Home Blog Page 3116

ಶಾಸಕರೇ ವೈದ್ಯರಾಗಿ ಸೇವೆ ಮಾಡಿದರೆ? ಈ ಸುದ್ದಿ ಓದಿ ಮೆಚ್ಚುಗೆಯ ಮಾತು ನಿಮ್ಮಿಂದಲೂ ಬರುತ್ತದೆ!

ವಿಜಯಸಾಕ್ಷಿ ಸುದ್ದಿ, ತುಮಕೂರು

ಇಡೀ ರಾಜ್ಯವೂ ಸೇರಿದಂತೆ ದೇಶವನ್ನು ಕೊರೊನಾ ನಲುಗಿಸುತ್ತಿದೆ. ಹೀಗಾಗಿ ಜನರ ಬದುಕು ಬೀದಿಗೆ ಬಂದು ನಿಂತಿದೆ. ಜನರ ಕಣ್ಣೀರು ಒರೆಸಲು ಹಲವರು ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಇಲ್ಲಿ ಶಾಸಕರೇ ವೈದ್ಯರಾಗಿ ಜನರ ಸೇವೆ ಮಾಡುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಸ್ವತಃ ಶಾಸಕರೇ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸುಮಾರು 1,300 ಕೊರೊನಾ ರೋಗಿಗಳು ಈ ಕ್ಷತ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲ ರೋಗಿಗಳನ್ನು ಮಾತನಾಡಿಸಿ, ಅವರ ನೋವಿಗೆ ಸ್ಪಂದಿಸುತ್ತ ಶಾಸಕರು ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರೇ ಈ ಮಹತ್ತರ ಕೆಲಸ ಮಾಡುತ್ತಿದ್ದಾರೆ.

ವೈದ್ಯರಾಗಿರುವ ಶಾಸಕ ಡಾ. ರಂಗನಾಥ್ ಅವರು ಸದ್ಯ ಜನರ ಸೇವೆಯನ್ನು ಈ ರೀತಿಯಾಗಿ ಮಾಡುತ್ತಿದ್ದಾರೆ. ಶಾಸಕರು ಪ್ರತಿದಿನ ಎರಡು ಬಾರಿ ಎಲ್ಲ ರೋಗಿಗಳನ್ನು ಕಂಡು ಮಾತನಾಡಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಅಲ್ಲದೇ, ಹೆಚ್ಚಿನ ಚಿಕಿತ್ಸೆ ಬೇಕಾದವರಿಗೆ ಬೆಡ್ ಕೊಡಿಸುತ್ತಿದ್ದಾರೆ. ತುಮಕೂರು ಹಾಗೂ ಬೆಂಗಳೂರಿಗೆ ಹಲವು ರೋಗಿಗಳನ್ನು ದಾಖಲಿಸಿ ಸೂಕ್ತ ಚಿಕಿತ್ಸೆ ಸಿಗುವಂತೆ ಕೂಡ ಮಾಡಿದ್ದಾರೆ. ಇನ್ನುಳಿದ ರೋಗಿಗಳಿಗೆ ಅವರೇ ಸ್ವಕಃ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಶಾಸಕರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹೋಮಿಯೋಪಥಿ ಔಷಧ ಸೇವಿಸಿ ಒಂದೇ ಕುಟುಂಬದ ೮ ಜನರ ಸಾವು !

ವಿಜಯಸಾಕ್ಷಿ ಸುದ್ದಿ, ರಾಯ್ಪುರ

ಹೋಮಿಯೊಪಥಿ ಔಷಧ ಸೇವಿಸಿ ಒಂದೇ ಕುಟುಂಬದ 8 ಜನ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಅಲ್ಲದೇ, ಈ ಘಟನೆಯಲ್ಲಿ ಐವರು ಅಸ್ವಸ್ಥರಾಗಿದ್ದಾರೆ. ಈ ಘಟನೆ ಛತ್ತೀಸ್ ಗಢದ ಬಿಲಾಸ್‌ ಪುರ್‌ ನಲ್ಲಿ ನಡೆದಿದೆ.

ಅಸ್ವಸ್ಥರಾಗಿರುವ 5 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವನ್ನಪ್ಪಿರುವ ಕುಟುಂಬ drosera- 30 ಎಂಬ ಹೋಮಿಯೊಪಥಿ ಔಷಧವನ್ನು ಸೇವಿಸಿದ್ದರು. ಇದರಲ್ಲಿ ಶೇ. 91ರಷ್ಟು ಕಳ್ಳಭಟ್ಟಿ ಸೇರಿದ್ದರಿಂದಾಗಿ ಸೇವಿಸಿದವರು ಸಾವನ್ನಪ್ಪಿದ್ದಾರೆ. ಹಲವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ.

ಔಷಧಿ ಸೇವಿಸಲು ನಿರ್ದೇಶಿಸಿದ್ದ ವೈದ್ಯರು ಸದ್ಯ ತಲೆ ಮರೆಸಿಕೊಂಡಿದ್ದಾರೆ ಎಂದು ಬಿಲಾಸ್‍ ಪುರ್ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಎಷ್ಟು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ರಾಜ್ಯದಲ್ಲಿ ಮಹಾಮಾರಿಯ ಅಟ್ಟಹಾಸ ಎಗ್ಗಿಲ್ಲದೆ ಸಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ಫ್ಯೂ ಜಾರಿಗೊಳಿಸಿದರೂ ಮಹಾಮಾರಿ ಮಾತ್ರ ತನ್ನ ಆಟ ನಿಲ್ಲಿಸುತ್ತಿಲ್ಲ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 14 ಜನ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ, ಈ ಬಾರಿ ಸೋಂಕಿತರ ಆಕ್ಸಿಜನ್ ನ ಕೊರತೆಯಿಂದಾಗಿ ಸತ್ತಿಲ್ಲ.

ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿಯೂ ಆಕ್ಸಿಜನ್ ನ ಕೊರತೆಯಾಗಿಲ್ಲ. ಹೀಗಾಗಿ ಸತ್ತವರು ಕೂಡ ಆಕ್ಸಿಜನ್ ನ ಕೊರತೆ ಎದುರಿಸಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿ ಆಕ್ಸಿಜನ್ ಇದೆ. ಸೋಂಕಿತರು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕೈ ಮೀರಿದ ನಂತರ ರೋಗಿಗಳು ಆಸ್ಪತ್ರೆಯ ಬಾಗಿಲು ತಟ್ಟುತ್ತಿರುವುದರಿಂದಾಗಿ ಸಾವಿನ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ಮೇ. 4 ರಂದು ಎಂಟು ಜನ ಹಾಗೂ ಮೇ. 5 ರಂದು 8 ಜನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೇ. 3ರಂದು ಆಕ್ಸಿಜನ್ ಕೊರತೆಯಿಂದ 24 ಜನ ಸಾವನ್ನಪ್ಪಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಇದರಿಂದಾಗಿ ಎಚ್ಚೆತ್ತುಕೊಂಡಿರುವ ಸರ್ಕಾರ ಜಿಲ್ಲಾಸ್ಪತ್ರೆಗೆ ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಅಷ್ಟೇ ಅಲ್ಲದೇ, ಸ್ವತಃ ಪರಿಸ್ಥಿತಿ ಅವಲೋಕಿಸಿ, ಸಮಸ್ಯೆ ತಲೆದೋರದಂತೆ ಕಾಣುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕೂಡ ನಿನ್ನೆಯಿಂದ ಚಾಮರಾಜನಗರದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ದಿವ್ಯ ಹೊರಗೆ; ಕಣ್ಣೀರು ಹಾಕಿದ ಅರವಿಂದ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಿಗ್‌ ಬಾಸ್‌ ನ 62ನೇ ದಿನದಲ್ಲಿ ಎಲಿಮೇಷನ್ ಇಲ್ಲದೆಯೇ ಮನೆಯಿಂದ ದಿವ್ಯಾ ಉರುಡುಗ ಹೊರ ಬಂದಿದ್ದಾರೆ. ದಿವ್ಯ ಉರುಡುಗಗೆ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಮನೆ ತೊರೆದಿದ್ದಾರೆ. ಈ ವಿಷಯ ಕೇಳಿದ ಅರವಿಂದ್ ಕಣ್ಣೀರು ಹಾಕಿದ್ದಾರೆ.

ದಿವ್ಯ ಉರುಡುಗ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಬಟ್ಟೆಗಳನ್ನು ತಂದು ಸ್ಟೋರ್ ರೂಮಿಗೆ ಇರಿಸಿ ಈ ಕೂಡಲೇ ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಈ ಆದೇಶವನ್ನು ಕೇಳಿದ ಅರವಿಂದ್, ಹೋದರೆ ಅವಳು ಇನ್ನು ಬರುವುದಿಲ್ಲ ಎಂದು ಹೇಳಿ ಗಳಗಳನೆ ಅತ್ತಿದ್ದಾರೆ.

ದಿನ ಬೆಳಿಗ್ಗೆ ಎದ್ದು ರಾತ್ರಿ ತನಕ ನನ್ನ ಜೊತೆ ಅವಳು ಇರುತ್ತಿದ್ದಳು. ನಿಮ್ಮ ಜೊತೆ ಗಲಾಟೆಯಾದರೂ ಅಥವಾ ಖುಷಿಯಾದರೂ ನನ್ನ ಜೊತೆಯೇ ಇರುತ್ತಿದ್ದಳು. ಈಗ ಎಲ್ಲ ಹೋಯಿತು ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ನಿನ್ನೆ ಲೀವಿಂಗ್ ಏರಿಯಾದಲ್ಲಿ ಸದಸ್ಯರು ಕುಳಿತಿದ್ದ ಸಂದರ್ಭದಲ್ಲಿ ದಿವ್ಯಾ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕೆಂದು ವೈದ್ಯರು ಸೂಚಿಸಿದ್ದರಿಂದ ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ. ಅವರು ಕ್ಷೇಮವಾಗಿದ್ದಾರೆ ಎಂದು ಆರಂಭದಲ್ಲಿ ಬಿಗ್ ಬಾಸ್ ಮನೆ ಮಂದಿಗೆ ತಿಳಿಸಿದ್ದರು. ಇದನ್ನು ಹೇಳುತ್ತಿದ್ದಂತೆ ಅರವಿಂದ್ ಸ್ವಲ್ಪ ಭಾವುಕರಾಗಿದ್ದರು. ದಿವ್ಯಾ ಉರುಡುಗ ಮತ್ತೆ ಬಿಗ್ ಬಾಸ್ ಮನೆಗೆ ಬರುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಹೆಣ್ಮಕ್ಕಳಷ್ಟೇ ತಾಳಿ ಏಕೆ ಕಟ್ಗೊಬೇಕು….ನಾನು ಕಟ್ಗೋತೇನಿ…!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ವಧು ಮಂಗಲಸೂತ್ರ ಹಾಕಿಕೊಳ್ಳುವುದು ಪದ್ಧತಿ ಹಾಗೂ ಇಲ್ಲಿಯವರೆಗೂ ನಡೆದುಕೊಂಡು ಬಂದ ರೂಢಿ. ಆದರೆ, ಈ ಸಂಪ್ರದಾಯಕ್ಕೆ ಇಲ್ಲೊಂದು ಜೋಡಿ ತಿಲಾಂಜಲಿ ಹಾಕಿದೆ. ಇಲ್ಲಿ ವಧು ತಾಳಿ ಕಟ್ಟಿದ್ದು, ವರ ಕಟ್ಟಿಸಿಕೊಂಡಿದ್ದಾರೆ.

ಹುಡುಗಿಯರು ಮಾತ್ರ ಯಾವ ಕಾರಣಕ್ಕೆ ತಾಳಿ ಕಟ್ಟಿಕೊಳ್ಳಬೇಕು ಎಂಬುವುದು ಇಲ್ಲಿ ಹುಡುಗನ ವಾದ. ಇದನ್ನು ಗಮನಿಸಿದ ನೆಟ್ಟಿಗರು ಮಾತ್ರ ಹುಡುಗನ ಕಾರ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಲವರಂತೂ ಸೀರೆನೂ ಉಟ್ಟಿಕೊಳ್ಳಬಹುದಲ್ಲ ಎಂದು ಕಾಲು ಎಳೆದಿದ್ದಾರೆ.

ಹೀಗೆ ತಾಳಿ ಕಟ್ಟಿಕೊಂಡ ವರನ ಹೆಸರು ಸಾರ್ದೂಲ್ ಕದಮ್. ತಾಳಿ ಕಟ್ಟಿದ ವಧು ತನುಜಾ. ಶಾರ್ದೂಲ್ ಕದಮ್ ತಾಳಿ ಕಟ್ಟಿಕೊಂಡ ಕುರಿತು ಹ್ಯೂಮನ್ ಆಫ್ ಬಾಂಬೆ ಎಂಬ ಫೋಟೋ ಬ್ಲಾಗ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಸ್ಟೋರಿ ನೋಡುತ್ತಿದ್ದಂತೆ ನೆಟ್ಟಿಗರು ಮಾತ್ರ ಟ್ರೋಲ್ ಮಾಡುತ್ತಿದ್ದಾರೆ.

ಹೀಗೆ ಡಿಫರೆಂಟ್ ಮದುವೆಯಾಗಿರುವ ತನುಜಾ ಹಾಗೂ ಶಾರ್ದೂಲ್ ಅವರು ಲವ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಭೇಟಿಯಾದಾಗೊಮ್ಮೆ ಮಹಿಳಾ ವಾದದ ಬಗ್ಗೆ ಮಾತನಾಡಿದ್ದಾರೆ. ಆಗ ಶಾರ್ದೂಲ್ ನಾನೊಬ್ಬ ಕಟ್ಟಾ ಸ್ತ್ರೀಸಮಾನತಾವಾದಿ ಎಂದು ಹೇಳಿದ್ದಾರೆ.

ಒಂದು ವರ್ಷ ಡೇಟಿಂಗ್ ಮಾಡಿದ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಮದುವೆಯಲ್ಲಿ ಸ್ತ್ರೀ ಮಾತ್ರ ಮಂಗಲಸೂತ್ರ ಕಟ್ಟಿಸಿಕೊಳ್ಳಬಾರದು. ನಮ್ಮ ಮದುವೆಯಲ್ಲಿ ಹಾಗಾಗುವುದು ಬೇಡ. ನನಗೆ ನೀನೂ ಕೂಡ ತಾಳಿ ಕಟ್ಟಬೇಕು ಎಂದು ತನುಜಾ ಬಳಿ ಶಾರ್ದೂಲ್ ಹೇಳಿದ್ದಾರೆ. ಹೀಗಾಗಿ ತಮ್ಮ ಮದುವೆಯಲ್ಲಿ ಇಬ್ಬರೂ ತಾಳಿ ಧರಿಸಿದ್ದಾರೆ.

ಇದು ಸುದ್ದಿಯಾಗುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಈ ಜೋಡಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಟ್ರೋಲ್ ಮಾಡುತ್ತಿರುವುದರಿಂದಾಗಿ ನಮಗೇನು ಸಮಸ್ಯೆಯಾಗಿಲ್ಲ. ಹೆಣ್ಣುಮಕ್ಕಳ ಮನಸು ಅರ್ಥವಾಗುತ್ತದೆ. ಅವರ ಭಾವನೆಯನ್ನು ನಾನು ಗೌರವಿಸುತ್ತೇನೆ ಎಂದು ಶಾರ್ದೂಲ್ ಹೇಳಿದ್ದಾರೆ. ಇವರ ಮದುವೆಯಾಗಿ ನಾಲ್ಕು ತಿಂಗಳಾಗಿದ್ದು, ಅಂದು ತನುಜಾ ಕೈಯ್ಯಲಿ ಕಟ್ಟಿಸಿಕೊಂಡ ತಾಳಿಯನ್ನು ಇಂದಿಗೂ ಶಾರ್ದೂಲ್ ತೆಗೆದಿಲ್ಲ.

ಚುನಾವಣೆ ಕರ್ತವ್ಯಕ್ಕೆ ತೆರಳಿದ್ದ ಎಷ್ಟು ಜನ ನೌಕರಸ್ಥರು ಸಾವನ್ನಪ್ಪಿದ್ದಾರೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಲಕ್ನೊ

ಕೊರೊನಾ ಅಟ್ಟಹಾಸದ ಮಧ್ಯೆಯೂ ದೇಶದಲ್ಲಿ ಚುನಾವಣಾ ಆಯೋಗ ಮತದಾನ ನಡೆಸಿದೆ. ಆದರೆ, ಕೆಲಸಕ್ಕೆ ಹಾಜರಾಗಿದ್ದ ಸುಮಾರು 2 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಸಾವನ್ನಪ್ಪಿರುವ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಸತ್ತವರ ಪೈಕಿ 700ಕ್ಕೂ ಹೆಚ್ಚು ಜನರು ಶಿಕ್ಷಕರಿದ್ದಾರೆ ಎಂದು ತಿಳಿದು ಬಂದಿದೆ. ಕೊರೊನಾ ಹಾವಳಿಯ ಮಧ್ಯೆಯೂ ಉತ್ತರ ಪ್ರದೇಶದಲ್ಲಿ ಪಂಚಾಯತಿ ಚುನಾವಣೆ ನಡೆದಿದೆ. ಆದರೆ, ಈ ಚುನಾವಣೆ ಕೆಲಸಕ್ಕೆ ಹಾಜರಾಗಿದ್ದ ಬಹುತೇಕ ನೌಕರರು ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 706 ಜನ ಶಿಕ್ಷಕರು ಬಲಿಯಾಗಿದ್ದಾರೆ. ಅಲ್ಲದೇ, ಈ ಸಂಖ್ಯೆ ಸಾವಿರದ ಗಡಿ ದಾಟುವ ಆತಂಕ ಶಿಕ್ಷಣ ಇಲಾಖೆಯದ್ದಾಗಿದೆ.

ಉತ್ತರ ಪ್ರದೇಶದ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ದಿನೇಶ್ ಚಂದ್ರ ಶರ್ಮಾ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ 10 ಪುಟಗಳ ದೀರ್ಘವಾದ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ಜಿಲ್ಲಾವಾರು ಶಿಕ್ಷಕರ ಮಾಹಿತಿಯನ್ನು ಕೂಡ ಸಿಎಂಗೆ ನೀಡಲಾಗಿದೆ. ಕಳೆದ ಒಂದು ವಾರದಿಂದ ಶಿಕ್ಷಕರ ಮರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಮುಖ್ಯ ಕಾರಣವೇ ಚುನಾವಣೆಯ ಕೆಲಸ. ಕೂಡಲೇ ಸರ್ಕಾರ ಮೃತ ಕುಟುಂಬಗಳಿಗೆ ರೂ. 50 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ನೌಕರರು ಕಚೇರಿಗಳಿಗೆ ಆಗಮಿಸುತ್ತಿಲ್ಲ. ಹಲವರು ಸ್ವಯಂ ಕ್ವಾರಂಟೈನ್ ನಲ್ಲಿದ್ದಾರೆ. ಇದರಿಂದಾಗಿ ದೇಶದ ಜನರೇ ಬೆಚ್ಚಿ ಬಿದ್ದಿದ್ದಾರೆ.

ಗದಗ ವಿಧಾನಸಭಾ ಮತಕ್ಷೇತ್ರದ ಜನರಿಗೆ ಅನಿಲ ಮೆಣಸಿನಕಾಯಿ ಪತ್ರ

ಗದಗ ಕ್ಷೇತ್ರದ ಮಹಾಜನತೆಗೆ ನಮಸ್ಕಾರ್,

ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆಗೆ ಒಳಗಾಗಲು ತಿಳಿಸಿದ್ದೇನೆ. ಗುಂಪಿನಿಂದ ಪ್ರತ್ಯೇಕವಾಗಿರಲು ಸೂಚಿಸಿದ್ದೇನೆ. ಕೊರೊನಾ‌ ಎರಡನೇ ಅಲೆ ಜನರನ್ನು ತೀವ್ರವಾಗಿ ಬಾಧಿಸುತ್ತಿದೆ. ಮೊದಲನೇ ಅಲೆಗಿಂತಲೂ ಹೆಚ್ಚಿನ ಪ್ರಾಣಹಾನಿ ಉಂಟು ಮಾಡುತ್ತಿದೆ. ಕೊರೊನಾ ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ. ನಿಮ್ಮ ಹಾಗೂ ನಿಮ್ಮ ಕುಟುಂಬ ಸುರಕ್ಷಿತವಾಗಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೆನೆ. ನಿಮ್ಮ ಆಶೀರ್ವಾದಿಂದ ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಇಂದು ಚನೈ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ತೆರಳಿದ್ದೇನೆ.

ಇಂತಿ ನಿಮ್ಮ
ಅನಿಲ ಪಿ. ಮೆಣಸಿನಕಾಯಿ
ಗದಗ ಮತಕ್ಷೇತ್ರ

ಇದನ್ನೂ ಓದಿ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿಗೆ ಕೊರೊನಾ

ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿಗೆ ಕೊರೊನಾ

ವಿಜಯಸಾಕ್ಷಿ ಸುದ್ದಿ, ಗದಗ

ಬಿಜೆಪಿಯ ಯುವ ಮುಖಂಡ ಅನಿಲ ಮೆಣಸಿನಕಾಯಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಸೋಂಕು ಇರುವುದು ಪತ್ತೆಯಾಗಿದೆ.

ಜ್ವರದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ತೆರೆಳಿದಾಗ ಸೋಂಕು ಇರುವುದು ಗೊತ್ತಾಗಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಭಿಮಾನಿಗಳ ಪ್ರಾರ್ಥನೆ : ತಮ್ಮ ನೆಚ್ಚಿನ ಮುಖಂಡ ಅನಿಲ ಮೆಣಸಿನಕಾಯಿ ಅವರಿಗೆ ಕೊರೊನಾ ಸೋಂಕು ಇರುವುದು ಗೊತ್ತಾಗಿ ಸ್ನೇಹಿತರು, ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಅಡವಿಸೋಮಾಪುರದಲ್ಲಿ ಮಾಸ್ಕ್ ವಿತರಣೆ

ವಿಜಯಸಾಕ್ಷಿ ಸುದ್ದಿ, ಗದಗ

ಸಮೀಪದ ಅಡವಿಸೋಮಾಪುರದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಲಾಯಿತು. ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಅಧ್ಯಕ್ಷ ಶಾಮಸುಂದರ್ ಡಂಬಳ ನೇತೃತ್ವದಲ್ಲಿ ಮಾಸ್ಕ್ ವಿತರಣೆ ಮಾಡಲಾಯಿತು.

ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು, ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸೇರಿದಂತೆ ಮಾಜಿ ಸದಸ್ಯ ರಾಜು ಪೆಂಡಾರ, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

ಕೊರೋನಾ; ಬುಧವಾರ 189 ಜನರಿಗೆ ಸೋಂಕು, ಮೂವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 05 ಬುಧವಾರ ಜಿಲ್ಲೆಯಲ್ಲಿ ಕೊರೋನಾ ಸೋಂಕು ತನ್ನ ‌ಅಟ್ಟಹಾಸ ಮುಂದುವರಿಸಿದೆ. ಸತತ ಮೂರನೇ ದಿನವೂ ಎರಡು ನೂರರ ಗಡಿ ಸಮೀಪದಲ್ಲಿ ಬಂದು ನಿಂತಿದೆ. ಅದರಲ್ಲೂ ಸೋಂಕಿಗೆ ಮೂವರು ಮೃತಪಟ್ಟಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

ಇಂದಿನ 189 ಜನರಿಗೆ ಸೋಂಕು ತಗುಲುವ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13596 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -118 , ಮುಂಡರಗಿ-16, ನರಗುಂದ-14, ರೋಣ-33, ಶಿರಹಟ್ಟಿ-02, ಹೊರಜಿಲ್ಲೆಯ-06 ಸೇರಿದಂತೆ 189 ಪ್ರಕರಣಗಳು ದೃಢಪಟ್ಟಿವೆ.

ರಾಜ್ಯ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ. ಗದಗನ ಸಿಡಿಒ ಜೈನ ಶಾಲೆಯ ಹತ್ತಿರದ 65, ಮೇ 02 ರಂದು ಖಾಸಗಿ ಆಸ್ಪತ್ರೆಯಲ್ಲಿ, ಬೆಟಗೇರಿಯ 60 ವರ್ಷದ ಪುರುಷ ಮೇ.1 ರಂದು ಜಿಮ್ಸ್ ನಲ್ಲಿ, ಹಾಗೂ ಜಿಲ್ಲೆಯ ಲಕ್ಷ್ಮೇಶ್ವರ ದ 78 ವರ್ಷದ ಮಹಿಳೆ ಮೇ 04 ರಂದು ಜಿಮ್ಸ್ ನಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.
ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
147 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 123 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 12521 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 928 ಪ್ರಕರಣಗಳು ಸಕ್ರಿಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 213 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!