ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಮಾಜಿ ಸಿಎಂ ಸಿದ್ದರಾಮಯ್ಯ ಮೊದಲು ತಮ್ಮದನ್ನು ತಾವು ನೋಡಿಕೊಳ್ಳಲಿ. ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ, ಮತ್ತೊಬ್ಬರ ತಾಟಿನ ನೊಣ ತೆಗೆಯೋದು ಬೇಡ. ಸಿದ್ದರಾಮಯ್ಯ ಬಿಜೆಪಿಗೆ ಬಂದ್ರೆ ಸ್ವಾಗತ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಕೊಪ್ಪಳದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಮೊದಲು ತಮ್ಮ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಮೊದಲು ಸರಿ ಮಾಡಿಕೊಳ್ಳಲಿ. ಡಿಕೆ ಶಿವಕುಮಾರ ಮತ್ತು ನಿಮ್ಮ ನಡುವಿನ ಕಚ್ಚಾಟ ಮುಗಿಸಿಕೊಳ್ಳಿ
ನಮ್ಮನ್ನು ಅನರ್ಹ ಮಾಡಲು ಮುಂದಾಗಿದ್ದ ನಿಮಗೆ ನಮ್ಮ ಬಗ್ಗೆ ಕಾಳಜಿ ಏಕೆ ಎಂದು ಬಿ.ಸಿ.ಪಾಟೀಲ ಪ್ರಶ್ನಿಸಿದರು.
ಬಿಜೆಪಿಯವರ ಬಗ್ಗೆ ಸಿದ್ದರಾಮಯ್ಯನವರಿಗೆ ಅಷ್ಟು ಚಿಂತೆ ಏಕೆ? ಸಿದ್ದರಾಮಯ್ಯನವರಿಗೆ ಬಿಜೆಪಿಗೆ ಬರಲು ಅಷ್ಟು ಆಸಕ್ತಿ ಇದ್ದರೆ ನಾವು ಸ್ವಾಗತಸ್ತಿವಿ ಎಂದರು.
ರಾಜ್ಯದಲ್ಲಿ ಇನ್ನೂ ಎರಡೂವರೆ ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಬಿಜೆಪಿಗೆ ಬಂದ್ರೆ ಸ್ವಾಗತ: ಪಾಟೀಲ
ಅದು ಘೇರಾವ್ ಅಲ್ಲ, ಮನವಿ ಸಲ್ಲಿಕೆ: ವಿಜಯಸಾಕ್ಷಿ ವರದಿಗೆ ಸ್ಪಷ್ಟನೆ ಕೊಟ್ಟ ಕೃಷಿ ಸಚಿವ ಬಿ.ಸಿ.ಪಾಟೀಲ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ರೀ ಸ್ವಾಮಿ ಘೇರಾವ್ ಅಂದ್ರೇನು? ಮನವಿ ಕೊಡೊಕೆ ಬಂದಿರೋರು ನನ್ನ ಸುತ್ತುವರಿದು ಮನವಿ ಕೊಟ್ಟರಷ್ಟೇ.. ಅದನ್ನೇ ಘೇರಾವ್ ಅಂತ ಬರೆದರೆ ಹೇಗೆ? ಎಂದು ಬಿ.ಸಿ.ಪಾಟೀಲ ಹೇಳಿದರು.
ರವಿವಾರ ವಿಜಯಸಾಕ್ಷಿಯ ಕೊಪ್ಪಳ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪತ್ರಿಕೆಯ ವೆಬ್‌ನಲ್ಲಿ ಸುದ್ದಿ ಪ್ರಕಟಗೊಂಡ ಒಂದೇ ಗಂಟೆಯಲ್ಲಿ ಸ್ಪಷ್ಟೀಕರಣ ನೀಡಿದರು.
ಕೊಪ್ಪಳದಲ್ಲಿ ಪತ್ರಕರ್ತರ ಜೊತೆ ಮಾತನಾಡಲು ಅದಕ್ಕೆ ಹಿಂಜರಿಯಬೇಕೆನಿಸುತ್ತೆ. ರಾಜ್ಯದ ಬೇರೆ ಬೇರೆ ಕಡೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವುದು ಸುಲಭ. ಆದರೆ ಕೊಪ್ಪಳದಲ್ಲಿ ಅನವಶ್ಯಕ ಪ್ರಶ್ನೆಗಳನ್ನೇ ಜಾಸ್ತಿ ಕೇಳ್ತಾರೆ ಎಂದು ನಗುತ್ತಲೇ ಪ್ರತಿಕ್ರಿಯೆ ನೀಡಿದರು.
ನನ್ನನ್ನು ಟೀಕಿಸಿ ಬರೆಯೋದರಲ್ಲೇ ನಿಮಗೆ ಖುಷಿ ಅನಿಸಿದರೆ ಬರೆದುಕೊಳ್ಳಿ. ಏನ್ ಮಾಡಾಕಾಗುತ್ತೆ ಎಂದ ಪಾಟೀಲರಿಗೆ, ಸುದ್ದಿಯನ್ನು ಸುದ್ದಿಯಾಗೇ ಕೊಡೋದು ವಿಜಯಸಾಕ್ಷಿಯ ಕೆಲಸ. ಇಲ್ಲಸಲ್ಲದ್ದನ್ನ ಸೃಷ್ಟಿ ಮಾಡಿ, ಕಲ್ಪನೆ ಮಾಡಿಕೊಂಡು ವರದಿ ಮಾಡಲ್ಲ ಎಂಬುದನ್ನು ವಿಜಯಸಾಕ್ಷಿ ಮನವರಿಕೆ ಮಾಡಿತು.
ಸಚಿವ ಬಿ.ಸಿ.ಪಾಟೀಲಗೆ ಬಿಜೆಪಿ ಕಾರ್ಯಕರ್ತರಿಂದಲೇ ಘೇರಾವ್!
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜಿಲ್ಲೆಯಲ್ಲಿ ಭತ್ತದ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಸ್ವಪಕ್ಷದ ಕಾರ್ಯಕರ್ತರೇ ಸಚಿವ ಬಿ.ಸಿ.ಪಾಟೀಲಗೆ ಘೇರಾವ್ ಹಾಕಿ ಮನವಿ ಸಲ್ಲಿಸಿದರು.
ಹಿಟ್ನಾಳ ಹೋಬಳಿಯ ಅನೇಕ ರೈತರು ರವಿವಾರ ಬಿಜೆಪಿ ಕಾರ್ಯಕರ್ತರ ಮುಂದಾಳತ್ವದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಅವರಿಗೆ ಕೊಪ್ಪಳದಲ್ಲಿ ಘೇರಾವ್ ಹಾಕಿ ಶೀಘ್ರದಲ್ಲಿ ಕೊಪ್ಪಳ ಮತ್ತು ಹಿಟ್ನಾಳ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಖರೀದಿ ಕೇಂದ್ರ ಪ್ರಾರಂಭಿಸಲು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ ಶಾಸಕ ಕೆ ರಾಘವೆಂದ್ರ ಹಿಟ್ನಾಳ ಇದ್ದರು.
ಕೊಪ್ಪಳ ಜಿಲ್ಲೆಯಲ್ಲಿ ಭತ್ತದ ಕಟಾವು ಆರಂಭವಾಗಿದ್ದು ಭತ್ತದ ಬೆಲೆ ಕನಿಷ್ಠ ದರಕ್ಕೆ ಕುಸಿದಿದ್ದು, ರೈತರು ಕಂಗಾಲಾಗುವ ಪರಿಸ್ಥಿತಿ ಬಂದಿದೆ. ಇದರಿಂದ ರೈತರಿಗೆ ತುಂಬಾ ತೊಂದರೆ ಆಗಿದ್ದು, ಕೂಡಲೇ ಕೇಂದ್ರ ಸರ್ಕಾರ ನಿಗದಿಪಡಿಸಿದ MSP ದರದಲ್ಲಿ ಭತ್ತವನ್ನು ಖರೀದಿ ಮಾಡಿದರೆ ರೈತರಿಗೆ ಅನೂಕೂಲ ಆಗಲಿದೆ. ಹಾಗೂ ಭತ್ತದ ಕಟಾವು ಯಂತ್ರದ ದರವನ್ನು ಯಂತ್ರದ ಮಾಲಕರು ಬೇಕಾಬಿಟ್ಟಿ ನಿಗದಿ ಮಾಡಿದ್ದು ಅಂದಾಜು ಎರಡು ಸಾವಿರದಿಂದ ನಾಲ್ಕು ಸಾವಿರ ರೂ.ವರೆಗೆ ನಿಗದಿ ಮಾಡಿ ರೈತರಿಂದ ವಸೂಲಿ ಮಾಡುತ್ತಿದ್ದಾರೆ. ಇದನ್ನೂ ಕೂಡಲೆ ಜಿಲ್ಲಾಧಿಕಾರಿಗಳ ಮುಖಾಂತರ ದರವನ್ನು ಒಂದು ಗಂಟೆಗೆ ಹದಿನೆಂಟು ನೂರು ರೂಪಾಯಿಗಳನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು ಇದೇ ತಿಂಗಳಿನಿಂದ ರೈತರ ನೋಂದಣಿ ಕಾರ್ಯ ಪ್ರಾರಂಭಿಸಿ ಕೂಡಲೇ ಕೊಪ್ಪಳದಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಂಎಸಿಪಿ ದರದಲ್ಲಿ ಕೊಪ್ಪಳದಲ್ಲಿ ಕೇಂದ್ರವನ್ನು ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಹಿಟ್ನಾಳ ಹೋಬಳಿಯ ಹುಲಿಗಿ ತಾ.ಪಂ.ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಕೊಪ್ಪಳ ಬಿಜೆಪಿ ತಾಲೂಕು ಅಧ್ಯಕ್ಷ ಪ್ರದೀಪ ಹಿಟ್ನಾಳ, ಎಪಿಎಂಸಿ ಸದಸ್ಯ ವಿಶ್ವನಾಥ್ ರಾಜ, ರೈತ ಮುಖಂಡರಾದ ಶಿವಬಾಬು ಚಲಸಾನಿ, ವೆಂಕಟರಾವ, ಚನ್ನಪ್ಪಗೌಡ್ರ, ಶೀನಪ್ಪ, ಹನುಮಂತಪ್ಪ, ರಾಮರಾವ, ಮಹೇಶ ಮಂಗಳೂರ, ಬಸವರಾಜ್ ಕೆ.ವಿಶ್ವನಾಥ ಹೀರೆಮಠ, ಮಂಜುನಾಥ ಪೂಜಾರ, ಭಿಮಣ್ಣ ಹಿಟ್ನಾಳ ಹಾಗೂ ಹಿಟ್ನಾಳ, ಅಗಳಕೇರಿ, ಶಿವಪುರ, ಹುಲಿಗಿ ಗ್ರಾಮದ ರೈತರು ಸಚಿವರಿಗೆ ಮನವಿ ಸಲ್ಲಿಸಿದರು.
ಬೆಳೆ ಹಾನಿ ವಿವರ ದಾಖಲೀಕರಣ ಶೀಘ್ರ ಪೂರ್ಣಗೊಳಿಸಿ: ಸುಂದರೇಶ್ ಬಾಬು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಪರಿಹಾರ ತಂತ್ರಾಂಶದಲ್ಲಿ ಬೆಳೆ ಹಾನಿ ವಿವರವನ್ನು ಸಂಬಂಧಿತ ಇಲಾಖೆಗಳು ಮುತುವರ್ಜಿಯಿಂದ ವಹಿಸಿ ದಾಖಲೀಕರಣ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ ಸಭಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ಬೆಳೆ ಹಾನಿಯ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಹಾನಿಗೊಳಗಾದ ಬೆಳೆಯ ವಿವರವನ್ನು ಸಂಬಂಧಿಸಿದ ಇಲಾಖೆಗೆ ಒದಗಿಸಲು ತಿಳಿಸಿದರು. ಪರಿಹಾರ ತಂತ್ರಾಂಶದ ದಾಖಲಿಕರಣಕ್ಕೆ ಸಂಬಂಧಿಸಿದ ಅಡಚಣೆಗಳನ್ನು ಕೂಡಲೇ ನಿವಾರಿಸಿ ದಾಖಲೀಕರಣ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಈ ಕಾರ್ಯದಲ್ಲಿ ಯಾವುದೇ ನೆಪ ಒಡ್ಡಿ ವಿಳಂಭವಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವದು ಎಂದು ತಿಳಿಸಿದರು. ಈ ಕಾರ್ಯವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಅನುಕೂಲವಾಗುವಂತೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಬೆಳೆ ವಿಮೆ ಕುರಿತಂತೆ ಮಾತನಾಡಿದ ಜಿಲ್ಲಾಧಿಕಾರಿಗಳು ವಿಮಾ ಪಾವತಿಯ ಕೊನೆಯ ದಿನಾಂಕ ಹತ್ತಿರವಾಗುತ್ತಿದ್ದು ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ರೈತರು ಬೆಳೆ ವಿಮೆಗೆ ಒಳಪಡುವಂತೆ ಜಾಗೃತಿ ಮೂಡಿಸಬೇಕು. ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಸಮರ್ಪಕ ದಾಸ್ತಾನು ಹೊಂದಿದ್ದು ಈ ವಿಷಯದಲ್ಲಿ ಯಾವುದೇ ಅನಾನೂಕುಲವಾಗದಂತೆ ವಿತರಿಸಲು ಸೂಚಿಸಿದರು. ರೈತರ ಬಿತ್ತನೆ ಮಾಡುವ ಪೂರ್ವದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲು ಹಾಗೂ ಬೆಳೆಗಳಿಗೆ ಬರಬಹುದಾಂತಹ ರೋಗಗಳ ಕುರಿತು ಅಗತ್ಯದ ತಿಳುವಳಿಕೆ ನೀಡಬೇಕು.
ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಒದಗಿಸಲು ಕೂಡಲೆ ಕ್ರಮ ಕೈಗೊಳ್ಳಬೇಕು. ಹಾನಿಗೊಳಗಾದ ಮನೆಗಳ ಸಂಪೂರ್ಣ ವಿವರ ಪಡೆದು ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ಶೀಘ್ರವೇ ವಿತರಿಸಿ ವರದಿ ನೀಡುವಂತೆ ತಿಳಿಸಿದ ಅವರು ಮಳೆ ಹಾಗೂ ಪ್ರವಾಹದಿಂದಾಗಿ ಜನ ಜಾನುವಾರು ಪ್ರಾಣ ಹಾನಿಗೆ ಪರಿಹಾರ ಒದಗಿಸಿದರ ಕುರಿತು ಮಾಹಿತಿ ಪಡೆದರು.
ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ತಾಲೂಕು ಮಟ್ಟದಲ್ಲಿ ಈ ಕುರಿತು ಎಲ್ಲ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಲು ತಿಳಿಸಿದರು. ಜನ ಸಂಚಾರ ಹೆಚ್ಚಾಗಿರುವ ಪ್ರದೇಶಗಳ ರಸ್ತೆ ದುರಸ್ತಿಗೆ ಪ್ರಥಮಾದ್ಯತೆ ನೀಡಿ ನಂತರ ಉಳಿದ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ದಿಗ್ಬಂಧನದಲ್ಲಿರುವವರ ಮೇಲೆ ನಿರಂತರ ನಿಗಾವಹಿಸಿ ವರದಿ ನೀಡಬೇಕು. ಇದಕ್ಕಾಗಿ ನಿಯಮಿಸಲಾದ ಅಧಿಕಾರಿಗಳು ಗೃಹದಿಗ್ಬಂಧನದಲ್ಲಿರುವವರ ಮನೆಗೆ ನಿಯಮಿತವಾಗಿ ಬೇಟಿ ನೀಡಿ ನಿಗದಿತ ಸಮಯದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಉಪವಿಬಾಗಾಧಿಕಾರಿ ರಾಯಪ್ಪ ಹುಣಸಗಿ, ಎಲ್ಲ ತಹಶೀಲ್ದಾರರು, ಕೃಷಿ ಹಾಗೂ ತೊಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ಏಕತಾ ದಿವಸ: ಪ್ರತಿಜ್ಞಾ ವಿಧಿ ಸ್ವೀಕಾರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ರಾಷ್ಟ್ರೀ ಏಕತಾ ದಿವಸ ಅಂಗವಾಗಿ ಜಿಲ್ಲಾಡಳಿತ ಮುಖ್ಯ ಸಭಾಂಗಣದಲ್ಲಿ ರಾಷ್ಟ್ರದ ಐಕ್ಯತೆ, ಸಮಗ್ರತೆ, ಭದ್ರತೆ ಮತ್ತು ರಾಷ್ಟ್ರೀಯ ಏಕೀಕರಣದ ಸ್ಪೂರ್ತಿಯನ್ನು ಕಾಪಾಡುವ ಪ್ರತಿಜ್ಞಾ ವಿಧಿಯನ್ನು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ. ಅವರು ಭೋಧಿಸಿದರು.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನ್ನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಡಿ.ವೈ.ಎಸ್ಪಿ, ಎಸ್.ಕೆ.ಪ್ರಹ್ಲಾದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವದರ ಮೂಲಕ ಗೌರವ ಸಮರ್ಪಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್., ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನ್ನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಡಿ.ವೈ.ಎಸ್ಪಿ, ಎಸ್.ಕೆ.ಪ್ರಹ್ಲಾದ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ವಿವಿಧ ಇಲಾಖೆ, ಅಧಿಕಾರಿ ಸಿಬ್ಬಂದಿಗಳು ಭಾಗಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಪರಿಶಿಷ್ಟ ಪಂಗಡದ ವಿಧ್ಯಾರ್ಥಿನಿ ಕು. ಸಹನಾ ರಾಮಗೇರಿ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಒಂದೊಂದಾಗಿ ಸಾಯುತ್ತಿರುವ ಕುರಿಗಳು: ಚಿಕಿತ್ಸೆ ನೀಡಲು ಸತಾಯಿಸುತ್ತಿರುವ ವೈದ್ಯರು!
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಶನಿವಾರ ಬೆಳಗಿನಿಂದ ಅಸ್ವಸ್ಥಗೊಂಡಂತೆ ಕಂಡು ಬಂದ ಕುರಿಯೊಂದು ತಾಲೂಕಿನ ಅಳವಂಡಿ ಹೋಬಳಿಯ ಹೈದರ್‌ನಗರದಲ್ಲಿ ನಡೆದಿದೆ.
ತಕ್ಷಣ ಕುರಿಗಾಹಿ ದೇವಪ್ಪ ಅವರು ಪಶು ವೈದ್ಯ ವಿನೋದ ಅಳವಂಡಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿ ಸುಮಾರು ನಾಲ್ಕು ಗಂಟೆ ಕಳೆದರೂ ಸ್ಥಳಕ್ಕೆ ಪಶುವೈದ್ಯರು ಬಂದಿಲ್ಲ. ಪರಿಣಾಮ ಕುರಿಹಿಂಡಿನಲ್ಲಿರುವ ಒಂದೊಂದೇ ಕುರಿಗಳು ಅಸು ನೀಗುತ್ತಿವೆ.
ಇದರಿಂದ ಆತಂಕಗೊಂಡಿರುವ ಕುರಿಗಾಹಿ ದೇವಪ್ಪ ಪರಿ ಪರಿಯಾಗಿ ಬೇಡಿಕೊಂಡರೂ ವೈದ್ಯರು ನಮಗೆ ಇದೊಂದೇ ಕೆಲಸ ಅಲ್ಲ, ಬೇರೆ ಕಡೆ ಇದೀವಿ. ಜೊತೆಗೆ ಇವತ್ತು ರಜೆ ಬೇರೆ ಇದೆ. ಬರುವವರೆಗೆ ಕಾಯಬೇಕು ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ಕುರಿಗಾಹಿ ದೇವಪ್ಪ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಕೇಳಲು ಪಶುವೈದ್ಯ ವಿನೋದ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗುತ್ತಿಲ್ಲ.
ಅ.31 ರಂದು ಮಹರ್ಷಿ ವಾಲ್ಮೀಕಿ ಜಯಂತಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅ.31 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆ ದುರಸ್ತಿಗೆ ಪ್ರಥಮಾದ್ಯತೆ ನೀಡಿ: ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸತತ ಮಳೆಯಿಂದಾಗಿ ಗದಗ-ಬೆಟಗೇರಿ ನಗರಸಭೆ ಹಾಗೂ ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿದ್ದು ಸದ್ಯ ಮಳೆ ಕಡಿಮೆಯಾದ ಕಾರಣ ರಸ್ತೆಗಳ ಸುಧಾರಣೆಗೆ ಮೊದಲ ಆಧ್ಯತೆ ನೀಡುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜರುಗಿದ ಸಭೆಯಲ್ಲಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿ ಹಾಗೂ ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಸ್ತೆಗಳು ಮಳೆಯಿಂದಾಗಿ ಹಾಳಾಗಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು, ರಸ್ತೆ ಸುಧಾರಣೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕ್ರಮವಹಿಸುವುದು ಅವಶ್ಯವಿರುತ್ತದೆ.
ಈಗಾಗಲೇ ಹಲವಾರು ಬಾರಿ ಸಭೆಗಳಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕುರಿತು ನಿರ್ದೇಶನಗಳನ್ನು ನೀಡಲಾಗಿದ್ದು, ಕೆಲವು ಅತಿ ಜನಸಂದನಿ ಹಾಗೂ ವಾಹನ ಸಂಚಾರ ಇರುವ ರಸ್ತೆಗಳನ್ನು ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕ ಓಡಾಟಕ್ಕೆ ಕ್ರಮವಹಿಸಲಾಗಿತ್ತು, ಅತಿಯಾದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಸುಧಾರಣೆಗೆ ಮಳೆ ಅವಕಾಶ ನೀಡದೇ ಇರುವ ಕಾರಣ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರಲಿಲ್ಲಾ.
ಆದರೆ ಕಳೆದ ಒಂದು ವಾರದಿಂದ ಮಳೆ ಪೂರ್ಣ ಪ್ರಮಾಣದಲ್ಲಿ ನಿಂತು ಹೋದ ಕಾರಣ ಕೂಡಲೇ ಲೋಕೋಪಯೋಗಿ ಇಲಾಖೆ ತಮ್ಮ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಗಳನ್ನು 15 ದಿನಗಳೊಳಾಗಿ ಕ್ರಮವಹಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲು ಸಭೆಯಲ್ಲಿ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಅದೇ ರೀತಿ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚು ವಾಹನ ಸಂಚಾರದ ರಸ್ತೆಗಳನ್ನು ಗುರುತಿಸಿ ಮೊದಲ ಹಂತದಲ್ಲಿ ಕೂಡಲೇ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಳ್ಳಲು ಸೂಚಿಸಿದರು. ಹಾಗೂ ಇತರೇ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚಿ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಭೆಯಲ್ಲಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಕೆ.ಯು.ಡಬ್ಲೂ.ಎಸ್. ವತಿಯಿಂದ ಒಳಚರಂಡಿ ಹಾಗೂ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ 24*7 ನೀರು ಸರಬರಾಜು ಅಭಿವೃದ್ಧಿ ಕಾಮಗಾರಿಗಳಿಂದ ಹಾಳಾದ ರಸ್ತೆಗಳನ್ನು ಪ್ರಥಮ ಆಧ್ಯತೆ ಮೇರೆಗೆ ದುರಸ್ತಿಗೊಳಿಸಲು ಸೂಚಿಸಿದರು. ಅದೇ ರೀತಿ ಗದಗ ಜಿಲ್ಲೆಗೆ ಸಂಬಂಧಿಸಿದ ನಗರದ ಹೊರವಲಯದಲ್ಲಿರುವ ಸಂಪರ್ಕ ರಸ್ತೆಗಳು ನಿರ್ವಹಣೆಯನ್ನು ರಾಜ್ಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ, ಕೆಶೀಪ್, ಹಾಗೂ ಲೋಕೋಪಯೋಗಿ ಇಲಾಖೆಗಳು ಹಾಳಾದ ರಸ್ತೆಗಳನ್ನು ಸುಧಾರಿಸಲು ಕೂಡಲೇ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಸಭೆಯಲ್ಲಿ ಸೂಚಿಸಿದರು.
ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಅಗತ್ಯ ನಿರ್ದೇಶನಗಳನ್ನು ನೀಡಿ ಮಳೆಯಿಂದ ಹಾಳಾದ ರಸ್ತೆಗಳಿಗೆ ದುರಸ್ತಿ ಕಾರ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಕೂಡಲೇ ಕ್ರಮವಹಿಸುವಂತೆ ಸಭೆಯಲ್ಲಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ರುದ್ರೇಶ ಎಸ್.ಎನ್ ಹಾಗೂ ಲೋಕೋಪಯೋಗಿ ಇಲಾಖೆ, ಕೆ.ಯು.ಡಬ್ಲೂ.ಎಸ್ & ಡಿ.ಬಿ ಮತ್ತು ಕೆ.ಯು.ಐ.ಡಿ.ಎಫ್.ಸಿ ರಾಜ್ಯ ಹೆದ್ದಾರಿ ಪ್ರಾಧಿಕಾರ, ಅಧಿಕಾರಿಗಳು ಮತ್ತು ನಗರಸಭೆಯ ಅಭಿಯಂತರರು ಸಭೆಯಲ್ಲಿ ಹಾಜರಿದ್ದರು.
ಗಂಗಾವತಿ ನಗರಸಭೆ ಸದಸ್ಯನ ಅಪಹರಣ ಪ್ರಕರಣ; ಕಾಂಗ್ರೆಸ್-ಬಿಜೆಪಿ ಮುಖಂಡರ “ಜಗಳ್ ಬಂಧಿ!”
ಪರಣ್ಣ ಅಧಿಕಾರದಲ್ಲಿದ್ದಾಗೆಲ್ಲ ರೌಡಿಸಂ ಮಾಡ್ತಾರೆ: ಅನ್ಸಾರಿ
ಬಾಂಬೆ ನಂಟು ಸಾಬೀತಾದರೆ ರಾಜಕೀಯ ನಿವೃತ್ತಿ: ಪರಣ್ಣ
ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಇಲ್ಲಿನ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯನನ್ನು ಬಿಜೆಪಿ ಕಾರ್ಯಕರ್ತರು ಅಪಹರಿಸಿ, ಸಿಕ್ಕಿ ಬಿದ್ದಿದ್ದಾರೆ.
ಗಂಗಾವತಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಿಂದ ಅಕ್ಟೋಬರ್ 29ರ ರಾತ್ರಿ ನಗರಸಭೆ ಸದಸ್ಯ ಮನೋಹರ ಸ್ವಾಮಿ ಅವರನ್ನು ಬಿಜೆಪಿಯ ಮೂವರು ಸದಸ್ಯರು ಸೇರಿದಂತೆ ಹಲವರು ಅಪಹರಿಸಿದ್ದಾರೆ ಎಂದು ಗಂಗಾವತಿ ನಗರ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ.

ನಾಲ್ಕೈದು ಯುವಕರು ಸದಸ್ಯ ಮನೋಹರ ಸ್ವಾಮಿ ಅವರನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮಿಂಚಿನ ಕಾರ್ಯಾಚರಣೆ ನಡೆಸಿರುವ ಗಂಗಾವತಿ ಪೊಲೀಸರು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಪೊಲೀಸರ ಸಹಾಯದೊಂದಿಗೆ ನಗರಸಭೆ ಸದಸ್ಯ ಮತ್ತು ಮೂವರು ಅಪಹರಣಕಾರರನ್ನು ವಶಕ್ಕೆ ಪಡೆದಿದ್ದಾರೆ.
ಚುನಾವಣೆ ಹಾಲಿ- ಮಾಜಿ ಶಾಸಕರಿಗೆ ಪ್ರತಿಷ್ಠೆಯಾಗಿದ್ದು, ದಿನಕ್ಕೊಂದು ಹೈಡ್ರಾಮಾಕ್ಕೆ ವೇದಿಕೆ ಆಗಿದೆ.
ನವೆಂಬರ್ 2ಕ್ಕೆ ನಿಗದಿಯಾಗಿರೋ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕೈ-ಕಮಲ ಪಾಳೆಯ ಎಲ್ಲಿಲ್ಲದ ಕಸರತ್ತು ಮಾಡುತ್ತಿವೆ.
ಒಟ್ಟೂ 35 ಸದಸ್ಯ ಬಲದ ಗಂಗಾವತಿ ನಗರಸಭೆಯಲ್ಲಿ ಬಿಜೆಪಿಯ 14, ಇಬ್ಬರು ಪಕ್ಷೇತರ ಮತ್ತು ಒಬ್ಬ ಜೆಡಿಎಸ್ ಸದಸ್ಯನ ಜೊತೆಗೆ ಶಾಸಕ, ಸಂಸದರ ವೋಟ್ ನೊಂದಿಗೆ ಅಧಿಕಾರ ಹಿಡಿಯುವ ಕನಸು ಕಂಡಿತ್ತು. ಆದರೆ, ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವ ಒಳ ಒಪ್ಪಂದದ ಹಿನ್ನೆಲೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಇದರಿಂದ ಸದಸ್ಯೆ ಮನೆಯವರು ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಆದರೆ, ಸ್ವತಃ ಸದಸ್ಯೆ ಮತ್ತು ಆಕೆಯ ಪತಿ ಸೋಮನಾಥ ನಮ್ಮನ್ನು ಯಾರೂ ಅಪಹರಿಸಿಲ್ಲ ಎಂದು ವಿಡಿಯೋ ಬಿಡುಗಡೆ ಮಾಡಿದ್ದರು.
ಬಿಜೆಪಿ ಸೇಡು!
ತಮ್ಮ ಸದಸ್ಯರನ್ನು ತಮ್ಮತ್ತ ಸೆಳೆದ ರಿವೆಂಜ್ ಮತ್ತು ಅಧಿಕಾರ ‘ಕೈ’ ಪಾಲಾಗಬಹುದು ಎಂಬ ಆತಂಕದಿಂದ ಬಿಜೆಪಿ ಸದಸ್ಯರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸದಸ್ಯನನ್ನು ಸಿನಿಮೀಯ ಮಾದರಿಯಲ್ಲಿ ಅಪಹರಣ ಮಾಡಿದ್ದಾರೆ. ಹೀಗೆ ಅಪಹರಿಸಿ ಚುನಾವಣೆ ಮುಗಿಯುವವರೆಗೂ ಅಜ್ಞಾತ ಸ್ಥಳದಲ್ಲಿ ಇಟ್ಟು, ಚುನಾವಣೆ ಸಭೆಗೆ ಗೈರು ಮಾಡಿಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಆದರೆ, ಪೊಲೀಸ್ ವ್ಯವಸ್ಥೆ, ಕಾನೂನು ಇದೆ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಂತೆ ವರ್ತಿಸಿರೋ ಬಿಜೆಪಿ ಪಾಳೆಯದ ಕೆಲಸ ನಗೆಪಾಟಲಿಗೆ ಎಡೆ ಮಾಡಿದೆ.

ಬಿಜೆಪಿಯವರು ಗಂಗಾವತಿ ನಗರಸಭೆಯ ನಮ್ಮ ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿಯವರನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಮುಖಕ್ಕೆ, ಕಣ್ಣಿಗೆ ಸ್ಪ್ರೇ ಮಾಡಿ, ಕೈ ಕಟ್ಟಿ, ಎದೆಗೆ ಒದ್ದು ಹೊತ್ತೊಯ್ದಿದ್ದಾರೆ. ಇದು ಬಿಜೆಪಿ ಸಂಸ್ಕೃತಿ
-ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕರು, ಗಂಗಾವತಿ
ಗೂಂಡಾಗಿರಿ ಮಾಡಲು ನಮಗೂ ಬರುತ್ತೆ. ಆದರೆ ಅದು ಕಾಂಗ್ರೆಸ್ ಸಂಸ್ಕೃತಿಯೂ ಅಲ್ಲ. ಬಿಜೆಪಿಯವರಿಗೆ ತಾಕತ್ತಿದ್ದರೆ ಮನೋಹರಸ್ವಾಮಿ ಮನವೊಲಿಸಿ ಕರೆದುಕೊಂಡು ಹೋಗಲಿ ನೋಡೋಣ.
-ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ.

ನನಗೆ ಬಾಂಬೆ ನಂಟು ಇದೆ ಎಂಬುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ವ್ಯಾಪಾರದ ದೃಷ್ಟಿಯಿಂದ ಬಾಂಬೆ ಪರಿಚಯವೇ ಹೊರತು ರೌಡಿಸಂನಿಂದಲ್ಲ. ಅಕ್ರಮ ವ್ಯವಹಾರ ಮಾಡುವವರಿಗೆ ಬಾಂಬೆ ಗೂಂಡಾಗಳ ಪರಿಚಯ ಇರುತ್ತೆ. ಅದಕ್ಕೆ ಮಾತಾಡ್ತಾರೆ. ಗಂಗಾವತಿ ನಗರಸಭೆ ಬಿಜೆಪಿ ಮಡಿಲಿಗೆ ಸೇರುವುದು ನಿಶ್ಚಿತ. ನಾವು ಯಾರನ್ನು ಕಿಡ್ನ್ಯಾಪ್ ಮಾಡಿಲ್ಲ. ಅದೇನಿದ್ದರೂ ಕಾಂಗ್ರೆಸ್ ಸಂಸ್ಕೃತಿ.
-ಪರಣ್ಣ ಮುನವಳ್ಳಿ, ಶಾಸಕರು, ಗಂಗಾವತಿ.

