಯಾಗೇರಿ, ಡಿಎಸ್‌ಎಸ್ ಮುಖಂಡ ಬಾಲರಾಜ, ಅಬ್ದುಲ್ ಕಲಾಮ್ ಕ್ಷೇಮಾಭಿವೃದ್ದಿ ಟ್ರಸ್ಟ್‌ನ ಮುಖಂಡ ರಾಜೇಸಾಬ ಬಳ್ಳಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಶರೀಫ್ ಬಿಳೆಯಲಿ, ಅರುಣ ಹಿರೇಮಠ, ಪರಶುರಾಮ ಕಾಳೆ, ಅನಿಲ ಕಾಳೆ, ಆಂಜನೇಯ ಜಾಲಗಾರ, ಚಿನ್ನುಸ್ವಾಮಿ ಬಳ್ಳಾರಿ, ಅಮೀರ ಸೈಯದ್, ಚಿದಾನಂದ ಶ್ಯಾವಿ, ಮಂಜುನಾಥ ದೊಡ್ಡಮನಿ, ಚಂದ್ರಶೇಖರ ದಾಸರ, ಬಸವರಾಜ ವಡ್ಡರ, ರಫೀಕ್ ತಹಶೀಲ್ದಾರ್, ವೆಂಕಪ್ಪ ದಾಸರ, ಯಶವಂತ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಶಾಸಕರಿಂದ ರೈತರ ಕಣ್ಣೀರೊರೆಸುವ ತಂತ್ರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹರಪನಹಳ್ಳಿ
ತಾಲೂಕಿನಲ್ಲಿನ ಅತಿವೃಷ್ಠಿ, ವಿವಿಧ ಸಮಸ್ಯೆಗಳಿಂದ ರೈತರು ತತ್ತರಿಸಿದ್ದಾರೆ. ಈ ನಡುವೆ ಶಾಸಕ ಜಿ.ಕರುಣಾಕರರೆಡ್ಡಿ ಪರಿಹಾರಕ್ಕಾಗಿ ಮುಖ್ಯಮಂತ್ರಿ ಭೇಟಿ ಮಾಡಿ, ಚರ್ಚಿಸುತ್ತೇನೆಂದು ಭರವಸೆ ನೀಡುತ್ತಾರೆಯೇ ವಿನಃ ಯಾವುದೇ ಕ್ರಮಕ್ಕೂ ಮುಂದಾಗುತ್ತಿಲ್ಲ. ಶಾಸಕರು ಕ್ಷೇತ್ರದ ರೈತರ ಕಣ್ಣೀರು ಒರೆಸುವ ತಂತ್ರ ರೂಪಿಸಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಶಶಿಧರ್ ಪೂಜಾರ್ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಇತ್ತೀಚೆಗೆ ರಾಜ್ಯದ 16 ಜಿಲ್ಲೆಗಳಲ್ಲಿನ 43 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳು ಎಂದು ಘೋಷಿಸಿರುವ ಪಟ್ಟಿಯಲ್ಲಿ ಹರಪನಹಳ್ಳಿ ತಾಲೂಕನ್ನು ಕಡೆಗಣಿಸಿರುವು ತೀವ್ರ ಖಂಡನೀಯ. ಅಕಾಲಿಕ ಮಳೆಯಿಂದಾಗ ತಾಲೂಕಿನಾದ್ಯಂತ ರೈತರು ಬೆಳೆದ ಬಹುತೇಕ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಮನೆಗಳು ನೆಲಸಮಗೊಂಡಿವೆ ಎಂದರು.
ಸೈನಿಕ ಹುಳುಬಾಧೆಗೆ ಈರುಳ್ಳಿ ಬೆಳೆದ ರೈತರು ಅಕ್ಷರಶಃ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದಾರೆ. ಇಂತಹ ಹಿಂದುಳಿದ ಪ್ರದೇಶವನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡದಿರುವುದು ನಿಜಕ್ಕೂ ವಿಪರ್ಯಾಸ ಸಂಗತಿ ಎಂದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸ್ಥಳೀಯ ಶಾಸಕ ಜಿ.ಕರುಣಾಕರರೆಡ್ಡಿ ಕೂಡಲೇ ಹರಪನಹಳ್ಳಿ ತಾಲೂಕನ್ನು ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಬೇಕು. ತೀವ್ರ ಸಂಕಟದಲ್ಲಿರುವ ತಾಲೂಕಿನ ರೈತರ ನೆರವಿಗೆ ಧಾವಿಸಬೇಕೆಂದು ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಶಶಿಧರ್ ಪೂಜಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ವರದಿ ಸಲ್ಲಿಸಲು ಮುಖ್ಯಮಂತ್ರಿಗಳ ಸೂಚನೆ
ವಿಜಯಸಾಕ್ಷಿ ಸುದ್ದಿ ಬೆಂಗಳೂರು
ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳನ್ನು ಗುರುತಿಸಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸಮಗ್ರ ವರದಿಯೊಂದಿಗೆ ಅನುಮತಿ ಪಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚಿಸಿದರು.
ಇಂದು ಪ್ರವಾಸೋದ್ಯಮ ಇಲಾಖೆ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಈಗಾಗಲೇ ಗುರುತಿಸಲಾಗಿರುವ ಪ್ರವಾಸೋದ್ಯಮ ಕೇಂದ್ರಗಳ ಸಮಗ್ರ ಅಭಿವೃಧ್ಧಿಗೆ ಇರುವ ತೊಡಕುಗಳನ್ನು ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿಗಳು ಅನುಮತಿ ನೀಡಿದರು. ಈ ನಿಟ್ಟಿನಲ್ಲಿ ಅಗತ್ಯ ತಿದ್ದುಪಡಿಯೊಂದಿಗೆ ಪ್ರಸ್ತಾವನೆ ಯನ್ನು ಮಂಡಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯ ಮುಖ್ಯಾಂಶಗಳು:
1. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಜಿಲ್ಲೆಗಳನ್ನು ಗುರುತಿಸಿ ಅಧಿಕಾರಿಗಳನ್ನು ನಿಯೋಜಿಸುವಂತೆ ಇಲಾಖಾ ಸಚಿವ ಸಿ.ಟಿ.ರವಿ ಮುಖ್ಯಮಂತ್ರಿಗಳನ್ನು ಕೋರಿದರು. ಜಿಲ್ಲೆಗಳಲ್ಲಿ ಅಧಿಕಾರಿಗಳಿಲ್ಲದೆ ಪ್ರಗತಿ ಪರಿಶೀಲನೆ ಅಸಾಧ್ಯವಾಗಿದೆ ಎಂಬ ಅಂಶವನ್ನು ಅವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
2. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿರುವ ಜಿಲ್ಲೆಗಳಲ್ಲಿ ಕೆ.ಎ.ಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರವನ್ನು ನೀಡಬಹುದಾಗಿದೆ ಎಂದು ಅವರು ಹೇಳಿದರು.
3. ಪ್ರವಾಸೋದ್ಯಮಕ್ಕೆ ಉತ್ತೇಜನ ಇಲಾಖೆಯ ಮುಖ್ಯ ಧ್ಯೇಯವಾಗಬೇಕಿದ್ದು, ಅಭಿವೃದ್ಧಿ ತಾಣಗಳ ಗುರುತಿಸುವಿಕೆ, ನಿರ್ವಹಣೆ, ಸಂರಕ್ಷಣೆ ಆದ್ಯತೆಯಾಗಬೇಕು.
4. ಯೋಜನೆಯನ್ನು ಪರಿಪೂರ್ಣವಾಗಿ ಕೈಗೊಂಡು ಮುಗಿಸಬೇಕು, ಆಗ ಮಾತ್ರ ರಾಜ್ಯದ ಪ್ರವಾಸೋದ್ಯಮದಲ್ಲಿ ಅಭಿವೃದ್ದಿಯಲ್ಲಿ ಹೊಸ ಶಕೆಯನ್ನು ನಿರೀಕ್ಷಿಸಬಹುದು.
5. ಜೋಗ ಜಲಪಾತ 120 ಕೋಟಿ ರೂ.ಗಳ ಯೋಜನೆ ಕೆ.ಪಿ.ಸಿ.ಎಲ್ ಮೂಲಕ ಅನುಷ್ಠಾನಕ್ಕೆ ತರಲಾಗುವುದು. ಈ ಮಾಹೆಯ ಅಂತ್ಯದೊಳಗೆ ಯೋಜನೆಯ ವೆಚ್ಚವನ್ನು ಅಂತಿಮಗೊಳಿಸಲಾಗುವುದು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮಾಹಿತಿ ನೀಡಿದರು.
6. ಕೆಮ್ಮಣ್ಣುಗುಂಡಿ ಮತ್ತು ನಂದಿ ಬೆಟ್ಟದ ಸಮಗ್ರ ಅಭಿವೃದ್ಧಿಯ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವಂತೆ ಪ್ರವಾಸೋದ್ಯಮ ಇಲಾಖಾ ಸಚಿವರು ಸಲಹೆ ಮಾಡಿದರು.
8. ಬಾದಾಮಿ ಅಭಿವೃದ್ಧಿ ಆದ್ಯತೆಯ ಬಗ್ಗೆಯೂ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಅಂತರರಾಷ್ಟ್ರೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಈ ತಾಣದಲ್ಲಿ ವಿಶ್ವಮಟ್ಟದ ಸೌಲಭ್ಯಗಳನ್ನು ಕಲ್ಪಿಸಲು ಎ.ಪಿ.ಎಂ.ಸಿ ಭೂಮಿಯನ್ನು ಕೆ.ಎಸ್.ಟಿ.ಡಿ.ಸಿ ಗೆ ಹಸ್ತಾಂತರ ಮಾಡಿ ವಾಹನ ನಿಲ್ದಾಣ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬಹುದು.
9. ಶ್ರೀರಂಗಪಟ್ಟಣ ಹಾಗೂ ಮೈಸೂರು ಹಾಥ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು.
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷರಾದ ಶೃತಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆ ಮೀಸಲಾತಿ ಪ್ರಕಟ
ವಿಜಯಸಾಕ್ಷಿ ಸುದ್ದಿ ಗದಗ
ವರ್ಷಗಳ ನಂತರ ದಿಢೀರ್ ಆಗಿ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಗೊಂಡಿದ್ದ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಅಕ್ಟೋಬರ್ 8ರಂದು ರಾಜ್ಯ ಸರಕಾರ ಹೊರಡಿಸಿದ ಅ„ಕೃತ ರಾಜ್ಯಪತ್ರದಲ್ಲಿ ಈ ಮಾಹಿತಿ ಲಭ್ಯವಾಗಿದ್ದು, ಜಿಲ್ಲೆಯ ಇನ್ನುಳಿದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯೂ ಪ್ರಕಟವಾಗಿದೆ.
ಮುಂಡರಗಿ ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ಬ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. ನರಗುಂದ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಅದೇ ರೀತಿ ಗಜೇಂದ್ರಗಡ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆ, ರೋಣ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸಲಾಗಿದೆ.

