ಇಲ್ಲೊಬ್ಬ ಹಸೆಮಣೆ ಏರುವ ದಿನವೇ ಹಣೆಗೆ ಬಾಸಿಂಗ ಕಟ್ಟಿಕೊಂಡು ಬಂದು ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಗದಗ ತಾಲ್ಲೂಕಿನ ಸೊರಟೂರು ಗ್ರಾ.ಪಂ.ಗ ಅದೇ ಗ್ರಾಮದ ೩ನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಮದುಮಗ ಪರಶುರಾಮ ಮಲ್ಲಾರಿ ಉಮೇದುವಾರಿಕೆ ಸಲ್ಲಿಸಿದ್ದಾನೆ.
ಮದುವೆ ದಿನವೇ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಪರಶುರಾಮ ಹಣೆಗೆ ಬಾಸಿಂಗ ಕಟ್ಟಿಕೊಂಡು, ಮದುವೆ ದಿರಿಸಿನಲ್ಲೇ ಗ್ರಾಮಸ್ಥರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದಾನೆ. ನಾಮಪತ್ರ ಸಲ್ಲಿಸಿದ ನಂತರ ಮದುವೆ ಮಂಟಪಕ್ಕೆ ತೆರಳಿ ವಧುವಿಗೆ ಮಾಂಗಲ್ಯಧಾರಣೆ ಮಾಡಿದ್ದಾನೆ. ವೈವಾಹಿಕ ಜೀವನಕ್ಕೆ ಕಾಲಿಡುವುದರೊಂದಿಗೆ ರಾಜಕೀಯ ಭವಿಷ್ಯಕ್ಕೂ ಮುನ್ನುಡಿ ಬರೆದಿದ್ದಾರೆ.
ಅವು ದೈತ್ಯಾಕಾರದ ಗಾಡಿಗಳು, ರಸ್ತೆಯಲ್ಲಿ ಬಂದರೆ ಯಮ ಸ್ವರೂಪಿಯಂತೆ ಭಾಸವಾಗುತ್ತವೆ. ಮಗ್ಗಲಲ್ಲಿ ಹಿಂದೆ ಮುಂದೆ ಯಾರಿದ್ದರೇನೂ ಯಾವ ಗಾಡಿಗಳಿದ್ದರೇನು ನುಗ್ಗುವುದೊಂದೆ ಅದರ ಕೆಲಸ. ಇದರ ಭಾರಕ್ಕೆ ರಸ್ತೆ ಕಿತ್ತುಕೊಂಡು ಬಂದರೆ, ಹೋಗುವ ರಭಸಕ್ಕೆ ಮಗ್ಗುಲಲ್ಲಿ ಹೋಗುವವರ ಎದೆ ಒಂದು ಕ್ಷಣ ಝಲ್ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇತ್ತೀಚಿಗೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚುತ್ತಿದೆ. ಟಿಪ್ಪರ್‌ಗಳಲ್ಲಿ ಮಿತಿಮಿರಿ ಸಾಮಾಗ್ರಿಗಳನ್ನು ತುಂಬುತ್ತಿರುವುದರಿಂದ ರಸ್ತೆಯ ಇಕ್ಕಲಗಳೆಲ್ಲಾ ಗುಂಡಿಗಳಿಂದ ಆವೃತವಾಗಿವೆ. ಇದರಿಂದ ದಿನಕ್ಕೊಬ್ಬರಾದ್ರೂ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯವೋ ಟಿಪ್ಪರ್ ಚಾಲಕರ ಬೇಜವಾಬ್ದಾರಿತನವೋ ಗೊತ್ತಿಲ್ಲ.
ಅತಿಯಾದ ಹೊರೆಹೊತ್ತು ನಗರದೊಳಗೆ ರಾಜಾರೋಷವಾಗಿ ನುಗ್ಗುವ ಟಿಪ್ಪರ್‌ಗಳ ಬಗ್ಗೆ ಪೊಲೀಸರಿಗೆ ಚೆನ್ನಾಗಿಯೇ ಗೊತ್ತಿದೆ. ಆದರೂ, ಟಿಪ್ಪರ್‌ಗಳಿಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಇದಕ್ಕೆ ಕಾರಣ ಬೇರೆಯದ್ದೇ ಇದೆ ಎಂದು ಜನ ಅಂದುಕೊಳ್ಳುತ್ತಿದ್ದಾರೆ. ಟಿಪ್ಪರ್‌ಗಳ ಹಾವಳಿಯಿಂದಾಗಿ ದಾರಿ ಹೋಕರು ಮತ್ತು ಸಣ್ಣಪುಟ್ಟ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ವಾತಾವರಣ ಸೃಷ್ಠಿಯಾಗಿದೆ.
ಇಂತಹದ್ದೇ ಒಂದು ದುರ್ಘಟನೆ ಹುಬ್ಬಳ್ಳಿಯಲ್ಲಿ ಶನಿವಾರ ನಡೆದಿದೆ. ಇಲ್ಲಿನ ಗೋಕುಲ್ ರಸ್ತೆಯ ಬಸವೇಶ್ವರ ನಗರದ ನಿವಾಸಿ ರಾಕೇಶ್ ಕುಲಕರ್ಣಿ ಎಂಬ ಯುವಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಸಿವಿಲ್ ಇಂಜನಿಯರಿಂಗ್ ವಿದ್ಯಾರ್ಥಿಯಾಗಿರುವ ರಾಕೇಶ್ ಅವರ ಸ್ಕೂಟರ್ ಹಾಗೂ ನರೇಶ ನಾಯಕ್ ಮಾಲಿಕತ್ವದ ಟಿಪ್ಪರ್ ಮಧ್ಯೆ ಶನಿವಾರ ಮುಂಜಾನೆ ಅಪಘಾತ ಸಂಭವಿಸಿದೆ. ರಾಕೇಶ್ ಸಾವಿನ ದವಡೆಯಿಂದ ಪಾರಾಗಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.
ಅಪಘಾತಗೊಂಡಿರುವ ಲಾರಿ ಕಲಘಟಗಿ ತಾಲ್ಲೂಕಿನ ಎಮ್ಮೆಟ್ಟಿ ಕಲ್ಲಿನ ಗಣಿಯಿಂದ ಜಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಬೈಪಾಸ್‌ನಿಂದ ಗೋಕುಲ ರಸ್ತೆಯ ಮಾರ್ಗವಾಗಿ ಮಾರಡಗಿ ಗ್ರಾಮಕ್ಕೆ ಹೋಗುತ್ತಿತ್ತು. ಟಿಪ್ಪರ್ ಚಾಲಕ ತಿರುವಿನಲ್ಲಿ ಹಠಾತ್ತಾಗಿ ತಿರುವಿದ್ದರಿಂದ ಲಾರಿಯ ಹಿಂಬದಿ ಟೈಯರ್‌ಗೆ ಸಿಲುಕಿಕೊಂಡ ರಾಕೇಶ್ ಕಿರುಚಾಡಿದ್ದರಿಂದಾಗಿ ಚಾಲಕ ಲಾರಿ ನಿಲ್ಲಿಸಿದ್ದಾನೆ. ಇದರಿಂದ ರಾಕೇಶ್ ಜೀವ ಉಳಿಯಿತು.
ಮಿತಿಮೀರಿ ಜಲ್ಲಿ ತುಂಬಿದ ಭಾರೀ ಗಾತ್ರದ ಟಿಪ್ಪರ್‌ಗಳು ನಗರದೊಳಗೆ ಸಂಚರಿಸುತ್ತಿರುವುದರಿಂದ ಜನರ ಜೀವಕ್ಕೆ ಕಂಟಕವಾಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಟಿಪ್ಪರ್ ಹಾವಳಿಗೆ ಕಟಿವಾಣ ಹಾಕಿ ಜನರ ಜೀವ ರಕ್ಷಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯಿಸಿದ್ದಾರೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಸದ್ಯದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಯುವಕರು ಹೆಚ್ಚು ಸ್ಪರ್ದೆ ಮಾಡುವ ಅಗತ್ಯವಿದೆ ಎಂದು ಯುವ ಮುಖಂಡ ಮುತ್ತು ರಾಯರೆಡ್ಡಿ ಆಶಯ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿಯ 3ನೇ ವಾರ್ಡ್‌ಗೆ ಸ್ಪರ್ದಿಸಿರುವ ಮುತ್ತು ರಾಯರೆಡ್ಡಿ, ಗ್ರಾಮಗಳ ಶಕ್ತಿ ಕೇಂದ್ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈ ಬಾರಿ ಯುವಕರು ಹೆಚ್ಚಿನ ಸಂಖೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಯುವಕರಿಂದಲೇ ಗ್ರಾಮ. ಪಟ್ಟಣ. ತಾಲ್ಲೂಕು ಜಿಲ್ಲೆ ಸೇರಿದಂತೆ ರಾಜ್ಯ, ರಾಷ್ಟ್ರಗಳ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಪ್ರಸಕ್ತ ಗ್ರಾಮ ಪಂಚಾಯಿತಿ ಚುಣಾವಣೆಯಲ್ಲಿ ಸ್ಪರ್ಧೆಗಿಳಿಯುತ್ತಿರುವ ಯುವ ಪಡೆಯನ್ನು ಬೆಂಬಲಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಗ್ರಾಮದ ಅಭಿವೃದ್ಧಿಯಾಗದ ಹೊರತು ರಾಷ್ರದ ಅಭಿವೃದ್ಧಿ ಸಾಧ್ಯವಿಲ್ಲ. ಹಳ್ಳಿಗಳಿಗೆ ನೈರ್ಮಲ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಯುವಕರು ನಿಸ್ವಾರ್ಥ ಸೇವೆ ಮಾಡಲಿದ್ದಾರೆ ಎಂದ ಮುತ್ತು, ತಾತ ಮುತ್ತಾತರ ಕಾಲದಿಂದಲೂ ರಾಜಕೀಯ ಮಾಡುತ್ತಿರುವ ಹಳೆ ಮುಖಗಳ ಬದಲಿಗೆ ಅಭಿವೃದ್ಧಿಗಾಗಿ ನಾನಾ ಕನಸುಗಳನ್ನು ಹೊತ್ತು ಹಳ್ಳಿ ಅಖಾಡಕ್ಕೆ ಧುಮುಕುತ್ತಿರುವ ಯುವಕರ ದಂಡು ಈ ಬಾರಿಯ ಗ್ರಾಮ ಪಂಚಾಯತಿಯ ಚುನಾವಣೆಗಳಲ್ಲಿ ಗೆಲುವಿನ ನಗೆ ಬೀರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರಗಳ ಸ್ವೀಕರಿಸುವ ಅವಧಿ ಶುಕ್ರವಾರದಂದು(ಡಿ.11) ಮುಕ್ತಾಯವಾಗಿದೆ. ಮೊದಲ ಹಂತದ ಗ್ರಾಮ ಪಂಚಾಯತಿಗಳ ಒಟ್ಟು 801 ಸ್ಥಾನಗಳಿಗೆ 1212 ಮಹಿಳೆಯರು ಸೇರಿದಂತೆ ಒಟ್ಟು 2802 ನಾಮಪತ್ರಗಳ ಸಲ್ಲಿಕೆಯಾಗಿವೆ.
ಮೊದಲ ಹಂತದಲ್ಲಿ ಗದಗ ತಾಲೂಕಿನ 26 ಗ್ರಾಮ ಪಂಚಾಯತಿಗಳ 438 ಸ್ಥಾನಗಳಿಗೆ ಅನುಸೂಚಿತ ಜಾತಿ 251, ಅನುಸೂಚಿತ ಪಂಗಡದ 85, ಹಿಂದುಳಿದ ‘ಅ ವರ್ಗ 263, ಹಿಂದುಳಿದ ‘ಬ ವರ್ಗ 52, ಸಾಮಾನ್ಯ 789 ಸೇರಿ ಒಟ್ಟು 1440 ನಾಮಪತ್ರಗಳು ಸಲ್ಲಿಕೆಯಾಗಿವೆ.
ಲಕ್ಷ್ಮೇಶ್ವರ ತಾಲೂಕಿನ 13 ಗ್ರಾಮ ಪಂಚಾಯತಿಗಳ 174 ಸ್ಥಾನಗಳಿಗೆ ಅನುಸೂಚಿತ ಜಾತಿಯ 184, ಅನುಸೂಚಿತ ಪಂಗಡದ 55, ಹಿಂದುಳಿದ ‘ಅ ವರ್ಗ 67, ಹಿಂದುಳಿದ ‘ಬ ವರ್ಗ 12, ಸಾಮಾನ್ಯ 337 ಸೇರಿ ಒಟ್ಟು 655 ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ.
ಶಿರಹಟ್ಟಿ ತಾಲೂಕಿನ 14 ಗ್ರಾಮ ಪಂಚಾಯತಿಗಳ 189 ಸ್ಥಾನಗಳಿಗೆ ಅನುಸೂಚಿತ ಜಾತಿಯ 157, ಅನುಸೂಚಿತ ಪಂಗಡದ 66, ಹಿಂದುಳಿದ ‘ಅ ವರ್ಗ 97, ಹಿಂದುಳಿದ ‘ಬ ವರ್ಗ 24, ಸಾಮಾನ್ಯ 367 ಸೇರಿ ಒಟ್ಟು 707 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ತಿಳಿಸಿದೆ.
ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತವಾಗಿದ್ದಕ್ಕೆ ಊರಿಗೆ ಹೋಗಲು ಆಗದ ಮಹಿಳಾ ಪ್ರಯಾಣಿಕರೊಬ್ಬರು ಕಣ್ಣೀರು ಹಾಕಿದ್ದಾರೆ.
ನಗರದ ರೈಲು ನಿಲ್ದಾಣದಲ್ಲಿ ಕಣ್ಣೀರು ಹಾಕಿದ ಮಹಿಳೆ, ಗದಗನಿಂದ ಕೊಪ್ಪಳಕ್ಕೆ ಕುಟುಂಬ ಸಮೇತರಾಗಿ ಹೊರಟಿದ್ದರು. ನಿನ್ನೆ ಗದಗನ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾದು ಕಾದು ಸುಸ್ತಾಗಿ ಸಂಬಂಧಿಕರ ಮನೆಗೆ ತೆರಳಿದ್ದರು.
ಶನಿವಾರ ಬಸ್ ಮೂಲಕ ಕೊಪ್ಪಳಕ್ಕೆ ಹೋಗಲು ರೆಡಿಯಾಗಿದ್ದ ಕುಟುಂಬ ಬಸ್ ಸಂಚಾರ ಇವತ್ತೂ ಇಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಕೊಪ್ಪಳಕ್ಕೆ ಹೋಗಲು ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ.
ದಿಢೀರ್ ಪ್ರತಿಭಟನೆ ಮಾಡಿದರೆ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಹೇಗೆ ಹೋಗೋದು. ನಮ್ಮ ಸಂಬಂಧಿಕರು ಇದ್ದರು ಒಳ್ಳೆಯದಾಯಿತು. ಇಲ್ಲದಿದ್ದರೆ ನಮ್ಮ ಗತಿ ಏನಾಗಬೇಕು. ಪ್ರತಿಭಟನೆ ಮಾಡಿ. ಆದರೆ, ಯಾರಿಗೂ ತೊಂದರೆಯಾಗದಂತೆ ಮುಷ್ಕರ ಮಾಡಿ ಎಂದು ಮಹಿಳೆ ಕ್ಯಾಮೆರಾ ಮುಂದೆ ಕಣ್ಣೀರು ಹಾಕಿದ್ದಾರೆ.
ಸಾರಿಗೆ ಸಂಸ್ಥೆಯ ಬಸ್ ಸಂಚಾರ ಇಲ್ಲದಿರುವುದರಿಂದ ಪ್ರಯಾಣಿಕರು ರೈಲು ಪ್ರಯಾಣಕ್ಕೆ ಮುಂದಾಗಿದ್ದು, ಗದಗ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿ ದೃಶ್ಯ ಕಂಡು ಬರುತ್ತಿದೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಶನಿವಾರವೂ ಮುಂದುವರೆದಿದೆ.
ಸಾರಿಗೆ ನೌಕರರ ಮುಷ್ಕರದ ಪರಿಣಾಮವಾಗಿ ಗದಗ ಜಿಲ್ಲೆಯಲ್ಲಿ ಬಸ್ ಬಂದ್ ಬಿಸಿ ಎರಡನೇ ದಿನವೂ ತಟ್ಟಿದೆ. ನಗರದ ಕೇಂದ್ರಿಯ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಣಗುಡುತ್ತಿದೆ. ಬಸ್ ಸಂಚಾರವಿಲ್ಲದ್ದರಿಂದ ಡಿಪೋದಲ್ಲಿ ಬಸ್ ತುಂಬಿ ತುಳುಕುತ್ತಿವೆ.
ಇನ್ನು ಯಾವೊಬ್ಬ ಸಾರಿಗೆ ನೌಕರರು ನಿಲ್ದಾಣದಲ್ಲಿ ಕಾಣಿಸುತ್ತಿಲ್ಲ. ನಿನ್ನೆ ಬಸ್ ನಿಲ್ಲಿಸಿ ಬಸ್ ಸ್ಟ್ಯಾಂಡ್ ಆವರಣದಲ್ಲಿ ಹರಟೆ ಹೊಡೆಯುತ್ತಿದ್ದ ಚಾಲಕ ಮತ್ತು ನಿರ್ವಾಹಕರು ಬಸ್ ನಿಲ್ದಾಣದ ಕಡೆಗೆ ಸುಳಿದಿಲ್ಲ. ಮತ್ತೊಂಡೆ ಮುಷ್ಕರ ಮುಂದುವರೆದಿರುವ ಬಗ್ಗೆ ಗೊತ್ತಿಲ್ಲದೇ ಬಸ್ ನಿಲ್ದಾಣಕ್ಕೆ ಬೇರೆ ಊರಿಗೆ ಹೋಗಲು ಬಂದ ಪ್ರಯಾಣಿಕರು ಇವತ್ತೂ ಬಸ್ ಪ್ರಾರಂಭವಿಲ್ವಾ ಎಂದು ನಿಲ್ದಾಣಾಧಿಕಾರಿಗಳನ್ನು ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಮನೆ ಕಡೆ ತೆರಳುತ್ತಿದ್ದಾರೆ.
ಶುಕ್ರವಾರ ಬಸ್ ಸಂಚಾರವಿಲ್ಲದೇ ಊರಿಗೆ ಹೋಗಲು ಪರದಾಡಿದ್ದ ಪ್ರಯಾಣಿಕರು ಶನಿವಾರ ಬಸ್ ನಿಲ್ದಾಣದ ಕಡೆ ಮುಖವೂ ಮಾಡಿಲ್ಲ. ಸದಾ ಜನಜಂಗುಳಿಯಿಂದ ಗಿಜಗುಡುತ್ತಿದ್ದ ಬಸ್ ನಿಲ್ದಾಣ ಖಾಲಿ ಖಾಲಿ ಹೊಡೆಯುತ್ತಿದೆ.
ಇನ್ನೂ ನಿನ್ನೆ ಬಸ್ ಬಂದ್ ಆಗಿದ್ದರಿಂದ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದ ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಬಸ್ ಬಂದ್ ಹೀಗೆ ಮುಂದುವರೆದರೆ ಊರಿಗೆ ಹೋಗುವುದಾದರೂ ಹೇಗೆ ಚಿಂತೆ ಜನರನ್ನು ಕಾಡುತ್ತಿದೆ.
ಡಿಸೆಂಬರ್ 11 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 143033 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 148104 ಮಾದರಿಗಳಲ್ಲಿ 136128 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 1156 ಮಾದರಿಗಳ ವರದಿ ಬರಲು ಬಾಕಿ ಇದೆ.
ಜಿಲ್ಲೆಯಲ್ಲಿ ಇಂದಿನ 02 ಪ್ರಕರಣಗಳು ಸೇರಿದಂತೆ ಒಟ್ಟು 10820 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 9 ಜನ ಸೇರಿದಂತೆ ಒಟ್ಟು 10622 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 57 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಚಾಲಕರು ಮತ್ತು ನಿರ್ವಾಹಕರು ಕೇಂದ್ರ ಬಸ್ ನಿಲ್ದಾಣದಲ್ಲೇ ಬಸ್‌ಗಳನ್ನು ಬಿಟ್ಟು ಹೊರ ಹೋಗಿದ್ದಾರೆ. ಮುಷ್ಕರದ ಲಾಭ ಪಡೆದ ಖಾಸಗಿ ವಾಹನ, ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿಗಿಳಿದಿದ್ದಾರೆ.
ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಪ್ರಯಾಣಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದು, ಆಟೋ ಚಾಲಕರು 10 ಕಿಲೋಮೀಟರ್ ಹೋಗಲು 200 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇನ್ನು ಕ್ರೂಸರ್ ವಾಹನಗಳ ಚಾಲಕರು ಎರಡು ಪಟ್ಟು ಹಣ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಹೆಚ್ಚಿನ ಹಣವಿಲ್ಲದ ಬಡ ಪ್ರಯಾಣಿಕರು ಪರದಾಡುತ್ತಿದ್ದು, ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಖಾಸಗಿ ವಾಹನಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದು, ಬಸ್ ಸಂಚಾರ ಇಲ್ಲದೇ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಆಕ್ರೋಶಗೊಂಡಿರುವ ಪ್ರಯಾಣಿಕರನ್ನು ಸಮಾಧಾನಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಬಸ್ ಬಂದ್ ಬಗ್ಗೆ ಮೊದಲೇ ಯಾಕೆ ಮಾಹಿತಿ ನೀಡಿಲ್ಲ ಎಂದು ಕಿಡಿ ಕಾರಿರುವ ಪ್ರಯಾಣಿಕರು ಸಾರಿಗೆ ನಿಯಂತ್ರಣಾಧಿಕಾರಿ ಕಚೇರಿ ಬಳಿ ಜಮಾಯಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಬಿಸಿ ಗದಗಗೂ ತಟ್ಟಿದೆ. ಇದರಿಂದ ಗದಗನಲ್ಲಿ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ.
ಗದಗ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಎಲ್ಲ ಬಸ್ ಸಂಚಾರ ಸ್ಥಗಿತವಾಗಿದ್ದು, ಬಸ್ ನಿಲ್ದಾಣ, ಡಿಪೋದಲ್ಲಿ ಬಸ್ ಸಾಲುಗಟ್ಟಿ ನಿಂತಿವೆ. ಅಲ್ಲದೇ, ಬಸ್ ನಿಲ್ದಾಣದ ಫ್ಲಾಟ್ ಫರ್ಮ್ ಗೆ ಬಂದ್ ಬಸ್ ಗಳನ್ನು ಸಾರಿಗೆ ನೌಕರರು ವಾಪಸ್ ಕಳಿಸುತ್ತಿದ್ದಾರೆ. ಯಾವುದೇ ಬಸ್ ಸಂಚಾರ ಮಾಡದಂತೆ ಸಿಬ್ಬಂದಿ ತಾಕೀತು ಮಾಡುತ್ತಿದ್ದಾರೆ.
ಗದಗ-ಮುಂಬಯಿ ಬಸ್ ಪ್ರಶ್ನೆ ಮಾಡಿದ ನಿರ್ವಾಹಕನಿಗೆ ಕೆಲ ನೌಕರರಿಂದ ತರಾಟೆ ತೆಗೆದುಕೊಂಡ ಘಟನೆಯೂ ನಡೆಯಿತು.
ಮುಂಬಯಿ, ಬಾಗಲಕೋಟ ಸೇರಿದಂತೆ ವಿವಿಧೆಡೆ ಸಂಚಾರ ಮಾಡುವ ಬಸ್ ತಡೆದು ಪ್ಲಾಟ್ ಫಾರ್ಮ್ ನಿಂದ ಬಸ್ ಗಳನ್ನು ತೆಗೆದು ಡಿಪೋ ಒಳಗೆ ನಿಲ್ಲಿಸಿದ್ದಾರೆ. ಇದರಿಂದ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಕೊಪ್ಪಳದ ಖಾಸಗಿ ಕಣ್ಣಿನ ಆಸ್ಪತ್ರೆಗೆ ಹೊರಟಿದ್ದ ಮಹಿಳೆಗೂ ಸಾರಿಗೆ ನೌಕರರ ಬಂದ್ ಬಿಸಿ ತಟ್ಟಿದೆ. ಗದಗ ತಾಲ್ಲೂಕಿನ ಲಲಿತಾ ರೆವಣಸಿದ್ದಪ್ಪ ಗೊಡಚಪ್ಪನವರ್ ಎಂಬ ಮಹಿಳೆ ಬಸ್ ಇಲ್ಲದೆ ಮಹಿಳೆ ಪರದಾಡಿದರು.
ಬಸ್ ಪ್ರಯಾಣವಿಲ್ಲದೇ ನಗರದ ಕೇಂದ್ರಿಯ ಬಸ್ ನಿಲ್ದಾಣ ಮತ್ತು ನಿಲ್ದಾಣ ಹೊರಗೆ ಸೇರಿದಂತೆ ನಗರದ ಮುಳಗುಂದ ನಾಕಾ, ಹಳೆ ಡಿಸಿ ಆಫೀಸ್ ಸರ್ಕಲ್, ಅಂಬೇಡ್ಕರ ವೃತ್ತದಲ್ಲಿ ಪ್ರಯಾಣಿಕರು ಬಸ್ ಗಾಗಿ ಕಾದು ನಿಂತಿದ್ದಾರೆ. ಕೆಲವರು ಖಾಸಗಿ ವಾಹನ ಹತ್ತಿ ಹೊರಟರೇ, ಇನ್ನೂ ಕೆಲವರು ಬಾಡಿಗೆ ವಾಹನ ಮಾಡಿಕೊಂಡು ಹೊರಟಿದ್ದಾರೆ.